ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ವ್ಯಾಪಾರ ಸಮರಕ್ಕೆ ರಣಕಹಳೆ; ಭಾರತದ ಮೇಲೆ ಶೇ 27ರಷ್ಟು ಪ್ರತಿ ಸುಂಕ ಹೇರಿದ ಟ್ರಂಪ್ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದಂತೆಯೇ ಮಾಡಿದ್ದಾರೆ; ಭಾರತವೂ ಸೇರಿದಂತೆ ಜಗತ್ತಿನ 180 ದೇಶಗಳ ಮೇಲೆ ಪ್ರತಿಸುಂಕ ಘೋಷಣೆ ಮಾಡಿದ್ದಾರೆ. ಚೀನಾ ಸೇರಿದಂತೆ ಐರೋಪ್ಯ ಒಕ್ಕೂಟದ ಕೆಲವು ದೇಶಗಳನ್ನು ‘ಅತಿಕೆಟ್ಟ ಅಪರಾಧಿಗಳು’ ಎಂದು ಕರೆದಿರುವ ಅವರು, ಅವುಗಳ ಮೇಲೆ ಅತಿಹೆಚ್ಚು ಪ್ರಮಾಣದ ಪ್ರತಿಸುಂಕ ವಿಧಿಸಿದ್ದಾರೆ. ಅಮೆರಿಕದ ಹಿತಾಸಕ್ತಿ ಕಾಪಾಡಲು ಇದು ಅನಿವಾರ್ಯ ಎನ್ನುವಂತೆ ಅವರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ, ಇದು ಜಾಗತಿಕ ಆರ್ಥಿಕತೆಗೆ, ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಭಾರಿ ಹೊಡೆತ ನೀಡಲಿದೆ ಎನ್ನುವ ವಿಶ್ಲೇಷಣೆ ಕೇಳಿಬಂದಿದೆ
ಡೊನಾಲ್ಡ್ ಟ್ರಂಪ್ ಅವರು ಎರಡನೆಯ ಬಾರಿಗೆ ಅಧ್ಯಕ್ಷರಾಗಿ ಆಯ್ಕೆ ಆದಾಗಿನಿಂದ ಭಾರತವೂ ಸೇರಿದಂತೆ ಹಲವು ದೇಶಗಳ ಸುಂಕ ನೀತಿಯ ವಿರುದ್ಧ ಆಕ್ಷೇಪ ಎತ್ತಿದ್ದರು. ಅಮೆರಿಕ ಕೂಡ ಇತರೆ ದೇಶಗಳ ಸರಕುಗಳ ಮೇಲೆ ಹೆಚ್ಚು ಸುಂಕ ವಿಧಿಸಲಿದೆ ಎಂದು ಹೇಳುತ್ತಲೇ ಬಂದಿದ್ದರು. ಡೊನಾಲ್ಡ್ ಟ್ರಂಪ್ ಅವರ ಆಡಳಿತ ಶೈಲಿಯನ್ನು ಅರಿತಿದ್ದವರು ಅದೊಂದು ಬೆದರಿಕೆಯ ತಂತ್ರ ಎಂದೇ ಪರಿಗಣಿಸಿದ್ದರು. ಆದರೆ, ಟ್ರಂಪ್ ತಾವು ಹೇಳಿದಂತೆ ಅಮೆರಿಕದೊಳಗೆ ಬರುವ ಇತರೆ ದೇಶಗಳ ಸರಕುಗಳ ಮೇಲೆ ಪ್ರತಿಸುಂಕ ಹೇರಿ ಆದೇಶವನ್ನೇ ಹೊರಡಿಸಿದ್ದಾರೆ.
ಚೀನಾ ಮತ್ತು ಐರೋಪ್ಯ ಒಕ್ಕೂಟ ಸೇರಿದಂತೆ ಅಮೆರಿಕದ 60 ಪಾಲುದಾರ ರಾಷ್ಟ್ರಗಳು ಅನ್ಯಾಯದ ಸುಂಕ ನೀತಿ ಅನುಸರಿಸುತ್ತಿವೆ ಎಂದಿರುವ ಟ್ರಂಪ್, ಅವುಗಳನ್ನು ‘ಅತಿಕೆಟ್ಟ ಅಪರಾಧಿಗಳು’ (worst offenders) ಎಂದು ಕರೆದಿದ್ದಾರೆ. ಅವುಗಳ ಮೇಲೆ ಅತಿ ಹೆಚ್ಚು ಸುಂಕ ವಿಧಿಸಿದ್ದಾರೆ. ಸಣ್ಣ ರಾಷ್ಟ್ರ, ದೊಡ್ಡ ರಾಷ್ಟ್ರ, ಶ್ರೀಮಂತ–ಬಡ ರಾಷ್ಟ್ರ ಎಂಬ ಯಾವುದೇ ಮಾನದಂಡ ಅನುಸರಿಸದೆ ತಮ್ಮದೇ ಲೆಕ್ಕಾಚಾರದಂತೆ ಪ್ರತೀಕಾರ ಸುಂಕ ಹೇರಿದ್ದಾರೆ.
