ಭಾರತದಲ್ಲಿ ಎಲೆಕ್ಟ್ರಿಕಲ್ ವಾಹನ ತಯಾರಿಕೆ, ಎಲೆಕ್ಟ್ರಾನಿಕ್ಸ್ ಸೇರಿದಂತೆ ವಿವಿಧ ಉದ್ಯಮಗಳಿಗೆ ಅಗತ್ಯವಾಗಿ ಬೇಕಾಗಿರುವ ಅಪರೂಪದ ಲೋಹಗಳ ಕೊರತೆ ಉಂಟಾಗಿದ್ದು, ಉದ್ಯಮ ರಂಗದಲ್ಲಿ ಆತಂಕ ವ್ಯಕ್ತವಾಗಿದೆ. ಅಮೆರಿಕದೊಂದಿಗಿನ ಸುಂಕ ಸಮರದ ಭಾಗವಾಗಿ ಚೀನಾವು ಏಪ್ರಿಲ್ 4ರಿಂದ ಅಪರೂಪದ ಲೋಹಗಳ ರಫ್ತಿನ ಮೇಲೆ ನಿಯಂತ್ರಣ ಹೇರಿದೆ. ಭಾರತವು ಈ ಅಪರೂಪದ ಲೋಹಗಳಿಗಾಗಿ ಚೀನಾವನ್ನು ಅವಲಂಬಿಸಿದ್ದು, ಅಲ್ಲಿಂದ ಆಮದು ಮಾಡಿಕೊಳ್ಳುತ್ತಿದೆ. ಭಾರತದಲ್ಲೂ ಅಪರೂಪದ ಲೋಹಗಳ ನಿಕ್ಷೇಪ ಇದೆ. ಆದರೆ, ಇಲ್ಲಿ ಅವುಗಳ ಉತ್ಪಾದನೆ, ಸಂಸ್ಕರಣೆ ಕಡಿಮೆ. ಚೀನಾದ ಮೇಲೆ ಅವಲಂಬನೆ ತಪ್ಪಿಸಲು ಈ ಲೋಹಗಳ ಗಣಿಗಾರಿಕೆ, ಉತ್ಪಾದನೆ ಹೆಚ್ಚಿಸಲು ಭಾರತ ಚಿಂತನೆ ನಡೆಸಿದೆ
ವಿರಳ ಲೋಹಗಳ ಲಭ್ಯತೆಯಲ್ಲಿನ ಸಮಸ್ಯೆಯಿಂದಾಗಿ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಯಲ್ಲಿ ಕಡಿತ ಮಾಡಲಾಗುವುದು ಎಂದು ಭಾರತದ ಪ್ರಸಿದ್ಧ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ಕಳೆದ ವಾರ ಹೇಳಿದ್ದು ಭಾರಿ ಸುದ್ದಿಯಾಗಿತ್ತು. ಅಮೆರಿಕದೊಂದಿಗಿನ ಸುಂಕ ಸಮರ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳಿಂದಾಗಿ 17 ವಿರಳ ಲೋಹಗಳು ಮತ್ತು ಅವುಗಳ ಮೌಲ್ಯವರ್ಧಿತ ಉತ್ಪನ್ನಗಳ ರಫ್ತಿನ ಮೇಲೆ ಚೀನಾ ಏಪ್ರಿಲ್‌ನಿಂದ ಕೆಲವು ನಿರ್ಬಂಧಗಳನ್ನು ಹೇರಿದೆ. ಅದು ಜಾಗತಿಕ ವಿರಳ ಲೋಹಗಳ ಪೂರೈಕೆ ಸರಪಳಿಯ ಮೇಲೆ ಪರಿಣಾಮ ಬೀರಿದ್ದು, ಭಾರತದ ವಾಹನ ತಯಾರಿಕಾ ವಲಯ ಮತ್ತು ನವೀಕರಿಸಬಹುದಾದ ಇಂಧನ ವಲಯದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟುಮಾಡಿದೆ.
ಅಪರೂಪದ ಲೋಹಗಳು ಹೆಸರಿಗೆ ಅಪರೂಪವಾಗಿದ್ದರೂ ಜಗತ್ತಿನ ವಿವಿಧೆಡೆ ಲಭ್ಯ ಇವೆ. ಆದರೆ, ಭೂಮಿಯಲ್ಲಿ ಕಬ್ಬಿಣ, ಚಿನ್ನ ಅಥವಾ ಇತರ ಖನಿಜಗಳ ಮಾದರಿಯಲ್ಲಿ ಇವುಗಳ ನಿಕ್ಷೇಪ ಇಲ್ಲ. ಭೂಮಿಯ ಹೊರ ಪದರದಲ್ಲಿ ಅಲ್ಲಲ್ಲಿ ಕಡಿಮೆ ಪ್ರಮಾಣದಲ್ಲಿ ತೆಳುವಾಗಿ ಹರಡಿಕೊಂಡಿವೆ. ಇತರ ಖನಿಜಗಳೊಂದಿಗೆ ಬೆರೆತಿವೆ. ಹೀಗಾಗಿ ಇವುಗಳ ಗಣಿಗಾರಿಕೆ, ಸಂಸ್ಕರಣೆ ತುಂಬಾ ದುಬಾರಿ. ಖನಿಜಗಳಿಂದ ಅವುಗಳನ್ನು ಪ್ರತ್ಯೇಕಿಸುವುದು ಮತ್ತು ಸಂಸ್ಕರಣೆ ಮಾಡುವುದು ಭಾರಿ ಕೌಶಲಯುಕ್ತ ಕೆಲಸವಾಗಿದೆ.
ವಿರಳ ಲೋಹಗಳ ಗಣಿಗಾರಿಕೆ ಮತ್ತು ಸಂಸ್ಕರಣೆಯಲ್ಲಿ ಚೀನಾ ಏಕಸ್ವಾಮ್ಯ ಸಾಧಿಸಿದೆ. ಒಂದು ಮೂಲದ ಪ್ರಕಾರ, ಜಾಗತಿಕವಾಗಿ ವಿರಳ ಲೋಹಗಳ ಗಣಿಗಾರಿಕೆಯಲ್ಲಿ ಶೇ 60ರಷ್ಟು ಮತ್ತು ಅವುಗಳ ಒಟ್ಟಾರೆ ಮಾರುಕಟ್ಟೆಯಲ್ಲಿ ಶೇ 90ರಷ್ಟು ಚೀನಾ ಹಿಡಿತದಲ್ಲಿದೆ. ಇವಿ ವಾಹನಗಳು, ರಕ್ಷಣೆ, ವಾಯುಸೇವೆ ಮತ್ತಿತರ ವಲಯಗಳಲ್ಲಿ ವಿರಳ ಲೋಹಗಳನ್ನು ಬಳಸಲಾಗುತ್ತಿದ್ದು, ಅವುಗಳಿಗೆ ಜಗತ್ತಿನಾದ್ಯಂತ ಬೇಡಿಕೆ ಹೆಚ್ಚಿದೆ. ಆದರೆ, ಚೀನಾ ಅವುಗಳ ಪೂರೈಕೆಯನ್ನು ತನಗೆ ಬೇಕಾದಂತೆ ನಿಯಂತ್ರಿಸುತ್ತಿರುವುದರಿಂದ ವಿವಿಧ ದೇಶಗಳ ನಡುವೆ ಅವುಗಳ ಲಭ್ಯತೆಯಲ್ಲಿ ವ್ಯತ್ಯಾಸಗಳಾಗುತ್ತಿವೆ.
