ADVERTISEMENT

ಆಳ-ಅಗಲ| ಮನೆ ಮಾಲಿನ್ಯ ಮಹಿಳೆಗೆ ಆಪತ್ತು

ಘನ ಇಂಧನ, ಮಣ್ಣಿನ ಒಲೆ, ಕಳಪೆ ಅಡುಗೆ ಎಣ್ಣೆ ಬಳಕೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 0:30 IST
Last Updated 16 ಜುಲೈ 2025, 0:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
ಅಡುಗೆ ಮಾಡಲು ಮಾಲಿನ್ಯಕಾರಕ ಇಂಧನಗಳನ್ನು (ಸೌದೆ, ಸೆಗಣಿ, ಇದ್ದಿಲು ಇತ್ಯಾದಿ) ಬಳಸುವುದರಿಂದ ಮನೆಗಳಲ್ಲಿ ವಾಯು ಮಾಲಿನ್ಯ (ಎಚ್‌ಎಪಿ) ಹೆಚ್ಚಾಗುತ್ತಿದ್ದು, ಇದು ಮಹಿಳೆಯರ ಗ್ರಹಿಕೆ ಸಾಮರ್ಥ್ಯವೂ ಸೇರಿದಂತೆ ಅವರ ಕಾರ್ಯಕ್ಷಮತೆಯ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತಿದೆ ಎಂದು ಲ್ಯಾನ್ಸೆಟ್‌ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿ ತಿಳಿಸಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ 45 ವರ್ಷಕ್ಕಿಂತ ಹೆಚ್ಚು ವಯಸ್ಸಿನವರನ್ನು ಕೇಂದ್ರೀಕರಿಸಿ ಅಧ್ಯಯನ ನಡೆಸಲಾಗಿದೆ. ಘನ ಇಂಧನಗಳಲ್ಲದೆ‌ ಮಣ್ಣಿನ ಒಲೆಗಳು, ಕಳಪೆ ಅಡುಗೆ ಎಣ್ಣೆ ಬಳಕೆಯಿಂದಲೂ ಮಾಲಿನ್ಯ ಹೆಚ್ಚಾಗುತ್ತಿದೆ ಎಂದು ವರದಿ ಹೇಳಿದೆ

ಅಡುಗೆ ಉದ್ದೇಶಕ್ಕೆ ಮನೆಗಳಲ್ಲಿ ಘನ ರೂಪದ ಇಂಧನಗಳು, ಕಳಪೆ ಅಡುಗೆ ಎಣ್ಣೆಯ ಬಳಕೆ ಹಾಗೂ ಪರಿಸರ ಸ್ನೇಹಿ ಅಲ್ಲದ ಅಡುಗೆ ವಿಧಾನಗಳನ್ನು ಅನುಸರಿಸುವುದರಿಂದ ಉಂಟಾಗುವ ವಾಯು ಮಾಲಿನ್ಯದಿಂದ ಜನರ ಗ್ರಹಿಕೆ ಸಾಮರ್ಥ್ಯದಲ್ಲಿ ಕುಸಿತ ಉಂಟಾಗುತ್ತಿದೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಮಿದುಳು ಸಂಶೋಧನಾ ಕೇಂದ್ರ ಮತ್ತು ಷಿಕಾಗೊ ವಿಶ್ವವಿದ್ಯಾಲಯದ ಅಧ್ಯಯನಕಾರರ ತಂಡ ಇತ್ತೀಚೆಗೆ ನಡೆಸಿದ ಅಧ್ಯಯನ ಹೇಳಿದೆ. ‘ಲ್ಯಾನ್ಸೆಟ್‌’ನ ಪ್ರಾದೇಶಿಕ ಆರೋಗ್ಯ–ಆಗ್ನೇಯ ಏಷ್ಯಾ ಜರ್ನಲ್‌ನಲ್ಲಿ ಈ ಅಧ್ಯಯನದ ವರದಿ ಪ್ರಕಟವಾಗಿದ್ದು, ಗ್ರಾಮೀಣ ಭಾಗದ ಮಹಿಳೆಯರು ಈ ಸಮಸ್ಯೆಗೆ ಹೆಚ್ಚು ಒಳಗಾಗುತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

