ಮುಂದಿನ ಜನಗಣತಿಯ ಜೊತೆ ಜಾತಿಗಣತಿಯನ್ನೂ ನಡೆಸುವ ‘ಹಠಾತ್’ ನಿರ್ಧಾರವನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಘೋಷಿಸಿದೆ. ಈ ‘ಅನಿರೀಕ್ಷಿತ’ ತೀರ್ಮಾನದಿಂದ ಕಾಂಗ್ರೆಸ್ ಪಕ್ಷವೂ ಸೇರಿದಂತೆ ದೇಶದ ಹಲವು ರಾಜ್ಯಗಳು, ಸಮುದಾಯಗಳು ಮತ್ತು ಸಂಘಟನೆಗಳ ಒತ್ತಾಯಕ್ಕೆ ಫಲ ಸಿಕ್ಕಂತಾಗಿದೆ. ಸುಮಾರು 95 ವರ್ಷಗಳ ನಂತರ ನಡೆಯಲಿರುವ ಜಾತಿ ಗಣತಿ ಇದಾಗಲಿದೆ. ಜಾತಿಗಣತಿಯು ದೇಶದ ಹಿಂದುಳಿದ ವರ್ಗಗಳ ಅಭಿವೃದ್ಧಿಯಲ್ಲಿ ನಿರ್ಣಾಯಕ ಘಟ್ಟವಾಗಲಿದ್ದು, ವರದಿ ಪ್ರಕಟವಾದ ನಂತರ ವಿವಿಧ ಜಾತಿ, ಉಪಜಾತಿಗಳಿಂದ ಮೀಸಲಾತಿ, ಒಳಮೀಸಲಾತಿ ಬೇಡಿಕೆ ಹೆಚ್ಚಾಗಲಿದೆ ಎನ್ನುವ ವಿಶ್ಲೇಷಣೆ ನಡೆಯುತ್ತಿದೆ. ಇದರೊಂದಿಗೆ ಈ ವಿಚಾರದಲ್ಲಿ ಬಿಜೆಪಿ ಯೂ–ಟರ್ನ್ ಹೊಡೆದಿರುವ ಬಗ್ಗೆಯೂ ಚರ್ಚೆಯಾಗುತ್ತಿದೆ.
ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿ 1881 –1931ರ ನಡುವೆ ಪ್ರತಿ ಹತ್ತು ವರ್ಷಕ್ಕೊಮ್ಮೆ ಜನಗಣತಿ ಮಾಡಲಾಗುತ್ತಿತ್ತು. ಅದರಲ್ಲಿ ಜನರ ಜಾತಿ, ಧರ್ಮ, ವೃತ್ತಿ ಮುಂತಾದ ವಿವರಗಳನ್ನು ದಾಖಲಿಸಲಾಗುತ್ತಿತ್ತು. ಬ್ರಿಟಿಷರು ಭಾರತೀಯ ಸಮಾಜದ ಸಂಕೀರ್ಣ ಸ್ವರೂಪವನ್ನು ಅರಿಯುವುದಕ್ಕಾಗಿ ಆಗ ಜಾತಿಗಣತಿ ಮಾಡುತ್ತಿದ್ದರು ಎನ್ನಲಾಗಿದೆ.
ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ನಡೆದ ಮೊದಲ ಜನಗಣತಿಯ ವೇಳೆ (1951ರಲ್ಲಿ) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಸಂಖ್ಯೆ ಹೊರತುಪಡಿಸಿ ಇತರೆ ಹಿಂದುಳಿದ ಜಾತಿಗಳ (ಒಬಿಸಿ) ಜಾತಿ, ವೃತ್ತಿ ಇತ್ಯಾದಿ ವಿವರಗಳನ್ನು ಜನಗಣತಿಯಲ್ಲಿ ನಮೂದಿಸದೇ ಇರಲು ಕೇಂದ್ರ ಸರ್ಕಾರ ತೀರ್ಮಾನಿಸಿತ್ತು. ಆದರೆ, ಎಸ್‌ಸಿ, ಎಸ್‌ಟಿ ಹೊರತುಪಡಿಸಿ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಇತರೆ ವರ್ಗಗಳ (ಒಬಿಸಿ) ಜನರಿಗೆ ಸರ್ಕಾರದ ಯೋಜನೆಗಳ ಫಲ ದಕ್ಕುವಂತೆ ಮಾಡುವ ದಿಸೆಯಲ್ಲಿ ಅಗತ್ಯವೆನಿಸಿದರೆ, ರಾಜ್ಯಗಳೇ ಒಬಿಸಿ ಗಣತಿ ಮಾಡಿಸಿ, ರಾಜ್ಯವಾರು ಒಬಿಸಿ ಪಟ್ಟಿ ತಯಾರಿಸಿಕೊಳ್ಳಬಹುದು ಎಂದು 1961ರಲ್ಲಿ ಸೂಚಿಸಿತ್ತು. ಆಗ ಒಬಿಸಿಗೆ ಮೀಸಲಾತಿ ಸೌಲಭ್ಯ ಇರಲಿಲ್ಲ.
ಭಾರತದಲ್ಲಿ ವಿವಿಧ ಸಮುದಾಯಗಳ ಜಾತಿವಾರು ಜನಸಂಖ್ಯೆಯೂ ಸೇರಿದಂತೆ ಇತರೆ ವಿವರಗಳು ಬೇಕು ಎಂದರೆ, ಲಭ್ಯವಿರುವುದು 1931ರ ಮಾಹಿತಿಯೇ. ಅದರ ನಂತರ 1941ರಲ್ಲಿಯೂ ಯುದ್ಧದ ಸಂದರ್ಭದಲ್ಲಿ ಮಾಹಿತಿ ಸಂಗ್ರಹಿಸಲಾಯಿತಾದರೂ ಅದರ ವರದಿ ಬಿಡುಗಡೆಯಾಗಿಲ್ಲ. 2011ರ ಜನಗಣತಿ ವೇಳೆ ಜಾತಿ ವಿವರಗಳನ್ನು ಸಂಗ್ರಹಿಸಲಾಯಿತಾದರೂ ನಂತರದಲ್ಲಿ ಜನಸಂಖ್ಯೆಯ ಮಾಹಿತಿ ಇರುವ ವರದಿ ಮಾತ್ರ ಬಿಡುಗಡೆಯಾಗಿತ್ತು.
ಜಾತಿಗಣತಿ ನಡೆಸಬೇಕು ಎಂಬ ಕೂಗು ದೇಶದಲ್ಲಿ ದಶಕಗಳಿಂದ ಕೇಳಿಬರುತ್ತಿದೆ. 2010ರಲ್ಲಿ ಇತರ ಹಿಂದುಳಿದ ವರ್ಗಗಳ ಮುಖಂಡರು ಅಂದಿನ ಯುಪಿಎ ಸರ್ಕಾರದ ಮೇಲೆ ಒತ್ತಡವನ್ನೂ ತಂದಿದ್ದರು. ಆ ಬಳಿಕ, 2011ರ ಜನಗಣತಿಯ ಭಾಗವಾಗಿ ಜಾತಿಗಣತಿಯನ್ನೂ ನಡೆಸಬೇಕು ಎಂದು ಸಂಸತ್ತಿನ ಎರಡೂ ಸದನಗಳಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು. ಅದರಂತೆ 2011ರ ಜನಗಣತಿಯೊಂದಿಗೆ ಸಾಮಾಜಿಕ–ಆರ್ಥಿಕ ಮತ್ತು ಜಾತಿಗಣತಿಯನ್ನೂ ನಡೆಸಲಾಗಿತ್ತು. ಆದರೆ, ಸರ್ಕಾರ ಜನಗಣತಿಯ ವಿವರಗಳನ್ನು ಮಾತ್ರ ಬಹಿರಂಗಪಡಿಸಿತ್ತು. ಜಾತಿಗಣತಿ ಪ್ರಕ್ರಿಯೆ, ಮಾಹಿತಿ ಸಂಗ್ರಹ ವೈಜ್ಞಾನಿಕವಾಗಿರಲಿಲ್ಲ; ಸಂಗ್ರಹಿಸಿದ್ದ ಮಾಹಿತಿ ಅಪೂರ್ಣವಾಗಿತ್ತು ಎಂದು ಕೇಂದ್ರ ಸರ್ಕಾರ ಹೇಳಿತ್ತು.