ಭಾರತವು ಆಮದು ಮಾಡಿಕೊಳ್ಳುತ್ತಿರುವ ವಿರಳ ಲೋಹಗಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಆಮದಿನಲ್ಲಿ ಸಿಂಹಪಾಲು ಚೀನಾದಿಂದ ಬರುತ್ತಿದೆ. ಚೀನಾ ಬಿಟ್ಟು ಹಾಂಕಾಂಗ್, ಅಮೆರಿಕ, ಬ್ರಿಟನ್ , ರಷ್ಯಾ, ಆಸ್ಟ್ರಿಯಾ ದಕ್ಷಿಣ ಕೊರಿಯಾ, ಫ್ರಾನ್ಸ್‌ನಿಂದ ಆಮದು ಮಾಡಿಕೊಳ್ಳುತ್ತಿದೆ. ಚೀನಾದಿಂದ ಆಗುತ್ತಿರುವ ಪೂರೈಕೆಯಲ್ಲಿ ಇದೇ ರೀತಿಯ ಸಮಸ್ಯೆ ಮುಂದುವರಿದರೆ, ಭಾರತದಲ್ಲಿ ಇವಿ ವಾಹನಗಳ ಉತ್ಪಾದನೆಗೆ ಪೆಟ್ಟು ಬೀಳಲಿದೆ ಎನ್ನುವ ಆತಂಕವನ್ನೂ ಕೆಲವು ಉದ್ಯಮಿಗಳು ವ್ಯಕ್ತಪಡಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಭಾರತದಲ್ಲಿ ಇವಿಗಳ ಉತ್ಪಾದನೆಗೆ ಬಳಸುವ ವಿರಳ ಲೋಹಗಳು ಎರಡು–ಮೂರು ವಾರಗಳಿಗೆ ಆಗುವಷ್ಟು ಮಾತ್ರ ದಾಸ್ತಾನಿದೆ. ಈ ಕಾರಣಕ್ಕಾಗಿಯೇ ವಾಹನ ಉದ್ಯಮದ ನಿಯೋಗವೊಂದು ಚೀನಾಕ್ಕೆ ತೆರಳಲು ಯೋಚನೆಯನ್ನೂ ಮಾಡಿದೆ.
ಭಾರತವು ವಿರಳ ಲೋಹಗಳ ನಿಕ್ಷೇಪವನ್ನು ಹೊಂದಿರುವ ಜಗತ್ತಿನ ಮೂರನೇ ದೊಡ್ಡ ರಾಷ್ಟ್ರವಾಗಿದೆ. ಐಆರ್‌ಇಎಲ್ (ಇಂಡಿಯನ್ ರೇರ್ ಅರ್ಥ್ಸ್ ಲಿಮಿಟೆಡ್) ಭಾರತದ ಸರ್ಕಾರಿ ಸ್ವಾಮ್ಯದ ವಿರಳ ಲೋಹಗಳ ಗಣಿಗಾರಿಕಾ ಸಂಸ್ಥೆ. ದೇಶೀಯ ಬಳಕೆಗೆ ವಿರಳ ಲೋಹಗಳನ್ನು ಪೂರೈಸುವ ಸಲುವಾಗಿ ಅಣುಶಕ್ತಿ ಕಾಯ್ದೆಯ ಅನುಸಾರ ಈ ಸಂಸ್ಥೆಯನ್ನು 1950ರಲ್ಲಿ ಸ್ಥಾಪಿಸಲಾಗಿತ್ತು. ಇತ್ತೀಚಿನವರೆಗೂ ಇದು ವಿರಳ ಲೋಹಗಳನ್ನು ಹೊರತೆಗೆದು, ಸಂಸ್ಕರಣೆ ಮಾಡುವ ದೇಶದ ಏಕೈಕ ಸಂಸ್ಥೆಯಾಗಿತ್ತು. ಆಡಳಿತಾತ್ಮಕ ಮತ್ತು ಇತರ ಕಾರಣಗಳಿಂದ ಐಆರ್‌ಇಎಲ್ ನಿರೀಕ್ಷಿತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವ ದೂರುಗಳಿವೆ. ಕಳೆದ ಡಿಸೆಂಬರ್‌ನಿಂದ ಸಂಸ್ಥೆಗೆ ಪೂರ್ಣಾವಧಿ ಅಧ್ಯಕ್ಷರೇ ಇಲ್ಲ ಎಂದು ವರದಿಯಾಗಿದೆ.
