ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ, ದೌರ್ಜನ್ಯದ ಕುರಿತು ಬೇರೆ, ಬೇರೆ ಭಾಷೆಗಳಲ್ಲಿ ಈಗಾಗಲೇ ಸಾಕಷ್ಟು ಚಿತ್ರಗಳು ಬಂದಿವೆ. ಅದೇ ಎಳೆಯ ಕಥೆಯನ್ನು ಹೊಂದಿರುವ ಚಿತ್ರ ‘ಯುದ್ಧಕಾಂಡ’. ಅತ್ಯಾಚಾರ ಪ್ರಕರಣವೊಂದು ನ್ಯಾಯಾಲಯದ ಮೆಟ್ಟಿಲು ಏರಿದಾಗ ಏನೆಲ್ಲ ಆಗಬಹುದು ಎಂಬುದನ್ನು ನಿರ್ದೇಶಕ ಪವನ್ ಭಟ್ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಇಡೀ ಚಿತ್ರ ಕೋರ್ಟ್ ರೂಂ ಡ್ರಾಮಾವಾದರೂ, ಪಯಣದಲ್ಲಿ ಭಾವುಕತೆಯಿದೆ. ಒಂದೆರಡು ದೃಶ್ಯಗಳಲ್ಲಿ ಕಣ್ಣಂಚಿನಲ್ಲಿ ಹನಿ ಜಿನುಗುತ್ತದೆ. ಅಷ್ಟರಮಟ್ಟಿಗೆ ಚಿತ್ರಕಥೆ ಗಟ್ಟಿಯಾಗಿದೆ. ಇದರ ಜೊತೆಗೆ ಚಿತ್ರದಲ್ಲಿ ಎಲ್ಲರ ನಟನೆ ಗಮನ ಸೆಳೆಯುತ್ತದೆ.
ಚಿತ್ರದ ಪ್ರಾರಂಭದಲ್ಲಿಯೇ ನಾಯಕಿ ನಿವೇದಿತಾ ನ್ಯಾಯಾಲಯದ ಆವರಣದಲ್ಲಿ ಆರೋಪಿಯನ್ನು ಕೊಲೆ ಮಾಡುತ್ತಾಳೆ. ಇದೊಂದು ಕೊಲೆಗೆ ಸಂಬಂಧಿತ ಪ್ರಕರಣ ಎಂಬುದನ್ನು ನಿರ್ದೇಶಕರು ಮೊದಲ ದೃಶ್ಯದಲ್ಲಿಯೇ ಹೇಳಿಬಿಡುತ್ತಾರೆ. ಆ ಕೊಲೆ ಯಾಕೆ ನಡೆದಿದ್ದು, ಅದರ ಹಿನ್ನೆಲೆ ಏನು ಎಂಬುದು ನಿಧಾನಕ್ಕೆ ತೆರೆದುಕೊಳ್ಳುತ್ತದೆ. ಆಗಷ್ಟೇ ಎಲ್‌ಎಲ್‌ಬಿ ಮುಗಿಸಿದ ನಾಯಕ ಭರತ್ ವಕೀಲ ವೃತ್ತಿಗೆ ಕಾಲಿಡುತ್ತಾನೆ. ಆತನ ಬದುಕು, ಕಚೇರಿಯ ಸುತ್ತಲಿನ ಸನ್ನಿವೇಶಗಳೊಂದಿಗೆ ಹಾಸ್ಯದ ದಾಟಿಯಲ್ಲಿಯೇ ಮೊದಲ ಹದಿನೈದು ನಿಮಿಷ ಮುಗಿಯುತ್ತದೆ. ಪ್ರಕರಣಗಳೇ ಇಲ್ಲದೆ ಖಾಲಿ ಕುಳಿತ ಭರತ್, ಚಿಲ್ಲರೆ ಪ್ರಕರಣಗಳನ್ನೇ ಎಷ್ಟು ಚತುರವಾಗಿ ಬಳಸಿಕೊಂಡು ಬೆಳೆಯುತ್ತಾನೆ ಎಂದು ತೋರಿಸುವ ದೃಶ್ಯಗಳು ಖುಷಿ ನೀಡುತ್ತವೆ.
ನಾಯಕಿ ನಿವೇದಿತಾ ಕೊಲೆ ಮಾಡಿದ್ದು ತನ್ನ ಮಗಳನ್ನು ಅತ್ಯಾಚಾರ ಮಾಡಿದ ಆರೋಪಿಯನ್ನು ಎಂಬ ದೃಶ್ಯದಿಂದ ಸಿನಿಮಾ ಗಂಭೀರವಾಗುತ್ತದೆ. ಮಗಳು ಶ್ಯಾಮಿಲಿ ಮತ್ತು ತಾಯಿ ನಿವೇದಿತಾ ನಡುವಿನ ಬಾಂಧವ್ಯದ ದೃಶ್ಯಗಳು ಭಾವ ತೀವ್ರತೆಯನ್ನು ಹೆಚ್ಚಿಸುತ್ತವೆ. ಆರೋಪಿಯನ್ನು ಕೊಲೆ ಮಾಡಿದ ನಿವೇದಿತಾ ಕೂಡ ಈಗ ಆರೋಪಿ ಸ್ಥಾನದಲ್ಲಿ ನಿಂತಿದ್ದಾಳೆ. ಈಕೆಗೆ ಶಿಕ್ಷೆಯಾಗಬೇಕೋ ಅಥವಾ ಬೇಡವೋ ಎಂಬುದೇ ನ್ಯಾಯಾಲಯದಲ್ಲಿ ನಡೆಯುವ ಚಿತ್ರಕಥೆ.
