ADVERTISEMENT

ವಾರದ ವಿಶೇಷ | ಅಪಾಯಕಾರಿ ಸಾಮಾಜಿಕ ಜಾಲತಾಣಗಳ ನಿಷೇಧ ಸೂಕ್ತ: ತಜ್ಞರ ಅಭಿಪ್ರಾಯ

16 ವರ್ಷದೊಳಗಿನವರ ಮೊಬೈಲ್‌ ಬಳಕೆ ನಿರ್ಬಂಧಿಸುವ ಪ್ರಸ್ತಾವದ ಬಗ್ಗೆ ತಜ್ಞರ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 23:30 IST
Last Updated 27 ಫೆಬ್ರುವರಿ 2026, 23:30 IST
ಕಲೆ: ಸಂತೋಷ್‌ ಸಸಿಹಿತ್ಲು
ಕಲೆ: ಸಂತೋಷ್‌ ಸಸಿಹಿತ್ಲು   
95.8 ಕೋಟಿ ಇಂಟರ್‌ನೆಟ್‌ ಬಳಕೆದಾರರಿರುವ ದೇಶ ನಮ್ಮದು. ಮೊಬೈಲ್‌ ಅನ್ನು ಸಮರ್ಥವಾಗಿ ಮತ್ತು ಸಮರ್ಪಕವಾಗಿ ಬಳಕೆ ಮಾಡುವಂತೆ, ಡಿಜಿಟಲ್ ಬಳಕೆ ಹಾಗೂ ಕಲಿಕೆ ಹೆಚ್ಚು ಸೃಜನಾತ್ಮಕವಾಗುವಂತೆ ನಾವು ಮಕ್ಕಳನ್ನು ನಿರ್ದೇಶಿಸಬೇಕಾಗಿದೆ. ಅವರ ಮೊಬೈಲ್ ಬಳಕೆ, ದೈಹಿಕ ಚಟುವಟಿಕೆ, ಸಾಮಾಜಿಕ ಸಂಪರ್ಕ, ಮೌಲ್ಯ ಶಿಕ್ಷಣ ಎಲ್ಲವನ್ನೂ ಸಮತೋಲನಗೊಳಿ ಸಬಲ್ಲಂತಹ ಪಠ್ಯಕ್ರಮ ನಮ್ಮದಾಗಬೇಕಾಗಿದೆ

ಜಗತ್ತು ಡಿಜಿಟಲೀಕರಣಗೊಂಡು ದಶಕಗಳು ಉರುಳಿವೆ. ವೈಯಕ್ತಿಕ ಗಣಕಯಂತ್ರ (personal computer) 1980ರಲ್ಲಿ ಮನೆ, ಶಾಲೆ, ವ್ಯವಹಾರಗಳನ್ನು ಪ್ರವೇಶಿಸಿತು. 2000ನೇ ಇಸವಿಯ ನಂತರದ್ದು ಮೊಬೈಲ್‌ ಫೋನ್‌ಗಳ ಕಾಲವಾಗಿ ಮಾರ್ಪಾಡಾಗಿದೆ. ಈಗ ನಾವೆಲ್ಲರೂ ಕೃತಕ ಬುದ್ಧಿಮತ್ತೆ (ಎ.ಐ) ಎಂಬ ಲೋಕವನ್ನು ಪ್ರವೇಶಿಸಿದ್ದೇವೆ. ಇಂತಹ ತಂತ್ರಜ್ಞಾನಗಳ ಉಪಯೋಗದ ಪರಮೋಚ್ಚ ಕಾಲದಲ್ಲಿ ಇಂದು ಜಗತ್ತಿನ ಆಗುಹೋಗುಗಳೇ ತಂತ್ರಜ್ಞಾನದಿಂದ ನಿಯಂತ್ರಿಸಲ್ಪಟ್ಟಿರುವಂತೆ ಭಾಸವಾಗುತ್ತಿದೆ. ಈ ಕಾಲಘಟ್ಟದಲ್ಲಿ ಮಕ್ಕಳ ಸ್ಮಾರ್ಟ್ ಫೋನ್ ಬಳಕೆಯನ್ನು ನಿರ್ಬಂಧಿಸಲು ಸಾಧ್ಯವೇ ಎನ್ನುವ ಪ್ರಶ್ನೆ ಆಶ್ಚರ್ಯ ತರಿಸುವುದು ಸಹಜ.