2018ರ ಜನವರಿಯಿಂದ 2023ರ ಡಿಸೆಂಬರ್‌ವರೆಗೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಹಳ್ಳಿಗಳಲ್ಲಿ ಸಂಗ್ರಹಿಸಿದ ದತ್ತಾಂಶ ಆಧರಿಸಿ ಅಧ್ಯಯನ ನಡೆಸಲಾಗಿದೆ. ಐಐಎಸ್‌ಸಿಯ ಮಿದುಳು ಸಂಶೋಧನಾ ಕೇಂದ್ರವು ಇಲ್ಲಿ ನಡೆಸುತ್ತಿರುವ ಸಿಬಿಆರ್‌–ಎಸ್‌ಎಎನ್ಎಸ್‌ಸಿಒಜಿ (CBR-SANSCOG) ಅಧ್ಯಯನದ ಭಾಗವಾಗಿ ಸಂಗ್ರಹಿಸಿರುವ ದತ್ತಾಂಶವನ್ನು ಅಧ್ಯಯನಕಾರರು ವಿಶ್ಲೇಷಣೆಗೆ ಒಳಪಡಿಸಿದ್ದಾರೆ. 45 ವರ್ಷಕ್ಕಿಂತ ಹೆಚ್ಚು ವಯಸ್ಸಿನ 4,145 ಮಂದಿಯನ್ನು ಅಧ್ಯಯನ ಮಾಡಲಾಗಿತ್ತು. ಅವರ ಪೈಕಿ ವಯಸ್ಸು ಮತ್ತು ಲಿಂಗವನ್ನು ಆಧರಿಸಿ 994 ಮಂದಿಯನ್ನು ಮಿದುಳು ಎಂಆರ್‌ಐ ಸ್ಕ್ಯಾನ್‌ಗೆ ಒಳಪಡಿಸಲಾಗಿತ್ತು.    

‘ಎಚ್‌ಎಪಿ’ ಎನ್ನುವುದು ಮನೆಯೊಳಗಿನ ವಾಯು ಮಾಲಿನ್ಯವಾಗಿದ್ದು, ಅಡುಗೆ ಮಾಡಲು ಬಳಸುವ ಇಂಧನ, ವಿಧಾನಗಳಿಂದ ಉಂಟಾಗುತ್ತದೆ. ಅಡುಗೆ ಮಾಡಲು ಬಳಸುವ ಸೌದೆ, ಬೆಳೆಗಳ ಕಳೆ, ಇದ್ದಿಲು, ಕಲ್ಲಿದ್ದಲು, ಸೆಗಣಿ ಬೆರಣಿಯಂತಹ ಘನ ಇಂಧನಗಳು, ಸೀಮೆಎಣ್ಣೆ, ಮಣ್ಣಿನ ಒಲೆ, ಕಳಪೆ ಅಡುಗೆ ಎಣ್ಣೆಗಳನ್ನು ಬಳಸುವುದರಿಂದ ಹೊರ ಬರುವ ಹೊಗೆ, ಮಾಲಿನ್ಯಕಾರಕ ಕಣಗಳು ಮನೆಯ ಒಳಗೆ ಮಾಲಿನ್ಯವನ್ನು ಉಂಟು ಮಾಡುತ್ತಿವೆ. ಇದು, ಅಡುಗೆ ಮಾಡುವ ಮಹಿಳೆಯರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ವರದಿ ಹೇಳಿದೆ. 

ADVERTISEMENT

ಕುಗ್ಗುವ ಕಾರ್ಯಕ್ಷಮತೆ

ಇಂಧನಗಳನ್ನು ಮನೆಯ ಒಳಗೆ ಉರಿಸಿದಾಗ ಇಂಗಾಲ, ಸಾರಜನಕ, ನೈಟ್ರೊಜನ್, ಗಂಧಕದಂತಹ ಹೆಚ್ಚು ಸಾಂದ್ರತೆ ಹೊಂದಿರುವ ಲೋಹಗಳ ಆಕ್ಸೈಡ್‌ಗಳು, ಸೂಕ್ಷ್ಮ ಕಣಗಳು ಬಿಡುಗಡೆಯಾಗುತ್ತವೆ. ಅವು ಮಹಿಳೆಯರ ಮಿದುಳಿನ ಮೇಲೆ ಹಲವು ರೀತಿಯ ಪರಿಣಾಮಗಳನ್ನು ಬೀರುತ್ತಿದ್ದು, ಮಿದುಳಿನ ಉರಿಯೂತ ಮತ್ತು ಒತ್ತಡಕ್ಕೆ (ಆ್ಯಕ್ಸಿಡೇಟಿವ್ ಸ್ಟ್ರೆಸ್) ಕಾರಣವಾಗುತ್ತಿದೆ. ಇದು ಅವರ ಗ್ರಹಿಕೆಯ ಸಾಮರ್ಥ್ಯ, ಕಣ್ಣಿನ ದೃಷ್ಟಿಯ ಸಾಮರ್ಥ್ಯ ಮತ್ತು ಒಟ್ಟಾರೆ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತಿದೆ.