ಭರತ್ ಆಗಿ ಅಜಯ್ ರಾವ್ ಇಷ್ಟವಾಗುತ್ತಾರೆ. ಆದರೆ ಕ್ಲೈಮ್ಯಾಕ್ಸ್ ಹಂತದಲ್ಲಿ ಅವರ ನಟನೆ ಸ್ವಲ್ಪ ಕೃತಕ ಎನ್ನಿಸುತ್ತದೆ. ಪುಟಾಣಿ ರಾಂಧ್ಯಾ ಮತ್ತು ನಿವೇದಿತಾ ಆಗಿ ಕಾಣಿಸಿಕೊಂಡಿರುವ ಅರ್ಚನಾ ಜೋಯ್ಸ್ ಚಿತ್ರದ ಹೈಲೆಟ್. ನೊಂದ ತಾಯಿಯಾಗಿ ಅರ್ಚನಾ ಕೆಲವು ಕಡೆ ಅಬ್ಬರಿಸಿ, ಹಲವು ಕಡೆ ಮೌನಿಯಾಗಿ ನೋಡುಗರ ಕಣ್ಣಲ್ಲಿ ನೀರು ಬರುವಂತೆ ನಟಿಸಿದ್ದಾರೆ. ವಿರೋಧಿ ಬಣದ ವಕೀಲರಾಗಿ ಪ್ರಕಾಶ್ ಬೆಳವಾಡಿ ಹಾವಭಾವಗಳಿಂದಲೇ ಇಷ್ಟವಾಗುತ್ತಾರೆ. ನ್ಯಾಯಾಧೀಶರಾಗಿ ಟಿ.ಎಸ್. ನಾಗಾಭರಣ ಅವರಿಗೆ ಹೆಚ್ಚು ಕೆಲಸವಿಲ್ಲ. ಚಿತ್ರದುದ್ದಕ್ಕೂ ಕಲಾ ನಿರ್ದೇಶಕನ ಕೈಚಳಕ ಎದ್ದು ಕಾಣುತ್ತದೆ. ವಿಶೇಷವಾಗಿ ಕೋರ್ಟ್ ಸೆಟ್ ಚೆನ್ನಾಗಿದೆ. ಹಿನ್ನೆಲೆ ಸಂಗೀತ ಮತ್ತು ಛಾಯಾಚಿತ್ರಗ್ರಹಣವೂ ಕಥೆಗೆ ಪೂರಕವಾಗಿದೆ.
ಇಷ್ಟಾಗಿಯೂ ಚಿತ್ರ ಕೆಲವು ಕಡೆ ಪರಿಪೂರ್ಣ ಎನ್ನಿಸುವುದಿಲ್ಲ. ಇಂಥ ಗಂಭೀರವಾದ ಕಥೆಯ ನಡುವೆಯೂ ಸಹ ವಕೀಲೆ ಜೊತೆ ನಾಯಕನ ಪ್ರೇಮದ ಟ್ರ್ಯಾಕ್, ನಾಯಕನ ನಟನೆಯ ಅನಾವರಣಕ್ಕಾಗಿ ನಟನೆಯೇ ಕೃತಕ ಎನ್ನಿಸುವಷ್ಟು ಸುದೀರ್ಘವಾದ ದೃಶ್ಯಗಳ ಅಗತ್ಯವಿರಲಿಲ್ಲ. ಅತ್ಯಾಚಾರಕ್ಕೊಳಗಾದ ಮಗು ಬದುಕಿ ಕೋಮಾದಲ್ಲಿ ಉಳಿದಾಗ ಆ ಮಗುವಿಗಾಗಿ ಜೈಲಿನಲ್ಲಿರುವ ತಾಯಿ ಮಿಡಿಯದೇ ಇರುವುದು ಚಿತ್ರಕಥೆಯಲ್ಲಿನ ಕೊರತೆ ಎನಿಸುತ್ತದೆ. ಕೋರ್ಟ್‌ನ ಪ್ರತಿ ಸಲದ ವಾದದಲ್ಲಿಯೂ ಹೊಸ ವಿಷಯ ಎತ್ತಿಕೊಂಡು ಬರುವ ಮೊದಲು, ಇದೇ ರೀತಿಯ ಇನ್ನೊಂದಷ್ಟು ಪ್ರಕರಣಗಳನ್ನು ಆಳವಾಗಿ ವಿಶ್ಲೇಷಿಸುತ್ತ ಚಿತ್ರಕಥೆಯನ್ನು ಸ್ವಲ್ಪ ಬಿಗಿಯಾಗಿಸುವ ಅವಕಾಶ ನಿರ್ದೇಶಕರಿಗಿತ್ತು.
ಇದು ನೋಡಬಹುದಾದ ಸಿನಿಮಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.