ADVERTISEMENT

ಆಳ–ಅಗಲ | ಬಾಂಗ್ಲಾ ಪ್ರಕ್ಷುಬ್ಧ: ಹೊಣೆ ಯಾರು?

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 23:30 IST
Last Updated 22 ಡಿಸೆಂಬರ್ 2025, 23:30 IST
ಬಾಂಗ್ಲಾದ ರಾಜ್‌ಶಾಹಿಯಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿ ಮುಂದೆ ಇದೇ 18ರಂದು ಪ್ರತಿಭಟಿಸಲು ಯತ್ನಿಸಿದವರನ್ನು ಭದ್ರತಾ ಸಿಬ್ಬಂದಿ ತಡೆದರು –ಎಎಫ್‌ಪಿ ಚಿತ್ರ
ಬಾಂಗ್ಲಾದ ರಾಜ್‌ಶಾಹಿಯಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿ ಮುಂದೆ ಇದೇ 18ರಂದು ಪ್ರತಿಭಟಿಸಲು ಯತ್ನಿಸಿದವರನ್ನು ಭದ್ರತಾ ಸಿಬ್ಬಂದಿ ತಡೆದರು –ಎಎಫ್‌ಪಿ ಚಿತ್ರ   
ಬಾಂಗ್ಲಾದೇಶ ಮತ್ತೊಮ್ಮೆ ಪ್ರಕ್ಷುಬ್ಧಗೊಂಡಿದೆ .ಇಂಕ್ವಿಲಾಬ್ ಮಂಚ್ ವಕ್ತಾರ ಶರೀಫ್ ಉಸ್ಮಾನ್ ಹಾದಿ ಹತ್ಯೆಯಿಂದ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಹಲವೆಡೆ ಹಿಂಸಾಚಾರ ನಡೆದಿವೆ. ಹಿಂದೂವೊಬ್ಬರ ಮೇಲೆ ಗುಂಪು ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ. ಈ ಬೆಳವಣಿಗೆಗಳು ಭಾರತದ ಮೇಲೆ ಎಂಥ ‍ಪರಿಣಾಮ ಬೀರಲಿವೆ ಎನ್ನುವುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಬಾಂಗ್ಲಾದಲ್ಲಿ ಇಸ್ಲಾಂ ಮೂಲಭೂತವಾದಿಗಳ ಕೈ ಮೇಲಾಗುತ್ತಿದ್ದು, ಭಾರತ ವಿರೋಧಿ ಭಾವನೆ ತೀವ್ರಗೊಳ್ಳುತ್ತಿದೆ. ಇದರಿಂದಾಗಿ ಉಭಯ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಯಾಗಿದೆ

ದಶಕಗಳ ಕಾಲ ಶಾಂತಿ, ಸಮೃದ್ಧಿ ನೆಲಸಿದ್ದ ಬಾಂಗ್ಲಾದೇಶದಲ್ಲಿ ಮೀಸಲಾತಿ ನೀತಿ ವಿರುದ್ಧ ಕಾಲೇಜು ವಿದ್ಯಾರ್ಥಿಗಳು ಕಳೆದ ವರ್ಷ ಆರಂಭಿಸಿದ್ದ ಹೋರಾಟವು ಭಾರಿ ಬದಲಾವಣೆಗಳಿಗೆ ಕಾರಣವಾಗಿತ್ತು. ಪ್ರಧಾನಿ ಶೇಖ್ ಹಸೀನಾ ಸರ್ಕಾರ ಪತನಗೊಂಡಿತ್ತು. ಜೀವ ಉಳಿಸಿಕೊಳ್ಳಲು ಭಾರತಕ್ಕೆ ಬಂದ ಹಸೀನಾ, ಅಂದಿನಿಂದ ದೆಹಲಿಯಲ್ಲಿಯೇ ಆಶ್ರಯ ಪಡೆದಿದ್ದಾರೆ. ಅವರನ್ನು ಬಾಂಗ್ಲಾದೇಶಕ್ಕೆ ಒಪ್ಪಿಸುವಂತೆ ಭಾರತದ ಮೇಲೆ ಬಾಂಗ್ಲಾ ಒತ್ತಡ ಹೇರುತ್ತಲೇ ಇದೆ. ಹಸೀನಾ ಅವರಿಗೆ ನೆಲೆ ಕಲ್ಪಿಸಿದೆ ಎನ್ನುವ ಕಾರಣಕ್ಕೆ ಬಾಂಗ್ಲಾದಲ್ಲಿ ಭಾರತ ವಿರೋಧಿ ಭಾವನೆ ಹೆಚ್ಚಾಗುತ್ತಿದೆ. ಮೀಸಲಾತಿ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಶರೀಫ್‌ ಉಸ್ಮಾನ್‌ ಹಾದಿ ಅವರ ಹತ್ಯೆಯ ನಂತರ ಹಿಂಸೆಯ ತೀವ್ರತೆ ಹೆಚ್ಚಾಗಿದೆ. 

