
ಮದುರೆ ಬಳಿ ಇರುವ ತಿರುಪರನ್‌ಕುಂದ್ರಂ ಹಲವು ಧರ್ಮಗಳ ಪವಿತ್ರ ಸ್ಥಳವಾಗಿ, ಯುದ್ಧಭೂಮಿಯಾಗಿ, ದೇವರ ನೆಲೆಯಾಗಿ, ಸ್ಮಾರಕವಾಗಿ ಪ್ರಸಿದ್ಧವಾಗಿದೆ. ತಮಿಳುನಾಡಿನ ಹಿಂದೂಗಳ ಆರಾಧ್ಯ ದೈವವಾದ ಮುರುಗನ ದೇವಾಲಯ (ಸುಬ್ರಹ್ಮಣ್ಯ ಸ್ವಾಮಿ) ಇಲ್ಲಿನ ಬೆಟ್ಟದ ಬುಡದಲ್ಲಿದೆ. ರಾಜ್ಯದಲ್ಲಿರುವ ಮುರುಗನ ಪವಿತ್ರವಾದ ಆರು ಆಲಯಗಳಲ್ಲಿ ಇದೂ ಒಂದು. ಇದಕ್ಕೆ ರಾಜ್ಯದ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯಲ್ಲಿ ಮುಖ್ಯ ಸ್ಥಾನವಿದೆ. ತಮಿಳಿನ ಭಕ್ತಿ ಸಾಹಿತ್ಯ ಮತ್ತು ದೇವರ ಆರಾಧನೆಗಳಲ್ಲಿ ಮುರುಗನ ವಿವಾಹದ ಉಲ್ಲೇಖ ಇದ್ದು, ಅದು ಈ ಸ್ಥಳದೊಂದಿಗೆ ಬೆಸೆದುಕೊಂಡಿದೆ. ಸಂಗಂ ಕಾಲದ ಪಠ್ಯಗಳಲ್ಲಿಯೂ ದೇವಾಲಯದ ಪ್ರಸ್ತಾಪವಿದ್ದು, ಅದಕ್ಕೆ ಎರಡು ಸಾವಿರ ವರ್ಷಗಳ ಪ್ರಾಚೀನತೆ ಇದೆ ಎಂದು ವಿದ್ವಾಂಸರು ನಿರ್ಧರಿಸಿದ್ದಾರೆ. ಎಂಟನೇ ಶತಮಾನದಲ್ಲಿ ಪಾಂಡ್ಯ ದೊರೆಗಳು ಕಲ್ಲಿನಲ್ಲಿ ಶಿವ, ಪಾರ್ವತಿ, ಮುರುಗನ ಮೂರ್ತಿಗಳನ್ನು ಕೆತ್ತಿಸಿದರು ಎನ್ನಲಾಗಿದೆ. ಇಲ್ಲಿ ಒಂದೇ ಸ್ಥಳದಲ್ಲಿ ಹಲವು ದೇವರ ಆಲಯಗಳಿದ್ದು, ಪ್ರಾಚೀನ ಕಾಲದಿಂದ ವಿವಿಧ ಕಾಲಘಟ್ಟಗಳಲ್ಲಿ ಅವು ನಿರ್ಮಾಣಗೊಂಡಿವೆ.
ಪುರಾತತ್ವ ಇಲಾಖೆಯು ಇಲ್ಲಿನ ಧಾರ್ಮಿಕ ಕೇಂದ್ರಗಳಿಗೆ 2,300 ವರ್ಷಗಳ ಇತಿಹಾಸವಿದೆ ಎಂದು ಗುರುತಿಸಿದೆ. ದೇವಾಲಯ ಇಲ್ಲಿ ನಿರ್ಮಾಣವಾಗುವುದಕ್ಕೆ ಮುಂಚೆಯೇ ಜೈನ ಸನ್ಯಾಸಿಗಳು ಬೆಟ್ಟದ ಇಳಿಜಾರಿನ ಕಲ್ಲುಗಳ ಮೇಲೆ ಆಕೃತಿಗಳನ್ನು, ಶಾಸನಗಳನ್ನು ಕೆತ್ತಿದ್ದರು ಎಂದು ಇಲಾಖೆ ಹೇಳಿದೆ.
