
ಬೆಂಗಳೂರು ನಗರದ ನೋಟ
ಪ್ರಜಾವಾಣಿ ಚಿತ್ರ –ಪುಷ್ಕರ್ ವಿ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಎರಡೂ ಬೆಂಗಳೂರು ನಗರದ ಅಭಿವೃದ್ಧಿಯ ಹೊಣೆ ಹೊತ್ತಿವೆ. ನಗರದ ಅಭಿವೃದ್ಧಿಗೆ ಇವೆರಡರ ಕಾರ್ಯ, ಎರಡರ ನಡುವಿನ ಸಮನ್ವಯ ಬಹಳ ಮುಖ್ಯವಾದುದು. ಆದರೆ, ಎರಡರ ಪರಿಕಲ್ಪನೆ ಮತ್ತು ಕಾರ್ಯವಿಧಾನದಲ್ಲಿ ಕೆಲವು ತೊಡಕುಗಳಿವೆ. ಈ ಕುರಿತು ನಗರ ಯೋಜನಾ ತಜ್ಞರ ಅಭಿಪ್ರಾಯಗಳನ್ನೊಳಗೊಂಡ ವರದಿ ಇಲ್ಲಿದೆ
ಬೆಂಗಳೂರು ನಗರವು ವರ್ಷಗಳಿಂದಲೂ ನಿರ್ಮಾಣ ಮತ್ತು ಮರುನಿರ್ಮಾಣಗೊಳ್ಳುತ್ತಲೇ ಇದೆ. ಪ್ರಸ್ತುತ ನಗರದ ಅಭಿವೃದ್ಧಿಗೆ ಆಧಾರವಾಗಿರುವುದು 2015ರ ಪರಿಷ್ಕೃತ ಮಾಸ್ಟರ್ ಪ್ಲಾನ್ (ಆರ್‌ಎಂಪಿ). ಅದು ಬಿಡುಗಡೆಯಾಗಿದ್ದು 2007ರಲ್ಲಿ. ಅದಕ್ಕೂ ಹಿಂದೆಯೇ ಅದರ ತಯಾರಿ ನಡೆದಿತ್ತು. ಅಂದರೆ, ಎರಡು ದಶಕಗಳಷ್ಟು ಹಳೆಯ ಯೋಜನೆಯ ಆಧಾರದಲ್ಲಿ ನಗರದ ಅಭಿವೃದ್ಧಿ ನಡೆಯುತ್ತಿದೆ.
ಮುಂದಿನ ಮಾಸ್ಟರ್ ಪ್ಲಾನ್, ಆರ್‌ಎಂಪಿ 2031ರ ಅಧಿಸೂಚನೆ ಪ್ರಕಟವಾಗಿದ್ದು 2020ರಲ್ಲಿ. ಆದರೆ, ನಾಗರಿಕರ ಜೊತೆಗಿನ ಸಮಾಲೋಚನೆಯ ಕೊರತೆ, ನ್ಯಾಯಾಲಯದಲ್ಲಿನ ಪ್ರಕರಣಗಳು ಮುಂತಾದ ಪ್ರಕ್ರಿಯಾ ಸಮಸ್ಯೆಗಳು ಅದಕ್ಕೆ ಅಡ್ಡಿಯಾದವು. ಎಲ್ಲಕ್ಕಿಂತ ಹೆಚ್ಚಾಗಿ, ರಾಜಕೀಯ ಮತ್ತು ಆಡಳಿತಾತ್ಮಕ ಆದ್ಯತೆಗಳು ಬದಲಾದ ಕಾರಣದಿಂದ ಸರ್ಕಾರವು ಅದನ್ನು ರದ್ದುಪಡಿಸಿತು. ನಗರವನ್ನು ವಿಭಾಗಿಸುವ ಪ್ರಕ್ರಿಯೆ ಆರಂಭವಾಯಿತು. ಅದು ಈಗ ಪೂರ್ಣಗೊಂಡಿದೆ.
ಇತ್ತೀಚೆಗೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರವು (ಜಿಬಿಎ) ನಗರ ಕೇಂದ್ರಭಾಗದ ಯೋಜನೆ ರೂಪಿಸಿದರೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಜಿಬಿಎ ಸುತ್ತಲಿನ ಉಂಗುರಾಕಾರದ ಪ್ರದೇಶ ಅಭಿವೃದ್ಧಿಗೆ ಯೋಜನೆ ರೂಪಿಸುತ್ತಿದೆ. ಈ ಮೂಲಕ ರಾಜ್ಯ ಸರ್ಕಾರವು ನಗರದ ಮಾಸ್ಟರ್ ಪ್ಲಾನ್ ವಿಷಯವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.
ಆದಾಗ್ಯೂ, ಇದು ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದೆಯೇ?