2024ರ ಜುಲೈ–ಆಗಸ್ಟ್‌ನಲ್ಲಿ ನಡೆದಿದ್ದ ವಿದ್ಯಾರ್ಥಿ ದಂಗೆಯ ನಾಯಕತ್ವ ವಹಿಸಿದ್ದವರ ಪೈಕಿ ಶರೀಫ್ ಉಸ್ಮಾನ್ ಹಾದಿ ಒಬ್ಬರಾಗಿದ್ದರು. ತಮ್ಮ ಭಾರತ ವಿರೋಧಿ ನಿಲುವಿಗೆ ಹೆಸರಾಗಿದ್ದ ಅವರು, ಹಸೀನಾ ಅವರನ್ನು ಭಾರತವು ಬಾಂಗ್ಲಾಕ್ಕೆ ಹಸ್ತಾಂತರಿಸಬೇಕು ಎಂದು ಪ್ರಬಲವಾಗಿ ಪ್ರತಿಪಾದಿಸುತ್ತಿದ್ದರು. ಫೆಬ್ರುವರಿಯಲ್ಲಿ ನಡೆಯಲಿದ್ದ ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಯಲ್ಲಿ ಢಾಕಾ–8 ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಇರಾದೆ ಹೊಂದಿದ್ದರು. ಅದಕ್ಕೆ ಸಿದ್ಧತೆಯನ್ನೂ ನಡೆಸುತ್ತಿದ್ದರು. ಹಸೀನಾ ನಂತರದ ಬಾಂಗ್ಲಾದಲ್ಲಿ ಒಂದು ಶಕ್ತಿಯಾಗಿ ರೂಪುಗೊಳ್ಳುತ್ತಿದ್ದ ಹಾದಿ ಅವರನ್ನು ಅ‍‍‍‍ಪರಿಚಿತ ಮುಸುಕುಧಾರಿಗಳು ಗುಂಡಿಟ್ಟು ಕೊಂದಿದ್ದಾರೆ. ಈ ಒಂದು ಕೊಲೆಯಿಂದ ಇಡೀ ದೇಶ ಪ್ರಕ್ಷುಬ್ಧಗೊಂಡಿದೆ. 2026ರ ಫೆಬ್ರುವರಿಯಲ್ಲಿ ಸಾರ್ವತ್ರಿಕ ಚುನಾವಣೆಗೆ ಸಜ್ಜಾಗುತ್ತಿದ್ದ ಬಾಂಗ್ಲಾದಲ್ಲಿ ಮತ್ತೆ ರಾಜಕೀಯ ಅಸ್ಥಿರತೆ ತಲೆದೋರಿದೆ. ಈ ಹತ್ಯೆಯನ್ನು ಭಾರತಕ್ಕೆ ತಳಕು ಹಾಕಲಾಗುತ್ತಿದ್ದು, ಮೊದಲಿನಿಂದಲೂ ಭಾರತವನ್ನು ವಿರೋಧಿಸುತ್ತಲೇ ಬಂದಿರುವ ಮತಾಂಧ ಶಕ್ತಿಗಳು ದೇಶದ ಮೇಲೆ ಹಿಡಿತ ಸಾಧಿಸಲು ಕೋಮುಧ್ರುವೀಕರಣ ನಡೆಸಲು ಈ ಸಂದರ್ಭವನ್ನು ಬಳಸಿಕೊಳ್ಳುತ್ತಿವೆ ಎನ್ನಲಾಗುತ್ತಿದೆ. 

