
ಕನ್ನಡದ ಅತಿದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್ ಬಾಸ್ – 12ನೇ ಆವೃತ್ತಿಯ ಕಿರೀಟವನ್ನು ನಟರಾಜ್ ಅಲಿಯಾಸ್ ಗಿಲ್ಲಿ ನಟ ಮುಡಿಗೇರಿಸಿಕೊಂಡಿದ್ದಾರೆ.
ಫಿನಾಲೆ ಶುರುವಾಗುವುದಕ್ಕೂ ಮೊದಲೇ ಸಾಮಾಜಿಕ ಮಾಧ್ಯಮಗಳಲ್ಲಿ ಗಿಲ್ಲಿ ಗೆಲುವಿನ ಅಲೆ ಎದ್ದಿತ್ತು. ಆದರೆ, ಅಧಿಕೃತವಾಗಿ ಘೋಷಣೆಯಾಗಲು ಈ ಹೊತ್ತಿನ ವರೆಗೆ ಕಾಯಲೇ ಬೇಕಿತ್ತು.
ಅಂತಿಮ ಸುತ್ತಿನಲ್ಲಿ ಗಿಲ್ಲಿಗೆ ರಕ್ಷಿತಾ ಪೈಪೋಟಿ ನೀಡಿದ್ದರು.
ನಟ, ನಿರೂಪಕ ಕಿಚ್ಚ ಸುದೀಪ್ ಅವರು ಅಂತಿಮವಾಗಿ ಗಿಲ್ಲಿಯವರ ಕೈಯನ್ನು ಮೇಲೆತ್ತುವುದರೊಂದಿಗೆ ಗೆಲುವನ್ನು ಘೋಷಿಸಿದ್ದಾರೆ. ಇದರೊಂದಿಗೆ, ರಾಜ್ಯದಾದ್ಯಂತ ಇರುವ ಗಿಲ್ಲಿಯ ಅಪಾರ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ.
ಗಿಲ್ಲಿ ವಿಜಯದ ಬೆನ್ನಲ್ಲೇ, ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಫಿನಾಲೆಗೂ ಮೊದಲೇ ಪ್ರಿಂಟ್ ಮಾಡಿಸಿಕೊಂಡಿದ್ದ ಬ್ಯಾನರ್‌ಗಳನ್ನು ಕಟ್ಟಿ ಅಭಿಮಾನ ಮೆರೆದಿದ್ದಾರೆ.
ಗಿಲ್ಲಿಯೂರಿನಲ್ಲಿ ಹಬ್ಬ
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಡದಪುರ ಗಿಲ್ಲಿ ನಟನ ಊರು. ವಿಜಯಿ ಯಾರೆಂಬುದು ಘೋಷಣೆಯಾಗುತ್ತಿದ್ದಂತೆ ದಡದಪುರದಲ್ಲಿ ವಿಜಯ ಪತಾಕೆ ಮೊಳಗಿದೆ. ಗ್ರಾಮದ ತುಂಬೆಲ್ಲ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.
ಜೊತೆಯಲ್ಲಿ ಒಡನಾಡಿದವರು, ಕಷ್ಟಕ್ಕೆ ಹೆಗಲಾದವರು, ನೆರೆಹೊರೆಯವರೆಲ್ಲ ಪರಸ್ಪರ ಸಿಹಿ ತಿನ್ನಿಸಿ ಖುಷಿಯನ್ನು ಹಂಚಿಕೊಂಡಿದ್ದಾರೆ. ಗಿಲ್ಲಿ ಫೋಟೊಗಳಿಗೆ ಹಾಲೆರೆದು ಸಂಭ್ರಮಿಸಿದ್ದಾರೆ.
ಊರಿನ ಪ್ರಮುಖ ವೃತ್ತಗಳಲ್ಲೆಲ್ಲಾ ಗಿಲ್ಲಿಯ ದೊಡ್ಡ ದೊಡ್ಡ ಕಟೌಟ್‌ಗಳು ರಾರಾಜಿಸುತ್ತಿವೆ.