ದರ್ಗಾ ನಿರ್ಮಾಣ
13–14ನೇ ಶತಮಾನದಲ್ಲಿ ತಿರುಪರನ್‌ಕುಂದ್ರಂನಲ್ಲಿ ಒಂದಷ್ಟು ಬದಲಾವಣೆಗಳು ಘಟಿಸಿದವು. ಅಲ್ಲಾವುದ್ದೀನ್ ಖಿಲ್ಜಿಯ ಆಕ್ರಮಣದಿಂದ ಪಾರಾಗಲು ಇಲ್ಲಿಗೆ ಬಂದ ಮದುರೆ ಸುಲ್ತಾನರ ವಂಶದ ಕೊನೆಯ ರಾಜ ಸಿಕಂದರ್ ಬಾದ್‌ಶಾ, ಇಲ್ಲಿಯೇ ಅಸುನೀಗಿದರು. ಕಾಲಾಂತರದಲ್ಲಿ ಅವರು ಸೂಫಿ ಸಂತನೆಂದು ಹೆಸರಾಗುವುದಲ್ಲದೇ, ಅವರ ಸಮಾಧಿಯು ಸಿಕಂದರ್ ಬಾದ್‌ಶಾ ದರ್ಗಾ ಎಂದು ಪ್ರಸಿದ್ಧಿ ಪಡೆಯಿತು. 17ನೇ ಶತಮಾನದಲ್ಲಿ ಇಲ್ಲಿ ಧಾರ್ಮಿಕ ಕಟ್ಟಡಗಳ ನಿರ್ಮಾಣವಾಯಿತು. ಪಾಂಡ್ಯ ದೊರೆಯೇ ಇಲ್ಲಿ ಮುಸ್ಲಿಮರ ಪ್ರಾರ್ಥನೆಗೆ ಸ್ಥಳ ನೀಡಿದರು ಎಂದು ಕೆಲವು ಇತಿಹಾಸಕಾರರು ಹೇಳಿರುವುದಾಗಿ ವರದಿಯಾಗಿದೆ.
ಹಲವು ಶತಮಾನಗಳಿಂದಲೂ ತಿರುಪರನ್‌ಕುಂದ್ರಂನಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ತಮ್ಮ ದೇವರು/ದರ್ಗಾಕ್ಕೆ ಸಂಬಂಧಿಸಿದ ಆಚರಣೆಗಳನ್ನು ಸಾಮರಸ್ಯದಿಂದ ಆಚರಿಸಿಕೊಂಡು ಬರುತ್ತಿದ್ದರು. ಆದರೆ, ಇತ್ತೀಚೆಗೆ ಕೆಲವರು ಇಲ್ಲಿನ ಆಚರಣೆಗಳ ಬಗ್ಗೆ ಹಲವು ಆಕ್ಷೇಪಗಳನ್ನು ಎತ್ತಿದ್ದಾರೆ. ನ್ಯಾಯಾಲಯ ಈ ಸಂಬಂಧ ಆದೇಶ ನೀಡಿದೆ. ಡಿಎಂಕೆ, ಬಿಜೆಪಿ, ಹಿಂದೂ ಕಾರ್ಯಕರ್ತರು, ಮುಸ್ಲಿಂ ಧರ್ಮದ ಪ್ರತಿನಿಧಿಗಳು ಎಲ್ಲರೂ ತಮ್ಮ ತಮ್ಮ ನೆಲೆಯಿಂದ ವಾದ ಮಂಡಿಸುತ್ತಿದ್ದಾರೆ. ಆದರೆ, ಸ್ಥಳೀಯರ ಪಾಲಿಗೆ ಇದು ವೈವಿಧ್ಯಮಯವಾದ ಧಾರ್ಮಿಕ ಪರಂಪರೆಯ ಭಾಗವಾಗಿದೆ. ತಿರುಪರನ್‌ಕುಂದ್ರಂ ಎಂದೂ ಯಾವುದೇ ಒಂದು ಧರ್ಮದ ಸ್ವತ್ತಾಗಿರಲಿಲ್ಲ ಎನ್ನುವುದು ಅವರ ಅಭಿಪ್ರಾಯ.
