ADVERTISEMENT

ವಾರದ ವಿಶೇಷ: ಪುಕ್ಕಟೆ ಆರೋಗ್ಯ ಸಲಹೆಯೆಂಬ ಡಿಜಿಟಲ್ ವ್ಯಾಧಿ

ಸಾಮಾಜಿಕ ಜಾಲತಾಣ, ಆನ್‌ಲೈನ್ ಪೋರ್ಟಲ್ ಮೂಲಕ ಚಿಕಿತ್ಸಾ ಸಲಹೆ ನೀಡುವ ಪ್ರವೃತ್ತಿ

ಗಾಣಧಾಳು ಶ್ರೀಕಂಠ
Published 20 ಡಿಸೆಂಬರ್ 2025, 0:30 IST
Last Updated 20 ಡಿಸೆಂಬರ್ 2025, 0:30 IST
 ಎಐ ಚಿತ್ರ
 ಎಐ ಚಿತ್ರ   
‘ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶವಿದೆ’ ಎಂಬ ಸುಳ್ಳು ಸುದ್ದಿಯೊಂದು ಸಾಮಾಜಿಕ ಜಾಲತಣಗಳಲ್ಲಿ ಸದ್ದು ಮಾಡುತ್ತಿದೆ. ಆರೋಗ್ಯಕ್ಕೆ ಸಂಬಂಧಿಸಿದ ಇಂಥದ್ದೇ ನೂರಾರು ಸುದ್ದಿ, ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯವೂ ಹರಿದಾಡುತ್ತಿರುತ್ತವೆ. ಇವು ಸಮಾಜದಲ್ಲಿ ಯಾವ ರೀತಿ ಪರಿಣಾಮ ಬೀರುತ್ತಿವೆ? ಇದಕ್ಕೆ ಪರಿಹಾರವೇನು? ಸುದ್ದಿಗಳ ಖಾತರಿಗೆ ಏನು ಮಾಡಬೇಕು? ಎನ್ನುವ ಹಲವು ಪ್ರಶ್ನೆಗಳು ಕಾಡುತ್ತವೆ. ತಜ್ಞರು ಹೇಳುವಂತೆ, ಇಂಥ ಸಲಹೆಗಳು ಆರೋಗ್ಯಕ್ಕೆ ಅಪಾಯಕಾರಿ.

ಹಿರಿಯರೊಬ್ಬರು ಮಧುಮೇಹ ನಿಯಂತ್ರಣಕ್ಕಾಗಿ ಔಷಧ ತೆಗೆದುಕೊಳ್ಳುತ್ತಿದ್ದರು. ಒಮ್ಮೆ ಫೇಸ್‌ಬುಕ್‌ನಲ್ಲಿ ‘ಈ ಎಲೆಗಳ ಕಷಾಯ ಕುಡಿಯಿರಿ, ರಕ್ತದಲ್ಲಿ ಸಕ್ಕರೆ ನಿಯಂತ್ರಣಕ್ಕೆ ಬರುತ್ತದೆ’ ಎಂಬ ಮಾಹಿತಿ ಗಮನಿಸಿದರು. ಅವರು ಆ ಎಲೆಗಳ ಕಷಾಯ ಮಾಡಿ ಕುಡಿದರು. ಆರಂಭದಲ್ಲಿ ಆರೋಗ್ಯ ಸ್ವಲ್ಪ ಸುಧಾರಿಸಿದಂತೆ ಕಂಡಿತು. ಕಷಾಯ ತಗೊಂಡು, ನಿತ್ಯದ  ಔಷಧ ನಿಲ್ಲಿಸಿದರು. ಆದರೆ, ದಿನ ಕಳೆದಂತೆ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿತು. ಆಗ ವೈದ್ಯರ ಬಳಿಗೆ ತೆರಳಿದರು. ಪರೀಕ್ಷೆ ಮಾಡಿಸಿದಾಗ, ಅವರಲ್ಲಿ ಸಕ್ಕರೆ ಅಂಶ ಹೆಚ್ಚಾಗಿತ್ತು. ಬೇರೆ ಬೇರೆ ಆರೋಗ್ಯ ಸಮಸ್ಯೆಗಳೂ ಕಾಣಿಸಿಕೊಂಡಿದ್ದವು. ಅವರು ತಮ್ಮ ಆರೋಗ್ಯ ಸುಧಾರಣೆಗೆ ಹರಸಾಹಸ ಮಾಡಬೇಕಾಯಿತು.