ಗ್ರಾಮೀಣ ಭಾಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ನಗರ ಪ್ರದಶಗಳಲ್ಲಿ ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯಗಳು ಜಾತಿಗಣತಿಯನ್ನು ಮಾಡಿದ್ದವು. ಈ ಗಣತಿಯ ವರದಿಯನ್ನು ಬಿಡುಗಡೆ ಮಾಡುವಂತೆ ವಿರೋಧ ಪಕ್ಷಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದವು. ಸರ್ಕಾರ ಬಿಡುಗಡೆ ಮಾಡದೇ ಇದ್ದುದರಿಂದ ವಿರೋಧ ಪಕ್ಷಗಳ ಟೀಕೆಗೂ ಗುರಿಯಾಗಿತ್ತು.
ಆದರೆ, 2021ರ ಜನಗಣತಿಯಲ್ಲಿ ಜಾತಿಗಣತಿಯನ್ನೂ ಸೇರ್ಪಡೆಗೊಳಿಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಮನವಿ ಮಾಡಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿತ್ತು. 2011ರ ಸಾಮಾಜಿಕ–ಆರ್ಥಿಕ ಮತ್ತು ಜಾತಿಗಣತಿಯ ವರದಿಯನ್ನು ಯಾಕೆ ಬಿಡುಗಡೆ ಮಾಡಿಲ್ಲ ಎಂಬುದನ್ನು ಪ್ರಮಾಣಪತ್ರದಲ್ಲಿ ವಿವರಿಸಿತ್ತು. ಗಣತಿಯ ಸಂದರ್ಭದಲ್ಲಿ ಆಗಿದ್ದ ತಪ್ಪುಗಳು ಮತ್ತು ಲೋಪಗಳ ಬಗ್ಗೆ ಉಲ್ಲೇಖಿಸಿತ್ತು.
‘1931ರಲ್ಲಿ ನಡೆದಿದ್ದ ಗಣತಿಯ ಪ್ರಕಾರ ದೇಶದಲ್ಲಿ 4,147 ಜಾತಿಗಳಿದ್ದವು. 2011ರ ಜಾತಿ ಗಣತಿಯು 46 ಲಕ್ಷ ಜಾತಿಗಳ ಹೆಸರುಗಳನ್ನು ಹೊಂದಿತ್ತು. ಗಣತಿ ನಡೆಸಿದ ಸಂದರ್ಭದಲ್ಲಿ ಜನರು ತಮ್ಮ ಜಾತಿ, ಉಪ ಜಾತಿ, ಕುಲ, ಗೋತ್ರ ಮತ್ತು ಉಪನಾಮಗಳನ್ನು ಹೇಳಿದ್ದರಿಂದ ಅಷ್ಟೊಂದು ಸಂಖ್ಯೆಯ ಜಾತಿಗಳ ಲೆಕ್ಕ ಸಿಕ್ಕಿತ್ತು. ಇದು ಗಣತಿದಾರರಿಂದ ಆದ ತಪ್ಪು ಅಥವಾ ಸಮೀಕ್ಷೆಯ ಪ್ರಕ್ರಿಯೆಯಲ್ಲಿ ಆದ ಲೋಪಗಳು’ ಎಂದು ಕೇಂದ್ರ ಸರ್ಕಾರ ಹೇಳಿತ್ತು.