ದೀಪ ಬೆಳಗುತ್ತಿದ್ದುದು ಎಲ್ಲಿ?
ಕಾರ್ತಿಕ ದೀಪೋತ್ಸವದ ಸಂದರ್ಭದಲ್ಲಿ ಬೆಟ್ಟದ ಮೇಲಿರುವ ಕಲ್ಲಿನ ದೀಪಸ್ತಂಭದಲ್ಲಿ ದೀಪ ಬೆಳಗಬೇಕು ಎಂಬುದು ಅರ್ಜಿದಾರ ರಾಮ ರವಿಕುಮಾರ್, ಬಲಪಂಥೀಯ ಸಂಘಟನೆಗಳ ಪ್ರತಿನಿಧಿಗಳ ಈಗಿನ ಬೇಡಿಕೆ. ಹೈಕೋರ್ಟ್‌ನ ಏಕ ಸದಸ್ಯ ಪೀಠ ಮತ್ತು ವಿಭಾಗೀಯ ಪೀಠಗಳು ಬೆಟ್ಟದ ಮೇಲೆಯೇ ದೀಪ ಬೆಳಗುವಂತೆ ನಿರ್ದೇಶನ ನೀಡಿವೆ. ಆದರೆ, ಇತ್ತೀಚಿನ ದಶಕಗಳಲ್ಲಿ ಕಾರ್ತಿಕ ದೀಪವನ್ನು ಬೆಟ್ಟದ ಮೇಲೆ ಉರಿಸಿದ ಉದಾಹರಣೆ ಇಲ್ಲ. ಶತಮಾನದಿಂದಲೂ ಬೆಟ್ಟದ ದಾರಿ ಮಧ್ಯೆ ಇರುವ ಗಣೇಶ ದೇವಾಲಯದ (ಉಚ್ಚಿ ಪಿಳ್ಳಯಾರ್–ಕೊವಿಲ್) ಸಮೀಪ ಕಾರ್ತಿಕ ದೀಪವನ್ನು ಬೆಳಗಲಾಗುತ್ತದೆ. ಮದ್ರಾಸ್ ಹೈಕೋರ್ಟ್‌ನ ಮದುರೆ ಪೀಠವು ಡಿಸೆಂಬರ್ 3ರಂದು ಬೆಟ್ಟದ ತುದಿಯಲ್ಲಿರುವ ಸ್ತಂಭದಲ್ಲಿ ದೀಪ ಬೆಳಗುವಂತೆ ಸರ್ಕಾರಕ್ಕೆ ಸೂಚಿಸಿದ್ದರೂ ಸರ್ಕಾರ ಹಿಂದೆ ನಡೆಯುತ್ತಿದ್ದಂತೆ ಗಣೇಶ ದೇವಾಲಯದ ಬಳಿಯಲ್ಲಿರುವ ನಿಗದಿತ ಜಾಗದಲ್ಲೇ ದೀಪ ಬೆಳಗಿಸಿತ್ತು.
ರಾಜಕೀಯ ಪ್ರವೇಶ; ಬಿಗಡಾಯಿಸಿದ ಬಿಕ್ಕಟ್ಟು
ಇತಿಹಾಸದಲ್ಲಿ ಮೊದಲ ಬಾರಿಗೆ 1923ರಲ್ಲಿ ಬೆಟ್ಟದ ಮಾಲೀಕತ್ವದ ಬಗ್ಗೆ ಚರ್ಚೆ ನಡೆದಿತ್ತು. ಬ್ರಿಟಿಷ್ ಆಡಳಿತದಲ್ಲಿದ್ದ ನ್ಯಾಯಾಲಯವು ಕೃಷಿ ಮಾಡಲಾಗುತ್ತಿರುವ ಜಾಗ ಮತ್ತು ದರ್ಗಾ ಇರುವ ಪ್ರದೇಶ ಬಿಟ್ಟು ಉಳಿದ ಜಾಗ ಮುರುಗನ ದೇವಾಲಯಕ್ಕೆ ಸೇರಿದ್ದು ಎಂದು ಆದೇಶ ನೀಡುವ ಮೂಲಕ ಆ ಚರ್ಚೆಗೆ ಇತಿಶ್ರೀ ಹಾಡಿತ್ತು.
