ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನಲ್ಲಿ ಸರ್ಕಾರವು ಏರೋಸ್ಪೇಸ್ ಪಾರ್ಕ್ ಅಭಿವೃದ್ಧಿಪಡಿಸಲು ಮುಂದಾಗಿರುವುದಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕೆಐಎಡಿಬಿಯು ಅದಕ್ಕಾಗಿ 1,777 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಅದನ್ನು ವಿರೋಧಿಸಿ ರೈತರು ಸಾವಿರಕ್ಕೂ ಹೆಚ್ಚು ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದಾರೆ. ರೈತರ ಜತೆಗೆ ನಾಡಿನ ವಿವಿಧ ಸಂಘಟನೆಗಳು, ಹೋರಾಟಗಾರರು, ನ್ಯಾಯವಾದಿಗಳು, ಸಿನಿಮಾ ನಟರು ಕೈಜೋಡಿಸಿದ್ದಾರೆ. ಈಗ ಸರ್ಕಾರವು ಸ್ವಾಧೀನ ಪಡಿಸಿಕೊಳ್ಳಲು ಉದ್ದೇಶಿಸಿರುವ ಜಮೀನಿನ ಪೈಕಿ 495 ಎಕರೆಯನ್ನು ಕೈಬಿಡಲಾಗುವುದು, ಭವಿಷ್ಯದಲ್ಲಿ ದೇವನಹಳ್ಳಿ ವ್ಯಾಪ್ತಿಯಲ್ಲಿ ಭೂಸ್ವಾಧೀನ ಮಾಡುವುದಿಲ್ಲ ಎಂದು ಸರ್ಕಾರ ಹೇಳಿದೆ. ಆದರೆ, ಇದನ್ನು ಒಪ್ಪದ ರೈತರು, ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಲು ಗಡುವು ನೀಡಿದ್ದು, ಹೋರಾಟ ಪ್ರಮುಖ ಘಟ್ಟ ತಲುಪಿದೆ.
ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿ ನಲ್ಲಪ್ಪನಹಳ್ಳಿಯ ರೈತ ಮಹಿಳೆ ಲಕ್ಷ್ಮಮ್ಮ ಅವರಿಗೆ ಈಗ ಬದುಕಿನ ಪ್ರಶ್ನೆ ಎದುರಾಗಿದೆ. ಅವರಿಗಿದ್ದ ತುಂಡು ಜಮೀನನ್ನು ಸರ್ಕಾರ ವಶಪಡಿಸಿಕೊಳ್ಳಲು ಮುಂದಾಗಿದ್ದು, ಅವರಿಗೆ ಆಕಾಶವೇ ಕಳಚಿ ಮೇಲೆ ಬಿದ್ದಂತಾಗಿದೆ. ಜಮೀನನ್ನು ಸ್ವಾಧೀನ ಪಡಿಸಿಕೊಳ್ಳುತ್ತಿರುವುದರ ವಿರುದ್ಧ ಹೋರಾಟ ಮಾಡುತ್ತಿರುವ ಲಕ್ಷ್ಮಮ್ಮ ಅವರು, ಇದು ಅಸ್ತಿತ್ವದ ಹೋರಾಟ ಎಂದೇ ಹೇಳುತ್ತಿದ್ದಾರೆ.
ಇದು ಲಕ್ಷ್ಮಮ್ಮ ಒಬ್ಬರ ಕಥೆಯಲ್ಲ; ಈ ಭಾಗದ ಸುಮಾರು 3,000 ರೈತರ ಬದುಕಿಗೆ ಎದುರಾಗಿರುವ ಸಂಕಷ್ಟದ ಕಥೆ. ದೇವನಹಳ್ಳಿ ತಾಲ್ಲೂಕಿನಲ್ಲಿ ರಕ್ಷಣೆ ಮತ್ತು ಏರೋಸ್ಪೇಸ್ ಪಾರ್ಕ್ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ರಾಜ್ಯ ಸರ್ಕಾರ ಅದಕ್ಕಾಗಿ ಚನ್ನರಾಯಪಟ್ಟಣ ಹೋಬಳಿಯ ನಾಲ್ಕು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 13 ಗ್ರಾಮಗಳ 1,777 ಎಕರೆ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಮೂಲಕ ಸ್ವಾಧೀನಪಡಿಸಲು ಮುಂದಾಗಿದೆ. ಈಗಾಗಲೇ 10 ಗ್ರಾಮಗಳ 1,282 ಎಕರೆ ಜಮೀನು ಸ್ವಾಧೀನಕ್ಕೆ ಅಂತಿಮ ಅಧಿಸೂಚನೆಯನ್ನೂ ಹೊರಡಿಸಿದೆ. ಜಮೀನಿಗೆ ಸೂಕ್ತ ಪರಿಹಾರ ನೀಡುತ್ತೇವೆ, ಅದು ಬೇಡದಿದ್ದರೆ 10,771 ಚದರ ಅಡಿ ಅಭಿವೃದ್ಧಿಯಾದ ಭೂಮಿ ಕೊಡುತ್ತೇವೆ ಎನ್ನುತ್ತಿದೆ ಕೆಐಎಡಿಬಿ.