ಅತಿಯಾದ ಫೋನ್ ಬಳಕೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ತೊಡಕಾಗುತ್ತಿದೆ ಎನ್ನುವುದನ್ನು ಹಲವಾರು ಸಂಶೋಧನೆಗಳು ತೋರಿಸಿಕೊಟ್ಟಿವೆ. ಮಕ್ಕಳ ಏಕಾಗ್ರತೆ, ಸಂವಹನ ಕೌಶಲ, ಮಾನಸಿಕ ನೆಮ್ಮದಿ ಹಾಗೂ ದೈಹಿಕ ಚಟುವಟಿಕೆಗಳನ್ನು ಮೊಬೈಲ್‌ನ ಅತಿಬಳಕೆ ಕುಂಠಿತಗೊಳಿಸುತ್ತಿದೆ. ಮಾತ್ರವಲ್ಲ, ಮಕ್ಕಳ ವರ್ತನೆಯಲ್ಲಿನ ಸಮಸ್ಯೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಿಗುವ ತಪ್ಪು ಮಾದರಿಗಳು ಹಾಗೂ ಮಾಹಿತಿಗಳೇ ಕಾರಣವಾಗುತ್ತಿವೆ. ಆದರೆ ಈಗಿನ ಸಾಮಾಜಿಕ ಹಾಗೂ ಶೈಕ್ಷಣಿಕ ಪರಿಸ್ಥಿತಿಯಲ್ಲಿ ಯಾವುದೇ ವಯೋಮಾನದವರು ಮೊಬೈಲ್ ಬಳಸುವುದನ್ನು ಸಂಪೂರ್ಣವಾಗಿ ನಿರ್ಬಂಧಿಸುವುದು ಕಷ್ಟಸಾಧ್ಯ.

ಮೊಬೈಲ್‌ ಹಾಗೂ ಇಂಟರ್‌ನೆಟ್‌ ಬಳಕೆ ಇಂದು ಕಲಿಕೆ ಮತ್ತು ಅನುಭವ ಗಳಿಕೆಯ ಮಾಧ್ಯಮ. ಡಿಜಿಟಲ್ ಕೌಶಲ ಕಲಿಕೆಯ ಮುಖ್ಯ ಅಂಶವೇ ಇಂಟರ್‌ನೆಟ್‌ ಬಳಕೆಯ ಕಲಿಕೆ. ಇಂದು ಡಿಜಿಟಲ್‌ ಕೌಶಲ ಕಲಿಕೆಯನ್ನು ನಾವು ಶಿಕ್ಷಣದ ಭಾಗವಾಗಿ ಒಪ್ಪಿಕೊಂಡಿರುವಾಗ ಶಾಲಾ ಮಕ್ಕಳನ್ನು ಆನ್‌ಲೈನ್‌ ಬಳಕೆಯಿಂದ ನಿರ್ಬಂಧಿಸುವುದು ಸಾಧ್ಯವಿಲ್ಲ.

