
ಕಲೆ: ಸಂತೋಷ್ ಸಸಿಹಿತ್ಲು
ನಿಯಂತ್ರಣ ಕ್ರಮಗಳಿಂದ ಕೆಲವು ಕುಟುಂಬಗಳಿಗೆ ಮತ್ತು ಮಕ್ಕಳಿಗೆ ಅನುಕೂಲವಾಗಬಹುದು. ಆದರೆ, ಮೊಬೈಲ್ ಬಳಸುವ ಜನಸಂಖ್ಯೆಯ ಗಾತ್ರ ಎಷ್ಟು ದೊಡ್ಡದಾಗಿದೆ ಮತ್ತು ಕೈಗೊಂಡಿರುವ ಕ್ರಮಗಳು ಎಷ್ಟು ಪರಿಣಾಮಕಾರಿ ಎಂಬುದು ನಮಗೆ ಗೊತ್ತಿಲ್ಲ. ಕಠಿಣ ನಿರ್ಬಂಧದಿಂದಾಗಿ ಬೇರೆ ಮಕ್ಕಳು ಹೆಚ್ಚು ರಹಸ್ಯವಾಗಿ ಮತ್ತು ನಿಯಂತ್ರಣಕ್ಕೆ ಸಿಗದ ರೀತಿಯಲ್ಲಿ ಮೊಬೈಲ್ ಬಳಸಲು ಆರಂಭಿಸಬಹುದು. ಅಂತಹ ಪರಿಸ್ಥಿತಿ ನಿರ್ಮಾಣವಾದರೆ, ನಿರ್ಬಂಧದ ಉದ್ದೇಶ ಈಡೇರಿದಂತಾಯಿತೇ?
ಸರ್ಕಾರಗಳು ಮೊಬೈಲ್ ಬಳಕೆಯ ಮೇಲೆ ವಿವಿಧ ರೀತಿಯ ನಿಯಂತ್ರಣ ಹೇರುವ ಪ್ರವೃತ್ತಿ ಜಗತ್ತಿನಾದ್ಯಂತ ಹೆಚ್ಚುತ್ತಿದೆ. ಸಾಮಾನ್ಯವಾಗಿ ವಯಸ್ಸಿನ ಆಧಾರದಲ್ಲಿ ಮೊಬೈಲ್ ಬಳಕೆಯನ್ನು ನಿರ್ಬಂಧಿಸಲಾಗುತ್ತಿದೆ. ಹೆಚ್ಚಿನ ಸಂದರ್ಭಗಳಲ್ಲಿ 16 ವರ್ಷದ ಒಳಗಿನವರಿಗೆ ಇದನ್ನು ಅನ್ವಯಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳು, ಗೇಮ್ಸ್‌ನಂತಹ ನಿರ್ದಿಷ್ಟ ಆ್ಯಪ್‌ಗಳನ್ನು ನಿರ್ಬಂಧಿಸುವುದರಿಂದ ಹಿಡಿದು ಶಿಕ್ಷಣ ಸಂಸ್ಥೆಗಳಲ್ಲಿ ಮೊಬೈಲ್ ಬಳಕೆಯನ್ನೇ ನಿಷೇಧಿಸುವವರೆಗೆ ವಿವಿಧ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಪ್ರವರ್ಧಮಾನಕ್ಕೆ ಬರುತ್ತಿರುವ ಈ ಪ್ರವೃತ್ತಿಯನ್ನು ಅರ್ಥ ಮಾಡಿಕೊಳ್ಳಬೇಕಾದರೆ, ಕೆಲವು ವಿಭಿನ್ನ ಪ್ರಶ್ನೆಗಳನ್ನು ಕೇಳುವುದು ಮುಖ್ಯವಾಗುತ್ತದೆ: ಈ ನಿರ್ಬಂಧದಿಂದ ನಿರೀಕ್ಷಿಸಬಹುದಾದ ಪ್ರಯೋಜನಗಳೇನು? ಇವು ಎಷ್ಟು ಪರಿಣಾಮಕಾರಿ? ನಿರ್ಬಂಧದಿಂದ ಯಾರಿಗೆ ಹೆಚ್ಚು ಪ್ರಯೋಜನ? ಸರ್ಕಾರಗಳು ನಿಯಂತ್ರಣ ಕ್ರಮಗಳಿಗೆ ಮುಂದಾಗಲು ಕಾರಣವೇನು?