ಅಮೆರಿಕದ ಎಲ್ಲ ವ್ಯಾಪಾರ ಪಾಲುದಾರರ ಮೇಲೆ ಏ.5ರವರೆಗೆ ಶೇ 10ರಷ್ಟು ಮೂಲಸುಂಕ ವಿಧಿಸಲಾಗಿದೆ. ಏ.9ರ ನಂತರ ಈ ಪ್ರಮಾಣವು ಮತ್ತಷ್ಟು ಹೆಚ್ಚಲಿದೆ. ಒಂದೊಂದು ದೇಶಕ್ಕೂ ಒಂದೊಂದು ಪ್ರಮಾಣದಲ್ಲಿ ಪ್ರತಿಸುಂಕ ವಿಧಿಸಲಾಗಿದೆ. ಅಮೆರಿಕದ ಮೇಲೆ ಯಾವ ದೇಶ ಎಷ್ಟು ಸುಂಕ ವಿಧಿಸುತ್ತಿದೆ ಎನ್ನುವುದನ್ನು ಉಲ್ಲೇಖಿಸಿಯೇ, ಪ್ರತಿಸುಂಕದ ಪ್ರಮಾಣವನ್ನು ಪ್ರಕಟಿಸಲಾಗಿದೆ.
ತಮ್ಮ ಸುಂಕ ಏರಿಕೆಯನ್ನು ‘ರಾಷ್ಟ್ರೀಯ ತುರ್ತುಪರಿಸ್ಥಿತಿಯ ಕ್ರಮ’ ಎಂದು ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ. ಸುಂಕ ಹೇರಿದ ದಿನವನ್ನು (ಏ.2) ಅಮೆರಿಕದ ‘ವಿಮೋಚನಾ ದಿನ’ ಎಂದು ಪ್ರತಿಪಾದಿಸಿದ್ದಾರೆ. ಅಮೆರಿಕದಲ್ಲಿ ಸಮೃದ್ಧಿಯ ಹೊಸ ಯುಗ ಆರಂಭವಾಗಲಿದೆ ಎಂದು ಘೋಷಿಸಿದ್ದಾರೆ.
ಅಮೆರಿಕದ ಅತ್ಯಂತ ನಿಕಟ ವ್ಯಾಪಾರ ಪಾಲುದಾರ ರಾಷ್ಟ್ರಗಳಾದ ಮೆಕ್ಸಿಕೊ, ಕೆನಡಾದ ಕೆಲವು ವಸ್ತುಗಳ ಮೇಲೆ ಪ್ರತಿಸುಂಕ ವಿಧಿಸಲಾಗಿದ್ದರೂ ಸದ್ಯಕ್ಕೆ ಅಲ್ಲಿನ ಸುಂಕ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಉಳಿದಂತೆ ಅಮೆರಿಕದೊಂದಿಗೆ ಸ್ನೇಹದಿಂದ ಇರುವ ಬ್ರಿಟನ್, ಭಾರತದಂಥ ರಾಷ್ಟ್ರಗಳ ಮೇಲೂ ಸುಂಕ ವಿಧಿಸಲಾಗಿದೆ. ದಕ್ಷಿಣ ಆಫ್ರಿಕಾದ ಲೆಸೊಥೊದಂತಹ (ಶೇ 50) ಸಣ್ಣ ರಾಷ್ಟ್ರವನ್ನೂ ಅವರು ಹೊರತುಪಡಿಸಿಲ್ಲ. ಸ್ಕಾಟ್ಲೆಂಡ್‌ನ ವಿಸ್ಕಿ ಉದ್ಯಮ, ಜಗತ್ತಿನ ವಿವಿಧ ರಾಷ್ಟ್ರಗಳ ಕಾರು ತಯಾರಿಕಾ ಉದ್ಯಮಗಳೂ ಸೇರಿದಂತೆ ಜಗತ್ತಿನ ಹಲವು ಉದ್ಯಮಗಳು ಇದರಿಂದ ಸಂಕಷ್ಟಕ್ಕೀಡಾಗುವ ಸಾಧ್ಯತೆ ಇದೆ.