2025ರ ಫೆಬ್ರುವರಿಯವರೆಗೂ ಬೆಟ್ಟ ಹಾಗೂ ಅಲ್ಲಿ ನಡೆಯುತ್ತಿದ್ದ ಸಾಂಪ್ರದಾಯಿಕ ವಿಧಿ ವಿಧಾನಗಳ ಬಗ್ಗೆ ಯಾವುದೇ ತಕರಾರು ಇರಲಿಲ್ಲ. ಫೆಬ್ರುವರಿ ತಿಂಗಳಲ್ಲಿ ಕೆಲವು ಮುಸ್ಲಿಂ ಸಂಘಟನೆಗಳು ಈ ಬೆಟ್ಟವನ್ನು ‘ಸಿಕಂದರ್ ಮಲೆ’ ಎಂದು ಮರುನಾಮಕರಣ ಮಾಡಬೇಕು ಎಂದು ಒತ್ತಾಯಿಸಿದವು. ಇದಕ್ಕೆ ಬಲಪಂಥೀಯ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದವು. ಬೆಟ್ಟದ ತುದಿಯಲ್ಲಿ ಜನರು ಮಾಂಸಾಹಾರ ಸೇವನೆ ಮಾಡುತ್ತಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿತು.
ಇದೇ ವೇಳೆ ವಿವಾದಕ್ಕೆ ರಾಜಕೀಯವೂ ಪ್ರವೇಶಿಸಿತು. ಬೆಟ್ಟದ ಮರುನಾಮಕರಣ ಖಂಡಿಸಿ ನಡೆದ (ಫೆ.4ರಂದು) ಪ್ರತಿಭಟನೆಯಲ್ಲಿ ಮಾತನಾಡಿದ್ದ ಬಿಜೆಪಿ ಮುಖಂಡ ರಾಜಾ ತಿರುಪರನ್‌ಕುಂದ್ರಂ ಬೆಟ್ಟವನ್ನು ‘ದಕ್ಷಿಣದ ಅಯೋಧ್ಯೆ’ ಎಂದು ಕರೆದರು. ಬಿಜೆಪಿಯ ಕೆ.ಅಣ್ಣಾಮಲೆ ಮತ್ತು ರಾಮನಾಥಪುರಂ ಸಂಸದ ನವಾಜ್ ಖನಿ ನಡುವೆ ವಾಕ್ಸಮರವೂ ನಡೆದಿತ್ತು.
ನಂತರ ಪ್ರತಿಭಟನೆ, ವಿರೋಧ ತಣ್ಣಗಾದಂತೆ ಕಂಡರೂ ಜೂನ್‌ನಲ್ಲಿ ಮದುರೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಮುರುಗ ಸಮ್ಮೇಳನದಲ್ಲಿ ಮತ್ತೆ ಈ ವಿಚಾರ ಪ್ರಸ್ತಾಪವಾಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಿಎಂಕೆ ಸರ್ಕಾರವು ಬೆಟ್ಟದ ಮರುನಾಮಕರಣ ಬೆಂಬಲಿಸುತ್ತಿದೆ ಎಂದು ಅಲ್ಲಿ ಆರೋಪಿಸಿದ್ದರು.
ಬೆಟ್ಟದ ಮೇಲಿರುವ ದರ್ಗಾದಲ್ಲಿ ಪ್ರಾಣಿ ಬಲಿ ಕೊಡುತ್ತಿರುವುದಕ್ಕೆ ಹಿಂದೂ ಸಂಘಟನೆಗಳು ಆಕ್ಷೇಪ ಎತ್ತುವ ಮೂಲಕ ಮತ್ತೆ ವಿವಾದ ಮುನ್ನೆಲೆಗೆ ಬಂತು. ಅಕ್ಟೋಬರ್‌ನಲ್ಲಿ ಹೈಕೋರ್ಟ್, ಪ್ರಾಣಿ ಬಲಿ ಕೊಡುವುದನ್ನು ನಿರ್ಬಂಧಿಸಿತು.
