ಕರ್ನಾಟಕದಲ್ಲಿ ಐದು ವರ್ಷಗಳಲ್ಲಿ ₹5.57 ಲಕ್ಷ ಕೋಟಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವಾಗಿದೆ. 2020ಕ್ಕೆ ಹೋಲಿಸಿದರೆ 2024ರಲ್ಲಿ ಜಿಎಸ್‌ಟಿ ಸಂಗ್ರಹ ಪ್ರಮಾಣ ದುಪ್ಪಟ್ಟಾಗಿದೆ. ಅದೇ ಹೊತ್ತಿಗೆ, ಈ ಅವಧಿಯಲ್ಲಿ ಕೇಂದ್ರ ತೆರಿಗೆ ಹಾಗೂ ಸುಂಕದ ರೂಪದಲ್ಲಿ ರಾಜ್ಯಕ್ಕೆ ಬಂದಿರುವುದು ₹1.70 ಲಕ್ಷ ಕೋಟಿ. ಕೇಂದ್ರ ಪ್ರಾಯೋಜಿತ ಯೋಜನೆಗಳಿಂದ ಸಿಕ್ಕಿದ್ದು ₹96,262 ಕೋಟಿ.
ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದರೂ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಯಾವುದೇ ಕೊಡುಗೆಗಳನ್ನು ನೀಡದೆ ಅನ್ಯಾಯ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ 2025–26ನೇ ಸಾಲಿನ ಕೇಂದ್ರ ಬಜೆಟ್‌ಗೆ ಪ್ರತಿಕ್ರಿಯಿಸಿದ್ದರು. ತೆರಿಗೆ ಆದಾಯ ಹಂಚಿಕೆಯಲ್ಲೂ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯ ಆಗುತ್ತಿದೆ ಎಂದು ಕರ್ನಾಟಕ ಹೇಳುತ್ತಲೇ ಬಂದಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ದಕ್ಷಿಣದ ರಾಜ್ಯಗಳ ಬಗ್ಗೆ ಮಲತಾಯಿ ಧೋರಣೆ ಹೊಂದಿದೆ ಎಂದು ಕರ್ನಾಟಕ, ತಮಿಳುನಾಡು ಸೇರಿದಂತೆ ದಕ್ಷಿಣ ರಾಜ್ಯಗಳ ಬಿಜೆಪಿ ಹೊರತಾದ ಸಂಸದರು ಸಂಸತ್ತಿನಲ್ಲೂ ಆರೋಪಿಸಿದ್ದಾರೆ.
ರಾಜ್ಯಗಳಿಂದ ಸಂಗ್ರಹಿಸಲಾಗುವ ತೆರಿಗೆಯಲ್ಲಿ ಎಷ್ಟು ಪಾಲನ್ನು ರಾಜ್ಯಗಳಿಗೆ ವಾಪಸ್ ನೀಡಬೇಕೆಂಬುದನ್ನು ನಿರ್ಧರಿಸುವುದು ಕೇಂದ್ರ ಹಣಕಾಸು ಆಯೋಗ. ಈ ತೆರಿಗೆ ಹಂಚಿಕೆ ಮಾಡಲು ಆರು ಮಾನದಂಡಗಳನ್ನು ಆಯೋಗ ನಿಗದಿಪಡಿಸಿದೆ. ಈ ಮಾನದಂಡಗಳು ಅಭಿವೃದ್ಧಿ ಹೊಂದಿದ ರಾಜ್ಯಗಳ ಹಿತಕ್ಕೆ ಮಾರಕ ಎಂದು ಆರೋಪಿಸಿ ದಕ್ಷಿಣದ ರಾಜ್ಯಗಳು ಕೇಂದ್ರದ ಜತೆಗೆ ‘ತೆರಿಗೆ ಸಂಘರ್ಷ’ಕ್ಕೆ ಇಳಿದಿವೆ.
ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯ ಕಾರಣದಿಂದ ರಾಜ್ಯಗಳಿಗೆ ಆಗುವ ವರಮಾನ ನಷ್ಟಕ್ಕೆ ಪರಿಹಾರ ನೀಡುವ ವ್ಯವಸ್ಥೆ ಮುಂದುವರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ.