ADVERTISEMENT

ನಮ್ಮ ದೇಶದಲ್ಲಿ ಇಂಟರ್‌ನೆಟ್‌ ದೊರಕಿಸಿಕೊಳ್ಳುವ ಸುಲಭದ ಹಾಗೂ ನೇರ ಸಾಧ್ಯತೆ ಫೋನ್‌ಗಳ ಮೂಲಕವೇ ಆಗಿರುತ್ತದೆ. ಈ ಆಯಾಮದಲ್ಲಿ ನೋಡಿದಾಗ ಡಿಜಿಟಲ್‌ ಕೌಶಲ ಕಲಿಕೆಗೆ ಇಂಟರ್‌ನೆಟ್‌ ಬೇಕು. ಅದಕ್ಕಾಗಿ ಮೊಬೈಲ್‌ ಫೋನ್‌  ಬೇಕಾಗಿದೆ. ಇಂಟರ್‌ನೆಟ್‌ ಅನ್ನು ಸಮಾಜದ ಮುಖ್ಯ ವಾಹಿನಿಗೆ ತಂದ ಮೇಲೆ ಅದರ ಬಳಕೆಯನ್ನು ನಿರ್ಬಂಧಿಸಲು ಸಾಧ್ಯವಿಲ್ಲ. ಮಕ್ಕಳು ಮೊಬೈಲ್‌ ಬಳಸುವುದನ್ನು ಪೂರ್ಣವಾಗಿ ನಿರ್ಬಂಧಿಸುವುದಕ್ಕಿಂತ ಅದರ ಅಪಾಯಕಾರಿ ಬಳಕೆಗಳನ್ನು ತಡೆಗಟ್ಟುವುದನ್ನು ಯೋಚಿಸಿ, ಯೋಜಿಸಬೇಕಾಗಿದೆ.

ಒಂದು ಅಂಕಿಅಂಶದ ಪ್ರಕಾರ, ಜಗತ್ತಿನ ಮೂರನೇ ಎರಡರಷ್ಟು ಶಾಲಾ ಮಕ್ಕಳಿಗೆ ಇಂಟರ್‌ನೆಟ್‌ ಲಭ್ಯತೆ ಇಲ್ಲ. ಸುಮಾರು 130 ಕೋಟಿ ಶಾಲಾ ಮಕ್ಕಳಿಗೆ ಮನೆಗಳಲ್ಲಿ ಇನ್ನೂ ಇಂಟರ್‌ನೆಟ್‌ ಸೌಲಭ್ಯವಿಲ್ಲ. ತಜ್ಞರು ಇಂತಹ ಮಕ್ಕಳು ಆಧುನಿಕ ಯುಗದಲ್ಲಿ ಅಭಿವೃದ್ಧಿಯ ಅವಕಾಶಗಳಿಂದ ವಂಚಿತರಾಗಬಹುದೆನ್ನುವ ಆತಂಕವನ್ನು ತೋರ್ಪಡಿಸುತ್ತಿದ್ದಾರೆ. ಇದಕ್ಕಾಗಿ ‘Bridge the digital devide’ ಅಂದರೆ ಡಿಜಿಟಲ್ ಸೇತುಬಂಧದ ಮೂಲಕ ಎಲ್ಲಾ ವಿದ್ಯಾರ್ಥಿಗಳಿಗೂ ತಂತ್ರಜ್ಞಾನಗಳ ಸಮಾನ ಅವಕಾಶವನ್ನು ಕಲ್ಪಿಸಬೇಕು ಎಂಬುದು ಈ ತಜ್ಞರ ಅಭಿಪ್ರಾಯ.