ನಂತರದಲ್ಲಿ ಗಣಿಗಳು ಮತ್ತು ಖನಿಜಗಳು (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ–2023 ಅನ್ನು ತಿದ್ದುಪಡಿ ಮಾಡಿ, ಖಾಸಗಿಯವರಿಗೂ ವಿರಳ ಲೋಹಗಳ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. 20ಕ್ಕೂ ಹೆಚ್ಚು ಕಂಪನಿಗಳು ಈ ಬಗ್ಗೆ ಆಸಕ್ತಿ ವಹಿಸಿವೆ ಎಂದು ಹೇಳಲಾಗುತ್ತಿದ್ದು, ಅವು ಕಾರ್ಯಾರಂಭ ಮಾಡಿ, ವಿರಳ ಲೋಹಗಳನ್ನು ಉತ್ಪಾದನೆ ಮಾಡಲು ಬಹಳ ಸಮಯ ಬೇಕು.
ಸಂಸ್ಕರಣೆಯ ಸಾಮರ್ಥ್ಯ ಸೀಮಿತವಾಗಿದ್ದರಿಂದ ಐಆರ್‌ಇಎಲ್ ನಿಯೋಡಿಮಿಯುಂ ಸೇರಿದಂತೆ ಕೆಲವು ವಿರಳ ಲೋಹಗಳನ್ನು ಕಳೆದ 13 ವರ್ಷಗಳಿಂದ ಜಪಾನ್‌ಗೆ ರಫ್ತು ಮಾಡುತ್ತಿತ್ತು. 2024ರಲ್ಲಿ ಭಾರತವು 1,000 ಟನ್ (ಐಆರ್‌ಇಎಲ್ ಹೊರತೆಗೆದ ವಿರಳ ಲೋಹಗಳ ಮೂರನೇ ಒಂದರಷ್ಟು ಭಾಗ) ಜಪಾನ್‌ಗೆ ರಫ್ತು ಮಾಡಿತ್ತು. ಇದೀಗ ಚೀನಾದ ನಿರ್ಬಂಧದಿಂದ ಸಮಸ್ಯೆ ಉದ್ಭವಿಸಿದ ನಂತರ ಐಆರ್‌ಇಎಲ್ ಸಂಸ್ಥೆಯು ತನ್ನ ಸಂಸ್ಕರಣಾ ಸಾಮರ್ಥ್ಯವನ್ನು ಉತ್ತಮಪಡಿಸಿಕೊಳ್ಳಲು ಯೋಜಿಸಿದ್ದು, ಜಪಾನ್‌ಗೆ ರಫ್ತು ಮಾಡುವುದನ್ನು ಸ್ಥಗಿತಗೊಳಿಸಿದೆ.
ವಿರಳ ಲೋಹಗಳು ಯಾವುವು?
ಈ ಗುಂಪಿನಲ್ಲಿ 17 ಲೋಹಗಳಿವೆ. ಇವುಗಳಲ್ಲಿ ರಸಾಯನ ವಿಜ್ಞಾನ ಭಾಷೆಯಲ್ಲಿ ಲ್ಯಾಂಥನೈಡ್‌ಗಳು ಎಂದು ಕರೆಯಲಾಗುವ ಬೆಳ್ಳಿಯಂತೆ ಹೊಳೆಯುವ 15 ಲೋಹಧಾತುಗಳು ಸೇರಿವೆ.
