ADVERTISEMENT

ಆಳ ಅಗಲ | ಡಿಎನ್‌ಎ ಪರೀಕ್ಷೆ ಎಂಬ ಪತ್ತೇ‘ದಾರಿ ಕೆಲಸ’

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 0:46 IST
Last Updated 24 ಜೂನ್ 2025, 0:46 IST
   

ಜನರ ಜೈವಿಕ/ಅಂಗಾಂಗ ಮಾದರಿಗಳ ಮೂಲಕ ಅವರ ಗುರುತು, ಸಂಬಂಧ ಇತ್ಯಾದಿ ಪತ್ತೆ ಹಚ್ಚುವ ಡಿಎನ್‌ಎ ಪರೀಕ್ಷೆ ಒಂದು ಸಂಕೀರ್ಣವಾದ ಪ್ರಕ್ರಿಯೆ. ಅಪರಾಧಗಳನ್ನು ಬಯಲಿಗೆಳೆಯುವುದು, ಮೃತದೇಹಗಳನ್ನು ಪತ್ತೆ ಹಚ್ಚವುದು ಸೇರಿದಂತೆ ಹಲವು ಸಂದರ್ಭಗಳಲ್ಲಿ ಡಿಎನ್‌ಎ ಪರೀಕ್ಷಾ ತಂತ್ರಜ್ಞಾನ ಬಳಸಲಾಗುತ್ತಿದೆ. ಪೊಲೀಸ್ ಇಲಾಖೆ, ನ್ಯಾಯಾಲಯಗಳಿಗೆ ಇದು ಅತ್ಯಂತ ಉಪಯುಕ್ತ ತಂತ್ರಜ್ಞಾನವಾಗಿದೆ. ಅಹಮದಾಬಾದ್‌ ವಿಮಾನ ದುರಂತದಲ್ಲಿ ಮೃತಪಟ್ಟವರ ಗುರುತು ಪತ್ತೆಹಚ್ಚುವಲ್ಲೂ ಇದು ನೆರವಾಗಿದೆ. ಡಿಎನ್‌ಎ ಪರೀಕ್ಷೆ, ಅಂಗಾಂಗ ಮಾದರಿ ಸಂಗ್ರಹ ವಿಚಾರದಲ್ಲಿ ವ್ಯಕ್ತಿಗಳ ಖಾಸಗಿತನಕ್ಕೆ ಧಕ್ಕೆ ಉಂಟಾಗುತ್ತಿದ್ದು, ಈ ಸಂಬಂಧ ಮಾರ್ಗಸೂಚಿ ರೂಪಿಸಬೇಕಿದೆ ಎನ್ನುವ ಒತ್ತಾಯವೂ ಇದೆ .

ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡ ಸಂದರ್ಭದಲ್ಲಿಯೇ ಗುಜರಾತಿ ಸಿನಿಮಾ, ಮ್ಯೂಸಿಕ್ ವಿಡಿಯೊಗಳ ನಿರ್ದೇಶಕರಾಗಿದ್ದ ಮಹೇಶ್ ಜಿರಾವಾಲಾ ಎನ್ನುವ ವ್ಯಕ್ತಿ ಕಾಣೆಯಾದರು. ವಿಮಾನದಲ್ಲಿದ್ದ ಪ್ರಯಾಣಿಕರ ಗುರುತು ಪತ್ತೆಗಾಗಿ ಡಿಎನ್‌ಎ ಪರೀಕ್ಷೆ ನಡೆಯುತ್ತಿದ್ದುದನ್ನು ಅರಿತಿದ್ದ ಜಿರಾವಾಲಾ ಅವರ ಪತ್ನಿ, ತಮ್ಮ ಗಂಡನ ಪತ್ತೆಗಾಗಿ ಕುಟುಂಬದ ಸದಸ್ಯರ ಡಿಎನ್‌ಎ ಮಾದರಿಗಳನ್ನು ಪೊಲೀಸರಿಗೆ ಒದಗಿಸಿದರು. ಅಪಘಾತಕ್ಕೀಡಾದ ವಿಮಾನದಲ್ಲಿ ಜಿರಾವಾಲಾ ಪ್ರಯಾಣಿಸಿರಲಿಲ್ಲವಾದರೂ ಪೊಲೀಸರು ಡಿಎನ್‌ಎ ಪರೀಕ್ಷೆಗೆ ಒಳಪಡಿಸಿದರು. ಅದರಲ್ಲಿ ಅಚ್ಚರಿಯ ಫಲಿತಾಂಶ ಬಂತು. ವಿಮಾನ ದುರಂತದಲ್ಲಿ ಸತ್ತವರ ಪೈಕಿ ಜಿರಾವಾಲಾ ಕೂಡ ಒಬ್ಬರಾಗಿದ್ದರು. ವಿಮಾನ ನೆಲಕ್ಕೆ ಅ‍ಪ್ಪಳಿಸಿದ ನಂತರ ಉಂಟಾದ 800ರಿಂದ 1,000 ಡಿಗ್ರಿ ಸೆಲ್ಸಿಯಸ್‌ನಷ್ಟು ಶಾಖದಿಂದ ಸನಿಹದ ರಸ್ತೆಯಲ್ಲಿ ಸ್ಕೂಟರ್‌ನಲ್ಲಿ ಸಾಗುತ್ತಿದ್ದ ಜಿರಾವಾಲಾ ಮೃತಪಟ್ಟರೆ, ಸ್ಕೂಟರ್‌ ಸುಟ್ಟುಕರಲಾಗಿತ್ತು. 

ಡಿಎನ್‌ಎ ಪರೀಕ್ಷೆ ಎನ್ನುವುದು ಒಂದು ಆಪದ್ಬಾಂಧವ ತಂತ್ರಜ್ಞಾನ. ಯಾವುದಾದರೂ ಅವಘಡ ಸಂಭವಿಸಿ ವ್ಯಕ್ತಿಗಳು ಮೃತಪಟ್ಟು, ಅವರ ದೇಹ ಗುರುತು ಸಿಗದಿದ್ದರೆ, ಡಿಎನ್‌ಎ ಪರೀಕ್ಷೆ ಮಾಡಬೇಕು. ಇದೇ ರೀತಿ ಅಪರಾಧಗಳನ್ನು ಪತ್ತೆ ಮಾಡುವುದು, ಅಪ್ಪ–ಅಮ್ಮ, ಮಕ್ಕಳ ನಡುವಿನ ರಕ್ತಸಂಬಂಧ ಖಾತರಿಪಡಿಸುವುದು ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಡಿಎನ್ಎ ಪರೀಕ್ಷೆಯು ಪೊಲೀಸ್ ಇಲಾಖೆ, ನ್ಯಾಯಾಂಗಕ್ಕೆ ಸತ್ಯಾನ್ವೇಷಣೆಯ ಸಾಧನವಾಗಿ ಬಳಕೆಯಾಗುತ್ತಿದೆ. 

