ADVERTISEMENT

ಆಳ–ಅಗಲ | ಸೈಬರ್ ಅಪರಾಧಗಳು: ವಿದೇಶಿ ನೆಲ, ಅನೂಹ್ಯ ಜಾಲ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 22:30 IST
Last Updated 21 ಡಿಸೆಂಬರ್ 2025, 22:30 IST
   
ದೇಶದಲ್ಲಿ ಡಿಜಿಟಲ್ ವಂಚನೆ ಪ್ರಕರಣಗಳು ವಿಪರೀತ ಹೆಚ್ಚಳವಾಗಿವೆ. ಈ ಸೈಬರ್ ಕಳ್ಳರದ್ದು ಅಂತರರಾಜ್ಯ ಜಾಲ. ದೇಶದ ಕೆಲವು ಜಿಲ್ಲೆಗಳು ಡಿಜಿಟಲ್ ವಂಚಕರಿಂದ ಕುಖ್ಯಾತಿ ಗಳಿಸಿವೆ. ಕುಗ್ರಾಮಗಳ ಅರೆಶಿಕ್ಷಿತರು, ಅಶಿಕ್ಷಿತರು ದೂರದ ನಗರ/ಪಟ್ಟಣಗಳಲ್ಲಿರುವ ಜನರ ಖಾತೆಗಳಿಂದ ಕೋಟ್ಯಂತರ ರೂಪಾಯಿಗಳನ್ನು ದೋಚುತ್ತಿದ್ದಾರೆ. ಚೀನಾ, ಮ್ಯಾನ್ಮಾರ್‌ನಂಥ ರಾಷ್ಟ್ರಗಳ ವಂಚಕರ ಜಾಲಗಳೂ ಭಾರತದಲ್ಲಿ ಡಿಜಿಟಲ್ ವಂಚನೆಯಲ್ಲಿ ತೊಡಗಿವೆ. ಭಾರತೀಯರನ್ನು ಉದ್ಯೋಗದ ಆಮಿಷ ಒಡ್ಡಿ ಕರೆಸಿಕೊಂಡು ಅವರನ್ನು ಸೈಬರ್ ಗುಲಾಮರನ್ನಾಗಿ ಮಾಡಿಕೊಂಡು ಅಕ್ರಮಗಳಿಗೆ ಬಳಸುವ ಜಾಲಗಳು ಆಗ್ನೇಯ ಏಷ್ಯಾದಲ್ಲಿ ಸಕ್ರಿಯವಾಗಿವೆ

ದೇಶದಲ್ಲಿ 2021ರಿಂದ 2023ರ ನಡುವೆ ಡಿಜಿಟಲ್ ವಂಚನೆ ಪ್ರಕರಣಗಳು ಶೇ 60ರಷ್ಟು ಹೆಚ್ಚಾಗಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ದತ್ತಾಂಶ ಉಲ್ಲೇಖಿಸಿ ಕೇಂದ್ರ ಸರ್ಕಾರ ಹೇಳಿದೆ. ಈ ಪೈಕಿ ಆರ್ಥಿಕ ವಂಚನೆಗಳ ಪ್ರಮಾಣವು (ಶೇ 39) ಅಧಿಕವಾಗಿದೆ. ಕರ್ನಾಟಕವು ಸೈಬರ್ ಅಪರಾಧ ಪ್ರಕರಣಗಳಲ್ಲಿ ಮುಂಚೂಣಿಯಲ್ಲಿದ್ದರೆ, ಅದರ ನಂತರದ ಸ್ಥಾನದಗಳಲ್ಲಿ ತೆಲಂಗಾಣ, ಉತ್ತರ ಪ್ರದೇಶ ಇವೆ.