ಕೆಲವು ರಾಷ್ಟ್ರಗಳು ಅಮೆರಿಕದ ಕ್ರಮವನ್ನು ವಿರೋಧಿಸಿವೆ. ಪ್ರತಿಸುಂಕ ಹೇರಿಕೆಯನ್ನು ವಿರೋಧಿಸುವುದಾಗಿ ಹೇಳಿರುವ ಚೀನಾದ ಹಣಕಾಸು ಸಚಿವಾಲಯವು, ‘ನಮ್ಮ ಹಕ್ಕು ಮತ್ತು ಹಿತಾಸಕ್ತಿ ಕಾಪಾಡಿಕೊಳ್ಳಲು ನಾವು ಅಮೆರಿಕಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ’ ಎಂದು ತಿಳಿಸಿದೆ. ಪೋಲೆಂಡ್, ಇದು ತನ್ನ ದೇಶದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದಿದೆ. ಇದರಿಂದ ಉಂಟಾಗುವ ವ್ಯಾಪಾರ ಸಮರ ಎದುರಿಸಲು ಸಿದ್ಧ ಎಂದು ಫ್ರಾನ್ಸ್ ಹೇಳಿದೆ. ಜಪಾನ್ ಪಶ್ಚಾತ್ತಾಪ ವ್ಯಕ್ತಪಡಿಸಿದ್ದರೆ, ತೈವಾನ್ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಯತ್ನಿಸುವುದಾಗಿ ಹೇಳಿದೆ. ಇಸ್ರೇಲ್ ಆಘಾತ ವ್ಯಕ್ತಪಡಿಸಿದೆ; ಅಮೆರಿಕದ ಸರಕುಗಳ ಮೇಲೆ ಎಲ್ಲ ಸುಂಕವನ್ನೂ ರದ್ದುಪಡಿಸಿರುವ ತನ್ನ ಕ್ರಮದಿಂದ ಮುಂದೆ ಅಮೆರಿಕದ ನಿಲುವು ಬದಲಾಗಬಹುದು ಎಂದು ಭರವಸೆ ವ್ಯಕ್ತಪಡಿಸಿದೆ.
ಅಣುಬಾಂಬ್ ಎಸೆದ ಟ್ರಂಪ್: ಅಮೆರಿಕದ ಪ್ರತಿಸುಂಕ ಹೇರಿಕೆಯ ಬಗ್ಗೆ ವಿಶ್ವದ ಅನೇಕ ಸಂಸ್ಥೆಗಳು, ಅರ್ಥಶಾಸ್ತ್ರಜ್ಞರು ಆಘಾತ ವ್ಯಕ್ತಪಡಿಸಿದ್ದಾರೆ. ಟ್ರಂಪ್ ಅವರು ಜಗತ್ತಿನ ವ್ಯಾಪಾರ ವ್ಯವಸ್ಥೆಯ ಮೇಲೆ ಅಣು ಬಾಂಬ್ ಎಸೆದಿದ್ದಾರೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮಾಜಿ ಮುಖ್ಯ ಅರ್ಥಶಾಸ್ತ್ರಜ್ಞ ಕೆನ್ ರಾಗಫ್ ಹೇಳಿದ್ದಾರೆ.
ಅಮೆರಿಕದ ಪ್ರತಿಸುಂಕ ಹೇರಿಕೆಯು ಜಗತ್ತಿನ ಆರ್ಥಿಕತೆಗೆ ಭಾರಿ ಹೊಡೆತ ಎನ್ನುವುದು ಉರ್ಸುಲಾ ವ್ಯಾನ್ ಡೆನ್ ಲೇಯೆರ್ ಅಭಿಪ್ರಾಯ. ಜಗತ್ತಿನ ಕೋಟ್ಯಂತರ ಮಂದಿಯ ಜೀವನದ ಮೇಲೆ ಇದು ಪರಿಣಾಮ ಬೀರುತ್ತದೆ ಎಂದಿದ್ದಾರೆ. ಅಮೆರಿಕದೊಂದಿಗಿನ ಮಾತುಕತೆ ವಿಫಲವಾದರೆ, ಐರೋಪ್ಯ ಒಕ್ಕೂಟ ಕೂಡ ಪ್ರತ್ಯುತ್ತರ ನೀಡಬಹುದು ಎಂದು ಎಚ್ಚರಿಸಿದ್ದಾರೆ.