ಅಂಥದ್ದೇ ಇನ್ನೊಂದು ಘಟನೆ; ಕೋವಿಡ್‌ ಸಮಯದಲ್ಲಿ ಮಹಿಳೆಯೊಬ್ಬರು ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಯಾವುದೋ ವಾಟ್ಸ್‌ಆ್ಯಪ್‌ ಗುಂಪಿನಲ್ಲಿ ಕಂಡ ಔಷಧವನ್ನು ತೆಗೆದುಕೊಂಡರು. ದಿನ ಕಳೆಯುವುದರಲ್ಲಿ ದೇಹದ ಉಷ್ಣತೆ ತೀವ್ರವಾಯಿತು. ವೈದ್ಯರನ್ನು ಸಂಪರ್ಕಿಸಿದರು. ನಿಗದಿತ ಪ್ರಮಾಣ ಮೀರಿ ಔಷಧ ಸೇವಿಸಿದ್ದು, ಅದು ಇತರೆ ಅನಾರೋಗ್ಯಕ್ಕೂ ಕಾರಣವಾಗಿದ್ದನ್ನು ವೈದ್ಯರು ಗುರುತಿಸಿದರು.

ಜಾಲತಾಣದಲ್ಲಿ ಹರಡುವ ಇಂಥ ಅನಾಮಿಕ ವೈದ್ಯರ ‘ಆರೋಗ್ಯ ಸಲಹೆ’ ಅನುಸರಿಸಿ ಆರೋಗ್ಯ ಕೆಡಿಸಿಕೊಂಡು, ಪ್ರಾಣಕ್ಕೆ ಅಪಾಯ ತಂದುಕೊಂಡಿರುವಂತಹ ಪ್ರಕರಣಗಳು ತಜ್ಞವೈದ್ಯರ ಬಳಿ ಸಾಕಷ್ಟಿವೆ. ಮೇಲೆ ಹೇಳಿದ ಈ ಎರಡೂ ಘಟನೆಗಳು ಅಂತಹ ಪ್ರಕರಣಗಳ ಸ್ಯಾಂಪಲ್ ಅಷ್ಟೇ.

ADVERTISEMENT

ಹಿಂದೆಲ್ಲಾ ಬಾಯಿಂದ ಬಾಯಿಗೆ ನಿಧಾನವಾಗಿ ಹರಡುತ್ತಿದ್ದ ಇಂಥ ಆರೋಗ್ಯ ಸಲಹೆಗಳು, ವಾಟ್ಸ್‌ಆ್ಯಪ್, ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮಗಳು ಶುರುವಾದ ಮೇಲೆ ವೇಗವಾಗಿ ಹರಡತೊಡಗಿವೆ. ಕೋವಿಡ್‌ ನಂತರ ಇದು ಇನ್ನೂ ಹೆಚ್ಚಾಗಿದೆ. ಈಗೀಗ ಸಾಮಾಜಿಕ ಮಾಧ್ಯಮ ತೆರೆದರೆ ಸಾಕು ಇಂಥ ಆರೋಗ್ಯ ಸಲಹೆಗಳ ನೂರಾರು ವಿಡಿಯೊ, ಪೋಸ್ಟ್‌ಗಳು ಹರಿದಾಡುತ್ತಿರುತ್ತವೆ. ವಾಟ್ಸ್‌ಆ್ಯಪ್‌ ತೆಗೆದರೆ ಶುಭೋದಯದ ಜೊತೆಗೆ ‘ಮಧುಮೇಹಕ್ಕೆ ರಾಮಬಾಣ ಈ ಎಲೆ.. ಇದನ್ನು ಮೂಸಿದ್ರೆ ಸಾಕು  ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ’ ಎಂಬ ಟಿಪ್ಸ್ ಕಾಣುತ್ತದೆ. ‘ಈ ಎಲೆಗಳನ್ನು ಪ್ರತಿದಿನ ಬೆಳಿಗ್ಗೆ ನೀರಿನಲ್ಲಿ ಕುದಿಸಿ ಆ ನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿ ಅಜೀರ್ಣ ಸಮಸ್ಯೆ ನಿವಾರಣೆಯಾಗುತ್ತದೆ’ ಎಂಬ ಮಾಹಿತಿಯ ಪೋಸ್ಟರ್‌ ಇರುತ್ತದೆ.

