ಭಾರತದಲ್ಲಿ ಗೃಹಬಳಕೆಯ ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್ ಬೆಲೆಯನ್ನು ಕೇಂದ್ರ ಸರ್ಕಾರವು ₹50 ಹೆಚ್ಚಿಸಿದೆ. ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯ ಫಲಾನುಭವಿಗಳೂ ಸೇರಿದಂತೆ ಎಲ್ಲ ಗೃಹ ಬಳಕೆದಾರರೂ ಎಲ್‌ಪಿಜಿಗೆ ಹೆಚ್ಚು ಬೆಲೆ ತೆರಬೇಕಾಗಿದೆ. ಪೆಟ್ರೋಲ್, ಡೀಸೆಲ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಅನಿಯಮಿತವಾಗಿ ಪರಿಷ್ಕರಣೆ ಮಾಡಲಾಗುತ್ತಿದೆ. ಬೆಲೆ ಏರಿಕೆಯು ಬಡ ಕುಟುಂಬಗಳು ಎಲ್‌ಪಿಜಿ ಬಳಕೆ ಬಿಟ್ಟು ಮತ್ತೆ ಉರುವಲಿನ ಮೊರೆ ಹೋಗುವಂತೆ ಮಾಡುವ ಸಂಭವ ಇದ್ದು, ಇದು ಮಹಿಳೆಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟುಮಾಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ
ಆರು ತಿಂಗಳ ಹಿಂದೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರಲ್‌ಗೆ ₹6,660 (78 ಡಾಲರ್) ಇತ್ತು. ಈಗ ಅದರ ಬೆಲೆ ₹5,294ಕ್ಕೆ (62 ಡಾಲರ್) ಕುಸಿದಿದೆ. ಆದಾಗ್ಯೂ, ಕೇಂದ್ರ ಸರ್ಕಾರವು ಉಜ್ವಲಾ ಫಲಾನುಭವಿಗಳೂ ಸೇರಿದಂತೆ ಗೃಹಬಳಕೆಯ ಎಲ್‌ಪಿಜಿ (14.2 ಕೆ.ಜಿ.) ಸಿಲಿಂಡರ್ ಬೆಲೆಯನ್ನು ₹50 ಹೆಚ್ಚಿಸಿದೆ.ಎಲ್‌ಪಿಜಿ ಪೂರೈಕೆ ಮಾಡುವ ಇಂಧನ ಕಂಪನಿಗಳ ಲಾಭವನ್ನು ಉತ್ತೇಜಿಸುವ ಸಲುವಾಗಿ ಬೆಲೆ ಹೆಚ್ಚಳ ಮಾಡಲಾಗಿದೆ ಎಂದು ಕೇಂದ್ರ ಹೇಳಿದೆ. ರಾಜ್ಯದಲ್ಲಿ ಉಜ್ವಲಾ ಫಲಾನುಭವಿಗಳು ಸಿಲಿಂಡರ್‌ಗೆ ₹555 ತೆರಬೇಕಿದೆ. ಇತರ ಬಳಕೆದಾರರು ಸಿಲಿಂಡರ್‌ಗೆ ₹855 ವೆಚ್ಚ ಮಾಡಬೇಕಿದೆ.
ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಪರಿಷ್ಕರಣೆ ನಿರ್ಧಾರವನ್ನು ಯಾವಾಗ ಮತ್ತು ಹೇಗೆ ತೆಗೆದುಗೊಳ್ಳುತ್ತದೆ ಎನ್ನುವ ಬಗ್ಗೆ ಸ್ಪಷ್ಟತೆಯೇ ಇಲ್ಲವಾಗಿದೆ. ದೇಶದಲ್ಲಿ ಬಳಸಲಾಗುತ್ತಿರುವ ತೈಲದಲ್ಲಿ ಹೆಚ್ಚಿನ ಪ್ರಮಾಣವು ಒಪೆಕ್ ರಾಷ್ಟ್ರಗಳು ಮತ್ತು ರಷ್ಯಾದಿಂದ ಆಮದಾಗಿ ಬರುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರಕ್ಕೆ ಅನುಗುಣವಾಗಿ ಪೆಟ್ರೋಲಿಯಂ ಉತ್ಪನ್ನಗಳ ದರ ಪರಿಷ್ಕರಿಸಲಾಗುತ್ತದೆ ಎಂಬುದು ಕೇಂದ್ರ ಸರ್ಕಾರದ ಹೇಳಿಕೆ. ಆದರೆ, ಅದಕ್ಕೆ ವ್ಯತಿರಿಕ್ತವಾಗಿ, ಕೇಂದ್ರ ಸರ್ಕಾರವು ತನಗೆ ಬೇಕಾದಾಗಲೆಲ್ಲ ಪೆಟ್ರೋಲಿಯಂ ಉತ್ಪನ್ನಗಳ ದರಗಳ ಏರಿಳಿಕೆ ಮಾಡುತ್ತಿದೆ. ಬಹುತೇಕ ಸಂದರ್ಭಗಳಲ್ಲಿ ಆರ್ಥಿಕ ಕಾರಣ ಇಲ್ಲವೇ ಜನಕಲ್ಯಾಣದ ಆಶಯದಿಂದ ಬೆಲೆಯಲ್ಲಿ ಏರಿಳಿಕೆ ಮಾಡುವ ಬದಲು, ರಾಜಕೀಯದ ಉದ್ದೇಶಕ್ಕಾಗಿ ಎಲ್‌ಪಿಜಿ ಮತ್ತು ಇತರ ಇಂಧನಗಳ ಬೆಲೆ ಪರಿಷ್ಕರಣೆ ಮಾಡಲಾಗುತ್ತಿದೆ ಎಂಬ ಆರೋಪ ಇದೆ.