ಸೈಬರ್ ಪೊಲೀಸರು ದೇಶದಾದ್ಯಂತ ವಂಚಕರ ಪತ್ತೆಗೆ ‍ಪ್ರಯತ್ತಿಸುತ್ತಲೇ ಇದ್ದಾರೆ. ಆದರೆ, ಇದೊಂದು ಬೃಹತ್ ಜಾಲವಾಗಿದ್ದು, ಅತ್ಯಂತ ಕ್ಷಿಪ್ರವಾಗಿ ವ್ಯಾಪಿಸುತ್ತಿದೆ. ಡಿಜಿಟಲ್ ವಂಚನೆಗೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳವು (ಸಿಬಿಐ) ಡಿಸೆಂಬರ್ 14ರಂದು 17 ಮಂದಿಯ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದೆ. 111 ನಕಲಿ (ಶೆಲ್) ಕಂಪನಿಗಳು ಈ ಪಟ್ಟಿಯಲ್ಲಿವೆ. ಇವು ಭಾರತೀಯರ ₹1,000 ಕೋಟಿಗೂ ಹೆಚ್ಚು ಮೊತ್ತವನ್ನು ಕೊಳ್ಳೆ ಹೊಡೆದಿವೆ. ನಾಲ್ವರು ಚೀನಾ ಪ್ರಜೆಗಳು ಕೂಡ ವಂಚಕರ ಪಟ್ಟಿಯಲ್ಲಿದ್ದಾರೆ. ಇದೊಂದು ಅಂತರರಾಷ್ಟ್ರೀಯ ಜಾಲ ಎನ್ನುವುದಕ್ಕೆ ಇಂಥ ಹಲವು ನಿದರ್ಶನಗಳು ಪೊಲೀಸರಿಗೆ ಲಭ್ಯವಾಗಿವೆ. ನಕಲಿ ನಿರ್ದೇಶಕರು, ತಪ್ಪು ವಿಳಾಸ, ತಿರುಚಿದ ದಾಖಲೆಗಳ ಮೂಲಕ ಶೆಲ್ ಕಂಪನಿಗಳನ್ನು ಆರಂಭಿಸಿರುವುದು ತನಿಖೆಯ ವೇಳೆ ಪತ್ತೆಯಾಗಿದೆ.  ದೆಹಲಿಯಲ್ಲಿ ವಂಚಕರು ಸುಸಜ್ಜಿತ ಕಾಲ್ ಸೆಂಟರ್‌ಗಳನ್ನು ನಡೆಸುತ್ತಿದ್ದುದು ಪತ್ತೆಯಾಗಿದೆ. 

ಸೈಬರ್ ಕಳ್ಳರು 2024ರಲ್ಲಿ ಹೀಗೆ ದೋಚಿದ ಹಣ ₹22,845 ಕೋಟಿ. ಇಷ್ಟೊಂದು ಬೃಹತ್ ಪ್ರಮಾಣದ ಹಣ ಎಲ್ಲಿ ಹೋಗುತ್ತಿದೆ, ಸೈಬರ್ ವಂಚನೆ ಮಾಡುವವರು ಯಾರು, ಬ್ಯಾಂಕ್ ಖಾತೆಗಳ ಮೂಲಕ ಅವರನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲವೇ ಎನ್ನುವಂಥ ಪ್ರಶ್ನೆಗಳು ಮೂಡುವುದು ಸಹಜ.

ADVERTISEMENT

ತಂತ್ರಜ್ಞಾನ ಮುಂದುವರಿದಿದ್ದರೂ ಬ್ಯಾಂಕಿಂಗ್ ವ್ಯವಸ್ಥೆ ಸರ್ಕಾರದ ಸ್ವಾಧೀನದಲ್ಲಿ ಇದ್ದರೂ ಡಿಜಿಟಲ್ ವಂಚನೆಗಳನ್ನು ತಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿರುವುದು ಅತ್ಯಲ್ಪ ಮಾತ್ರವೇ. ಇದಕ್ಕೆ ಸೈಬರ್ ಕಳ್ಳತನಗಳ ಸಂಕೀರ್ಣ ಮಾರ್ಗವೇ ಕಾರಣ ಎನ್ನಲಾಗುತ್ತಿದೆ.