16 ವರ್ಷ ವಯಸ್ಸಿನ ಒಳಗಿನ ಮಕ್ಕಳು ಮೊಬೈಲ್ ಬಳಸುವುದನ್ನು ನಿರ್ಬಂಧಿಸಬೇಕು ಎಂದು ಒತ್ತಡ ಹೇರುತ್ತಿರುವವರು ಎಚ್ಚೆತ್ತ ತಲೆಮಾರಿನ ಪೋಷಕರು. ಪೋಷಕರು ಮತ್ತು ಮಕ್ಕಳ ನಡುವೆ ಡಿಜಿಟಲ್ ಸಾಕ್ಷರತೆಯ ಹೆಚ್ಚುತ್ತಿರುವ ಅಂತರ ಎಂದರೆ, ಮಕ್ಕಳ ಮೊಬೈಲ್ ಬಳಕೆಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡುವುದು ಹೆಚ್ಚು ಕಷ್ಟಕರವಾಗಿದೆ ಎಂದರ್ಥ. ತರಗತಿಯಲ್ಲಿನ ಏಕಾಗ್ರತೆ, ಶೈಕ್ಷಣಿಕ ಸಾಧನೆ ಸೇರಿದಂತೆ ಹೆಚ್ಚು ಮೊಬೈಲ್ ಬಳಕೆಯ ನಕಾರಾತ್ಮಕ ಪರಿಣಾಮಗಳ ಬಗ್ಗೆ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುತ್ತಿರುವ ಮಾಹಿತಿ; ಸೈಬರ್ ಕಿರುಕುಳ, ದೈಹಿಕ ಸ್ವರೂಪದ ಬಗ್ಗೆ ಅನಾರೋಗ್ಯಕಾರಿ, ಅವಾಸ್ತವಿಕ ನಿಲುವು ಗಟ್ಟಿಗೊಳ್ಳುವುದು, ಆನ್‌ಲೈನ್ ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯಗಳ ಅಪಾಯ; ಹೆಚ್ಚುತ್ತಿರುವ ಸಾಮಾಜಿಕ ಪ್ರತ್ಯೇಕತೆ, ಗೇಮಿಂಗ್ ಮತ್ತು ಜೂಜಿನ ಆ್ಯಪ್‌ಗಳ ಚಟ ಹತ್ತಿಸಿಕೊಳ್ಳುವುದು, ಕುಟುಂಬದ ಸ್ವರೂಪ ಬದಲಾಗಿ, ಪೋಷಕರಿಬ್ಬರೂ ಉದ್ಯೋಗಿಗಳಾಗಿದ್ದು, ಮಕ್ಕಳೊಂದಿಗೆ ಅತಿ ಕಡಿಮೆ ಸಮಯ ಕಳೆಯುತ್ತಿರುವುದು– ಇಂಥ ಕ್ಷಿಪ್ರ ಬದಲಾವಣೆಯ ಕಾಲದಲ್ಲಿ ಪೋಷಕರು ಅಸಹಾಯಕರಾಗಿರುವುದು ಅಚ್ಚರಿಯ ವಿಷಯವೇನಲ್ಲ.