ಅಧಿಸೂಚನೆಗೆ ಒಳಪಟ್ಟಿರುವ ಭೂಮಿಯ ಪೈಕಿ ಶೇ 33ರಷ್ಟು ನೀರಾವರಿ, ಶೇ 50ರಷ್ಟು ಖುಷ್ಕಿ ಭೂಮಿ ಇದೆ. ಇಲ್ಲಿ ಸಾವಿರಾರು ಟನ್ ರಾಗಿ, ದ್ರಾಕ್ಷಿ, ಹೂವು, ತರಕಾರಿಯನ್ನು ಬೆಳೆಯಲಾಗುತ್ತಿದ್ದು, ಅದರಲ್ಲಿ ಹೆಚ್ಚಿನ ಪಾಲನ್ನು ಬೆಂಗಳೂರಿಗೆ ಪೂರೈಕೆ ಮಾಡಲಾಗುತ್ತಿದೆ. ಪ್ರತಿದಿನ 6,000-8,000 ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಉತ್ತಮ ಗುಣಮಟ್ಟದ ರೇಷ್ಮೆ ಗೂಡು ಮತ್ತು ‘ಬೆಂಗಳೂರು ಬ್ಲೂ ದ್ರಾಕ್ಷಿ’ ಉತ್ಪಾದನೆ ಕೂಡ ಇಲ್ಲಿನ ವಿಶೇಷವಾಗಿದ್ದು, ಕೃಷಿ ಮತ್ತು ಪೂರಕ ಉದ್ದಿಮೆಗಳಲ್ಲಿ ಜನ ತೊಡಗಿದ್ದಾರೆ.
ಇದು ಸಮೃದ್ಧ ಕೃಷಿ ಭೂಮಿಯಾಗಿರುವುದರಿಂದ, ಅದನ್ನು ನಂಬಿ ಸಾವಿರಾರು ಮಂದಿಯ ಜೀವನೋಪಾಯ ನಡೆಯುತ್ತಿರುವುದರಿಂದ ಭೂಮಿ ನೀಡುವುದಿಲ್ಲ ಎಂದು ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ವ್ಯಾಪ್ತಿಯಲ್ಲಿರುವ ಬಹುತೇಕರು ಸಣ್ಣ ಹಿಡುವಳಿದಾರರು. ಈ ಭೂ ಸ್ವಾಧೀನದಿಂದ 600 ಕುಟುಂಬಗಳ ಮೇಲೆ ಪರಿಣಾಮ ಬೀರಲಿದ್ದು, 387 ಕುಟುಂಬಗಳು ಸಂಪೂರ್ಣ ಭೂರಹಿತವಾಗಲಿವೆ. ಈ ಕುಟುಂಬಗಳಿಗೆ ಸೇರಿದ ಸುಮಾರು 3,000 ಮಂದಿ ಜಮೀನನ್ನು ಕಳೆದುಕೊಳ್ಳಲಿದ್ದಾರೆ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಈ ಭೂಮಿ ಅವಲಂಬಿಸಿ ಬದುಕುತ್ತಿರುವವರ ಬದುಕೂ ಬೀದಿಗೆ ಬೀಳುವ ಆತಂಕ ವ್ಯಕ್ತವಾಗಿದೆ. ಇದರಲ್ಲಿ ಬಡ ರೈತರು, ದಲಿತರು, ಕೃಷಿ ಕೂಲಿಕಾರ್ಮಿಕರೂ ಸೇರಿದಂತೆ ಅನಕ್ಷರಸ್ಥರು, ಕಡಿಮೆ ವಿದ್ಯಾರ್ಹತೆ ಹೊಂದಿದವರು ಹೆಚ್ಚಾಗಿದ್ದಾರೆ.