ವಿಚಿತ್ರವೆಂದರೆ, ಇಂಥ ಮಾಹಿತಿಯ ಕೊನೆಯಲ್ಲಿ ಯಾವುದೇ ವೈದ್ಯರು, ತಜ್ಞರ ಹೆಸರು, ಸಂಸ್ಥೆಯ ಮುದ್ರೆ ಏನೂ ಇರುವುದಿಲ್ಲ. ಆದರೂ ಇಂತಹ ವಿಡಿಯೊಗಳಿಗೆ, ಪೋಸ್ಟರ್‌ಗಳಿಗೆ, ಪೋಸ್ಟ್‌ಗಳಿಗೆ ಸಾವಿರ, ಲಕ್ಷಗಳ ಲೆಕ್ಕದಲ್ಲಿ  ವ್ಯೂಸ್, ಲೈಕ್ಸ್, ಕಾಮೆಂಟ್ಸ್‌ ಇರುತ್ತವೆ. ಅಷ್ಟೇ ವೇಗವಾಗಿ ಹಂಚಿಕೆಯೂ ಆಗುತ್ತಿರುತ್ತವೆ. ಜೊತೆಗೆ ಪ್ರಶ್ನೆಗಳೂ ಇರುತ್ತವೆ.‌ ಅಂದರೆ, ಅಷ್ಟು ಮಂದಿ ಇಂಥ ಆರೋಗ್ಯ ಸಲಹೆಯನ್ನು ವೀಕ್ಷಿಸಿರುತ್ತಾರೆ. 

ಸಾಮಾಜಿಕ ಜಾಲತಾಣಗಳು‌ ಹೆಚ್ಚು ಪ್ರವರ್ಧಮಾನಕ್ಕೆ ಬಂದ‌‌ ಮೇಲೆ‌‌ ಇಂಥ ಆರೋಗ್ಯ ಸಲಹೆಗಳು ಹೆಚ್ಚು ಪ್ರಚಾರದಲ್ಲಿವೆ. ಯಾವುದೋ‌ ಒಂದು ಔಷಧ/ ಮದ್ದಿನಿಂದ ಯಾರೋ‌ ಒಬ್ಬರಿಗೆ ರೋಗ ನಿಯಂತ್ರಣಕ್ಕೆ ಬಂತೆಂದರೆ, ಕೆಲವರು ಅದನ್ನೇ ವಾಟ್ಸ್ ಆ್ಯಪ್ ಮತ್ತಿತರ ಜಾಲತಾಣಗಳ ಮೂಲಕ ಹಂಚಿಕೊಳ್ಳುತ್ತಾರೆ.

‘ಅನಧಿಕೃತ ಮಾಹಿತಿ’ ಪರಿಣಾಮ:

‘ಎಲ್ಲ ರೋಗಕ್ಕೂ, ಎಲ್ಲ ವಯೋಮಾನದ ವ್ಯಕ್ತಿಗಳಿಗೂ ಒಂದೇ ರೀತಿಯ ಔಷಧ, ಚಿಕಿತ್ಸೆಗಳಿರುವುದಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ, ರೋಗದಿಂದ ರೋಗಕ್ಕೆ ವ್ಯತ್ಯಾಸವಾಗುತ್ತದೆ. ಈ ಜಾಲತಾಣಗಳಲ್ಲಿ ಬರುವ ಆರೋಗ್ಯ ಸಲಹೆಯನ್ನು ಈ ನಿಟ್ಟಿನಲ್ಲಿ ಪರಿಶೀಲಿಸದೇ, ವೈದ್ಯರ ಸಲಹೆ ಪಡೆಯದೇ ಅನುಸರಿಸಿದಾಗ ರೋಗ ಗುಣವಾಗುವ ಬದಲಿಗೆ, ಬೇರೆ ಸಮಸ್ಯೆಗೂ ಕಾರಣವಾಗಬಹುದು’– ಇದು ವೈದ್ಯರ ಸಾಮಾನ್ಯ ಅಭಿಪ್ರಾಯ.

‘ಆಯುರ್ವೇದದಲ್ಲಿ ವ್ಯಕ್ತಿಯ (ರೋಗಿಯ) ದೇಹ ಪ್ರಕೃತಿ ಮತ್ತು ಅವರಲ್ಲಿರುವ ವಾತ, ಪಿತ್ತ, ಕಫ– ಈ ತ್ರಿದೋಷಗಳನ್ನು ಆಧರಿಸಿ ಚಿಕಿತ್ಸೆ, ಔಷಧ, ಪಥ್ಯ ಸಲಹೆ ನೀಡಲಾಗುತ್ತದೆ. ವಯಸ್ಸಿನ ಆಧಾರದಲ್ಲಿ ಔಷಧ ತೆಗೆದುಕೊಳ್ಳುವ ಅವಧಿ, ಪ್ರಮಾಣವನ್ನೂ (ಡೋಸೇಜ್‌) ಸೂಚಿಸಲಾಗುತ್ತದೆ. ಯಾರೋ ಹೇಳಿದ ಔಷಧ ಎಲ್ಲರಿಗೂ ಅನ್ವಯವಾಗುವುದಿಲ್ಲ’ ಎಂದು ಹೇಳುತ್ತಾರೆ ಆಯುರ್ವೇದ ವೈದ್ಯೆ ಡಾ. ವಸುಂಧರಾ ಭೂಪತಿ.

ಉದಾಹರಣೆಗೆ, ‘ನಿತ್ಯ ಬಿಸಿನೀರಿಗೆ ಜೇನುತುಪ್ಪ ಹಾಕಿ ಕುಡಿಯಿರಿ, ಸಣ್ಣಗಾಗುತ್ತೀರಿ’ ಎಂಬುದು ವಾಟ್ಸ್‌ಆ್ಯಪ್‌ಗಳಲ್ಲಿ ಹರಿದಾಡುವ ಸಾಮಾನ್ಯ ಆರೋಗ್ಯ ಸಲಹೆ. ಒಂದೊಮ್ಮೆ ಇದನ್ನು ‘ಮಧುಮೇಹಿ’ಗಳು ಅನುಸರಿಸಿದರೆ, ಅವರು ಸಣ್ಣಗಾಗುವ ಬದಲಿಗೆ ಅವರ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತದೆ (ಅಸಲಿಗೆ ಬಿಸಿನೀರಿಗೆ ಜೇನುತುಪ್ಪ ಬೆರೆಸಿ ಕುಡಿಯುವುದು ಸೂಕ್ತವೇ ಅಲ್ಲ). ಬೆಳಿಗ್ಗೆ ವಾಯುವಿಹಾರ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂಬ ಸಲಹೆ ಕೊಡುತ್ತಾರೆ. ಆದರೆ, ಅಸ್ತಮಾ ಇರುವವರಿಗೆ ಬೆಳಗಿನ ವಾಯುವಿಹಾರ ಒಳ್ಳೆಯದಲ್ಲ. ಇಂಥ ಸಲಹೆಗಳಿಂದ ಉಪಯೋಗಕ್ಕಿಂತ ಅಪಾಯವೇ ಹೆಚ್ಚಾಗುತ್ತದೆ ಎಂದು ಉದಾಹರಿಸುತ್ತಾರೆ ವಸುಂಧರಾ.