ಭಾರತ ವಿರೋಧಿ ಕಥನ: ಸಿಂಗಪುರ ಆಸ್ಪತ್ರೆಯಲ್ಲಿ ಹಾದಿ ಮೃತಪಟ್ಟ (ಡಿ.18) ಹಿಂದಿನ ದಿನವೂ ಭಾರತದ ವಿರುದ್ಧ ಪ್ರತಿಭಟನೆ ನಡೆದಿತ್ತು. ಹಸೀನಾ ಅವರನ್ನು ವಾಪಸ್ ಕರೆತರಬೇಕು ಎಂದು ಘೋಷಣೆ ಕೂಗುತ್ತಾ ಪ್ರತಿಭಟನಕಾರರು ಢಾಕಾದಲ್ಲಿರುವ ಭಾರತದ ಹೈಕಮಿಷನ್‌ ಕಚೇರಿಯ ಮುಂಭಾಗದಲ್ಲಿ ಹಾದುಹೋಗಿದ್ದರು. ಭಾರತವು ರಾಜತಾಂತ್ರಿಕ ಕಚೇರಿಯನ್ನು ಒಂದು ದಿನದ ಮಟ್ಟಿಗೆ ಮುಚ್ಚಿ, ವೀಸಾ ನೀಡುವಿಕೆಯನ್ನು ಸ್ಥಗಿತಗೊಳಿಸಿತ್ತು. 

ADVERTISEMENT

ಶೇಖ್‌ ಹಸೀನಾ ಭಾರತದಲ್ಲಿ ಆಶ್ರಯ ಪಡೆದ ನಂತರ ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಕಥನವನ್ನು ಹೆಣೆದು ಜನರಲ್ಲಿ ಭಾರತ ವಿರೋಧಿ ಭಾವನೆ ಬಿತ್ತಲಾಗುತ್ತಿದೆ. ಈಗ ಹಾದಿ ಹತ್ಯೆಗೂ ಭಾರತಕ್ಕೂ ಸಂಬಂಧ ಕಲ್ಪಿಸಲಾಗುತ್ತಿದೆ. ಹತ್ಯೆ ಮಾಡಿದವರು, ಕೃತ್ಯದ ನಂತರ ಭಾರತಕ್ಕೆ ಪಲಾಯನ ಮಾಡಿದ್ದಾರೆ ಎನ್ನುವ ವದಂತಿಯನ್ನು ಹರಿಬಿಡಲಾಯಿತು. ಅದರಿಂದ ಕೆರಳಿದ ಪ್ರತಿಭಟನಕಾರರು, ಚಿತ್ತಗಾಂಗ್‌ನಲ್ಲಿರುವ ಭಾರತದ ರಾಜತಾಂತ್ರಿಕ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದರು. ಭಾರತವನ್ನು ಬೆಂಬಲಿಸುತ್ತಿವೆ ಮತ್ತು ಶರೀಫ್ ಸಾವಿಗೆ ನೆಲ ಸಜ್ಜುಗೊಳಿಸಿವೆ ಎಂದು ಆರೋಪಿಸಿ ‘ಪ್ರೊಥೊಮ್ ಅಲೊ’ ಮತ್ತು ‘ದಿ ಡೈಲಿ ಸ್ಟಾರ್’ ಪತ್ರಿಕಾ ಕಚೇರಿಗಳ ಮೇಲೂ ದಾಳಿ ನಡೆಸಿದರು. 

