
ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನೆಯನ್ನು ಪರಾಮರ್ಶೆಗೆ ಒಳಪಡಿಸಿರುವ ಸಿವಿಕ್ ಸಂಸ್ಥೆ, ‘ನಮ್ಮ ಸರ್ಕಾರ, ನಮ್ಮ ರಿಪೋರ್ಟ್ ಕಾರ್ಡ್’ ಎಂಬ ವರದಿಯನ್ನು ಅಕ್ಟೋಬರ್ 30ರಂದು ಬಿಡುಗಡೆ ಮಾಡಿದೆ. ಚುನಾವಣೆಗೂ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಗಳನ್ನು ಆಧರಿಸಿ, ಎರಡು ವರ್ಷಗಳಲ್ಲಿ ಎಷ್ಟು ಆಶ್ವಾಸನೆಗಳನ್ನು ಈಡೇರಿಸಿದೆ ಎಂಬುದನ್ನು ಅದು ಲೆಕ್ಕ ಹಾಕಿದೆ. ‘ಇದು ಸರ್ಕಾರದ ಕಾರ್ಯವೈಖರಿಯ ಬಗ್ಗೆ ನಾಗರಿಕರ ವಿಮರ್ಶೆ’ ಎಂದು ಸಂಸ್ಥೆ ಪ್ರತಿಪಾದಿಸಿದೆ.
ಕಾಂಗ್ರೆಸ್ ಪಕ್ಷವು 2023ರ ವಿಧಾನಸಭಾ ಚುನಾವಣೆಗೂ ಮುನ್ನ ನೀಡಿದ್ದ ಪ್ರಮುಖ 134 ಭರವಸೆಗಳ ಪೈಕಿ, ಅಧಿಕಾರಕ್ಕೆ ಬಂದ ಮೊದಲ ಎರಡು ವರ್ಷಗಳಲ್ಲಿ ಕೇವಲ ಒಂಬತ್ತನ್ನಷ್ಟೇ ಈಡೇರಿಸಿದೆ. ಪ್ರಮುಖ ಘೋಷಣೆಯಾದ ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿದ್ದನ್ನು ಬಿಟ್ಟರೆ, ಶಿಕ್ಷಣ, ಆರೋಗ್ಯ, ಪರಿಸರ, ನಗರಾಭಿವೃದ್ಧಿ, ಬೆಂಗಳೂರು ಅಭಿವೃದ್ಧಿ , ಕಾರ್ಮಿಕರು, ಆಡಳಿತದಂತಹ ಪ್ರಮುಖ ಕ್ಷೇತ್ರಗಳಲ್ಲಿ ಅದರ ಸಾಧನೆಯ ಶೇಕಡವಾರು ಪ್ರಮಾಣ (ಶೇ 6.7) ಎರಡು ಅಂಕಿಯನ್ನೂ ದಾಟಿಲ್ಲ. ಈ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಸರ್ಕಾರದ ಸಾಧನೆ ಶೂನ್ಯ.
– ಇವು ಬೆಂಗಳೂರಿನ ಸಿವಿಕ್ ಸಂಸ್ಥೆ ನೀಡಿರುವ ವರದಿಯ ಮುಖ್ಯ ಅಂಶಗಳು.
ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನೆಯನ್ನು ಪರಾಮರ್ಶೆಗೆ ಒಳಪಡಿಸಿರುವ ಸಂಸ್ಥೆ, ‘ನಮ್ಮ ಸರ್ಕಾರ, ನಮ್ಮ ರಿಪೋರ್ಟ್ ಕಾರ್ಡ್’ ಎಂಬ ವರದಿಯನ್ನು ಅಕ್ಟೋಬರ್ 30ರಂದು ಬಿಡುಗಡೆ ಮಾಡಿದೆ. ಚುನಾವಣೆಗೂ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಗಳನ್ನು ಆಧರಿಸಿ, ಎರಡು ವರ್ಷಗಳಲ್ಲಿ ಎಷ್ಟು ಆಶ್ವಾಸನೆಗಳನ್ನು ಈಡೇರಿಸಿದೆ ಎಂಬುದನ್ನು ಅದು ಲೆಕ್ಕ ಹಾಕಿದೆ. ‘ಇದು ಸರ್ಕಾರದ ಕಾರ್ಯವೈಖರಿಯ ಬಗ್ಗೆ ನಾಗರಿಕರ ವಿಮರ್ಶೆ’ ಎಂದು ಸಂಸ್ಥೆ ಪ್ರತಿಪಾದಿಸಿದೆ.
ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿ, ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಉತ್ತರಗಳ ಆಧಾರದಲ್ಲಿ 8 ಪ್ರಮುಖ ಕ್ಷೇತ್ರಗಳಲ್ಲಿ ನೀಡಲಾದ 134 ಭರವಸೆಗಳ ಸ್ಥಿತಿಗತಿಯನ್ನು ವರದಿಯಲ್ಲಿ ಅವಲೋಕಿಸಲಾಗಿದೆ. ಶಿಕ್ಷಣ, ಆರೋಗ್ಯ, ಪರಿಸರ, ನಗರಾಭಿವೃದ್ಧಿ, ಬೆಂಗಳೂರು, ಕಾರ್ಮಿಕ, ಆಡಳಿತ ಮತ್ತು 5 ಗ್ಯಾರಂಟಿ ಯೋಜನೆಗಳು. ಈ ಎಂಟು ಕ್ಷೇತ್ರಗಳಲ್ಲಿ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಕುರಿತು ವಿಸ್ತೃತ ವಿಶ್ಲೇಷಣೆಯನ್ನೂ ವರದಿ ಒಳಗೊಂಡಿದೆ. ಪ್ರಗತಿಯಲ್ಲಿರುವ ಯೋಜನೆಗಳು, ಇನ್ನೂ ಆರಂಭವಾಗದ ಯೋಜನೆಗಳ ಬಗ್ಗೆಯೂ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
ಐದು ಗ್ಯಾರಂಟಿಗಳನ್ನು ಹೊರತುಪಡಿಸಿ, ಇತರ ಏಳು ಪ್ರಮುಖ ಕ್ಷೇತ್ರಗಳಲ್ಲಿ ನೀಡಲಾಗಿದ್ದ 129 ಭರವಸೆಗಳಲ್ಲಿ 4 ಮಾತ್ರ ಈಡೇರಿವೆ. ಭರವಸೆಗಳ ಸ್ಥಿತಿಗತಿಯನ್ನು ಪ್ರಶಂಸನೀಯ, ಗಮನಾರ್ಹ, ಪ್ರಗತಿಯಲ್ಲಿದೆ, ಸಮಸ್ಯಾತ್ಮಕ, ಪ್ರಶ್ನಾರ್ಹ, ಅಪಾಯಕಾರಿ ಎಂದು ವಿಂಗಡಿಸಲಾಗಿದೆ.
ಹಲವು ಪ್ರಮುಖ ಭರವಸೆಗಳಿಗೆ ಸಂಬಂಧಿಸಿದಂತೆ ಯಾವ ಕೆಲಸವೂ ಆರಂಭವಾಗಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಕಟ್ಟುನಿಟ್ಟಾದ ಸಮಯ ನಿಗದಿಪಡಿಸುವುದು, ಗಿಗ್ ಕಾರ್ಮಿಕರಿಗೆ ಕನಿಷ್ಠ ಗಂಟೆಗಳ ವೇತನ ಕಡ್ಡಾಯಗೊಳಿಸುವುದು, ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಕಾಯ್ದೆಯನ್ನು ಅನುಷ್ಠಾನಗೊಳಿಸುವುದು, ನಮ್ಮ ಮೆಟ್ರೊ, ಉಪನಗರ ರೈಲು ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳ ಸುಗಮ ಏಕೀಕರಣವನ್ನು ಖಚಿತಪಡಿಸುವುದು, ರಾಷ್ಟ್ರೀಯ ಹೆದ್ದಾರಿಗಳ ಉದ್ದಕ್ಕೂ ಪ್ರತಿ 100 ಕಿ.ಮೀ.ಗಳಲ್ಲಿ ಅಪಘಾತ ನಿರ್ವಹಣಾ ಕೇಂದ್ರಗಳನ್ನು ಸ್ಥಾಪಿಸುವುದು ಇಂತಹ ಹಲವು ಭರವಸೆಗಳು ಇನ್ನೂ ಕಾಗದದಲ್ಲೇ ಉಳಿದಿವೆ ಎಂದು ವರದಿ ಹೇಳಿದೆ.