* ಮಿತ್ರರಾಷ್ಟ್ರಗಳೊಂದಿಗಿನ ಸಂಬಂಧದಲ್ಲಿ ಬಿರುಕು
* ಜಾಗತಿಕ ಪೂರೈಕೆ ಸರಪಳಿಯ ಮೇಲೆ ವ್ಯತಿರಿಕ್ತ ಪರಿಣಾಮ
* ಅಮೆರಿಕ ಆಮದು ಮಾಡಿಕೊಳ್ಳುವ ವಸ್ತುಗಳ ಬೆಲೆ ದುಬಾರಿ. ಇದರಿಂದ ಮಾರಾಟದಲ್ಲಿ ಕುಸಿತ
* ಜಾಗತಿಕ ಮಟ್ಟದಲ್ಲಿ ಉದ್ಯಮಗಳು ನಷ್ಟಕ್ಕೊಳಗಾಗಿ ಬಾಗಿಲು ಮುಚ್ಚಬೇಕಾದ ಸ್ಥಿತಿ; ನಿರುದ್ಯೋಗ ಪ್ರಮಾಣ ಹೆಚ್ಚಳ
* ಹಲವು ದೇಶಗಳಲ್ಲಿ ಇದರಿಂದ ಆರ್ಥಿಕ ಹಿಂಜರಿತ
* ಅಭಿವೃದ್ಧಿಶೀಲ ರಾಷ್ಟ್ರಗಳ ಆರ್ಥಿಕತೆಗಳ ಮೇಲೆ ಪ್ರತಿಕೂಲ ಪರಿಣಾಮ
* ಭಾರತದಂಥ ಕೆಲವು ರಾಷ್ಟ್ರಗಳಿಗೆ ಹೊಸ ಮಾರುಕಟ್ಟೆ ರೂಪಿಸಿಕೊಳ್ಳಲು ಸಕಾಲ
* ವ್ಯಾಪಾರ ಸಂಬಂಧಿ ಮಾತುಕತೆಗೆ ಬರುವಂತೆ ವಿದೇಶದ ಮೇಲೆ ಪರೋಕ್ಷ ಒತ್ತಡ
ಟ್ರಂಪ್ ಅವರು ಜನವಸತಿಯೇ ಇಲ್ಲದ ಎರಡು ದ್ವೀಪಗಳ ಮೇಲೂ ಪ್ರತಿಸುಂಕ ಹೇರುವ ಮೂಲಕ ಅಚ್ಚರಿ ಉಂಟುಮಾಡಿದ್ದಾರೆ. ಅಂಟಾರ್ಕ್ಟಿಕಾ ಹತ್ತಿರದ, ಗ್ಲೇಸಿಯರ್‌ಗಳಿಂದ ಆವೃತವಾಗಿರುವ, ಪೆಂಗ್ವಿನ್ ಮತ್ತು ಸೀಲ್‌ಗಳ ಆವಾಸಸ್ಥಾನವಾಗಿರುವ, ಜನರೇ ಇಲ್ಲದ ಹರ್ಡ್ ಮತ್ತು ಮೆಕ್‌ಡೊನಾಲ್ಡ್ ದ್ವೀಪಗಳ ಮೇಲೂ ಅಮೆರಿಕ ಶೇ 10ರಷ್ಟು ಪ್ರತಿಸುಂಕ ವಿಧಿಸಿದೆ.
ಆಸ್ಟ್ರೇಲಿಯಾಕ್ಕೆ ಹೊಂದಿಕೊಂಡಿರುವ ಈ ದ್ವೀಪಗಳಿಗೆ ಹೋಗಬೇಕೆಂದರೆ, ಪರ್ತ್‌ನಿಂದ ಸಮುದ್ರ ಮಾರ್ಗವಾಗಿ ಕನಿಷ್ಠ ಎರಡು ವಾರ ಪ್ರಯಾಣಿಸಬೇಕು. 10 ವರ್ಷದ ಹಿಂದೆ ಕೆಲವರು ಇಲ್ಲಿಗೆ ಭೇಟಿ ನೀಡಿದ್ದೇ ಕೊನೆ. ನಂತರ ಮನುಷ್ಯರೇ ಇಲ್ಲಿಗೆ ಕಾಲಿಟ್ಟಿಲ್ಲ. ಆದರೂ ಸುಂಕದ ಘೋಷಣೆ ಹೊರಬಿದ್ದಿದೆ. ಆಸ್ಟ್ರೇಲಿಯಾದ ಪ್ರಧಾನಿ ಆಂಥೊನಿ ಅಲ್ಬನೀಸ್ ‘ಭೂಮಿ ಮೇಲಿನ ಯಾವ ಜಾಗವೂ ಸುರಕ್ಷಿತವಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.
