
ಮರಿಯೊಂದಿಗೆ ಹುಲಿ
ಕೃಪೆ: Gemini AI
'ಹುಲಿಯಿದ್ದರೆ ಕಾಡು, ಕಾಡಿದ್ದರೆ ನಾಡು' ಎಂಬ ಮಾತಿದೆ. ರಾಷ್ಟ್ರ ಪ್ರಾಣಿಯಾಗಿರುವ ಹುಲಿ ಪರಭಕ್ಷಕ ಎಂಬುದಷ್ಟೇ ಅಲ್ಲ. ಪರಿಸರ ವ್ಯವಸ್ಥೆಯ ಪಾಲಕನೂ ಹೌದು.
ಎಲ್ಲೋ ದಟ್ಟಾರಣ್ಯದಲ್ಲಿ ತನ್ನಷ್ಟಕ್ಕೆ ಬದುಕುವ ಈ ಜೀವಿ, ಮನುಷ್ಯನ ತುತ್ತನ್ನು ನಿರ್ಧರಿಸುತ್ತದೆ. ಮರಗಳೆದ್ದು ಮಳೆಯಾಗಲು, ಅದರಿಂದ ಝರಿಗಳುಟ್ಟಲು ಎಡೆ ಮಾಡಿಕೊಡುತ್ತದೆ. ಬಿತ್ತಿದ ಬೆಳೆ ಸೊಂಪಾಗಿ ಬೆಳೆದು ರೈತನ ಕೈಸೇರಬೇಕಾದರೂ ಆ 'ವ್ಯಾಘ್ರ'ದ ಕೃಪಾಕಟಾಕ್ಷವಿರಬೇಕು. ಅದರ ತೃಷೆ ನೀಗಿದರಷ್ಟೇ ನಮ್ಮೆಲ್ಲರ ಹೊಲಮನೆಗಳ ದಾಹ ತೀರುವುದು.
ಪರಿಸರ ವ್ಯವಸ್ಥೆಯಲ್ಲಿ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಹುಲಿಯ ಪಾತ್ರ ದೊಡ್ಡದು. ಆದಾಗ್ಯೂ, ಅತಿಯಾದ ಬೇಟೆ, ಅರಣ್ಯ ನಾಶ, ಪರಿಸರ ವಿರೋಧಿ ಚಟುವಟಿಕೆ, ವನ್ಯಲೋಕದ ಮೇಲೆ ಮಾನವನ ಅತಿಕ್ರಮಣ ಮಿತಿಮೀರಿದ ಪರಿಣಾಮವಾಗಿ ಹುಲಿಗಳ ಸಂಖ್ಯೆ ಕುಸಿಯುತ್ತಾ ಬಂದಿದೆ.
ವರದಿಗಳ ಪ್ರಕಾರ, 20ನೇ ಶತಮಾನದ ಆರಂಭದಲ್ಲಿ ಭಾರತದಲ್ಲಿ 50 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಹುಲಿಗಳ ಸಂಖ್ಯೆ, 1950ರ ಹೊತ್ತಿಗೆ 40 ಸಾವಿರಕ್ಕೆ ಕುಸಿದಿತ್ತು. 1973ರ ವೇಳೆಗೆ ಮತ್ತಷ್ಟು ಕುಸಿದು 1,800ರ ಆಸುಪಾಸಿಗಿಳಿದಿತ್ತು. ಅದರಿಂದಾದ ಪ್ರಾಕೃತಿಕ ಅಸಮತೋಲನದ ಫಲಗಳನ್ನು ಇಡೀ ಜೀವಸಂಕುಲ ಉಣ್ಣಬೇಕಾಯಿತು.
ಆ ಪರಿಣಾಮಗಳಿಂದ ಜೀವಕೋಟಿಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಹುಲಿಗಳ ಸಂರಕ್ಷಣೆ ನೆಪದಲ್ಲಿ 1973ರ ಏಪ್ರಿಲ್ 1ರಂದು ಭಾರತದಲ್ಲಿ 'ಹುಲಿ ಯೋಜನೆ' ಜಾರಿಗೊಂಡಿತು. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಈ ಯೋಜನೆಗೆ ಚಾಲನೆ ನೀಡಿದರು. ಅದೇ ವರ್ಷ (ನವೆಂಬರ್) ಕರ್ನಾಟಕದ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲೂ ಯೋಜನೆ ಆರಂಭವಾಯಿತು.