ನಗರಾಭಿವೃದ್ಧಿಯಡಿಯಲ್ಲಿ ಶೇ 70ರಷ್ಟು ಭರವಸೆಗಳಿಗೆ ಸಂಬಂಧಿಸಿದಂತೆ ಅನುಷ್ಠಾನ ಪ್ರಕ್ರಿಯೆ ಶುರುವಾಗಿಲ್ಲ. ಆರೋಗ್ಯ ಮತ್ತು ಆಡಳಿತ ಕ್ಷೇತ್ರಗಳಲ್ಲಿ ಈ ಪ್ರಮಾಣ ತಲಾ ಶೇ 64.3ರಷ್ಟಿದೆ. ಗಣಿಗಾರಿಕೆ, ಪರಿಸರ ಮತ್ತು ಅರಣ್ಯ ಕ್ಷೇತ್ರದಲ್ಲಿ ನೀಡಿದ್ದ ಆಶ್ವಾಸನೆಗಳ ಪೈಕಿ ಶೇ 50ರಷ್ಟು ಪ್ರಗತಿಯಲ್ಲಿದೆ ಎಂದು ವರದಿ ವಿವರಿಸಿದೆ.
ವೈಫಲ್ಯಗಳ ಪಟ್ಟಿ
‘ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ಜನವಿರೋಧಿಯಾದ ಮೂರು ಕಾಯ್ದೆಗಳನ್ನು (ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಕಾಯ್ದೆ 2022, ಪ್ರಾಣಿವಧೆ ನಿಷೇಧ ಮತ್ತು ಪ್ರಾಣಿ ಸಂರಕ್ಷಣಾ ಕಾಯ್ದೆ 2020, ಭೂ ಸುಧಾರಣೆಗಳ ತಿದ್ದುಪಡಿ ಕಾಯ್ದೆ) ವಾಪಸ್ ಪಡೆಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದೂ ವರದಿ ಉಲ್ಲೇಖಿಸಿದೆ. ಜತೆಗೆ, ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸದೇ ಇರುವುದು ಕೂಡ ಸರ್ಕಾರದ ವೈಫಲ್ಯ’ ಎಂದು ವರದಿ ಹೇಳಿದೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ಪ್ರಕರಣ ಮತ್ತು ಧರ್ಮಸ್ಥಳದ ಎಸ್‌ಐಟಿ ತನಿಖೆಯನ್ನು ಸರ್ಕಾರ ಸರಿಯಾಗಿ ನಿಭಾಯಿಸಲಿಲ್ಲ ಎಂದು ವರದಿ ಹೇಳಿದೆ. ನೆಲಮಂಗಲದಲ್ಲಿ ಶಾಸಕರ ತರಬೇತಿಗೆ (2023) ಆಧ್ಯಾತ್ಮಿಕ ಮುಖಂಡರನ್ನು ಕರೆಸಲಾಗಿತ್ತು. ದ್ವೇಷ ಭಾಷಣ ಮಾಡಿದ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕ್ರಮ ಜರುಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎನ್ನುವುದನ್ನು ಉಲ್ಲೇಖಿಸಲಾಗಿದೆ.
ಎಸ್‌ಸಿ, ಎಸ್‌ಟಿಗೆ ಸೂಕ್ತ ಅನುದಾನ ನೀಡದೇ ಇದ್ದುದು, ಕುರುಬರನ್ನು ಎಸ್‌ಟಿ ಪಟ್ಟಿಗೆ ಸೇರಿಸಲು ಹೊರಟಿರುವುದು, ಹಿಂದಿನ ಸರ್ಕಾರ ವಾಪಸ್ ಪಡೆದಿದ್ದ ಮುಸ್ಲಿಮರ ಶೇ 4ರ ಮೀಸಲಾತಿಯನ್ನು ಮತ್ತೆ ನೀಡದೇ ಇದ್ದುದು ಸರ್ಕಾರದ ವೈಫಲ್ಯ ಎಂದಿದೆ.