ಬ್ಯಾಂಕ್‌ಗಳ ಮೂಲಕ ಅಕ್ರಮ ವ್ಯವಹಾರ 

ಮೊಬೈಲ್ ಸಿಮ್ ಕಾರ್ಡ್‌ಗಳು ಮತ್ತು ಬ್ಯಾಂಕ್ ಖಾತೆಗಳು ಡಿಜಿಟಲ್ ವಂಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ನಕಲಿ ದಾಖಲೆಗಳ ಮೂಲಕ ಸಿಮ್ ಕಾರ್ಡ್‌ಗಳನ್ನು ಪಡೆದು ಅವುಗಳನ್ನು ಅಕ್ರಮಕ್ಕೆ ಬಳಸಲಾಗುತ್ತಿದೆ. 2024-25ರ ನಡುವೆ ಸೈಬರ್ ವಂಚನೆಗೆ ಬಳಕೆಯಾಗುತ್ತಿದ್ದ 9.6 ಲಕ್ಷ ಸಿಮ್ ಕಾರ್ಡ್‌ಗಳನ್ನು ನಿರ್ಬಂಧಿಸಲಾಗಿದೆ.

ಬ್ಯಾಂಕ್ ಖಾತೆಗಳದ್ದೂ ಇದೇ ಕಥೆ. ಹಣ ಅಕ್ರಮ ವರ್ಗಾವಣೆಗೆ ಲಕ್ಷಾಂತರ ಬ್ಯಾಂಕ್ ಖಾತೆಗಳು (ಮ್ಯೂಲ್‌ ಅಕೌಂಟ್ಸ್) ಬಳಕೆಯಾಗುತ್ತಿವೆ. ಭಾರತದ ಸೈಬರ್ ಅಪರಾಧಗಳ ಸಮನ್ವಯ ಕೇಂದ್ರದ (ಐ4ಸಿ) ಮಾಹಿತಿಯ ಪ್ರಕಾರ, ಪ್ರತಿ ನಿತ್ಯ ಇಂಥ 4000 ಖಾತೆಗಳು ಪತ್ತೆಯಾಗುತ್ತಿವೆ. ಸೈಬರ್ ವಂಚನೆಗೆ ಬಳಕೆಯಾಗುತ್ತಿದ್ದ 700 ಬ್ಯಾಂಕ್ ಶಾಖೆಗಳ ಇಂಥ 8,50,000 ಖಾತೆಗಳನ್ನು ಇತ್ತೀಚೆಗೆ ನಿರ್ಬಂಧಿಸಲಾಗಿದೆ. 

ಗ್ರಾಮೀಣ ಪ್ರದೇಶದ ಬ್ಯಾಂಕ್‌ಗಳನ್ನೇ ವಂಚಕರು ಹೆಚ್ಚು ಗುರಿ ಮಾಡುತ್ತಾರೆ. ಕೆವೈಸಿ ಆಗದೇ ಇರುವ ಇಲ್ಲವೇ ನಕಲಿ ದಾಖಲೆಗಳನ್ನು ಕೆವೈಸಿ ಮಾಡಲಾಗಿರುವ ಖಾತೆಗಳನ್ನು ಸೈಬರ್ ವಂಚಕರು ಬಳಸುತ್ತಾರೆ. ಇಲ್ಲವೇ ಹಣ ನೀಡಿ ಬೇರೊಬ್ಬರ ಖಾತೆಗಳನ್ನು ಬಳಸುತ್ತಾರೆ. ನಿಷ್ಕ್ರಿಯವಾಗಿರುವ ವೈಯಕ್ತಿಕ ಖಾತೆಗಳು, ಕಂಪನಿ/ಸಂಸ್ಥೆಗಳ ಖಾತೆಗಳೂ ವಂಚಕರಿಗೆ ಬಳಕೆಯಾಗುತ್ತಿವೆ. ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಕ್ಷೇತ್ರದ ಬ್ಯಾಂಕ್‌ಗಳೆರಡರಲ್ಲೂ ಇಂಥ ಖಾತೆಗಳು ಇರುವುದು ಪತ್ತೆಯಾಗಿದೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಇರುವ ಭ್ರಷ್ಟಾಚಾರದಂಥ ಹುಳುಕುಗಳನ್ನು ಬಳಸಿಕೊಂಡು ಅಕ್ರಮ ಎಸಗುತ್ತಿದ್ದಾರೆ.  

