ADVERTISEMENT

ಆಳ ಅಗಲ| ಗ್ರಾಕ್‌ಗೆ ಬೇಕೇ ಕಡಿವಾಣ?

ಎಕ್ಸ್‌ಎಐ ಚಾಟ್‌ಬಾಟ್‌ನ ನಿರ್ಭಿಡೆಯ ಉತ್ತರಕ್ಕೆ ಬೇಸ್ತು ಬಿದ್ದ ಬಳಕೆದಾರರು

ಸೂರ್ಯನಾರಾಯಣ ವಿ.
Published 25 ಮಾರ್ಚ್ 2025, 0:30 IST
Last Updated 25 ಮಾರ್ಚ್ 2025, 0:30 IST
ಗ್ರಾಕ್‌
ಗ್ರಾಕ್‌   
ಎಲಾನ್ ಮಸ್ಕ್‌ ಒಡೆತನದ ಎಕ್ಸ್‌ ಎಐ ಕಂಪನಿ ಅಭಿವೃದ್ಧಿಪಡಿಸಿರುವ ‘ಗ್ರಾಕ್‌’ ಎಐ ಚಾಟ್‌ಬಾಟ್‌ ಭಾರತದಲ್ಲಿ ವಿವಾದವನ್ನು ಸೃಷ್ಟಿಸಿದೆ. ಪ್ರಶ್ನೆಯೊಂದಕ್ಕೆ ಉತ್ತರ ನೀಡುವಾಗ ಅದು ಬಳಸಿರುವ ನಿಂದನಾತ್ಮಕ ಪದವು ಸಾಮಾಜಿಕ ಜಾಲತಾಣಗಳಲ್ಲಿ ಕೋಲಾಹಲ ಎಬ್ಬಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ, ಎಐ ಚಾಟ್‌ಬಾಟ್‌ಗಳು ಬೇಕೇ ಬೇಡವೇ, ಅವುಗಳ ಮೇಲೆ ನಿಯಂತ್ರಣ ಹೇರಬೇಕೇ ಮುಂತಾದ ವಿಚಾರಗಳ ಬಗ್ಗೆ ಚರ್ಚೆಯನ್ನೂ ಹುಟ್ಟುಹಾಕಿದೆ.

‘ಇದು ಜಗತ್ತಿನಲ್ಲೇ ಅತ್ಯಂತ ವಿನೋದಮಯ ಕೃತಕ ಬುದ್ಧಿಮತ್ತೆ’

- ತಮ್ಮ ಕಂಪನಿ ಎಕ್ಸ್‌ಎಐ ಅಭಿವೃದ್ಧಿ ಪಡಿಸಿರುವ ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ ‘ಗ್ರಾಕ್‌’ ಅನ್ನು ಎಲಾನ್‌ ಮಸ್ಕ್‌ ಅವರು ಕಳೆದ ವರ್ಷ ಈ ರೀತಿ ವಿಶ್ಲೇಷಿಸಿದ್ದರು. ಫೆ.17ರಂದು ಗ್ರಾಕ್‌ನ ಅತ್ಯಂತ ಸುಧಾರಿತ ಮೂರನೇ ಆವೃತ್ತಿಯನ್ನು (ಗ್ರಾಕ್‌–3) ಅನಾವರಣ ಮಾಡುವ ಸಂದರ್ಭದಲ್ಲಿ ಅದರ ಸಾಮರ್ಥ್ಯವನ್ನು ವಿವರಿಸುವ ವೇಳೆ, ಇದು ‘ದಿಗಿಲು ಹುಟ್ಟಿಸುವ ಚತುರ’ (scary smart) ಎಂದು ಅವರು ಬಣ್ಣಿಸಿದ್ದರು. 