‘ಅದು ಹೇಗೆ ಸರಿಯಾದ ದಿಕ್ಕಿನಲ್ಲಿದೆ’ ಎಂದು ಪ್ರಶ್ನಿಸುತ್ತಾರೆ ಸಿಟಿಜನ್ ಆ್ಯಕ್ಷನ್ ಫೋರಂನ ಸಂಸ್ಥಾಪಕರಾದ ವಿಜಯನ್ ಮೆನನ್. ‘ಬೆಂಗಳೂರಿನಲ್ಲಿ ನಾವು ಬಿಡಿಎ ಯೋಜನೆಗಳು, ಸರ್ಕಾರದ ಯೋಜನೆಗಳು ಎಲ್ಲವನ್ನೂ ರೂಪಿಸಿದೆವು. ಆದರೆ, ನಾವು ಸಂವಿಧಾನದ ಪ್ರಕಾರ ಯೋಜನೆಗಳನ್ನು ರೂಪಿಸಲಿಲ್ಲ. ಅಂದರೆ, ಜನಪ್ರತಿನಿಧಿಗಳ ಸಂಸ್ಥೆಯ ಅಡಿ ಯೋಜನೆಗಳನ್ನು ರೂಪಿಸಲಿಲ್ಲ. ಜಿಬಿಎ ಜನಪ್ರತಿನಿಧಿಗಳನ್ನು ಒಳಗೊಂಡ ಸಂಸ್ಥೆ ಅಲ್ಲ; ಅದು ರಾಜ್ಯ ಸರ್ಕಾರದ ಒಂದು ಸಂಸ್ಥೆ. ಅದರಲ್ಲಿ ಜನರಿಂದ ಆಯ್ಕೆ ಆದ ಸದಸ್ಯರು ಇರುವುದಿಲ್ಲ. ಇರುವುದು, ಐವರು ಮೇಯರ್‌ಗಳು. ಜತೆಗೆ ಮುಖ್ಯಮಂತ್ರಿಯ ಉಸ್ತುವಾರಿ’ ಎನ್ನುತ್ತಾರೆ ವಿಜಯನ್.
‘ರಾಜ್ಯದ ಐದನೇ ಹಣಕಾಸು ಸಮಿತಿಯು ಜಿಬಿಎ ಅನ್ನು ಜನಪ್ರತಿನಿಧಿಗಳು ಇರುವ ಮಹಾನಗರ ಪಾಲಿಕೆ ಎಂದು ಅಂಗೀಕರಿಸಿಲ್ಲ. ಸಮಿತಿಯು ಅದಕ್ಕೆ ಅನುದಾನವನ್ನೂ ನೀಡುವುದಿಲ್ಲ. ಹಣವು ಐದು ಪಾಲಿಕೆಗಳಿಗೆ ಹೋಗುತ್ತದೆಯೇ ವಿನಾ ಜಿಬಿಎಗೆ ಅಲ್ಲ. ಹಾಗಿದ್ದರೆ, ಅವರು ಎಲ್ಲಿಂದ ಹಣಕಾಸು ಪಡೆಯುತ್ತಾರೆ’ ಎನ್ನುವುದು ಅವರ ಪ್ರಶ್ನೆ.
‘ಇಂಥವೇ ಅನೇಕ ಗೊಂದಲಗಳಿವೆ. ಜಿಬಿಎ ಕಾಯ್ದೆಯ ಪ್ರಕಾರ, ಜಿಬಿಎಯು ಯೋಜನೆಗಳನ್ನು ರೂಪಿಸುವ ಪ್ರಾಧಿಕಾರವಾಗಿದೆ. ಆದರೆ, ಮೆಟ್ರೊಪಾಲಿಟನ್ ಪ್ಲಾನಿಂಗ್ ಕಮಿಟಿ (ಎಂಪಿಸಿ) ಕರಡು ಯೋಜನೆಯನ್ನು ರೂಪಿಸುತ್ತದೆ. ಯೋಜನೆ ರೂಪಿಸುವುದಕ್ಕೆ ಸಂಬಂಧಿಸಿದ ಈ ಅಂಶವನ್ನು ನಾವು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದೇವೆ’ ಎಂದರು.
ಬೇಕಿರುವುದು ತಳಮಟ್ಟದ ಯೋಜನೆಗಳು
‘ಸಂವಿಧಾನದ ಪ್ರಕಾರ, ನಗರದ ಯೋಜನೆಗಳನ್ನು ಎಂಪಿಸಿ ಮಾಡಬೇಕು. ಪಾಲಿಕೆಗಳು ಐದು ಇರಬಹುದು. ಆದರೆ, ಎಂಪಿಸಿ ಒಂದೇ ಇರಲು ಸಾಧ್ಯ. ಐವರು ಮೇಯರ್‌ಗಳು ಮತ್ತು ಚುನಾಯಿತ ಪ್ರತಿನಿಧಿಗಳನ್ನು ಅದು ಒಳಗೊಳ್ಳಬೇಕು. ಮತ್ತು ಅಗತ್ಯ ಕಂಡುಬಂದರೆ, ಎಲ್ಲಿಂದಲಾದರೂ, ಎಷ್ಟು ಮಂದಿ ತಜ್ಞರನ್ನಾದರೂ ಎಂಪಿಸಿ ಕರೆತರಬಹುದು. ಅದಕ್ಕೆ ಅಡ್ಡಿ ಏನು’ ಎಂದು ಪ್ರಶ್ನಿಸಿದರು ವಿಜಯನ್.