ಭಾರತವು ಬಾಂಗ್ಲಾದ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎನ್ನುವ ಭಾವನೆ ಕೆಲವರಲ್ಲಿದೆ. ಶೇಖ್ ಹಸೀನಾ ಅವರನ್ನು ಭಾರತದಿಂದ ಕರೆತಂದು ವಿಚಾರಣೆ ನಡೆಸಬೇಕು. ಅವರ ಜತೆಯಲ್ಲೇ ಶರೀಫ್ ಅವರನ್ನು ಕೊಂದವರನ್ನೂ ವಿಚಾರಣೆಗೊಳಪಡಿಸಬೇಕು ಎನ್ನುವ ಒತ್ತಾಯ ಕೇಳಿಬಂದಿದೆ. ಆದರೆ, ಈ ಎಲ್ಲ ಪ್ರತಿಭಟನೆ, ಹಿಂಸಾಚಾರಗಳ ಹಿಂದೆ ಬಾಂಗ್ಲಾದೇಶದ ಮುಸ್ಲಿಂ ಮೂಲಭೂತವಾದಿ ಶಕ್ತಿಗಳ ಕೈವಾಡವಿದ್ದು, ಪರಿಸ್ಥಿತಿಯನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ಅವು ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿವೆ ಎಂದು ವಿಶ್ಲೇಷಿಸಲಾಗುತ್ತಿದೆ.  

ಚುನಾವಣೆ ಮುಂದೂಡಲು ಪಿತೂರಿ?: ಶೇಖ್ ಹಸೀನಾ ಅವರು ಪ್ರಧಾನಿಯಾಗಿದ್ದಾಗ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ಅವರ ಪದಚ್ಯುತಿಯೊಂದಿಗೆ ಪರಿಸ್ಥಿತಿ ಬದಲಾಗಿದೆ. ಪಾಕಿಸ್ತಾನದಂತೆ ಬಾಂಗ್ಲಾದೇಶದಲ್ಲೂ ಭಾರತ ವಿರೋಧಿ ಇಸ್ಲಾಂ ಮೂಲಭೂತವಾದಿಗಳ ಕೈ ಮೇಲಾಗುತ್ತಿದೆ. ಬಲಪಂಥೀಯ ಮುಸ್ಲಿಮರ ನೇತೃತ್ವದ ಜಮಾತ್‌–ಎ–ಇಸ್ಲಾಮಿ ಪಕ್ಷವು ದೇಶದ ಪ್ರಮುಖ ವಿಶ್ವವಿದ್ಯಾಲಯಗಳ ವಿದ್ಯಾರ್ಥಿ ಚುನಾವಣೆಗಳಲ್ಲಿ ಗೆಲುವು ಸಾಧಿಸಿದೆ. 

