ಕರ್ನಾಟಕವೂ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಈ ಹಿಂದೆ ನೂರಾರು ಗುಂಪು ಹಲ್ಲೆ/ಗುಂಪು ಹತ್ಯೆ ಪ್ರಕರಣಗಳು ನಡೆದಿವೆ. ವಿವಿಧ ಭಾಗಗಳಲ್ಲಿ ಜಾತಿ, ಧರ್ಮ, ಲಿಂಗ ಆಧಾರಿತವಾಗಿ ಗುಂಪುಗಳಿಂದ ಹಲ್ಲೆ, ಹತ್ಯೆ ನಡೆದು, ಅದು ಜಾಗತಿಕ ಮಟ್ಟದಲ್ಲಿ ಸುದ್ದಿಯೂ ಆಗಿತ್ತು. ಇಂಥ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದರೂ, ಅವುಗಳನ್ನು ಪ್ರತ್ಯೇಕವಾಗಿ ದಾಖಲಿಸುವ, ಪ್ರತ್ಯೇಕ ನಿಯಮದಡಿ ಶಿಕ್ಷೆ ವಿಧಿಸುವ ವ್ಯವಸ್ಥೆಯೇ ದೇಶದಲ್ಲಿ ಇರಲಿಲ್ಲ. ಸುಪ್ರೀಂ ಕೋರ್ಟ್ ಈ ಬಗ್ಗೆ ಎಚ್ಚರಿಸಿದ ನಂತರ ಈ ಪ್ರವೃತ್ತಿಗೆ ಕೊಂಚ ಕಡಿವಾಣ ಬಿದ್ದಿತ್ತು. ಈಗ ಮಂಗಳೂರಿನಲ್ಲಿ ನಡೆದಿರುವ ಹತ್ಯೆ ಪ್ರಕರಣವು ಗುಂಪು ಹಲ್ಲೆ ವಿಷಯವನ್ನು ಮತ್ತೆ ಮುನ್ನೆಲೆಗೆ ತಂದಿದೆ.
ಮೀನು ಕದ್ದಿದ್ದಾರೆ ಎಂದು ಆರೋಪಿಸಿ ಗುಂಪೊಂದು ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಥಳಿಸಿದ ಪ್ರಕರಣ ಉಡುಪಿಯ ಮಲ್ಪೆಯಲ್ಲಿ ಮಾರ್ಚ್‌ನಲ್ಲಿ ನಡೆದಿತ್ತು. ಈಗ ಮಂಗಳೂರಿನ ಕುಡುಪುವಿನಲ್ಲಿ ಕೇರಳದ ವಯನಾಡ್‌ನ ಮುಸ್ಲಿಂ ಯುವಕನನ್ನು ಗುಂಪೊಂದು ಹತ್ಯೆ ಮಾಡಿದೆ. ಹತ್ಯೆಗೆ ಕಾರಣ ಏನು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಈ ಪ್ರಕರಣದ ಮೂಲಕ ಅತ್ಯಂತ ಅಮಾನುಷವಾದ ಮತ್ತು ಕಾನೂನಿಗೆ ಹೊರತಾದ ಶಿಕ್ಷಾ ಪದ್ಧತಿ ಮತ್ತೊಮ್ಮೆ ಸದ್ದು ಮಾಡಿದೆ.
ಸಾಮಾನ್ಯವಾಗಿ ಒಂದು ನಿರ್ದಿಷ್ಟ ಸಮುದಾಯ, ಸಂಪ್ರದಾಯ, ರಾಜಕೀಯ ಹಾಗೂ ಧಾರ್ಮಿಕ ಸಿದ್ಧಾಂತಗಳ ರಕ್ಷಣೆಯ ಹೆಸರಿನಲ್ಲಿ ಐದು ಮತ್ತು ಅದಕ್ಕಿಂತ ಹೆಚ್ಚು ಮಂದಿ ಕಾನೂನುಪ್ರಕ್ರಿಯೆಗೆ ಅತೀತವಾಗಿ ವ್ಯಕ್ತಿಯ ಮೇಲೆ ನಡೆಸುವ ಹಲ್ಲೆ, ದೌರ್ಜನ್ಯ, ಹತ್ಯೆಯನ್ನು ಗುಂಪು ಹಲ್ಲೆ/ಗುಂಪು ಹತ್ಯೆ ಎನ್ನಲಾಗುತ್ತದೆ. ಕೆಲವು ಜನ ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡು, ವ್ಯಕ್ತಿಯೊಬ್ಬರನ್ನು ತೀವ್ರವಾಗಿ ಹೊಡೆದು, ಹಿಂಸಿಸಿ ಕೊಲ್ಲುವ ಬಗೆ ಬೆಚ್ಚಿಬೀಳಿಸುವಂಥದ್ದು. ತೀವ್ರ ಹಿಂಸೆ ಮತ್ತು ಅಪರಾಧದ ಸ್ವರೂಪದಿಂದಾಗಿ ಭಾರತದ ಗುಂಪು ಹಲ್ಲೆ ಪ್ರಕರಣಗಳು ಜಾಗತಿಕ ಮಟ್ಟದಲ್ಲಿ ಸುದ್ದಿಯಾದವು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ (2014ರಿಂದ) ಇಂಥ ಪ್ರಕರಣಗಳು ಹೆಚ್ಚಳವಾದವು ಎಂದು ಹಲವು ಅಧ್ಯಯನಗಳು ಹೇಳುತ್ತವೆ. ಸಾಮಾಜಿಕ ಮಾಧ್ಯಮಗಳು ಮತ್ತು ಇಂಟರ್‌ನೆಟ್, ಸುಳ್ಳು ಸುದ್ದಿಗಳು ಕೂಡ ಇಂಥ ಪ್ರಕರಣಗಳ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ.