ADVERTISEMENT

ಅಪರಾಧ ತನಿಖೆಯ ವೇಳೆ, ಅಪರಾಧ ನಡೆದ ಸ್ಥಳದಲ್ಲಿ ದೊರಕಿದ ಮಾದರಿಗಳಲ್ಲಿನ ಡಿಎನ್‌ಎ ವಿವರಗಳನ್ನು ಶಂಕಿತರ ಡಿಎನ್‌ಎ ಜತೆ ಹೋಲಿಸಿ ನೋಡಲಾಗುತ್ತದೆ. ಅಪರಿಚಿತ, ಗುರುತು ಪತ್ತೆ ಮಾಡಲು ಸಾಧ್ಯವಾಗದ ರೀತಿಯಲ್ಲಿ ವಿರೂಪಗೊಂಡ ಮೃತದೇಹಗಳ ಜೈವಿಕ ಮಾದರಿಗಳನ್ನು ಸಂಭವನೀಯ ಸಂಬಂಧಿಗಳ ಡಿಎನ್‌ಎ ಜತೆ ಹೋಲಿಕೆ ಮಾಡಲಾಗುತ್ತದೆ. ಅದೇ ರೀತಿ ತಂದೆ/ತಾಯಿಯ ಜೈವಿಕ ಮಾದರಿ ಮತ್ತು ಮಕ್ಕಳ ಮಾದರಿ ಸಂಗ್ರಹಿಸಿ, ಅವುಗಳ ಡಿಎನ್‌ಎ ವಿಶ್ಲೇಷಿಸಿ, ಪಿತೃತ್ವ ಅಥವಾ ಮಾತೃತ್ವ ನಿರ್ಧರಿಸಲಾಗುತ್ತದೆ. ಭೂಕಂಪ, ವಿಮಾನ ಪತನದಂಥ ದುರಂತಗಳು ನಡೆದಾಗ, ಸಂತ್ರಸ್ತರ ಪತ್ತೆಗೂ ಇದೇ  ಮಾದರಿ ಬಳಸಲಾಗುತ್ತದೆ. ಮನುಷ್ಯರಲ್ಲಷ್ಟೇ ಅಲ್ಲ, ಪ್ರಾಣಿಗಳ ಬೇಟೆ, ಕಳ್ಳಸಾಗಣೆ ಪತ್ತೆ ಹಚ್ಚುವಲ್ಲಿಯೂ ಈ ಪರೀಕ್ಷಾ ವಿಧಾನ ಬಳಸಲಾಗುತ್ತದೆ.

ಡಿಎನ್‌ಎ ಎಂದರೆ...
ಡೀಆಕ್ಸಿರೈಬೊನ್ಯೂಕ್ಲಿಯಿಕ್ ಆ್ಯಸಿಡ್ ಎಂಬುದರ ಸಂಕ್ಷಿಪ್ತ ರೂಪ ಡಿಎನ್‌ಎ. ಜೀವಿಗಳ ವರ್ಣತಂತುಗಳಲ್ಲಿರುವ (ಕ್ರೋಮೋಸೋಮ್‌) ಅತ್ಯಂತ ಸಂಕೀರ್ಣವಾದಂತಹ ಆನುವಂಶೀಯ ರಾಸಾಯನಿಕ ಗುಣಲಕ್ಷಣಗಳನ್ನು ಹೊಂದಿರುವ ಅಣು ಇದು. ವಂಶವಾಹಿಯ ಮುಖ್ಯಭಾಗವಾಗಿರುವ ಡಿಎನ್‌ಎ, ಸುರುಳಿ ಸುತ್ತಿದ ಏಣಿಯ ರೂಪದಲ್ಲಿ ಜೀವಕೋಶದ (ಸೆಲ್‌) ಕೇಂದ್ರ ಭಾಗದಲ್ಲಿರುತ್ತದೆ. ವ್ಯಕ್ತಿ ಅಥವಾ ಜೀವಿಗಳ ವಂಶಾವಳಿಯ ಮಾಹಿತಿಗಳನ್ನು ತಲೆಮಾರಿನಿಂದ ತಲೆಮಾರಿಗೆ ಇದು ಒಯ್ಯುತ್ತದೆ.

ಡಿಎನ್‌ಎ ಪರೀಕ್ಷೆಗೆ ಅತ್ಯಾಧುನಿಕ ಯಂತ್ರಗಳು, ಅಪಾರ ಹಣ ಬೇಕಾಗುತ್ತವೆ. ಆದರೆ, ಪರೀಕ್ಷೆಗೊಳಪಡಿಸಿದ ಜೈವಿಕ/ಅಂಗಾಂಗಗಳ ಮಾದರಿಯು ಹಾಳಾದರೆ, ಫಲಿತಾಂಶ ನಿಖರವಾಗಿರುವುದಿಲ್ಲ. ಮಾದರಿಗೆ ಬೆಂಕಿ ಹೊತ್ತಿಕೊಂಡರೆ, ಅದು ಕೊಳೆತಿದ್ದರೆ, ರಾಸಾಯನಿಕಗಳ ಜತೆ ಸಂಯೋಜನೆಗೊಂಡಿದ್ದರೆ, ಡಿಎನ್‌ಎ ಪರೀಕ್ಷೆ ವಿಫಲವಾಗುತ್ತದೆ. ಕಡಿಮೆ ಗುಣಮಟ್ಟದ ಅಥವಾ ಕಲುಷಿತ ಮಾದರಿಗಳನ್ನು ಬಳಸಿದರೂ ಉತ್ತಮ ಫಲಿತಾಂಶ ಸಿಗುವುದಿಲ್ಲ.      