ವಿವಿಧ ದೇಶಗಳಲ್ಲಿ ಮೊಬೈಲ್ ಫೋನ್ ನಿರ್ಬಂಧವು ಮಿಶ್ರ ಫಲಿತಾಂಶವನ್ನು ನೀಡಿದೆ. ಅತಿ ಕಡಿಮೆ ಅಂಕಗಳನ್ನು ಪಡೆಯುತ್ತಿದ್ದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯು ಉತ್ತಮಗೊಂಡಿರುವುದು ಸಾಬೀತಾಗಿದೆ. ಆದಾಗ್ಯೂ, ಇದು ತಾಂತ್ರಿಕತೆ ಅಳವಡಿಸಿಕೊಂಡ ಶಾಲಾ ವಾತಾವರಣದಿಂದ ಪ್ರಭಾವಿತವಾದಂತೆ ತೋರುತ್ತದೆ. (ಇನ್‌ಫರ್ಮೇಷನ್ ಆ್ಯಂಡ್ ಕಮ್ಯುನಿಕೇಷನ್ ಟೆಕ್ನಾಲಜಿ ಇರುವ ಶಾಲೆಗಳಲ್ಲಿ ಮೊಬೈಲ್ ನಿಷೇಧಕ್ಕೆ ಅರ್ಥವಿಲ್ಲ) ಮತ್ತು ಮೊಬೈಲ್ ಅನ್ನು ಯಾವುದಕ್ಕೆ ಬಳಸಲಾಗುತ್ತಿದೆ ಎನ್ನುವುದು ಕಾರಣ. ಶೈಕ್ಷಣಿಕ ಉದ್ದೇಶಕ್ಕಾಗಿ ಮೊಬೈಲ್‌ಗಳನ್ನು ಬಳಸುವುದು ಉಪಯುಕ್ತ ಎಂದು ಕಂಡುಬಂದಿದ್ದು, ಶಾಲೆಗಳಲ್ಲಿ ಸೂಕ್ತ ತಾಂತ್ರಿಕತೆ ಅಳವಡಿಸಿಕೊಳ್ಳುವುದಕ್ಕೆ ಇದು ಪೂರಕವಾಗಿದೆ.
ಮಾನಸಿಕ ಆರೋಗ್ಯ ವೃದ್ಧಿ ಮತ್ತು ಸೈಬರ್ ಕಿರುಕುಳದಿಂದ ರಕ್ಷಣೆಯಂಥ ಪ್ರಯೋಜನಗಳು ಸಿಗುವ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ಬಂದಿದ್ದು, ಅದನ್ನು ಪುಷ್ಟೀಕರಿಸುವಂಥ ಪುರಾವೆಗಳು ಲಭ್ಯವಾಗಿರುವುದು ಕಡಿಮೆ.
ಸಾಮಾಜಿಕ ಜಾಲತಾಣಗಳಂಥ ನಿರ್ದಿಷ್ಟ ಆ್ಯಪ್‌ಗಳು ಅಥವಾ ಗೇಮ್‌ಗಳ ನಿಷೇಧದಿಂದ ಆಗುವ ಪ್ರಯೋಜನಗಳ ಬಗೆಗಿನ ಚಿತ್ರಣವೂ ಸೂಕ್ಷ್ಮ ವ್ಯತ್ಯಾಸಗಳಿಂದ ಕೂಡಿದೆ. ಸಾಮಾಜಿಕ ಜಾಲತಾಣಗಳು (ವಿಶೇಷವಾಗಿ ದುರ್ಬಲ ವರ್ಗಗಳ ಮಕ್ಕಳಿಗೆ ಮತ್ತು ಮಾನಸಿಕ ಆರೋಗ್ಯದ ಸಮಸ್ಯೆಗಳು ಇರುವವರಿಗೆ) ಒಳಗೊಳ್ಳುವ ಮತ್ತು ಬೆಂಬಲದ ಭಾವನೆಗಳನ್ನು ಮೂಡಿಸುತ್ತವೆ. ಗೇಮ್‌ಗಳು ಸ್ವಸಾಮರ್ಥ್ಯ, ಸಾಧನೆ ಮತ್ತು ಸಮುದಾಯದ ಭಾವನೆಗಳನ್ನು ಆನ್‌ಲೈನ್‌ನಲ್ಲಿ ಬೆಳೆಸಲು ನೆರವಾಗುತ್ತವೆ. ಮೊಬೈಲ್ ಬಳಕೆಯ ಮೇಲೆ ನಿಷೇಧ ಹೇರುವುದೇ ಆದರೆ, ಇಂಥ ಮಕ್ಕಳಿಗೆ ಯಾವ ಪರ್ಯಾಯಗಳಿವೆ ಎನ್ನುವುದನ್ನು ಪರಿಗಣಿಸಬೇಕಾಗುತ್ತದೆ.