ಗೋ ಹತ್ಯೆ, ದನದ ಮಾಂಸ ಸಾಗಣೆ ಮತ್ತು ಸೇವನೆ, ಗಂಡು ಹೆಣ್ಣಿನ ಸಂಬಂಧ ಮುಂತಾದ ಕಾರಣಗಳಿಗಾಗಿ ಗುಂಪು ಹಲ್ಲೆ ಪ್ರಕರಣಗಳು ನಡೆದಿವೆ. ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯಿಸಿ ಇಂಥ ಘಟನೆಗಳು ನಡೆದ ಬಗ್ಗೆಯೂ ವರದಿಗಳು ಬಂದಿವೆ. ಇಂಥ ಪ್ರಕರಣಗಳಲ್ಲಿ ತೊಂದರೆಗೊಳಗಾದವರ ಪೈಕಿ ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
‘ಸಿಟಿಜನ್ಸ್ ಫಾರ್ ಜಸ್ಟೀಸ್ ಆ್ಯಂಡ್ ಪೀಸ್’ ವರದಿಯಲ್ಲಿ 2014ರ ಜನವರಿಯಿಂದ 2018ರ ಜುಲೈವರೆಗೆ ದೇಶದಲ್ಲಿ ನಡೆದ ಗುಂಪು ಹಲ್ಲೆ ಪ್ರಕರಣಗಳ ಬಗ್ಗೆ ಉಲ್ಲೇಖವಿದೆ. ಗೋ ಹತ್ಯೆ, ಲವ್ ಜಿಹಾದ್, ಮಕ್ಕಳ ಕಳ್ಳರು ಎಂಬ ವದಂತಿ ಮುಂತಾದ ಕಾರಣಗಳಿಗಾಗಿ ಈ ಅವಧಿಯಲ್ಲಿ 109 ಗುಂಪು ಹಲ್ಲೆಗಳು ನಡೆದಿವೆ ಎಂದು ವರದಿ ಹೇಳಿದೆ. ಈ ಪೈಕಿ ಮಹಾರಾಷ್ಟ್ರದಲ್ಲಿ 22, ಉತ್ತರ ಪ್ರದೇಶದಲ್ಲಿ 19 ಮತ್ತು ಜಾರ್ಖಂಡ್‌ನಲ್ಲಿ 10 ಪ್ರಕರಣಗಳು ನಡೆದಿವೆ. 109 ಪ್ರಕರಣಗಳ ಪೈಕಿ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ 82, ಸಮಾಜವಾದಿ ಪಕ್ಷದ ಆಡಳಿತದಲ್ಲಿ 9, ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಐದು, ಟಿಎಂಸಿ ಆಡಳಿತದಲ್ಲಿ ನಾಲ್ಕು ಪ್ರಕರಣಗಳು ನಡೆದಿರುವುದಾಗಿ ವರದಿ ತಿಳಿಸಿದೆ. 109 ಪ್ರಕರಣಗಳ ಪೈಕಿ 39 ಪ್ರಕರಣಗಳಿಗೆ ಮಕ್ಕಳ ಕಳ್ಳರು ಎನ್ನುವ ವದಂತಿ ಕಾರಣವಾದರೆ, 39 ಪ್ರಕರಣಗಳಿಗೆ ‘ಗೋ ರಕ್ಷಣೆ’ ಕಾರಣ; 14 ಪ್ರಕರಣಗಳಿಗೆ ‘ಲವ್ ಜಿಹಾದ್’ ಕಾರಣ ಎಂದು ದಾಖಲಿಸಿದೆ.
