ಲಡಾಖ್‌ನ ಲೇಹ್ ನಲ್ಲಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಜನರು ಭಾರಿ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು
ಪಿಟಿಐ ಚಿತ್ರ
ಹಿಮನಾಡು ಲಡಾಖ್‌ನಲ್ಲಿ ರಾಜ್ಯ ಸ್ಥಾನಮಾನ ಮತ್ತು ಸ್ವಾಯತ್ತೆಗಾಗಿ ನಡೆಯುತ್ತಿರುವ ಹೋರಾಟ ಹಿಂಸಾರೂಪ ಪಡೆದುಕೊಂಡಿದೆ. ಬುಧವಾರ ಲೇಹ್‌ನಲ್ಲಿ ನಡೆದ ಹಿಂಸಾಚಾರವನ್ನು ಇತ್ತೀಚೆಗೆ ನೇಪಾಳದಲ್ಲಿ ನಡೆದ ‘ಝೆನ್ ಜಿ’ ಪೀಳಿಗೆಯ ಹೋರಾಟಕ್ಕೆ ಹೋಲಿಸಲಾಗುತ್ತಿದೆ. 2019ರಲ್ಲಿ ಲಡಾಖ್ ಕೇಂದ್ರಾಡಳಿತ ಪ್ರದೇಶ ಎಂದು ಘೋಷಣೆಯಾದಾಗ ಸ್ವಾಗತಿಸಿದ್ದ ಅಲ್ಲಿನ ಜನರು ಈಗ ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಸೂಕ್ಷ್ಮ ಪರಿಸರ, ಭೂಮಿಯ ಹಕ್ಕುಗಳು, ವೈವಿಧ್ಯಮಯ ಸಂಸ್ಕೃತಿಗಳನ್ನು ಉಳಿಸಲು ಸಾಂವಿಧಾನಿಕ ರಕ್ಷಣೆ ಕೇಳುತ್ತಿದ್ದಾರೆ
2019ರ ಆಗಸ್ಟ್ 5. ಸಂವಿಧಾನದ 370ರ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದು ಮಾಡಿತ್ತು. ಅಲ್ಲದೇ ಜಮ್ಮು ಮತ್ತು ಕಾಶ್ಮೀರದಿಂದ ಲಡಾಖ್ ಅನ್ನು ಪ್ರತ್ಯೇಕಿಸಿ ಎರಡನ್ನೂ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ರೂಪಿಸಿತ್ತು. ಕೇಂದ್ರದ ನಿರ್ಧಾರವನ್ನು ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಪಕ್ಷಗಳು, ಮುಖಂಡರು ವಿರೋಧಿಸಿದ್ದರು. ಜನರು ಪ್ರತಿಭಟನೆ ನಡೆಸಿದ್ದರು. ಅದು ಹಿಂಸೆಗೂ ತಿರುಗಿತ್ತು. ಆದರೆ, ಪಕ್ಕದ ಲಡಾಖ್ ಶಾಂತವಾಗಿತ್ತು. ಅಲ್ಲಿನ ಮುಖಂಡರು ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿದ್ದರು. ತಮ್ಮ ಬೇಡಿಕೆಗಳು ಈಡೇರುವ ಸಮಯ ಕೊನೆಗೂ ಬಂತು ಎಂಬುದು ಲಡಾಖ್ ಜನರ ನಿರೀಕ್ಷೆಯಾಗಿತ್ತು. ಆದರೆ, ಆರಂಭದಲ್ಲಿ ಕೇಂದ್ರದ ನಿರ್ಧಾರ ಸ್ವಾಗತಿಸಿದವರೇ ವರ್ಷವಾಗುವಷ್ಟರಲ್ಲಿ ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸಲು ಆರಂಭಿಸಿದರು. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟದ ದಾರಿ ಕಂಡುಕೊಂಡರು. ಪ್ರತಿಭಟನೆ, ರ‍್ಯಾಲಿ, ಉಪವಾಸ ಸತ್ಯಾಗ್ರಹಗಳಿಗೆ ಸೀಮಿತವಾಗಿದ್ದ ಹೋರಾಟ ಎರಡು ವರ್ಷಗಳಿಂದೀಚೆಗೆ ತೀವ್ರಗೊಂಡು, ಅದೀಗ ಹಿಂಸಾರೂಪ ತಾಳುವ ಮಟ್ಟಕ್ಕೆ ಏರಿದೆ.