ಮೌಲ್ಯಮಾಪನ ಕಷ್ಟ: ಇಂತಹ ನಿರ್ಬಂಧಗಳು ಎಷ್ಟು ಪರಿಣಾಮಕಾರಿ ಎಂಬುದನ್ನು ಮೌಲ್ಯಮಾಪನ ಮಾಡುವುದು ಕಷ್ಟ. ಬೇರೆಯವರೊಂದಿಗೆ ಸಂವಹನ, ಪ್ರಯಾಣ, ಬಿಲ್ ಪಾವತಿ ಸೇರಿದಂತೆ ವಿವಿಧ ಉದ್ದೇಶಗಳಿಗೆ ಮಕ್ಕಳು ಈಗ ಮೊಬೈಲ್ ಫೋನ್‌ಗಳನ್ನೇ ಅವಲಂಬಿಸಿರುವುದರಿಂದ ಮೊಬೈಲ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಅಥವಾ ನಿರ್ಬಂಧಿಸಲು ಸಾಧ್ಯವಿಲ್ಲ. ಒಂದು ವೇಳೆ ನಿರ್ಬಂಧ ಹೇರಿದರೆ ಮಕ್ಕಳು ಕಾನೂನುಬಾಹಿರವಾದ ಆ್ಯಪ್‌ಗಳು ಮತ್ತು ವಿಪಿಎನ್‌ಗಳ ಮೂಲಕ ನಿರ್ಬಂಧದ ನಿಯಮಗಳಿಂದ ತಪ್ಪಿಸಿಕೊಳ್ಳುವ ದಾರಿ ಹುಡುಕಬಹುದು. ಮಕ್ಕಳು ‘ಭೂಗತ’ರಾಗಿ ಮೊಬೈಲ್ ಬಳಸುವ ನಡವಳಿಕೆ ಬೆಳೆಸಿಕೊಳ್ಳಲು ಇದು ದಾರಿ ಮಾಡಬಹುದು. ಒಂದು ವೇಳೆ ಹಾಗಾದ ಪಕ್ಷದಲ್ಲಿ, ಮಕ್ಕಳು ಕದ್ದುಮುಚ್ಚಿ ಆನ್‌ಲೈನ್ ಬಳಸುವಾಗ ಕಹಿ ಅನುಭವ ಉಂಟಾದರೆ ಬೇರೆಯವರ ನೆರವು ಕೇಳುವುದಕ್ಕೂ ಅವರು ಹಿಂಜರಿಯಬಹುದು.
ಇಂತಹ ನಿಯಂತ್ರಣ ಕ್ರಮಗಳಿಂದ ಕೆಲವು ಕುಟುಂಬಗಳಿಗೆ ಮತ್ತು ಮಕ್ಕಳಿಗೆ ಅನುಕೂಲವಾಗಬಹುದು. ಆದರೆ, ಮೊಬೈಲ್ ಬಳಸುವ ಜನಸಂಖ್ಯೆಯ ಗಾತ್ರ ಎಷ್ಟು ದೊಡ್ಡದಾಗಿದೆ ಮತ್ತು ಕೈಗೊಂಡಿರುವ ಕ್ರಮಗಳು ಎಷ್ಟು ಪರಿಣಾಮಕಾರಿ ಎಂಬುದು ನಮಗೆ ಗೊತ್ತಿಲ್ಲ. ಕಠಿಣ ನಿರ್ಬಂಧದಿಂದಾಗಿ ಬೇರೆ ಮಕ್ಕಳು ಹೆಚ್ಚು ರಹಸ್ಯವಾಗಿ ಮತ್ತು ನಿಯಂತ್ರಣಕ್ಕೆ ಸಿಗದ ರೀತಿಯಲ್ಲಿ ಮೊಬೈಲ್ ಬಳಸಲು ಆರಂಭಿಸಬಹುದು. ಅಂತಹ ಪರಿಸ್ಥಿತಿ ನಿರ್ಮಾಣವಾದರೆ, ನಿರ್ಬಂಧದ ಉದ್ದೇಶ ಈಡೇರಿದಂತಾಯಿತೇ?