ಮುಂಬೈನ ‘ಸೆಂಟರ್ ಫಾರ್ ಸ್ಟಡಿ ಆಫ್ ಸೊಸೈಟಿ ಆ್ಯಂಡ್ ಸೆಕ್ಯುಲರಿಸಂ’ ಸಂಸ್ಥೆಯು ಗುಂಪು ಹಲ್ಲೆಗಳ ಬಗ್ಗೆ ಅಧ್ಯಯನ ನಡೆಸಿದ್ದು, 2024ರಲ್ಲಿ 13 ಪ್ರಕರಣಗಳು ನಡೆದಿರುವುದಾಗಿ ತಿಳಿಸಿದೆ. ಈ ಪೈಕಿ 11 ಮಂದಿ ಸಾವಿಗೀಡಾಗಿದ್ದು, ಮೃತರಲ್ಲಿ ಒಬ್ಬರು ಹಿಂದೂ, ಒಬ್ಬರು ಕ್ರಿಶ್ಚಿಯನ್ ಮತ್ತು 9 ಮಂದಿ ಮುಸ್ಲಿಮರು. ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ತಲಾ ಮೂರು, ಛತ್ತೀಸಗಢ, ಹರಿಯಾಣ, ಗುಜರಾತ್‌ನಲ್ಲಿ ತಲಾ ಎರಡು ಮತ್ತು ಕರ್ನಾಟಕದಲ್ಲಿ ಒಂದು ಪ್ರಕರಣ ನಡೆದಿದೆ. ಇವುಗಳಲ್ಲಿ ಏಳು (ಶೇ 50ರಷ್ಟು) ಘಟನೆಗಳಿಗೆ ಗೋ ಹತ್ಯೆ ಕಾರಣ ಎಂದು ವರದಿ ಹೇಳಿದೆ. 2023ರಲ್ಲಿ ಇಂಥ 21 ಪ್ರಕರಣಗಳು ನಡೆದಿದ್ದು, 2024ರಲ್ಲಿ ಅವುಗಳ ಸಂಖ್ಯೆ ಕಡಿಮೆ ಆಗಿದೆ. ಅದಕ್ಕೆ ಸುಪ್ರೀಂ ಕೋರ್ಟ್ ಕಾರಣ ಎಂದೂ ಉಲ್ಲೇಖಿಸಿದೆ.
ತೆಹಸೀನ್ ಎಸ್.ಪೂನಾವಾಲಾ ಮತ್ತು ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ 2018ರ ಜುಲೈ 17ರಂದು ಗುಂಪು ಹಲ್ಲೆಗೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿದೆ. ಗುಂಪು ಹಲ್ಲೆ, ಹತ್ಯೆ ಪ್ರವೃತ್ತಿಯನ್ನು ತೀವ್ರವಾಗಿ ಖಂಡಿಸಿದ್ದ ನ್ಯಾಯಾಲಯವು, ಅಂಥ ಪ್ರಕರಣಗಳನ್ನು ತಡೆಯಲು, ಅಪರಾಧಿಗಳನ್ನು ಶಿಕ್ಷಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚಿಸಿತ್ತು. ಅದರ ನಂತರ ಹಲವು ರಾಜ್ಯಗಳಲ್ಲಿ ಈ ಸಂಬಂಧ ಕಾಯ್ದೆ ರೂಪಿಸುವ ಪ್ರಯತ್ನಗಳು ಆರಂಭವಾದವು. ಗುಂಪು ಹಲ್ಲೆಗೆ ಸಂಬಂಧಿಸಿದಂತೆ ಕಾಯ್ದೆ ರೂಪಿಸಿದ್ದ ಮೊದಲ ರಾಜ್ಯ ಮಣಿಪುರ. ರಾಜಸ್ಥಾನ, ಪಶ್ಚಿಮ ಬಂಗಾಳದಲ್ಲಿಯೂ ಮಸೂದೆಗಳನ್ನು ಮಂಡಿಸಲಾಗಿದ್ದು, ಅವುಗಳಿಗೆ ಹಲವು ರೀತಿಯ ಅಡ್ಡಿ ಎದುರಾಗಿದೆ.
ಗುಂಪು ಹಲ್ಲೆ ಎನ್ನುವುದು ಸಂವಿಧಾನದ ಬದುಕುವ ಮತ್ತು ಸ್ವಾತಂತ್ರ್ಯದ ಹಕ್ಕಿನ (21ನೇ ವಿಧಿ) ಉಲ್ಲಂಘನೆ ಎನ್ನುತ್ತಾರೆ ಸಂವಿಧಾನ ತಜ್ಞರು. ಗುಂಪು ಹಲ್ಲೆ, ಹತ್ಯೆ ಪ್ರಕರಣಗಳು ನಮ್ಮ ಸಂವಿಧಾನ, ಸಮಾಜ, ನ್ಯಾಯ ವ್ಯವಸ್ಥೆಯ ವಿಡಂಬನೆಯಾಗಿದ್ದು, ಅವುಗಳನ್ನು ತಡೆಯಬೇಕು ಎನ್ನುವ ಒತ್ತಾಯ ಕೇಳಿಬಂದಿದೆ.