ಅಮೆರಿಕ ಮತ್ತು ಅದರ ಪಾಲುದಾರ ರಾಷ್ಟ್ರಗಳ ನಡುವೆ ಇರುವ ವ್ಯಾಪಾರ ಕೊರತೆಯ ಆಧಾರದಲ್ಲಿ ಪ್ರತಿ ಸುಂಕವನ್ನು ಟ್ರಂಪ್ ಸರ್ಕಾರ ಲೆಕ್ಕ ಹಾಕಿದೆ. ವ್ಯಾಪಾರ ಕೊರತೆಯನ್ನು ಸರಿದೂಗಿಸುವುದಕ್ಕೆ ಅಗತ್ಯವಾಗಿ ಬೇಕಾದ ಸುಂಕದ ಪ್ರಮಾಣವನ್ನು ನಿಗದಿ ಪಡಿಸಲಾಗಿದೆ ಎಂದು ಅದು ಹೇಳಿದೆ.
ಅಮೆರಿಕವು ತನ್ನ ಪ್ರತಿಯೊಂದು ಪಾಲುದಾರ ರಾಷ್ಟ್ರದೊಂದಿಗೆ ಹೊಂದಿರುವ ವ್ಯಾಪಾರ ಕೊರತೆಯ ಮೊತ್ತವನ್ನು, ಆ ದೇಶದಿಂದ ಮಾಡುವ ಒಟ್ಟು ಆಮದಿನ ಮೌಲ್ಯದಿಂದ ಭಾಗಿಸುವುದು. ಆ ಮೊತ್ತವನ್ನು ಎರಡರಿಂದ ಭಾಗಿಸುವ ಮೂಲಕ ಪ್ರತಿ ಸುಂಕದ ಪ್ರಮಾಣವನ್ನು ಲೆಕ್ಕಹಾಕಲಾಗಿದೆ.
ಅಮೆರಿಕವು ಭಾರತದ ಮೇಲೆ ಶೇ 27ರಷ್ಟು ಪ್ರತಿ ಸುಂಕ ವಿಧಿಸಿದ್ದರೂ, ಇದನ್ನೇ ಅವಕಾಶವನ್ನಾಗಿ ಬಳಸುವ ಸಾಧ್ಯತೆಯೂ ಭಾರತಕ್ಕೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಭಾರತಕ್ಕೆ ಹೋಲಿಸಿದರೆ ಚೀನಾ, ವಿಯೆಟ್ನಾಂ, ಥಾಯ್ಲೆಂಡ್, ಶ್ರೀಲಂಕಾ ಬಾಂಗ್ಲಾದೇಶ ಸೇರಿದಂತೆ ಏಷ್ಯಾದ ಹಾಗೂ ಭಾರತದ ನೆರೆಹೊರೆಯ ಹಲವು ರಾಷ್ಟ್ರಗಳಿಗೆ ಟ್ರಂಪ್ ಅವರು ಹೆಚ್ಚಿನ ಪ್ರತಿಸುಂಕ ವಿಧಿಸಿದ್ದಾರೆ. ಇದು ಜವಳಿ, ಎಲೆಕ್ಟ್ರಾನಿಕ್ಸ್, ಯಂತ್ರೋಪಕರಣ ಸೇರಿದಂತೆ ವಿವಿಧ ವಲಯಗಳಲ್ಲಿ ಭಾರತಕ್ಕೆ ಅಭಿವೃದ್ಧಿ ಹೊಂದಲು ಉತ್ತಮ ಅವಕಾಶ ಕಲ್ಪಿಸಿದೆ ಎಂದು ಜಿಟಿಆರ್‌ಐ ಅಭಿಪ್ರಾಯಪಟ್ಟಿದೆ.