ನಿರ್ಬಂಧದ ನಿಯಮಗಳನ್ನು ಅನುಷ್ಠಾನಕ್ಕೆ ತರಲಾಯಿತು ಎಂದೇ ಇಟ್ಟುಕೊಳ್ಳಿ. ಮಕ್ಕಳಿಗೆ 16 ವರ್ಷ ವಯಸ್ಸು ಆದ ನಂತರ, ಅವರು ಆನ್‌ಲೈನ್ ವಾತಾವರಣದಲ್ಲಿ ತೊಡಗಿಕೊಳ್ಳಲು ಯಾವ್ಯಾವ ಕೌಶಲಗಳನ್ನು ಹೊಂದಿರಬೇಕು?
ಇತಿಹಾಸವನ್ನು ಗಮನಿಸಿದರೆ, ಮಾದಕ ವಸ್ತು, ಮದ್ಯ ಸೇವನೆ, ಅಸುರಕ್ಷಿತ ಲೈಂಗಿಕತೆ ಇತ್ಯಾದಿ ಸಾರ್ವಜನಿಕ ಆರೋಗ್ಯಕ್ಕೆ ಹಾನಿಕರವಾದ ಜನರ ನಡವಳಿಕೆಗಳ ಮೇಲೆ ನಿರ್ಬಂಧ ವಿಧಿಸಿದಾಗಲೆಲ್ಲ ಮಿಶ್ರ ಪರಿಣಾಮ ಕಂಡು ಬಂದಿದೆ. ಸಮಾಜ, ಜನರಿಗೆ ಆಗುವ ಹಾನಿಯನ್ನು ಕಡಿಮೆ ಮಾಡಲು ಕ್ರಮ ವಹಿಸಬೇಕು ಎಂಬ ಶಿಫಾರಸನ್ನು ತಜ್ಞರು ಪದೇ ಪದೇ ಮಾಡಿದ್ದಾರೆ. ಮಕ್ಕಳ ಮೊಬೈಲ್ ಬಳಕೆ ವಿಚಾರದಲ್ಲೂ ನಾವು ಅಂತಹದ್ದೇ ಮಾರ್ಗವನ್ನು ಅನುಸರಿಸಬೇಕು.
ಏನು ಮಾಡಬಹುದು?: ಮಕ್ಕಳು, ಪೋಷಕರಲ್ಲಿ ಡಿಜಿಟಲ್ ಸಾಕ್ಷರತೆಯನ್ನು ಹೆಚ್ಚಿಸಬೇಕು. ಅದಕ್ಕಾಗಿ ಮಕ್ಕಳು, ಪೋಷಕರು ಮತ್ತು ಶಾಲೆಗಳೊಂದಿಗೆ ಕೆಲಸ ಮಾಡಬೇಕು. ಅಂದರೆ, ಆನ್‌ಲೈನ್ ಜಗತ್ತಿನಲ್ಲಿ ಆರೋಗ್ಯಕರವಾಗಿ ಮತ್ತು ಸುರಕ್ಷಿತವಾಗಿ ತೊಡಗಲು ಮಾಹಿತಿ ಮತ್ತು ಪೂರಕ ಕೌಶಲಗಳ ಬಗ್ಗೆ ಅವರಲ್ಲಿ ಅರಿವು ಮೂಡಿಸಬೇಕು. ಮಕ್ಕಳ ಮೊಬೈಲ್ ಬಳಕೆಯನ್ನು ಸ್ವತಃ ಅವರೇ ನಿಯಂತ್ರಿಸಿಕೊಳ್ಳುವಂತಾಗಬೇಕು. ಅದಕ್ಕಾಗಿ ಮಕ್ಕಳ ವಯಸ್ಸಿಗೆ ಅನುಗುಣವಾಗಿ ಮಕ್ಕಳು ಮತ್ತು ಪೋಷಕರೊಂದಿಗೆ ನಿರಂತರವಾಗಿ ಸಂವಾದ ನಡೆಯುತ್ತಿರಬೇಕು. ಪೋಷಕರು–ಶಾಲೆಗಳ ನಡುವೆ ಸಂವಾದಕ್ಕೆ ಅವಕಾಶ ಕಲ್ಪಿಸುವ ಡಿಜಿಟಲ್ ಸಾಕ್ಷರತೆ ಅಭಿಯಾನ ಮತ್ತು ಜಾಗೃತಿ ಕಾರ್ಯಕ್ರಮಗಳು