ಆದರೆ, ಭಾರತವೂ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಬಾಂಗ್ಲಾದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಸಾರ್ವತ್ರಿಕ ಚುನಾವಣೆ ನಡೆದು, ಪ್ರಜಾಪ್ರಭುತ್ವವಾದಿ ಸರ್ಕಾರ ಸ್ಥಾಪನೆಯಾಗುವುದನ್ನು ಎದುರುನೋಡುತ್ತಿವೆ. ಫೆಬ್ರುವರಿಯಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಲಾಗುವುದು ಎಂದು ಮಧ್ಯಂತರ ಸರ್ಕಾರ ಈಗಾಗಲೇ ಘೋಷಿಸಿದೆ. ಆದರೆ, ಚುನಾವಣೆಗಳು ನಿಜಕ್ಕೂ ನಡೆಯುವವೇ ಎನ್ನುವುದರ ಬಗ್ಗೆ ಭಿನ್ನ ಕಥನಗಳು ಕೇಳಿಬರುತ್ತಿವೆ. ಹಾಗೊಂದು ವೇಳೆ ಚುನಾವಣೆಗಳು ನಡೆದರೂ, ಹಸೀನಾ ಅವರ ಅವಾಮಿ ಲೀಗ್ ಪಕ್ಷಕ್ಕೆ ಸ್ಪರ್ಧಿಸಲು ಅವಕಾಶ ನೀಡಲಾಗುವುದೇ ಎನ್ನುವ ಪ್ರಶ್ನೆಯೂ ಮುಖ್ಯವಾಗಿದೆ. ಇಂಥ ಸ್ಥಿತಿಯಲ್ಲಿಯೇ ಶರೀಫ್ ಹಾದಿ ಹತ್ಯೆ ನಡೆದಿದೆ.  ಅದಾಗಿ ಕೆಲವೇ ದಿನಗಳಲ್ಲಿ ಧರ್ಮ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಅಲ್ಪಸಂಖ್ಯಾತ ಹಿಂದೂ ಸಮುದಾಯಕ್ಕೆ ಸೇರಿದ ದೀಪುಚಂದ್ರ ದಾಸ್ ಎಂಬ ಯುವಕನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. 

ಚುನಾವಣೆಗಳನ್ನು ಮುಂದೂಡುವ ದೃಷ್ಟಿಯಿಂದಲೇ ಈಗಿನ ಹಿಂಸಾಚಾರಗಳನ್ನು ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ ಎಂದು ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಆರೋಪಿಸಿದೆ. ಹಿಂಸಾಚಾರ, ಹತ್ಯೆಗಳನ್ನು ದೇಶದಲ್ಲಿ ಅಶಾಂತ ವಾತಾವರಣ ಮೂಡಿಸಿ ಚುನಾವಣೆಗಳನ್ನು ಮುಂದೂಡಲು, ಭಾರತ ವಿರೋಧಿ ಭಾವನೆ ಉದ್ದೀಪಿಸಿ ಜನಬೆಂಬಲ ಗಳಿಸಲು ಮೂಲಭೂತವಾದಿ ಗುಂಪುಗಳು ಬಳಸಿಕೊಳ್ಳುತ್ತಿವೆ ಎಂದು ವಿಶ್ಲೇಷಿಸಲಾಗಿದೆ. 

ಮೊಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ದಿನದಿಂದ ದಿನಕ್ಕೆ ಪರಿಸ್ಥಿತಿ ಕೈಮೀರುತ್ತಿದೆ. ಬಾಂಗ್ಲಾದಲ್ಲಿ ಚುನಾವಣೆಗಳು ತಡವಾಗುತ್ತಿರುವುದರಿಂದಲೇ ಅನಪೇಕ್ಷಿತ ವಿದ್ಯಮಾನಗಳು ನಡೆಯುತ್ತಿವೆ ಎನ್ನುವುದು ಭಾರತದ ನಿಲುವು. ಕೆಲವೇ ವರ್ಷಗಳ ಹಿಂದೆ ಮಿತ್ರ ರಾಷ್ಟ್ರವಾಗಿದ್ದ, ನೆರೆಯ ಬಾಂಗ್ಲಾದಲ್ಲಿ ಅಸ್ಥಿರತೆ ಉಂಟಾಗಿರುವುದು ಭಾರತದ ಮಟ್ಟಿಗೆ ಉತ್ತಮ ಬೆಳವಣಿಗೆಯೇನಲ್ಲ. ಆದರೆ, ಭಾರತವು ತಕ್ಷಣಕ್ಕೆ ಯಾವುದೇ ರೀತಿಯ ಕ್ರಮಕ್ಕೂ ಮುಂದಾಗದೇ, ಅಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.     