ಹುಲಿಗಳ Gemini AI ಚಿತ್ರ
ಯೋಜನೆ ಏಕೆ?
ಕಾಡು ಸಮೃದ್ಧವಾಗಿದ್ದರಷ್ಟೇ ನಾಡು ಸುಭಿಕ್ಷವಾಗಿರಲು ಸಾದ್ಯ. ಇವೆರಡೂ ಆಗಬೇಕೆಂದರೆ, ವ್ಯಾಘ್ರ ಸೌಖ್ಯವಾಗಿರಬೇಕು. ಅದಕ್ಕೆ ಆಹಾರವಾಗುವ, ಕಾಟಿ, ಕಡವೆ, ಜಿಂಕೆಯಂತಹ ಪ್ರಾಣಿಗಳು ಬೇಕು. ಅವು ತಿನ್ನುವ ಹಸಿರೂ ಹೇರಳವಾಗಿರಬೇಕು. ಹೀಗೆ ಒಂದನ್ನೊಂದು ಅವಲಂಬಿಸಿಯೇ ಸಾಗುತ್ತದೆ ವನಜೀವನ.
ಅತಿಯಾಗಿ ಹಸಿರು ನಾಶವಾಗದಂತೆ ಸಸ್ಯಹಾರಿ ಪ್ರಾಣಿಗಳ ಸಂತತಿಗೆ ಕಡಿವಾಣ ಹಾಕುವ ಹುಲಿ, ಹೊರಗಿನ ಅತಿಕ್ರಮಣದಿಂದ ಅವುಗಳಿಗೆ ರಕ್ಷಣೆ ನೀಡುವ ಯಜಮಾನಿಕೆಯನ್ನೂ ಮಾಡುತ್ತದೆ. ಆ ಮೂಲಕ, ಪರಿಸರ ವ್ಯವಸ್ಥೆಯಲ್ಲಿ ಸಮತೋಲನ ಕಾಪಾಡುತ್ತಾ.. ಏರುತ್ತಿರುವ ಜಾಗತಿಕ ತಾಪಮಾನವನ್ನು ಹತೋಟಿಯಲ್ಲಿಡುವ ಯಂತ್ರದಂತೆ ಕೆಲಸ ಮಾಡುತ್ತಿದೆ. ಅಷ್ಟು ದೊಡ್ಡ ಹೊಣೆಗೆ ಭುಜ ಚಾಚುತ್ತಲೇ ತನ್ನ ಅಸ್ತಿತ್ವವನ್ನೂ ಉಳಿಸಿಕೊಳ್ಳುತ್ತದೆ.
ಹುಲಿ ಯೋಜನೆ ಆರಂಭಿಸುವ ಸಂಬಂಧ ರಾಜ್ಯ ಸರ್ಕಾರಗಳು ಸಲ್ಲಿಸುವ ಪ್ರಸ್ತಾವನೆಗಳನ್ನು ಮಾನ್ಯ ಮಾಡುವ ಅಧಿಕಾರ ಕೇಂದ್ರ ಸರ್ಕಾರದ 'ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ' (ಎನ್‌ಟಿಸಿಎ)ಗೆ ಮಾತ್ರ. ಹುಲಿ ಯೋಜನೆಗೊಳಪಡುವ ಮೀಸಲು ಪ್ರದೇಶಗಳಲ್ಲಿ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು, ಯಾವೆಲ್ಲ ನೀತಿಗಳನ್ನು ರೂಪಿಸಬೇಕು ಎಂಬಿತ್ಯಾದಿ ನಿರ್ಧಾರಗಳೆಲ್ಲವೂ ಅಲ್ಲಿಂದಲೇ ಆಗಬೇಕು.