ಡಿಸೆಂಬರ್‌ನಲ್ಲಿ ಹಿಂದೂ ಕಾರ್ಯಕರ್ತ, ವಕೀಲ ರಾಮ ರವಿಕುಮಾರ್ ಎಂಬವರು ಬೆಟ್ಟದ ಮೇಲಿರುವ ದೀಪಸ್ತಂಭದಲ್ಲಿ ಕಾರ್ತಿಕ ಉತ್ಸವದಲ್ಲಿ ದೀಪ ಬೆಳಗಿಸಲು ಅವಕಾಶ ನೀಡಬೇಕು ಎಂದು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವುದರೊಂದಿಗೆ ವಿವಾದ ಮತ್ತೊಂದು ಮಜಲಿಗೆ ತೆರೆದುಕೊಂಡಿತು.
ಡಿಸೆಂಬರ್‌ನಲ್ಲಿ ತಿರುಚಿರಾಪಲ್ಲಿಯಲ್ಲಿ ನಡೆದ ಆರ್‌ಎಸ್‌ಎಸ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅದರ ಮುಖ್ಯಸ್ಥ ಮೋಹನ್ ಭಾಗವತ್ ಕೂಡ ಈ ವಿಚಾರದ ಬಗ್ಗೆ ಮಾತನಾಡಿದ್ದರು. ‘ಈ ವಿವಾದದಲ್ಲಿ ತಮಗೆ ಬೇಕಾದ ಫಲಿತಾಂಶವನ್ನು ಪಡೆಯಲು ತಮಿಳುನಾಡಿನ ಜಾಗೃತ ಹಿಂದೂಗಳು ಸಾಕು. ಒಂದು ವೇಳೆ ಅಗತ್ಯಬಿದ್ದರೆ ಮಧ್ಯಪ್ರವೇಶಿಸುವ ಬಗ್ಗೆ ಸಂಘ ಪರಿಗಣಿಸಲಿದೆ’ ಎಂದು ಹೇಳಿದ್ದರು.
‘ಬಿಜೆಪಿಯು ರಾಜ್ಯದಲ್ಲಿ ಧಾರ್ಮಿಕ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಲು ಹೊರಟಿದೆ. ಆರ್‌ಎಸ್‌ಎಸ್ ಮತ್ತು ಬಿಜೆಪಿಯು ಉತ್ತರ ಭಾರತದ ಹಲವು ಕಡೆಗಳಲ್ಲಿ ಇದೇ ರೀತಿ ಮಾಡಿದೆ’ ಎಂದು ಡಿಎಂಕೆ ಹೇಳಿದೆ.
ತೀರ್ಪಿಗೆ ಅಸಮಾಧಾನ
ನ್ಯಾಯಮೂರ್ತಿ ಜಿ.ಆರ್.ಸ್ವಾಮಿನಾಥನ್ ನೇತೃತ್ವದ ಏಕಸದಸ್ಯ ಪೀಠವು ನೀಡಿದ್ದ ತೀರ್ಪು (ಡಿ.3ರಂದು ಬೆಟ್ಟದ ಮೇಲೆ ದರ್ಗಾದ ಬಳಿ ಇರುವ ಕಲ್ಲಿನ ದೀಪಸ್ತಂಭದಲ್ಲಿ ದೀಪ ಬೆಳಗಿಸಬೇಕು) ಡಿಎಂಕೆ ನೇತೃತ್ವದ ಸರ್ಕಾರಕ್ಕೆ ಪಥ್ಯವಾಗಿರಲಿಲ್ಲ. ದೀಪಸ್ತಂಭ ಇರುವ ಜಾಗ ದೇವಾಲಯಕ್ಕೆ ಸೇರಿರುವುದರಿಂದ ಅಲ್ಲಿ ದೀಪ ಬೆಳಗಿಸಿ ಎಂದು ಅವರು ಹೇಳಿದ್ದರು. ಅರ್ಜಿದಾರರಿಗೆ ಭದ್ರತೆ ಒದಗಿಸುವಂತೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೂ ಅವರು ಸೂಚಿಸಿದ್ದರು. ಇದು ಕೂಡ ಡಿಎಂಕೆ ಸರ್ಕಾರವನ್ನು ಕೆರಳಿಸಿತ್ತು.