ಭಾರತದಲ್ಲಿ ವ್ಯಕ್ತಿಗಳ ಅಂಗಾಂಗಗಳ ಮಾದರಿ ಸಂಗ್ರಹಿಸುವುದಕ್ಕೆ, ಡಿಎನ್‌ಎ ಪರೀಕ್ಷೆ ನಡೆಸುವುದಕ್ಕೆ ಸಂಬಂಧಿಸಿದಂತೆ ಸೂಕ್ತ ಕಾನೂನು ಇಲ್ಲ; ಡಿಎನ್‌ಎ ಪರೀಕ್ಷಾ ವಿಧಾನವು ದುರುಪಯೋಗ ಆಗುತ್ತಿದೆ ಎನ್ನುವ ಆರೋಪಗಳೂ ಇವೆ. ಪಿತೃತ್ವ ವಿವಾದಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಒಬ್ಬ ವ್ಯಕ್ತಿಗೆ ಮತ್ತೊಬ್ಬ ವ್ಯಕ್ತಿಯ ಮೇಲೆ ಡಿಎನ್‌ಎ ಪರೀಕ್ಷೆ ನಡೆಸುವ ಹಕ್ಕು ಇಲ್ಲ ಎಂದು ಇದೇ ಜನವರಿಯಲ್ಲಿ ತೀರ್ಪು ನೀಡಿತ್ತು. ಅದು ವ್ಯಕ್ತಿಯ ಖಾಸಗಿತನದ ಉಲ್ಲಂಘನೆ ಎಂದಿತ್ತು.

ರಕ್ತ, ವೀರ್ಯ, ಎಂಜಲು, ಮಲ, ಮೂತ್ರ, ಕೂದಲು, ಹಲ್ಲು, ಮೂಳೆ, ಅಂಗಾಂಶ, ಜೀವಕೋಶ, ಬೆರಳಚ್ಚು– ಇವುಗಳ ಪೈಕಿ ಯಾವುದಾದರೊಂದು ಮಾದರಿ ದೊರೆತರೂ ಡಿಎನ್‌ಎ ಪರೀಕ್ಷೆ ನಡೆಸಬಹುದು. ಇವುಗಳ ಜತೆಗೆ, ವ್ಯಕ್ತಿ ಸ್ಪರ್ಶಿಸಿದ ವಸ್ತು, ಸೇದಿದ ಸಿಗರೇಟ್, ಧರಿಸಿದ ಬಟ್ಟೆ, ಕನ್ನಡಕದ ಮೂಲಕವೂ ಕಂಡುಹಿಡಿಯಬಹುದಾಗಿದೆ. ಅತಿ ಸಣ್ಣ ಜೈವಿಕ ಮಾದರಿಯನ್ನು ರಾಸಾಯನಿಕ ಪ್ರಕ್ರಿಯೆ ಮೂಲಕ ಸಂಗ್ರಹಿಸಿ ಡಿಎನ್‌ಎ ಪರೀಕ್ಷೆ ಮಾಡಬಹುದು. 

