ADVERTISEMENT

ರಂಗಭೂಮಿ: ಪದ್ಮಶಾಲಿ ಅಕ್ಕಯ್- ಬದುಕಿಗಾಗಿ ನಡೆಸಿದ ಹೋರಾಟದ ಕಥನ

ಪುನೀತ್ ತಥಾಗತ
Published 19 ಮಾರ್ಚ್ 2022, 19:15 IST
Last Updated 19 ಮಾರ್ಚ್ 2022, 19:15 IST
ನಯನ ಸೂಡ
ನಯನ ಸೂಡ   

ನಮ್ಮೆಲ್ಲರಿಗೂ ಒಂದು ಬದುಕಿದೆ ಎಂದು ನಾವು ಭಾವಿಸಿಕೊಂಡಿರುತ್ತೇವೆ. ಆದರೆ, ಎಲ್ಲರಿಗೂ ಸಮಾನವಾದ, ಘನತೆಯುಳ್ಳ ಬದುಕು ಇಲ್ಲ ಎಂಬುದನ್ನು ನಾವು ಒಪ್ಪಲೇಬೇಕು. ಈ ಸಮಾಜದಲ್ಲಿನ ಲಿಂಗ, ಧರ್ಮ, ಜಾತಿ, ವರ್ಣಗಳು ತಮ್ಮದೇ ಅಹಂಗಳ ಕಾರಣಕ್ಕೆ ಗೋಡೆಗಳನ್ನು ರೂಪಿಸಿ ಕೆಲವರ ಬದುಕು ಚೆಂದವಾಗಿಯೂ, ಚೊಕ್ಕವಾಗಿಯೂ ರೂಪಿಸಿದರೆ ಹಲವರ ಬದುಕನ್ನು ದುಸ್ತರಗೊಳಿಸಿ ಅವರ ಬದುಕು ‘ಬದುಕೇ ಅಲ್ಲ’ ಎನ್ನುವ ಮಟ್ಟಿಗೆ ನಂಬಿಸುವ, ಯಾಂತ್ರೀಕರಿಸುವ ಕೆಲಸವನ್ನು ಮಾಡುತ್ತಿರುತ್ತದೆ.

ಅದರಲ್ಲೂ ಗಂಡು-ಹೆಣ್ಣಿನ ಜೈವಿಕ ವ್ಯತ್ಯಾಸಕ್ಕೆ ಕಂಡು ಕೇಳರಿಯಲಾರದ ಬದುಕಿನ ವೈಪರೀತ್ಯಗಳಿರುವಾಗ ಹುಟ್ಟುವಾಗ ಗಂಡಾಗಿಯೊ-ಹೆಣ್ಣಾಗಿಯೊ ಹುಟ್ಟಿ ಮನದಾಳದ ಭಾವನೆಗಳಲ್ಲಿ ಭಿನ್ನವಾದ ಜನರ ಬದುಕುಗಳನ್ನು ಈ ಸಮಾಜ ಒಪ್ಪುವುದಿರಲಿ, ಉಸಿರಾಡಲೇಬಾರದು ಎನ್ನುವ ಹಾಗೆ ವರ್ತಿಸುವ ಸಮಾಜಕ್ಕೆ ಹೋರಾಟದ ಮೂಲಕವೇ ಉತ್ತರಿಸಿದ ಬದುಕು ಪದ್ಮಶಾಲಿ ಅಕ್ಕಯ್ ಅವರದ್ದಾಗಿದೆ.

ಪ್ರೊ. ಡಾಮಿನಿಕ್ ಅವರು ನಿರೂಪಿಸಿರುವ ಅಕ್ಕಯ್ ಅವರ ಆತ್ಮಕಥನವನ್ನು ರಂಗ ರೂಪಕ್ಕೆ ಇಳಿಸಿ, ಸಮುದಾಯದ ಸಂಕಟಗಳನ್ನು ಅಕ್ಷರ ರೂಪದಿಂದ ಜನಸಾಮಾನ್ಯನ ಬಳಿಗೆ ಕರೆದೊಯ್ಯೊವ ಮಹತ್ವದ ಕೆಲಸವನ್ನು ಬೇಲೂರು ರಘುನಂದನ್ ಮಾಡಿದ್ದಾರೆ. ಅಕ್ಕಯ್ ಅವರ ನೋವಿಗೆ, ಹೋರಾಟಕ್ಕೆ ರಂಗದ ಮೇಲೆ ಮೆರಗು ತಂದವರು ನಯನ ಸೂಡ. ನಾಟಕದ ಸಂಗೀತ ನಿರ್ದೇಶನ ರಾಜಗುರು ಹೊಸಕೋಟಿ. ಇಡೀ ನಾಟಕವನ್ನು ರಂಗಪಯಣ ಮತ್ತು ಕಾಜಾಣ ರಂಗದ ಮೇಲೆ ತಂದಿದೆ.

