ADVERTISEMENT

ಆಳ ಅಗಲ | ಭಾರತದ ಅಂತರಿಕ್ಷ ಕನಸಿಗೆ ಹೊಸ ರೆಕ್ಕೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 0:10 IST
Last Updated 26 ಜೂನ್ 2025, 0:10 IST
   

ಭಾರತವು ಬಾಹ್ಯಾಕಾಶ ಅಧ್ಯಯನ– ಸಂಶೋಧನೆ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಆಕ್ಸಿಯಂ–4 ಬಾಹ್ಯಾಕಾಶ ಯೋಜನೆಯ ಭಾಗವಾಗಿ ಬುಧವಾರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್‌) ತೆರಳಿರುವ ನಾಲ್ವರು ಗಗನಯಾತ್ರಿಗಳ ಪೈಕಿ ಭಾರತದ ಶುಭಾಂಶು ಶುಕ್ಲಾ ಕೂಡ ಒಬ್ಬರಾಗಿದ್ದಾರೆ. ಶುಕ್ಲಾ ಅವರೊಂದಿಗೆ  ಅಮೆರಿಕ, ಪೋಲೆಂಡ್‌ ಮತ್ತು ಹಂಗೆರಿಯ ಗಗನಯಾತ್ರಿಗಳಿದ್ದಾರೆ. ನಾಲ್ವರು ಕೂಡ ನಾಸಾದ ಗಗನಯಾನಿಗಳಲ್ಲ. ಭಾರತೀಯ ವಾಯುಸೇನೆಯ ಗ್ರೂಪ್ ಕ್ಯಾಪ್ಟನ್ ಆಗಿರುವ ಶುಕ್ಲಾ ಅವರು ಆಕ್ಸಿಯಂ–4 ಬಾಹ್ಯಾಕಾಶ ಯಾನದಲ್ಲಿ ಕ್ಯಾಪ್ಟನ್‌ ಆಗಿದ್ದಾರೆ. ರಾಕೇಶ್‌ ಶರ್ಮಾ ಅವರ ನಂತರ ಬಾಹ್ಯಾಕಾಶಕ್ಕೆ ತೆರಳಿರುವ ಭಾರತದ ಎರಡನೇ ‌ಗಗನಯಾತ್ರಿ ಅವರು. ಭಾರತವು 41 ವರ್ಷಗಳ ಬಳಿಕ ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸುತ್ತಿದೆ. ಬಾಹ್ಯಾಕಾಶ ಸಂಶೋಧನೆ ಮತ್ತು ಅಧ್ಯಯನದಲ್ಲಿ ಇಸ್ರೊ ಈವರೆಗೆ ಮಾಡಿರುವ ಸಾಧನೆಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವನ್ನು ಮುಂದುವರಿದ ರಾಷ್ಟ್ರಗಳ ಸಾಲಿಗೆ ಈಗಾಗಲೇ ಸೇರಿಸಿವೆ. ಈಗ ಶುಕ್ಲಾ ಅವರ ಬಾಹ್ಯಾಕಾಶಯಾನವು ಮಾನವ ಸಹಿತ ಗಗನಯಾನಕ್ಕೆ ಸಿದ್ಧತೆ ನಡೆಸುತ್ತಿರುವ ಭಾರತದ ಕನಸಿಗೆ ಹೊಸ ರೆಕ್ಕೆ ಮೂಡಿಸಿದೆ.

‘ನನ್ನ ಹೆಗಲ ಮೇಲೆ ತ್ರಿವರ್ಣ ಧ್ವಜವಿದೆ. ಅದು ನಾನು ನಿಮ್ಮೆಲ್ಲರೊಂದಿಗೆ ಇದ್ದೇನೆ ಎನ್ನುವ ಸಂದೇಶ ಸಾರುತ್ತಿದೆ. ಇದು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ನನ್ನ ಪಯಣದ ಆರಂಭ ಮಾತ್ರವಲ್ಲ; ಭಾರತದ ಮಾನವಸಹಿತ ಬಾಹ್ಯಾಕಾಶ ಯಾನದ ಆರಂಭವೂ ಆಗಿದೆ..’ 

– ಹೀಗೆಂದವರು ಅಮೆರಿಕದ ಫ್ಲಾರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಹಾರಿದ ಫಾಲ್ಕನ್‌ 9 ರಾಕೆಟ್‌ಗೆ ಅಳವಡಿಸಲಾಗಿದ್ದ ಡ್ರ್ಯಾಗನ್‌ ಬಾಹ್ಯಾಕಾಶ ಕೋಶದಲ್ಲಿದ್ದ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ.