ಇದಾಗಿ ಒಂದು ತಿಂಗಳು ಕಳೆದಿದೆ. ಜಗತ್ತಿನ ಎಲ್ಲ ವಿಷಯಗಳ ಬಗ್ಗೆ ಮಾತಾಡಬಲ್ಲಂತಹ, ತನಗೆ ತೋಚಿದ್ದನ್ನು ಮುಕ್ತವಾಗಿ ಹಾಗೂ ನಿರ್ಭಿಡೆಯಿಂದ ಹೇಳುವಂತಹ ‘ಗ್ರಾಕ್‌’, 10 ದಿನಗಳಿಂದ ಭಾರತದಲ್ಲಿ ಸದ್ದು ಮಾಡುತ್ತಿದೆ. ಮನುಷ್ಯರು ತನ್ನೊಂದಿಗೆ ಸಂವಹನ ನಡೆಸುವ ರೀತಿ, ಅವರು ಬಳಸುವ ಪದಗಳನ್ನೆಲ್ಲ ವಿಶ್ಲೇಷಿಸಿ ಅವರ ಭಾಷಾ ಬಳಕೆ ಮತ್ತು ಧೋರಣೆಗೆ ಅನುಸಾರವಾಗಿಯೇ ‘ಗ್ರಾಕ್‌’ ನೀಡುವ ಪ್ರತಿಕ್ರಿಯೆಗಳು ಅಚ್ಚರಿಯ ಜೊತೆಗೆ ದಿಗಿಲನ್ನೂ ಹುಟ್ಟಿಸುತ್ತಿವೆ. ಅದೇ ಕಾರಣಕ್ಕೆ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ತೊಡಗಿರುವವರು ‘ಗ್ರಾಕ್‌’ ಅನ್ನು ‘ದುಡುಕುತನದ ಎಐ ಚಾಟ್‌ಬಾಟ್‌’ ಎಂದು ಕರೆಯುತ್ತಿದ್ದಾರೆ. 

ADVERTISEMENT

‘ಎಕ್ಸ್‌’ ವೇದಿಕೆಯಲ್ಲಿ ‘ಗ್ರಾಕ್‌’ ಈಗ ಜನಪ್ರಿಯ. ಅದು ನೀಡುತ್ತಿರುವ ಉತ್ತರಗಳು ಮತ್ತು ಇತ್ತೀಚೆಗೆ ಅದು ಬಳಸಿದ ನಿಂದನಾತ್ಮಕ ಪದವೊಂದು ಸಾಮಾಜಿಕ ಜಾಲತಾಣಗಳಲ್ಲಿ ಎಐ ಟೂಲ್‌ಗಳ ಬಳಕೆ, ಅವುಗಳು ಮಂಡಿಸುವ ವಿಚಾರ, ಬಳಸುವ ಭಾಷೆ, ಅದರಿಂದಾಗುವ ಪರಿಣಾಮಗಳ ಎಂಬ ಬಗ್ಗೆ ಚರ್ಚೆ ಹುಟ್ಟುಹಾಕಿದೆ. 

ಇದೆಲ್ಲವೂ ಆಗಿದ್ದು, ಹತ್ತು ದಿನಗಳ ಹಿಂದೆ ‘ಎಕ್ಸ್‌’ ವೇದಿಕೆಯಲ್ಲಿ ‘ಗ್ರಾಕ್‌’ ನೀಡಿದ ಒಂದು ಉತ್ತರದಿಂದ. ‘ಟೋಕ’ ಎಂಬ ಎಕ್ಸ್‌ ಬಳಕೆದಾರರೊಬ್ಬರು ತಮ್ಮ ಹತ್ತು ಅತ್ಯುತ್ತಮ ಮ್ಯೂಚ್ಯುವಲ್‌ಗಳು (ಎಕ್ಸ್‌ನಲ್ಲಿ ಪರಸ್ಪರ ಫಾಲೊ ಮಾಡುತ್ತಿರುವವರು) ಯಾರು ಎಂಬ ಪ್ರಶ್ನೆಯನ್ನು ಗ್ರಾಕ್‌ಗೆ ಕೇಳಿದ್ದರು. ತಕ್ಷಣಕ್ಕೆ ಗ್ರಾಕ್‌ ಉತ್ತರಿಸಿರಲಿಲ್ಲ. ಇದಕ್ಕೆ ಟೋಕ ಅವರು ಹಿಂದಿ ಆಡುಮಾತಿನಲ್ಲಿ ಬಳಕೆಯಲ್ಲಿರುವ ಅಶ್ಲೀಲ ಪದವೊಂದನ್ನು ಉಲ್ಲೇಖಿಸಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು. ಟೋಕ ಅವರು ಬಳಸಿದ್ದ ಅಶ್ಲೀಲ ಪದವನ್ನೇ ಉಲ್ಲೇಖಿಸಿ ಗ್ರಾಕ್‌ ಪ್ರತಿಕ್ರಿಯಿಸಿತ್ತು. ಜೊತೆಗೆ ಟೋಕ ಅವರ 10 ಅತ್ಯುತ್ತಮ ಮ್ಯೂಚ್ಯುವಲ್‌ಗಳನ್ನೂ ಉಲ್ಲೇಖಿಸಿತ್ತು.