ವಂಚನೆಯ ಹಣ ಖಾತೆಗೆ ಬಂದು ಬೀಳುತ್ತಿದ್ದಂತೆಯೇ ಅದನ್ನು ಮತ್ತೊಂದು ಖಾತೆಗೆ ವರ್ಗಾಯಿಸುತ್ತಾರೆ. ಹೀಗೆ ಕೆಲವೇ ನಿಮಿಷಗಳಲ್ಲಿ ಹಣ ಹಲವು ಖಾತೆಗಳನ್ನು ಬದಲಾಯಿಸುತ್ತದೆ. ಕೊನೆಗೆ, ಯಾವುದೋ ಒಂದು ಖಾತೆಯಿಂದ ಹಣವನ್ನು ನಗದು ಮಾಡಿಕೊಳ್ಳುತ್ತಾರೆ. ಕ್ರಿಪ್ಟೊ ಕರೆನ್ಸಿ ಮತ್ತಿತರ ಮಾರ್ಗಗಳ ಮೂಲಕವೂ ಹಣ ಚಲಾವಣೆಯಾಗುತ್ತಿದೆ. ಬಹುತೇಕ ಸಂದರ್ಭಗಳಲ್ಲಿ, ವಂಚಕರು ಒಮ್ಮೆ ಬಳಸಿದ ಖಾತೆಯನ್ನು ಮತ್ತೊಮ್ಮೆ ಬಳಸುವುದಿಲ್ಲ. ಸೈಬರ್ ವಂಚನೆ ನಡೆದ ಕೆಲವೇ ಗಂಟೆಗಳ ಒಳಗೆ ದೂರು ದಾಖಲಿಸಿದರೆ, ವಂಚಕರನ್ನು ಪತ್ತೆ ಮಾಡುವುದು ಸುಲಭ ಎಂದು ಪೊಲೀಸರು ಹೇಳುತ್ತಾರೆ.     

ಸೈಬರ್ ವಂಚಕರಿಗೆ ಇಂಥ ಖಾತೆಗಳನ್ನು ಪೂರೈಸುವವರ ಜಾಲವೂ ಇದೆ. ಕಮಿಷನ್ ಆಧಾರದಲ್ಲಿ ಇಂಥ ಕೃತ್ಯಗಳಲ್ಲಿ ತೊಡಗಿದ್ದ ಮಧ್ಯಪ್ರದೇಶ, ಅಸ್ಸಾಂ ಮತ್ತು ಕರ್ನಾಟಕದ ಕಲಬುರಗಿಯ ಕೆಲವರು ಇತ್ತೀಚೆಗೆ ಪೊಲೀಸರ ಬಲೆಗೆ ಬಿದ್ದಿದ್ದರು.

ಕುಖ್ಯಾತಿ ಪಡೆದ ಜಿಲ್ಲೆಗಳು

ದೇಶದ ಕೇವಲ 10 ಜಿಲ್ಲೆಗಳಿಂದಲೇ ಶೇ 80ರಷ್ಟು ಸೈಬರ್ ಕಳ್ಳರು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಕಾನ್ಪುರ ಐಐಟಿ ನಡೆಸಿದ್ದ ಅಧ್ಯಯನದಲ್ಲಿ ಪತ್ತೆಯಾಗಿತ್ತು. ರಾಜಸ್ಥಾನದ ಭರತ್‌ಪುರ, ಅಲ್ವಾರ್, ಉತ್ತರ ಪ್ರದೇಶದ ಮಥುರಾ, ಜಾರ್ಖಂಡ್‌ನ ದೇವಗಢ, ಜಾಮ್‌ತಾಡ, ಬೊಕಾರೊ, ಗಿರಿಧ್, ಕರಮತಂಡ್, ಹರಿಯಾಣದ ಗುರುಗ್ರಾಮ್, ನುಹ್ (ಮೇವಾತ್) ಜಿಲ್ಲೆಗಳು ಸೈಬರ್ ಕಳ್ಳರ ನೆಲೆಗಳಾಗಿದ್ದವು. ಹೆಚ್ಚಿನ ವಂಚಕರು ಅರೆಶಿಕ್ಷಿತರು ಇಲ್ಲವೇ ಅಶಿಕ್ಷಿತರು. ಹೈಸ್ಕೂಲು, ಕಾಲೇಜು ತೊರೆದವರು ತಮ್ಮ ಡಿಜಿಟಲ್ ಜ್ಞಾನದಿಂದ ಅಲ್ಪಕಾಲದಲ್ಲಿಯೇ ಅಪಾರ ಸಂಪತ್ತು ಗಳಿಸಿದ್ದಾರೆ. ಅನೇಕರು ಭವ್ಯ ಮಹಲುಗಳನ್ನು ಕಟ್ಟಿಕೊಂಡಿದ್ದೂ ವರದಿಯಾಗಿವೆ.

