
ಕೂರ್ಗಳ್ಳಿ ಪುನವರ್ಸತಿ ಕೇಂದ್ರದಲ್ಲಿ ಮರಿಯಾನೆ ಕುಸುಮಬಾಲೆ...
ಚಿತ್ರಗಳು:ಅನೂಪ್ ರಾಘ.ಟಿ.
ಇದು ಎರಡು ವರ್ಷದ ಹಿಂದಿನ ಮಾತು. ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದಲ್ಲಿ ತಾಯಿಯಿಂದ ಬೇರ್ಪಟ್ಟು ಅನಾಥವಾಗಿದ್ದ ಮರಿ ಹೆಣ್ಣಾನೆ ಆರೈಕೆ–ಪೋಷಣೆ ಪಡೆದಿದ್ದು ಇಲ್ಲೇ. ಅಗತ್ಯವಾದ ಆಹಾರ, ವಾತ್ಸಲ್ಯದೊಂದಿಗೆ ಆರೋಗ್ಯದಿಂದ ಬೆಳೆಯತೊಡಗಿದ್ದೂ ಈ ತಾಣದಲ್ಲೇ.
ಮೂರು ವರ್ಷಗಳ ಹಿಂದೆ ಕರ್ನಾಟಕ ಮೃಗಾಲಯ ಪ್ರಾಧಿಕಾರವು ವಿವಿಧ ಪ್ರಭೇದದ ಇಪ್ಪತ್ಮೂರು ಪ್ರಾಣಿಗಳನ್ನು ಸಿಂಗಪುರ ಸೇರಿದಂತೆ ಬೇರೆ ಬೇರೆ ದೇಶಗಳಿಂದ ತರಿಸಿತು. ಅವುಗಳನ್ನು ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಹಾಗೂ ಶಿವಮೊಗ್ಗ ಮೃಗಾಲಯಕ್ಕೆ ನೀಡಲಾಯಿತು. ಅದಕ್ಕೂ ಮುನ್ನ ಅವುಗಳನ್ನು ‘ಜೋಪಾನ’ ಮಾಡಿದ್ದು ಇದೇ ಕೇಂದ್ರದಲ್ಲಿ.
ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನ ಡಿ.ಬಿ.ಕುಪ್ಪೆ ವನ್ಯಜೀವಿ ಅರಣ್ಯ ವ್ಯಾಪ್ತಿಯಲ್ಲಿ ಯುವಕನನ್ನು ಬಲಿ ಪಡೆದು, ಐದಕ್ಕೂ ಹೆಚ್ಚು ಜಾನುವಾರು ಕೊಂದಿದ್ದ, ವನ್ಯಪ್ರಾಣಿ ಪ್ರಿಯರಿಂದ ‘ಬ್ಯಾಕ್ ವಾಟರ್ ಫೀಮೇಲ್’ ಎಂದೇ ಕರೆಸಿಕೊಳ್ಳುತ್ತಿದ್ದ ಹೆಣ್ಣುಲಿಗೆ ಶುಶ್ರೂಷೆ ನೀಡಿದ್ದು ಇಲ್ಲೇ.
ಕೆಲವು ದಿನಗಳ ಹಿಂದೆಯಷ್ಟೇ ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನಲ್ಲಿ ಜನ–ಜಾನುವಾರು ಮೇಲೆ ಪದೇ ಪದೇ ದಾಳಿ ಮಾಡುತ್ತಿದ್ದ ಹಾಗೂ ಮೂವರನ್ನು ಕೊಂದಿದೆ ಎನ್ನಲಾದ ಗಂಡು ಹುಲಿಯನ್ನು ಸೆರೆ ಹಿಡಿದು ಚಿಕಿತ್ಸೆಗಾಗಿ ಕರೆತಂದಿದ್ದು ಕೂಡ ಇದೇ ಕೇಂದ್ರಕ್ಕೆ.
ಮೈಸೂರು ಭಾಗದಲ್ಲಿ ವನ್ಯಜೀವಿಗಳಿಗೆ ಆರೋಗ್ಯದಲ್ಲಿ ತೊಂದರೆಯಾದರೆ, ಸೆರೆ ಕಾರ್ಯಾಚರಣೆ ವೇಳೆ ಅಥವಾ ಇತರೆ ಪ್ರಾಣಿಗಳೊಂದಿಗೆ ನಡೆದ ಕಾಳಗದಲ್ಲಿ ಗಾಯಗೊಂಡರೆ ಚಿಕಿತ್ಸೆಯ ಮುಲಾಮು ದೊರೆಯುವುದು ಚಾಮುಂಡಿ ವನ್ಯಜೀವಿ ಸಂರಕ್ಷಣೆ, ರಕ್ಷಣೆ ಹಾಗೂ ಪುನರ್ವಸತಿ ಕೇಂದ್ರದಲ್ಲಿ.
