ದೇಶದಲ್ಲಿ ದುಡಿಯುವವರ ಸಂಖ್ಯೆ ಹೆಚ್ಚಾಗಿದೆ ಎಂದು ಮಾದರಿ ನೋಂದಣಿ ವ್ಯವಸ್ಥೆಯ (ಎಸ್‌ಆರ್‌ಎಸ್) ಸಾಂಖ್ಯಿಕ ವರದಿ (2023) ತಿಳಿಸಿದೆ. 15–59 ವರ್ಷ ವಯಸ್ಸಿನವರ ಪ್ರಮಾಣ 1971ರಲ್ಲಿ ಶೇ 53.4 ಇದ್ದದ್ದು 2023ರಲ್ಲಿ ಶೇ 66.1ಕ್ಕೆ ಏರಿಕೆಯಾಗಿದೆ ಎಂದು ವರದಿ ಉಲ್ಲೇಖಿಸಿದೆ. 1981ರಲ್ಲಿ ಈ ಪ್ರಮಾಣ ಶೇ 56.3 ಮತ್ತು 1991ರಲ್ಲಿ ಶೇ 57.7ರಷ್ಟಿತ್ತು.
ಒಟ್ಟು 88 ಲಕ್ಷ ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, ಇದು ದೇಶದ ಅತಿ ದೊಡ್ಡ ಸಮೀಕ್ಷೆ ಎನ್ನಿಸಿಕೊಂಡಿದೆ.
ಗಮನಾರ್ಹ ವಿಚಾರವೆಂದರೆ, ಆರ್ಥಿಕವಾಗಿ ಕ್ರಿಯಾಶೀಲರಾಗಿರುವವರ ಪೈಕಿ ಮಹಿಳೆಯರ ಪ್ರಮಾಣವು
(ಶೇ 66) ಪುರುಷರ ಪ್ರಮಾಣಕ್ಕಿಂತಲೂ (ಶೇ 65.9) ಹೆಚ್ಚಿದೆ. 15–59 ವರ್ಷ ವಯೋಮಾನದ ಜನರಲ್ಲಿ ಕರ್ನಾಟಕವು ಏಳನೇ ಸ್ಥಾನ ಪಡೆದಿದ್ದು, ರಾಜ್ಯದಲ್ಲಿ ದುಡಿಯುವವರ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ (ಶೇ 68). ಈ ಪಟ್ಟಿಯಲ್ಲಿ ಬಿಹಾರವು (ಶೇ 60.1) ಕೊನೆಯ ಸ್ಥಾನ ಪಡೆದಿದೆ. ಈ ವಯೋಮಾನದವರು ನಗರ ಪ್ರದೇಶಗಳಲ್ಲಿ (ಶೇ 68.6) ಗ್ರಾಮೀಣ ಪ್ರದೇಶಗಳಿಗಿಂತ
(ಶೇ 64.6) ಹೆಚ್ಚು.
ದೇಶ ಹಾಗೂ ವಿವಿಧ ರಾಜ್ಯಗಳಲ್ಲಿನ ವಿವಿಧ ವಯೋಮಾನದ (0–4, 5–9, 15–59, 60+ ವರ್ಷ ) ಜನಸಂಖ್ಯೆಯ ಪ್ರಮಾಣವನ್ನು ವರದಿಯು ಒಳಗೊಂಡಿದೆ.
ದೇಶದ ದಕ್ಷಿಣ ರಾಜ್ಯಗಳೂ ಒಳಗೊಂಡಂತೆ ಹಲವು ರಾಜ್ಯಗಳಲ್ಲಿ ವೃದ್ಧರ ಸಂಖ್ಯೆ ಹೆಚ್ಚಾಗಿರುವುದನ್ನೂ ವರದಿ ಉಲ್ಲೇಖಿಸಿದೆ. 2023ರಲ್ಲಿ ದೇಶದಲ್ಲಿ 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದವರ ಪ್ರಮಾಣವು ಶೇ 9.7ರಷ್ಟಿತ್ತು. ಅದರಲ್ಲಿ ಮಹಿಳೆಯರ ಪ್ರಮಾಣವು ಶೇ 10.2 ಆಗಿದ್ದರೆ, ಪುರುಷರ ಪ್ರಮಾಣವು ಶೇ 9.2 ಆಗಿದೆ. ಕೇರಳದಲ್ಲಿ ಅತಿ ಹೆಚ್ಚು ಅಂದರೆ ಶೇ 15.1ರಷ್ಟು ಈ ವಯೋಮಾನದವರಿದ್ದಾರೆ. ತಮಿಳುನಾಡು (ಶೇ 14) ಮತ್ತು ಹಿಮಾಚಲ ಪ್ರದೇಶಗಳು (ಶೇ 13.2) ನಂತರದ ಸ್ಥಾನದಲ್ಲಿವೆ. ಜಾರ್ಖಂಡ್ ಮತ್ತು ಅಸ್ಸಾಂನಲ್ಲಿ ಅತಿ ಕಡಿಮೆ ಅಂದರೆ ತಲಾ ಶೇ 7.6ರಷ್ಟು ಮತ್ತು ದೆಹಲಿಯಲ್ಲಿ ಶೇ 7.7ರಷ್ಟು 60 ವರ್ಷಕ್ಕಿಂತ ಹೆಚ್ಚು ವಯಸ್ಸಿನವರಿದ್ದಾರೆ.