ಇದಕ್ಕೆ ಪುಷ್ಟಿ ನೀಡುವಂತೆ ಈ ಹಿಂದೆ, ಅನೇಕ ಸಲ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆ ಆದಾಗಲೂ ಸರ್ಕಾರ ಅದರ ಲಾಭವನ್ನು ಗ್ರಾಹಕರಿಗೆ ವರ್ಗಾವಣೆ ಮಾಡಿರಲಿಲ್ಲ. ಆದರೆ, ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಮತ್ತು ಲೋಕಸಭಾ ಚುನಾವಣೆಗೆ ಮುಂಚೆ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಬೆಲೆ ಇಳಿಕೆಯಾಗಿತ್ತು. ಎಲ್‌ಪಿಜಿ ಸಿಲಿಂಡರ್ ಬೆಲೆ 2023ರ ಆಗಸ್ಟ್‌ನಲ್ಲಿ ₹200 ಮತ್ತು 2024ರ ಮಾರ್ಚ್‌ನಲ್ಲಿ ₹100 ಇಳಿಸಲಾಗಿತ್ತು. ಅದಾಗಿ ವರ್ಷ ಎಲ್‌ಪಿಜಿ ದರವನ್ನು ಪರಿಷ್ಕರಿಸಿರಲಿಲ್ಲ.
ಬಡವರ ಮೇಲೆ ಹೊರೆ
ಈಗಿನ ಬೆಲೆ ಹೆಚ್ಚಳವು ಜನರ ಮೇಲೆ, ಅದರಲ್ಲೂ ಕಡಿಮೆ ಆದಾಯದ ಕುಟುಂಬಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಔಷಧ, ಆಹಾರ ಧಾನ್ಯಗಳು, ಹಾಲು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದ್ದು, ಜನ ಪರಿತಪಿಸುತ್ತಿದ್ದಾರೆ. ಇದರ ನಡುವೆ ಎಲ್‌ಪಿಜಿಗಾಗಿ ಇಷ್ಟು ಮೊತ್ತ ವ್ಯಯಿಸುವುದು ಬಡ ಮತ್ತು ಕೆಳಮಧ್ಯಮ ವರ್ಗದ ಕುಟುಂಬಗಳಿಗೆ ಕಷ್ಟವಾಗಲಿದೆ. ಇದರ ಹೊರೆ ಬಡ ಕುಟುಂಬಗಳ ಮಹಿಳೆಯರ ಮೇಲೆ ಬೀಳಲಿದೆ.