ಅವುಗಳೆಂದರೆ: ಸ್ಜ್ಯಾಂಡಿಯಮ್, ಯಿಟ್ರಿಯಮ್, ಲ್ಯಾಂಥನಮ್, ಸೀರಿಯಮ್, ಪ್ರೇಸಿಯೊಮಿಡಿಯಮ್, ನಿಯೊಡಿಮಿಯಮ್, ಪ್ರೊಮೀಥಿಯಮ್, ಸಮೇರಿಯಮ್, ಯುರೋಪಿಯಮ್, ಗ್ಯಾಡೊಲಿನಿಯಮ್, ಟರ್ಬಿಯಮ್, ಡಿಸ್ಪೋರ್ಸಿಯಮ್, ಹೋಲ್ಮಿಯಮ್, ಎರ್ಬಿಯಮ್, ಥೂಲಿಯಂ, ಯೆಟ್ಟೆರ್ಬಿಯಮ್ ಮತ್ತು ಲೂಟೀಷಿಯಮ್.
ಸ್ಕ್ಯಾಂಡಿಯಂ ಮತ್ತು ಯಿಟ್ರಿಯಮ್ ಬಿಟ್ಟು ಉಳಿದವೆಲ್ಲವೂ ಲ್ಯಾಂಥನೈಡ್‌ಗಳು.
ಯಾವುದಕ್ಕೆಲ್ಲ ಬಳಕೆ?
ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು, ಎಲೆಕ್ಟ್ರಿಕ್ ವಾಹನಗಳು (ಇವಿ), ವಿಮಾನಗಳ ಎಂಜಿನ್‌ಗಳು, ವೈದ್ಯಕೀಯ ಉಪಕರಣಗಳು, ತೈಲ ಸಂಸ್ಕರಣೆ, ಗಾಳಿಯಿಂದ ವಿದ್ಯುತ್ ಉತ್ಪಾದಿಸುವ ಟರ್ಬೈನ್‌ಗಳು, ಕ್ಷಿಪಣಿಗಳು, ರೇಡಾರ್ ವ್ಯವಸ್ಥೆ ಸೇರಿದಂತೆ ರಕ್ಷಣಾ ಉಪಕರಣಗಳ ತಯಾರಿಯಲ್ಲಿ ಈ ವಿರಳ ಲೋಹಗಳು ಪ್ರಮುಖ ಪಾತ್ರ ವಹಿಸುತ್ತವೆ.
ಯಾವುದಕ್ಕೆ ಬೇಡಿಕೆ?
ಲ್ಯಾಂಥನಮ್ ಮತ್ತು ಸೀರಿಯಮ್‌ಗಳು ಸಾಮಾನ್ಯವಾದ ಅಪರೂಪದ ಲೋಹಗಳು. ಲ್ಯಾಂಥನಮ್ ಅನ್ನು ಕ್ಯಾಮೆರಾ ಲೆನ್ಸ್ ಮತ್ತು ಲೈಟಿಂಗ್ ಉಪಕರಣಗಳಲ್ಲಿ ಬಳಸಲಾಗುತ್ತದೆ. ಸೀರಿಯಂ ಅನ್ನು ಎಂಜಿನ್‌ಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಎಂಜಿನ್‌ಗಳ ಹೊಗೆ ಉಗುಳುವಿಕೆಯನ್ನು ಕಡಿಮೆ ಮಾಡುವ ವೇಗವರ್ಧಕ ಪರಿವರ್ತಕಗಳಲ್ಲಿ ಬಳಸಲಾಗುತ್ತದೆ.
ನಿಯೋಡಿಮಿಯಮ್ ಮತ್ತು ಪ್ರೇಸಿಯೊಮಿಡಿಯಮ್ ಲೋಹಗಳನ್ನು ಎಲೆಕ್ಟ್ರಿಕ್ ವಾಹನಗಳು (ಇವುಗಳ ಮ್ಯಾಗ್ನೆಟ್ ಮೋಟರ್‌ಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ) ಮತ್ತು ಪವನ ವಿದ್ಯುತ್ ಉತ್ಪಾದಿಸುವ ಟರ್ಬೈನ್‌ಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇವುಗಳಿಗೆ ಈಗ ಹೆಚ್ಚು ಬೇಡಿಕೆ ಇದೆ.
