‘ಲೂಸ್ ಮಾದ’ ಯೋಗಿ ಅಭಿನಯದ ‘ಸಿದ್ಲಿಂಗು’ ಸಿನಿಮಾವು 2012ರಲ್ಲಿ ತೆರೆಕಂಡು ಹಿಟ್ ಆಗಿತ್ತು. ಮಂಗಳಾ ಟೀಚರ್ ಆಗಿ ನಾಯಕಿ ರಮ್ಯಾ ಮತ್ತು ತುರುವೇಕೆರೆ ಆಂಡಾಳಮ್ಮನಾಗಿ ಸುಮನ್ ರಂಗನಾಥ್ ಸಿನಿಮಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದೇ ಕಥೆಯ ಮುಂದುವರಿಕೆ ಭಾಗ ‘ಸಿದ್ಲಿಂಗು–2’. ನಾಯಕ ಯೋಗಿ ಹೊರತಾಗಿ ಇಲ್ಲಿ ಬಹುತೇಕ ಪಾತ್ರಗಳು ಹೊಸತು. ‘ಸಿದ್ಲಿಂಗು’ ಚಿತ್ರದ ಕಾರನ್ನೇ ಎರಡನೇ ಭಾಗದಲ್ಲಿ ಮುಖ್ಯವಾಗಿಟ್ಟುಕೊಂಡು ನಿರ್ದೇಶಕ ವಿಜಯಪ್ರಸಾದ್ ಕಥೆ ಹೆಣೆದಿದ್ದಾರೆ.
‘ಸಿದ್ಲಿಂಗು’ ಸಿನಿಮಾದ ಕಥೆ ಇದ್ದಿದ್ದೇ ಕಾರೊಂದನ್ನು ಖರೀದಿ ಮಾಡುವುದರ ಕುರಿತು. ಕಾರು ಖರೀದಿಗೆಂದು ಹಳ್ಳಿಗೆ ಬರುವ ನಾಯಕನ ಬದುಕಿನಲ್ಲಿ ಏನೇನೋ ನಡೆದುಹೋಗುತ್ತದೆ. ಇನ್ನೇನು ಕಾರು ಕೈಗೆ ಸಿಕ್ಕಿತು ಎನ್ನುವ ಹೊತ್ತಿಗೆ ಮಂಗಳಾ ಟೀಚರ್ ಸಾಯುತ್ತಾರೆ. ಅದರ ನಂತರದ ಸಿದ್ಲಿಂಗುವಿನ ಬದುಕಿನ ಕಥೆಯೊಂದಿಗೆ ‘ಸಿದ್ಲಿಂಗು–2’ ಕಥೆ ಪ್ರಾರಂಭವಾಗುತ್ತದೆ. ಅನಾಥನಾಗಿರುವ ಸಿದ್ಲಿಂಗು ಜೊತೆಗುಳಿದವನು ಆತ ಕೆಲಸ ಮಾಡುತ್ತಿದ್ದ ಕಂಪನಿ ಮಾಲೀಕ ಆರ್ಮುಗಂ ಮಾತ್ರ. ಉಳಿದೆಲ್ಲರನ್ನೂ ಕಳೆದುಕೊಂಡ ನಾಯಕನಿಗೆ ಇಲ್ಲಿ ನಾಲ್ಕಾರು ಹೊಸ ಗೆಳೆಯರು ಜೊತೆಯಾಗುತ್ತಾರೆ. ಆದರೆ ಕಾರಿನ ಕನವರಿಕೆ ಮಾತ್ರ ಇಲ್ಲಿಯೂ ನಿಂತಿಲ್ಲ.