ಈ ತೀರ್ಪನ್ನು ಸರ್ಕಾರ ಪಾಲಿಸಿರಲಿಲ್ಲ. ನ್ಯಾಯಮೂರ್ತಿ ಸ್ವಾಮಿನಾಥನ್ ಅವರು ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಿದ್ದರು. ರಾಜ್ಯ ಸರ್ಕಾರವು ನ್ಯಾಯಮೂರ್ತಿಯವರ ತೀರ್ಪಿನ ವಿರುದ್ಧ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.
ವಾಗ್ದಂಡನೆಗೆ ನೋಟಿಸ್
ನ್ಯಾಯಮೂರ್ತಿ ಸ್ವಾಮಿನಾಥನ್ ಅವರ ನಿಲುವು ನ್ಯಾಯಾಂಗದ ನಿಷ್ಪಕ್ಷಪಾತ ಧೋರಣೆ, ಪಾರದರ್ಶಕತೆ ಮತ್ತು ಜಾತ್ಯತೀತ ನಿಲುವುಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಆಕ್ಷೇಪಿಸಿದ್ದ ಡಿಎಂಕೆಯನ್ನೊಳಗೊಂಡ ಇಂಡಿಯಾ ಕೂಟದ ಸಂಸದರು ಲೋಕಸಭೆಯಲ್ಲಿ ಅವರ ವಿರುದ್ಧ ವಾಗ್ದಂಡನೆಗೆ ಮನವಿಯನ್ನೂ ಸಲ್ಲಿಸಿದ್ದರು. ಈಗ ಮದ್ರಾಸ್ ಹೈಕೋರ್ಟ್‌ನ ಮದುರೆ ಪೀಠದ ಇಬ್ಬರು ನ್ಯಾಯಮೂರ್ತಿಗಳ ನ್ಯಾಯಪೀಠವು ಏಕಸದಸ್ಯ ಪೀಠದ ತೀರ್ಪನ್ನು ಎತ್ತಿ ಹಿಡಿದಿದೆ. ಇದರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಯಾರಿದು ಸಿಕಂದರ್ ಬಾದ್‌ಶಾ?
ಮದುರೆಯನ್ನು ಆಳುತ್ತಿದ್ದ ಸುಲ್ತಾನರ ವಂಶದ ಕೊನೆಯ ಆಡಳಿತಗಾದ ಸಿಕಂದರ್ ಬಾದ್‌ಶಾ. 13–14ನೇ ಶತಮಾನದಲ್ಲಿ ಅಲ್ಲಾವುದ್ದೀನ್ ಖಿಲ್ಜಿಯ ಸೇನಾ ಮುಖ್ಯಸ್ಥ ಮಲಿಕ್ ಕಫೂರ್ ನೇತೃತ್ವದಲ್ಲಿ ನಡೆದ ಅತಿಕ್ರಮಣದ ಸಂದರ್ಭದಲ್ಲಿ ಸಿಕಂದರ್ ಬಾದ್‌ಶಾ ಸಾಯುವುದಕ್ಕೂ ಮುನ್ನ ಆತ ತಿರುಪರನ್‌ಕುಂದ್ರಂನಲ್ಲಿ ಆಶ್ರಯ ಪಡೆದಿದ್ದ ಎಂದು ನಂಬಲಾಗಿದೆ. ಅವನ ಸ್ಮಾರಕವು ನಂತರ ದರ್ಗಾ ಆಗಿ ಬದಲಾಗಿದೆ. ಶಾನನ್ನು ಸೂಫಿ ಸಂತ ಎಂದು ಪರಿಗಣಿಸಿರುವ ಮುಸ್ಲಿಂ ಸಮುದಾಯದವರಿಗೆ ಆ ಸ್ಥಳ ಪೂಜನೀಯವಾಗಿದೆ.
ಆಧಾರ: ಪಿಟಿಐ, ಮಾಧ್ಯಮ ವರದಿಗಳು
–––
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.