ದೇಶದಲ್ಲಿ ಒಟ್ಟು 58 ಹುಲಿ ಸಂರಕ್ಷಿತ ಅಭಯಾರಣ್ಯಗಳಿವೆ. ರಾಜ್ಯದಲ್ಲಿ ಐದು (ಬಂಡೀಪುರ, ನಾಗರಹೊಳೆ, ಬಿಳಿಗಿರಿ ರಂಗನ ತಿಟ್ಟು, ಕಾಳಿ, ಭದ್ರಾ) ಹುಲಿ ಸಂರಕ್ಷಿತ ಅಭಯಾರಣ್ಯಗಳಿವೆ.
ಹುಲಿ ಯೋಜನೆಗೊಳಪಟ್ಟ ಅರಣ್ಯ ವ್ಯಾಪ್ತಿಯಲ್ಲಿ ನಡೆಯುವ ಯಾವುದೇ ಅಕ್ರಮ ಚಟುವಟಿಕೆಗಳು ಜಾಮೀನು ರಹಿತ ಅಪರಾಧಗಳಾಗಿವೆ. ಏಳು ವರ್ಷದ ವರೆಗೆ ಕಂಬಿ ಎಣಿಸಬೇಕಾದೀತು!
ಹುಲಿಯ Gemini AI ಚಿತ್ರ
ನಾಡಿಗೆ ನುಗ್ಗುವುದೇಕೆ?
ಹೇಳಿಕೇಳಿ ಹುಲಿ ತನ್ನದೇ ಸಾಮ್ರಾಜ್ಯ ಸ್ಥಾಪಿಸಿಕೊಂಡು ಅಥವಾ ಗಡಿ ಪ್ರದೇಶವನ್ನು ಗುರುತಿಸಿಕೊಂಡು, ತನ್ನಷ್ಟಕ್ಕೆ ತಾನಿರುವ ಪ್ರಾಣಿ. ಉಳಿವಿಗಾಗಿ ಅದು ನಡೆಸುವ ಹೋರಾಟ ನಿರಂತರ.
ಮರಗಳಿಗೆ ಉಗುರಿನಿಂದ ಇಲ್ಲವೇ ಮೂತ್ರ ಹಾರಿಸುವ (ಸೆಂಟ್ ಮಾರ್ಕಿಂಗ್) ಮೂಲಕ ಗಡಿ ಗುರುತು ಮಾಡುವ ಹಾಗೂ ಆ ಮೂಲಕ ತನ್ನ ಎಲ್ಲೆ ಎಷ್ಟೆಂದು ಹೊರಗಿನವುಗಳಿಗೆ ಸಾರುವ ಕೆಲಸವನ್ನು ಸತತವಾಗಿ ಮಾಡುತ್ತದೆ. ಬಲವಿದ್ದರಷ್ಟೇ ಹೊರಗಿನ ಹುಲಿ ಒಳಗೆ ಬರಲು ಸಾಧ್ಯ. ಆಗೊಂದು ಕಾಳಗ ಖಾತ್ರಿ. ತಾಕತ್ತಿರುವುದು ಅಲ್ಲಿಯೇ ನೆಲೆಸಿದರೆ, ಪರಾಭವಗೊಂಡದ್ದಕ್ಕೆ ಪರಾರಿಯಾಗದೆ ದಾರಿಯಿಲ್ಲ!
ಕಾಡಿನ ನ್ಯಾಯವಿರುವುದೂ ಹಾಗೆಯೇ.. ಅಲ್ಲಿ 'ಬಲವಿದ್ದರಷ್ಟೇ ಬದುಕು!'
ಅರಣ್ಯ ನಾಶದಿಂದ ಪ್ರಾಣಿಗಳ ಸಂಖ್ಯೆ ಕಡಿಮೆಯಾದಾಗಲೂ ಆಹಾರಕ್ಕಾಗಿ ದೂರದೆಡೆಗೆ ಹೆಜ್ಜೆ ಇಡಬೇಕಾಗುತ್ತದೆ. ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸಬೇಕೆಂದೇ ಅರಣ್ಯ ವ್ಯಾಪ್ತಿಯಲ್ಲಿ ಸಫಾರಿ ನಡೆಸಲಾಗುತ್ತದೆಯಾದರೂ.. ಪಾಲನೆಯಾಗಬೇಕಾದ ನಿಯಮಗಳು ಕೆಲವೊಮ್ಮೆ ಉಲ್ಲಂಘನೆಯಾಗುವುದು ಹುಲಿಯ ಖಾಸಗೀತನಕ್ಕೆ ಧಕ್ಕೆ ಮಾಡುತ್ತವೆ.