ಮಹಿಳೆಯರ ಮೇಲೆ ತೀವ್ರ ಹಲ್ಲೆ: ಪರ ಪುರುಷನೊಂದಿಗೆ ಸಲುಗೆಯಿಂದ ವರ್ತಿಸಿದ ಹಾಗೂ ಇದಕ್ಕೆ ಸಹಕರಿಸಿದ ಆರೋಪದ ಮೇರೆಗೆ ಇಬ್ಬರು ಮಹಿಳೆಯರನ್ನು ಗ್ರಾಮದ ಮಸೀದಿಗೆ ಕರೆಸಿ ಅವರ ಮೇಲೆ ಗುಂಪೊಂದು ಹಲ್ಲೆ ನಡೆಸಿದ್ದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ತಾವರೆಕೆರೆಯಲ್ಲಿ ಇದೇ ಏಪ್ರಿಲ್ 9ರಂದು ನಡೆದಿತ್ತು. ಈ ಸಂಬಂಧ ಸಂತ್ರಸ್ತೆಯೊಬ್ಬರ ಪತಿ ಸೇರಿದಂತೆ 6 ಆರೋಪಿಗಳನ್ನು ಬಂಧಿಸಲಾಗಿದೆ. ಮಹಿಳೆಯರ ಮೇಲೆ ದೊಣ್ಣೆ, ಕಲ್ಲು, ವೈರ್, ಪೈಪ್‌ಗಳಿಂದ ಹೊಡೆದು ಕಲ್ಲು ಎತ್ತಿಹಾಕಿ ಕೊಲೆಗೆ ಯತ್ನಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಮೀನು ಕದ್ದದ್ದಕ್ಕೆ ಮಹಿಳೆಯನ್ನು ಮರಕ್ಕೆ ಕಟ್ಟಿ ಹೊಡೆದರು: ಉಡುಪಿಯ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಇದೇ ಮಾರ್ಚ್ 18ರಂದು ಮೀನು ಕದ್ದ ಆರೋಪದಲ್ಲಿ ಬಂಜಾರ ಸಮಾಜದ ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೆ ನಡೆಸಲಾಗಿತ್ತು. ಪೊಲೀಸರು ಐವರನ್ನು ಬಂಧಿಸಿದ್ದರು. ಪ್ರಕರಣ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ.
ಮಕ್ಕಳ ಅಪಹರಣಕಾರರೆಂದು ಹತ್ಯೆ: ಬೀದರ್ ಜಿಲ್ಲೆಯ ಕಮಲನಗರ ತಾಲ್ಲೂಕಿನ ಮುರ್ಕಿಯಲ್ಲಿ ಮಕ್ಕಳ ಅಪಹರಣಕಾರರೆಂದು ಆರೋಪಿಸಿ ಗ್ರಾಮಸ್ಥರ ಗುಂಪು ಒಬ್ಬರನ್ನು ಕೊಲೆಗೈದು, ಮೂವರನ್ನು ಗಂಭೀರವಾಗಿ ಗಾಯಗೊಳಿಸಿರುವ ಪ್ರಕರಣ 2018ರ ಜುಲೈ 13ರಂದು ನಡೆದಿತ್ತು. ಘಟನೆಯಲ್ಲಿ ಹೈದರಾಬಾದ್‌ನ ಮುಹಮ್ಮದ್ ಅಜಂ ಮೃತಪಟ್ಟಿದ್ದರು. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಔರಾದ್ ಠಾಣೆ ಪೊಲೀಸರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆದರೆ, ಯಾರನ್ನೂ ಬಂಧಿಸಿರಲಿಲ್ಲ.
ದನದ ವ್ಯಾಪಾರಿ ಹಲ್ಲೆ, ಸಾವು: ಉಡುಪಿ ತಾಲ್ಲೂಕಿನ ಪೆರ್ಡೂರಿನಲ್ಲಿ 2018ರ ಜೂನ್‌ನಲ್ಲಿ ಜೋಕಟ್ಟೆಯ ದನದ ವ್ಯಾಪಾರಿ ಹುಸೈನಬ್ಬ (61) ಅವರು ಯುವಕರಿಂದ ಹಲ್ಲೆಗೊಳಗಾಗಿ ಸಾವಿಗೀಡಾಗಿದ್ದರು. ಈ ಪ್ರಕರಣದಲ್ಲಿ ಮೂವರು ಪೊಲೀಸ್ ಸಿಬ್ಬಂದಿ ಆರೋಪಿಗಳಾಗಿದ್ದರು. ಅಲ್ಲದೇ, ಬಜರಂಗದಳ ಕಾರ್ಯಕರ್ತರು ಸೇರಿದಂತೆ ಹತ್ತು ಮಂದಿಯನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಹಲ್ಲೆ ಮಾಡಿದ ಬಳಿಕ ಹುಸೈನಬ್ಬ ಅವರನ್ನು ಬಜರಂಗದಳ ಕಾರ್ಯಕರ್ತರು ಪೊಲೀಸರಿಗೆ ನೀಡಿದ್ದರು. ಈ ವೇಳೆ ಜೀಪಿನ ಹಿಂಬದಿ ಇದ್ದ ಹುಸೈನಬ್ಬ ಅಲ್ಲೇ ಮೃತಪಟ್ಟಿದ್ದರು.