‘ಹೀಗೆ ಅದು ಸಮರ್ಥವಾಗಿ ಯೋಜನೆಗಳನ್ನು ರೂಪಿಸಬಲ್ಲ ಸ್ಥಳೀಯ ಚುನಾಯಿತ ಸಂಸ್ಥೆಯಾಗುತ್ತದೆ. ನಾವು ಎಂಪಿಸಿಗೆ ಹತ್ತಿರವಾಗುತ್ತೇವೆ. ಪ್ರಜೆಗಳು ರಾಜ್ಯ ಸರ್ಕಾರ ಅಥವಾ ಅಧಿಕಾರಶಾಹಿಗಿಂತ ಚುನಾಯಿತ ಪ್ರತಿನಿಧಿಗಳಿಗೆ ಹತ್ತಿರವಾಗುತ್ತಾರೆ’ ಎಂದು ವಿವರಿಸಿದರು.
‘ಜಿಬಿಎ ಯೋಜನೆಗಳು ಕೇಂದ್ರೀಕೃತ ಆಗಿರಬಾರದು. ಯೋಜನೆಗಳು ಸದಾ ತಳಮಟ್ಟದಲ್ಲಿ ರೂಪುಗೊಳ್ಳಬೇಕು. ಯೋಜನೆಗಳು ಜನಪ್ರತಿನಿಧಿಗಳನ್ನು ಒಳಗೊಂಡ ಸಂಸ್ಥೆಯ ಮೂಲಕ ಆಗದೇ ಹೋದರೆ, ಅದಕ್ಕೆ ತಳಮಟ್ಟದ ಕಣ್ನೋಟ ಇರುವುದಿಲ್ಲ. ಅದು ಹೇಗಿರುತ್ತದೆ ಅಂದರೆ, ಕೆಲವು ಆಡಳಿತಾಧಿಕಾರಿಗಳು ಕುಳಿತು ಬೆಂಗಳೂರಿಗೆ ಏನು ಬೇಕು ಎನ್ನುವುದನ್ನು ತೀರ್ಮಾನಿಸಿದಂತಾಗುತ್ತದೆ. ಈ ಮಾದರಿಯನ್ನು ಹಲವು ಬಾರಿ ಪ್ರಯತ್ನಿಸಿದ್ದೇವೆ. ಅದು ಫಲ ನೀಡಲಿಲ್ಲ. ಈಗ ಬೆಂಗಳೂರಿನಲ್ಲಿ ಕಾಣುತ್ತಿರುವ ಅಸ್ತವ್ಯಸ್ತ ವ್ಯವಸ್ಥೆಗೆ ಆ ಮಾದರಿಯೇ ಕಾರಣ’ ಎನ್ನುತ್ತಾರೆ ವಿಜಯನ್.
ಐವರು ಮೇಯರ್‌ಗಳು ಜಿಬಿಎನಲ್ಲಿ ಇದ್ದರೂ, ಸಂಸ್ಥೆಯ 75 ಸದಸ್ಯ ಬಲಕ್ಕೆ ಹೋಲಿಸಿದರೆ, ಅವರ ಸಂಖ್ಯೆ ತೀರಾ ಅಲ್ಪ. ಯೋಜನೆಗಳನ್ನು ರೂಪಿಸುವುದರಲ್ಲಿನ ವಿಳಂಬ ಮತ್ತು ವಿವಿಧ ನ್ಯಾಯಾಲಯಗಳಲ್ಲಿನ ಪ್ರಕರಣಗಳು ನಗರ ಯೋಜನೆಯನ್ನು ಮುಗ್ಗರಿಸುವಂತೆ ಮಾಡಿವೆ. ‘2007ರಲ್ಲಿ ಬಿಡುಗಡೆಯಾದ, 2015ರ ಮಾಸ್ಟರ್ ಪ್ಲಾನ್ ಪ್ರಕಾರವೇ ಈಗಲೂ ಯೋಜನೆಗಳು ಕಾರ್ಯಗತಗೊಳ್ಳುತ್ತಿರುವುದು ತೀರಾ ಅವಿವೇಕದ ವಿಚಾರ. ಸೂಕ್ತ ಮಾಸ್ಟರ್ ಪ್ಲಾನ್ ಇಲ್ಲದೇ ಸುರಂಗ ರಸ್ತೆಯಂಥ ಯೋಜನೆಗಳು ಬರುತ್ತಿವೆ’ ಎನ್ನುವುದು ಅವರ ವಿಶ್ಲೇಷಣೆ.