ಕರ್ನಾಟಕ ಮೃಗಾಲಯ ಪ್ರಾಧಿಕಾರದ (ಕೆಝಡ್‌ಎ) ಘಟಕವಾಗಿದ್ದು, ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಪ್ರಾಧಿಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಮೈಸೂರು ಸಮೀಪದ ಕೂರ್ಗಳ್ಳಿಯಲ್ಲಿದೆ. ಅಶಕ್ತ ಮೃಗಗಳಿಗೆ ಆರೈಕೆ ನೀಡುವ ‘ಆಲಯ’ವಾಗಿ ಕೆಲಸ ಮಾಡುತ್ತಿದೆ. ‘ತಬ್ಬಲಿ’ ಪ್ರಾಣಿಗಳಿಗೆ ವಾತ್ಸಲ್ಯಪೂರ್ಣ ಆರೈಕೆಯನ್ನು ಕೇಂದ್ರದಲ್ಲಿ ಕಲ್ಪಿಸಲಾಗುತ್ತಿದೆ.
ವಿವಿಧ ಕಾರಣಗಳಿಂದಾಗಿ ಅರಣ್ಯದಿಂದ ರಕ್ಷಿಸಲ್ಪಟ್ಟ ಪ್ರಾಣಿಗಳಿಗೆ ಸುರಕ್ಷಿತವಾದ ನೆಲೆ ಒದಗಿಸುವುದು, ತಳಿ ಸಂವರ್ಧನೆಗೆ ಆದ್ಯತೆ ಕೊಡುವುದು ಹಾಗೂ ಸಂತನಾಭಿವೃದ್ಧಿಗೆ ಅನುವು ಮಾಡಿಕೊಡುವ ವಿಶಾಲವಾದ ಪುನರ್ವಸತಿ ಕೇಂದ್ರ ಇದಾಗಿದೆ.
ಮೈಸೂರು, ಕೊಡಗು ಹಾಗೂ ಚಾಮರಾಜನಗರ ಅಪಾರ ವನ್ಯಸಂಪತ್ತು ಹೊಂದಿರುವ ಜಿಲ್ಲೆಗಳು. ಇಲ್ಲಿ ನಾನಾ ಕಾರಣಗಳಿಂದಾಗಿ ಒಂದಿಲ್ಲೊಂದು ಪ್ರಾಣಿ ಕಾಡಿನಿಂದ ನಾಡಿಗೆ ಬಂದು ಉಪಟಳ ಕೊಡುವುದು ಮಾಮೂಲು. ಅಲ್ಲದೇ, ಮಾನವ–ವನ್ಯಜೀವಿ ಸಂಘರ್ಷದ ವೇಳೆಯೋ ಅಥವಾ ಇತರೆ ಕಾಡುಪ್ರಾಣಿಗಳ ದಾಳಿಯಿಂದಲೋ ಗಾಯಗೊಂಡ ಪ್ರಾಣಿಗಳನ್ನು ಸಂರಕ್ಷಿಸುವುದು ಎಲ್ಲಿ ಎಂಬುದಕ್ಕೆ ಅರಣ್ಯ ಇಲಾಖೆ ಕಂಡುಕೊಂಡ ಉತ್ತರವೇ ಈ ಪುನರ್ವಸತಿ ಕೇಂದ್ರ.