ADVERTISEMENT

ಶುಕ್ಲಾ ಉತ್ತರ ಪ್ರದೇಶದ ಲಖನೌದವರು. ಅವರ ತಂದೆ ಶಂಭು ದಯಾಳ್ ಶುಕ್ಲಾ ನಿವೃತ್ತ ಸರ್ಕಾರಿ ಅಧಿಕಾರಿ, ತಾಯಿ ಆಶಾ ಶುಕ್ಲಾ ಗೃಹಿಣಿ. ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಪರಿಣತಿ ಹೊಂದಿರುವ ಅವರು ಕಾರ್ಗಿಲ್ ಯುದ್ಧದ ಪ್ರಭಾವದಿಂದ ಸೇನೆಯತ್ತ ಆಕರ್ಷಿತರಾದವರು. ನ್ಯಾಷನಲ್ ಡಿಫೆನ್ಸ್‌ ಅಕಾಡೆಮಿಯಿಂದ ವಿಜ್ಞಾನದಲ್ಲಿ ಪದವಿ ಪಡೆದ ನಂತರ ವಾಯುಸೇನೆಯಲ್ಲಿ ಯುದ್ಧವಿಮಾನದ ಪೈಲಟ್ ಆಗಿ 2006ರಲ್ಲಿ ಕೆಲಸಕ್ಕೆ ಸೇರಿದರು; ಸುಖೋಯ್–30, ಎಂಕೆಐ, ಎಂಐಜಿ–29, ಜಾಗ್ವಾರ್, ಡಾರ್ನಿಯರ್ ಸೇರಿದಂತೆ ವಿವಿಧ ರೀತಿಯ ವಿಮಾನಗಳ ಪೈಲಟ್ ಆಗಿ ಅನುಭವ ಪಡೆದಿರುವ, 2,000 ಗಂಟೆಗಳ ಹಾರಾಟದ ಅನುಭವ ಹೊಂದಿದ್ದಾರೆ. ಶುಭಾಂಶು ಶುಕ್ಲಾ ಅವರ ಅಸಾಧಾರಣ ಕೊಡುಗೆಯನ್ನು ಪರಿಗಣಿಸಿ ವಾಯುಸೇನೆಯು ಮಾರ್ಚ್ 2024ರಂದು ಅವರಿಗೆ ಗ್ರೂಪ್ ಕ್ಯಾಪ್ಟನ್ ಆಗಿ ಪದೋನ್ನತಿ ನೀಡಿದೆ. 

2019ರಲ್ಲಿ ಶುಭಾಂಶು ಅವರಿಗೆ ಇಸ್ರೊದಿಂದ ಒಂದು ಕರೆ ಬಂತು. ಅದು ಅವರ ಬದುಕನ್ನು ಬದಲಿಸಿದ ಕರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ (ಇಸ್ರೊ) ಮಹತ್ವಾಕಾಂಕ್ಷಿ ಯೋಜನೆಯಾದ ಮಾನವ ಸಹಿತ ಗಗನಯಾನದಲ್ಲಿ ಬಾಹ್ಯಾಕಾಶಕ್ಕೆ ತೆರಳಲಿರುವ ನಾಲ್ವರು ಗಗನಯಾತ್ರಿಗಳಲ್ಲಿ ಶುಭಾಂಶು ಶುಕ್ಲಾ ಅವರೂ ಒಬ್ಬರಾಗಿ ಆಯ್ಕೆಯಾಗಿದ್ದರು. ಅದಕ್ಕಾಗಿ ಅವರಿಗೆ ರಷ್ಯಾದ ಮಾಸ್ಕೊದಲ್ಲಿರುವ ಯೂರಿ ಗಗಾರಿನ್ ತರಬೇತಿ ಕೇಂದ್ರದಲ್ಲಿ ಒಂದು ವರ್ಷ ತೀವ್ರ ತರಬೇತಿ ನೀಡಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ನಾಲ್ವರು ಗಗನಯಾನಿಗಳ ಹೆಸರುಗಳನ್ನು 2024ರ ಫೆಬ್ರುವರಿಯಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ್ದರು.

ಶುಭಾಂಶು ಶುಕ್ಲಾ ಅವರ ಬೆಳವಣಿಗೆಯಲ್ಲಿ ಬೆಂಗಳೂರಿನ ಪಾತ್ರವೂ ಇದೆ. ಕೇಂದ್ರ ಲೋಕಸೇವಾ ಆಯೋಗ ನಡೆಸುವ ಎನ್‌ಡಿಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕಂಪ್ಯೂಟರ್ ವಿಜ್ಞಾನದಲ್ಲಿ ಪದವಿ ಪಡೆದ ಅವರು, ನಂತರ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್‌ಸಿ) ಏರೋಸ್ಪೇಸ್‌ ಎಂಜಿನಿಯರಿಂಗ್‌ನಲ್ಲಿ ಎಂ.ಟೆಕ್ ಪೂರೈಸಿದ್ದರು.