‘ರಾಜ್ಯ ಸರ್ಕಾರಕ್ಕೆ ನಿಯಂತ್ರಣ ಸಾಧಿಸಬೇಕಿದೆ ಮತ್ತು ತನಗೆ ಬೇಕಾದುದನ್ನು ಮಾಡಬೇಕಿದೆ. ಹೀಗಾಗಿ ಅದಕ್ಕೆ ಮಾಸ್ಟರ್ ಪ್ಲಾನ್ ಆಗಲಿ, ನಾಗರಿಕರೊಂದಿಗೆ ಸಮಾಲೋಚನೆ ಆಗಲಿ ಬೇಕಿಲ್ಲ. ನಾವು ಅವರೊಂದಿಗೆ ಮಾತನಾಡಲು ಪ್ರಯತ್ನಿಸಿದೆವು. ‘ನಿಮಗೆ ಬೇಕಿದ್ದರೆ ನ್ಯಾಯಾಲಯಕ್ಕೆ ಹೋಗಿ’ ಎನ್ನುವುದು ಅವರ ಉತ್ತರವಾಗಿತ್ತು. ಎಲ್ಲ ಪಕ್ಷಗಳದ್ದೂ ಇದೇ ಕಥೆ. ಎಲ್ಲರಿಗೂ ಬೆಂಗಳೂರಿನ ಮೇಲೆ ನಿಯಂತ್ರಣ ಬೇಕು’ ಎನ್ನುವುದು ವಿಜಯನ್ ನುಡಿ.
‘ಸಂವಿಧಾನದ 74ನೇ ತಿದ್ದುಪಡಿ ಮತ್ತು ಎಂಪಿಸಿ... ಎರಡೂ ಅಧಿಕಾರ ವಿಕೇಂದ್ರೀಕರಣದ ಬಗ್ಗೆ ಹೇಳುತ್ತವೆ. ಯೋಜನೆ ಎನ್ನುವುದು ಕೇವಲ ಒಂದು ಆಯಾಮ ಮಾತ್ರ. ಅಧಿಕಾರ ವಿಕೇಂದ್ರೀಕರಣ ಎನ್ನುವುದು ಕೇಂದ್ರ, ರಾಜ್ಯ ಮತ್ತು ನಗರ ಪಾಲಿಕೆಗಳಿಗೆ ಕಾರಣವಾಗುತ್ತದೆ. ಪ್ರತಿಯೊಂದೂ ಮುಂದಿನ ಹಂತಕ್ಕೆ ಅಧಿಕಾರವನ್ನು ವರ್ಗಾಯಿಸುತ್ತದೆ. ಆದರೆ, ಪ್ರಸ್ತುತ ಯಾವುದೇ ಪಕ್ಷ, ಯಾವುದೇ ಸಂಸದ, ಯಾವುದೇ ಶಾಸಕ ತಮ್ಮ ಅಧಿಕಾರವನ್ನು ವರ್ಗಾಯಿಸಲು ಬಯಸುತ್ತಿಲ್ಲ ಮತ್ತು ಅವರಿಗೆ ಚಿನ್ನದ ಮೊಟ್ಟೆಯಾಗಿರುವ ಬೆಂಗಳೂರಿನ ಮೇಲೆ ನಿಯಂತ್ರಣ ಬೇಕು. ಬೆಂಗಳೂರು, ಕರ್ನಾಟಕದಲ್ಲೇ ಅತಿಹೆಚ್ಚು ಆದಾಯ ತಂದುಕೊಡುವ ಸ್ಥಳವಾಗಿದೆ. ಇದು ವಾಸ್ತವ’ ಎನ್ನುವುದು ಅವರ ಸ್ಪಷ್ಟ ನುಡಿ.
‘ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳು ಆಡಳಿತವನ್ನು ಹೆಚ್ಚಿನ ಕೇಂದ್ರೀಕರಣದತ್ತ ಒಯ್ಯುತ್ತಿವೆ, 74ನೇ ತಿದ್ದುಪಡಿಯಿಂದ ದೂರ ಒಯ್ಯುತ್ತಿವೆ’ ಎನ್ನುವ ವಿಜಯನ್, ‘ಸಾಮಾಜಿಕ ಕಾರ್ಯಕರ್ತರ ಬೆಂಬಲ ಬೇಕು ಎಂದರೆ, ಸರ್ಕಾರವು ಸರಿಯಾದ ಹೆಜ್ಜೆಗಳನ್ನು ಇಡಬೇಕು’ ಎಂದರು.
‘ಆದರ್ಶಯುತವಾದ, ಪರಿಪೂರ್ಣವಾದ ಪರಿಹಾರ ರಾತ್ರೋರಾತ್ರಿ ಬೇಕು ಎಂದು ನಾವು ಹೇಳುತ್ತಿಲ್ಲ. ಆದರೆ, ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಹಾಕಿ ಎನ್ನುತ್ತಿದ್ದೇವೆ. ಅದನ್ನು ನಾವು ವಾಸ್ತವಿಕ ನೆಲೆಯಿಂದ ಬೆಂಬಲಿಸುತ್ತೇವೆ. ನಾವು ಪ್ರತಿಭಟಿಸುತ್ತೇವೆ. ಆದರೂ ನಾವು ಅದನ್ನು ಬೆಂಬಲಿಸುತ್ತೇವೆ. ಆದರೆ, ಪ್ರಸ್ತುತ ನಡೆಯುತ್ತಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದು ಸಂವಿಧಾನದ ಕಗ್ಗೊಲೆ’ ಎಂದು ವಿಜಯನ್ ಹೇಳಿದರು.