ಉರುವಲು, ಕಲ್ಲಿದ್ದಲು ಇತ್ಯಾದಿ ಬಳಸಿ ಸಾಂಪ್ರದಾಯಿಕ ರೀತಿಯಲ್ಲಿ ಅಡುಗೆ ಮಾಡುವ ಮಹಿಳೆಯರು ಹೊಗೆ ಮತ್ತಿತರ ಕಾರಣಗಳಿಂದ ಶ್ವಾಸಕೋಶದ ಕ್ಯಾನ್ಸರ್, ಹೃದಯ ಕಾಯಿಲೆಗಳು, ಪಾರ್ಶ್ವವಾಯು ಮುಂತಾದವುಗಳಿಗೆ ಒಳಗಾಗುತ್ತಿದ್ದರು. ಅದನ್ನು ತಪ್ಪಿಸುವ ಸಲುವಾಗಿ, ಅವರಿಗೆ ಶುದ್ಧ ಇಂಧನ ಲಭ್ಯವಾಗುವಂತೆ ಮಾಡಲು ಉಜ್ವಲಾ ಯೋಜನೆ ಜಾರಿಗೊಳಿಸಿ, ಉಚಿತ ಅನಿಲ ಸಂಪರ್ಕ ನೀಡಲಾಗಿತ್ತು. ಸಿಲಿಂಡರ್‌ಗಳನ್ನು ರಿಯಾಯಿತಿ ದರದಲ್ಲಿ ಪೂರೈಸುವುದಾಗಿ ಹೇಳಿತ್ತು. ಸಬ್ಸಿಡಿ ರಹಿತ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗೆ ಹೋಲಿಸಿದರೆ ಉಜ್ವಲಾ ಸಂಪರ್ಕಗಳ ಸಿಲಿಂಡರ್‌ಗಳ ಬೆಲೆ ₹300 ಕಡಿಮೆ ಇದೆ. ಹಾಗಿದ್ದರೂ, ಅನೇಕ ಕುಟುಂಬಗಳು ಎಲ್‌ಪಿಜಿ ಬಳಸುವುದನ್ನು ಈಗಾಗಲೇ ನಿಲ್ಲಿಸಿವೆ. ಈಗಿನ ಬೆಲೆ ಹೆಚ್ಚಳದಿಂದ ಇಂಥ ಮತ್ತಷ್ಟು ಕುಟುಂಬಗಳು ಉರುವಲು ಮತ್ತಿತರ ಘನ ಇಂಧನದ ಮೊರೆ ಹೋಗುವ ಸಂಭವ ಇದೆ.
ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನೂ ಪ್ರತಿ ಲೀಟರ್‌ಗೆ ₹2 ಹೆಚ್ಚಿಸಿದೆ. ಸದ್ಯಕ್ಕೆ ಬೆಲೆ ಹೆಚ್ಚಳವನ್ನು ಗ್ರಾಹಕರಿಗೆ ವರ್ಗಾಯಿಸಿಲ್ಲವಾದರೂ, ಅಂತಿಮವಾಗಿ ಅದರ ಹೊರೆ ಹೊರಬೇಕಾದವರು ಬಳಕೆದಾರರೇ ಆಗಿದ್ದಾರೆ.
ಎಲ್‌ಪಿಜಿ ದರ ನಿಗದಿ ಹೇಗೆ?
ಜಾಗತಿಕ ಮಾರುಕಟ್ಟೆಯಲ್ಲಿ ಎಲ್‌ಪಿಜಿ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯ ಆಧಾರದಲ್ಲಿ ದೇಶದಲ್ಲಿ ಎಲ್‌ಪಿಜಿ ದರವನ್ನು ನಿಗದಿ ಪಡಿಸಲಾಗುತ್ತದೆ. ಎಲ್‌ಪಿಜಿಯ ಒಟ್ಟು ಆಮದು ವೆಚ್ಚವನ್ನು ಗಣನೆಗೆ ತೆಗೆದುಕೊಳ್ಳುವುದರ ಜೊತೆಗೆ ಸೌದಿ ಅರೇಬಿಯಾದೊಂದಿಗೆ ಮಾಡಿಕೊಂಡ ಒಪ್ಪಂದದ ದರವನ್ನೂ ಆಧರಿಸಿ ದರ ನಿಗದಿ ಪಡಿಸಲಾಗುತ್ತದೆ.
ಶೇ 60ರಷ್ಟು ಆಮದು
ದೇಶದಲ್ಲಿ ವರ್ಷದಿಂದ ವರ್ಷಕ್ಕೆಎಲ್‌ಪಿಜಿ ಬಳಕೆ ಹೆಚ್ಚುತ್ತಿದೆ. 2024–25ರಲ್ಲಿ ಇದು 3.13 ಕೋಟಿ ಟನ್ ತಲುಪಿದೆ. ಇದಕ್ಕೆ ಪ್ರತಿಯಾಗಿ ದೇಶದಲ್ಲಿ ಸಾಕಷ್ಟು ಎಲ್‌ಪಿಜಿ ಉತ್ಪಾದನೆ ಆಗುತ್ತಿಲ್ಲ. ಶೇ 60ರಷ್ಟು ಎಲ್‌ಪಿಜಿಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಕಳೆದ ವರ್ಷ 1.17 ಕೋಟಿ ಟನ್‌ಗಳಷ್ಟು ಎಲ್‌ಪಿಜಿಯನ್ನು ದೇಶದಲ್ಲಿ ಉತ್ಪಾದಿಸಲಾಗಿದ್ದರೆ, 1.90 ಕೋಟಿ ಟನ್‌ಗಳಷ್ಟು ಅನಿಲವನ್ನು ಆಮದು ಮಾಡಿಕೊಳ್ಳಲಾಗಿದೆ. ಭಾರತವು ಕತಾರ್, ಸೌದಿ ಅರೇಬಿಯಾ ಮತ್ತು ಯುಎಇಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಎಲ್‌ಪಿಜಿಯನ್ನು ಆಮದು ಮಾಡಿಕೊಳ್ಳುತ್ತದೆ.