ಭೂಮಿಯಿಂದ 400 ಕಿ.ಮೀ. ದೂರದ ಕೆಳ ಭೂ ಕಕ್ಷೆಗೆ ಗಗನಯಾನಿಗಳನ್ನು ಕರೆದೊಯ್ದು, ಸುರಕ್ಷಿತವಾಗಿ ಮರಳಿ ಭೂಮಿಗೆ ಕರೆತರುವುದು ಗಗನಯಾನ ಯೋಜನೆಯ ಉದ್ದೇಶ. 2027ರ ಮೊದಲ ತ್ರೈಮಾಸಿಕದಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸುವ ಗುರಿಯನ್ನು ಇಸ್ರೊ ಹೊಂದಿದೆ. 

ಅದಕ್ಕೂ ಮುನ್ನವೇ ‘ಆ್ಯಕ್ಸಿಯಂ 4’ ಯೋಜನೆಯ ಭಾಗವಾಗುವ ಅವಕಾಶ ಶುಕ್ಲಾ ಅವರಿಗೆ ಒಲಿದುಬಂದಿದೆ. 1984ರಲ್ಲಿ ರಾಕೇಶ್‌ ಶರ್ಮಾ ಅವರು ಬಾಹ್ಯಾಕಾಶಕ್ಕೆ ಹೋಗಿ ಬಂದ ನಂತರ, ಬಾಹ್ಯಾಕಾಶಕ್ಕೆ ತೆರಳಿರುವ ಮೊದಲ ಗಗನಯಾತ್ರಿ ಶುಕ್ಲಾ. ರಾಕೇಶ್‌ ಶರ್ಮಾ ಅವರು ಸೋವಿಯತ್‌ ಒಕ್ಕೂಟ ನಿರ್ವಹಿಸುತ್ತಿದ್ದ ಬಾಹ್ಯಾಕಾಶ ನಿಲ್ದಾಣದಲ್ಲಿ ಎಂಟು ದಿನಗಳಿದ್ದು, ವಿವಿಧ ಅಧ್ಯಯನಗಳನ್ನು ನಡೆಸಿ ಭೂಮಿಗೆ ಮರಳಿದ್ದರು. ಈಗ ಬಾಹ್ಯಾಕಾಶದಲ್ಲಿರುವ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್‌) ತೆರಳಿರುವ ಮೊದಲ ಭಾರತೀಯ ಶುಕ್ಲಾ. ಬಾಹ್ಯಾಕಾಶ ಅಧ್ಯಯನ, ಸಂಶೋಧನೆ ಕ್ಷೇತ್ರದಲ್ಲಿ ಭಾರತದ ಕನಸುಗಳು, ಕೋಟ್ಯಂತರ ಜನರ ನಿರೀಕ್ಷೆಗಳನ್ನು ಹೊತ್ತುಕೊಂಡು ಅಂತರಿಕ್ಷಕ್ಕೆ ಹಾರಿರುವ ಅವರು, ಇತರ ಮೂವರು ಗಗನಯಾತ್ರಿಗಳೊಂದಿಗೆ ಸೇರಿ 14 ದಿನಗಳ ಬಳಿಕ ಭೂಮಿಗೆ ಮರಳಲಿದ್ದಾರೆ.    

ಪ್ರಯಾಣದ ಹಂತ–ಹಾದಿ

1. ನಭಕ್ಕೆ ನೆಗೆತ

ಭಾರತೀಯ ಕಾಲಮಾನ ಬುಧವಾರ ಮಧ್ಯಾಹ್ನ 12.01 ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಾಲ್ವರು ಗಗನಯಾತ್ರಿಗಳಿದ್ದ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್‌ ಕೋಶ ಹೊತ್ತಿದ್ದ ಸ್ಪೇಸ್‌ ಎಕ್ಸ್‌ನ ಫಾಲ್ಕನ್‌ 9 ರಾಕೆಟ್‌ ನಭಕ್ಕೆ. ರಾಕೆಟ್‌ನ ಮೊದಲ ಮತ್ತು ಎರಡನೇ ಹಂತ ಪ್ರತ್ಯೇಕಗೊಂಡು ರಾಕೆಟ್‌ನ ಅರ್ಧ ಭಾಗ ಮತ್ತೆ ಭೂಮಿಗೆ