‘1971ರ ನಂತರದ ಬಹುದೊಡ್ಡ ಸವಾಲು’

ಬಾಂಗ್ಲಾದೇಶದ ಜನರಲ್ಲಿ ವಿಶೇಷವಾಗಿ ಯುವಜನಾಂಗದಲ್ಲಿ ಭಾರತ ವಿರೋಧಿ ಭಾವನೆ ಬೆಳೆಯುತ್ತಿರುವುದನ್ನು ಮತ್ತು ಉದ್ದೇಶಪೂರ್ವಕವಾಗಿ ಭಾರತದ ವಿರುದ್ಧವಾದ ಭಾವನೆ ಮೂಡುವಂತಹ ಕಥನವನ್ನು ಸೃಷ್ಟಿಸುತ್ತಿರುವುದರ ಕುರಿತಾಗಿ ಶಶಿ ತರೂರ್‌ ಅಧ್ಯಕ್ಷತೆಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಂಸದೀಯ ಸಮಿತಿಯು ತನ್ನ ‘ಭಾರತ–ಬಾಂಗ್ಲಾದೇಶದ ಸಂಬಂಧದ ಭವಿಷ್ಯ’ ವರದಿಯಲ್ಲಿ ಪ್ರಸ್ತಾಪಿಸಿದೆ. ಇದೇ 18ರಂದು ಸಂಸತ್ತಿನಲ್ಲಿ ವರದಿಯನ್ನು ಮಂಡಿಸಲಾಗಿದೆ. ಬಾಂಗ್ಲಾದೇಶದಲ್ಲಿನ ಬೆಳವಣಿಗೆಗಳು, ಆಡಳಿತದಲ್ಲಿ ಮೂಲಭೂತವಾದಿಗಳ ಹಿಡಿತ ಹೆಚ್ಚಾಗುತ್ತಿರುವುದು, ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆ ಸಮಿತಿಯು ತೀವ್ರ ಆತಂಕ ವ್ಯಕ್ತಪಡಿಸಿದೆ.

1971ರಲ್ಲಿ ನಡೆದಿದ್ದ ವಿಮೋಚನಾ ಯುದ್ಧದ ನಂತರದಲ್ಲಿ ಇದೇ ಮೊದಲ ಬಾರಿಗೆ ಭಾರತವು ಬಾಂಗ್ಲಾದೇಶದಲ್ಲಿ ದ್ವೀಪಕ್ಷೀಯ ಸಂಬಂಧಕ್ಕೆ ಸಂಬಂಧಿಸಿದಂತೆ ಬಹುದೊಡ್ಡ ಸವಾಲನ್ನು ಎದುರಿಸುತ್ತಿದೆ. 1971ರಲ್ಲಿದ್ದ ಸವಾಲು ಅಸ್ತಿತ್ವಕ್ಕಾಗಿ, ಮಾನವೀಯತೆಯಿಂದ ಕೂಡಿದ್ದಾಗಿತ್ತು. ಅದು ಒಂದು ರಾಷ್ಟ್ರದ ಹುಟ್ಟಿಗೂ ಕಾರಣವಾಗಿತ್ತು. ಆದರೆ, ಈಗಿನ ಸವಾಲು ಹೆಚ್ಚು ಗಂಭೀರವಾದದ್ದು; ತಲೆಮಾರುಗಳ ವರ್ತನೆ, ಮೌಲ್ಯಗಳಲ್ಲಿ ಆದ ಬದಲಾವಣೆ, ರಾಜಕೀಯ ನಿಲುವಿನಲ್ಲಿ ಆದ ಬದಲಾವಣೆ ಮತ್ತು ಭಾರತದೊಂದಿಗಿನ ಸಂಬಂಧದಿಂದ ದೂರ ಸರಿಯುವ ಸಾಧ್ಯತೆಗೆ ಸಂಬಂಧಿಸಿದ್ದಾಗಿದೆ. ಅವಾಮಿ ಲೀಗ್‌ನ ಪತನದೊಂದಿಗೆ ಯುವ ಸಮುದಾಯ ನೇತೃತ್ವದ ರಾಷ್ಟ್ರೀಯತೆ, ಇಸ್ಲಾಂ ಮೂಲಭೂತವಾದಿಗಳ ಮರುಪ್ರವೇಶ ಮತ್ತು ಚೀನಾ , ಪಾಕಿಸ್ತಾನದ ಪ್ರಭಾವ ಹೆಚ್ಚುತ್ತಿರುವುದು ಬಾಂಗ್ಲಾದೊಂದಿಗೆ ಭಾರತದ ಹೊಂದಿರುವ ಸಂಬಂಧ ಪ್ರಮುಖ ತಿರುವಿನ ಬಿಂದುವಾಗಿದ್ದು, ತಕ್ಷಣವೇ ಈ ಪರಿಸ್ಥಿತಿಯನ್ನು ಭಾರತ ತಕ್ಷಣವೇ ಸರಿಪಡಿಸಿಕೊಳ್ಳಬೇಕು ಎಂದು ತಜ್ಞರೊಬ್ಬರ ಅಭಿಪ್ರಾಯವನ್ನು ಸಮಿತಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. 