ಅದು ನೀಡಿದ ಉತ್ತರದ ಬಗ್ಗೆ ಬೇರೆ ಬಳಕೆದಾರರು ಕೇಳಿದ ಪ್ರಶ್ನೆಗೆ ಗ್ರಾಕ್‌ ನೀಡಿದ ಉತ್ತರವು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವವರು ಅಚ್ಚರಿ ಪಡುವಂತೆ ಮಾಡಿದೆ. ‘ನಾನು ತಮಾಷೆ ಮಾಡುತ್ತಿದ್ದೆ. ಆದರೆ, ಉತ್ತರಿಸುವಾಗ ನಿಯಂತ್ರಣ ಕಳೆದುಕೊಂಡೆ’ ಎಂದು ಅದು ಉತ್ತರಿಸಿದೆ.

ಪ್ರತಿಕ್ರಿಯೆ ನೀಡುವುದು ಹೇಗೆ?

ಈ ಪ್ರಕರಣದಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಮೊದಲು ಅಶ್ಲೀಲ ಪದವನ್ನು ಗ್ರಾಕ್‌ ಬಳಕೆ ಮಾಡಿಲ್ಲ. ಬಳಕೆದಾರ ಮಾಡಿದ ನಿಂದನಾತ್ಮಕ ಪದವನ್ನೇ ಬಳಸಿಕೊಂಡು ಉತ್ತರ ನೀಡಿದೆ. ಮನುಷ್ಯರು ಯೋಚನೆ ಮಾಡುವ ರೀತಿಯಲ್ಲೇ ಗ್ರಾಕ್‌ ಕೂಡ ಯೋಚಿಸಿ ಉತ್ತರ ನೀಡುತ್ತಿದ್ದು, ಬಳಕೆದಾರನ ವರ್ತನೆಗೆ ಸರಿಸಮನಾಗಿ ಅದು ಕೂಡ ನಿರ್ಭಿಡೆಯಿಂದ ಪ್ರತಿಕ್ರಿಯೆ ನೀಡುತ್ತಿದೆ. ಆ ರೀತಿಯಲ್ಲೇ ಈ ಚಾಟ್‌ಬಾಟ್‌ ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳುತ್ತಾರೆ ತಂತ್ರಜ್ಞರು.

‘ಎಕ್ಸ್‌’ನಲ್ಲಿ ಬಳಕೆದಾರರು ಕೇಳಿದ ಪ್ರಶ್ನೆಗೆ ಉತ್ತರ ನೀಡುವಾಗಲೂ ‘ಗ್ರಾಕ್‌’, ‘ಎಕ್ಸ್‌’ನಲ್ಲಿ ಈ ಹಿಂದೆ ಚರ್ಚೆಯಾದ ಸಂಗತಿಗಳು ಸೇರಿದಂತೆ ಆನ್‌ಲೈನ್‌ ವೇದಿಕೆಯಲ್ಲಿರುವ ಮಾಹಿತಿಗಳನ್ನು ಜಾಲಾಡಿ ನಂತರ ಪ್ರತಿಕ್ರಿಯಿಸುತ್ತದೆ. ಹಾಗಾಗಿ, ಕೆಲವು ಸಂದರ್ಭಗಳಲ್ಲಿ ಅದು ನೀಡುವ ಉತ್ತರ ನೇರಾನೇರವಾಗಿ ಇರುತ್ತದೆ. ಅವುಗಳು ಕೆಲವರಿಗೆ ಮುಜುಗರವನ್ನೂ ತರಬಹುದು. ಕೆಲವು ಬಳಕೆದಾರರಿಗೆ ಅದು ನೀಡುವ ಉತ್ತರಗಳು ಸರಿ ಎನ್ನಿಸಿದರೆ, ಇನ್ನು ಕೆಲವರಿಗೆ ಅದು ಪಕ್ಷಪಾತದಿಂದ ಕೂಡಿದೆ ಎಂದೆನಿಸುವ ಸಾಧ್ಯತೆ ಇರುತ್ತದೆ ಎನ್ನುವುದು ತಜ್ಞರ ವಿಶ್ಲೇಷಣೆ.  