2. ಕಕ್ಷೆಗೆ ಸೇರ್ಪಡೆ

ರಾಕೆಟ್‌ನಿಂದ ಪ್ರತ್ಯೇಕಗೊಂಡ ಡ್ರ್ಯಾಗನ್‌ ಭೂಮಿಯ ಕಕ್ಷೆಗೆ ಸೇರ್ಪಡೆ. ಪಥದರ್ಶಕ ವ್ಯವಸ್ಥೆಯ ಕಾರ್ಯಾಚರಣೆ  ಶುರು. ಕೋಶದ ನೂಕುಬಲ, ಜೀವ ರಕ್ಷಕ ವ್ಯವಸ್ಥೆ, ಉಷ್ಣತೆ ನಿಯಂತ್ರಣ ವ್ಯವಸ್ಥೆಯ ಪರಿಶೀಲನೆ. ಈ ಹಂತದಲ್ಲಿ ಡ್ರ್ಯಾಗನ್‌ ವೇಗ ಗಂಟೆಗೆ 27 ಸಾವಿರ ಕಿ.ಮೀ ಇರುತ್ತದೆ. ಪ್ರತಿ 90 ನಿಮಿಷಕ್ಕೊಮ್ಮೆ ಭೂಮಿಗೆ ಸುತ್ತು ಹಾಕುತ್ತಿರುತ್ತದೆ  

3. ಐಎಸ್‌ಎಸ್‌ನತ್ತ ಪಯಣ

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಸಾಗುವುದಕ್ಕಾಗಿ ಬಾಹ್ಯಾಕಾಶದ ಕೋಶದ ಕಕ್ಷೆಯಲ್ಲಿ ಹೊಂದಾಣಿಕೆ ಮಾಡಲಾಗುತ್ತದೆ. ಕೋಶದ ಎಂಜಿನ್‌ ಚಾಲೂಗೊಳಿಸಿ ಕಕ್ಷೆಯಲ್ಲಿ ಸುತ್ತುವ ವೇಗವನ್ನು ಹೆಚ್ಚಿಸುತ್ತಾ ಕಕ್ಷೆಯ ಎತ್ತರವನ್ನು ಜಾಸ್ತಿಗೊಳಿಸಲಾಗುತ್ತದೆ. ಈ ಪ್ರಕ್ರಿಯೆ 20–24 ಗಂಟೆಗಳವರೆಗೆ ನಡೆಯುತ್ತದೆ 

4. ನಿಲ್ದಾಣದ ಕಕ್ಷೆಗೆ

ಐಎಸ್‌ಎಸ್‌ ಹತ್ತಿರ ತಲುಪಿದ ನಂತರ ಡ್ರ್ಯಾಗನ್‌ ನಿಲ್ದಾಣದೊಂದಿಗೆ ಸಂವಹನ ಸಾಧಿಸುತ್ತದೆ. ಅಂತಿಮ ಹಂತದ ಕಕ್ಷೆ ಬದಲಾವಣೆ ‍ಪ್ರಕ್ರಿಯೆ ಕೈಗೊಂಡು ಡ್ರ್ಯಾಗನ್‌ ನಿಲ್ದಾಣದ ಕಕ್ಷೆಗೆ ತಲುಪುವಂತೆ ಮಾಡಲಾಗುತ್ತದೆ 

5. ಐಎಸ್‌ಎಸ್‌ ಸಮೀಪಕ್ಕೆ

ಬಾಹ್ಯಾಕಾಶ ಕೋಶವು ಐಎಸ್‌ಎಸ್‌ಗೆ ಜೋಡಣೆಯಾಗಲು ಗುರುತಿಸಲಾಗಿರುವ ಜಾಗದ ಸಮೀಪಕ್ಕೆ ಬರುತ್ತದೆ. ಸ್ವಯಂಚಾಲಿತ ಜೋಡಣೆಗೊಳ್ಳುವ ಪ್ರಕ್ರಿಯೆ ಆರಂಭ  

6. ಜೋಡಣೆ

ಅಂತಿಮ ಹಂತದ ಕಾರ್ಯಾಚರಣೆ ನಡೆಸುವ ಬಾಹ್ಯಾಕಾಶ ಕೋಶ ಪೂರ್ವ ನಿಗದಿತ ಜಾಗಕ್ಕೆ ಜೋಡಣೆಯಾಗುತ್ತದೆ. ಇದು ಸ್ವಯಂ ಚಾಲಿತವಾಗಿ ನಡೆಯುತ್ತದೆ. ಏನಾದರೂ ಸಮಸ್ಯೆ ಎದುರಾದರೆ ಕೋಶದಲ್ಲಿರುವ ಪೈಲಟ್‌ (ಗಗನಯಾನಿ) ಮ್ಯಾನ್ಯುವಲ್‌ ಆಗಿ ಈ ಕಾರ್ಯ ನಡೆಸುತ್ತಾರೆ. ಜೋಡಣೆಯ ಬಳಿಕ ವಾಯುಒತ್ತಡ ಸೃಷ್ಟಿಸಿ, ಡ್ರ್ಯಾಗನ್‌ ಬಾಗಿಲು ತೆರೆಯಲಾಗುತ್ತದೆ. ಗಗನಯಾತ್ರಿಗಳು ಐಎಸ್‌ಎಸ್‌ ಪ್ರವೇಶಿಸುತ್ತಾರೆ

ಭಾರತಕ್ಕೆ ಏನು ಉಪಯೋಗ?