ಹೆಚ್ಚಿನ ಪ್ರಾಣಿಗಳಿಗೆ ಚಿಕಿತ್ಸೆ, ಸಂರಕ್ಷಣೆ ಒದಗಿಸಲು ಮೈಸೂರಿನ ಮೃಗಾಲಯದಲ್ಲಿ ಜಾಗ ಸಾಲದಾಗಿತ್ತು. ಅಲ್ಲದೇ, ಅಲ್ಲಿ ಈ ಕಾರ್ಯದಿಂದ ಮೃಗಾಲಯದ ಇತರ ಪ್ರಾಣಿಗಳಿಗೂ ತೊಂದರೆ ಆಗುತ್ತಿತ್ತು, ಒತ್ತಡವೂ ಉಂಟಾಗುತ್ತಿತ್ತು. ಹೀಗಾಗಿ, ಪ್ರತ್ಯೇಕವಾಗಿಯೇ ಕೇಂದ್ರವನ್ನು ನಿರ್ಮಿಸಲಾಗಿದೆ. ಸಾಕಷ್ಟು ಹಸಿರುಮಯವಾದ ಸ್ಥಳವನ್ನು ಪುನರ್ವಸತಿ ಕೇಂದ್ರವನ್ನಾಗಿ ರೂಪಿಸಲಾಗಿದ್ದು, ಸಂರಕ್ಷಣೆಗೆಂದು ತರಲಾಗುವ ಪ್ರಾಣಿಗಳಿಗೆ ಪೂರಕವಾದ ವಾತಾವರಣವನ್ನು ಹೊಂದಿದೆ. ಇಲ್ಲಿನ ಸಿಬ್ಬಂದಿಯು ತಬ್ಬಲಿ ಪ್ರಾಣಿಗಳನ್ನು ತಾಯಿಯಂತೆ ನೋಡಿಕೊಳ್ಳುತ್ತಿದ್ದಾರೆ.
113 ಎಕರೆಯಲ್ಲಿ ಕೇಂದ್ರ ಹರಡಿಕೊಂಡಿದೆ. ಒಂದು ದಶಕದಲ್ಲಿ ನೂರಾರು ಪ್ರಾಣಿಗಳಿಗೆ ಆರೈಕೆ ಮಾಡಿದೆ. ಹುಲಿ, ಚಿರತೆ, ಆನೆಗಳಿಗೆ ಆಶ್ರಯ ನೀಡಿದೆ. ಪುನರ್ವಸತಿ ಜೊತೆಗೆ ಕಾಡೆಮ್ಮೆ ತಳಿ ಸಂರಕ್ಷಣೆ ಹಾಗೂ ಐದಕ್ಕೂ ಹೆಚ್ಚು ಪ್ರಾಣಿಗಳ ಸಂತಾನಾಭಿವೃದ್ಧಿ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತಿದೆ. ಇದಕ್ಕಾಗಿಯೇ ಸಂಪೂರ್ಣವಾಗಿ ರಕ್ಷಣಾ ಗೋಡೆ ನಿರ್ಮಿಸಿ ಭದ್ರಪಡಿಸಲಾಗಿದೆ.
ಕಾಡಿನಲ್ಲಿರುವಂತೆಯೇ ಆನೆಗಳಿಗೆ ವಿಶಾಲವಾದ ಜಾಗ ಬೇಕಲ್ಲವೇ? ಇದಕ್ಕಾಗಿಯೇ ಅವುಗಳಿಗಾಗಿಯೇ ಐದೂವರೆ ಎಕರೆ ಜಾಗ ಮೀಸಲಿಡಲಾಗಿದೆ. ನೀರು ಕುಡಿಯಲು ಮತ್ತು ನೀರಾಟಕ್ಕೆ 60 ಸಾವಿರ ಲೀಟರ್ ಸಾಮರ್ಥ್ಯದ ಕೆರೆ ನಿರ್ಮಿಸಲಾಗಿದೆ. ಇನ್ನೊಂದೆಡೆ, ತಲಾ ನಾಲ್ಕು ಹುಲಿ ಹಾಗೂ ಚಿರತೆಗಳ ಪುನರ್ವಸತಿಗೆ ವ್ಯವಸ್ಥೆ ಮಾಡಲಾಗಿದೆ. ಸ್ವಚ್ಛಂದವಾಗಿ ವಿಹರಿಸುವುದಕ್ಕೂ ಅವಕಾಶ ಕಲ್ಪಿಸಲಾಗಿದೆ.
ಆನೆಗಳ ಆರೋಗ್ಯದ ದೃಷ್ಟಿಯಿಂದ ಅವುಗಳಿಗೆಂದೇ ಈಜುಕೊಳ ನಿರ್ಮಾಣ ಮಾಡಲಾಗಿದೆ. ವಯಸ್ಸಾದ ಆನೆಗಳಿಗೆ ಸಾಮಾನ್ಯವಾಗಿ ಸಂದಿವಾತ ನೋವು ಕಂಡು ಬರುತ್ತದೆ. ಈ ನೋವು ನಿವಾರಣೆ, ಚಿಕಿತ್ಸೆಗಾಗಿ ಸಹಕಾರಿ ಆಗಲೆಂದೇ ಈಜುಕೊಳ ನಿರ್ಮಾಣ ಮಾಡಲಾಗಿದೆ ಎನ್ನುವುದು ಅಧಿಕಾರಿಗಳ ವಿವರಣೆ.