ಈ ಎಲ್ಲ ಕಾರಣಗಳಿಂದಾಗಿ, ಕಾಡಲ್ಲಿ ಹಾಯಾಗಿ ಇರಬೇಕಾದ ಹುಲಿರಾಯ ಅಡ್ಡದಾರಿ ಹಿಡಿವ ಮಂದಿಯ ನೆಲೆ ನಾಡಿಗೆ ನುಗ್ಗಬೇಕಾಗುತ್ತದೆ.
ದನಕರುಗಳನ್ನು ಕಾಡಿಗಟ್ಟಬಾರದೇಕೆ?
ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಸಾಕು ಪ್ರಾಣಿಗಳನ್ನು ಮೇಯಿಸುವುದಕ್ಕೆ ನಿಷೇಧವಿದ್ದರೂ, ಕಾಡಂಚಿನ ಜನರು ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ.
ದನಕರುಗಳನ್ನು ಕಾಡಿಗಟ್ಟುವುದರಿಂದ, ಅಲ್ಲೇ ನೆಲೆಸಿರುವ ಸಸ್ಯಹಾರಿಗಳ ಆಹಾರಕ್ಕೆ ಕುತ್ತು ಬರುತ್ತದೆ ಎಂಬುದು ಒಂದು ಕಾರಣವಾದರೆ, ಅದಕ್ಕಿಂತಲೂ ಕಳವಳಕಾರಿಯಾದ ಮತ್ತೊಂದು ಸಂಗತಿ ಇದೆ. ಹಸು, ಮೇಕೆ, ಕುರಿಯಂತಹ ಪ್ರಾಣಿಗಳೂ ಜಿಂಕೆ, ಕಡವೆ, ಕಾಟಿಯಂತೆ ಗೊರಸುಳ್ಳವೇ. ಹಾಗಾಗಿ, ನಾಡಿನ ಪ್ರಾಣಿಗಳಲ್ಲಿ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳು ವನಜೀವಿಗಳಿಗೂ ಸುಲಭವಾಗಿ ಅಂಟುವ ಅಪಾಯವಿದೆ. ಅದು ಅತ್ತಿಂದಿತ್ತಲೂ ದಾಟಬಹುದು.
ಇದರಿಂದಲೂ, ಹುಲಿಗಳ ಆಹಾರ ಕೊರತೆಯಾಗಬಹುದು.
ಸಾಕು ಪ್ರಾಣಿಗಳನ್ನೇ ನೆಚ್ಚಿಕೊಂಡಿರುವ ಸ್ಥಳೀಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಗುಡಿ ಕೈಗಾರಿಕೆಯಂತಹ ಕೌಶಲ ತರಬೇತಿ ನೀಡುವ ಕೆಲಸಗಳಾಗಬೇಕು. ಹಸುಕರುಗಳಿಗಾಗಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವ ಅವರನ್ನು, ಇಲಾಖೆ ವ್ಯಾಪ್ತಿಯಲ್ಲಿ ಯಂತ್ರಗಳಿಲ್ಲದೆ ಮಾಡಬಹುದಾದ ಕೆಲಸಗಳಿಗೆ ತೊಡಗಿಸಿಕೊಳ್ಳಬಹುದು. ಸಾಧ್ಯವಿದ್ದಲ್ಲಿ, ವನಪಾಲಕರಂತಹ ಕಾರ್ಯಗಳಿಗೂ ನಿಯೋಜಿಸಬಹುದು ಎಂಬುದು ಪರಿಸರ ಪ್ರೇಮಿಗಳ ಸಲಹೆ.
ಹುಲಿಯ Gemini AI ಚಿತ್ರ
ಹುಲಿಯ ಗುರಿ ಮನುಷ್ಯ ಅಲ್ಲವೇ ಅಲ್ಲ; ಆದರೆ...