ಇದಲ್ಲದೇ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಗಣತಿ ನಡೆಸಿದ ಎರಡೂ ಸಚಿವಾಲಯಗಳಿಗೆ ಸಮೀಕ್ಷೆ ನಡೆಸಿದ ಅನುಭವವಿರಲಿಲ್ಲ. ಸಮೀಕ್ಷೆಯಲ್ಲಿ ಬಳಸಿದ ಪ್ರಶ್ನಾವಳಿಗಳು ಸಮರ್ಪಕವಾಗಿರಲಿಲ್ಲ ಎಂದೂ ಹೇಳಲಾಗಿದೆ.
ಬಿಜೆಪಿಯು ಆರಂಭದಿಂದಲೂ ಜಾತಿ ಗಣತಿಯ ವಿರೋಧಿ ನಿಲುವು ಹೊಂದಿತ್ತು. ಮುಂದಿನ ಜನಗಣತಿಯಲ್ಲಿ ಜಾತಿ ಗಣತಿಯನ್ನು ಮಾಡಲಾಗುವುದಿಲ್ಲ ಎಂದು ಬಿಜೆಪಿ ಸರ್ಕಾರ 2021ರಲ್ಲಿ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಕೇಂದ್ರ ಸಚಿವರು, ಸಂಸದರು, ಮುಖಂಡರು ಎಲ್ಲರೂ ಜಾತಿಗಣತಿಯನ್ನು ವಿರೋಧಿಸಿದವರೇ. ಜಾತಿ ಗಣತಿ ಪರವಾಗಿ ಮಾತನಾಡಿದ್ದ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ಮುಖಂಡರು ವಾಗ್ದಾಳಿ ನಡೆಸಿದ್ದರು. ಪ್ರಧಾನಿ ಮೋದಿ ಅವರು ಜಾತಿಗಣತಿಯ ಬೇಡಿಕೆ ‘ನಗರ ನಕ್ಸಲ್ ಯೋಚನೆ’ ಎಂದು ಕಾಂಗ್ರೆಸ್ ಅನ್ನು ಟೀಕಿಸಿದ್ದರು. ಆದರೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಈಗ ತನ್ನ ನಿಲುವಿಗೆ ವಿರುದ್ಧವಾದ ನಿರ್ಧಾರ ತೆಗೆದುಕೊಂಡು ಯೂ–ಟರ್ನ್ ಹೊಡೆದಿದೆ.
ಈ ನಿರ್ಧಾರದ ಹಿಂದೆ ರಾಜಕೀಯ ಲಾಭ ಪಡೆಯುವ ಲೆಕ್ಕಾಚಾರ ಇದೆ ಎಂದು ಹೇಳಲಾಗುತ್ತಿದೆ. ಮುಂದಿನ ಚುನಾವಣೆಗಳಲ್ಲಿ ಪಕ್ಷದ ಪರವಾಗಿ ಜನಾಭಿಪ್ರಾಯ ರೂಪುಗೊಳ್ಳಲು ಇದು ನೆರವಾಗಲಿದೆ ಎನ್ನುವ ಲೆಕ್ಕಾಚಾರವೂ ಇರಬಹುದು ಎಂದು ರಾಜಕೀಯ ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಜಾತಿಗಣತಿ ನಡೆಸುವ ಬಗ್ಗೆ ಜೆಡಿಯು ಸೇರಿದಂತೆ ಮೈತ್ರಿಪಕ್ಷಗಳಿಂದ ಬಿಜೆಪಿಯ ಮೇಲೆ ಒತ್ತಡ ಇದ್ದಿರಬಹುದು ಎಂದೂ ಹೇಳಲಾಗುತ್ತಿದೆ.