ಲಡಾಖ್‌ನ ಲೇಹ್‌ನಲ್ಲಿ ಬುಧವಾರ ನಡೆದ ಪ್ರತಿಭಟನೆಯು ಹಿಂಸಾಚಾರವಾಗಿ ಪರಿವರ್ತನೆಗೊಂಡು ನಾಲ್ವರು ಮೃತಪಟ್ಟಿದ್ದಾರೆ. ಹತ್ತಾರು ಮಂದಿ ಗಾಯಗೊಂಡಿದ್ದಾರೆ. ಲಡಾಖ್‌ಗೆ ರಾಜ್ಯದ ಸ್ಥಾನಮಾನ ನೀಡಬೇಕು. ಲಡಾಖ್ ಅನ್ನು ಸಂವಿಧಾನದ ಆರನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಿ ಸ್ವಾಯತ್ತ ಪ್ರದೇಶ ಎಂದು ಘೋಷಿಸಬೇಕು ಎಂಬುದು ಲಡಾಖ್ ಜನರ ಪ್ರಮುಖ ಬೇಡಿಕೆ.
‘ಝೆನ್ ಜಿ’ ಹೋರಾಟ: ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಇಬ್ಬರು ತೀವ್ರ ಅಸ್ವಸ್ಥಗೊಂಡಿದ್ದು ಬುಧವಾರ ನಡೆದ ಪ್ರತಿಭಟನೆ, ಹಿಂಸಾಚಾರಕ್ಕೆ ನೆಪ. ಹಿಂಸೆಗೆ ತಿರುಗಿದ ಈ ಹೋರಾಟವನ್ನು ನೇಪಾಳದಲ್ಲಿ ಇತ್ತೀಚೆಗೆ ನಡೆದ ‘ಝೆನ್ ಜಿ’ ಪೀಳಿಗೆಯವರ ಪ್ರತಿಭಟನೆಗೆ ಹೋಲಿಸಲಾಗುತ್ತಿದೆ. ರಾಜ್ಯ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಚಳವಳಿಯ ಮುಂಚೂಣಿಯಲ್ಲಿರುವ ಪರಿಸರವಾದಿ, ಶಿಕ್ಷಣ ತಜ್ಞ ಸೋನಮ್ ವಾಂಗ್‌ಚುಕ್ ಅವರೇ ಇದು ‘ಝೆನ್ ಜಿ’ ಹೋರಾಟ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಇದೇ ರೀತಿ ಬಿಂಬಿಸಲಾಗುತ್ತಿದೆ. ಹಿಂಸಾಚಾರ ನಿಯಂತ್ರಣಕ್ಕೆ ಬಂದಿದೆ. ಆದರೆ, ಲೇಹ್ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ.
2019ರಲ್ಲಿ ವಿಶೇಷ ಸ್ಥಾನಮಾನ ರದ್ದುಪಡಿಸುವಾಗ ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ್ದರೂ ಅಲ್ಲಿ ವಿಧಾನಸಭೆಯನ್ನು ಉಳಿಸಿಕೊಳ್ಳಲಾಗಿತ್ತು (ವಿಧಾನ ಪರಿಷತ್ ಅನ್ನು ರದ್ದುಪಡಿಸಲಾಗಿತ್ತು). ಆದರೆ, ಲಡಾಖ್ ಅನ್ನು ಶಾಸಕಾಂಗ ವ್ಯವಸ್ಥೆ ಇಲ್ಲದ ಕೇಂದ್ರಾಡಳಿತ ಪ್ರದೇಶವಾಗಿ ರೂಪಿಸಲಾಗಿತ್ತು. ಇದರಿಂದಾಗಿ ಲಡಾಖ್‌ನಲ್ಲಿ ರಾಜಕೀಯ ಶೂನ್ಯ ಆವರಿಸಿದೆ. ಕೇಂದ್ರ ಸರ್ಕಾರ ಲೆಫ್ಟಿನೆಂಟ್ ಗವರ್ನರ್ ಮೂಲಕ ನೇರವಾಗಿ ಆಡಳಿತ ನಡೆಸುವುದರಿಂದ ಸ್ಥಳೀಯರಿಗೆ ರಾಜಕೀಯ ಪ್ರಾತಿನಿಧ್ಯ ಇಲ್ಲದಂತಾಗಿದೆ, ಪ್ರಜಾಪ್ರಭುತ್ವದ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ ಎಂಬುದು ವಾಂಗ್‌ಚುಕ್ ಹಾಗೂ ಹೋರಾಟಗಾರರ ಆರೋಪ.