ಭೂ ಸ್ವಾಧೀನ ವಿರೋಧಿಸಿ ರೈತರು 2022ರ ಏಪ್ರಿಲ್ 4 ರಿಂದ ಚನ್ನರಾಯಪಟ್ಟಣ ನಾಡ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ಮೂರು ವರ್ಷಗಳ ನಂತರವೂ ಅವರು ಪಟ್ಟು ಸಡಿಲಿಸುತ್ತಿಲ್ಲ. ಪ್ರತಿಭಟನನಿರತ ರೈತರ ಮೇಲೆ ದೇವನಹಳ್ಳಿ ಟೌನ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು, ರೈತರು, ಮಹಿಳೆಯರು ನ್ಯಾಯಾಲಯಕ್ಕೆ ಅಲೆಯುವಂತಾಗಿದೆ. 75ನೇ ಸ್ವಾತಂತ್ರ್ಯೋತ್ಸವ ಸಮಾರಂಭದ ವೇಳೆ ಪ್ರತಿಭಟನೆ ಮಾಡುತ್ತಿದ್ದ ರೈತರ ಮೇಲೆ ಲಾಠಿ ಚಾರ್ಜ್ ಮಾಡಲಾಗಿತ್ತು. ಇಂಥ ಅನೇಕ ಘಟನೆಗಳು ನಡೆದಿವೆ, ನಡೆಯುತ್ತಲೇ ಇವೆ. ಸರ್ಕಾರ ಸಾಧ್ಯವಿರುವ ರೀತಿಯಲ್ಲೆಲ್ಲ ಹೋರಾಟ ಹತ್ತಿಕ್ಕಲು ಯತ್ನಿಸಿದೆ ಎನ್ನುವುದು ರೈತರ ಆರೋಪ. ಆದರೂ, ಇದು ತಮ್ಮ ಬದುಕಿನ ಪ್ರಶ್ನೆ. ಹಿಂದೆ ಸರಿಯುವುದಿಲ್ಲ ಎನ್ನುವುದು ಅವರ ಖಚಿತ ನುಡಿ. ರೈತರ ಹೋರಾಟಕ್ಕೆ ಅನೇಕ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು, ನ್ಯಾಯವಾದಿಗಳು, ಸಿನಿಮಾ ನಟರು ಬೆಂಬಲ ವ್ಯಕ್ತಪಡಿಸಿದ್ದಾರೆ. ದೇವನಹಳ್ಳಿ ಚಲೋ ಕೂಡ ನಡೆಸಿದ್ದಾರೆ.
ಭೂಸ್ವಾಧೀನಕ್ಕಾಗಿ ಗುರುತಿಸಿರುವ ಜಮೀನಿನ ಹೆಚ್ಚಿನ ಭಾಗ ಕೃಷಿ ಭೂಮಿಯಾಗಿದೆ
ಕೆಐಎಡಿಬಿ ಪ್ರಾಥಮಿಕ ಅಧಿಸೂಚನೆ (ಆಗಸ್ಟ್ 30, 2021) ಹೊರಡಿಸಿದ್ದು 13 ಗ್ರಾಮಗಳ 1,777 ಎಕರೆ ಸ್ವಾಧೀನಕ್ಕೆ. ನಂತರ 2024ರ ಜುಲೈ 28ರಂದು ಎರಡು ಹಳ್ಳಿಗಳು ಮತ್ತು ಈ ವರ್ಷದ ಏಪ್ರಿಲ್ 16ರಂದು ಎಂಟು ಹಳ್ಳಿಗಳ ವ್ಯಾಪ್ತಿಯಲ್ಲಿ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿದೆ. ಈ ನಡುವೆ ರೈತರ ಹೋರಾಟ ತೀವ್ರವಾಗಿದ್ದರಿಂದ ಮೂರು ಗ್ರಾಮಗಳಿಗೆ ಸೇರಿದ 495 ಎಕರೆ ಜಮೀನನ್ನು ವಶಕ್ಕೆ ಪಡೆಯುವುದಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದರೆ, ರೈತರು ಇದನ್ನು ಒಪ್ಪಲು ಸಿದ್ಧರಿಲ್ಲ. ಒಟ್ಟು ಭೂಸ್ವಾಧೀನವನ್ನೇ ಕೈಬಿಡಬೇಕು ಎಂದು ಆಗ್ರಹಿಸಿ ಸರ್ಕಾರಕ್ಕೆ ಗಡುವು ನೀಡಿದ್ದಾರೆ.