ಪೊಲೀಸರು ನಿರ್ದಿಷ್ಟವಾಗಿ ಕಾರ್ಯಾಚರಣೆ ಆರಂಭಿಸಿದ್ದರಿಂದ ಇತ್ತೀಚೆಗೆ ಈ ಜಿಲ್ಲೆಗಳಲ್ಲಿ ಸೈಬರ್ ಕಳ್ಳರ ಸಂಖ್ಯೆ ಕಡಿಮೆಯಾಗಿದ್ದು, ಈ ರಾಜ್ಯಗಳ ಇತರೆ ಕೆಲ ಜಿಲ್ಲೆಗಳಲ್ಲಿ ಅವರ ಸಂಖ್ಯೆ ಹೆಚ್ಚಿದೆ. ಜತೆಗೆ, ಉತ್ತರ ಪ್ರದೇಶ, ಬಿಹಾರ, ದೆಹಲಿ, ಅಸ್ಸಾಂ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶದ ಕೆಲವು ಜಿಲ್ಲೆಗಳಲ್ಲಿಯೂ ಈ ಪ್ರವೃತ್ತಿ ಹೆಚ್ಚಾಗಿದೆ ಎನ್ನಲಾಗಿದೆ.

ಕಾರ್ಪೊರೇಟ್ ಶೈಲಿಯಲ್ಲಿ ಕಳ್ಳತನ

ಇತ್ತೀಚೆಗೆ ದೇಶದ ಒಳಗಿನ ಸೈಬರ್ ಕಳ್ಳರನ್ನು ವಿದೇಶಗಳ ಕಾರ್ಪೊರೇಟ್ ಶೈಲಿಯ ವಂಚಕರು ಮೀರಿಸಿದ್ದಾರೆ ಎನ್ನುವ ವರದಿಗಳಿವೆ. ಶೇ 46ರಷ್ಟು ಸೈಬರ್ ಅಪರಾಧಗಳಿಗೆ ವಿದೇಶಗಳಿಂದ ಕಾರ್ಪೊರೇಟ್ ಶೈಲಿಯಲ್ಲಿ ‌‌‌‌ಕಾರ್ಯಾಚರಿಸುತ್ತಿರುವ ವಂಚಕ ಜಾಲಗಳೇ ಕಾರಣ ಎನ್ನಲಾಗಿದೆ. ಆಗ್ನೇಯ ಏಷ್ಯಾದ ಮ್ಯಾನ್ಮಾರ್, ಕಾಂಬೋಡಿಯಾ, ಲಾವೋ ದೇಶಗಳು ಇದರಲ್ಲಿ ಮುಂಚೂಣಿಯಲ್ಲಿವೆ. 

ಈ ದೇಶಗಳು ಉದ್ಯೋಗದ ಭರವಸೆಯೊಂದಿಗೆ ಭಾರತದ ಯುವಕರನ್ನು ಸೆಳೆಯುತ್ತವೆ. ಉದ್ಯೋಗಕ್ಕೆ ಬಂದವರನ್ನು ದೊಡ್ಡ ಕಟ್ಟಡಗಳಲ್ಲಿ ಕೂಡಿಹಾಕಿ ದೈಹಿಕ, ಮಾನಸಿಕ ಚಿತ್ರಹಿಂಸೆ ನೀಡಿ, ಬಲವಂತದಿಂದ ಅವರನ್ನು ಸೈಬರ್ ಅಪರಾಧಗಳಿಗೆ ಬಳಸಲಾಗುತ್ತದೆ. ಇಂಥ ದೇಶಗಳಿಗೆ ಭಾರತದ ಯುವಕರನ್ನು ಪೂರೈಸುವ ಭಾರತದ ಏಜೆಂಟರ ಜಾಲವನ್ನು ಭೇದಿಸಿದ್ದ ಸಿಬಿಐ ಇತ್ತೀಚೆಗೆ 13 ಮಂದಿ ವಂಚಕರ ವಿರುದ್ಧ ದೋಷಾರೋಪ ಪಟ್ಟಿ ದಾಖಲಿಸಿದೆ. ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ‘ಸೈಬರ್ ಗುಲಾಮ’ರಾಗಿ ಕೆಲಸ ಮಾಡುತ್ತಿದ್ದ ಇಂಥ 6,700 ಭಾರತೀಯರನ್ನು ರಕ್ಷಿಸಲಾಗಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ (ಡಿಸೆಂಬರ್, 11) ತಿಳಿಸಿದೆ.