ಸೂಕ್ಷ್ಮ ಪರಿಸರ ವ್ಯವಸ್ಥೆ, ನೈಸರ್ಗಿಕ ಸಂಪತ್ತು ಹೊಂದಿರುವ ಈ ಪ್ರದೇಶದಲ್ಲಿ ಕೈಗಾರಿಕೆಗಳಿಗೆ, ಗಣಿಗಾರಿಕೆಗೆ ಕೇಂದ್ರ ಸರ್ಕಾರ ಅವಕಾಶ ನೀಡುತ್ತಿದೆ. ಇದರಿಂದ ಪರಿಸರ ನಾಶವಾಗುತ್ತಿದೆ. ಬುಡಕಟ್ಟು ಸಮುದಾಯಗಳಿಗೆ ತೊಂದರೆಯಾಗುತ್ತಿದೆ. ಲಡಾಖ್‌ನ ಸಾಂಸ್ಕೃತಿಕ ಅಸ್ಮಿತೆಗೂ ಧಕ್ಕೆಯಾಗುತ್ತಿದೆ. ಸ್ಥಳೀಯರಿಗೆ ಉದ್ಯೋಗಗಳು ಸಿಗುತ್ತಿಲ್ಲ ಎಂಬ ಆತಂಕ ಅವರದ್ದು. ಸ್ವಾಯತ್ತ ಪ್ರದೇಶವಾಗಿ ಘೋಷಿಸಿದರೆ, ಸ್ಥಳೀಯವಾಗಿ ರಾಜಕೀಯ ಪ್ರಾತಿನಿಧ್ಯ ಸಿಕ್ಕಿ, ಸ್ಥಳೀಯರೇ ಆಡಳಿತ ನಡೆಸಲು ಅನುಕೂಲವಾಗುತ್ತದೆ ಎಂಬುದು ಅವರ ವಾದ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು 2019ರಲ್ಲಿ ಲಡಾಖ್ ಅನ್ನು ಆರನೇ ಪರಿಚ್ಛೇದಕ್ಕೆ ಸೇರಿಸುವ ಭರವಸೆ ನೀಡಿತ್ತು. ಆದರೆ, ಅದನ್ನು ಇನ್ನೂ ಈಡೇರಿಸಿಲ್ಲ ಎಂಬುದು ಹೋರಾಟಗಾರರ ಕೋಪಕ್ಕೆ ಪ್ರಮುಖ ಕಾರಣ.
ಕಾರ್ಗಿಲ್ ಭಾಗದಲ್ಲಿರುವ ಶಿಯಾ ಮುಸ್ಲಿಮರು, ಲೇಹ್ ವ್ಯಾಪ್ತಿಯಲ್ಲಿರುವ ಬೌದ್ಧ ಧರ್ಮೀಯರು ಒಟ್ಟಾಗಿ ಈ ಬೇಡಿಕೆಗಳ ಈಡೇರಿಕೆಗಾಗಿ ಹೋರಾಡುತ್ತಿದ್ದಾರೆ. ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ (ಕೆಡಿಎ) ಮತ್ತು ಲೇಹ್ ಅಪೆಕ್ಸ್ ಬಾಡಿ (ಎಲ್‌ಎಬಿ) ಎಂಬ ಎರಡು ಸಂಘಟನೆಗಳ ಅಡಿಯಲ್ಲಿ ಹೋರಾಟ ನಡೆಯುತ್ತಿದೆ. ಸೋನಮ್ ವಾಂಗ್‌ಚುಕ್ ಅವರು ಚಳವಳಿಯ ಮುಂಚೂಣಿಯಲ್ಲಿದ್ದಾರೆ.