ಗಮನಾರ್ಹ ಸಂಗತಿ ಎಂದರೆ, ಕಳೆದ ವರ್ಷ ಆರ್‌ಎಸ್‌ಎಸ್ ಕೂಡ ಜಾತಿಗಣತಿಯ ಪರವಾಗಿ ಮಾತನಾಡಿತ್ತು. ಕೇರಳದ ಪಾಲಕ್ಕಾಡ್‌ನಲ್ಲಿ 2024ರ ಸೆಪ್ಟೆಂಬರ್ 2ರಂದು ನಡೆದಿದ್ದ ಸಂಘದ ಸಭೆಯಲ್ಲಿ ಆರ್‌ಎಸ್‌ಎಸ್‌ನ ರಾಷ್ಟ್ರೀಯ ಮಾಧ್ಯಮ ಉಸ್ತುವಾರಿ ಸುನಿಲ್ ಅಂಬೇಕರ್ ಅವರು ಮಾತನಾಡುತ್ತಾ, ‘ಹಿಂದುಳಿದ ಮತ್ತು ದುರ್ಬಲ ಸಮುದಾಯಗಳ ಕಲ್ಯಾಣದ ಉದ್ದೇಶ ಹೊಂದಿದ್ದ ಜಾತಿಗಣತಿಯನ್ನು ಸಂಘವು ಯಾವತ್ತೂ ಆಕ್ಷೇಪಿಸಿಲ್ಲ. ಆದರೆ, ಇದೇ ಸಮಯದಲ್ಲಿ ಚುನಾವಣಾ ಲಾಭಕ್ಕಾಗಿ ಈ ಗಣತಿಯನ್ನು ಬಳಸಬಾರದು’ ಎಂದು ಹೇಳಿದ್ದರು.
1931ರ ಜನಗಣತಿಯ ಪ್ರಕಾರ, ದೇಶದ ಜನಸಂಖ್ಯೆಯಲ್ಲಿ ಒಬಿಸಿ ಪ್ರಮಾಣವು ಶೇ 52ರಷ್ಟು ಇದೆ. ದೇಶದ ಅಂದಿನ ಜನಸಂಖ್ಯೆಯಲ್ಲಿ ಒಟ್ಟು 27.1 ಕೋಟಿ ಒಬಿಸಿಗಳಿದ್ದರು. ಇದರ ಆಧಾರದಲ್ಲಿಯೇ 1980ರಲ್ಲಿ ಮಂಡಲ್ ಆಯೋಗವು ಒಬಿಸಿಗೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಶೇ 27ರಷ್ಟು ಮೀಸಲಾತಿ ಕಲ್ಪಿಸುವಂತೆ ಶಿಫಾರಸು ಮಾಡಿತ್ತು. 1990ರಲ್ಲಿ ಮಂಡಲ್ ವರದಿ ಜಾರಿಯಾಗಿತ್ತು.
ಉದ್ಯೋಗ ಮತ್ತು ಶಿಕ್ಷಣ ರಂಗದಲ್ಲಿ ಒಬಿಸಿ ಮೀಸಲಾತಿ ಪಡೆಯುತ್ತಿದ್ದರೂ ರಾಜಕೀಯ ರಂಗದಲ್ಲಿ ಮೀಸಲಾತಿ ನೀಡಲಾಗಿಲ್ಲ. ಆದರೆ, ಸಂವಿಧಾನದ 73 ಮತ್ತು 74ನೇ ತಿದ್ದುಪಡಿಯ ನಂತರ 243ಡಿ(6) ಮತ್ತು 243ಟಿ(6) ವಿಧಿಗಳ ಅನ್ವಯ ಪಂಚಾಯಿತಿ ಮತ್ತು ನಗರಸಭೆಗಳಲ್ಲಿ ಒಬಿಸಿಗೆ ಮೀಸಲಾತಿ ಕಲ್ಪಿಸಲಾಯಿತು. ಇದಕ್ಕಾಗಿ ಪ್ರದೇಶವಾರು ಹಾಗೂ ಜಾತಿವಾರು ಒಬಿಸಿ ಜನಸಂಖ್ಯೆ ಅಗತ್ಯವಿದೆ. ಜತೆಗೆ, 1931ರ ಜನಗಣತಿಯ ಆಧಾರದಲ್ಲಿ ಸಿದ್ಧಪಡಿಸಲಾಗಿರುವ ಒಬಿಸಿ ಪಟ್ಟಿಯನ್ನು ಕಾಲದಿಂದ ಕಾಲಕ್ಕೆ ಪರಿಷ್ಕರಿಸಬೇಕು ಎಂದು ಇಂದಿರಾ ಸಾಹ್ನಿ ಪ್ರಕರಣದಲ್ಲಿ (1992) ಸುಪ್ರೀಂ ಕೋರ್ಟ್ ಹೇಳಿತ್ತು.
ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಒಡಿಶಾ ಮತ್ತು ಜಾರ್ಖಂಡ್ ರಾಜ್ಯಗಳು ಒಬಿಸಿಗಳಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮೀಸಲಾತಿ ನಿಗದಿಪಡಿಸಲು ಹೊರಟಾಗ, ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್ ಅದಕ್ಕೆ ತಡಯಾಜ್ಞೆ ನೀಡಿವೆ. ಮೀಸಲಾತಿ ಕಲ್ಪಿಸಲು ಒಬಿಸಿಗಳ ಹಿಂದುಳಿದಿರುವಿಕೆಯ ದತ್ತಾಂಶ ಬೇಕು ಎಂದು ನ್ಯಾಯಾಲಯಗಳು ಸೂಚಿಸಿವೆ.
ಜನಗಣತಿಯು ಕೇಂದ್ರದ ವ್ಯಾಪ್ತಿಗೆ ಬರುವ ವಿಚಾರ. ಹಾಗಿದ್ದರೂ 2008ರ ಅಂಕಿಅಂಶಗಳ ಕಾಯ್ದೆಯು ರಾಜ್ಯಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೂ ಅಗತ್ಯ ಅಂಕಿಅಂಶ ಸಂಗ್ರಹಿಸುವ ಅಧಿಕಾರ ನೀಡಿದೆ. ಈ ರೀತಿ ಕರ್ನಾಟಕದಲ್ಲಿ (2015) ಮತ್ತು ಬಿಹಾರದಲ್ಲಿ (2023) //ಜಾತಿಗಣತಿಯ// ಭಾಗವಾಗಿ ಮಾಹಿತಿ ಸಂಗ್ರಹ ಮಾಡಲಾಗಿತ್ತು.
ಭಾರತದಲ್ಲಿ ಜಾತಿ ಎನ್ನುವುದು ಚಾರಿತ್ರಿಕ ವಾಸ್ತವ; ಸಮಾಜದ ಅಡಿಪಾಯವೇ ಜಾತಿ; ಇದು ಜನರ ಸಾಮಾಜಿಕ, ಆರ್ಥಿಕ, ರಾಜಕೀಯ ಸ್ಥಿತಿಗತಿಗಳನ್ನು ರೂಪಿಸುವ ನಿರ್ಣಾಯಕ ಅಂಶ. ಯಾವ ಸಮುದಾಯದ ಸಂಖ್ಯೆ ಎಷ್ಟು, ಅವರ ವಿದ್ಯಾಭ್ಯಾಸದ ಮಟ್ಟ ಏನು, ಅದರಲ್ಲಿ ಎಷ್ಟು ಮಂದಿ ಸರ್ಕಾರಿ ಉದ್ಯೋಗಗಳಲ್ಲಿದ್ದಾರೆ, ಸಮುದಾಯಗಳ ರಾಜಕೀಯ ಪ್ರಾತಿನಿಧ್ಯ ಹೇಗಿದೆ ಇವೇ ಮುಂತಾದ ವಿವರಗಳು ಸಮಾಜದ ಸಂರಚನೆಯಲ್ಲಿರುವ ಅಸಮಾನತೆಯನ್ನು ಅರಿಯಲು, ತೊಡೆದುಹಾಕಲು ಮುಖ್ಯವೆನಿಸಿವೆ. ಜತೆಗೆ, ಮೀಸಲಾತಿ ನಿಗದಿಯೂ ಸೇರಿದಂತೆ ಸಾಮಾಜಿಕ ನ್ಯಾಯದ ತತ್ವದ ಅಡಿ ಸರ್ಕಾರವು ನೀತಿ ನಿಯಮ ರೂಪಿಸಲು, ಕಾರ್ಯಕ್ರಮ ಅನುಷ್ಠಾನ ಮಾಡಲು ಪ್ರಮುಖ ಆಕರವಾಗುತ್ತವೆ. ಚುನಾವಣೆಗಳ ಸಂದರ್ಭದಲ್ಲಿ ರಾಜಕೀಯ ಪಕ್ಷಗಳಿಗೆ ಕಾರ್ಯತಂತ್ರ ರೂಪಿಸುವಲ್ಲಿಯೂ ಈ ಮಾಹಿತಿ ಮಹತ್ವದ್ದೆನಿಸಿದೆ.