ಬಿಜೆಪಿ ಮುಖಂಡನ ಹತ್ಯೆ: ಜಾನುವಾರು ಸಾಗಾಟ ಮಾಡುತ್ತಿದ್ದಾರೆ ಎಂಬ ಆರೋಪದ ಮೇಲೆ ಬಿಜೆಪಿ ಮುಖಂಡ ಪ್ರವೀಣ್ ಪೂಜಾರಿ ಮತ್ತು ಅವರ ಗೆಳೆಯ ಅಕ್ಷಯ್ ಮೇಲೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಎನ್ನಲಾದವರು 2016ರ ಆಗಸ್ಟ್‌ನಲ್ಲಿ ಉಡುಪಿ ಜಿಲ್ಲೆಯ ಕಜ್ಕೆಯಲ್ಲಿ ಟೆಂಪೊ ಅಡ್ಡ ಹಾಕಿ ಗಂಭೀರ ಹಲ್ಲೆ ನಡೆಸಿದ್ದರು. ಗಂಭೀರ ಗಾಯಗೊಂಡಿದ್ದ ಪ್ರವೀಣ್ ಪೂಜಾರಿ ಬಳಿಕ ಮೃತಪಟ್ಟಿದ್ದರು. ಪೊಲೀಸರು 21 ಆರೋಪಿಗಳನ್ನು ಬಂಧಿಸಿದ್ದರು
ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಯುವಕನಿಗೆ ಪೆಟ್ಟು: 2015 ಆ.28ರಂದು ಮಂಗಳೂರಿನ ಅತ್ತಾವರದಲ್ಲಿ ಸಹೋದ್ಯೋಗಿ ಯುವತಿ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯುವಕನನ್ನು ಕಾರಿನಿಂದ ಹೊರಗೆಳೆದು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಲಾಗಿತ್ತು. ಈ ಪ್ರಕರಣದ 19 ಆರೋಪಿಗಳನ್ನೂ ಇಲ್ಲಿನ ಒಂದನೇ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯ 2025 ರ ಮಾರ್ಚ್‌ನಲ್ಲಿ ಖುಲಾಸೆಗೊಳಿಸಿದೆ
10 ಮಂದಿಯ ಕೊಲೆ: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಯರ‍್ರಕೋಟೆ ಮತ್ತು ಬಾರ್ಲಹಳ್ಳಿಯಲ್ಲಿ 2011ರಲ್ಲಿ ಕಳ್ಳರು ಎಂದು ಶಂಕಿಸಿ ಆಂಧ್ರಪ್ರದೇಶದ 10 ಮಂದಿಯನ್ನು ಹೊಡೆದು ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಗ್ರಾಮಸ್ಥರ ಮೇಲೆ ಪ್ರಕರಣವೂ ದಾಖಲಾಗಿತ್ತು. ಪ್ರಕರಣದ ಎಲ್ಲ ಆರೋಪಿಗಳು ಖುಲಾಸೆಗೊಂಡಿದ್ದರು
ದನದ ವ್ಯಾಪಾರಿಗಳ ಮೇಲೆ ಹಲ್ಲೆ: ಉಡುಪಿ ಸಮೀಪದ ಆದಿ ಉಡುಪಿಯಲ್ಲಿ 2005 ರ ಮಾರ್ಚ್ 13 ರಂದು ಇಬ್ಬರು ವ್ಯಾಪಾರಿಗಳಾದ ಹಾಜಬ್ಬ (60) ಮತ್ತು ಅವರ ಮಗ ಹಸನಬ್ಬ (25) ಅವರನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿ ಮೆರವಣಿಗೆ ಮಾಡಲಾಗಿತ್ತು. ಕೋಲುಗಳು ಹಾಗೂ ಕಬ್ಬಿಣದ ರಾಡ್ ಗಳಿಂದ ಹಲ್ಲೆ ನಡೆದಿತ್ತು. ಈ ಪ್ರಕರಣ ವಿಧಾನ ಮಂಡಲ ಅಧಿವೇಶನದಲ್ಲೂ ಚರ್ಚೆಯಾಗಿತ್ತು. ಈ ಪ್ರಕರಣದ ಆರೋಪಿಗಳೆಲ್ಲರೂ ಖುಲಾಸೆಯಾಗಿದ್ದಾರೆ. ಪ್ರಮುಖ ಆರೋಪಿಯಾಗಿದ್ದ ಯಶ್‌ಪಾಲ್ ಸುವರ್ಣ ಈಗ ಉಡುಪಿ ಕ್ಷೇತ್ರದ ಬಿಜೆಪಿ ಶಾಸಕ
ಯುವಕನೊಬ್ಬ ತನ್ನ ಪ್ರಿಯತಮೆಯೊಂದಿಗೆ ಮನೆ ಬಿಟ್ಟುಹೋದ ಕಾರಣಕ್ಕೆ ಬೆಳಗಾವಿ ತಾಲ್ಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ 2023ರ ಡಿಸೆಂಬರ್ 11ರಂದು ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಲಾಗಿತ್ತು. ವಿವಸ್ತ್ರವಾಗಿ ವಿದ್ಯುತ್ ಕಂಬಕ್ಕೆ ಕಟ್ಟಿ ನಾಲ್ಕು ತಾಸು ಹೊಡೆಯಲಾಗಿತ್ತು.