ಹಿರಿಯರಾದ ನಾವು ಫೋನ್‌ ದುರ್ಬಳಕೆಯ ಕುರಿತು ಮಾತನಾಡಿದಷ್ಟು ಮಕ್ಕಳಿಗೆ ಅದರ ಅನುಕೂಲದ ಬಗ್ಗೆ  ಮಾತನಾಡುತ್ತಿಲ್ಲವೇನೋ ಎಂದೆ‌ನಿಸುತ್ತಿದೆ. ಮನೆಯಿಂದ ಹೊರಗೆ ದುಡಿಯುತ್ತಿರುವ, ಬೇಗನೆ ಮನೆ ಸೇರಲಾರದ ಪೋಷಕರಿಗೆ ತಮ್ಮ ಮಕ್ಕಳ ಕೈಯಲ್ಲಿ ಫೋನ್ ಇದೆ, ಎಲ್ಲಿದ್ದರೂ ಏನು ಬೇಕಿದ್ದರೂ ಫೋನ್ ಮಾಡಿ ತಿಳಿಸುತ್ತಾರೆ ಎನ್ನುವುದೇ ದೊಡ್ಡ ಧೈರ್ಯ. ಇಂದು ಪ್ರೌಢಶಾಲೆ ಪ್ರವೇಶಿಸಿದ ವಿದ್ಯಾರ್ಥಿಗಳಿಗೆ ಹಲವಾರು ಆನ್‌ಲೈನ್‌ ವೇದಿಕೆಗಳು ಕಲಿಕೆಗೆ ಅವಕಾಶ ಕಲ್ಪಿಸುತ್ತಿವೆ. ಶಾಲಾ ಶಿಕ್ಷಣದ ಜೊತೆಗೆ ಜಗತ್ತಿನ ಯಾವ ಭಾಷೆಯನ್ನು, ಯಾವ ವಿಷಯವನ್ನು ಬೇಕಾದರೂ ಶಾಸ್ತ್ರೀಯವಾಗಿ ಕಲಿಯಲು ವಿದ್ಯಾರ್ಥಿಗೆ ಅವಕಾಶವಿದೆ. ಇಂತಹ ಕಲಿಕೆಗೆ ವಿದ್ಯಾರ್ಥಿಯು ತನ್ನ ದಾಖಲಾತಿಯನ್ನು ಸ್ವತಃ ಮಾಡಿಕೊಳ್ಳಲು ಸ್ಮಾರ್ಟ್‌ಫೋನ್‌ಗಳು ನೆರವಾಗಿವೆ.

ನಾವು ನಮ್ಮ ಮಕ್ಕಳನ್ನು ಅಂಗಡಿಗೆ ಕಳುಹಿಸಿ ಅಗತ್ಯ ವಸ್ತುಗಳನ್ನು ಖರೀದಿಸಿ ಸ್ವತಂತ್ರವಾಗಿ ಬರಲು ತಿಳಿಸುವುದು ಒಂದು ಜೀವನ ಕೌಶಲ ತರಬೇತಿ. ಇಂದು ಎಲ್ಲವೂ ಆನ್‌ಲೈನ್‌ ಪಾವತಿ ಮೂಲಕವೇ ನಡೆಯುತ್ತಿರಬೇಕಾದರೆ ಮಕ್ಕಳ ಕೈಗೆ ಫೋನ್‌ ಕೊಡದೇ ಇರಲು ಸಾಧ್ಯವೇ? ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಣ ಹಂತದಲ್ಲಿ ಡಿಜಿಟಲ್‌ ಕೌಶಲ ಕಲಿಯುವುದು ಇಂದಿನ ಯುಗದಲ್ಲಿ ಭವಿಷ್ಯದ ಔದ್ಯೋಗಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಜೀವನದ ಬುನಾದಿ ಎಂದು ತಜ್ಞರು ಗುರುತಿಸಿರುತ್ತಾರೆ.