ಜವಳಿ ಉದ್ಯಮಕ್ಕೆ ಸಂಬಂಧಿಸಿದಂತೆ ಅಮೆರಿಕದಲ್ಲಿ ತನ್ನ ಮಾರುಕಟ್ಟೆಯನ್ನು ಭಾರತ ವಿಸ್ತರಿಸಬಹುದಾಗಿದೆ. ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ತೈವಾನ್ ಮೇಲೆಯೂ ಟ್ರಂಪ್ ಹೆಚ್ಚು ಸುಂಕ ವಿಧಿಸಿದ್ದಾರೆ. ಕೇಂದ್ರ ಸರ್ಕಾರವು ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಹೆಚ್ಚಿನ ಮೂಲಸೌಕರ್ಯ ಕಲ್ಪಿಸಿ, ನೀತಿ ನಿರೂಪಣೆಯ ಬೆಂಬಲವನ್ನು ನೀಡಿದ್ದೇ ಆದರೆ, ಸೆಮಿಕಂಡಕ್ಟರ್‌ಗಳ ಪರೀಕ್ಷೆ, ಪ್ಯಾಕೇಜಿಂಗ್ ಹಾಗೂ ಅಗ್ಗದ ಮೈಕ್ರೊಚಿಪ್ ತಯಾರಿಕೆ ಕ್ಷೇತ್ರದಲ್ಲಿರುವ ಅವಕಾಶವನ್ನು ಬಳಸಿಕೊಳ್ಳಬಹುದು. ಯಂತ್ರೋಪಕರಣ, ವಾಹನಗಳು ಮತ್ತು ಆಟಿಕೆಗಳ ವಲಯಗಳಲ್ಲಿ ಚೀನಾ ಮತ್ತು ಥಾಯ್ಲೆಂಡ್ ಪ್ರಾಬಲ್ಯ ಹೊಂದಿದ್ದು, ಈ ವಲಯಗಳಿಗೂ ಭಾರತ ಬಂಡವಾಳ ಆಕರ್ಷಿಸಬಹುದು, ತಯಾರಿಕೆ ಹೆಚ್ಚಿಸುವ ಮೂಲಕ ಅಮೆರಿಕಕ್ಕೆ ರಫ್ತಿನ ಪ್ರಮಾಣವನ್ನು ಜಾಸ್ತಿ ಮಾಡಬಹುದು ಎಂದು ಅದು ಹೇಳಿದೆ.
ವಿಶ್ವ ವಾಣಿಜ್ಯ ಸಂಸ್ಥೆಯ (ಡಬ್ಲ್ಯುಟಿಒ) 1994ರ ಗ್ಯಾಟ್ ಒಪ್ಪಂದದ ಪ್ರಕಾರ, ಯಾವ ಸದಸ್ಯ ರಾಷ್ಟ್ರವೂ ಮಿತಿ ಮೀರಿ ಸುಂಕ ಹೇರುವಂತಿಲ್ಲ. ಅಮೆರಿಕವು ಉಕ್ಕಿನ ಮೇಲೆ ಶೇ 25ರಷ್ಟು ಸುಂಕ ವಿಧಿಸುವ ಮೂಲಕ ಒಪ್ಪಿತ ಮಿತಿಯನ್ನು ಉಲ್ಲಂಘಿಸಿದೆ ಎಂದು ಡಬ್ಲ್ಯುಟಿಒ ಆಕ್ಷೇಪ ವ್ಯಕ್ತಪಡಿಸಿತ್ತು. ನಂತರವೂ ಅಮೆರಿಕ ಸುಂಕ ವಿಧಿಸುವುದನ್ನು ಮುಂದುವರಿಸಿತು. ಈಗ ಪ್ರತಿಸುಂಕ ಹೇರುವ ಮೂಲಕ ಡಬ್ಲ್ಯುಟಿಒ ನಿಯಮಗಳನ್ನು ಮತ್ತೆ ಹಲವು ರೀತಿಯಲ್ಲಿ ಉಲ್ಲಂಘಿಸಿದೆ ಎಂದು ಜಿಟಿಆರ್‌ಐ ವರದಿ ಉಲ್ಲೇಖಿಸಿದೆ.
(ಆಧಾರ: ಪಿಟಿಐ, ಬಿಬಿಸಿ, ಆಫೀಸ್ ಆಫ್ ಯುನೈಟೆಡ್ ಟ್ರೇಡ್ ರೆಪ್ರೆಸೆಂಟೇಟಿವ್, ಜಿಟಿಆರ್‌ಐ, ರಾಯಿಟರ್ಸ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.