ಶುದ್ಧ ಇಂಧನ ಮೂಲಗಳನ್ನು/ಅಡುಗೆ ವಿಧಾನಗಳನ್ನು ಬಳಸುವವರಿಗೆ ಹೋಲಿಸಿದರೆ, ಈ ದೋಷಗಳು ಎಚ್‌ಎಪಿ ಹೆಚ್ಚಿರುವ ಮನೆಗಳಲ್ಲಿ ಹೆಚ್ಚು ಕಂಡುಬರುತ್ತಿವೆ. ನಗರ ಪ್ರದೇಶಕ್ಕಿಂತಲೂ ಗ್ರಾಮೀಣ ಪ್ರದೇಶದಲ್ಲಿ ಮನೆಯೊಳಗಿನ ವಾಯು ಮಾಲಿನ್ಯ ಹೆಚ್ಚಾಗಿದ್ದು, ಸಹಜವಾಗಿಯೇ ಅಲ್ಲಿನ ಮಹಿಳೆಯರು ಹೆಚ್ಚು ಸಮಸ್ಯೆಗೆ ಗುರಿಯಾಗುತ್ತಿದ್ದಾರೆ ಎಂದು ವರದಿ ವಿಶ್ಲೇಷಿಸಿದೆ.  

ಗ್ರಹಿಕೆ ಸಾಮರ್ಥ್ಯದಲ್ಲಿ ಕುಸಿತ ಎಂದರೆ, ನೆನಪು, ತರ್ಕ ಶಕ್ತಿ ಮತ್ತು ಮಾತಿನ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಿ, ಅವುಗಳ ಸಾಮರ್ಥ್ಯ ಕ್ಷೀಣಿಸುವುದು. ಅದರಿಂದ ಅವರ ದೈನಂದಿನ ಚಟುವಟಿಕೆಗಳಿಗೆ ತೊಂದರೆಯಾಗುತ್ತದೆ. ಅದು ಮುಂದುವರಿದು  ಬುದ್ಧಿಶಕ್ತಿ ಕುಂದುವಿಕೆ (ಡಿಮೆನ್ಶಿಯಾ) ಮತ್ತು ಮರೆವಿನ ಕಾಯಿಲೆಗೆ ಕಾರಣವಾಗುವ ಸಂಭವವೂ ಇರುತ್ತದೆ. 

ಭಾರತದಲ್ಲಿ ಈ ಎರಡೂ ಕಾಯಿಲೆಗಳು ಹೆಚ್ಚುತ್ತಿದ್ದು, ಅಂತಿಮವಾಗಿ ಅದು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲೆ ಒತ್ತಡ ಹೆಚ್ಚುವಂತೆ ಮಾಡುತ್ತಿದೆ. ಈ ದಿಸೆಯಲ್ಲಿ ಮನೆಯೊಳಗಿನ ವಾಯು ಮಾಲಿನ್ಯದ ಪರಿಣಾಮಗಳ ಕುರಿತ ಈ ಅಧ್ಯಯನವು ಮಹತ್ವ ಪಡೆದುಕೊಂಡಿದೆ.

ಮೊದಲ ಅಧ್ಯಯನ

ವಾಯು ಮಾಲಿನ್ಯವು  ಭಾರತದ ಗ್ರಾಮೀಣ ಮಹಿಳೆಯರ ಮಿದುಳಿನ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎನ್ನುವ ಬಗ್ಗೆ ನಡೆದ ಮೊದಲ ಅಧ್ಯಯನ ಇದಾಗಿದೆ. ಚೀನಾ ಮತ್ತು ಮೆಕ್ಸಿಕೊದಲ್ಲೂ ಮಾಲಿನ್ಯಕಾರಕ ಅಡುಗೆ ಎಣ್ಣೆ/ಅಡುಗೆ ಮಾಡುವ ತಂತ್ರಜ್ಞಾನ ಬಳಸುವುದರಿಂದ ಜನರ ಗ್ರಹಿಕೆ ಸಾಮರ್ಥ್ಯ ಕುಗ್ಗಿದೆ ಎಂದು ಅಧ್ಯಯನಗಳಿಂದ ಈಗಾಗಲೇ ತಿಳಿದುಬಂದಿದೆ. 