ಕೌಶಲಗಳ ಕಲಿಕೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಿವೆ. ಭಾವನೆಗಳ ನಿಯಂತ್ರಣ, ಆರೋಗ್ಯಕರ ಸಂಹವನ, ಸಮಸ್ಯೆಗಳ ಬಗೆಹರಿಸುವಿಕೆ ಮತ್ತು ನೆರವನ್ನು ಕೇಳುವುದು ಮುಂತಾದ ಮನಸ್ಸಿನ ಆರೋಗ್ಯಕ್ಕೆ ಸಂಬಂಧಿಸಿದ ಮತ್ತು ಸ್ಥಿತಿಸ್ಥಾಪಕತ್ವ ಗುಣವನ್ನು ಬೆಳೆಸುವ ಕೌಶಲಗಳು ಕೂಡ ಬದಲಾವಣೆಗೆ ಭದ್ರ ಅಡಿಪಾಯವನ್ನು
ಹಾಕುತ್ತವೆ.
ತಂತ್ರಜ್ಞಾನ ಬಳಕೆಗೆ ಸಂಬಂಧಿಸಿದಂತೆ ಪೋಷಕರು ಮತ್ತು ಮಕ್ಕಳು ಒಟ್ಟಾಗಿ ಕುಳಿತು ಚರ್ಚಿಸಿ ನಿಯಮಗಳನ್ನು ರೂಪಿಸಬೇಕು. ಮಗುವಿನ ವಯಸ್ಸಿಗೆ ಅನುಗುಣವಾಗಿ ಪೋಷಕರು ರೂಪಿಸಿದ ಮೊಬೈಲ್ ಬಳಕೆ ನಿಯಂತ್ರಣ ನಿಯಮಗಳು ಹೆಚ್ಚು ಸೂಕ್ತವಾಗಬಹುದು. ಉದಾಹರಣೆಗೆ, ಅಂಬೆಗಾಲು ಹಾಕುತ್ತಿರುವ ಮಗು ಮೊಬೈಲ್ ನೋಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಬಹುದು. ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿರುವ ಮಗುವಿಗೆ, ಮೊಬೈಲ್‌ನಲ್ಲಿ ಯಾವುದನ್ನು ನೋಡಬಹುದು, ಯಾವುದನ್ನು ನೋಡಬಾರದು ಎಂಬುದರ ಬಗ್ಗೆ ಆ ಮಗುವಿನೊಂದಿಗೆ ಮುಕ್ತವಾಗಿ ಚರ್ಚೆ ನಡೆಸಿ ರೂಪಿಸಿರುವ ನಿಯಮಗಳು ಹೆಚ್ಚು ಸರಿಹೊಂದಬಹುದು. ಮಕ್ಕಳು ಮೊಬೈಲ್ ಬಳಸುತ್ತಿರುವುದರ ಮೇಲೆ ಪೋಷಕರು ನಿಗಾ ಇಟ್ಟು, ಅವರಿಗೆ ಮಾರ್ಗದರ್ಶನ ಮಾಡಿದರೆ ಮಕ್ಕಳು ಆರೋಗ್ಯಕರ ಹವ್ಯಾಸ ಮತ್ತು ಆನ್‌ಲೈನ್ ವಿಷಯಗಳ ಬಗ್ಗೆ ಹೆಚ್ಚು ವಿಮರ್ಶಾತ್ಮಕವಾಗಿ ಯೋಚಿಸಲು ಸಾಧ್ಯವಾಗುತ್ತದೆ.