ಡಿಎನ್‌ಎ ಪರೀಕ್ಷೆಗೆ ಜೈವಿಕ ಮಾದರಿ ಸಂಗ್ರಹಿಸುವುದು ಮತ್ತು ರಾಷ್ಟ್ರೀಯ ಡೇಟಾಬೇಸ್ ರೂಪಿಸುವುದಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ರೂಪಿಸಲು ದೇಶದಲ್ಲಿ ಡಿಎನ್‌ಎ ಪ್ರೊಫೈಲಿಂಗ್ ಮಸೂದೆ ತರುವ ಪ್ರಯತ್ನಗಳು 2007ರಿಂದಲೂ ನಡೆಯುತ್ತಿವೆ. ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಜೈವಿಕ ತಂತ್ರಜ್ಞಾನ ವಿಭಾಗವು ಈ ದಿಸೆಯಲ್ಲಿ ಕರಡು ರೂಪಿಸಿದೆ. ಮಸೂದೆ ಮಂಡನೆಗೂ ಮುಂಚೆಯೇ ಅದನ್ನು ಹಲವು ಬಾರಿ ಬದಲಾವಣೆ ಮಾಡಲಾಗಿದೆಯಾದರೂ ಅದು ಇನ್ನೂ ಸಂಸತ್‌ನಲ್ಲಿ ಮಂಡನೆಯಾಗಿಲ್ಲ. 

ವಿಮಾನ ದುರಂತ: ಡಿಎನ್‌ಎ ಪರೀಕ್ಷೆ ನಡೆದಿದ್ದು ಹೇಗೆ?

  • ವಿಮಾನ ಪತನಗೊಂಡ ಸ್ಥಳದಲ್ಲಿ ಸುಟ್ಟು ಕರಕಲಾದ ಮೃತದೇಹಗಳನ್ನು ಸಂಗ್ರಹಿಸಿ ಅಹಮದಾಬಾದ್‌ನ ಸಿವಿಲ್‌ ಆಸ್ಪತ್ರೆಗೆ ರವಾನೆ. ಅಲ್ಲಿ ಮೃತದೇಹಗಳಿಂದ ಡಿಎನ್‌ಎ ಪರೀಕ್ಷೆಗಾಗಿ ಮಾದರಿಗಳ ಸಂಗ್ರಹ

  • ಮೃತಪಟ್ಟವರ ಡಿಎನ್‌ಎ ವಿವರಗಳನ್ನು ಕುಟುಂಬದವರ ಡಿಎನ್‌ಎ ವಿವರಗಳೊಂದಿಗೆ ಹೋಲಿಸಿ ನೋಡುವುದಕ್ಕಾಗಿ ಬಿ.ಜೆ.ವೈದ್ಯಕೀಯ ಕಾಲೇಜಿನಲ್ಲಿ ಮೃತಪಟ್ಟವರ ಸಂಬಂಧಿಕರ ರಕ್ತದ ಮಾದರಿಗಳ ಸಂಗ್ರಹ

  • ಅಹಮದಾಬಾದ್‌ನಲ್ಲಿರುವ ವಿಧಿ ವಿಜ್ಞಾನ ನಿರ್ದೇಶನಾಲಯ (ಡಿಎಫ್‌ಎಸ್‌) ಮತ್ತು ರಾಷ್ಟ್ರೀಯ ವಿಧಿ ವಿಜ್ಞಾನಗಳ ವಿಶ್ವವಿದ್ಯಾಲಯದ (ಎನ್‌ಎಫ್‌ಎಸ್‌ಯು) ಡಿಎನ್‌ಎ ವಿಶ್ಲೇಷಣೆ ಕೇಂದ್ರದಲ್ಲಿ ಡಿಎನ್‌ಎ ಗುರುತಿಸುವಿಕೆ (ಪ್ರೊಫೈಲಿಂಗ್‌) ಮತ್ತು ಡಿಎನ್‌ಎ ಹೊಂದಾಣಿಕೆ ಪರಿಶೀಲನೆ ಪ್ರಕ್ರಿಯೆ 

  • ಮೃತಪಟ್ಟವರ ಹಲ್ಲು, ಅಸ್ಥಿ ಮಜ್ಜೆ ಹಾಗೂ ಇನ್ನಿತರ ಅಂಗಾಂಗಗಳಿಂದ ಡಿಎನ್‌ಎಯನ್ನು ಪ್ರತ್ಯೇಕಿಸಿ, ಆರ್‌ಟಿ–ಪಿಸಿಆರ್‌ ವಿಧಾನದ ಮೂಲಕ ಡಿಎನ್‌ಎಯ ಹಲವು ಪ್ರತಿಗಳನ್ನು ಸೃಷ್ಟಿಸಿ ಡಿಎನ್‌ಎ ಪ್ರೊಫೈಲ್‌ಗಳನ್ನು ವಿಧಿ ವಿಜ್ಞಾನ ನಿರ್ದೇಶನಾಲಯದಲ್ಲಿ ಸಿದ್ಧಪಡಿಸಿದ ತಜ್ಞರು