ಮನೆಯಲ್ಲಿನ ವಾಯು ಮಾಲಿನ್ಯವು ಜನರ ಶ್ವಾಸಕೋಶ ಮತ್ತು ಹೃದಯದ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಬಗ್ಗೆಯೇ ಇದುವರೆಗೆ ಹೆಚ್ಚಿನ ಅಧ್ಯಯನಗಳು ಗಮನ ಕೇಂದ್ರೀಕರಿಸಿದ್ದವು. ಅದರಿಂದ ಜನರ ಮಿದುಳು ಮತ್ತು ಇತರ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮಗಳು ಉಂಟಾಗುತ್ತಿವೆ ಎನ್ನುವುದರ ಬಗ್ಗೆ ಇತ್ತೀಚೆಗೆ ಅಧ್ಯಯನಕಾರರು ಹೆಚ್ಚು ಗಮನ ಹರಿಸತೊಡಗಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಹೇಳುವುದೇನು?

ಮನೆಯೊಳಗಿನ ವಾಯು ಮಾಲಿನ್ಯ (ಎಚ್‌ಎಪಿ) ಭಾರತಕ್ಕಷ್ಟೆ ಸೀಮಿತವಾಗಿಲ್ಲ; ಅದು ಜಾಗತಿಕ ಸಮಸ್ಯೆ. ಬಡ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಇದು ಗಂಭೀರ ಸ್ವರೂಪದ ಸಮಸ್ಯೆಯನ್ನು ತಂದೊಡ್ಡುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಎಚ್‌ಎಪಿಯನ್ನು ಗಂಭೀರವಾಗಿ ಪರಿಗಣಿಸಿದೆ. 2014ರಲ್ಲೇ ಅದು ಪರಿಸರಸ್ನೇಹಿ ಇಂಧನ ಬಳಕೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಸೀಮೆಎಣ್ಣೆ, ಕಲ್ಲಿದ್ದಲಿನಂತಹ ಪರಿಸರ ಮಾಲಿನ್ಯಕಾರಿ, ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತಹ ಇಂಧನಗಳನ್ನು ಬಳಸುವುದು ಬೇಡ  ಎಂದು ಅದು ಶಿಫಾರಸು ಮಾಡಿತ್ತು. 

ಇದರ ವಿರುದ್ಧ ಪ್ರಬಲವಾದ ನೀತಿ ರೂಪಿಸದೇ ಹೋದರೆ, 2030ರಲ್ಲೂ 180 ಕೋಟಿ ಜನರಿಗೆ ಪರಿಸರಸ್ನೇಹಿ ಇಂಧನದ ಕೊರತೆ ಕಾಡಲಿದೆ ಎಂದು ಡಬ್ಲ್ಯುಎಚ್‌ಒ ಹೇಳಿದೆ.  ಹಲವು ರಾಷ್ಟ್ರಗಳಲ್ಲಿ ಮನೆಯೊಳಗಿನ ವಾಯು ಮಾಲಿನ್ಯ ಹಾಗೂ ಅದರ ಪರಿಣಾಮಗಳ ಬಗ್ಗೆ  ಅಧ್ಯಯನಗಳೂ ನಡೆದಿವೆ. ಈ ಮಾಲಿನ್ಯವು ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂಬುದನ್ನು ಎಲ್ಲ ಅಧ್ಯಯನಗಳೂ ದೃಢಪಡಿಸಿವೆ. 

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಎಚ್‌ಎಪಿಯಿಂದಾಗಿ ಸಾಂಕ್ರಾಮಿಕವಲ್ಲದ ಹಲವು ರೋಗಗಳು ಮನುಷ್ಯನನ್ನು ಬಾಧಿಸುತ್ತವೆ.‌

* ಪಾರ್ಶ್ವವಾಯು, ರಕ್ತದ ಪೂರೈಕೆ ಕೊರತೆಯಿಂದ ಬರುವ ಹೃದಯ ಕಾಯಿಲೆ, ಶ್ವಾಸಕೋಶ ಸೋಂಕು, ಸಿಒಪಿಡಿ (ಗಾಳಿಯ ಸಂಚಾರಕ್ಕೆ ತಡೆ ಒಡ್ಡುವುದರಿಂದ ಮತ್ತು ಶ್ವಾಸಕೋಶಕ್ಕೆ ಆಗುವ ಹಾನಿಯಿಂದಾಗಿ ಉಂಟಾಗುವ ಗಂಭೀರ ಕಾಯಿಲೆ) ಮತ್ತು ಶ್ವಾಸಕೋಶದ ಕ್ಯಾನ್ಸರ್‌ ಎಚ್‌ಎಪಿಯಿಂದ ಬರುವ ಪ್ರಮುಖ ಕಾಯಿಲೆಗಳು