ಜಿಬಿಎ ಯೋಜನೆಯ ಸವಾಲು
ಸರ್ಕಾರ ಯೋಜನೆಗಳನ್ನು ರೂಪಿಸಲು ಹೊರಡುವಾಗ ಎದುರಾಗುವ ಪ್ರಮುಖ ಸಮಸ್ಯೆ ಎಂದರೆ, ವಿವಿಧ ಯೋಜನೆಗಳ ನಡುವೆ ಸಮನ್ವಯ ಸಾಧಿಸುವುದು.
‘ಜಿಬಿಎಯು ಕೂಡಿಕೊಂಡಿರುವ ಪ್ರದೇಶ. ಆದರೆ, ಬಿಡಿಎ ಯೋಜನಾ ಪ್ರದೇಶವು ಈಗ ಉಂಗುರದ ಆಕಾರದಲ್ಲಿದೆ. ಯೋಜನೆಗಳನ್ನು ರೂಪಿಸುವ ಸವಾಲುಗಳ ವಿಚಾರದಲ್ಲಿ ಇದು ವಿಶಿಷ್ಟ ಸಂಗತಿಯಾಗಿದೆ’ ಎಂದು ಹೇಳುತ್ತಾರೆ ಬ್ರ್ಯಾಂಡ್ ಬೆಂಗಳೂರು ಸಮಿತಿಯ ಸದಸ್ಯ ರವಿಚಂದರ್ ವಿ. ಬಿಬಿಎಂಪಿಯನ್ನು ಐದು ಪಾಲಿಕೆಗಳನ್ನಾಗಿ ವಿಭಜಿಸುವುದರಲ್ಲಿ ಇವರು ಪ್ರಮುಖ ಪಾತ್ರವಹಿಸಿದ್ದಾರೆ.
‘ಜಿಬಿಎ ಯೋಜನೆ ಸಮಸ್ಯೆ ಅಲ್ಲ. 74ನೇ ತಿದ್ದುಪಡಿ ಅನುಸಾರ ಅವರು ಪಾಲಿಕೆಗಳ ಮೂಲಕ ತಳಮಟ್ಟದಿಂದ ಯೋಜನೆಗಳನ್ನು ರೂಪಿಸಬೇಕು. ಆದಾಗ್ಯೂ ಆ ಯೋಜನೆಗಳು ಬಿಡಿಎ ಪ್ರದೇಶಕ್ಕೆ ರೂಪಿಸಿರುವ ಯೋಜನೆಗಳೊಂದಿಗೆ ಹೊಂದಿಕೆಯಾಗಬೇಕು. ಬಿಡಿಎ ವ್ಯಾಪ್ತಿಯು ಜಿಬಿಎ ವ್ಯಾಪ್ತಿಗಿಂತಲೂ ಜಾಸ್ತಿ ಇದ್ದು, ಹೊರವಲಯದಲ್ಲಿ ಅದರ ಗಡಿ ಬರುತ್ತದೆ. ಈಗ ನಮ್ಮ ಮುಂದಿರುವ ಪ್ರಶ್ನೆ ಎಂದರೆ, ಜಿಬಿಎ ಮತ್ತು ಬಿಡಿಎ ರೂಪಿಸುವ ಯೋಜನೆಗಳನ್ನು ಸಮನ್ವಯಗೊಳಿಸಲು ಇರುವ ವ್ಯವಸ್ಥೆ ಯಾವುದು’ ಎಂದು ಕೇಳುತ್ತಾರೆ ರವಿಚಂದರ್.
ಬೆಂಗಳೂರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಸಿಂಹಪಾಲು ಸಮಸ್ಯೆಗಳು ಅದರ ಹೊರವಲಯಗಳಲ್ಲಿವೆ ಎಂಬುದು ಅವರ ಮಾತು.
‘ಜಿಬಿಎ ಪ್ರದೇಶದ ಪರಿಧಿಯ ಹೊರಗಡೆ ತುಂಬಾ ಸಮಸ್ಯೆಗಳಿವೆ. ಅಲ್ಲಿ ಗ್ರಾಮ ಪಂಚಾಯಿತಿಗಳು, ಜಿಲ್ಲಾ ಪಂಚಾಯಿತಿಗಳು, ನಗರಸಭೆಗಳು, ಪಟ್ಟಣ ಪಂಚಾಯಿತಿಗಳು ಬರುತ್ತವೆ. ಈ ಪ್ರದೇಶಗಳಲ್ಲಿ ಅನಿಯಂತ್ರಿತವಾಗಿ ಕಟ್ಟಡಗಳ ನಿರ್ಮಾಣವೂ ನಡೆಯುತ್ತಿದೆ. ಹಾಗಾಗಿ, ಜಿಬಿಎ ಪ್ರದೇಶಕ್ಕೆ ಹೋಲಿಸಿದರೆ, ಅದರ ಹೊರವಲಯಕ್ಕೆ ಪ್ರತ್ಯೇಕವಾಗಿ ಗಮನ ನೀಡುವ ಅವಶ್ಯಕತೆ ಇದೆ. ಇದು ಹೊಸದಾದ ಮತ್ತು ನಾವು ಹಿಂದೆಂದೂ ಎದುರಿಸದ ಸವಾಲು. ಇದನ್ನು ಹೇಗೆ ಬಗೆಹರಿಸುವುದು ಎಂಬುದರ ಬಗ್ಗೆ ನಮ್ಮಲ್ಲಿ ಸ್ಪಷ್ಟತೆ ಇರಬೇಕಾಗುತ್ತದೆ’ ಎನ್ನುವುದು ಅವರ ಅಭಿಪ್ರಾಯ.