ಬೆಂಗಳೂರು: ಗೊತ್ತು ಗುರಿ ಇಲ್ಲದ ಯೋಜನೆಗಳು
ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ 46 ಭರವಸೆಗಳನ್ನು ನೀಡಿತ್ತು. ಅದರಲ್ಲಿ ಇಲ್ಲಿಯವರೆಗೆ ಈಡೇರಿಸಿದ್ದು ಎರಡನ್ನು ಮಾತ್ರ (ಜಿಬಿಎ ಸ್ಥಾಪನೆ ಮತ್ತು ಮೆಟ್ರೊ ನಿಲ್ದಾಣಗಳಲ್ಲಿ ಇವಿ ಚಾರ್ಚಿಂಗ್ ಘಟಕಗಳ ಸ್ಥಾಪನೆ). ಉಳಿದ 44ರ ಪೈಕಿ ಶೇ 41.3ರಷ್ಟು ಭರವಸೆಗಳ ಅನುಷ್ಠಾನ ಪ್ರಗತಿಯಲ್ಲಿದೆ ಎಂದು ವರದಿ ಹೇಳಿದೆ.
ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಯೋಜನೆಗಳನ್ನು ಸರ್ಕಾರ ಘೋಷಿಸಿದ್ದರೂ ಅವು ಗೊಂದಲಕಾರಿಯಾಗಿವೆ. ಗುರಿಯಿಲ್ಲದ ಕಾರ್ಯಕ್ರಮಗಳು ಮತ್ತು ಸುಳ್ಳು ಭರವಸೆಗಳು ನಗರವನ್ನು ಹಾಳುಗೆಡಹುತ್ತಿರುವುದಲ್ಲದೆ, ಜನರ ಜೀವನದ ಗುಣಮಟ್ಟವೂ ಕುಸಿಯುವಂತೆ ಮಾಡುತ್ತಿದೆ ಎಂದು ಅದು ಹೇಳಿದೆ. ರಾಜಧಾನಿಯಲ್ಲಿ ಸರ್ಕಾರ ಕೈಗೆತ್ತಿಕೊಂಡಿರುವ ಯೋಜನೆಗಳನ್ನು ಪ್ರಶ್ನಾರ್ಥಕ, ಸಮಸ್ಯಾತ್ಮಕ ಮತ್ತು ಅಪಾಯಕಾರಿ ಎಂದು ವರದಿಯಲ್ಲಿ ವರ್ಗೀಕರಿಸಲಾಗಿದೆ.
ಸುರಂಗ ಮಾರ್ಗ ಸೇರಿದಂತೆ ದೊಡ್ಡ ಬಜೆಟ್ಟಿನ ಮೂಲಸೌಕರ್ಯ ಯೋಜನೆಗಳಿಂದ ಪರಿಸರಕ್ಕೆ ಆಗಲಿರುವ ಹಾನಿಯ ಬಗ್ಗೆ ವರದಿ ಕಳವಳ ವ್ಯಕ್ತಪಡಿಸಿದ್ದು, ಇವು ‘ಅಪಾಯಕಾರಿ’ ಯೋಜನೆಗಳು ಎಂದು ಕರೆದಿದೆ.