* ಮಹಿಳೆಯರು ಮತ್ತು ಮಕ್ಕಳ ಮೇಲೆ ಇದರ ಪರಿಣಾಮ ಹೆಚ್ಚು

* ಜನನ ಸಂದರ್ಭದಲ್ಲಿ ಕಡಿಮೆ ತೂಕ, ಕ್ಷಯ ರೋಗ, ಕಣ್ಣಿನ ಪೊರೆ ಸಮಸ್ಯೆ, ಗಂಟಲಕುಳಿ ಮತ್ತು ಧ್ವನಿಪೆಟ್ಟಿಗೆಯ ಕ್ಯಾನ್ಸರ್‌ಗೂ ಇದು ಕಾರಣವಾಗಬಹುದು ಎಂಬುದಕ್ಕೆ ಸಾಕ್ಷ್ಯ ಸಿಕ್ಕಿದೆ

ಪರಿಹಾರ ಏನು?

*  ಆರೋಗ್ಯ ಅಸಮಾನತೆ ಸಮಸ್ಯೆ ಎದುರಿಸಲು ಮತ್ತು 2030ರ ಸುಸ್ಥಿರ ಅಭಿವೃದ್ಧಿ ಕಾರ್ಯಸೂಚಿಯನ್ನು ಸಾಧಿಸುವುದಕ್ಕಾಗಿ ಎಲ್‌ಪಿಜಿ, ಜೈವಿಕ ಅನಿಲ, ಸೌರ, ವಿದ್ಯುತ್‌ ಸೇರಿದಂತೆ ಪರಿಸರ ಸ್ನೇಹಿ ಇಂಧನಗಳು ಜನರಿಗೆ ಸಿಗುವಂತೆ ಮಾಡಬೇಕು

* ಬಡ ಮತ್ತು ಮಧ್ಯಮ ಆದಾಯ ಹೊಂದಿರುವ ರಾಷ್ಟ್ರಗಳು ಈ ದಿಸೆಯಲ್ಲಿ ತಮ್ಮ ನೀತಿಗಳಲ್ಲಿ ಮಹತ್ವದ ಬದಲಾವಣೆ ತರಬೇಕು

ಸಾಂದರ್ಭಿಕ ಚಿತ್ರ

ಪರಿಹಾರ ಏನು?

*ಆರೋಗ್ಯ ಅಸಮಾನತೆ ಸಮಸ್ಯೆ ಎದುರಿಸಲು ಮತ್ತು 2030ರ ಸುಸ್ಥಿರ ಅಭಿವೃದ್ಧಿ ಕಾರ್ಯಸೂಚಿಯನ್ನು ಸಾಧಿಸುವುದಕ್ಕಾಗಿ ಎಲ್‌ಪಿಜಿ ಜೈವಿಕ ಅನಿಲ ಸೌರ ವಿದ್ಯುತ್‌ ಸೇರಿದಂತೆ ಪರಿಸರ ಸ್ನೇಹಿ ಇಂಧನಗಳು ಜನರಿಗೆ ಸಿಗುವಂತೆ ಮಾಡಬೇಕು

*ಬಡ ಮತ್ತು ಮಧ್ಯಮ ಆದಾಯ ಹೊಂದಿರುವ ರಾಷ್ಟ್ರಗಳು ಈ ದಿಸೆಯಲ್ಲಿ ತಮ್ಮ ನೀತಿಗಳಲ್ಲಿ ಮಹತ್ವದ ಬದಲಾವಣೆ ತರಬೇಕು

ಆಧಾರ: ‘ಲ್ಯಾನ್ಸೆಟ್‌ ಪ್ರಾದೇಶಿಕ ಆರೋಗ್ಯ–ಆಗ್ನೇಯ ಏಷ್ಯಾ’ದಲ್ಲಿ ಪ್ರಕಟಿತ ಅಧ್ಯಯನ ವರದಿ, ಪಿಟಿಐ, ವಿಶ್ವ ಆರೋಗ್ಯ ಸಂಸ್ಥೆ,

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.