ಹಲ್ಲೆ ಮಾಡಿದ 12 ಆರೋಪಿಗಳನ್ನು ಬಂಧಿಸಿ, ಕಾನೂನು ಸಂಘರ್ಷಕ್ಕೆ ಒಳಪಟ್ಟ ಒಬ್ಬ ಬಾಲಕನನ್ನು ಬಾಲಕರ ಬಾಲಮಂದಿರಕ್ಕೆ ಕಳುಹಿಸಲಾಗಿತ್ತು. 12 ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಬಾಲಕ ಇನ್ನೂ ಬಾಲಮಂದಿರದಲ್ಲಿದ್ದಾನೆ. ಪರಿಶಿಷ್ಟ ಪಂಗಡಕ್ಕೆ ಸೇರಿದ ಸಂತ್ರಸ್ತ ಮಹಿಳೆ ತಿಂಗಳವರೆಗೆ ಚಿಕಿತ್ಸೆ ಪಡೆದಿದ್ದರು. ಕಾಕತಿ ಠಾಣೆಯ ಸಿಪಿಐ ಅವರನ್ನು ಅಮಾನತು ಮಾಡಲಾಗಿತ್ತು. ಸಿಐಡಿಯು ತನಿಖೆ ನಡೆಸುತ್ತಿದೆ.
ದಾದ್ರಿ ಗುಂಪು ಹತ್ಯೆ: 2015ರ ಸೆಪ್ಟೆಂಬರ್‌ನಲ್ಲಿ ಉತ್ತರ ಪ್ರದೇಶದ ದಾದ್ರಿಯಲ್ಲಿ ಮೊಹಮ್ಮದ್ ಇಕ್ಲಾಖ್ ಎಂಬುವವರ ಹತ್ಯೆ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು. ಇಕ್ಲಾಖ್ ಅವರು ದನದ ಮಾಂಸ ಸೇವಿಸಿದ್ದಾರೆ ಎಂಬ ಶಂಕೆಯಿಂದ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿತ್ತು. ಈ ಘಟನೆಯ ಬಳಿಕ ಗೋಮಾಂಸದ ವಿಚಾರದಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ನಡೆದ ಹಲವು ಗುಂಪು ಹಲ್ಲೆ ಪ್ರಕರಣಗಳು ವರದಿಯಾಗಿದ್ದವು
ಜಾರ್ಖಂಡ್ ಗುಂಪು ಹತ್ಯೆ: 2016ರ ಮಾರ್ಚ್ 18ರಂದು ಜಾರ್ಖಂಡ್‌ನ ಝಾಬರ್ ಗ್ರಾಮದಲ್ಲಿ ಗೋರಕ್ಷಕರು ಎಂದು ಕರೆಸಿಕೊಳ್ಳುತ್ತಿದ್ದ ಎಂಟು ಮಂದಿ ಜಾನುವಾರು ವ್ಯಾಪಾರಿ 32 ವರ್ಷದ ಮಜ್ಲೂಮ್ ಅನ್ಸಾರಿ ಹಾಗೂ ಅವರ ಪಾಲುದಾರರ ಮಗ 11 ವರ್ಷದ ಇಮ್ತಿಯಾಜ್ ಖಾನ್ ಅವರ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದರು. ಬಳಿಕ ಇಬ್ಬರನ್ನೂ ಮರಕ್ಕೆ ನೇತು ಹಾಕಿದ್ದರು. ಎಲ್ಲ ಎಂಟು ಮಂದಿಯೂ ತಪ್ಪಿತಸ್ಥರು ಎಂದು ನ್ಯಾಯಾಲಯ ಘೋಷಿಸಿತ್ತು