ಆಧಾರ: ಪಿಟಿಐ, ಸಂಸತ್ ವೆಬ್‌ಸೈಟ್, ಸೆಂಟರ್ ಫಾರ್ ಸೈಬರ್ ಕ್ರೈಂ ಇನ್‌ವೆಸ್ಟಿಗೇಷನ್ ಟ್ರೈನಿಂಗ್ ಆ್ಯಂಡ್ ರಿಸರ್ಚ್, ಮಾಧ್ಯಮ ವರದಿಗಳು

ಕರ್ನಾಟಕದಲ್ಲಿ 22 ಸಾವಿರ ಪ್ರಕರಣಗಳು

ಕರ್ನಾಟಕದಲ್ಲಿ 2023ರಲ್ಲಿ ಸೈಬರ್ ಅಪರಾಧಗಳಿಗೆ ಸಂಬಂಧಿಸಿದ 22,255 ಪ್ರಕರಣಗಳು ವರದಿಯಾಗಿದ್ದರೆ, 2024ರಲ್ಲಿ ಅವುಗಳ ಪ್ರಮಾಣದಲ್ಲಿ ಅಲ್ಪಹೆಚ್ಚಳವಾಗಿತ್ತು (22,479). 2024ರಲ್ಲಿ ಡಿಜಿಟಲ್ ವಂಚನೆಯ ಪ್ರಮಾಣ ₹1,995 ಕೋಟಿ ಇದ್ದರೆ, 2025ರಲ್ಲಿ (ಸೆಪ್ಟೆಂಬರ್‌ವರೆಗೆ) ಈ ಮೊತ್ತವು ₹1,543 ಕೋಟಿ ಆಗಿದೆ.      

ಡಿಜಿಟಲ್ ಅರೆಸ್ಟ್ ಪ್ರಕರಣಗಳಲ್ಲಿ ಕರ್ನಾಟಕದ ಜನರು ಮೂರು ವರ್ಷಗಳಲ್ಲಿ ₹312.5 ಕೋಟಿ ಕಳೆದುಕೊಂಡಿದ್ದಾರೆ. ಈ ಪೈಕಿ ₹24.86 ಕೋಟಿ ವಶಪಡಿಸಿಕೊಳ್ಳಲಾಗಿದ್ದು, ₹18.33 ಕೋಟಿ ಸಂತ್ರಸ್ತರಿಗೆ ಹಿಂದಿರುಗಿಸಲಾಗಿದೆ.        

ಆರಂಭದಲ್ಲಿ, ಅಂದರೆ 2023ರಲ್ಲಿ, 147 ಡಿಜಿಟಲ್ ಅರೆಸ್ಟ್ ಪ್ರಕರಣಗಳು ವರದಿಯಾಗಿದ್ದವು; ಸಂತ್ರಸ್ತರು ₹16.66 ಕೋಟಿ ಕಳೆದುಕೊಂಡಿದ್ದರು. 2024ರಲ್ಲಿ ಪ್ರಕರಣಗಳಲ್ಲಿ ವಿಪರೀತ ಹೆಚ್ಚಳವಾಗಿತ್ತು. 874 ಪ್ರಕರಣಗಳು ವರದಿಯಾದರೆ, ₹151.25 ಕೋಟಿಯನ್ನು ಸೂರೆಹೊಡೆದಿದ್ದರು. 2025ರಲ್ಲಿ ಪ್ರಕರಣಗಳ ಸಂಖ್ಯೆ ಕುಸಿದಿದ್ದರೂ ಸಂತ್ರಸ್ತರು ಕಳೆದುಕೊಂಡ ಮೊತ್ತ ಹೆಚ್ಚು ಕಡಿಮೆ ಹಿಂದಿನ ವರ್ಷದಷ್ಟೇ (₹144.59) ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.