ಉತ್ತರದ ರಾಜ್ಯಗಳಿಗೆ ಹೋಲಿಸಿದರೆ ತೆರಿಗೆ ಸಂಗ್ರಹದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ, ತಮಿಳುನಾಡಿನಂತಹ ದಕ್ಷಿಣದ ರಾಜ್ಯಗಳಿಗೆ ಕೇಂದ್ರ ಸರ್ಕಾರದ ತೆರಿಗೆ ಪಾಲು, ಕೇಂದ್ರ ಪ್ರಾಯೋಜಿತ ಯೋಜನೆಗಳ ಅನುದಾನ ಸಿಗುತ್ತಿರುವುದು ಕಡಿಮೆ. ಇದನ್ನು ಹಣಕಾಸು ಸಚಿವಾಲಯ ನೀಡಿರುವ ಐದು ವರ್ಷಗಳ ಅಂಕಿಅಂಶಗಳೇ ಹೇಳುತ್ತಿವೆ. ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಕೇಳಿರುವ ಪ್ರಶ್ನೆಗೆ ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ರಾಜ್ಯಗಳಿಂದ ಸಂಗ್ರಹಿಸಿರುವ ತೆರಿಗೆ, ರಾಜ್ಯಗಳಿಗೆ ನೀಡಿರುವ ಅನುದಾನದ ವಿವರಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ತೆರಿಗೆ ಆದಾಯದಲ್ಲಿ ಕರ್ನಾಟಕಕ್ಕೆ ಶೇ 3.64ರಷ್ಟು ತೆರಿಗೆ ಹಂಚಿಕೆ ಮಾಡಬೇಕು ಎಂದು 15ನೇ ಹಣಕಾಸು ಆಯೋಗದ ಶಿಫಾರಸು ಮಾಡಿದೆ. ಉತ್ತರ ಪ್ರದೇಶಕ್ಕೆ ಇದೇ ಪ್ರಮಾಣ ಶೇ 17.93, ಬಿಹಾರಕ್ಕೆ 10.05ರಷ್ಟಿದೆ.
ಕೇಂದ್ರ ಸರ್ಕಾರವು ರಾಜ್ಯಗಳಿಗೆ ತೆರಿಗೆ ಪಾಲನ್ನು ಹಂಚಿಕೆ ಮಾಡಬೇಕಾದ ಪ್ರಮಾಣವನ್ನು ಹಣಕಾಸು ಆಯೋಗ ನಿರ್ಧರಿಸುತ್ತದೆ. 15ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ಶೇ 3.64ರಷ್ಟು ಹಂಚಿಕೆ ಮಾಡಬೇಕು ಎಂದು ಶಿಫಾರಸು ಮಾಡಿದೆ.
ಉತ್ತರ ಪ್ರದೇಶಕ್ಕೆ ಇದೇ ಪ್ರಮಾಣ ಶೇ 17.93, ಬಿಹಾರಕ್ಕೆ ಶೇ 10.05ರಷ್ಟಿದೆ. ಮಧ್ಯ ಪ್ರದೇಶಕ್ಕೆ ಶೇ 7.85, ಪಶ್ಚಿಮ ಬಂಗಾಳ ಶೇ 7.52ರಷ್ಟು ತೆರಿಗೆ ಆದಾಯದ ಪಾಲು ಪಡೆದರೆ, ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ ಮಹಾರಾಷ್ಟ್ರಕ್ಕೆ ಶೇ 6.37 ಪಾಲು ಸಿಗುತ್ತಿದೆ. ರಾಜಸ್ಥಾನಕ್ಕೆ ಶೇ 6.02 ರಷ್ಟು ಹಂಚಿಕೆ ಮಾಡಬೇಕು ಎಂದು 15ನೇ ಹಣಕಾಸು ಆಯೋಗ ಹೇಳಿದೆ.
20 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಐದು ವರ್ಷಗಳಲ್ಲಿ ಜಿಎಸ್‌ಟಿ ಸಂಗ್ರಹ ಆಗಿದ್ದು ₹4.07 ಲಕ್ಷ ಕೋಟಿ. ಆದರೆ, ತೆರಿಗೆ ಪಾಲಿನ ರೂಪದಲ್ಲಿ ಆ ರಾಜ್ಯಕ್ಕೆ ಸಿಕ್ಕಿದ್ದು ₹8.32 ಲಕ್ಷ ಕೋಟಿ. ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿ ಗರಿಷ್ಠ ಲಾಭ ಆಗಿರುವುದೂ ಆ ರಾಜ್ಯಕ್ಕೆ.
ಈ ಮೊತ್ತ ₹2.68 ಲಕ್ಷ ಕೋಟಿ. ಹಿಂದುಳಿದ ರಾಜ್ಯಗಳೆಂದು ಈಗಲೂ ಹಣೆಪಟ್ಟಿ ಹೊತ್ತುಕೊಂಡಿರುವ ಬಿಹಾರ, ಮಧ್ಯ ಪ್ರದೇಶ, ರಾಜಸ್ಥಾನದಂತಹ ರಾಜ್ಯಗಳು ಕಡಿಮೆ ತೆರಿಗೆ ಸಂಗ್ರಹಿಸುತ್ತಿವೆ. ಆದರೆ, ತೆರಿಗೆ ಪಾಲು ಹಾಗೂ ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿ ಗರಿಷ್ಠ ‘ಲಾಭ’ ಪಡೆಯುತ್ತಿವೆ.
ಪ್ರಜಾವಾಣಿ ಗ್ರಾಫಿಕ್ಸ್: ಕಣಕಾಲಮಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.