ಹೊಸ ಜಾತಿಗಣತಿ ವಿವರಗಳು ಬಿಡುಗಡೆಯಾದರೆ, ಮೀಸಲಾತಿ ಪಟ್ಟಿ ಪರಿಷ್ಕರಿಸುವ, ಪ್ರಮಾಣವನ್ನು ಪುನರ್ ನಿಗದಿಪಡಿಸುವ, ಉಪಜಾತಿ ಮೀಸಲು ಕಲ್ಪಿಸುವಂತೆ ಒತ್ತಾಯಿಸುವ ಹೋರಾಟ, ಆಂದೋಲನಗಳು ದೇಶದಾದ್ಯಂತ ಹುಟ್ಟಿಕೊಳ್ಳಲಿವೆ ಎನ್ನಲಾಗಿದೆ.
ಜಾತಿಗಣತಿ ನಡೆಸುವುದು ಸ್ವಾಗತಾರ್ಹವೇ ಆದರೂ, ಅದನ್ನು ಹೇಗೆ ನಡೆಸಬೇಕು ಎನ್ನುವ ಬಗ್ಗೆಯೂ ಚರ್ಚೆಗಳು ಆರಂಭವಾಗಿವೆ. 2011ರ ಜನಗಣತಿ ವೇಳೆ ನಡೆಸಿದ ಜಾತಿಗಣತಿಯ ವೈಫಲ್ಯ ಮತ್ತು ಕೆಲವು ರಾಜ್ಯಗಳಲ್ಲಿ ಬಿಡುಗಡೆಯಾಗಿರುವ ಜಾತಿಗಣತಿ ವರದಿಗಳಲ್ಲಿ ಕಂಡುಬಂದಿವೆ ಎನ್ನಲಾಗುತ್ತಿರುವ ಲೋಪಗಳ ಕಾರಣದಿಂದ ಮುಂದಿನ ಜಾತಿಗಣತಿ ಹೇಗೆ ನಡೆಯಬೇಕು ಎನ್ನುವುದು ಮುಖ್ಯ ವಿಚಾರವಾಗಿದೆ. ಅತ್ಯಂತ ವೈಜ್ಞಾನಿಕವಾಗಿ, ಜಾತಿ, ಉಪಜಾತಿ, ವೃತ್ತಿ ಮುಂತಾದ ವಿವರಗಳು ಕೈತಪ್ಪದಂತೆ ಸೂಕ್ತವಾಗಿ ಮತ್ತು ಸೂಕ್ಷ್ಮವಾಗಿ ದಾಖಲೀಕರಣ ನಡೆಯಬೇಕು ಎನ್ನುವ ಒತ್ತಾಯ ಕೇಳಿಬಂದಿದೆ.