ಪ್ರಶ್ನಾರ್ಥಕ ಯೋಜನೆಗಳು
* ಪ್ರೀಮಿಯಂ ಫ್ಲೋರ್ ಏರಿಯಾ ಅನುಪಾತ
* ಸ್ವಾಧೀನಾನುಭ ಪ್ರಮಾಣ ಪತ್ರದಿಂದ (ಒಸಿ) ವಿನಾಯಿತಿ
* ಬಿ–ಖಾತಾದಿಂದ ಎ–ಖಾತಾಕ್ಕೆ ಪರಿವರ್ತನೆ
* ಅಕ್ರಮ ಬಡಾವಣೆಗಳು , ಅಕ್ರಮ ಕಟ್ಟಡಗಳು
ಸಮಸ್ಯಾತ್ಮಕ
* ಮಾಸ್ಟರ್‌ಪ್ಲಾನ್ ಪ್ರಗತಿಯಲ್ಲಿ ಕೊರತೆ
* ಪ್ರಜಾಸತ್ತಾತ್ಮಕ ವ್ಯವಸ್ಥೆ ಇಲ್ಲದಿರುವುದು (ಇದು ದುರಾಡಳಿತಕ್ಕೆ ಕಾರಣವಾಗುತ್ತಿದೆ)
* ಬಗೆಹರಿಯದ ಕಸದ ಸಮಸ್ಯೆ
* ಕಾನೂನು ಮತ್ತು ಆಡಳಿತದಲ್ಲಿನ ಕೊರತೆ:
– ಮೆಟ್ರೊಪಾಲಿಟನ್ ಯೋಜನಾ ಆಯೋಗ (ಎಂಪಿಸಿ) ಕಾರ್ಯರೂಪಕ್ಕೆ ಬಾರದಿರುವುದು
– ಅಸಾಂವಿಧಾನಿಕ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)
– ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಯಲ್ಲಿ (ಜಿಬಿಜಿಎ) ಗಂಭೀರ ನ್ಯೂನತೆಗಳು
– ಕಾಗದದಲ್ಲೇ ಉಳಿದ ಬೆಂಗಳೂರು ಮೆಟ್ರೊಪಾಲಿಟನ್ ರಸ್ತೆ ಸಾರಿಗೆ ಪ್ರಾಧಿಕಾರ (ಬಿಎಂಎಲ್‌ಟಿಎ)
ಅಪಾಯಕಾರಿ
* ಎತ್ತರಿಸಿದ ಕಾರಿಡಾರ್‌ಗಳು, ಸುರಂಗ ಮಾರ್ಗಗಳಂತಹ ಹೆಚ್ಚು ಯೋಜಿತವಲ್ಲದ ಮೆಗಾ ಯೋಜನೆಗಳ ಬಗೆಗಿನ ಒಲವು
* ದೂರದೃಷ್ಟಿ ಕೊರತೆಯಿಂದ ಸಾರ್ವಜನಿಕ ಸಾರಿಗೆ ಯೋಜನೆಗಳಾದ ಹೊರವಲಯ ರೈಲು ಯೋಜನೆ, ಮೆಟ್ರೊ, ಬಸ್ ಸೌಲಭ್ಯಗಳ ನಿರ್ಲಕ್ಷ್ಯ
* ಕಳಪೆ ಮೂಲಸೌಕರ್ಯಗಳು
* ಪರಿಸರದ ಮೇಲೆ ದಾಳಿ
– ಕೆರೆಗಳ ಬಫರ್ ವಲಯ ಗುರುತಿಸುವ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ಕೆಟಿಸಿಡಿಎ) ತಿದ್ದುಪಡಿ ಮಸೂದೆ–2025
– ರಾಜಕಾಲುವೆ ಬಫರ್ ವಲಯಕ್ಕೆ ಸಂಬಂಧಿಸಿದ ನಗರಾಭಿವೃದ್ಧಿ ಇಲಾಖೆಯ ಅಧಿಸೂಚನೆ
– ಲಾಲ್‌ಬಾಗ್, ಸ್ಯಾಂಕಿ ಕೆರೆ ಮತ್ತು ಇತರ ಕೆರೆಗಳಿಗೆ ಅಪಾಯ ತಂದೊಡ್ಡಲಿರುವ ಮೆಗಾ ಯೋಜನೆಗಳು
ಕೃಷಿ ಕ್ಷೇತ್ರ
ಸಕಾರಾತ್ಮಕ