ಶುಭಾಂಶು ಶುಕ್ಲಾ ಅವರ ಗಗನಯಾನವು ಭಾರತದ ಬಾಹ್ಯಾಕಾಶ ಸಂಶೋಧನೆಯ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಅಮೆರಿಕ, ರಷ್ಯಾ, ಚೀನಾ ನಂತರ ಭಾರತವು ಗಗನಯಾನ ಕ್ಷೇತ್ರದಲ್ಲಿ ಮಹತ್ವದ ಯೋಜನೆಗಳನ್ನು ಹಾಕಿಕೊಂಡಿದೆ. ಇಸ್ರೊದ ಮುಂದಿನ ಯೋಜನೆಗಳ ದೃಷ್ಟಿಯಿಂದ ಶುಭಾಂಶು ಶುಕ್ಲಾ ಅವರ ಅನುಭವಕ್ಕೆ ಬಹಳ ಪ್ರಾಮುಖ್ಯವಿದೆ. ಭಾರತವು ಒಂದೆಡೆ 2027ರಲ್ಲಿ ಗಗನಯಾನದ ಕಾರ್ಯಗತಗೊಳಿಸುವ ಸಿದ್ಧತೆ ನಡೆಸುತ್ತಿದೆ.  ಮತ್ತೊಂದೆಡೆ, 2035ಕ್ಕೆ ತನ್ನದೇ ಬಾಹ್ಯಾಕಾಶ ನಿಲ್ದಾಣವನ್ನು ಸಜ್ಜು ಗೊಳಿಸುವ ಯೋಚನೆ ಹೊಂದಿದೆ. 2040ರ ಹೊತ್ತಿಗೆ ಚಂದ್ರನ ಮೇಲೆ ಗಗನಯಾತ್ರಿಯನ್ನು ಇಳಿಸುವ ಯೋಜನೆಯನ್ನೂ ಹಾಕಿಕೊಂಡಿದೆ. ಹೀಗೆ ಬಾಹ್ಯಾಕಾಶ ಯಾನದ ಹಲವು ಯೋಜನೆಗಳನ್ನು ಹೊಂದಿರುವ ಭಾರತಕ್ಕೆ ಶುಭಾಂಶು ಶುಕ್ಲಾ ಅವರ ಅನುಭವವು ನೆರವಿಗೆ ಬರಲಿದೆ.  ‘ಆಕ್ಸಿಯಂ 4’ ಯೋಜನೆಯಲ್ಲಿ ಶುಭಾಂಶು ಶುಕ್ಲಾ ಅವರ ಪ್ರಯಾಣಕ್ಕಾಗಿ ಇಸ್ರೊ ₹500 ಕೋಟಿ ವೆಚ್ಚ ಮಾಡಿದೆ.

ಮೊದಲ ಗಗನಯಾತ್ರಿ ರಾಕೇಶ್ ಶರ್ಮಾ

ಭಾರತದ ಮೊದಲ ಗಗನಯಾತ್ರಿ ರಾಕೇಶ್ ಶರ್ಮಾ. ಅವರು ಕೂಡ ಭಾರತೀಯ ವಾಯುಸೇನೆಯಲ್ಲಿ ಪೈಲಟ್ ಆಗಿದ್ದವರೇ. ಆಗ ದೇಶದಲ್ಲಿ ಯಾವುದೇ ಗಗನಯಾನದ ಕಾರ್ಯಕ್ರಮ ಇರಲಿಲ್ಲ. ಮೇಲಾಗಿ, ಶರ್ಮಾ ಅವರಿಗೆ ಗಗನಯಾಯನ ಕೈಗೊಳ್ಳುವ ಮಹತ್ವಾಕಾಂಕ್ಷೆಯೂ ಇರಲಿಲ್ಲ. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಪ್ರಯತ್ನದ ಫಲವಾಗಿ ರಾಕೇಶ್ ಶರ್ಮಾ ಅವರು 1984ರಲ್ಲಿ ರಷ್ಯಾದ ಗಗನನೌಕೆಯಲ್ಲಿ ರಷ್ಯಾದ ಇಬ್ಬರು ಗಗನಯಾತ್ರಿಗಳೊಂದಿಗೆ ಅಂತರಿಕ್ಷಕ್ಕೆ ಹಾರಿದ್ದರು. ಅದಕ್ಕಾಗಿ ಅತ್ಯಂತ ಕಡಿಮೆ ಅವಧಿಯಲ್ಲಿ ರಷ್ಯನ್ ಭಾಷೆ ಕಲಿತು, ರಷ್ಯಾದಲ್ಲಿ ತರಬೇತಿ ಪಡೆದು, ಕಠಿಣ ದೈಹಿಕ ಹಾಗೂ ಮಾನಸಿಕ ಸಿದ್ಧತೆಗಳೊಂದಿಗೆ ಯಶಸ್ವಿಯಾಗಿ ಬಾಹ್ಯಾಕಾಶ ಯಾನ ಪೂರೈಸಿದ್ದರು. ಆಗ ಅವರಿಗೆ 35 ವರ್ಷ. ಅವರು ಭಾರತದ ಮೊದಲ ಮತ್ತು ಜಗತ್ತಿನ 128ನೇ ಗಗನಯಾತ್ರಿಯಾಗಿದ್ದರು.