ಜಾತಿಗಣತಿ ನಡೆಸುವ ಕೇಂದ್ರ ಸರ್ಕಾರದ ‘ಹಠಾತ್’ ನಿರ್ಧಾರವನ್ನು ಬಿಜೆಪಿ ನಾಯಕರು ಈಗ ‘ಐತಿಹಾಸಿಕ ನಿರ್ಧಾರ’ ಎಂದು ಹೊಗಳುತ್ತಿದ್ದಾರೆ. ಆದರೆ, ಹಿಂದೆ ಜಾತಿಗಣತಿಯು ‘ಸಮಾಜ ವಿಭಜಿಸುವ ರಾಜಕಾರಣ’ ಎಂದು ತೆಗಳಿದ್ದರು. ಕರ್ನಾಟಕದಲ್ಲಿ ಜಾತಿಗಣತಿ ವರದಿಯನ್ನು ಕಾಂಗ್ರೆಸ್ ಸರ್ಕಾರ ಅಂಗೀಕರಿಸಿದಾಗ ರಾಜ್ಯ ಬಿಜೆಪಿ ನಾಯಕರು ಅದರ ವಿರುದ್ಧವಾಗಿ ಮಾತನಾಡಿದ್ದರು.
ಜಾತಿಗಣತಿ ನಡೆಸಬೇಕು ಎನ್ನುವ ಬೇಡಿಕೆಯು ನಗರ ನಕ್ಸಲ್ ಯೋಚನೆಯಾಗಿದೆ.ನರೇಂದ್ರ ಮೋದಿ, ಪ್ರಧಾನಿ (2024ರ ಚುನಾವಣೆಗೂ ಮುನ್ನ ನಡೆದ ಮಾಧ್ಯಮ ಸಂದರ್ಶನದಲ್ಲಿ ನೀಡಿದ ಹೇಳಿಕೆ)
ನಮ್ಮನ್ನು ಒಡೆದರೆ, ನಾವು ನಾಶವಾಗುತ್ತೇವೆ (ಬಟೇಂಗೇ ತೋ ಕಾಟೇಂಗೆ). ಬಾಂಗ್ಲಾದೇಶದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನೋಡುತ್ತಿದ್ದೇವಲ್ಲಾ. ಅಲ್ಲಿ ಆಗಿರುವ ತಪ್ಪು ಇಲ್ಲಿ ಆಗಬಾರದು. ನಾವೆಲ್ಲಾ ಒಂದಾಗಿದ್ದರೆ ಸುರಕ್ಷಿತವಾಗಿರುತ್ತೇವೆ.ಯೋಗಿ ಆದಿತ್ಯನಾಥ, ಉತ್ತರ ಪ್ರದೇಶ ಮುಖ್ಯಮಂತ್ರಿ (2024ರ ನವೆಂಬರ್‌ನಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ನೀಡಿದ ಹೇಳಿಕೆ)
ಈ ಅವೈಜ್ಞಾನಿಕ ಜಾತಿ ಗಣತಿಯು ಹಿಂದೂಗಳನ್ನು ವಿಭಜಿಸುವುದು ಬಿಟ್ಟು ಬೇರೇನೂ ಮಾಡದು.. #ಒಡೆದುಆಳುವನೀತಿ #ಸ್ಕ್ಯಾಂಗ್ರೆಸ್ #ಹಿಂದೂವಿರೋಧಿಕಾಂಗ್ರೆಸ್ #ಬೋಗಸ್ಜಾತಿಗಣತಿಬಿಜೆಪಿ ಕರ್ನಾಟಕ, (ಜಾತಿಗಣತಿ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಿದ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಘಟಕ 2025ರ ಏ.12ರಂದು ಎಕ್ಸ್‌ನಲ್ಲಿ ಮಾಡಿದ ಟ್ವೀಟ್)
ಆಧಾರ: ಪಿಟಿಐ, ಮಾಧ್ಯಮ ವರದಿಗಳು,
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.