* ₹5,000 ಕೋಟಿಯ ಪ್ರಕೃತಿ ವಿಕೋಪ ನಿಧಿಗೆ ಸಂಬಂಧಿಸಿದಂತೆ ಸರ್ಕಾರವು ಗಮನಾರ್ಹ ಸಾಧನೆ ಮಾಡಿದೆ
* ಕೇಂದ್ರ ಸರ್ಕಾರವು ವಿಳಂಬವಾಗಿ, ಕಡಿಮೆ ವಿಪತ್ತು ಪರಿಹಾರ ನಿಧಿ ಬಿಡುಗಡೆ ಮಾಡಿತು. ಆದಾಗ್ಯೂ ರಾಜ್ಯ ಸರ್ಕಾರವು 2023–24ನೇ ಸಾಲಿನಲ್ಲಿ ತನ್ನ ಸ್ವಂತ ಸಂಪನ್ಮೂಲದಿಂದ 38.78 ಲಕ್ಷ ರೈತರಿಗೆ ಬರ ಪರಿಹಾರಕ್ಕಾಗಿ ₹4,047 ಕೋಟಿ ವ್ಯಯಿಸಿದೆ
* ನಮ್ಮ ಸಿರಿಧಾನ್ಯ ಯೋಜನೆ, ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ-2.0, ಕಿಸಾನ್ ಮಾಲ್‌ಗಳು, ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಹೂಗಾರಿಕೆ ಮಾರುಕಟ್ಟೆಯಂಥ ಹಲವಾರು ಮುಂದಾಲೋಚನೆಯ ಉಪಕ್ರಮಗಳನ್ನು ಸರ್ಕಾರ ಕೈಗೊಂಡಿದ್ದು, ಇವು ರಚನಾತ್ಮಕ ಹೆಜ್ಜೆಗಳಾಗಿವೆ
* ಉಪಗ್ರಹ ಮತ್ತು ಎಐ ತಂತ್ರಜ್ಞಾನದ ನೆರವಿನಿಂದ 41 ತಾಲ್ಲೂಕುಗಳ ಅಂತರ್ಜಲ, ಕೆರೆ, ಕುಂಟೆ, ಜಲಮೂಲಗಳ ನಿರ್ವಹಣೆ
* ನೀರಾವರಿಗಾಗಿ ಬಜೆಟ್‌ನಲ್ಲಿ ಶೇ 5.8ರಷ್ಟು ಅನುದಾನ ಮೀಸಲಿಡಲಾಗಿದ್ದು, ಇದು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ
* ಕನಿಷ್ಠ ಬೆಂಬಲ ಬೆಲೆ ಗ್ಯಾರಂಟಿ ಯೋಜನೆ; 14 ಮುಂಗಾರು ಮತ್ತು 11 ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಕಾರ್ಯ ಪ್ರಗತಿಯಲ್ಲಿ.
* 2024–25ರ ಬಜೆಟ್‌ನಲ್ಲಿ ಕೃಷಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಆಹಾರ ಸಂಸ್ಕರಣೆ ನಿರ್ದೇಶನಾಲಯ ರಚಿಸುವುದಾಗಿ ಘೋಷಿಸಲಾಗಿದೆ
ನಕಾರಾತ್ಮಕ
* ಹಿಂದಿನ ಸರ್ಕಾರ ಜಾರಿಗೊಳಿಸಿದ್ದ ಕೃಷಿಗೆ ಸಂಬಂಧಿಸಿದ (ಕಾರ್ಪೊರೇಟ್ ಕ್ಷೇತ್ರಕ್ಕೆ ನೆರವಾಗುವ ಕರ್ನಾಟಕ ಭೂಸುಧಾರಣಾ ಕಾಯ್ದೆ–2020ರಂಥ) ಕಾಯ್ದೆಗಳನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆದಿಲ್ಲ.
