ADVERTISEMENT

ಆಳ–ಅಗಲ | ಜಾತಿ ಸಮೀಕ್ಷೆ: ತೆಲಂಗಾಣ, ಬಿಹಾರದ ಹಾದಿ

ಎರಡೂ ರಾಜ್ಯಗಳಲ್ಲಿ ವ್ಯಕ್ತವಾಗಿತ್ತು ವಿರೋಧ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 23:30 IST
Last Updated 18 ಸೆಪ್ಟೆಂಬರ್ 2025, 23:30 IST
ತೆಲಂಗಾಣದಲ್ಲಿ ಜಾತಿ ಸಮೀಕ್ಷೆಯ ವೇಳೆ ಸಿಬ್ಬಂದಿ ಮನೆಯೊಂದರಲ್ಲಿ ಮಾಹಿತಿ ಕಲೆ ಹಾಕಿದ್ದ ಸಂಗ್ರಹ ಚಿತ್ರ  –ಪಿಟಿಐ ಚಿತ್ರ
ತೆಲಂಗಾಣದಲ್ಲಿ ಜಾತಿ ಸಮೀಕ್ಷೆಯ ವೇಳೆ ಸಿಬ್ಬಂದಿ ಮನೆಯೊಂದರಲ್ಲಿ ಮಾಹಿತಿ ಕಲೆ ಹಾಕಿದ್ದ ಸಂಗ್ರಹ ಚಿತ್ರ  –ಪಿಟಿಐ ಚಿತ್ರ   
ಕರ್ನಾಟಕದಲ್ಲಿ ಮೊದಲಿಗೆ ಜಾತಿ ಸಮೀಕ್ಷೆ ಆದ ನಂತರ ನೆರೆಯ ತೆಲಂಗಾಣ ಮತ್ತು ಬಿಹಾರ ರಾಜ್ಯಗಳಲ್ಲೂ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆದಿದೆ. ಎರಡೂ ರಾಜ್ಯಗಳಲ್ಲಿ ಸರ್ಕಾರದ ಪ್ರಯತ್ನಕ್ಕೆ ವಿರೋಧ ವ್ಯಕ್ತವಾಗಿತ್ತು. ಸಮೀಕ್ಷೆಯ ವರದಿಯ ಆಧಾರದಲ್ಲಿ ಎರಡೂ ರಾಜ್ಯಗಳಲ್ಲಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲಾಗಿದೆ. ತೆಲಂಗಾಣದ ನಿರ್ಧಾರವು ರಾಷ್ಟ್ರಪತಿ ಅಂಗಳದಲ್ಲಿದೆ. ಬಿಹಾರದಲ್ಲಿ ಮೀಸಲಾತಿ ಹೆಚ್ಚಳ ಆದೇಶವನ್ನು ಪಟ್ನಾ ಹೈಕೋರ್ಟ್‌ ರದ್ದು ಮಾಡಿದೆ. ಪ್ರಕರಣ ಈಗ ಸುಪ್ರೀಂ ಕೋರ್ಟ್‌ನಲ್ಲಿದೆ.

ಭಾರತದಲ್ಲಿ 1931ರಲ್ಲಿ ಕೊನೆಯ ಬಾರಿಗೆ ಜಾತಿ ಗಣತಿ ನಡೆದಿತ್ತು. ಅದರ ನಂತರ ಪ್ರತಿ ಜನಗಣತಿ ಸಂದರ್ಭದಲ್ಲಿಯೇ ಎಸ್‌ಸಿ, ಎಸ್‌ಟಿ ಸಮುದಾಯಗಳ ಜಾತಿ ವಿವರಗಳನ್ನೂ ಸಂಗ್ರಹಿಸಲಾಗುತ್ತಿದೆ. ಆದರೆ, ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಜಾತಿ ಮತ್ತಿತರ ವಿವರಗಳು ದೀರ್ಘಕಾಲದಿಂದ ಅಲಭ್ಯವಾಗಿವೆ. ಒಬಿಸಿ ಸಮುದಾಯಗಳಿಗೆ ಮೀಸಲಾತಿ ಪ್ರಮಾಣ ಮರುನಿಗದಿ ಪಡಿಸುವುದೂ ಸೇರಿದಂತೆ ಅಭಿವೃದ್ಧಿ ಕಾರ್ಯಕ್ರಮ ಗಳನ್ನು ಕೈಗೊಳ್ಳಲು ಜಾತಿ ಸಮೀಕ್ಷೆ ಅಗತ್ಯ. ಈ ದಿಸೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಜಾತಿ ಗಣತಿ ನಡೆಸುವುದಾಗಿ ಲೋಕಸಭಾ ಚುನಾವಣೆ ಮತ್ತು ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಭರವಸೆ ನೀಡಿತ್ತು.

ತೆಲಂಗಾಣದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಾತಿ ಸಮೀಕ್ಷೆ ನಡೆಸಿತ್ತು. ಸಮೀಕ್ಷೆಯು 2024ರ ನವೆಂಬರ್ ಆರರಿಂದ ಡಿಸೆಂಬರ್ 25ರವರೆಗೆ ನಡೆದಿತ್ತು. ಜಾತಿ ಸಮೀಕ್ಷೆ ಎಂದು ಸರಳವಾಗಿ ಕರೆದರೂ, ಅದು ಸಾಮಾಜಿಕ, ಶೈಕ್ಷಣಿಕ, ಉದ್ಯೋಗ, ಆರ್ಥಿಕ, ರಾಜಕೀಯ ಸಮೀಕ್ಷೆಯಾಗಿದೆ ಎಂದು ಸರ್ಕಾರ ಪ್ರತಿಪಾದಿಸಿತ್ತು. ಸಮೀಕ್ಷೆಗಾಗಿ 1.12 ಕೋಟಿ ಕುಟುಂಬಗಳನ್ನು ಸಂದರ್ಶಿಸಿ, 3.54 ಕೋಟಿ ಜನರ ಮಾಹಿತಿ ಸಂಗ್ರಹಿಸಲಾಗಿತ್ತು.

ಗಣತಿದಾರರು 50 ದಿನ ರಾಜ್ಯದ ಮನೆ ಮನೆಗೆ ಭೇಟಿ ನೀಡಿ, 57 ಪ್ರಶ್ನೆಗಳ ಮೂಲಕ ದತ್ತಾಂಶ ಸಂಗ್ರಹಿಸಿದ್ದರು. ಪ್ರಶ್ನಾವಳಿಯು ಸಾಮಾಜಿಕ, ಶೈಕ್ಷಣಿಕ, ಉದ್ಯೋಗ, ಆರ್ಥಿಕ, ರಾಜಕೀಯ ಮತ್ತು ಜಾತಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಒಳಗೊಂಡಿತ್ತು. ‘ಜಾತಿ ಇಲ್ಲ’, ‘ಧರ್ಮ ಇಲ್ಲ’ ಎನ್ನುವ ಆಯ್ಕೆಗಳೂ ಪ್ರಶ್ನಾವಳಿಯಲ್ಲಿದ್ದವು.

ADVERTISEMENT

ವರದಿಗೆ ವಿರೋಧ: ಸಮೀಕ್ಷೆಯ ವರದಿ ಪ್ರಕಟವಾದ ನಂತರ ಹಲವು ರೀತಿಯ ಆಕ್ಷೇಪಣೆಗಳು ವ್ಯಕ್ತವಾದವು. ಹಿಂದುಳಿದ ವರ್ಗಗಳ (ಬಿ.ಸಿ.) ಜನಸಂಖ್ಯೆ ಶೇ 46.25, ಮುಸ್ಲಿಂ ಶೇ 12.56, ಎಸ್‌ಸಿ ಶೇ 17.43, ಎಸ್‌ಟಿ ಶೇ 10.45, ಇತರೆ ಸಮುದಾಯಗಳು ಶೇ 15.79ರಷ್ಟು ಜನಸಂಖ್ಯೆ ಹೊಂದಿವೆ ಎಂದು ವರದಿ ಹೇಳಿತ್ತು.

ವರದಿಯ ಬಗ್ಗೆ ವಿರೋಧ ‍ಪಕ್ಷಗಳು ಸೇರಿದಂತೆ ಕೆಲವು ವಲಯಗಳಿಂದ ಆಕ್ಷೇಪಣೆಗಳು ವ್ಯಕ್ತವಾದವು. 2014ರಲ್ಲಿ ನಡೆದಿದ್ದ ‘ಸಮಗ್ರ ಕುಟುಂಬ ಸಮೀಕ್ಷೆ’ಯಲ್ಲಿ ಬಿ.ಸಿ. ಸಮುದಾಯಗಳ ಜನಸಂಖ್ಯೆ ಶೇ 51ರಷ್ಟು ಇದ್ದದ್ದು 2024ರ ಹೊತ್ತಿಗೆ ಶೇ 46ಕ್ಕೆ ಕುಸಿದದ್ದು ಹೇಗೆ ಎಂದು ಪ್ರಶ್ನಿಸಿದ್ದ ಕೆಲವರು, ಸಮೀಕ್ಷಾ ವಿಧಾನವೇ ಸರಿ ಇಲ್ಲ ಎಂದಿದ್ದರು. ಬಿಆರ್‌ಎಸ್‌ನ ಕೆ.ಟಿ.ರಾಮರಾವ್ ಅವರು ‘ಹಿಂದುಳಿದವರ ಸಂಖ್ಯೆಯನ್ನು ಉದ್ದೇಶಪೂರ್ವಕವಾಗಿ ಕಡಿಮೆ ತೋರಿಸಲಾಗಿದೆ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದರು. ಮತ್ತೆ ಕೆಲವರು ಮುಸ್ಲಿಂ ಜನಸಂಖ್ಯೆಯನ್ನು ಹೆಚ್ಚು ತೋರಿಸಲು ಬಿ.ಸಿ. ಜನಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ ಎಂದು ಆರೋಪಿಸಿದ್ದರು.

