ADVERTISEMENT

ಕಷ್ಟ ದಿನಗಳ ನೆನೆದು ಕಣ್ಣೀರಾದ ಅಮೃತಧಾರೆ ಧಾರಾವಾಹಿಯ ಗೌತಮ್ ಅಜ್ಜಿ ಸರ್ವಮಂಗಳ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜನವರಿ 2026, 9:17 IST
Last Updated 22 ಜನವರಿ 2026, 9:17 IST
   

ಇತ್ತೀಚೆಗೆ ಅಮೃತಧಾರೆ ಧಾರಾವಾಹಿಯ ಸಂಕ್ರಾಂತಿ ಜಾತ್ರೆ ಹರಿಹರದಲ್ಲಿ ನಡೆಯಿತು. ಈ ಜಾತ್ರೆ ಸಂದರ್ಭದಲ್ಲಿ ಈ ಧಾರಾವಾಹಿ ಸರ್ವಮಂಗಳ ಪಾತ್ರಧಾರಿ ನಟಿ ಮಾಲತಿಶ್ರೀ ಅವರು ನಡೆದು ಬಂದ ಜೀವನದ ಕಷ್ಟದ ದಿನಗಳನ್ನು ನೆನೆದು ವೇದಿಕೆ ಮೇಲೆ ಭಾವುಕರಾಗಿದ್ದಾರೆ. 

ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ನಿರೂಪಕ ನಿರಂಜನ್ ದೇಶಪಾಂಡೆ ಅವರು, ‘ಮಾಲತಿಶ್ರೀ ಅಮ್ಮ ಎಲ್ಲರಿಗೂ ಮಾದರಿ. ಕಾರಣ, ಇವರ ದುಡಿಮೆಯಿಂದ ಬರುವ ಅರ್ಧದಷ್ಟು ಹಣವನ್ನು ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾರೆ. ಇವರ ಒಳ್ಳೆಯ ಗುಣಗಳನ್ನು ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕು’ ಎಂದು ಗುಣಗಾನ ಮಾಡಿದ್ದಾರೆ.

ಅಮೃತಧಾರೆ ಧಾರಾವಾಹಿಯಲ್ಲಿ ನಟಿ ಮಾಲತಿಶ್ರೀ

ADVERTISEMENT

ನಟಿ ಮಾಲತಿಶ್ರೀ ಅವರು ಮಾತನಾಡಿ, ‘ನಾನು ದೊಡ್ಡ ವ್ಯಕ್ತಿ ಅಲ್ಲ. ನನ್ನ ನಟನೆಗೆ ಸಂಬಳ ನೀಡುವ ನಿರ್ಮಾಪಕರು ದೊಡ್ಡ ವ್ಯಕ್ತಿ. ಏಳನೇ ವಯಸ್ಸಿನಲ್ಲಿ ನನ್ನ ಅಪ್ಪ– ಅಮ್ಮನನ್ನು ಕಳೆದುಕೊಂಡೆ. ನಾನು ಎಲ್ಲರನ್ನೂ ಕಳೆದುಕೊಂಡು ಅನಾಥಳಾಗಿ ಕಷ್ಟದಲ್ಲೇ ಬೆಳೆದು ಬಂದೆ. ನನಗೆ ತಿಳಿವಳಿಕೆ ಬಂದ ಮೇಲೆ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಬೇಕು ಎಂಬ ನಿರ್ಧಾರ ಮಾಡಿದ್ದೆ. ಸದ್ಯ, ನನಗೀಗ ಉಳಿದುಕೊಳ್ಳಲು ಜಾಗ, ಊಟ, ಬಟ್ಟೆ ಸಿಕ್ಕಿದ ಮೇಲೆ ಉಳಿದ ಹಣದಲ್ಲಿ ಬಡವರಿಗೆ ಸಹಾಯ ಮಾಡುತ್ತಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

ಗೌತಮ್ ಅಜ್ಜಿ ಸರ್ವಮಂಗಳ ಪಾತ್ರದಲ್ಲಿ ಮಾಲತಿಶ್ರೀ

‘ಹೊಸದಾಗಿ ನಟನೆ ಕಲಿಯುವವರಿಗೆ ನಾನು ಉಚಿತವಾಗಿ ತರಬೇತಿ ಕೊಡುತ್ತೇನೆ. ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ಹೋಗಿ ಸಾಂಸ್ಕೃತಿಕ ಕಾರ್ಯಕ್ರಮ ಮಾಡುತ್ತೇನೆ. ಅಲ್ಲಿರುವ ಜನರ ಜೊತೆ ನಾನು ಹಾಡಿ, ನಲಿದು ಅವರನ್ನು ನಗಿಸುತ್ತೇನೆ. ನನ್ನನ್ನು ಸಾಕಿದ ಅಕ್ಕನೂ ಕೆಲವು ವರ್ಷಗಳ ಹಿಂದೆ ನಿಧನರಾದರು. ಬಡವರಿಗೆ ಸಹಾಯ ಮಾಡುವ ಮೂಲಕ ನನ್ನ ನೋವು ಮರೆಯುತ್ತೇನೆ’ ಎಂದು ಹೇಳಿಕೊಂಡಿದ್ದಾರೆ.

ಈ ಹಿಂದೆ ಬೆಳ್ಳಿ ತೆರೆಯಲ್ಲೂ ಗುರುತಿಸಿಕೊಂಡಿದ್ದ ಮಾಲತಿಶ್ರೀ ಅವರು, ʻಸಿರಿವಂತʼ, ʻಮೈ ಆಟೋಗ್ರಾಫ್‌ʼ, ದರ್ಶನ್‌ ಅವರ ʻಯಜಮಾನʼ ಸೇರಿ ಹಲವು ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ, ಅಮೃತಧಾರೆ ಧಾರಾವಾಹಿಯ ಸರ್ವಮಂಗಳ ಗೌತಮ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.