ಶುಕ್ಲಾ ಮತ್ತು ತಂಡ ಮಾಡುವುದೇನು?

ಆಕ್ಸಿಯಂ–4 ಹೆಸರಿನಲ್ಲಿ ನಡೆಯುತ್ತಿರುವ ಈ ಬಾಹ್ಯಾಕಾಶ ಯಾನದಲ್ಲಿ ಅತ್ಯಂತ ಕಡಿಮೆ ಗುರುತ್ವಾಕರ್ಷಣೆ ಶಕ್ತಿ (ಮೈಕ್ರೊಗ್ರ್ಯಾವಿಟಿ) ಇರುವ ಭೂಮಿಯ ಕೆಳ ಕಕ್ಷೆಯಲ್ಲಿ ಹಲವು ದೇಶಗಳ ಸಹಭಾಗಿತ್ವದಲ್ಲಿ ವೈಜ್ಞಾನಿಕ ಅಧ್ಯಯನಗಳು ನಡೆಯಲಿವೆ. ಶುಕ್ಲಾ ಸಹಿತ ನಾಲ್ವರು ಗಗನಯಾತ್ರಿಗಳು 60 ವೈಜ್ಞಾನಿಕ ಅಧ್ಯಯನಗಳು ಹಾಗೂ ಅಮೆರಿಕ, ಭಾರತ, ಪೋಲೆಂಡ್‌, ಹಂಗರಿ, ಸೌದಿ ಅರೇಬಿಯಾ, ಬ್ರೆಜಿಲ್‌, ನೈಜೀರಿಯಾ, ಯುಎಇ, ಯುರೋಪಿನ ವಿವಿಧ ದೇಶಗಳು ಸೇರಿದಂತೆ 31 ರಾಷ್ಟ್ರಗಳಿಗೆ ಸಂಬಂಧಿಸಿದ ವೈಜ್ಞಾನಿಕ ಚಟುವಟಿಕೆಗಳನ್ನು ನಡೆಸಲಿದ್ದಾರೆ.  ಬಾಹ್ಯಾಕಾಶದಲ್ಲಿ ವೈಜ್ಞಾನಿಕ ಸಂಶೋಧನೆ ಮತ್ತು ಅಧ್ಯಯನ ನಡೆಸುವ ಭಾರತದ ಸಾಮರ್ಥ್ಯವನ್ನೂ ಈ ಯೋಜನೆ ಒರೆಗೆ ಹಚ್ಚಲಿದೆ. 

ಇಸ್ರೊ ಪ್ರಯೋಗಗಳು 

ಶುಕ್ಲಾ ಮತ್ತವರ ತಂಡವು ಭಾರತ/ಇಸ್ರೊ ದ ಒಂಬತ್ತು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಿದೆ. ಗುರುತ್ವಾಕರ್ಷಣೆ ಶಕ್ತಿ ದುರ್ಬಲವಾಗಿರುವ ವಾತಾವರಣದಲ್ಲಿ ಬೆಳೆಗಳನ್ನು ಬೆಳೆಯುವ, ಬ್ಯಾಕ್ಟೀರಿಯಾ, ಪಾಚಿಯಂತಹ ಸೂಕ್ಷ್ಮಾಣು ಜೀವಿಗಳ ಬೆಳವಣಿಗೆಗೆ ಸಂಬಂಧಿಸಿದ ಪ್ರಯೋಗಗಳನ್ನು ಕೈಗೊಳ್ಳಲಿದೆ.   