ADVERTISEMENT

ಜೈವಿಕವಾಗಿ ಗಂಡಾಗಿ ಹುಟ್ಟಿ ಹೆಣ್ಣಾಗುವ ತವಕಕ್ಕೆ ಕಾದ ಎಣ್ಣೆ ಸುರಿಯುವವರಿಗೆ ಲೆಕ್ಕವಿಲ್ಲ. ಪಬ್ಲಿಕ್ ಟಾಯ್ಲೆಟ್‌ಗಳು, ಗೋಡೆಯಾಚೆಗಿನ ಬದಿಗಳು, ಫಿಲಂ ಥಿಯೇಟರ್‌ಗಳು, ನಗರಗಳ ಮೇಲ್ಸೇತುವೆಗಳು ಹೀಗೆ ಎಲ್ಲೆಂದರಲ್ಲಿ ಬಟ್ಟೆ ಬಿಚ್ಚಿ ನಿಲ್ಲುವ ಲೈಂಗಿಕತೆಗಳಿಗೆ ಸಮಾಜ ಇಟ್ಟ ಹೆಸರು ‘ಅಕ್ರಮ’ ಎಂದಾದರೂ ಅದು ನಡೆಸುವ ಪ್ರಕ್ರಿಯೆಗಳೆಲ್ಲವೂ ಅದಕ್ಕೆ ವಿರುದ್ಧವಾಗಿಯೇ ಇವೆ. ನಾಟಕದಲ್ಲಿ ಇಂತಹ ಲೈಂಗಿಕತೆಯ ಸೋಗಲಾಡಿನಗಳು, ವಿಕೃತಗಳು ಹಾಗೂ ಬಣ್ಣಗಳ ಮರೀಚಿಕೆಯನ್ನು ತೀಕ್ಷ್ಣವಾಗಿ ಪ್ರಶ್ನಿಸಲಾಗಿದೆ. ಹಂಗುಗಳನ್ನು ತೊರೆದು ನಯನ ಸೂಡ ಅಭಿನಯಿಸಿರುವುದು ಪ್ರೇಕ್ಷರಿಗೆ ಸವಾಲೆಸದಂತಾಗಿದೆ.

ಲೈಂಗಿಕ ಅಲ್ಪಸಂಖ್ಯಾತ ಸಮುದಾಯಗಳು ಎಲ್ಲೆಲ್ಲಿಯೂ ಅವಮಾನ, ಅಪಹಾಸ್ಯಗಳಿಗೆ ಗುರಿಯಾಗುತ್ತಿರುತ್ತವೆ. ಭಿಕ್ಷಾಟನೆ ಮಾಡುತ್ತಾರೆ, ಅಸಹ್ಯವಾಗಿ ನಡೆದುಕೊಳ್ಳುತ್ತಾರೆ ಎಂದು ಟಂಕಿಸುವ ನಮ್ಮ ಮನಃಸ್ಥಿತಿಗಳಿಗೆ ಪ್ರಶ್ನೆಗಳ ಸರಮಾಲೆಯನ್ನೇ ಎಸೆದು ಉತ್ತರಿಸಲಾಗದ ಸಂದಿಗ್ಧಕ್ಕೆ ನಮ್ಮನ್ನು ದೂಡುವಂತೆ ನಾಟಕ ಮಾಡುತ್ತದೆ. ಪಾತ್ರಕ್ಕೆ, ಸಮುದಾಯಕ್ಕೆ ತಕ್ಕ ಹಾಡು, ಸಂಗೀತ ಮತ್ತು ರಾಜಗುರು ಅವರ ಭಾವ ತೀವ್ರತೆಯ ಆಲಾಪಗಳು ನಮ್ಮ ಕುರಿತು ನಾವೇ ನಾಚಿಕೆಪಟ್ಟುಕೊಳ್ಳುವ ಹಾಗೆ ಮಾಡಿದ್ದು ಸುಳ್ಳಲ್ಲ.

ಈ ಸಮಾಜ ತುಂಬಾ ಸಭ್ಯತೆವೆಂತಲೂ ಸುಸಂಸ್ಕೃತವೆಂತಲೂ ಕಂಡಾಗ ಸಹ ಇದು ಒಳಗೊಳ್ಳದ ಸಾಮಾಜಿಕ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಇಲ್ಲದಿದ್ದಲ್ಲಿ ಅಕ್ಕಯ್ ಅಂತಹ ಜೀವಗಳು ಈ ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗುವ ಪ್ರಮೇಯ ಎದುರುಗೊಳ್ಳುತ್ತಿರಲಿಲ್ಲ. ಜಗತ್ತಿನ ಇತಿಹಾಸಕ್ಕೆ ಪ್ರಶ್ನೆ ಎತ್ತುವ ಅಕ್ಕಯ್ ಅವರ ಬದುಕನ್ನು, ಅವರ ಜೀವನ ಕ್ರಮ, ಸಮುದಾಯದ ಆಚರಣೆ, ಮೂಢನಂಬಿಕೆ, ಗಂಡೊಳಗಿನ ಹೆಣ್ತನಗಳ ಗೊಂದಲಗಳನ್ನು ಪ್ರೇಕ್ಷಕನಿಗೆ ತಲುಪಿಸಿದ್ದು, ನಗಿಸಿದ್ದು, ಅಳಿಸಿದ್ದು, ಯೋಚಿಸುವ ಹಾಗೆ, ಪ್ರಶ್ನಿಸುವ ಹಾಗೆ, ತಿದ್ದಕೊಳ್ಳುವ ಹಾಗೆ ಮಾಡಿದ್ದು ಮಾತ್ರ ಅಕ್ಕಯ್ ಪಾತ್ರವನ್ನು ಮಾಡಿದ ನಯನ ಅವರು.