ಇಂಥ ಅವೈಜ್ಞಾನಿಕ ಆರೋಗ್ಯ ಸಲಹೆಗಳಿಂದ ಸಣ್ಣ ಮಕ್ಕಳಿಗೂ ಅಪಾಯವಾಗುತ್ತದೆ ಎಂಬುದರ ಬಗ್ಗೆ ಮಡಿಕೇರಿಯ ಮಕ್ಕಳ ತಜ್ಞ ಡಾ. ಕುಶವಂತ್ ಕೋಳಿಬೈಲು ಉದಾಹರಿಸುತ್ತಾರೆ. ‘ರಾಷ್ಟ್ರೀಯ, ಅಂತರರಾಷ್ಟ್ರೀಯ ವೈದ್ಯಕೀಯ ಶಿಷ್ಟಾಚಾರದ ಪ್ರಕಾರ ಆರು ತಿಂಗಳು ಒಳಗಿನ ಮಕ್ಕಳಿಗೆ ಯಾವ್ಯಾವುದೋ ಔಷಧ ಕೊಡುವಂತಿಲ್ಲ. ಆದರೆ, ಎಲ್ಲೋ ಸಲಹೆ ರೂಪದಲ್ಲಿ ಸಿಗುವ ಮನೆಮದ್ದನ್ನು ಮಕ್ಕಳಿಗೆ ನೀಡಿ, ಅವರ ಆರೋಗ್ಯ ತೀರಾ ಹದಗೆಟ್ಟಿರುವ ಉದಾಹರಣೆಗಳನ್ನು ಗಮನಿಸಿದ್ದೇನೆ’ ಎಂದು ಅವರು ವಿವರಿಸುತ್ತಾರೆ.

‘ಜಾಲತಾಣದ ಆರೋಗ್ಯ ಸಲಹೆಗೆ ಬೇಗ ಮರುಳಾಗುವವರಲ್ಲಿ ಮಧುಮೇಹಿಗಳೇ ಹೆಚ್ಚು. ಹೇಗಾದರೂ ಮಾಡಿ ಶುಗರ್ ಕಡಿಮೆ ಮಾಡಿಕೊಳ್ಳಬೇಕೆಂಬ ಪ್ರಯತ್ನದಲ್ಲಿರುವವರು ಎಂಥದ್ದೇ ಸಲಹೆ ಸಿಕ್ಕರೂ ಅನುಸರಿಸಲು ಸಿದ್ಧವಾಗುತ್ತಾರೆ. ಹೀಗೆ ಮಾಡುವ ಮೂಲಕ ಜೀವಕ್ಕೆ ಅಪಾಯ ತಂದುಕೊಂಡ, ಗಾಲಿ ಕುರ್ಚಿಯಲ್ಲಿ ಬದುಕು ಕಳೆಯುತ್ತಿರುವ ಪ್ರಕರಣಗಳು ಸಾಕಷ್ಟಿವೆ’ ಎಂದು ಮತ್ತೊಬ್ಬ ತಜ್ಞರು ಹೇಳುತ್ತಾರೆ. 

ಮಾಹಿತಿ ಖಾತರಿ ಹೇಗೆ ?:

ಮೊದಲಿಗೆ, ಯಾವುದೇ ಮೆಡಿಕಲ್ ಅಥವಾ ಕ್ಲಿನಿಕಲ್‌ ಸಾಕ್ಷ್ಯಗಳಿಲ್ಲದ ಔಷಧಗಳನ್ನು ಜನರು ತೆಗೆದುಕೊಳ್ಳಬಾರದು. ಸಾಮಾಜಿಕ ಮಾಧ್ಯಮಗಳಲ್ಲಾಗಲಿ, ಯಾರೇ ಆಗಲಿ, ವೈದ್ಯಕೀಯ ಆಧಾರವಿಲ್ಲದ ಔಷಧಗಳ‌ ಕುರಿತು ಮಾಹಿತಿ ಪ್ರಚಾರವನ್ನೂ ಮಾಡಬಾರದು ಎನ್ನುತ್ತಾರೆ ಮಧುಮೇಹ ತಜ್ಞ ಡಾ. ಗುರುಪ್ರಸಾದ್ ಉಡುಪಿ.