ಕಾಡಂಚಿನ ಹಳ್ಳಿಗಳಲ್ಲಿ ಹುಲಿಯು ಸಾಕು ಪ್ರಾಣಿಗಳನ್ನು ಹೊತ್ತೊಯ್ದ ಪ್ರಕರಣಗಳು ಸಾಮಾನ್ಯ ಎಂಬಂತಾಗಿದ್ದರೂ, ಮಾನವ ಅದರ ಗುರಿ ಅಲ್ಲವೇ ಅಲ್ಲ. ಆದಾಗ್ಯೂ ಕೆಲವೊಮ್ಮೆ ದಾಳಿಗಳು ಆಗುತ್ತವೆ.
ಇತ್ತೀಚೆಗೆ ಮೈಸೂರಿನ ಸರಗೂರು ತಾಲ್ಲೂಕಿನ ಬಡಗಲಪುರ ಗ್ರಾಮದಲ್ಲಿ ರೈತರ ಮಹದೇವ ಎಂಬವರ ಮೇಲೆ ದಾಳಿಯಾದದ್ದು ಸುದ್ದಿಯಾಗಿತ್ತು.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ನುಗು ವನ್ಯಜೀವಿ ವಲಯದ ಕಾಡಂಚಿನ ಗ್ರಾಮಗಳಲ್ಲಿ ಅಕ್ಟೋಬರ್‌ನಲ್ಲಿ ಹುಲಿ ಕಾಣಿಸಿಕೊಂಡಿತ್ತು. ಅತಂಕಗೊಂಡಿದ್ದ ಜನರು, ಅದನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.
ಅದರಂತೆ, 'ಅಭಿಮನ್ಯು', 'ಭಗೀರಥ' ಆನೆಗಳೊಂದಿಗೆ ಕಾರ್ಯಾಚರಣೆ ಆರಂಭವಾಗಿತ್ತು. ಪಂಜರ ಇರಿಸಲಾಗಿತ್ತು. ಊರಿನ ಬೋಳೆಗೌಡನಕಟ್ಟೆ ಕೆರೆ ಬಳಿ ಅವಿತಿದ್ದ ಹುಲಿ, ಗಾಬರಿಯಾಗಿ ನುಗು ಅರಣ್ಯದತ್ತ ಓಡಿ ಪೊದೆಯಲ್ಲಿ ತಲೆಮರೆಸಿಕೊಂಡಿತ್ತು. ಆನೆಗಳು ಅಲ್ಲಿಗೂ ಬಂದಿದ್ದರಿಂದ ಬೆದರಿದ ಹುಲಿ, ಮತ್ತೆ ಕಾಡಿನತ್ತ ಓಡುವಾಗ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹದೇವ ಅವರ ಮೇಲೆ ದಾಳಿ ಮಾಡಿತ್ತು.
ಇದು ಹುಲಿಯ 'ಉದ್ದೇಶಿತ' ದಾಳಿಯಲ್ಲದಿದ್ದರೂ ಮಹದೇವ ಅವರ ಕಣ್ಣಿಗೆ ತೀವ್ರ ಗಾಯವಾಗಿ, ದೃಷ್ಟಿ ಕಳೆದುಕೊಳ್ಳಬೇಕಾಯಿತು. ಅವರ ಆರೋಗ್ಯ ವಿಚಾರಿಸಲು ಮೈಸೂರಿನ ಅಪೊಲೊ ಆಸ್ಪತ್ರೆಗೆ ತೆರಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸುವ ಭರವಸೆ ನೀಡಿದ್ದರು. ಹಾಗೆಯೇ, ಸಂತ್ರಸ್ತ ರೈತನಿಗೆ ಗಾಯಗೊಂಡವರ ಲೆಕ್ಕದ ಬದಲು ಬದುಕನ್ನೇ ಕಳೆದುಕೊಂಡವರ ಲೆಕ್ಕದಲ್ಲಿ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.
1972ರಲ್ಲಿ ಹುಲಿಯನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲಾಯಿತು. ಅದಕ್ಕೂ ಮೊದಲು ಸಿಂಹ ಆ ಸಿಂಹಾಸನದ ಮೇಲಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.