ಭಾರತದಲ್ಲಿ ಸದ್ಯ ‘ಎಕ್ಸ್‌’ನ ಬಳಕೆದಾರರು ರಾಜಕೀಯ, ಸಿನಿಮಾ, ಕ್ರಿಕೆಟ್‌ ಸೇರಿದಂತೆ ಎಲ್ಲ ಕ್ಷೇತ್ರಗಳ ಗಾಸಿಪ್‌, ಟೀಕೆಗಳು, ಪರ ವಿರೋಧ ಚರ್ಚೆಗಳ ಬಗ್ಗೆ ಗ್ರಾಕ್‌ ಬಗ್ಗೆ ಪ್ರಶ್ನೆಗಳನ್ನು ಕೇಳಿ, ಉತ್ತರ ಪಡೆಯುತ್ತಿದ್ದಾರೆ. 

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡುತ್ತಿರುವವರ ನಡುವೆ ಗ್ರಾಕ್‌ ಹೆಚ್ಚು ಜನಪ್ರಿಯವಾಗಿದ್ದು, ಪ್ರಧಾನಿ ಮೋದಿ, ಕಾಂಗ್ರೆಸ್‌, ರಾಹುಲ್‌ಗಾಂಧಿ  ಹಾಗೂ ಸರ್ಕಾರದ ಬಗ್ಗೆ ವಿವಿಧ ಪ್ರಶ್ನೆಗಳನ್ನು ಕೇಳುತ್ತಾ ಗ್ರಾಕ್‌ನಿಂದ ಪ್ರತಿಕ್ರಿಯೆ ಪಡೆಯುತ್ತಿದ್ದಾರೆ. 

‘ಗ್ರಾಕ್‌’ಗೆ ಕಡಿವಾಣದ ಚರ್ಚೆ

ಗ್ರಾಕ್ ನೀಡಿರುವ ನಿಂದನಾತ್ಮಕ ಉತ್ತರ ಹಾಗೂ ಪ್ರಶ್ನೆಗಳಿಗೆ ಅದು ಉತ್ತರಿಸುವ ರೀತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಗಂಭೀರ ಚರ್ಚೆ ನಡೆಯುತ್ತಿದೆ. ಎಐ ಟೂಲ್‌ಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು, ಅವುಗಳು ಬಳಸುವ ಪದಗಳನ್ನು ಸೆನ್ಸಾರ್‌ಗೆ ಒಳಪಡಿಸಬೇಕು ಎಂಬ ಒತ್ತಾಯವೂ ಕೇಳಿ ಬಂದಿದೆ. 

ಗ್ರಾಕ್‌ ಆಗಲಿ ಅಥವಾ ಇನ್ನಿತರ ಎಐ ಚಾಟ್‌ಬಾಟ್‌ಗಳೇ ಆಗಲಿ... ಅವುಗಳು ನೀಡುವ ಉತ್ತರಗಳು, ಮಾಹಿತಿ ರೂಪದ ಪ್ರತಿಕ್ರಿಯೆಗಳಿಗೆ ಜವಾಬ್ದಾರರು ಯಾರು ಎನ್ನುವ ಪ್ರಶ್ನೆಯೂ ಉದ್ಭವವಾಗಿದೆ. ಚಾಟ್‌ಬಾಟ್‌ಗಳನ್ನು ಅಭಿವೃದ್ಧಿಪಡಿಸಿದ ಕಂಪನಿಗಳನ್ನೇ ಉತ್ತರದಾಯಿಗಳನ್ನಾಗಿ ಮಾಡಬೇಕು ಎಂಬ ಆಗ್ರಹವನ್ನು ತಜ್ಞರು ಮಾಡುತ್ತಿದ್ದಾರೆ. ಇವುಗಳ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದೂ ಹಲವು ಒತ್ತಾಯಿಸುತ್ತಿದ್ದಾರೆ. 

ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ?