ಕೈಗಾರಿಕಾ ಯೋಜನೆಗಳಿಗಾಗಿ 1,700 ಎಕರೆಗಳಿಗೂ ಹೆಚ್ಚು ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು, ಎರಡು ಎಕರೆವರೆಗೆ ಭೂಮಿಯನ್ನು ರೈತರು ಮಾರಬಹುದು ಎಂದು ನಿಯಮ ಮಾಡಿರುವುದು
* ರೈತರ ವಿರೋಧದ ನಡುವೆಯೂ ಬಿಡದಿಯ ಎಐ ಟೌನ್‌ಶಿಪ್ ಮತ್ತು ಬೆಂಗಳೂರು ಬ್ಯುಸಿನೆಸ್ ಕಾರಿಡಾರ್‌ಗಾಗಿ ಭೂಸ್ವಾಧೀನಕ್ಕೆ ಮುಂದಾಗಿರುವುದು
* ಕಾರ್ಪೊರೇಟ್, ಉದ್ಯಮಿಗಳು, ರಿಯಲ್ ಎಸ್ಟೇಟ್‌ನವರ ಹಿತಾಸಕ್ತಿಗಾಗಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವ ಮೂಲಕ ರೈತರ ಹಿತಾಸಕ್ತಿ ಮತ್ತು ಹಕ್ಕುಗಳ ದಮನ
* ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸರ್ಕಾರದ ನೀತಿಗಳು ದ್ವಂದ್ವದಿಂದ ಕೂಡಿವೆ
* ಸರ್ಕಾರವು ಕೃಷಿಗೆ ಭೂಮಿ ಪರಿಹಾರ ನೀಡುವಾಗ ರೈತರಿಗೆ ಹೆಚ್ಚು ಪರಿಹಾರ ಸಿಗಲು ನೆರವಾಗುವ ಭೂಸ್ವಾಧೀನ ಕಾಯ್ದೆ–2013ರ ಬದಲು ಬಿಡಿಎ ಕಾಯ್ದೆಯಂಥ ಹಳೆಯ ಕಾಯ್ದೆಗಳನ್ನು ಅನುಸರಿಸುತ್ತಿದೆ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
ಸಕಾರಾತ್ಮಕ
* ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತ್ ತೆರಿಗೆ, ದರ ಮತ್ತು ಶುಲ್ಕ) ನಿಯಮಗಳು) ಕಾಯ್ದೆಯನ್ನು (2025) ಅಧಿಸೂಚಿಸಲಾಗಿದೆ. ಪಂಚಾಯತ್‌ಗಳಲ್ಲಿ ತೆರಿಗೆ ಸಂಗ್ರಹವನ್ನು ಹೆಚ್ಚಿಸಲು ಇದು ಸಹಾಯಕವಾಗಿದೆ
* ಮನರೇಗಾದ ಮಾರ್ಗಸೂಚಿಗಳನ್ನು ಸಡಿಲಿಸುವ ಬಗ್ಗೆ (ಮುಖ್ಯವಾಗಿ, ಮಾನವ ದಿನಗಳ ಮಿತಿಯನ್ನು 100ರಿಂದ 150ಕ್ಕೆ ಹೆಚ್ಚಿಸಲು) 2025ರ ಜನವರಿಯಲ್ಲಿ ಕರ್ನಾಟಕವು ಕೇಂದ್ರಕ್ಕೆ ಸಲಹೆ ನೀಡಿದೆ. ಈ ಕುರಿತ ಪ್ರತಿಕ್ರಿಯೆಯ ನಿರೀಕ್ಷೆ ಇದೆ.