2021ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದಾಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇತ್ತು. ಭೂಸ್ವಾಧೀನಕ್ಕೆ ರೈತರ ವಿರೋಧವಿರುವ ಬಗ್ಗೆ ಅಂದಿನ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಸದಸ್ಯರು ಪ್ರಶ್ನೆ ಮಾಡಿದಾಗ, ‘ರೈತರ ಒಪ್ಪಿಗೆ ಇಲ್ಲದೆ ಯಾವುದೇ ಕಾರಣಕ್ಕೂ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಿಲ್ಲ, ಶೇ 50ಕ್ಕಿಂತ ಹೆಚ್ಚು ರೈತರು ಭೂಮಿ ಕೊಡುವುದಿಲ್ಲ ಎಂದರೆ ಭೂಸ್ವಾಧೀನವನ್ನು ಕೈಬಿಡಲಾಗುವುದು’ ಎಂದು ಅಂದಿನ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದ್ದರು. 13 ಹಳ್ಳಿಗಳ
ಶೇ 80ರಷ್ಟು ರೈತರು ತಮ್ಮ ದಾಖಲೆಗಳ ಸಹಿತ ತೆರಳಿ, ‘ನಾವು ಯಾವುದೇ ಕಾರಣಕ್ಕೂ ಭೂಮಿ ಕೊಡುವುದಿಲ್ಲ’ ಎಂದು ಕೆಐಎಡಿಬಿ ಅಧಿಕಾರಿಗಳಿಗೆ ಪತ್ರ ಕೊಟ್ಟರು. ಆದರೂ, ಬಿಜೆಪಿ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಆಗ ವಿರೋಧ ಪಕ್ಷವಾಗಿದ್ದು, ರೈತರಿಗೆ ಬೆಂಬಲ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಈಗ ಆಡಳಿತ ನಡೆಸುತ್ತಿದೆ. ಅದೂ ಈಗ ರೈತರ ಸಂಕಷ್ಟಕ್ಕೆ ಮಿಡಿಯುತ್ತಿಲ್ಲ, ಭೂಸ್ವಾಧೀನ ಆದೇಶ ವಾಪಸ್ ಪಡೆಯುತ್ತಿಲ್ಲ ಎನ್ನುವುದು ರೈತರ ಅಳಲು.
1,180ಕ್ಕೂ ಹೆಚ್ಚು ದಿನಗಳ ಧರಣಿ
ಭೂಮಿ ಉಳಿಸಿಕೊಳ್ಳಲು ರೈತರು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ. ದೇವನಹಳ್ಳಿ, ಬೆಂಗಳೂರು ಓಡಾಟ, ಸಂಬಂಧಿಸಿದ ಸಚಿವರು, ಅಧಿಕಾರಿಗಳ ಭೇಟಿ, ಧರಣಿ ಸ್ಥಳದಲ್ಲಿ ಸರಣಿ ಸಭೆಗಳು, ಪರಿಣತರೊಂದಿಗೆ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ, ನಿರಂತರ ಗ್ರಾಮ ಭೇಟಿ... ಹೀಗೆ ಹೋರಾಟವನ್ನು ಈವರೆಗೆ ಜೀವಂತವಾಗಿ ಇಟ್ಟಿದ್ದಾರೆ.