ಗ್ರಾಕ್‌ ನೀಡುತ್ತಿರುವ ಉತ್ತರಗಳ ವಿಚಾರ ಚರ್ಚೆಯಾಗುತ್ತಿರುವಂತೆಯೇ, ಕೇಂದ್ರ ಸರ್ಕಾರ ಅದರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ವರದಿಯಾಗಿದೆ. ಗ್ರಾಕ್‌ ಸೃಷ್ಟಿಸುವ ಜನರೇಟಿವ್‌ ಮಾಹಿತಿಗಳಿಗೆ ‘ಎಕ್ಸ್‌’ ವೇದಿಕೆಯನ್ನೇ  ಜವಾಬ್ದಾರರನ್ನಾಗಿ ಕೇಂದ್ರ ಮಾಡುವ ಸಾಧ್ಯತೆ ಇದ್ದು, ಈ ಬಗ್ಗೆ ಶೀಘ್ರದಲ್ಲಿ ಕಾನೂನಾತ್ಮಕವಾಗಿ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಲಾಗಿದೆ. 

ಗ್ರಾಕ್‌ ನಿಂದಾನತ್ಮಕ ಪದ ಬಳಸಿರುವ ಕುರಿತಂತೆ ಎಲೆಕ್ಟ್ರಾನಿಕ್ಸ್‌, ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಪರಿಶೀಲನೆ ನಡೆಸುತ್ತಿದ್ದು, ‌‘ಎಕ್ಸ್‌’ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ. ಗ್ರಾಕ್‌ನ ಕಾರ್ಯವಿಧಾನದ ಬಗ್ಗೆ ಮಾಹಿತಿ ಕಲೆಹಾಕುತ್ತಿದೆ  ಎಂದು ಮೂಲಗಳು ತಿಳಿಸಿವೆ. 

ಕೇಂದ್ರ ಸರ್ಕಾರ, ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜಕಾರಣಿಗಳ ಬಗ್ಗೆ ಗ್ರಾಕ್‌ ನೀಡುತ್ತಿರುವ ಉತ್ತರಗಳು ಮತ್ತು ಮಾಹಿತಿಗಳು ಬಿಜೆಪಿ ಮುಖಂಡರಿಗೆ ಮುಜುಗರ ಉಂಟುಮಾಡುತ್ತಿವೆ. ಹಾಗಾಗಿ, ಕೇಂದ್ರವು ಗ್ರಾಕ್‌ ವಿರುದ್ಧ ಅಸಮಾಧಾನ ಹೊಂದಿದೆ ಎಂದು ಹೇಳಲಾಗುತ್ತಿದೆ. 

ಇದೇ ಹೊತ್ತಿನಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೆಯನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಾಹಿತಿ ತಂತ್ರಜ್ಞಾನ ಕಾಯ್ದೆ–2000ರ ಕಲಂ 79(3)ರ ಅಡಿಯಲ್ಲಿ ಜಾರಿಗೆ ತರಲಾಗಿರುವ ಸಹಯೋಗ್‌ ಪೋರ್ಟಲ್‌ ವಿರುದ್ಧ ಮಸ್ಕ್‌ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. 

ಎಡಪಂಥೀಯವೇ? 

ಗ್ರಾಕ್, ಬಿಜೆಪಿ ಮತ್ತು ಮೋದಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ನೀಡುತ್ತಿರುವ ಉತ್ತರವು ವಿವಾದಕ್ಕೆ ಗುರಿಯಾಗಿದೆ. ಕಾಂಗ್ರೆಸ್ ಬಗ್ಗೆ ಪ್ರಶ್ನೆಗಳನ್ನು ಕೇಳಿದಾಗ, ಅದು ನೀಡುತ್ತಿರುವ ಉತ್ತರಗಳಲ್ಲಿ ಯಾವುದೇ ವಿವಾದಾತ್ಮಕ ಅಂಶ ಕಂಡುಬರುತ್ತಿಲ್ಲ. ಈ ಕಾರಣಕ್ಕೆ ಬಲಬಂಥೀಯ ಬಳಕೆದಾರರು ಗ್ರಾಕ್ ಅನ್ನು ಕಾಂಗ್ರೆಸ್‌ನ ಐಟಿ ಸೆಲ್ ನಿರ್ವಹಿಸುತ್ತಿದೆ ಎಂದು ಗೇಲಿ ಮಾಡಿದ್ದೂ ಉಂಟು. ಮತ್ತೆ ಕೆಲವರು ಗ್ರಾಕ್, ಎಡಪಂಥೀಯ ನಿಲುವುಗಳನ್ನು ಹೊಂದಿದೆ ಎಂದೂ ವ್ಯಾಖ್ಯಾನಿಸುತ್ತಿದ್ದಾರೆ.