  • ಮೃತಪಟ್ಟವರ ದೇಹಗಳು ಸುಟ್ಟು ಕರಕಲಾಗಿದ್ದರಿಂದ ಬಹುತೇಕ ಪ್ರಕರಣಗಳಲ್ಲಿ ಮಾದರಿ ಸಂಗ್ರಹಕ್ಕಾಗಿ ಸಂತ್ರಸ್ತರ ಹಲ್ಲು ಮತ್ತು ಮೂಳೆಗಳನ್ನೇ ಅವಲಂಬಿಸಿದ ತಜ್ಞರು

  • ಎನ್‌ಎಫ್‌ಎಸ್‌ಯುನಲ್ಲಿ ಮೃತಪಟ್ಟವರ ಡಿಎನ್‌ಎ ವಿವರಗಳನ್ನು, ಅವರ ಸಂಬಂಧಿಕರ ಡಿಎನ್‌ಎ ವಿವರಗಳೊಂದಿಗೆ ಹೋಲಿಸಿ ಮೃತಪಟ್ಟವರ ಗುರುತನ್ನು ಪತ್ತೆ ಹಚ್ಚಿದ ವಿಜ್ಞಾನಿಗಳು

  • ಒಂದು ವೇಳೆ ಡಿಎನ್‌ಎ ಹೊಂದಾಣಿಕೆಯಾಗದಿದ್ದರೆ, ಹೆಚ್ಚುವರಿ ಪರೀಕ್ಷೆಗಳನ್ನು ನಡೆಸುವುದು ಅಥವಾ ಪರೀಕ್ಷಾ ಪ್ರಕ್ರಿಯೆ ಪುನರಾವರ್ತನೆ. ಮೃತಪಟ್ಟ ಎಂಟು ಮಂದಿಯ ಡಿಎನ್‌ಎ ವಿವರಗಳು ಸಂಬಂಧಿಕರ ಡಿಎನ್‌ಎ ವಿವರಗಳೊಂದಿಗೆ ಹೋಲಿಕೆ ಆಗದಿರುವುದಕ್ಕೆ, ಕುಟುಂಬಗಳ ಬೇರೆ ಸದಸ್ಯರ ಮಾದರಿಗಳನ್ನು ಸಂಗ್ರಹಕ್ಕೆ ವೈದ್ಯರು ಸೂಚಿಸಿದ್ದರು   

  • ಡಿಎನ್‌ಎ ವಿವರಗಳು ಹೊಂದಾಣಿಕೆಯಾಗಿ ಮೃತಪಟ್ಟವರ ಗುರುತು ಪತ್ತೆಯಾದ ನಂತರ ಸಿವಿಲ್‌ ಆಸ್ಪತ್ರೆಯಲ್ಲಿದ್ದ ಮೃತದೇಹಗಳು ಕುಟುಂಬಗಳಿಗೆ ಹಸ್ತಾಂತರ

  • ಅಧಿಕಾರಿಗಳ ಪ್ರಕಾರ, ವಿಕೋಪದಲ್ಲಿ ಸಂತ್ರಸ್ತರಾದವರ ಗುರುತು ಪತ್ತೆ ಹಚ್ಚುವಿಕೆಗೆ ಸಂಬಂಧಿಸಿದಂತೆ ಇಂಟರ್‌ಪೋಲ್‌ ರೂಪಿಸಿರುವ ಮಾನದಂಡದಂತೆ ಡಿಎನ್‌ಎ ಪರೀಕ್ಷೆಗಳನ್ನು ಕೈಗೊಳ್ಳಲಾಗಿದೆ 

ಆಧಾರ: ಪಿಟಿಐ, ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್, ಮಾಧ್ಯಮ ವರದಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.