ಹದಿಹರೆಯದ ಮಕ್ಕಳ ವಿಷಯಕ್ಕೆ ಬಂದರೆ, ಪೋಷಕರು ಮತ್ತು ಮಕ್ಕಳು ಒಟ್ಟಾಗಿ ಮೊಬೈಲ್ ಬಳಸುವುದು ಹೆಚ್ಚು ಸೂಕ್ತ. ಇಬ್ಬರೂ ಜೊತೆಯಾಗಿ ಮೊಬೈಲ್ ಮೂಲಕ ಆನ್‌ಲೈನ್ ಜಗತ್ತಿಗೆ ಪ್ರವೇಶ ಪಡೆಯುವುದರಿಂದ ಪ್ರಾಮಾಣಿಕ ಸಂವಹನಕ್ಕೆ ಹೆಚ್ಚು ಅವಕಾಶ ಸಿಗುತ್ತದೆ. ವಯಸ್ಕ ಮಕ್ಕಳೊಂದಿಗೆ ಮುಕ್ತ ಮತ್ತು ನಂಬಿಕಾರ್ಹವಾದ ಸಂಬಂಧವನ್ನು ಇರಿಸಿಕೊಳ್ಳುವುದು ಕೂಡ ಅವರು ಅಪಾಯಕಾರಿಯಾದ ಆನ್‌ಲೈನ್ ಚಟುವಟಿಕೆಗಳಲ್ಲಿ ಸಿಲುಕಿಕೊಳ್ಳುವುದರಿಂದ ಮತ್ತು ಅನಾರೋಗ್ಯಕರವಾಗಿ ಮೊಬೈಲ್ ಬಳಕೆ ಮಾಡುವುದರಿಂದ ತಪ್ಪಿಸಬಹುದು.
ಇದರ ಸಾಕಾರಕ್ಕೆ ಸರ್ಕಾರದ ವಿವಿಧ ಇಲಾಖೆಗಳ ಗಮನಾರ್ಹವಾದ ಪ್ರಯತ್ನದ ಅಗತ್ಯವಿದೆ. ಅದಕ್ಕಾಗಿ ಹಲವು ಪಾಲುದಾರರು ಕೂಡ ಈ ಪ್ರಯತ್ನದಲ್ಲಿ ಭಾಗಿಗಳಾಗಬೇಕು. ದೀರ್ಘ ಅವಧಿಗೆ ದೊಡ್ಡ ಮೊತ್ತದ ಹಣಕಾಸು ಮತ್ತು ಮಾನವ ಸಂಪನ್ಮೂಲ ಬೇಕಾಗುತ್ತದೆ. ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ಮಕ್ಕಳಿಗೆ ಮೊಬೈಲ್‌ಯೇತರ, ಸುರಕ್ಷಿತ ಮತ್ತು ಆರೋಗ್ಯಕರವಾದ ಪರ್ಯಾಯ ಚಟುವಟಿಕೆಗಳೂ ಲಭ್ಯವಿರುವಂತೆ ನೋಡಿಕೊಳ್ಳಬೇಕಾಗುತ್ತದೆ.
ಲೇಖಕ: ನಿಮ್ಹಾನ್ಸ್‌ನ ಸರ್ವಿಸ್ ಫಾರ್ ಹೆಲ್ದಿ ಯೂಸ್ ಆಫ್ ಟೆಕ್ನಾಲಜಿ (ಶಟ್) ಕ್ಲಿನಿಕ್ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.