ಸಮಿತಿ ರಚನೆ: 2020ರಿಂದೀಚೆಗೆ ಲಡಾಖ್‌ನಲ್ಲಿ ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ (ಕೆಡಿಎ) ಮತ್ತು ಲೇಹ್ ಅಪೆಕ್ಸ್ ಬಾಡಿ (ಎಲ್‌ಎಬಿ) ಅಡಿಯಲ್ಲಿ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಿದ್ದರಿಂದ ಅಲ್ಲಿನ ಜನರ ಬೇಡಿಕೆಗಳನ್ನು ಅಧ್ಯಯನ ನಡೆಸುವುದಕ್ಕಾಗಿ ಕೇಂದ್ರ ಸರ್ಕಾರ 2023ರ ಜನವರಿ 2ರಂದು ಉನ್ನತಾಧಿಕಾರ ಸಮಿತಿಯನ್ನು ರಚಿಸಿತ್ತು. ಕೇಂದ್ರ ಸರ್ಕಾರವು ಈ ವಿಚಾರವಾಗಿ ಲಡಾಖ್ ನಾಯಕತ್ವದೊಂದಿಗೆ ಹಲವು ಸುತ್ತಿನ ಮಾತುಕತೆಯನ್ನೂ ನಡೆಸಿದೆ. ಅಕ್ಟೋಬರ್ 6ರಂದು ಮತ್ತೊಂದು ಸುತ್ತಿನ ಮಾತುಕತೆ ನಿಗದಿಯಾಗಿದೆ.
ಈ ಹಿಂದೆ, ಲಡಾಖ್‌ನ ಮುಖಂಡರು ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ತಮ್ಮ ಬೇಡಿಕೆಯನ್ನು ಮುಂದಿಟ್ಟ ವೇಳೆ ರಾಜ್ಯ ಸ್ಥಾನಮಾನ ನೀಡಲು ಮತ್ತು ಆರನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ಅವರು ನಿರಾಕರಿಸಿದ್ದರು ಎನ್ನಲಾಗಿದ್ದು, ಇದು ಚಳವಳಿ ನಡೆಸುತ್ತಿರುವವರ ಅಸಮಾಧಾನಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಕಾರ್ಗಿಲ್ ಭಾಗದಲ್ಲಿರುವ ಶಿಯಾ ಮುಸ್ಲಿಮರು ಲೇಹ್ ವ್ಯಾಪ್ತಿಯಲ್ಲಿರುವ ಬೌದ್ಧ ಧರ್ಮೀಯರು ಒಟ್ಟಾಗಿ ಈ ಬೇಡಿಕೆಗಳ ಈಡೇರಿಕೆಗಾಗಿ ಹೋರಾಡುತ್ತಿದ್ದಾರೆ. ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ (ಕೆಡಿಎ) ಮತ್ತು ಲೇಹ್ ಅಪೆಕ್ಸ್ ಬಾಡಿ (ಎಲ್‌ಎಬಿ) ಎಂಬ ಎರಡು ಸಂಘಟನೆಗಳ ಅಡಿಯಲ್ಲಿ ಹೋರಾಟ ನಡೆಯುತ್ತಿದೆ. ಸೋನಮ್ ವಾಂಗ್‌ಚುಕ್ ಅವರು ಚಳವಳಿಯ ಮುಂಚೂಣಿಯಲ್ಲಿದ್ದಾರೆ
ಪ್ರಮುಖ ಬೇಡಿಕೆಗಳು
* ರಾಜ್ಯದ ಸ್ಥಾನಮಾನ ನೀಡಬೇಕು
* ಲಡಾಖ್‌ನ ಸೂಕ್ಷ್ಮ ಪರಿಸರ, ಸಂಪನ್ಮೂಲಗಳು, ಜನರ ಭೂ ಒಡೆತನದ ಹಕ್ಕು ಮತ್ತು ಸಾಂಸ್ಕೃತಿಕ ಅನನ್ಯತೆಗೆ ಸಾಂವಿಧಾನಿಕ ರಕ್ಷಣೆ ಒದಗಿಸಬೇಕು (ಆರನೇ ಪರಿಚ್ಛೇದಕ್ಕೆ ಸೇರಿಸಬೇಕು)
* ಲೇಹ್ ಮತ್ತು ಕಾರ್ಗಿಲ್‌ಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರ ಬೇಕು (ಸದ್ಯ ಲಡಾಖ್ ಒಂದೇ ಕ್ಷೇತ್ರ ಇದೆ)
* ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು
ಏನಿದು 6ನೇ ಪರಿಚ್ಛೇದ?