ಸೀತಮ್ಮ, ವಿಶಾಲು, ಹಳೇ ಬೇವರ್ಸಿ, ಮಿಣಿ ಮಿಣಿ, ಮುಕುಂದರಾಯ, ಅಮಾವಾಸ್ಯೆ ಅನಂತು ಥರದ ಒಂದಷ್ಟು ವಿಶೇಷ ಎನ್ನಿಸುವಂತಹ ಪಾತ್ರಗಳನ್ನು ವಿಜಯಪ್ರಸಾದ್ ರಚಿಸಿದ್ದಾರೆ. ನಟರೆಲ್ಲ ಸ್ಪರ್ಧೆಗೆ ಬಿದ್ದವರಂತೆ ನಟಿಸಿರುವುದು ಸಿನಿಮಾವನ್ನು ಜೀವಂತವಾಗಿಡುತ್ತದೆ. ಸಿದ್ಲಿಂಗು ಸಿನಿಮಾದಲ್ಲಿ ಹರೆಯದ ಯುವಕನಾಗಿ ಪೋಲಿ ಮಾತುಗಳನ್ನಾಡುತ್ತಿದ್ದ ಯೋಗಿ ಅವರ ನಟನೆ ಈ ಚಿತ್ರದಲ್ಲಿ ಮೆಚ್ಯೂರ್ ಆಗಿದೆ. ಭಾವನಾತ್ಮಕ ದೃಶ್ಯಗಳಲ್ಲಿ ಬಹಳ ಇಷ್ಟವಾಗುತ್ತಾರೆ. ವಿಶಾಲುವಾಗಿ ಸೀತಾ ಕೋಟೆ, ಸ್ಮಶಾಣದಲ್ಲಿ ಗುಂಡಿ ತೋಡುವ ಸೀತಮ್ಮ ಪಾತ್ರದಲ್ಲಿ ಪದ್ಮಜಾ ರಾವ್ ನೆನಪಿನಲ್ಲಿ ಉಳಿಯುತ್ತಾರೆ. ಆದರೆ ನಿವೇದಿತಾ ಟೀಚರ್ ಆಗಿ ಬರುವ ನಾಯಕಿ ಸೋನು ಗೌಡಗೆ ರಮ್ಯಾರಿಂದ ತೆರವಾಗಿದ್ದ ಜಾಗವನ್ನು ಭರ್ತಿ ಮಾಡಲು ಸಾಧ್ಯವಾಗಿಲ್ಲ. ಮುಂಗೋಪಿಯಾಗಿ ಬಿ ಸುರೇಶ್ ಖಡಕ್ ಎನಿಸಿದರೆ, ಸುಮನ್ ರಂಗನಾಥ್ ಒಂದೆರಡು ದೃಶ್ಯಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ.
ವಿಜಯಪ್ರಸಾದ್ ತಮ್ಮ ಮಾಮೂಲಿ ಶೈಲಿಯಂತೆ ಚಿತ್ರಕಥೆಗಿಂತ ಸಂಭಾಷಣೆಗೆ ಹೆಚ್ಚು ಒತ್ತುಕೊಟ್ಟಿದ್ದಾರೆ. ಆದರೆ ಅವರ ಹಿಂದಿನ ಸಿನಿಮಾಗಳಂತೆ ಡಬಲ್ ಮೀನಿಂಗ್ ಡೈಲಾಗ್‌ಗಳಿಲ್ಲ. ಬದಲಿಗೆ ಸಮಾಜದ ಪ್ರಸಿದ್ಧರನ್ನು ಟ್ರೋಲ್ ಮಾಡುವ ಸಂಭಾಷಣೆ ಇದೆ. ಬದುಕಿನ ಸತ್ಯ ತೆರೆದಿಡುವ ಅರ್ಥಪೂರ್ಣ ಸಾಲುಗಳಿವೆ. ಇಡೀ ಚಿತ್ರವನ್ನು ಗಟ್ಟಿಯಾದ ಕಥೆ, ಚಿತ್ರಕಥೆಯಿಲ್ಲದೆ ಸಂಭಾಷಣೆಯಿಂದಲೇ ಕಟ್ಟಿಕೊಡುವ ನಿರ್ದೇಶಕರ ಯತ್ನವಿಲ್ಲಿ ಸಫಲವಾಗಿಲ್ಲ. ರಾಜಕಾರಣಿಗಳನ್ನು, ಸಿನಿಮಾ ನಟರನ್ನು ಅನವಶ್ಯ ಟ್ರೋಲ್ ಮಾಡುವ ಒಂದಷ್ಟು ಮಾತುಗಳಿಗೆ ಕತ್ತರಿ ಹಾಕುವ ಅವಕಾಶವಿತ್ತು.
‘ಸಿದ್ಲಿಂಗು’ವಿನ ‘ಎಲ್ಲೆಲ್ಲೋ ಓಡುವ ಮನಸೇ..’ ರೀತಿಯ ಹಾಡುಗಳು ಇಲ್ಲಿ ಕೇಳಿಸುವುದಿಲ್ಲ. ಹಾಸ್ಯದ ಸನ್ನಿವೇಶಗಳಲ್ಲಿ ಹಿನ್ನೆಲೆ ಸಂಗೀತವನ್ನು ಬಲವಂತವಾಗಿ ತುರುಕಿದಂತೆ ಭಾಸವಾಗುತ್ತದೆ. ಎಮೋಷನಲ್ ದೃಶ್ಯಗಳನ್ನು ಇನ್ನಷ್ಟು ತೀವ್ರವಾಗಿ ಕಟ್ಟಿಕೊಡುವ ಅವಕಾಶವಿತ್ತು. ದ್ವಿತೀಯಾರ್ಧದ ಕೋರ್ಟ್ ಸನ್ನಿವೇಶಗಳನ್ನು ಸಾಕಷ್ಟು ಕಡೆ ಟ್ರಿಮ್ ಮಾಡಬಹುದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.