ಉನಾ ಪ್ರಕರಣ: 2016ರ ಜುಲೈ 11ರಂದು ಗುಜರಾತ್‌ನ ಸೋಮನಾಥ ಜಿಲ್ಲೆಯ ಉನಾದಲ್ಲಿ ಸತ್ತ ದನದ ಚರ್ಮ ಸುಲಿದ ಕಾರಣಕ್ಕೆ ಸ್ವಯಂಘೋಷಿತ ಗೋರಕ್ಷಕರ ತಂಡವೊಂದು ನಾಲ್ವರು ದಲಿತರನ್ನು ಸರಪಳಿಯಲ್ಲಿ ಕಟ್ಟಿ ಹಾಕಿ ಥಳಿಸಿತ್ತು. ಈ ಘಟನೆಗೆ ದೇಶದಾದ್ಯಂತ ಖಂಡನೆ ವ್ಯಕ್ತವಾಗಿತ್ತು. ದಲಿತ ಸಂಘಟನೆಗಳು ವ್ಯಾಪಕ ಪ್ರತಿಭಟನೆ ನಡೆಸಿದ್ದವು. ನಾಲ್ವರು ಪೊಲೀಸ್ ಅಧಿಕಾರಿಗಳು, ಇಬ್ಬರು ಬಾಲಕರು ಸೇರಿದಂತೆ 43 ಜನರನ್ನು ಪೊಲೀಸರು ಬಂಧಿಸಿದ್ದರು. ಆರೋಪಿಗಳಿಗೆ ಜಾಮೀನು ಸಿಕ್ಕಿತ್ತು.
ಅಲ್ವಾರ್ ಪ್ರಕರಣ: ರಾಜಸ್ಥಾನದ ಅಲ್ವಾರ್‌ನ ಬೆಹ್ರೋರ್‌ನಲ್ಲಿ 2017ರ ಏಪ್ರಿಲ್ 1ರಂದು ನಡೆದ ಪ್ರಕರಣ. ಹರಿಯಾಣದ ಹೈನುಗಾರ ಪೆಹ್ಲು ಖಾನ್ ಅವರು ಇತರ ಆರು ಮಂದಿಯೊಂದಿಗೆ ಜೈಪುರದಿಂದ ಹಸುಗಳು ಮತ್ತು ಕರುಗಳನ್ನು ಖರೀದಿಸಿ ವಾಹನದಲ್ಲಿ ತನ್ನ ಊರಿಗೆ ಕೊಂಡೊಯ್ಯುತ್ತಿದ್ದಾಗ, ಗೋರಕ್ಷಣೆಯ ಹೆಸರಿನಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಖಾನ್ ಹಾಗೂ ಇತರರ ಮೇಲೆ ಹಲ್ಲೆ ನಡೆಸಿದ್ದರು. ಎರಡು ದಿನಗಳ ನಂತರ ಅವರು ಮೃತಪಟ್ಟಿದ್ದರು. 2018ರಲ್ಲೂ ಇಂತಹದ್ದೇ ಮತ್ತೊಂದು ಪ್ರಕರಣ ಅಲ್ವಾರ್‌ನಲ್ಲಿ ನಡೆದಿತ್ತು.
ಪಾಲ್ಗರ್ ಪ್ರಕರಣ: 2020ರ ಏಪ್ರಿಲ್ 16ರ ರಾತ್ರಿ ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಮಹಾರಾಷ್ಟ್ರದ ಪಾಲ್ಗರ್ ಸಮೀಪದ ಗಡ್‌ಚಿಂಚಾಲೆ ಗ್ರಾಮಸ್ಥರು, ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿದ ವದಂತಿಯನ್ನು ನಂಬಿ ಮಕ್ಕಳ ಅಪಹರಣಕಾರರು ಎಂದುಕೊಂಡು ಕಾರಿನಲ್ಲಿ ಹೋಗುತ್ತಿದ್ದ ಇಬ್ಬರು ಸಾಧುಗಳು (ಜುನಾ ಅಖಾಡ) ಮತ್ತು ಕಾರಿನ ಚಾಲಕನ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು. ಪೊಲೀಸರು 100ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದರು. ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು
ಬಿಎನ್‌ಎಸ್ ಪ್ರಕಾರ, ಐದು ಮತ್ತು ಅದಕ್ಕಿಂತ ಹೆಚ್ಚು ಜನರ ಗುಂಪು ಧರ್ಮ, ಜಾತಿ ಅಥವಾ ಸಮುದಾಯದ ಆಧಾರದಲ್ಲಿ ಯಾರನ್ನಾದರೂ ಕೊಲೆ ಮಾಡಿದರೆ ಅದು ಗುಂಪು ಹತ್ಯೆಯಾಗುತ್ತದೆ.