ರಂಗರೂಪ ಮತ್ತು ನಿರ್ದೇಶನ ಮಾಡಿರುವ ಬೇಲೂರು ಅವರು ನಾಟಕದ ಉದ್ದಕ್ಕೂ ಗೆದ್ದಿರುವುದು ನಮಗೆ ಗೋಚರಿಸುತ್ತದೆ. ಒಂದು ಹೆಣ್ಣು ಪಾತ್ರ ಮಾಡುತ್ತಿದ್ದಾರೆ, ಆಕೆ ಲೈಂಗಿಕ ಅಲ್ಪಸಂಖ್ಯಾತೆಯ ಪಾತ್ರ ಮಾಡುತ್ತಿರುವಾಗ ಆಕೆಯ ಕೈಗೆ ಸಂವಿಧಾನವನ್ನು ಇಟ್ಟು, ಹೆಗಲಿಗೆ ನೀಲಿ ಶಾಲನ್ನು ಹೊದಿಸಿ ದಿಕ್ಸೂಚಿ ತೋರಿಸುವ, ಹೋರಾಟದ ಪ್ರತೀ ಹೆಜ್ಜೆಯಲ್ಲಿ ಸಾವಿರ ಸಾವಿರ ಮೈಲಿಗಲ್ಲುಗಳನ್ನು ಸ್ಥಾಪಿಸಿದ ಅಂಬೇಡ್ಕರ್ ಅವರ ತದ್ರೂಪಿಯನ್ನು ಸೃಷ್ಟಿಸಿದ್ದರಲ್ಲಿ ಆ ಗೆಲುವಿದೆ. ಭಾರತೀಯ ಹೋರಾಟಗಳ ಧ್ವನಿ ‘ಅಂಬೇಡ್ಕರ್’ ಎನ್ನುವುದು ಸಾರ್ವಕಾಲಿಕವಾದ ಸತ್ಯ ಎಂಬುದನ್ನು ಇಂತಹ ಪ್ರಕ್ಷುಬ್ಧ ಸನ್ನಿವೇಶದಲ್ಲಿಯೂ ಪ್ರತಿಷ್ಠಾಪಿಸಿದ್ದು ನಾಟಕ ಇನ್ನಷ್ಟು ಆಪ್ತವಾಗಲು ಸಾಧ್ಯವಾಗಿದೆ. ಅಲ್ಲದೆ ಒಬ್ಬ ಲೈಂಗಿಕ ಅಲ್ಪಸಂಖ್ಯಾತೆಯ ಪಾತ್ರ ಮಾಡುತ್ತಿರುವ ಹೆಣ್ಣೊಬ್ಬಳ ಕೈಯಲ್ಲಿ ಸಂವಿಧಾನವನ್ನು ಹಿಡಿಸಿದಾಗ ಇಡೀ ಪ್ರೇಕ್ಷಕರಲ್ಲಿ ಸಂಚಲನ ಉಂಟು ಮಾಡಿತು.

ಸಮುದಾಯದ ಹೋರಾಟ, ಪ್ರತ್ಯೇಕತೆಯಿಂದ ಒಳಗೊಳ್ಳುವ ಪ್ರಕ್ರಿಯೆ, ಸಹಜ-ಅಸಹಜತೆಯ ಮೀರಿದ ಸಂಬಂಧಗಳನ್ನು ದಿಟ್ಟ ಧ್ವನಿಯ ಮೂಲಕ ಆಜ್ಞಾಪಿಸಿದ ಅಕ್ಕಯ್ ಅವರ ಬದುಕಿಗೆ, ಇಡೀ ನಾಟಕ ತಂಡಕ್ಕೆ, ಅಕ್ಕಯ್ ಪಾತ್ರಕ್ಕೆ ಜೀವ ತುಂಬಿದ ನಯನ ಅವರಿಗೆ ಅಭಿನಂದನೆಗಳು ಸಲ್ಲುತ್ತವೆ. ಪಟ್ಟಶ್ರಮದ ಫಲವಾಗಿ ಸಮಾಜದಲ್ಲಿನ ಅಪನಂಬಿಕೆಗಳು ದೂರಾದರೆ ಅಕ್ಕಯ್ ಅವರ ಹೋರಾಟಕ್ಕೆ ಇನ್ನಷ್ಟು ಜಯ ಸಿಕ್ಕಂತಾಗುತ್ತದೆ.

–ಪುನೀತ್ ತಥಾಗತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.