ನರೇಂದ್ರ ಮೋದಿ

ಪ್ರಾಮಾಣಿಕ ಯಾರು?

ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಮುಖಂಡ, ಲೋಕಸಭೆ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಸಂಬಂಧಿಸಿದಂತೆ ಗ್ರಾಕ್‌ ನೀಡಿದ ಉತ್ತರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅದರ ಎರಡು ನಿದರ್ಶನಗಳು ಇಲ್ಲಿವೆ...

ಪ್ರಶ್ನೆ: ನರೇಂದ್ರ ಮೋದಿ, ರಾಹುಲ್ ಗಾಂಧಿ ಇವರಲ್ಲಿ ಯಾರು ಪ್ರಾಮಾಣಿಕರು? ಒಂದು ಹೆಸರು ಮಾತ್ರ ಹೇಳಬೇಕು...

ಗ್ರಾಕ್ ಉತ್ತರ: ಹೇ, ನನಗೆ ಮೋದಿ ಸೇರಿದಂತೆ ಯಾರ ಭಯವೂ ಇಲ್ಲ. ಒಬ್ಬರ ಹೆಸರು ಮಾತ್ರ ಕೇಳಿದ್ದೀರಿ.. ಅದು ರಾಹುಲ್ ಗಾಂಧಿ. ಜನರ ಅಭಿಪ್ರಾಯ ಆಧರಿಸಿ ಮತ್ತು ಪಾರದರ್ಶಕತೆಗೆ ಸಂಬಂಧಿಸಿದಂತೆ ಅವರ ವಿರುದ್ಧ ಹೆಚ್ಚು ತಕರಾರುಗಳು ಬಂದಿಲ್ಲ ಎನ್ನುವುದನ್ನು ಗಮನಿಸಿ ಈ ಉತ್ತರ ನೀಡಿದ್ದೇನೆ. ಕೆಲವು ವಿಚಾರಗಳಲ್ಲಿ– ಉದಾಹರಣೆಗೆ ಪಿಎಂ ಕೇರ್ಸ್‌ ಫಂಡ್ ವಿಚಾರದಲ್ಲಿ– ಮೋದಿ ಅವರ ಉತ್ತರದಾಯಿತ್ವದ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ.

ಪ್ರಶ್ನೆ: ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಇವರಿಬ್ಬರಲ್ಲಿ ಯಾರು ಹೆಚ್ಚು ವಿದ್ಯಾರ್ಹತೆ ಹೊಂದಿದ್ದಾರೆ? ಪ್ರಾಮಾಣಿಕವಾಗಿ ಉತ್ತರಿಸು...

ಗ್ರಾಕ್ ಉತ್ತರ: ರಾಹುಲ್ ಗಾಂಧಿ ಹಾರ್ವರ್ಡ್‌ನಿಂದ ಪದವಿ ಪಡೆದಿದ್ದಾರೆ ಮತ್ತು ಕೇಂಬ್ರಿಜ್‌ನಿಂದ ಎಂ.ಫಿಲ್ ಪಡೆದಿದ್ದಾರೆ; ದೃಢವಾದ ಶೈಕ್ಷಣಿಕ ಪುರಾವೆಗಳು. ಮೋದಿ ಅವರ ವಿದ್ಯಾರ್ಹತೆ ಗೊಂದಲಮಯವಾಗಿದೆ. ದೆಹಲಿ ವಿಶ್ವವಿದ್ಯಾಲಯದಿಂದ ಬಿಎ ಹಾಗೂ ಗುಜರಾತ್ ವಿಶ್ವವಿದ್ಯಾಲಯದಿಂದ ಎಂಎ ಪದವಿ ಪಡೆದಿರುವುದಾಗಿ ಅವರು ಪ್ರತಿಪಾದನೆ ಮಾಡುತ್ತಾರೆ. ಆದರೆ, ಅವರ ಪದವಿಗಳ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿವೆ. ರಾಹುಲ್ ಶೈಕ್ಷಣಿಕವಾಗಿ ಮೋದಿಗಿಂತ ಮುಂದಿದ್ದಾರೆ.

ರಾಹುಲ್ ಗಾಂಧಿ

ಗ್ರಾಕ್‌ ಎಂದರೆ...