ಪೊಲೀಸ್ ಮತ್ತು ಸಾರ್ವಜನಿಕ ರಕ್ಷಣೆ ರಾಜ್ಯದ ವ್ಯಾಪ್ತಿಗೆ ಬರುವ ವಿಚಾರಗಳಾಗಿದ್ದು, ಗುಂಪು ಹಲ್ಲೆ ಪ್ರಕರಣಗಳ ದತ್ತಾಂಶ ತನ್ನ ಬಳಿ ಇಲ್ಲ ಎಂದು ಕೇಂದ್ರ ಸರ್ಕಾರ ಹಲವು ಬಾರಿ ಹೇಳಿದೆ. ರಾಷ್ಟ್ರೀಯ ಅಪರಾಧಗಳ ದಾಖಲೆಗಳ ಬ್ಯೂರೊದಲ್ಲಿ 2022ರವರೆಗೆ ದೇಶದಲ್ಲಿ ನಡೆದ ಅಪರಾಧಗಳ ದತ್ತಾಂಶ ಲಭ್ಯವಿದೆ. ಆದರೆ, ಅದರಲ್ಲಿ ಗುಂಪು ಹಲ್ಲೆಗೆ ಸಂಬಂಧಿಸಿದಂತೆ ಪ್ರತ್ಯೇಕ ವಿಭಾಗ ಇಲ್ಲ. ಆದಾಗ್ಯೂ, ಭಾರತೀಯ ದಂಡ ಸಂಹಿತೆಯ (ಐಪಿಸಿ) ಬದಲಿಗೆ ಜಾರಿಗೊಳಿಸಲಾಗಿರುವ ಭಾರತೀಯ ನ್ಯಾಯ ಸಂಹಿತೆಯಲ್ಲಿ (ಐಪಿಸಿ) ಗುಂಪು ಹಲ್ಲೆಗೆ ಸಂಬಂಧಿಸಿದ ಸೆಕ್ಷನ್ ಅಳವಡಿಸಲಾಗಿದೆ.
ದೇಶದಲ್ಲಿ ಹೊಸದಾಗಿ ಅಳವಡಿಸಿಕೊಂಡಿರುವ ಕ್ರಿಮಿನಲ್ ಕಾನೂನು ‘ಭಾರತೀಯ ನ್ಯಾಯ ಸಂಹಿತೆ’ಯಲ್ಲಿ (ಬಿಎನ್‌ಎಸ್) ಗುಂಪು ಹಲ್ಲೆ ಮಾಡಿ ಕೊಲೆ ಮಾಡಿದ ಪ್ರಕರಣಗಳಿಗಾಗಿ ಪ್ರತ್ಯೇಕ ಸೆಕ್ಷನ್ ಇದೆ. ಹಿಂದಿನ ಭಾರತೀಯ ದಂಡ ಸಂಹಿತೆಯಲ್ಲಿ ಇರಲಿಲ್ಲ. ಗುಂಪು ಹತ್ಯೆ ಪ್ರಕರಣವೂ 302 ಸೆಕ್ಷನ್ ಅಡಿಯಲ್ಲೇ ಬರುತ್ತಿತ್ತು (ಬಿಎನ್‌ಎಸ್‌ನಲ್ಲಿ 103ನೇ ಸೆಕ್ಷನ್ ಕೊಲೆಗೆ (ದಂಡನೆ) ಸಂಬಂಧಿಸಿದ್ದಾಗಿದೆ).
ಬಿಎನ್‌ಎಸ್‌ನ 103 (2)ನೇ ಸೆಕ್ಷನ್ ಗುಂಪು ಹತ್ಯೆಗೆ ಸಂಬಂಧಿಸಿದ್ದಾಗಿದೆ. ಗುಂಪು ಹತ್ಯೆ ಮಾಡಿದ ಅಪರಾಧಕ್ಕೆ ದಂಡ ಸಹಿತ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶ ಇದೆ.
ಆಧಾರ: ಸೆಂಟರ್ ಫಾರ್ ಸ್ಟಡಿ ಆಫ್ ಸೊಸೈಟಿ ಆ್ಯಂಡ್ ಸೆಕ್ಯುಲರಿಸಂ, ಸಿಟಿಜನ್ಸ್ ಫಾರ್ ಜಸ್ಟೀಸ್ ಆ್ಯಂಡ್ ಪೀಸ್, ಆಕ್ಸ್‌ಫರ್ಡ್ ಹ್ಯೂಮನ್ ರೈಟ್ಸ್ ಹಬ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.