
ತನ್ವಿಯ ಬಾಲರಾಜ್
ಚಿತ್ರ: ಇನ್‌ಸ್ಟಾಗ್ರಾಂ
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಅಂತರಪಟ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ನಟಿ ತನ್ವಿಯ ಬಾಲರಾಜ್ ಇದೀಗ ತಮ್ಮ ಮೂಲ ಹೆಸರನ್ನೇ ಬದಲಾಯಿಸಿಕೊಂಡಿದ್ದಾರೆ. ನಟಿ, ನಿರ್ದೇಶಕಿ ಸ್ವಪ್ನ ಕೃಷ್ಣ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಅಂತರಪಟ ಧಾರಾವಾಹಿಯಲ್ಲಿ ಆರಾಧನಾ ಪಾತ್ರದಲ್ಲಿ ತನ್ವಿಯ ಬಾಲರಾಜ್ ಅವರು ನಟಿಸಿದ್ದರು. ಈ ಮೂಲಕವೇ ಹೆಚ್ಚು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.
ಈಗ ನಟಿ ತನ್ವಿಯ ಬಾಲರಾಜ್ ಅವರು ರಾಧ್ಯಾ ರಾಜ್ ಎಂದು ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಈ ಬಗ್ಗೆ ನಟಿ ತಮ್ಮ ಸಾಮಾಜಿಕ ಮಾಧ್ಯಮದ ಮೂಲಕ ಅಭಿಮಾನಿಗಳಿಗೆ ಮಾಹಿತಿ ಕೊಟ್ಟಿದ್ದಾರೆ.
ನಟಿ ಪೋಸ್ಟ್‌ನಲ್ಲಿ ಏನಿದೆ?
‘ಕೃತಜ್ಞತೆ ತುಂಬಿದ ಹೃದಯದೊಂದಿಗೆ ನನ್ನ ಜೀವನದ ಪಯಣದಲ್ಲಿ ಹೊಸ ಅಧ್ಯಾಯವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನನಗೆ ಅಪಾರ ಸಂತೋಷವಾಗಿದೆ. ಹೊಸ ಕನಸುಗಳು ಹಾಗೂ ಆಶಯಗಳೊಂದಿಗೆ ಮುಂದಕ್ಕೆ ಸಾಗುತ್ತಿರುವ ಈ ಸಂದರ್ಭದಲ್ಲಿ, ಕೆಲವು ವಿಶೇಷ ಕಾರಣಗಳಿಂದ ನಾನು ಹೊಸ ಹೆಸರನ್ನು ಸ್ವೀಕರಿಸುವ ನಿರ್ಧಾರ ಕೈಗೊಂಡಿದ್ದೇನೆ’.
‘ಇಷ್ಟು ದಿನ ನೀವು ತನ್ವಿಯ ಬಾಲರಾಜ್ ಎಂಬ ಹೆಸರಿಗೆ ತೋರಿಸಿದ ಪ್ರೀತಿ ಮತ್ತು ಬೆಂಬಲ ಇನ್ನು ಮುಂದೆ ‘ರಾಧ್ಯಾ ರಾಜ್’ ಹೆಸರಿಗೂ ತೋರಿಸಿ. ನಿಮ್ಮ ನಿರಂತರ ಬೆಂಬಲ ಮತ್ತು ಪ್ರೋತ್ಸಾಹ ಪ್ರತಿದಿನವೂ ನನಗೆ ಪ್ರೇರಣೆಯಾಗಿವೆ. ಈ ಸುಂದರ ಪಯಣವನ್ನು ನಿಮ್ಮೊಡನೆ ಜೊತೆಯಾಗಿಯೇ ಮುಂದುವರಿಸಲು ನಾನು ಎದುರು ನೋಡುತ್ತಿದ್ದೇನೆ.
ನಟಿ ತನ್ವಿಯ ಬಾಲರಾಜ್ ಅವರು ಕನ್ನಡ ಸೇರಿದಂತೆ ತೆಲುಗು ಭಾಷೆಯಲ್ಲೂ ಛಾಪು ಮೂಡಿಸಿದ್ದಾರೆ. ನಟಿ ತನ್ವಿಯ ಬಾಲರಾಜ್ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಬಿಲ್ಡಿಂಗ್ ಕಾಂಟ್ರ್ಯಾಕ್ಟರ್ ಆಗಿ ಕೆಲಸ ಮಾಡುತ್ತಿದ್ದರೆ, ತಾಯಿ ಹೂವು ಮಾರಿ ಬದುಕು ಕಟ್ಟಿಕೊಂಡಿದ್ದರು. ನಟಿಯಾಗಿ ತೆರೆಗೆ ಬರುವ ಮೊದಲು ಬ್ಯಾಕ್ ಸ್ಟೇಜ್ ಡ್ಯಾನ್ಸರ್ ಆಗಿ ತನ್ವಿ ಬಾಲರಾಜ್ ಕೆಲಸ ಮಾಡುತ್ತಿದ್ದರು. ತೆರೆ ಮೇಲೆ ನಾಯಕಿಯಾಗಿ ಗುರುತಿಸಿಕೊಳ್ಳುವುದರ ಹಿಂದೆಯಿದ್ದ ಶ್ರಮ ಅಷ್ಟಿಷ್ಟಲ್ಲ. ಸದ್ಯ ಹೊಸ ಹೆಸರನ್ನು ಇಟ್ಟುಕೊಳ್ಳುವ ಮೂಲಕ ತನ್ವಿಯ ಬಾಲರಾಜ್ ಇನ್ನು ಮುಂದೆ ರಾಧ್ಯಾ ರಾಜ್ ಆಗಿ ವೀಕ್ಷಕರ ಮುಂದೆ ಬರಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.