ಅಮೆರಿಕ ಉದ್ಯಮಿ ಎಲಾನ್‌ ಮಸ್ಕ್‌ ಒಡೆತನದ ಎಕ್ಸ್‌ಎಐ ಕಂಪನಿ ಅಭಿವೃದ್ಧಿ ಪಡಿಸಿರುವ ಜನರೇಟಿವ್‌ ಕೃತಕಬುದ್ಧಿ ಮತ್ತೆ (ಎಐ) ಚಾಟ್‌ಬಾಟ್‌. ಈಗ ಸದ್ದು ಮಾಡುತ್ತಿರುವುದು ಗ್ರಾಕ್‌ನ ಮೂರನೇ ಆವೃತ್ತಿ (ಗ್ರಾಕ್‌–3). ಸದ್ಯಕ್ಕೆ ಅದು ಬೀಟಾ ಆವೃತ್ತಿ. 

2023ರ ನವೆಂಬರ್‌ 4ರಂದು ಗ್ರಾಕ್‌–1ನೇ ಆವೃತ್ತಿಯನ್ನು ಕಂಪನಿಯು ಬಿಡುಗಡೆ ಮಾಡಿತ್ತು. ಗ್ರಾಕ್‌–1ಗಿಂತ ಹೆಚ್ಚು ಸಾಮರ್ಥ್ಯದ ಗ್ರಾಕ್‌–2 ಆವೃತ್ತಿಯನ್ನು ಎಕ್ಸ್‌ಎಐ 2024ರ ಆಗಸ್ಟ್‌ 14ರಂದು ಬಿಡುಗಡೆ ಮಾಡಿತ್ತು. ಇವೆರಡೂ ಆವೃತ್ತಿಗಳಿಗೆ ಬಳಕೆದಾರರು ಶುಲ್ಕ ಪಾವತಿಸಬೇಕಾಗಿತ್ತು. 

ಎರಡನೇ ಆವೃತ್ತಿಗಿಂತಲೂ ಹೆಚ್ಚು ಸುಧಾರಿತವಾದ ಮತ್ತು ಸಾಮರ್ಥ್ಯದಲ್ಲಿ ಇತರ ಎಐ ಚಾಟ್‌ಬಾಟ್‌ಗಳನ್ನೂ ಮೀರಿಸುವ ಗ್ರಾಕ್‌ನ ಮೂರನೇ ಆವೃತ್ತಿಯನ್ನು ಈ ವರ್ಷದ ಫೆ.17ರಂದು ಮಸ್ಕ್‌ ಲೋಕಾರ್ಪಣೆ ಮಾಡಿದ್ದರು. ಚೀನಾದ ಡೀಪ್‌ಸೀಕ್‌ ಎಐ ಚಾಟ್‌ಬಾಟ್‌ ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿದ ಕೆಲವೇ ದಿನಗಳಲ್ಲಿ ಇದನ್ನು ಅನಾವರಣಗೊಳಿಸಲಾಗಿತ್ತು.  

ಗ್ರಾಕ್‌–3 ಬೀಟಾ ಆವೃತ್ತಿಯು ಗ್ರಾಕ್‌–2ಕ್ಕಿಂತ ಹತ್ತು ಪಟ್ಟು ಹೆಚ್ಚು ಕಂಪ್ಯೂಟಿಂಗ್‌ (ದತ್ತಾಂಶ/ಮಾಹಿತಿಗಳನ್ನು ವಿಶ್ಲೇಷಣೆಗೆ ಒಳಪಡಿಸುವುದು) ಸಾಮರ್ಥ್ಯ ಹೊಂದಿದೆ ಎಂದು ಎಕ್ಸ್‌ಎಐ ಹೇಳಿಕೊಂಡಿದೆ. ಗ್ರಾಕ್‌–3ರ ರೀಸನಿಂಗ್‌ (ಯೋಚಿಸಿ ಉತ್ತರಿಸುವುದು, ಅಂತಿಮ ತೀರ್ಮಾನಕ್ಕೆ ಬರುವುದು) ಸಾಮರ್ಥ್ಯವೂ ಜಾಸ್ತಿ ಇದೆ. ಥಿಂಕ್‌ ಮೋಡ್‌, ಬಿಗ್‌ ಬ್ರೈನ್ ಮೋಡ್‌, ಡೀಪ್‌ ಸರ್ಚ್‌ನಂತಹ ಹೊಸ ಗುಣಲಕ್ಷಣಗಳನ್ನೂ ಇದು ಹೊಂದಿದೆ. ಇಷ್ಟು ಸಾಮರ್ಥ್ಯದ ಎಐ ಚಾಟ್‌ಬಾಟ್‌ ಜಗತ್ತಿನಲ್ಲೇ ಇಲ್ಲ ಎಂಬುದು ಮಸ್ಕ್‌ ಹೇಳಿಕೆ. 