ನಕಾರಾತ್ಮಕ
* ರಾಜ್ಯ ಸರ್ಕಾರದ ಸಾಲ ಮತ್ತು ವಿತ್ತೀಯ ಕೊರತೆ ಹೆಚ್ಚಾಗುತ್ತಿದ್ದು, ಬಂಡವಾಳ ವೆಚ್ಚದಲ್ಲಿ ₹5,000 ಕೋಟಿ ಕಡಿತಗೊಳಿಸಲಾಗಿದೆ. ದೀರ್ಘಾವಧಿಯಲ್ಲಿ ಇದು ರಾಜ್ಯದ ಅಭಿವೃದ್ಧಿ ಮೇಲೆ ಪರಿಣಾಮ ಬೀರಲಿದೆ
* ಸರ್ಕಾರವು ಗ್ರಾಮ ಪಂಚಾಯ್ತಿಗಳಿಗೆ ಗುಣಮಟ್ಟದ ಇಂಟರ್ನೆಟ್ ಸೌಲಭ್ಯ ಕಲ್ಪಿಸುವಲ್ಲಿ ವಿಫಲವಾಗಿದ್ದು, ಅದರಿಂದ ಅಭಿವೃದ್ಧಿ ಕಾರ್ಯಗಳ ಅನುಷ್ಠಾನ, ಮನರೇಗಾ, ಪಾವತಿ ವ್ಯವಸ್ಥೆಗಳಿಗೆ ತೊಂದರೆ ಉಂಟಾಗಿದೆ
* ಮನರೇಗಾದಲ್ಲಿ ವ್ಯಾಪಕ ಅವ್ಯವಹಾರ ಕಂಡುಬಂದಿದ್ದರೂ, ಸೋರಿಕೆಯಾದ ಹಣ ವಸೂಲು ಮಾಡುವಲ್ಲಿ ಅಲ್ಪ ಪ್ರಗತಿ
ಪ್ರಾಥಮಿಕ ಶಿಕ್ಷಣ
ಸಕಾರಾತ್ಮಕ
* 9 ಮತ್ತು 10ನೇ ತರಗತಿ ಮಕ್ಕಳಿಗೂ ಮೊಟ್ಟೆ/ಚಿಕ್ಕಿ/ಬಾಳೆಹಣ್ಣು ನೀಡುತ್ತಿರುವುದು; ವಾರದಲ್ಲಿ ಆರು ದಿನ ಮೊಟ್ಟೆ/ಬಾಳೆ ಹಣ್ಣು ನೀಡುವ ನಿರ್ಧಾರ
* ಎಲ್ಲ ಸರ್ಕಾರಿ ಶಾಲೆಗಳಿಗೂ ಉಚಿತ ನೀರು ಮತ್ತು ವಿದ್ಯುತ್ ಪೂರೈಕೆ
* ರಾಷ್ಟ್ರೀಯ ಶಿಕ್ಷಣ ನೀತಿ ತಿರಸ್ಕರಿಸಿ ರಾಜ್ಯ ಶಿಕ್ಷಣ ನೀತಿ ರೂಪಿಸುವ ಪ್ರಯತ್ನ
ನಕಾರಾತ್ಮಕ
* ಒಂದು ವರ್ಷದೊಳಗೆ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತುಂಬಲಾಗುವುದು ಎಂದು ನೀಡಿದ್ದ ಭರವಸೆ ಈಡೇರಿಲ್ಲ. ಪ್ರಾಥಮಿಕ ಶಾಲೆಗಳಲ್ಲಿ 50,388 ಹುದ್ದೆಗಳು, ಮಾಧ್ಯಮಿಕ ಶಾಲೆಗಳಲ್ಲಿ 12,262 ಹುದ್ದೆಗಳು ಖಾಲಿ ಇವೆ
* ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ (ಆರ್‌ಟಿಇ) 2009ರ ಪರಿಣಾಮಕಾರಿ ಅನುಷ್ಠಾನಕ್ಕಾಗಿ ನೀಲನಕ್ಷೆ ರೂಪಿಸುವಲ್ಲಿ ವಿಫಲ
* ಸಾವಿರಾರು ಮಕ್ಕಳು ಈಗಲೂ ಶಾಲೆಯ ಹೊರಗೆ ಇದ್ದಾರೆ. ಆರ್‌ಟಿಇ ಕಾಯ್ದೆಯಂತೆ, ಒಟ್ಟು ಮಕ್ಕಳ ದತ್ತಾಂಶವು ಲಭ್ಯವಿಲ್ಲ
2023–24ನೇ ಸಾಲಿನಲ್ಲಿ ರಾಜ್ಯ ಸರ್ಕಾರವು ಶಿಕ್ಷಣಕ್ಕೆ ಬಜೆಟ್‌ನ ಶೇ 11.4ರಷ್ಟು ಮೊತ್ತ ಮೀಸಲಿಟ್ಟಿತ್ತು. ಇತರೆ ಎಲ್ಲ ರಾಜ್ಯಗಳಲ್ಲಿ ಈ ಪ್ರಮಾಣವು ಶೇ 14 ಆಗಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.