ಭಾರತದಲ್ಲಿದೆ ನಿಕ್ಷೇಪ, ಉತ್ಪಾದನೆ ಕಡಿಮೆ
ಜಾಗತಿಕವಾಗಿ ಈ ಅಪರೂಪದ ಲೋಹಗಳ ಬಹು ದೊಡ್ಡ ನಿಕ್ಷೇಪ ಇರುವುದು ಚೀನಾದಲ್ಲಿ. ಉತ್ಪಾದನೆಯೂ ಅಲ್ಲಿಯೇ ಹೆಚ್ಚು. ಅಮೆರಿಕದ ಜಿಯೊಲಾಜಿಕಲ್ ಸರ್ವೆಯ 2025ರ ಜನವರಿ ವರದಿ ಪ್ರಕಾರ, ವಿರಳ ಲೋಹ ಖನಿಜಗಳ ನಿಕ್ಷೇಪದಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ. ಅಮೆರಿಕ ಏಳನೇ ಸ್ಥಾನದಲ್ಲಿದೆ.
ಭಾರತವು ನಿಕ್ಷೇಪದಲ್ಲಿ ಮೂರನೇ ಸ್ಥಾನದಲ್ಲಿದ್ದರೂ, ಇಲ್ಲಿ ಅವುಗಳ ಉತ್ಪಾದನೆ ತುಂಬಾ ಕಡಿಮೆ. 2023, 2024ರಲ್ಲಿ ತಲಾ 2,900 ಟನ್‌ಗಳಷ್ಟು ಲೋಹಗಳನ್ನು ಭಾರತ ಉತ್ಪಾದಿಸಿದೆ.
ಭಾರತದಿಂದ ಹಲವು ಕ್ರಮ
ನೀತಿ ನಿಯಮಗಳ ಬದಲಾವಣೆ, ಉದ್ಯಮಿಗಳ ಸಹಭಾಗಿತ್ವ ಮತ್ತು ಅಂತರರಾಷ್ಟ್ರೀಯ ಪಾಲುದಾರಿಕೆಗಳ ಮೂಲಕ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ
ಚೀನಾದೊಂದಿಗೆ ರಾಜತಾಂತ್ರಿಕ ಮಾತುಕತೆ
ಚೀನಾ ಮೇಲಿನ ಅವಲಂಬನೆ ತಪ್ಪಿಸಲು ಪರ್ಯಾಯ ಆಮದು ಮೂಲಗಳ ಹುಡುಕಾಟ, ಮಾತುಕತೆ
ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾದಿಂದ ವಿರಳ ಲೋಹಗಳ ನಿಕ್ಷೇಪಗಳ ಶೋಧ; ರಾಜಸ್ಥಾನದ 35 ಕಡೆ ಸೇರಿ ದೇಶದಾದ್ಯಂತ 135 ಪ್ರದೇಶಗಳಲ್ಲಿ ಹುಡುಕಾಟ
ವಿರಳ ಲೋಹಗಳ ದೇಶೀಯ ಉತ್ಪಾದನೆಗೆ ಯೋಜನೆ; ‘ರಾಷ್ಟ್ರೀಯ ಪ್ರಮುಖ ಖನಿಜಗಳ ಮಿಷನ್ 2025’ರ ಮೂಲಕ ಹಲವು ರೀತಿಯ ಪ್ರಯತ್ನ
ವಿರಳ ಲೋಹಗಳ ಗಣಿಗಾರಿಕೆ ಮತ್ತು ಸಂಸ್ಕರಣೆಯಲ್ಲಿ ತೊಡಗಲು ಖಾಸಗಿಯವರಿಗೆ ಸಬ್ಸಿಡಿ ಮೂಲಕ ಉತ್ತೇಜನ
ಆಧಾರ: ಪಿಟಿಐ, ರಾಯಿಟರ್ಸ್, ಅಮೆರಿಕದ ಜಿಯಾಲಾಜಿಕಲ್ ಸರ್ವೆ, ಪಿಐಬಿ ಪ್ರಕಟಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.