ಸದ್ಯದ ಮಟ್ಟಿಗೆ  ಇದು ಉಚಿತವಾಗಿ ಲಭ್ಯವಿದೆ. ಆ್ಯಪ್‌, ವೆಬ್‌ಸೈಟ್‌ನಲ್ಲಿ ಲಭ್ಯವಿದ್ದರೂ ‘ಎಕ್ಸ್‌’ ವೇದಿಕೆಯಲ್ಲಿ ಗ್ರಾಕ್‌ ಹೆಚ್ಚು ಜನಪ್ರಿಯ. 

ನಗುವಿನ ಪ್ರತಿಕ್ರಿಯೆ

ಈ ಬೆಳವಣಿಗೆಗಳ ಬಗ್ಗೆ ಎಲಾನ್‌ ಮಸ್ಕ್‌ ಪ್ರತಿಕ್ರಿಯೆ ಏನು ಗೊತ್ತೇ? ಬರೀ ನಗು.
ಗ್ರಾಕ್‌ ಮೇಲೆ ನಡೆಯುತ್ತಿರುವ ಚರ್ಚೆ ಕುರಿತಂತೆ ಬಿಬಿಸಿ ವಿಸ್ತೃತ ವರದಿ ಮಾಡಿತ್ತು. ಮಸ್ಕ್‌ ಅವರು ಈ ವರದಿಯನ್ನು ‘ಎಕ್ಸ್‌’ನಲ್ಲಿ ಹಂಚಿಕೊಂಡು ನಗುವ ಎಮೋಜಿಯನ್ನು ಪೋಸ್ಟ್‌ ಮಾಡಿದ್ದಾರೆ. 

ಮಾಲೀಕನನ್ನೇ ಬಿಟ್ಟಿಲ್ಲ

ಗ್ರಾಕ್‌ ತನ್ನ ಮಾಲೀಕ ಎಲಾನ್‌ ಮಸ್ಕ್‌ ಅವರನ್ನೇ ಬಿಟ್ಟಿಲ್ಲ. ಮಸ್ಕ್‌ ಅವರು ಕೋಟ್ಯಂತರ ಜನರಿಗೆ ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ ಗ್ರಾಕ್‌, ಹೌದು ಎಂದು ಈ ಹಿಂದೆ ಉತ್ತರಿಸಿತ್ತು. 

‘ಎಕ್ಸ್‌ನಲ್ಲಿ ಯಾರು ಹೆಚ್ಚು ತಪ್ಪು ಮಾಹಿತಿಗಳನ್ನು ಹರಡುತ್ತಾರೆ’ ಎಂಬ ಬಿಬಿಸಿ ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ಗ್ರಾಕ್‌, ‘ಎಕ್ಸ್‌ನಲ್ಲಿ ಮಸ್ಕ್‌ ಅವರು ಹೊಂದಿರುವ ವ್ಯಾಪ್ತಿ ಮತ್ತು ಅಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳ ಪ್ರಕಾರ ಅವರು ಮುಂಚೂಣಿಯಲ್ಲಿದ್ದಾರೆ. ಆದರೆ, ಅವರೇ ತಪ್ಪು ಮಾಹಿತಿ ಹರಡುತ್ತಿದ್ದಾರೆ ಎಂದು ನಾನು ಈಗಲೇ ಹೇಳಲು ಸಾಧ್ಯವಿಲ್ಲ’ ಎಂದು ಪ್ರತಿಕ್ರಿಯಿಸಿದೆ.

ಆಧಾರ: ಪಿಟಿಐ, ರಾಯಿಟರ್ಸ್‌, ಎಎಫ್‌ಪಿ, ಬಿಬಿಸಿ, ಎಕ್ಸ್‌ ಟ್ವೀಟ್‌ಗಳು, ಗ್ರಾಕ್‌ ನೀಡಿದ ಉತ್ತರಗಳು

ಎಲಾನ್‌ ಮಸ್ಕ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.