ಸಂಪರ್ಕ ದುಪ್ಪಟ್ಟು
ದಶಕದಲ್ಲಿ ದೇಶದಲ್ಲಿ ಗೃಹಬಳಕೆ ಎಲ್‌ಪಿಜಿ ಸಂಪರ್ಕಗಳ ಸಂಖ್ಯೆ ದುಪ್ಪಟ್ಟಾಗಿದೆ. 2015ರಲ್ಲಿ ಎಲ್‌ಪಿಜಿ ಸಂಪರ್ಕ ಹೊಂದಿದ್ದ ಕುಟುಂಬಗಳ ಸಂಖ್ಯೆ 14.9 ಕೋಟಿ ಇದ್ದರೆ, 2025ರ ಮಾರ್ಚ್ ಕೊನೆಗೆ ಇದು 32.91 ಕೋಟಿಗೆ ಹೆಚ್ಚಳವಾಗಿದೆ. ಪ್ರಮುಖ ತೈಲ ಕಂಪನಿಗಳ ಪ್ರಕಾರ, ದೇಶದ ಶೇ 99ರಷ್ಟು ಜನ ಎಲ್‌ಪಿಜಿಯ ಪ್ರಯೋಜನ ಪಡೆಯುತ್ತಿದ್ದಾರೆ.
2016ರ ಮೇ 1ರಂದು ಕೇಂದ್ರ ಸರ್ಕಾರ ಆರಂಭಿಸಿರುವ ಬಡಕುಟುಂಬದ ಮಹಿಳೆಯರಿಗೆ ಉಚಿತವಾಗಿ ಎಲ್‌ಪಿಜಿ ಸಂಪರ್ಕ ನೀಡುವ (ಮತ್ತೆ ಸಿಲಿಂಡರ್ ಭರ್ತಿಗೆ ಹಣ ನೀಡಬೇಕು) ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯಿಂದಾಗಿ (ಪಿಎಂಯುವೈ) ಒಟ್ಟಾರೆ ಎಲ್‌ಪಿಜಿ ಸಂಪರ್ಕಗಳ ಸಂಖ್ಯೆ ಹೆಚ್ಚಾಗಿದೆ. ಆರಂಭದಲ್ಲಿ ಎಂಟು ಕೋಟಿ ಬಡ ಕುಟುಂಬಗಳಿಗೆಎಲ್‌ಪಿಜಿ ಸಂಪರ್ಕ ನೀಡುವ ಗುರಿಯನ್ನು ಸರ್ಕಾರ ಹೊಂದಿತ್ತು. ಈಗ ಎರಡನೇ ಹಂತದ ಯೋಜನೆ ಜಾರಿಯಲ್ಲಿದೆ. ಒಟ್ಟು 10.35 ಕೋಟಿ ಬಡ ಕುಟುಂಬಗಳು ಉಜ್ವಲಾ ಸಂಪರ್ಕ ಹೊಂದಿವೆ.
ಎಲ್‌ಪಿಜಿ ಸಬ್ಸಿಡಿಗಾಗಿ ಕೇಂದ್ರ ಸರ್ಕಾರ ಈ ಸಾಲಿನ ಬಜೆಟ್‌ನಲ್ಲಿ ₹12,100 ಕೋಟಿ ಮೀಸಲಿಟ್ಟಿದೆ. 2022–23ರಲ್ಲಿ ಗೃಹ ಬಳಕೆ ಎಲ್‌ಪಿಜಿಗೆ ಸಂಬಂಧಿಸಿದಂತೆ ತೈಲ ಕಂಪನಿಗಳು ಅನುಭವಿಸುತ್ತಿರುವ ನಷ್ಟ ತುಂಬಲು ಕೇಂದ್ರ ಸರ್ಕಾರವು
₹22 ಸಾವಿರ ಕೋಟಿ ಮೊತ್ತವನ್ನು ಕಂಪನಿಗಳಿಗೆ ವರ್ಗಾಯಿಸಿತ್ತು.
ಆಧಾರ: ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ವೆಬ್‌ಸೈಟ್, ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣೆ ಕೋಶ, ಬಜೆಟ್ ದಾಖಲಗೆಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.