ದೇವನಹಳ್ಳಿಯಲ್ಲಿ ಚನ್ನರಾಯಪಟ್ಟಣ ಮುಖ್ಯರಸ್ತೆಯ ಮಧ್ಯೆ ಮಳೆಯ ನಡುವೆಯೂ ಹೋರಾಟದಲ್ಲಿ ಭಾಗಿಯಾಗಿರುವ ರೈತ ಮಹಿಳೆಯರು (ಸಂಗ್ರಹ ಚಿತ್ರ)
ಬೆಳಿಗ್ಗೆ ಎದ್ದ ಗಳಿಗೆಯಿಂದ ರಾತ್ರಿ ಮಲಗುವವರೆಗೂ ಒಂದಿಲ್ಲೊಂದು ಕೆಲಸದಲ್ಲಿ ತೊಡಗಬೇಕಾದ ಅನಿವಾರ್ಯ ಇರುವ ರೈತರು ಸಾವಿರಾರು ದಿನ ಧರಣಿ ನಡೆಸುವುದು ಸುಲಭದ ಮಾತಲ್ಲ. ಕೆಲ ರೈತರು, ರಾತ್ರಿಯಿಂದ ಬೆಳಗಿನ ಜಾವದವರೆಗೆ ಹೊಲದಲ್ಲಿ ಕೆಲಸ ಮಾಡಿ, ಹಗಲಿನಲ್ಲಿ ಭೂಮಿ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಕೆಲವರು ತಮ್ಮ ಕೆಲಸ, ಆದಾಯವನ್ನೂ ಬದಿಗೊತ್ತಿ ಹೋರಾಟದಲ್ಲಿ ತೊಡಗಿದ್ದಾರೆ. ದಿನದಿಂದ ದಿನಕ್ಕೆ ಹೋರಾಟದ ಗುಂಪು ಹಿಗ್ಗುತ್ತಲೇ ಇದೆ ಎನ್ನುವುದು ಅವರ ಭರವಸೆಯ ನುಡಿ.
ದಲಿತರ ಹೋರಾಟ
ಈ ಭಾಗದ ಅನೇಕ ದಲಿತರು ಹಿಂದೆ ಭೂಮಿ ಮಂಜೂರಾತಿಗಾಗಿ ಸರ್ಕಾರದೊಂದಿಗೆ, ಭೂಮಾಲೀಕರೊಂದಿಗೆ ಹಲವು ರೀತಿಯ ಸಂಘರ್ಷ ನಡೆಸಿದ್ದರು. ಅಷ್ಟೆಲ್ಲ ಕಷ್ಟಪಟ್ಟು ಗಳಿಸಿದ್ದ ಭೂಮಿಯನ್ನು ಈಗ ಸರ್ಕಾರ ಸ್ವಾಧೀನ ಮಾಡಿಕೊಳ್ಳಲು ಹೊರಟಿರುವುದು ದಲಿತ ರೈತರನ್ನು ಕಂಗೆಡಿಸಿದೆ. ಅಂದು ಭೂಮಿ ಪಡೆಯಲು ಹೋರಾಟ ನಡೆಸಿದ್ದ ಅವರು ಈಗ ಭೂಮಿ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ. ಹೋರಾಟದಲ್ಲಿ ವಿವಿಧ ಜಾತಿ, ಧರ್ಮಗಳ, ವಿವಿಧ ಹಿನ್ನೆಲೆಗಳ ಜನರು ಭಾಗವಹಿಸಿದ್ದಾರೆ. ಅವರ ಜತೆಗೆ ಮಹಿಳೆಯರು, ವಿದ್ಯಾರ್ಥಿಗಳು ಗಣನೀಯ ಸಂಖ್ಯೆಯಲ್ಲಿರುವುದು ವಿಶೇಷ.
ದೇವನಹಳ್ಳಿಯಲ್ಲಿ ಅಭಿವೃದ್ಧಿಯ ಮಹಾಪೂರ
ದೇವನಹಳ್ಳಿಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾದ ನಂತರ ಈ ಭಾಗದಲ್ಲಿ ವಿವಿಧ ರೀತಿಯ ಯೋಜನೆಗಳಿಗಾಗಿ ವಿಮಾನ ನಿಲ್ದಾಣದ ಸುತ್ತಮುತ್ತ ಸರ್ಕಾರವು ರೈತರ ಜಮೀನನ್ನು ವಶಪಡಿಸಿಕೊಳ್ಳುವ ಪ್ರವೃತ್ತಿ ದಶಕಗಳಿಂದಲೂ ನಡೆಯುತ್ತಲೇ ಇದೆ. ಹರಳೂರು ಕೈಗಾರಿಕಾ ಪ್ರದೇಶಕ್ಕಾಗಿ ಕೆಐಎಡಿಬಿ ಈಗಾಗಲೇ ಇದೇ ಪ್ರದೇಶದಲ್ಲಿ 1,300 ಎಕರೆಯನ್ನು ಮೊದಲ ಹಂತದಲ್ಲಿ ಸ್ವಾಧೀನಪಡಿಸಿಕೊಂಡಿದೆ.