ಐಎಸ್‌ಎಸ್‌ನಲ್ಲಿ ಬಿತ್ತನೆ ಬೀಜಗಳು, ಮೊಳಕೆ:

ಬಾಹ್ಯಾಕಾಶದ ವಾತಾವರಣವು ಬಿತ್ತನೆ ಬೀಜಗಳ ಮೇಲೆ ಬೀರುವ ಪರಿಣಾಮವನ್ನು ತಿಳಿಯುವ ಉದ್ದೇಶವನ್ನು ಇಸ್ರೊ ಹೊಂದಿದೆ. ಇದಕ್ಕಾಗಿ ಆರು ಪ್ರಭೇದಗಳ ಬಿತ್ತನೆ ಬೀಜಗಳನ್ನು ಶುಕ್ಲಾ ಮತ್ತವರ ತಂಡ ಕೊಂಡುಹೋಗಿದ್ದು, ಗಗನಯಾತ್ರಿಗಳು ವಾಪಸ್‌ ಬಂದ ಮೇಲೆ ಆ ಬೀಜಗಳನ್ನು ಭೂಮಿಯಲ್ಲಿ ಬಿತ್ತನೆ ಮಾಡಿ, ಗಿಡಗಳನ್ನು ಬೆಳೆಸಿ ಅವುಗಳನ್ನು ವಿಜ್ಞಾನಿಗಳು ಪರಿಶೀಲನೆಗೆ ಒಳಪಡಿಸಲಿದ್ದಾರೆ.  ಇದರೊಂದಿಗೆ ಬಾಹ್ಯಾಕಾಶದಲ್ಲಿ ಮೊಳಕೆ ಒಡೆದ ಬೀಜಗಳ ಬೆಳವಣಿಗೆಗಳ ಬಗ್ಗೆಯೂ ಇಸ್ರೊ ಅಧ್ಯಯನ ನಡೆಸಲಿದೆ. ಭವಿಷ್ಯದಲ್ಲಿ ಅಂತರಿಕ್ಷದಲ್ಲಿ ಬೆಳೆಗಳನ್ನು ಹೇಗೆ ಬೆಳೆಯಬಹುದು ಎಂಬುದನ್ನು ತಿಳಿಯುವ ಉದ್ದೇಶವನ್ನು ಈ ಪ್ರಯೋಗಗಳು ಹೊಂದಿವೆ.

ಐಎಸ್‌ಎಸ್‌ನಲ್ಲಿ ಸಯನೋಬ್ಯಾಕ್ಟೀರಿಯಾ:

ನೀರಿನಲ್ಲಿ ಕಂಡುಬರುವ ಈ ಬ್ಯಾಕ್ಟೀರಿಯಾಗಳು ದ್ಯುತಿಸಂಶ್ಲೇಷಣೆ ಕ್ರಿಯೆ ನಡೆಸುವ ಸಾಮರ್ಥ್ಯ ಹೊಂದಿವೆ. ಬಾಹ್ಯಾಕಾಶದ ವಾತಾವರಣವು ಇವುಗಳ ಮೇಲೆ ಏನು ಪರಿಣಾಮ ಬೀರಬಹುದು ಎಂಬು‌ದನ್ನು ಅರಿಯುವುದಕ್ಕಾಗಿ ಇಸ್ರೊ ಈ ಪ್ರಯೋಗವನ್ನು ಹಮ್ಮಿಕೊಂಡಿದೆ. ಸಯನೋಬ್ಯಾಕ್ಟೀರಿಯಾದ ಎರಡು ತಳಿಗಳನ್ನು ಪರಸ್ಪರ ಹೋಲಿಕೆ ಮಾಡಿ, ಸೂಕ್ಷ್ಮ ಗುರುತ್ವದ ವಾತಾವರಣದಲ್ಲಿ ಅವುಗಳ ಬೆಳವಣಿಗೆ, ಜೀವಕೋಶಗಳ ಪ್ರತಿಕ್ರಿಯೆ ಮತ್ತು ಅವುಗಳ ಜೈವಿಕ ಚಟುವಟಿಕೆಗಳನ್ನು ಪರಿಶೀಲನೆಗೆ ವಿಜ್ಞಾನಿಗಳು ಒಳಪಡಿಸಲಿದ್ದಾರೆ. ಇದರ ಫಲಿತಾಂಶವು ಭವಿಷ್ಯದ ಬಾಹ್ಯಾಕಾಶ ನೌಕೆ/ಬಾಹ್ಯಾಕಾಶ ನಿಲ್ದಾಣದ ಜೀವ ರಕ್ಷಕ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲು ನೆರವಾಗುವ ನಿರೀಕ್ಷೆ ಇದೆ. 