ಎಂಪಿಸಿ ಮತ್ತು ಯೋಜನಾ ನಿಯಮಗಳ ಅಡಿಯಲ್ಲಿ ಜಿಬಿಎ ರೂಪಿಸುವ ಯೋಜನೆಗಳು ಐದೂ ಪಾಲಿಕೆಗಳಿಗೆ ಸಂಬಂಧಿಸಿದ, ಹೆಚ್ಚು ವಿಸ್ತೃತವಾದ ಮತ್ತು ಸಮಗ್ರವಾದ ಜಂಟಿ ಯೋಜನೆಗಳಾಗಿರಬೇಕು. ಹಾಗಾಗಿ, ಜಿಬಿಎ ಮುಂದೆ ಇಲ್ಲಿ ಎರಡು ಸವಾಲುಗಳಿವೆ; ಒಂದು, ಐದು ಪಾಲಿಕೆಗಳ ವೈಯಕ್ತಿಕ ಯೋಜನೆಗಳ ನಡುವೆ ಸಮನ್ವಯ ಸಾಧಿಸುವುದು ಮತ್ತು ಈ ಯೋಜನೆಗಳನ್ನು ಬಿಡಿಎ ವ್ಯಾಪ್ತಿಗೆ ಬರುವ ಜಿಬಿಎಯ ಹೊರವಲಯಕ್ಕೆ ಮೀಸಲಾದ ಯೋಜನೆಗಳೊಂದಿಗೆ ಸಮನ್ವಯಗೊಳಿಸುವುದು. ಯೋಜನೆಯ ಚೌಕಟ್ಟು ಇನ್ನೊಂದು ದೊಡ್ಡ ಸಮಸ್ಯೆ’ ಎಂಬುದು ರವಿಚಂದರ್ ಅವರ ವಿಶ್ಲೇಷಣೆ.
‘ಅಭಿವೃದ್ಧಿ ಯೋಜನೆಯ ವಿಚಾರದಲ್ಲಿ ನಾವು ಇನ್ನೂ ಹಳೆಯ ಮಾಸ್ಟರ್ ಪ್ಲಾನ್‌ಗೆ ಅಂಟಿಕೊಂಡಿರುತ್ತೇವೆಯೇ? ನಾವು ನಿಜವಾಗಿಯೂ ಏನು ಮಾಡಬೇಕು ಎಂದರೆ, ಪ್ರದೇಶಕ್ಕೆ ಸೀಮಿತವಾದ ಯೋಜನಾ ಚೌಕಟ್ಟುಗಳನ್ನು ರೂಪಿಸಬೇಕು’ ಎನ್ನುವುದು ಅವರ ಸಲಹೆ.
‘ಭೂಮಿಯ ಬಳಕೆ ಮತ್ತು ಅಭಿವೃದ್ಧಿಯ ನಿಯಮಗಳನ್ನೊಳಗೊಂಡ ವ್ಯವಸ್ಥೆಯನ್ನು ರೂಪಿಸಿದರೆ, ಪರಿಣಾಮಕಾರಿ ಫಲಿತಾಂಶವನ್ನು ಪಡೆಯಬಹುದು. ಆದರೆ, ಅದಕ್ಕಾಗಿ ನಮಗೆ ಒಂದು ಸಮರ್ಥ ಯೋಜನೆ ಬೇಕು. ಸುಮ್ಮನೆ ಕುಳಿತುಕೊಂಡು, ‘ನಾನೀಗ ಮುಂದಿನ 15 ವರ್ಷಗಳಿಗೆ ಯೋಜನೆ ರೂಪಿಸಿದ್ದೇನೆ. ಅದನ್ನು ಬಿಟ್ಟು ಬೇರೇನೂ ಮಾಡಬೇಕಾಗಿಲ್ಲ’ ಎಂದು ಹೇಳಲು ಸಾಧ್ಯವಿಲ್ಲ. ನನ್ನ ಪ್ರಕಾರ, ನಿರಂತರವಾಗಿ ಬದಲಾವಣೆ ಸಾಧ್ಯವಿರುವ ಯೋಜನೆ ಬೇಕು. ಅದು ಪ್ರತಿ ವರ್ಷ ಅಥವಾ ಎರಡು ವರ್ಷಗಳಿಗೊಮ್ಮೆ ಪರಿಷ್ಕರಣೆಗೊಳ್ಳುತ್ತಿರಬೇಕು’ ಎಂದು ರವಿಚಂದರ್ ಪ್ರತಿಪಾದಿಸುತ್ತಾರೆ.