ಇಂದು ಮಕ್ಕಳ ಶಿಕ್ಷಣವು ಮನೆ, ಶಾಲೆ ಮಾತ್ರವಲ್ಲದೆ ಫೋನ್‌ ಅಥವಾ ಅಂತರ್ಜಾಲದಿಂದಲೂ ನಡೆಯುತ್ತಿದೆ. ಇಂದು ಮಕ್ಕಳ ಕೈಯಲ್ಲಿ ಫೋನ್‌ ಎಂಬುದು ಒಂದು ‘ಸಾಧನ’ ಎಂದಷ್ಟೇ ಪರಿಗಣಿಸಿ ಬಳಕೆಯನ್ನು ನಿರ್ಬಂಧಿಸುವುದು ಪೋಷಕರಿಗೆ, ಶಿಕ್ಷಕರಿಗೆ, ಶಿಕ್ಷಣ ಸಂಸ್ಥೆಗಳಿಗೆ ತೊಂದರೆಯನ್ನು ಉಂಟುಮಾಡುತ್ತದೆ. ಮಾತ್ರವಲ್ಲ ಮಕ್ಕಳ ಕಲಿಕೆ, ಅಭಿವ್ಯಕ್ತಿ, ರಕ್ಷಣೆ ಮತ್ತು ಅಭಿವೃದ್ಧಿಯ ಅತ್ಯುತ್ತಮ ಹಾಗೂ ಸುಲಭದ ದಾರಿ ಒಂದನ್ನು ನಾವು ಮುಚ್ಚಿದಂತಾಗುತ್ತದೆ.

16 ವರ್ಷದೊಳಗಿನ ಮಕ್ಕಳು ಇಂಟರ್‌ನೆಟ್‌ ಹಾಗೂ ಫೋನ್‌ ಬಳಸಲೇಬಾರದೆಂದು ನಿರ್ಬಂಧ ಹೇರಿದಾಗ ಇವೆಲ್ಲದರ ಅತಿ ಹೆಚ್ಚು ಪರಿಚಯವಿರುವ ಈಗಿನ ಮಕ್ಕಳು ಇದರ ಬಳಕೆಗಾಗಿ ತಪ್ಪು ದಾರಿ, ತಪ್ಪು ಮಾಹಿತಿಗಳ ಮೊರೆ ಹೋಗಿ ಅಪಾಯವೇ ಹೆಚ್ಚಾಗಬಹುದೇನೋ? 

ಫೋನ್‌ ಹಾಗೂ ಇಂಟರ್‌ನೆಟ್‌ ಬಳಕೆಯಲ್ಲಿ ನಾವು ಬಹಳ ಮುಂದಿದ್ದೇವೆ. ಸುಮಾರು 95.8 ಕೋಟಿ ಸಕ್ರಿಯ ಇಂಟರ್‌ನೆಟ್‌ ಬಳಕೆದಾರರಿರುವ ದೇಶ ನಮ್ಮದು. ಇಂಥದರಲ್ಲಿ ನಾವು ಇಂದು ಮಕ್ಕಳು ಮೊಬೈಲ್‌ ಫೋನ್‌ ಅನ್ನು ಸಮರ್ಥ ಹಾಗೂ ಸಮರ್ಪಕವಾಗಿ ಬಳಕೆ ಮಾಡುವಂತೆ, ಅವರ ಡಿಜಿಟಲ್ ಬಳಕೆ ಹಾಗೂ ಕಲಿಕೆ ಹೆಚ್ಚು ಸೃಜನಾತ್ಮಕವಾಗುವಂತೆ ನಿರ್ದೇಶಿಸಬೇಕಾಗಿದೆ. ಅವರ ಮೊಬೈಲ್ ಬಳಕೆ ಹಾಗೂ ದೈಹಿಕ ಚಟುವಟಿಕೆ, ಸಾಮಾಜಿಕ ಸಂಪರ್ಕ, ಮೌಲ್ಯ ಶಿಕ್ಷಣ ಎಲ್ಲವನ್ನೂ ಸಮತೋಲನಗೊಳಿಸಬಲ್ಲಂತಹ ಪಠ್ಯಕ್ರಮ ನಮ್ಮದಾಗಬೇಕಾಗಿದೆ. ಅಪಾಯಕಾರಿ ಸಾಮಾಜಿಕ ಜಾಲತಾಣಗಳ ಸಂಪೂರ್ಣ ನಿಷೇಧ ಸರ್ಕಾರದ ಒಂದು ಮುಖ್ಯ ಆದ್ಯತೆ ಆಗಬೇಕಾಗಿದೆ.