ಭಾರತವು ಬಾಂಗ್ಲಾದ ಆಂತರಿಕ ರಾಜಕೀಯದಲ್ಲಿ ಮಧ್ಯಪ್ರವೇಶಿಸದೆ, ಅಲ್ಲಿನ ಪ್ರಜಾಪ್ರಭುತ್ವ ಪ್ರಕ್ರಿಯೆಗೆ, ಮುಕ್ತ, ನ್ಯಾಯಸಮ್ಮತ, ಎಲ್ಲರನ್ನೊಳಗೊಂಡ ಚುನಾವಣೆಗೆ ಬೆಂಬಲ ನೀಡಬೇಕು ಎಂದು ಸಮಿತಿ ತನ್ನ ಶಿಫಾರಸಿನಲ್ಲಿ ಹೇಳಿದೆ. 

ಭಾರತದಲ್ಲಿ ಅಲ್ಲಿನ ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರು ಆಶ್ರಯ ಪಡೆದಿರುವುದನ್ನೂ ಉಲ್ಲೇಖಿಸಿರುವ ವರದಿಯು, ಜೀವಕ್ಕೆ ಆಪತ್ತು, ಅಸ್ತಿತ್ವಕ್ಕೆ ಅಪಾಯ ಎದುರಿಸುತ್ತಿರುವ ವ್ಯಕ್ತಿಗಳಿಗೆ ನಾಗರಿಕ ನಡವಳಿಕೆ, ಮಾನವೀಯ ನೆಲೆಯಲ್ಲಿ ಆಶ್ರಯ ನೀಡುವ ಸಂಪ್ರದಾಯದ ಅನುಸಾರ ಭಾರತವು ಶೇಖ್‌ ಹಸೀನಾ ಅವರಿಗೆ ಆಶ್ರಯ ನೀಡಿದೆ. ಸರ್ಕಾರವು ಈ ಪರಿಸ್ಥಿತಿಯನ್ನು ತುಂಬಾ ಸೂಕ್ಷ್ಮತೆಯಿಂದ ನಿರ್ವಹಿಸಬೇಕು ಎಂದೂ ಸಮಿತಿ ಸಲಹೆ ನೀಡಿದೆ.

ಬಾಂಗ್ಲಾ ಸ್ಥಿರತೆ: ಭಾರತಕ್ಕೆ ಏಕೆ ಮುಖ್ಯ?

* ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ಭಾರತದ ಪ್ರಮುಖ ಪಾಲುದಾರ ರಾಷ್ಟ್ರ

* ದಕ್ಷಿಣ ಏಷ್ಯಾದಲ್ಲಿ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರ. ಭಾರತದ ಸರಕು ಮತ್ತು ಕಚ್ಚಾ ವಸ್ತುಗಳ ಬಹುದೊಡ್ಡ ಗ್ರಾಹಕ ರಾಷ್ಟ್ರ

* ಆ‌ಗ್ನೇಯ ಏಷ್ಯಾ ರಾಷ್ಟ್ರಗಳಿಗೆ ಭಾರತದ ಸಂಪರ್ಕ ಕೊಂಡಿ

* ಬಾಂಗ್ಲಾದೇಶ, ಭೂತಾನ್‌, ಭಾರತ, ಮ್ಯಾನ್ಮಾರ್‌, ನೇಪಾಳ, ಶ್ರೀಲಂಕಾ ಮತ್ತು ಥಾಯ್ಲೆಂಡ್‌ಗಳನ್ನೊಳಗೊಂಡ ಬೇ ಆಫ್‌ ಬೆಂಗಾಲ್‌ ಇನಿಷಿಯೇಟಿವ್‌ ಫಾರ್‌ ಮಲ್ಟಿ ಸೆಕ್ಟೋರಲ್‌ ಟೆಕ್ನಿಕಲ್‌ ಮತ್ತು ಎಕಾನಮಿಕ್‌ ಕೊ–ಆಪರೇಷನ್‌ ಮುಖ್ಯ ಕಚೇರಿ ಇರುವುದು ಢಾಕಾದಲ್ಲಿ

* ಭಾರತದ ಈಶಾನ್ಯ ರಾಜ್ಯಗಳಿಗೆ ಬಾಂಗ್ಲಾದೇಶದ ಮೂಲಕವೂ ಹೋಗಬಹುದು. ಭಾರತದ ಇತರ ರಾಜ್ಯಗಳು ಈಶಾನ್ಯ ರಾಜ್ಯಗಳನ್ನು ಸಂಪರ್ಕಿಸಲು ಕಿರಿದಾದ ‘ಚಿಕನ್‌ ನೆಕ್‌’ ಕಾರಿಡಾರ್‌ ಮೇಲೆ ಹೆಚ್ಚು ಅವಲಂಬಿಸುವುದನ್ನು ಇದು ತಪ್ಪಿಸುತ್ತದೆ

* ರಾಜಕೀಯ ಅಸ್ಥಿರತೆಯಲ್ಲೇ ಇರುವ, ಭಯೋತ್ಪಾದಕರ ಕಪಿಮುಷ್ಟಿಯಲ್ಲಿರುವ ಪಾಕಿಸ್ತಾನದಿಂದಾಗಿ ದೇಶದ ಉತ್ತರದ ಕಾಶ್ಮೀರದಲ್ಲಿ ಭದ್ರತೆಗೆ ಸದಾ ಅಪಾಯ ಎದುರಾಗಿತ್ತಿರುವ ಹೊತ್ತಿನಲ್ಲೇ, ಪಶ್ಚಿಮದಲ್ಲಿರುವ ನೆರೆ ರಾಷ್ಟ್ರದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗುವುದು ಭಾರತದ ಭದ್ರತೆಗೂ ಸವಾಲೊಡ್ಡಲಿದೆ

ಆಧಾರ:ಪಿಟಿಐ, ಬಿಬಿಸಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಂಸದೀಯ ಸ್ಥಾಯಿ ಸಮಿತಿ ವರದಿ, ಮಾಧ್ಯಮ ವರದಿಗಳು

 ಉದ್ರಿಕ್ತ ಪ್ರತಿಭಟನಕಾರರು ಢಾಕಾದಲ್ಲಿರುವ ಪ್ರೊಥೊಮ್‌ ಅಲೊ ಪತ್ರಿಕಾ ಕಚೇರಿಯಲ್ಲಿ ಬೆಂಕಿ ಹಾಕಿದ್ದರು ಎಎಫ್‌ಪಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.