ಅಂತರಿಕ್ಷದಲ್ಲಿ ಸೂಕ್ಷ್ಮಪಾಚಿ:

ಶುಕ್ಲಾ ಮತ್ತು ತಂಡವು ಬಾಹ್ಯಾಕಾಶ ನಿಲ್ದಾಣದಲ್ಲಿ ಸೂಕ್ಷ್ಮಪಾಚಿಯ (ಮೈಕ್ರೊಆಲ್ಗೆ) ಮೂರು ಪ್ರಭೇದಗಳನ್ನು ಬೆಳೆಸಲಿದ್ದಾರೆ. ಅವುಗಳ ಬೆಳವಣಿಗೆ, ವಂಶವಾಹಿ ಚಟುವಟಿಕೆ ಮತ್ತು ಚಯಾಪಚಯ ಕ್ರಿಯೆಯ ಮೇಲೆ ಶೂನ್ಯ ಗುರುತ್ವದ ಪರಿಣಾಮ ಏನು ಎಂಬುದನ್ನು ಭೂಮಿಯಲ್ಲಿ ಬೆಳೆಯುವ ಪಾಚಿಯೊಂದಿಗೆ ಹೋಲಿಸಲಿದ್ದಾರೆ. ಭವಿಷ್ಯದಲ್ಲಿ ಪಾಚಿಯನ್ನು ಬಾಹ್ಯಾಕಾಶದಲ್ಲಿ ಆಹಾರವಾಗಿ ಅಥವಾ ಇಂಧನವಾಗಿ ಅಥವಾ ಜೀವರಕ್ಷಕ ವ್ಯವಸ್ಥೆಯಲ್ಲಿ ಬಳಬಹುದು ಎಂಬುದು ವಿಜ್ಞಾನಿಗಳ ವಾದ.

ಕಂಪ್ಯೂಟರ್‌ ಬಳಕೆ ಪರಿಣಾಮ: 

ಸೂಕ್ಷ್ಮ ಗುರುತ್ವ ವಾತಾವರಣದಲ್ಲಿ ಕಂಪ್ಯೂಟರ್‌ ಪರದೆಗಳ ವೀಕ್ಷಣೆಯಿಂದ ದೇಹ ಮತ್ತು ಮನಸ್ಸಿನ ಆರೋಗ್ಯದ ಮೇಲೆ ಬೀರುವ ಪರಿಣಾಮ ಏನು ಎಂಬುದನ್ನು ಕೇಂದ್ರೀಕರಿಸಿ ಮತ್ತೊಂದು ಅಧ್ಯಯನ ನಡೆಯಲಿದೆ. ಇದರ ಫಲಿತಾಂಶವು ಮುಂದಿನ ದಿನಗಳಲ್ಲಿ ಬಾಹ್ಯಾಕಾಶದಲ್ಲಿ ಬಳಸುವ ಕಂಪ್ಯೂಟರ್‌ಗಳ ವಿನ್ಯಾಸದಲ್ಲಿ ಬದಲಾವಣೆಗೆ ಕಾರಣವಾಗಬಹುದು

ಟಾರ್ಡಿಗ್ರೇಡ್‌ಗಳ ಪ್ರಯೋಗ:

ಅತ್ಯಂತ ಕಠಿಣ ವಾತಾವರಣದಲ್ಲೂ ಜೀವಿಸುವ ಸಾಮರ್ಥ್ಯ ಹೊಂದಿರುವ,  ಟಾರ್ಡಿಗ್ರೇಡ್‌ (ಜಲ ಕರಡಿ) ಎಂದು ಕರೆಯಲಾಗುವ ಎಂಟು ಕಾಲುಗಳುಳ್ಳ ಅತ್ಯಂತ ಚಿಕ್ಕ ಪ್ರಾಣಿಯನ್ನು ಇಸ್ರೊದ ಪ್ರಯೋಗದ ಭಾಗವಾಗಿ ಗಗನಯಾನಿಗಳು ಐಎಸ್‌ಎಸ್‌ಗೆ ಹೊತ್ತೊಯ್ದಿದ್ದಾರೆ. 0.2 ಮಿ.ಮೀನಿಂದ 1.2 ಮಿ.ಮೀನಷ್ಟು ಉದ್ದವಿರುವ ಈ ಪ್ರಾಣಿಗಳು ನಿಧಾನಗತಿ ಚಲನೆಯನ್ನು ಹೊಂದಿವೆ. ಬಾಹ್ಯಾಕಾಶದ ವಾತಾವರಣದಲ್ಲಿ ಇವುಗಳು ಹೇಗೆ ಜೀವಿಸುತ್ತವೆ ಎಂಬುದನ್ನು ಇಸ್ರೊ ಅಧ್ಯಯನ ನಡೆಸಲಿದೆ

ಆಧಾರ: ಆ್ಯಕ್ಸಿಯಂ ಸ್ಪೇಸ್ ವೆಬ್‌ಸೈಟ್, ಪಿಐಬಿ, ಪಿಟಿಐ, ಸ್ಪೇಸ್‌ ಎಕ್ಸ್‌, ನಾಸಾ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.