ದೇಶದ 18 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟಾರೆ ಫಲವಂತಿಕೆ ದರವು (ಟಿಎಫ್‌ಆರ್) ಜನಸಂಖ್ಯೆಯ ಮಟ್ಟ ಕಾಯ್ದುಕೊಳ್ಳಲು ಅಗತ್ಯವಾದ ಪ್ರಮಾಣಕ್ಕಿಂತ (2.1) ಕಡಿಮೆ ಇದೆ ಎಂದೂ ವರದಿ ಹೇಳಿದೆ. ಶಿಶು ಮರಣ ಪ್ರಮಾಣವು (2023ರಲ್ಲಿ) 25 ಇದ್ದು, ಕಳೆದ ಐದು ವರ್ಷಗಳಲ್ಲಿ ಏಳು ಅಂಶಗಳಷ್ಟು ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ.
ಕರ್ನಾಟಕ: ವರದಿ ಹೇಳುವುದೇನು?
ರಾಜ್ಯದಲ್ಲಿ 15ರಿಂದ 59 ವರ್ಷದವರೆಗಿನ ದುಡಿಯುವವರ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿದೆ. ಶೇ 68ರಷ್ಟು ಮಂದಿ ಈ ವಯೋಮಾನದವರು ಕರ್ನಾಟಕದಲ್ಲಿದ್ದಾರೆ. ಪುರುಷರು ಶೇ 68.4ರಷ್ಟಿದ್ದರೆ, ಮಹಿಳೆಯರ ಪ್ರಮಾಣ ಶೇ 67.4ರಷ್ಟಿದೆ.
ರಾಜ್ಯದ ಗ್ರಾಮೀಣ ಭಾಗದಲ್ಲಿ ದುಡಿಯುವ ಪುರುಷರ ಸಂಖ್ಯೆ (ಶೇ 68.4) ಕಡಿಮೆ ಇದ್ದರೆ, ನಗರ ಪ್ರದೇಶಗಳಲ್ಲಿ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ (ಶೇ 69.7).
14 ವರ್ಷದೊಳಗಿನ ಮಕ್ಕಳ ಪ್ರಮಾಣವು ರಾಜ್ಯದಲ್ಲಿ ರಾಷ್ಟ್ರೀಯ ಸರಾಸರಿಗಿಂತ (ಶೇ 24.2) ಕಡಿಮೆ ಇದೆ. ರಾಜ್ಯದಲ್ಲಿ ಈ ಪ್ರಾಯದ ಮಕ್ಕಳು ಶೇ 21.9ರಷ್ಟಿದ್ದಾರೆ. ಬಾಲಕರು ಶೇ 22.4ರಷ್ಟಿದ್ದರೆ, ಬಾಲಕಿಯರ ಪ್ರಮಾಣ ಶೇ 21.3ರಷ್ಟು.
ನಗರಗಳಿಗೆ ಹೋಲಿಸಿದರೆ (ಶೇ 21.4), ಗ್ರಾಮೀಣ ಭಾಗದಲ್ಲಿ ಮಕ್ಕಳ ಪ್ರಮಾಣ (ಶೇ 22.2) ಹೆಚ್ಚಿದೆ.
ವೃದ್ಧರು ಹೆಚ್ಚು: ರಾಜ್ಯದಲ್ಲಿ 60 ವರ್ಷಕ್ಕಿಂತ ಹೆಚ್ಚು ವಯಸ್ಸಿನವರ ಪ್ರಮಾಣ ಶೇ 10.1ರಷ್ಟಿದೆ. ಇದು ದೇಶದ ಒಟ್ಟು ಸರಾಸರಿಗಿಂತ (ಶೇ 9.7) ಹೆಚ್ಚು. ವೃದ್ಧರಿಗಿಂತ (ಶೇ 9.1) ವೃದ್ಧೆಯವರ ಪ್ರಮಾಣ ಜಾಸ್ತಿ (ಶೇ 11.1) ಇದೆ.
60 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು ಗ್ರಾಮೀಣ ಭಾಗದಲ್ಲಿ ಶೇ 10.7ರಷ್ಟಿದ್ದರೆ, ನಗರ ವ್ಯಾಪ್ತಿಯಲ್ಲಿ
ಶೇ 9.3ರಷ್ಟು ಇದ್ದಾರೆ. ಎರಡೂ ಕಡೆಗಳಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.