'ದ್ವಂದ್ವಾರ್ಥವೇ ಹಾಸ್ಯವೆನ್ನುವಂತಾಗಿರುವ ಹೊತ್ತಿನಲ್ಲಿ, ನಿಜವಾದ ಹಾಸ್ಯವನ್ನು ತೋರಿದವನು ಗಿಲ್ಲಿ. ಆ ಕಾರಣಕ್ಕೆ ಸದ್ಯದ ಹಾಸ್ಯ ಕಲಾವಿದರ ನಡುವೆ ನಮ್ಮೂರಿನ ಯುವಕ ವಿಶೇಷವಾಗಿ ಕಾಣುತ್ತಾನೆ. ಚಿಕ್ಕ-ಪುಟ್ಟ ವಿಚಾರಗಳಲ್ಲೂ ಹಾಸ್ಯ ಹುಡುಕುವ, ಸಣ್ಣ ಎಳೆಯನ್ನು ಇಟ್ಟುಕೊಂಡು ನಗೆ ಚಟಾಕಿ ಹಾರಿಸಿ ಹೊಟ್ಟೆ ಹುಣ್ಣಾಗುವಂತೆ ಮಾಡುವ ಗಿಲ್ಲಿ ಗೆಲುವಿಗೆ ನಿಜವಾಗಿಯೂ ಅರ್ಹ' ಎಂದು ಗ್ರಾಮದ ನಿವಾಸಿ ಹಾಗೂ ಸದ್ಯ ಪೊಲೀಸ್ ಇಲಾಖೆಯಲ್ಲಿರುವ ದೇವರಾಜು ಎನ್. ಹೇಳಿದ್ದಾರೆ.
ಮಳವಳ್ಳಿಯಿಂದ ಮೆರವಣಿಗೆ
ತಾಲ್ಲೂಕು ಕೇಂದ್ರ ಮಳವಳ್ಳಿಯಲ್ಲಿರುವ ದಂಡಿನ ಮಾರಮ್ಮನ ದೇವಾಲಯದಿಂದ ದಡದಪುರದ ವರೆಗೆ ಅಂದರೆ (ಸುಮಾರು 10 ಕಿ.ಮೀ.) ಬಿಗ್ ಬಾಸ್ ಟ್ರೋಫಿಯೊಂದಿಗೆ ಗಿಲ್ಲಿ ಅವರ ಮೆರವಣಿಗೆ ನಡೆಸಲು ಇಂದು (ಸೋಮವಾರ) ಸಿದ್ಧತೆ ಮಾಡಿಕೊಂಡಿರುವುದಾಗಿ ಗ್ರಾಮದ ಯುವಕ ಕಾಳೇಗೌಡ ತಿಳಿಸಿದ್ದಾರೆ.
'ಸಣ್ಣ ಹಳ್ಳಿಯಿಂದ ಹೋಗಿ, ರಾಜ್ಯದಾದ್ಯಂತ ಊರಿನ ಕೀರ್ತಿ ಪತಾಕೆ ಹಾರಿಸಿರುವ ಗಿಲ್ಲಿಗೆ ಇಷ್ಟಾದರೂ ಮಾಡದಿದ್ದರೆ ಹೇಗೆ?' ಎಂಬುದು ಅವರ ಸ್ಪಷ್ಟೋಕ್ತಿ.
ದೇವರಾಜು ಎನ್., ಡಾ. ಶಂಕರ್ ಸಿ
ಹಳ್ಳಿಯ ಬಡ ಕುಟುಂಬದಿಂದ ಬಂದು ತನ್ನ ಹಾಸ್ಯದ ಮೂಲಕ ಇಡೀ ಕರ್ನಾಟಕದ ಮನೆ ಮಗನಾಗಿ, ಪ್ರತಿಯೊಬ್ಬರ ಹೃದಯ ಗೆದ್ದು ನಮ್ಮೂರಿಗೆ ಕೀರ್ತಿ ತಂದ ಅತ್ಯುತ್ತಮ ಕಲಾವಿದನಾಗಿದ್ದಾನೆ. ಬಿಗ್ ಬಾಸ್ ಸೀಸನ್ - 12ರಲ್ಲಿ ಕೋಟಿ ಕೋಟಿ ಮತಗಳಿಂದ ವಿಜಯಶಾಲಿಯಾದ ನಮ್ಮಗಿಲ್ಲಿ ನಟರಾಜನಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.- ಡಾ. ಶಂಕರ್ ಸಿ., ದಡದಪುರ (ಪ್ರಾಧ್ಯಾಪಕರು ಸರ್ಕಾರಿ ಪಾಲಿಟೆಕ್ನಿಕ್, ಮಳವಳ್ಳಿ)
ಟಾಪ್ ಸಿಕ್ಸ್
ಗಿಲ್ಲಿ ನಟರಾಜ್
ರಕ್ಷಿತಾ
ಅಶ್ವಿನಿ ಗೌಡ
ಕಾವ್ಯ
ರಘು
ಧನುಷ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.