ಯಾವುದೇ ಜಾಲತಾಣ/ಯೂಟ್ಯೂಬ್‌ಗಳಲ್ಲಿ ಬರುವಂತಹ ಮಾಹಿತಿಗಳನ್ನು ತಿಳಿವಳಿಕೆಗಾಗಿ ಓದಿಕೊಳ್ಳಬಹುದು, ನೋಡಬಹುದು. ಆದರೆ ಅದನ್ನು ಅಳವಡಿಸಿಕೊಳ್ಳುವ ಮುನ್ನ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಸರಿಯಾದ ಕ್ರಮ. ಒಂದೊಮ್ಮೆ ಅದು ತುಂಬಾ ಪರಿಣಾಮಕಾರಿಯಾದ ಆರೋಗ್ಯ ಸಲಹೆ ಎನ್ನಿಸಿದ್ದರೆ, ಅದು ಯಾವ ಜಾಲತಾಣದಲ್ಲಿ ಪ್ರಕಟವಾಗಿರುತ್ತದೋ, ಅವರನ್ನೇ ಸಂಪರ್ಕಿಸಿ, ಮಾಹಿತಿಯ ಸತ್ಯಾಸತ್ಯತೆ ಖಚಿತಪಡಿಸಿಕೊಳ್ಳಬೇಕು ಎನ್ನುತ್ತಾರೆ ವಸುಂಧರಾ ಭೂಪತಿ.

ನೆಗಡಿ, ಕೆಮ್ಮಿನಂತಹ ಸಣ್ಣ ಪುಟ್ಟ ಕಾಯಿಲೆಗಳಿಗೆ ಪ್ರಥಮ ಚಿಕಿತ್ಸೆಯಾಗಿ ಮನೆ ಮದ್ದಿನಂತಹ ಸಲಹೆಗಳನ್ನು ಸ್ವೀಕರಿಸಬಹುದು. ಆದರೆ, ಮಧುಮೇಹ, ರಕ್ತದೊತ್ತಡ, ಪಾರ್ಶ್ವವಾಯುನಂತಹ ಗಂಭೀರ ಕಾಯಿಲೆಗಳಿಗೆ ಯಾವುದೇ ಜಾಲತಾಣದ ಅನಧಿಕೃತ ಆರೋಗ್ಯ ಸಲಹೆಗಳನ್ನು ಪಾಲಿಸುವುದು ಸರಿಯಲ್ಲ ಎನ್ನುವುದು ವೈದ್ಯರ ಸಲಹೆ.

ಈವರೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್‌, ಯೂಟ್ಯೂಬ್‌ ಮೂಲಕವಷ್ಟೇ ‘ಆರೋಗ್ಯ ಮಾಹಿತಿ’ ಹರಿದಾಡುತ್ತಿತ್ತು. ಆ ಮಾಹಿತಿಯನ್ನು ವೈದ್ಯರ ಬಳಿ ಪರಿಶೀಲಿಸಬಹುದಿತ್ತು. ಈಗ ‘ಕೃತಕ ಬುದ್ಧಿಮತ್ತೆ’ (ಎಐ) ಕಾಲ. ಮುಂದೆ ಎಐ ವೈದ್ಯರನ್ನೇ ಸೃಷ್ಟಿಸಿ, ಅವರಿಂದಲೇ ಆರೋಗ್ಯ ಸಲಹೆ ಕೊಡಿಸುವ ಸಾಧ್ಯತೆಗಳಿವೆ.
ಇಂಥ ಪರಿಸ್ಥಿತಿಯಲ್ಲಿ ಅರೆಬರೆ ಆರೋಗ್ಯ ಮಾಹಿತಿ ಬಿತ್ತರಕ್ಕೆ
ಕಡಿವಾಣ ಹಾಕುವಂತಹ ಕಾಯ್ದೆಗಳನ್ನು ಸರ್ಕಾರ ರೂಪಿಸುವ ಅಗತ್ಯವಿದೆ ಎಂದು ವೈದ್ಯಕೀಯ ಕ್ಷೇತ್ರದ ತಜ್ಞರು ಅಭಿಪ್ರಾಯಪಡುತ್ತಾರೆ.