ಮೀಸಲಾತಿ ಹೆಚ್ಚಳ: ಇದರ ನಡುವೆಯೇ, ಸಮೀಕ್ಷೆಯ ವರದಿ ಬಿಡುಗಡೆಯಾದ ನಂತರ ತೆಲಂಗಾಣ ಸರ್ಕಾರವು ಶಿಕ್ಷಣ, ಉದ್ಯೋಗ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿ.ಸಿ. ಸಮುದಾಯಗಳ ಮೀಸಲಾತಿಯನ್ನು ಶೇ 42ಕ್ಕೆ ಹೆಚ್ಚಿಸಿ ಮಸೂದೆ ಅಂಗೀಕರಿಸಿದೆ. ಅದನ್ನು ರಾಜ್ಯಪಾಲರು ರಾಷ್ಟ್ರಪತಿಗೆ ಕಳುಹಿಸಿದ್ದಾರೆ.

ಜಾತಿ ಸಮೀಕ್ಷೆಯ ವರದಿಯನ್ನಾಧರಿಸಿ ಮೀಸಲಾತಿಯ ಮಿತಿಯನ್ನು ಮೀರಿದ ಎರಡನೇ ರಾಜ್ಯ ತೆಲಂಗಾಣ. ಒಟ್ಟಾರೆ ಮೀಸಲಾತಿಯ ಪ್ರಮಾಣವು ಶೇ 50ರ ಮಿತಿಯನ್ನು ದಾಟಿರುವುದರಿಂದ, ಮಸೂದೆಗೆ ಕಾನೂನು ತೊಡಕು ಎದುರಾಗಿದೆ. ಎ.ರೇವಂತ್ ರೆಡ್ಡಿ ಸರ್ಕಾರವು ಜಾತಿ ಸಮೀಕ್ಷೆ ದತ್ತಾಂಶ ಮತ್ತು ಮೀಸಲಾತಿ ಹೆಚ್ಚಳದ ವಿಚಾರದಲ್ಲಿ ಕಾನೂನು ತಜ್ಞರ ನೆರವು ‍ಪಡೆಯಲು ನಿವೃತ್ತ ನ್ಯಾಯಮೂರ್ತಿ ಸುದರ್ಶನ ರೆಡ್ಡಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಿದೆ.

ಮುಗಿಯದ ಕಾನೂನು ಸಮರ

ಬಿಹಾರದಲ್ಲಿ 2023ರಲ್ಲಿ ಜಾತಿ ಸಮೀಕ್ಷೆ ನಡೆದಿತ್ತು. ರಾಜ್ಯದಲ್ಲಿರುವ ಜನರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗಳನ್ನು ಅರ್ಥೈಸಿಕೊಂಡು, ದುರ್ಬಲ ಸಮುದಾಯಗಳ ಜೀವನ ಮಟ್ಟ ಸುಧಾರಣೆಗಾಗಿ ಹೊಸ ಸರ್ಕಾರಿ ನೀತಿಗಳನ್ನು ರೂಪಿಸುವ ಉದ್ದೇಶದಿಂದ ಈ ಸಮೀಕ್ಷೆಯನ್ನು ನಿತೀಶ್‌ ಕುಮಾರ್‌ ನೇತೃತ್ವದ ಎನ್‌ಡಿಎ ಸರ್ಕಾರ ಕೈಗೊಂಡಿತ್ತು. ಎರಡು ಹಂತಗಳಲ್ಲಿ ನಡೆದ ಸಮೀಕ್ಷೆಗಾಗಿ ರಾಜ್ಯ ಸರ್ಕಾರ ₹500 ಕೋಟಿ ವೆಚ್ಚ ಮಾಡಿತ್ತು.

ಕಾನೂನು ಹೋರಾಟ: ಈ ಸಮೀಕ್ಷೆ ವಿವಾದಕ್ಕೂ ಕಾರಣವಾಗಿತ್ತು. ಇದು ಜಾತಿ ಸಮೀಕ್ಷೆ ಅಲ್ಲ, ಜಾತಿ ಆಧಾರಿತ ಗಣತಿ ಎಂದು ಕೆಲವು ಸಂಘಟನೆಗಳು ಆರೋಪಿಸಿದ್ದವು. ‘ಇದು ಜಾತಿ ಗಣತಿ ಅಲ್ಲ, ಜಾತಿ ಸಮೀಕ್ಷೆ’ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್‌ ಅವರು ಆಗ ಸ್ಪಷ್ಟಪಡಿಸಿದ್ದರು.