ನಾಲ್ಕು ಆನೆ, ಎಂಟು ಹುಲಿ, ಒಂಬತ್ತು ಚಿರತೆಗಳ ಜೊತೆಗೆ ಕರಡಿ, ಮಂಗಗಳು ಮೊದಲಾದ ಪ್ರಾಣಿಗಳು ಸದ್ಯ ಆಶ್ರಯ ಪಡೆದಿವೆ. ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲೂ ಪ್ರಾಣಿ ಪುನರ್ವಸತಿ ಕೇಂದ್ರವಿದ್ದು, ಗಾಯಗೊಂಡ, ಅನಾಥ ಅಥವಾ ರಕ್ಷಿಸಲಾದ ವನ್ಯಜೀವಿಗಳಿಗೆ ಆಶ್ರಯ ಕಲ್ಪಿಸಲಾಗುತ್ತಿದೆ.
ಶಸ್ತ್ರಚಿಕಿತ್ಸೆಗೆ ಪಶುವೈದ್ಯ ಆಸ್ಪತ್ರೆ, ಸಭಾಂಗಣ, ಸಂಶೋಧನಾ ಕೇಂದ್ರವೂ ಇದೆ. 35 ಎಕರೆಯನ್ನು ಕಾಡೆಮ್ಮೆ ತಳಿ ಸಂವರ್ಧನೆಗೆ ಮೀಸಲಿಡಲಾಗಿದೆ. ಜೊತೆಗೆ, ಸೀಳುನಾಯಿ, ತೋಳ, ನೀಲಗಿರಿ ಲಂಗೂರ್, ಸಿಂಗಳೀಕ, ಕೆಂದಳಿಲು ಸಂತಾನಾಭಿವೃದ್ಧಿ ಪ್ರದೇಶವನ್ನೂ ಮಾಡಲಾಗಿದೆ.
ಚಾಮುಂಡಿ ವನ್ಯಜೀವಿ ಸಂರಕ್ಷಣೆ, ರಕ್ಷಣೆ ಹಾಗೂ ಪುನರ್ವಸತಿ ಕೇಂದ್ರದ ಮಾದರಿಯಲ್ಲೇ ಮೈಸೂರು ತಾಲ್ಲೂಕಿನ ಇಲವಾಲದಲ್ಲಿ 97 ಎಕರೆಯಲ್ಲಿ ₹ 70 ಕೋಟಿ ವೆಚ್ಚದಲ್ಲಿ ಚಿರತೆಗಳಿಗೆಂದೇ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರ ನಿರ್ಮಾಣಕ್ಕೆ ಅರಣ್ಯ ಇಲಾಖೆ ಯೋಜನೆ ಸಿದ್ಧಪಡಿಸಿದೆ.
ಕೂರ್ಗಳ್ಳಿ ವನ್ಯಜೀವಿ ಪುನರ್ವಸತಿ ಕೇಂದ್ರದಲ್ಲಿ ಸದ್ಯ ಒಂಬತ್ತು ಚಿರತೆಗಳನ್ನು ಇರಿಸಲಷ್ಟೇ ಜಾಗವಿದೆ. ವಿವಿಧೆಡೆ ಸೆರೆ ಹಿಡಿದ ಚಿರತೆಗಳಿಗೆ ಅಲ್ಲಿ ಚಿಕಿತ್ಸೆ ಕೊಡುವುದಕ್ಕೆ ಜಾಗ ಸಾಲುತ್ತಿಲ್ಲ. ಒಮ್ಮೊಮ್ಮೆ ದೂರದ ಬನ್ನೇರುಘಟಕ್ಕೆ ಕಳುಹಿಸಲು ಕಷ್ಟವಾಗುತ್ತದೆ. ಆದ್ದರಿಂದ ಅಂತಹ ತೊಂದರೆ ಹಾಗೂ ಹಾಲಿ ಕೇಂದ್ರದ ಮೇಲಿರುವ ಒತ್ತಡವನ್ನು ತಗ್ಗಿಸಲು ಪ್ರತ್ಯೇಕ ಕೇಂದ್ರ ನಿರ್ಮಾಣಕ್ಕಾಗಿ ಯೋಜನೆ ರೂಪಿಸಲಾಗಿದೆ. ನೂರು ಚಿರತೆಗಳಿಗೆ ಪುನರ್ವಸತಿ ಕಲ್ಪಿಸಬಹುದಾದ ಸಾಮರ್ಥ್ಯದ ಕೇಂದ್ರ ನಿರ್ಮಾಣಕ್ಕೆ ಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.