ಪ್ರತಿ ಶಾಲೆಯಲ್ಲೂ ಡಿಜಿಟಲ್‌ ಸಂರಕ್ಷಣೆಯ ನಿಯಮಾವಳಿಗಳು, ಡಿಜಿಟಲ್‌ ಹಾಗೂ ಸೈಬರ್‌ ನಿಯಮಗಳು ಹಾಗೂ ರಕ್ಷಣಾ ತಂತ್ರಗಳ ಅರಿವು ಮೂಡಿಸುವ ಕಾರ್ಯಕ್ರಮಗಳು ಕಡ್ಡಾಯವಾಗಿ ಜಾರಿಯಾಗಬೇಕು. ಸರ್ಕಾರ ಹಾಗೂ ಖಾಸಗಿ ಶಾಲೆಗಳಲ್ಲಿ ಆಪ್ತ ಸಮಾಲೋಚನಾ ಕೇಂದ್ರಗಳು ಇರಲೇಬೇಕು. ‌ಎಲ್ಲಕ್ಕಿಂತ ಮುಖ್ಯವಾಗಿ ಹಿರಿಯರಾದ ನಾವು ನಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಆರೋಗ್ಯಪೂರ್ಣ ಮಾಹಿತಿ, ಸೃಜನಾತ್ಮಕ ವಿಚಾರ ವಿನಿಮಯ, ಸಂವಿಧಾನಬದ್ಧ ನಡವಳಿಕೆಯ ಮೂಲಕ ನಮ್ಮ ಮಕ್ಕಳಿಗೆ ಅವರ ಭವಿಷ್ಯಕ್ಕೆ ಬೇಕಾದ ಅನುಭವವನ್ನು ನೀಡಲು ಬದ್ಧರಾಗಬೇಕಾಗಿದೆ.

ಇಂದು ಫೋನ್‌ ಹಾಗೂ ಇಂಟರ್‌ನೆಟ್‌ ಬಳಕೆಯನ್ನು ಯಾವ ವಯೋಮಾನದವರಿಗೂ ನಿಷೇಧಿಸಲಾಗಲಿ, ನಿರ್ಬಂಧಿಸಲಾಗಲಿ ಸಾಧ್ಯವೇ ಇಲ್ಲ. ಬದಲಾಗಿ ಮಕ್ಕಳ ಬಳಕೆಗೆ ಸಂಬಂಧಿಸಿದಂತೆ ಸೂಕ್ತ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್‌ಒಪಿ), ಅಪಾಯಕಾರಿ ಜಾಲತಾಣಗಳ ನಿಷೇಧ, ಸೃಜನಾತ್ಮಕ ಹಾಗೂ ಶೈಕ್ಷಣಿಕ ಬಳಕೆಗೆ ಉತ್ತೇಜನ ನೀಡುವುದು ಮಕ್ಕಳ ಅಭಿವೃದ್ಧಿಯ ಒಂದು ಮುಖವಾದರೆ, ದೈಹಿಕ ಆಟೋಟಗಳು, ಸೂಕ್ತ ಮನರಂಜನೆ, ಉತ್ತಮ ಸಾಮಾಜಿಕ ಜೀವನಕ್ಕೆ ಅವಕಾಶ ಇವುಗಳು ಮಕ್ಕಳ ಅಭಿವೃದ್ಧಿಗೆ ಬೇಕಾದ ಇನ್ನೊಂದು ಮುಖ ಎನ್ನಬಹುದು.