ಎರಡನೇ ಹಂತದ ಸಮೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿ ಪಟ್ನಾ ಹೈಕೋರ್ಟ್‌ ತನ್ನ ಮಧ್ಯಂತರ ಆದೇಶದಲ್ಲಿ ಸಮೀಕ್ಷೆಗೆ ತಡೆ ನೀಡಿತ್ತು (ಮೇ 3, 2023).‌ ಹೈಕೋರ್ಟ್‌ ಆದೇಶವನ್ನು ಬಿಹಾರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಪ್ರಕರಣ ಇನ್ನೂ ಪಟ್ನಾ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದ್ದುದರಿಂದ ಸುಪ್ರೀಂ ಕೋರ್ಟ್‌ ಇದರಲ್ಲಿ ಮಧ್ಯಪ್ರವೇಶಿಸಿರಲಿಲ್ಲ. ಆಗಸ್ಟ್‌ 1ರಂದು ಜಾತಿ ಸಮೀಕ್ಷೆಯನ್ನು ಸಮರ್ಥಿಸಿಕೊಂಡಿದ್ದ ಹೈಕೋರ್ಟ್, ಸಮೀಕ್ಷೆಯ ಪುನರಾರಂಭಕ್ಕೆ ಹಸಿರು ನಿಶಾನೆ ತೋರಿತ್ತು.

ಪಟ್ನಾ ಹೈಕೋರ್ಟ್‌ನ ತೀರ್ಮಾನವನ್ನು ಪ್ರಶ್ನಿಸಿ ‘ಯೂಥ್‌ ಫಾರ್‌ ಈಕ್ವಾಲಿಟಿ’, ‘ಏಕ್‌ ಸೋಚ್‌ ಏಕ್‌ ಪ್ರಯಾಸ್‌’ ಸಂಘಟನೆ ಹಾಗೂ ಇತರರು ಆಗಸ್ಟ್‌ 3ರಂದು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಸಮೀಕ್ಷೆಗೆ ತಡೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿತ್ತು. 2024 ಜನವರಿಯಲ್ಲಿ ಸಮೀಕ್ಷೆಯ ವಿವರಗಳನ್ನು ಪ್ರಕಟಿಸುವಂತೆ ಕೋರ್ಟ್‌ ಬಿಹಾರ ಸರ್ಕಾರಕ್ಕೆ ಸೂಚಿಸಿತ್ತು.

ಮೀಸಲಾತಿ ಹೆಚ್ಚಳ, ರದ್ದು: ಸಮೀಕ್ಷೆಯ ಆಧಾರದಲ್ಲಿ, ಸರ್ಕಾರಿ ಉದ್ಯೋಗ ಮತ್ತು ಉನ್ನತ ಶಿಕ್ಷಣದಲ್ಲಿ ಮೀಸಲಾತಿ ಪ್ರಮಾಣವನ್ನು ಶೇ 50ರಿಂದ ಶೇ 65ಕ್ಕೆ ಹೆಚ್ಚಿಸಿ ಬಿಹಾರ ಸರ್ಕಾರ 2023ರ ನವೆಂಬರ್‌ನಲ್ಲಿ ಆದೇಶ ಹೊರಡಿಸಿತ್ತು. ‌ಅದಕ್ಕಾಗಿ ಎರಡು ಮಸೂದೆಗಳನ್ನು ರೂಪಿಸಿತ್ತು. ಅತಿ ಹಿಂದುಳಿದ ವರ್ಗಗಳಿಗೆ (ಇಬಿಸಿ) ಶೇ 18, ಪರಿಶಿಷ್ಟ ಜಾತಿಯವರಿಗೆ (ಎಸ್‌ಸಿ) ಶೇ 20, ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ಶೇ 2, ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇ 25ರಷ್ಟು ಹಂಚಿಕೆ ಮಾಡಲಾಗಿತ್ತು (ಇದರ ಜೊತೆಗೆ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ (ಇಡಬ್ಲ್ಯುಎಸ್‌) ಶೇ 10 ಮೀಸಲಾತಿ ನೀಡಲಾಗಿತ್ತು). ಆದರೆ, ಪಟ್ನಾ ಹೈಕೋರ್ಟ್‌, 2024ರ ಜೂನ್‌ 20ರಂದು ಈ ಆದೇಶವನ್ನು ರದ್ದು ಮಾಡಿತ್ತು. ಈ ತೀರ್ಪನ್ನು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ.

ಆಧಾರ: ಪಿಟಿಐ, ಸುಪ್ರೀಂಕೋರ್ಟ್‌ ಅಬ್ಸರ್ವರ್‌, ಮಾಧ್ಯಮ ವರದಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.