ಸಂವಿಧಾನದ ವಿಧಿ 244(2) ಮತ್ತು ವಿಧಿ 275(1) ಅಡಿಯಲ್ಲಿ ಈ ಪರಿಚ್ಛೇದವನ್ನು ಸೇರ್ಪಡೆಗೊಳಿಸಲಾಗಿದೆ.
ಭಾರತದ ಈಶಾನ್ಯ ಭಾಗದಲ್ಲಿರುವ ಅಸ್ಸಾಂ, ಮೇಘಾಲಯ, ತ್ರಿಪುರಾ ಮತ್ತು ಮಿಜೋರಾಂ ರಾಜ್ಯಗಳ ಬುಡಕಟ್ಟು ಜನರು ವಾಸಿಸುವ ಪ್ರದೇಶಗಳಲ್ಲಿ ಆಡಳಿತ ನಿರ್ವಹಣೆಯ ಅವಕಾಶವನ್ನು ಈ ಪರಿಚ್ಛೇದ ನೀಡುತ್ತದೆ.
ಆದಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶದಲ್ಲಿ ಸ್ವಾಯತ್ತ ಜಿಲ್ಲಾ ಕೌನ್ಸಿಲ್‌ಗಳನ್ನು ಮತ್ತು ಪ್ರಾದೇಶಿಕ ಕೌನ್ಸಿಲ್‌ಗಳನ್ನು ಸ್ಥಾಪಿಸಬಹುದು ಎಂದು ಇದು ಹೇಳುತ್ತದೆ.
ಸ್ವಯಂ ಆಡಳಿತ ನಡೆಸಲು, ಈಶಾನ್ಯ ರಾಜ್ಯದ ಆದಿವಾಸಿ ಸಮುದಾಯಗಳ ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಹಕ್ಕುಗಳನ್ನು ರಕ್ಷಿಸುವುದಕ್ಕಾಗಿ ಕೌನ್ಸಿಲ್‌ಗಳಿಗೆ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಅಧಿಕಾರವನ್ನು ಈ ಪರಿಚ್ಛೇದ ನೀಡುತ್ತದೆ.
ಯಾವುದೇ ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಮತ್ತು ಬುಡಕಟ್ಟು ಸಮುದಾಯಕ್ಕೆ ಸೇರಿದ ಜನರ ಪ್ರಮಾಣ ಶೇ 50ಕ್ಕಿಂತಲೂ ಹೆಚ್ಚು ಇದ್ದರೆ, ಆ ಪ್ರದೇಶವನ್ನು 6ನೇ ಪರಿಚ್ಛೇದಕ್ಕೆ ಸೇರಿಸಲು ಸಂವಿಧಾನದಲ್ಲಿ ಅವಕಾಶವಿದೆ.
ಕೇಂದ್ರದ ಅಂಕಿ ಅಂಶಗಳ ಪ್ರಕಾರ ಲಡಾಖ್‌ನಲ್ಲಿ ಬುಡಕಟ್ಟು ಸಮುದಾಯಗಳ ಜನಸಂಖ್ಯೆ ಶೇ 97ರಷ್ಟಿದೆ.