‘ಮಾರ್ಗದರ್ಶಿ ತತ್ವಗಳನ್ನು ರೂಪಿಸಿ ಅದರ ಅಡಿಯಲ್ಲಿ ಯೋಜನೆಗಳನ್ನು ರೂಪಿಸುವುದು ಇದಕ್ಕೆ ಉತ್ತಮವಾದ ದಾರಿ. ಪ್ರಾದೇಶಿಕ ಕಾರ್ಯತಂತ್ರದ ಚೌಕಟ್ಟನ್ನು ಅಳವಡಿಸಿಕೊಳ್ಳಲು ನಾವು ಸಿದ್ಧರಿದ್ದೇವೆಯೇ? ಅದನ್ನು ಸಮರ್ಥವಾಗಿರುವಂತೆ ಮತ್ತು ಪರಿಷ್ಕರಿಸಲು ಸಾಧ್ಯವಾಗುವಂತೆ ನೋಡಿಕೊಳ್ಳುವ ಮೂಲಕ ಆ ಚೌಕಟ್ಟನ್ನು ಪರಿಣಾಮಕಾರಿಯನ್ನಾಗಿ ಮಾಡಬಹುದಾಗಿದೆ’ ಎಂದು ವಿವರಿಸುತ್ತಾರೆ ಅವರು.
‘ಜಿಬಿಎ ವ್ಯಾಪ್ತಿಗೆ ಹೊಸ ಪ್ರದೇಶಗಳನ್ನು ಸೇರಿಸುವ ಸಂಬಂಧ ಶಿಫಾರಸು ಮಾಡುವಂತೆ ಬ್ರ್ಯಾಂಡ್ ಬೆಂಗಳೂರು ಸಮಿತಿಗೆ ಸೂಚಿಸಲಾಗಿದೆ. ಸರ್ಕಾರವು ಸಮಿತಿಯ ಸಲಹೆಗಳನ್ನು ಸ್ವೀಕರಿಸಿದ ನಂತರ ಅದಕ್ಕೆ ಸಂಬಂಧಿಸಿದ ವರದಿ ಮತ್ತು ಅಧಿಸೂಚನೆ ಹೊರಡಿಸುವ ಪ್ರಕ್ರಿಯೆಗೆ ಹೆಚ್ಚು ಸಮಯ ಬೇಕಾಗುತ್ತದೆ. ವ್ಯಾಪ್ತಿಯು ಬದಲಾಗುವುದರಿಂದ ಯೋಜನೆಗಳನ್ನು ಸಮನ್ವಯಗೊಳಿಸುವುದು ಮತ್ತು ಅವುಗಳನ್ನು ಜಾರಿಗೆ ತರುವುದು ಮತ್ತೊಂದು ಸವಾಲಿನ ಕೆಲಸವಾಗಲಿದೆ’ ಎಂಬುದು ಅವರ ಹೇಳಿಕೆ.
ಮಾಸ್ಟರ್ ಪ್ಲಾನಿಂಗ್‌ಗೆ ಸಂಬಂಧಿಸಿದಂತೆ ಬಿಡಿಎ ಮತ್ತು ಜಿಬಿಎ ನಡುವೆ ಸಮನ್ವಯ ಪ್ರಕ್ರಿಯೆ ನಡೆಯುತ್ತಿದೆಯೇ ಎಂದು ಕೇಳಲು ‘ಪ್ರಜಾವಾಣಿ’ ಜಿಬಿಎ ಅಧಿಕಾರಿಗಳನ್ನು ಸಂಪರ್ಕಿಸಿತು. ಅವರು ಪ್ರತಿಕ್ರಿಯೆ ನೀಡಲಿಲ್ಲ. ಆದರೆ, ಈ ವಿಚಾರದಲ್ಲಿ ಈಗಲೇ ಏನೂ ಹೇಳಲು ಸಾಧ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.
ಆ ಪ್ರಕ್ರಿಯೆ ಹೀಗಿದ್ದರೆ ಚೆನ್ನಾಗಿರುತ್ತದೆ ಎಂದು ಹೇಳುತ್ತಾರೆ ರವಿಚಂದರ್...