ಡಿಜಿಟಲ್‌ ತಂತ್ರಜ್ಞಾನದ ಕೊಡುಗೆ

ಭಾರತೀಯ ಎ.ಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ (ಇಂಡಿಯನ್‌ ಎ.ಐ ಇಂಪ್ಯಾಕ್ಟ್‌ ಸಮಿಟ್ -2026) ರಣವೀರ್‌ ಸಚದೇವ್‌ ಎನ್ನುವ 8 ವರ್ಷದ ಪೋರನೊಬ್ಬ ‘ಭಾರತೀಯ ತತ್ವಶಾಸ್ತ್ರ ಹಾಗೂ ತಂತ್ರಜ್ಞಾನ’ ಎಂಬ ವಿಷಯದ ಮೇಲೆ ನಿರರ್ಗಳವಾಗಿ ಮಾತನಾಡಿದ್ದು ಸುದ್ದಿಯಾಗಿತ್ತು. ಅದೇ ರೀತಿ 16 ವರ್ಷದ ರಾಹುಲ್‌ ಜಾನ್‌ ಆಜು ಎಂಬ ಕೇರಳದ ಹುಡುಗ ತನ್ನದೇ ಎಐ ಕಂಪನಿಯನ್ನು ಪ್ರಾರಂಭಿಸಿದ್ದ, ಇದನ್ನು ನೋಡಿ ಎಐ ಲೋಕದ ತಂತ್ರಜ್ಞರೇ ಬೆರಗುಗೊಂಡಿದ್ದರು.

ಆತ್ಮೀಯರಾದ ತುಮಕೂರಿನ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ವಾಣಿ ಅವರು ಹೇಳುವಂತೆ ಸ್ವಯಂ ಸೇವಾ ಸಂಸ್ಥೆಯೊಂದು ಅವರ ವಿದ್ಯಾರ್ಥಿಗಳಿಗೆ ಔದ್ಯೋಗಿಕ ಮಾಹಿತಿ ಕಾರ್ಯಾಗಾರವನ್ನು ನಡೆಸಿ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಗಳನ್ನು ಪ್ರಸ್ತುತಪಡಿಸುವ ಚಟುವಟಿಕೆಯನ್ನು ಏರ್ಪಡಿಸಿತ್ತು. ಹಾಗೂ ವಿದ್ಯಾರ್ಥಿಗಳು ಇಂಟರ್‌ನೆಟ್‌ ಬಳಸಿ ಅತ್ಯುತ್ತಮ ಪ್ರಾತ್ಯಕ್ಷಿಕೆಗಳನ್ನು ತಯಾರಿಸಿದ್ದರು.  

ವಿದ್ಯಾರ್ಥಿಗಳು ಜಾಲತಾಣಗಳನ್ನು ಜಾಲಾಡಿ ಹೋಟೆಲ್‌ ಮ್ಯಾನೇಜ್ಮೆಂಟ್, ವಿವಿಧ ಸ್ವಯಂ ಉದ್ಯೋಗಗಳು, ಮಾರ್ಕೆಟಿಂಗ್‌ ಕ್ಷೇತ್ರ ಇತ್ಯಾದಿಗಳ ಕುರಿತು ಮಾಹಿತಿ ಕಲೆ ಹಾಕಿದ್ದಲ್ಲದೆ, ಪಿಪಿಟಿ ತಯಾರಿಸಿ ಸಮರ್ಥವಾಗಿ ವಿಷಯ ಮಂಡಿಸಿದ್ದಾಗಿ ಹೇಳಿದ್ದು ನನಗೂ ಅಚ್ಚರಿಯ ವಿಷಯ. ಮಕ್ಕಳ ಸಾಧನೆಗಳಿಗೆ, ಚುರುಕುತನಕ್ಕೆ ಡಿಜಿಟಲ್ ಜ್ಞಾನ ಕೊಡುತ್ತಿರುವ ಕೊಡುಗೆ ನಾವು ಯಾರು ಅಲ್ಲಗಳೆಯುವಂತಿಲ್ಲ.

ಲೇಖಕಿ: ಶಿವಮೊಗ್ಗದ ಕಟೀಲ್‌ ಅಶೋಕ್‌ ಪೈ ಸ್ಮಾರಕ ಕಾಲೇಜಿನ ಪ್ರಾಂಶುಪಾಲರು

ಡಾ.ಸಂಧ್ಯಾ ಕಾವೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.