ಜೀತದಾಳಾಗುವುದು ಖಚಿತ
ಈ ಗ್ರಾಮಗಳಲ್ಲಿ 10 ಸಾವಿರ ಟನ್ ರಾಗಿ, 2,000 ಟನ್ ದ್ರಾಕ್ಷಿ, 150 ಟನ್ ಮಾವು, ತರಕಾರಿ, ಹೂವು ಬೆಳೆಯುತ್ತಿದ್ದು, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 6 ಸಾವಿರ ಜನರಿಗೆ ಉದ್ಯೋಗ ಒದಗಿಸಿದೆ. ಇವರಲ್ಲಿ ಬಡವರು, ರೈತರು, ಕೃಷಿಕರು, ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರು ಭೂಮಿ ಕಳೆದುಕೊಂಡರೆ ಎಲ್ಲರೂ ಖಾಸಗಿ ಕಂಪನಿಗಳ ಜೀತದಾಳುಗುವುದು ಖಚಿತ – ಚೀಮಾನಚಹಳ್ಳಿ ರಮೇಶ್, ಹೋರಾಟಗಾರ
ಭೂಮಿ ಉಳಿಸಿಕೊಳ್ಳುವ ಹೋರಾಟದಲ್ಲಿ ಪೊಲೀಸರು ಹಲ್ಲೆ ನಡೆಸಿದರು. ನನ್ನ ಎಡ ಕಣ್ಣಿಗೆ ಹಾನಿ ಆಯಿತು. ಈಗಾಗಲೇ ಎರಡು ಬಾರಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದೇನೆ. ನಮ್ಮ ಅಜ್ಜ, ಅಪ್ಪ ಕೊಟ್ಟ ಭೂಮಿಯನ್ನು ಯಾರಿಗೂ ಕೊಡುವುದಿಲ್ಲ. ಮುಂದಿನ ತಲೆಮಾರಿಗೆ ಉಳಿಸಿಕೊಳ್ಳುತ್ತೇವೆ- ಪ್ರಮೋದ್, ಯುವ ರೈತ
ನಾನು ಎಂಜಿನಿಯರಿಂಗ್ ಪಧವೀಧರ, ಖಾಸಗಿ ಕಂಪನಿಯಲ್ಲಿ ಲಕ್ಷಾಂತರ ರೂಪಾಯಿ ಸಂಬಳ ನೀಡುತ್ತಾರೆ. ಆದರೆ, ನಮ್ಮ ಕೃಷಿ ಭೂಮಿಯಲ್ಲಿ ಅದಕ್ಕಿಂತ ಹೆಚ್ಚಿನ ಆದಾಯ ಗಳಿಸುತ್ತೇವೆ. ಹೈನುಗಾರಿಕೆ, ಹೂವು ಬೆಳೆಯಿಂದ ಆರ್ಥಿಕವಾಗಿ ಸದೃಢರಾಗಿದ್ದೇವೆ- ನಲ್ಲಪ್ಪನಹಳ್ಳಿ ನಂದನ್, ಯುವ ರೈತ
ಸಿದ್ದರಾಮಯ್ಯ, ಕೆ.ಎಚ್.ಮುನಿಯಪ್ಪ, ಎಂ.ಬಿ.ಪಾಟೀಲರಿಗೆ ಭೂ ದಾಹ ಹೆಚ್ಚಾಗಿದೆ. ರೈತರ ಬದುಕು ಹಾಳು ಮಾಡಿ, ನಮ್ಮ ರಕ್ತವನ್ನು ಹೀರಿ ಕುಡಿದು ಅದರ ಮೇಲೆ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಜೀವ ಇರುವವರೆಗೂ ಬಿಡುವುದಿಲ್ಲ- ನಂಜಪ್ಪ, ಹಿರಿಯ ರೈತ
ಎಲ್ಲ ಸರ್ಕಾರಗಳೂ ಕಾರ್ಪೋರೇಟ್ ಪೋಷಿತ ಹುಲಿಗಳೆಂದು ಮನದಟ್ಟಾಗಿದೆ. ಭೂ ದಾಹಕ್ಕೆ ಸಿದ್ದರಾಮಯ್ಯ ಸರ್ಕಾರವೂ ಹೊರತಾಗಿಲ್ಲ, ಜಾತ್ಯತೀತವಾಗಿ ಕಟ್ಟಿರುವ ಜನಾಂದೋಲನ ಇನ್ನಷ್ಟು ತೀವ್ರವಾಗಲಿದೆ - ಕಾರಹಳ್ಳಿ ಶ್ರೀನಿವಾಸ್, ದಸಂಸ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.