ಆಯೋಗ ಶಿಫಾರಸು: ಲಡಾಖ್‌ನಲ್ಲಿ ಬುಡಕಟ್ಟು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಆ ಪ್ರದೇಶವನ್ನು ಸಂವಿಧಾನದ ಐದನೇ/ಆರನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬಹುದು ಎಂದು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ 2019ರ ಸೆಪ್ಟೆಂಬರ್‌ನಲ್ಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.
ಕೇಂದ್ರ ಸರ್ಕಾರದ ವಾದವೇನು?
ಸಂಸತ್ತಿನಲ್ಲಿ, ಸುಪ್ರೀಂಕೋರ್ಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ನೀಡಲು ಬದ್ಧ ಎಂದು ಕೇಂದ್ರ ಸರ್ಕಾರ ಹಲವು ಬಾರಿ ಹೇಳಿದೆ. ಆದರೆ, ಲಡಾಖ್ ಬಗ್ಗೆ ಅದು ಈ ರೀತಿ ಹೇಳಿಲ್ಲ.
ಲಡಾಖ್ ಆಡಳಿತಕ್ಕಾಗಿ ಲಡಾಖ್ ಸ್ವಾಯತ್ತ ಗಿರಿ ಅಭಿವೃದ್ಧಿ ಮಂಡಳಿಗಳನ್ನು (ಲೇಹ್ ಮತ್ತು ಕಾರ್ಗಿಲ್‌ಗೆ) ರಚಿಸಲಾಗಿದೆ. ಇವು ಸ್ವಾಯತ್ತ ಸಂಸ್ಥೆಯಾಗಿದ್ದು, ಆಡಳಿತ, ಆರ್ಥಿಕ ಅಭಿವೃದ್ಧಿ, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳನ್ನು ನಿರ್ವಹಿಸಲು ಇವುಗಳಿಗೆ ಅಧಿಕಾರ ಇದೆ ಎಂಬುದು ಕೇಂದ್ರ ಸರ್ಕಾರದ ವಾದ.
ಆದರೆ, ಈ ಮಂಡಳಿಯ ಅಧಿಕಾರ ಸೀಮಿತವಾಗಿದೆ ಎಂಬುದು ಹೋರಾಟಗಾರರ ಹೇಳಿಕೆ.
ನಿರಾಸಕ್ತಿ ಏಕೆ?
ಲಡಾಖ್‌ನಲ್ಲಿ ಭಾರತ–ಚೀನಾ ಗಡಿ ಪ್ರದೇಶವಿದ್ದು, ಎರಡೂ ದೇಶಗಳ ನಡುವಿನ ಗಡಿ ಬಿಕ್ಕಟ್ಟು ಇನ್ನೂ ಬಗೆಹರಿದಿಲ್ಲ. ಆಗಾಗ ಘರ್ಷಣೆಯೂ ನಡೆಯುತ್ತಿರುತ್ತದೆ. ಅತ್ಯಂತ ಸೂಕ್ಷ್ಮವಾಗಿರುವ ಈ ಪ್ರದೇಶದ ಆಡಳಿತ ನೇರವಾಗಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬಂದರೆ ಗಡಿ ಭದ್ರತೆಯ ದೃಷ್ಟಿಯಿಂದ ಸಾಕಷ್ಟು ಅನುಕೂಲವಿದೆ ಎಂಬ ಕಾರಣಕ್ಕೆ ರಾಜ್ಯದ ಸ್ಥಾನಮಾನ ಅಥವಾ ಸಾಂವಿಧಾನಿಕವಾಗಿ ಇನ್ನಷ್ಟು ಸ್ವಾಯತ್ತೆ ನೀಡಲು ಕೇಂದ್ರ ಸರ್ಕಾರ ಆಸಕ್ತಿ ತೋರುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಆಧಾರ: ಪಿಟಿಐ, ಜಮ್ಮು ಮತ್ತು ಕಾಶ್ಮೀರ ಪುನರ್‌ರಚನೆ ಕಾಯ್ದೆ,ಪಿಐಬಿ, ಮಾಧ್ಯಮ ವರದಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.