ತಜ್ಞರ ಸಲಹೆಗಳು

*ಯಾರೇ ಆರೋಗ್ಯ ಸಲಹೆ ಪ್ರಕಟಿಸುವಾಗ ತಜ್ಞವೈದ್ಯರ ಮಾರ್ಗದರ್ಶನವಿರಬೇಕು. ಪ್ರಕಟಿಸುವ ಸಲಹೆಗಳು, ನಿಗದಿತ ಆರೋಗ್ಯ ವಿಷಯ, ವಯಸ್ಸು, ಔಷಧದ ಪ್ರಮಾಣ, ಎಚ್ಚರಿಕೆ ಸಂದೇಶಗಳಂತಹ ಮಾಹಿತಿಯ ಉಲ್ಲೇಖವಿರಬೇಕು. ಸಾಧ್ಯವಾದರೆ ವೈದ್ಯರ ಸಂಪರ್ಕ ಸಂಖ್ಯೆ ಪ್ರಕಟಿಸಿದರೆ ಉತ್ತಮ

*ಪ್ರಕಟವಾಗುವ ‘ಸಲಹೆ’ಗಳನ್ನು ನಮ್ಮ ಸಂಬಂಧಿಕರು, ಅಕ್ಕಪಕ್ಕದವರು, ಸ್ನೇಹಿತರೂ ಓದಿ, ಅಳವಡಿಸಿಕೊಳ್ಳುತ್ತಾರೆ ಎಂಬ ಎಚ್ಚರಿಕೆ ಮಾಹಿತಿ ಹಂಚುವವರಿಗೆ ಇರಬೇಕು

*ತಜ್ಞರ ಅನುಮೋದನೆ, ಅಭಿಪ್ರಾಯವಿಲ್ಲದೇ ಕೇವಲ ಊಹೆಯೊಂದಿಗೆ ಯಾವುದೇ ಜಾಲತಾಣಗಳಲ್ಲಿ ಆರೋಗ್ಯ ಸಲಹೆಗಳನ್ನು ಪ್ರಕಟಿಸಬಾರದು. ಇಂಥದ್ದೊಂದು ಪಾಲಿಸಿ/ನಿಯಮವನ್ನು ಸರ್ಕಾರವೇ ಜಾರಿಗೆ ತಂದರೆ ಒಳ್ಳೆಯದು

*ನಾಗರಿಕರೂ ಸಾಮಾನ್ಯ ಆರೋಗ್ಯ ಸಲಹೆಗಳ ಬಗ್ಗೆ ಎಚ್ಚರ ವಹಿಸುವುದು ಮುಖ್ಯ. ಅಂತರ್ಜಾಲ ಮತ್ತು ಇತರೆ ಮೂಲಗಳಿಂದ ಸಿಗುವ ಸಲಹೆಗಳು ವ್ಯಕ್ತಿಗತ ಆರೋಗ್ಯಕ್ಕೆ ಸರಿಹೋಗದಿರಬಹುದು. ಹಾಗಾಗಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ

*ಸುಳ್ಳು ಮಾಹಿತಿಯಿಂದ ದೂರವಿರಿ. ವೈದ್ಯಕೀಯ ಸಲಹೆಗಾಗಿ ಯಾವಾಗಲೂ ಅಧಿಕೃತ ಮೂಲಗಳನ್ನು ಅವಲಂಬಿಸಿ

ವೈದ್ಯರು ಏನಂತಾರೆ?

ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ವೈದ್ಯರು ಹೆಚ್ಚಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ರೋಗಗಳ ಬಗ್ಗೆ ಮಾಹಿತಿ ಕೊಟ್ಟು ಸಲಹೆ ನೀಡುತ್ತಾರೆ. ಆದರೆ, ಈ ಸಲಹೆಗಳ ಆಧಾರದಲ್ಲಿಯೇ ಔಷಧಿಗಳನ್ನು ಸೇವಿಸಬಾರದು. ತಜ್ಞವೈದ್ಯರನ್ನು ಭೇಟಿ ಮಾಡಿ ಔಷಧಿ ಪಡೆಯಬೇಕು. ಇದೇ ರೀತಿ ಕೆಲವೊಂದು ಗಿಡಮೂಲಿಕೆಗಳ ಬಗ್ಗೆಯೂ ಮಾಹಿತಿ ನೀಡಿ ಸೇವಿಸಲು ಸಲಹೆ ನೀಡುತ್ತಾರೆ. ಇವುಗಳ ಬಗ್ಗೆ ವೈಜ್ಞಾನಿಕ ಸಂಶೋಧನೆ ನಡೆದಿರುವುದಿಲ್ಲ. ಇಂತಹ ವಿಷಯಗಳಿಗೆ ಜನರು ಕಿವಿಗೊಡಬಾರದು.  ವೈದ್ಯಕೀಯದಲ್ಲಿ ಮೂರು ‘ಟಿ’ ಗಳು (ಟಾಕ್‌, ಟಚ್, ಟ್ರೀಟ್‌) ಬಹಳ ಮುಖ್ಯ. ಆಗ ರೋಗಿ ಮತ್ತು ವೈದ್ಯರ ನಡುವೆ ವಿಶ್ವಾಸ ಬೆಳೆಯುತ್ತದೆ. ಚಿಕಿತ್ಸೆಯೇ ರೋಗಕ್ಕಿಂತ ಅಪಾಯಕಾರಿ ಆಗಬಾರದು. ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ರೋಗದ ಹಿನ್ನೆಲೆ ಪರಿಶೀಲಿಸಿಯೇ ನಾವು ಚಿಕಿತ್ಸೆ ನೀಡಬೇಕು 
 ಡಾ.ಸಿ.ಎನ್‌.ಮಂಜುನಾಥ್‌, ಸಂಸದ ಹಾಗೂ ಹೃದ್ರೋಗ ತಜ್ಞ
ಯಾವುದೇ ವೈದ್ಯಕೀಯ ಜ್ಞಾನ, ಅನುಭವವಿಲ್ಲದೇ ಪ್ರಸಾರ ಮಾಡುವಂತಹ ಆರೋಗ್ಯ ಸಲಹೆಗೆ ಕಡಿವಾಣ ಹಾಕಬೇಕು‌. ಇದಕ್ಕಾಗಿ ಸರ್ಕಾರ ಒಂದು ನೀತಿ ಅಥವಾ ಕಾಯ್ದೆ ರೂಪಿಸಬೇಕು‌. ತಪ್ಪು ಮಾಹಿತಿ ನೀಡುವವರ ವಿರುದ್ಧ ಕ್ರಮ ಕೈಗೊಳ್ಳುವಂತಾಗಬೇಕು
 ಡಾ. ರಾಜು ಕೃಷ್ಣಮೂರ್ತಿ, ವೈದ್ಯ, ಬೆಂಗಳೂರು.
ಕಾಯ್ದೆ–ಕಾನೂನುಗಳ ಮೂಲಕ ಅವೈಜ್ಞಾನಿಕ ಆರೋಗ್ಯ ಸಲಹೆ, ವೈದ್ಯಕೀಯ ಮಾಹಿತಿ ಹಂಚುವುದನ್ನು ತಡೆಯುವುದು ಕಷ್ಟ. ಆದರೆ, ಜನರಲ್ಲಿ ಈ ಬಗ್ಗೆ ಹೆಚ್ಚು ಹೆಚ್ಚು ಜಾಗೃತಿ ಮೂಡಿಸುವುದೊಂದೇ ಪರಿಹಾರ
 ಡಾ. ಕುಶವಂತ್‌ ಕೋಳಿಬೈಲು, ಮಕ್ಕಳ ತಜ್ಞ, ಮಡಿಕೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.