1. ಪ್ರಾಥಮಿಕ ಹಂತದಲ್ಲಿ ಐದು ಪಾಲಿಕೆಗಳ ವ್ಯಾಪ್ತಿಗೆ ಬರುವ ಹಾಲಿ ಪ್ರದೇಶಗಳನ್ನು ಜಿಬಿಎ ಗುರುತಿಸಬೇಕು
2. ಐದು ಪಾಲಿಕೆಗಳು, ನಗರಸಭೆಗಳು, ಪಟ್ಟಣ ಪಂಚಾಯಿತಿಗಳು, ಜಿಲ್ಲಾ ಪಂಚಾಯಿತಿಗಳು ಮತ್ತು ಗ್ರಾಮ ಪಂಚಾಯಿತಿಗಳನ್ನು ಒಳಗೊಂಡ ಹೊಸ ಜಿಬಿಎ ಪ್ರದೇಶವನ್ನು ಸರ್ಕಾರ ಅಂಗೀಕರಿಸಬೇಕು
3. ನಂತರ ಜಿಬಿಎಯು ತನ್ನ ಹೊರವಲಯದಲ್ಲಿರುವ ಹೆಚ್ಚುವರಿ ಪ್ರದೇಶಗಳನ್ನು ಗುರುತಿಸಬೇಕು
4. ಬಿಡಿಎ ವ್ಯಾಪ್ತಿಗೆ ಹೊಸ ಪ್ರದೇಶಗಳು ಸೇರ್ಪಡೆಗೊಂಡು, ಅಲ್ಲಿನ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು.
ಬಿಡಿಎಗೆ ಹೆಚ್ಚು ಪ್ರದೇಶ ಸೇರ್ಪಡೆ?
ಒಂದು ವೇಳೆ ಜಿಬಿಎ ವ್ಯಾಪ್ತಿ ವಿಸ್ತಾರವಾದರೆ ಬಿಡಿಎಯ ಪಾತ್ರ ಏನು ಎಂಬುದು ಹಲವು ಸಾಮಾಜಿಕ ಕಾರ್ಯಕರ್ತರು ಕೇಳುತ್ತಿರುವ ಪ್ರಶ್ನೆ.
‘ಬಿಡಿಎ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳು ಕುಗ್ಗಿರುವುದರಿಂದ ಬೆಂಗಳೂರಿನ ಹೊರವಲಯ ದಲ್ಲಿ ಅಭಿವೃದ್ಧಿಶೀಲ ಪ್ರದೇಶಗಳನ್ನು ಬಿಡಿಎಗೆ ಸೇರಿಸಬೇಕು ಎಂದು ನಾವು ಕೇಳಿದ್ದೇವೆ. ಬೆಂಗಳೂರಿನ ಗ್ರಾಮೀಣ ಭಾಗಗಳು ವೇಗವಾಗಿ ವಿಸ್ತಾರಗೊಳ್ಳುತ್ತಿದ್ದು, ಅಲ್ಲಿಗೆ ಯೋಜನೆಗಳ ಅಗತ್ಯವಿದೆ’ ಎಂದು ಹೇಳುತ್ತಾರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಎ.ಹ್ಯಾರಿಸ್.
ಬಿಡಿಎ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸುವ ಚಿಂತನೆಗೆ ವಿವಿಧ ವಲಯಗಳಿಂದ ಬೆಂಬಲ ವ್ಯಕ್ತವಾಗಿದೆ. ಪ್ರಾಧಿಕಾರವು ರಾಜ್ಯ ಸರ್ಕಾರದಿಂದ ಸ್ಪಷ್ಟನೆಗಾಗಿ ಕಾಯುತ್ತಿದೆ ಎನ್ನುತ್ತಾರೆ ಅವರು.
‘ಬೆಂಗಳೂರಿಗನಾಗಿ, ಯೋಜನಾ ಪ್ರಕ್ರಿಯೆಯನ್ನು ಒಂದು ಸಂಸ್ಥೆ ನಿರ್ವಹಿಸಬೇಕು ಎಂಬುದು ನನ್ನ ಅನಿಸಿಕೆ. ಅದು ಜಿಬಿಎ ಆಗಿರಬಹುದು ಅಥವಾ ಬಿಡಿಎಯೂ ಆಗಿರಬಹುದು. ಆದರೆ, ಸರ್ಕಾರದ ಮಟ್ಟದಲ್ಲಿ ಯೋಜನಾ ಪ್ರಕ್ರಿಯೆಯನ್ನು ಎರಡು ಸಂಸ್ಥೆಗಳ ನಡುವೆ ವಿಭಜಿಸಲು ತೀರ್ಮಾನಿಸಲಾಗಿದೆ. ನಾವು ಅದರ ಅನುಸಾರ ನಡೆಯಲೇಬೇಕು’ ಎಂದು ಅವರು ಅಭಿಪ್ರಾಯ ಪಡುತ್ತಾರೆ.
‘ಮಾಸ್ಟರ್ ಪ್ಲಾನಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸರ್ಕಾರ ಇನ್ನೂ ಗಡುವು ನಿಗದಿಪಡಿಸಿಲ್ಲ. ಪ್ರಕ್ರಿಯೆ ಶುರುವಾದ ನಂತರ ಪ್ರಾಧಿಕಾರವು ಜಿಬಿಎನೊಂದಿಗೆ ಸಮನ್ವಯ ಸಭೆಗಳನ್ನು ನಡೆಸಲಿದೆ’ ಎಂದು ಹ್ಯಾರಿಸ್ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.