ADVERTISEMENT

Explainer| ಯಾರು ಈ ದಿಶಾ ರವಿ? ಟೂಲ್‌ಕಿಟ್‌, ಗ್ರೇತಾ ಜೊತೆಗಿನ ಆಕೆಯ ನಂಟೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಫೆಬ್ರುವರಿ 2021, 3:15 IST
Last Updated 17 ಫೆಬ್ರುವರಿ 2021, 3:15 IST
ದಿಶಾ ರವಿ
ದಿಶಾ ರವಿ    

ರೈತರ ಹೋರಾಟಕ್ಕೆ ಸಂಬಂಧಿಸಿದ 'ಟೂಲ್‌ ಕಿಟ್‌' ರೂಪಿಸಿದ ಆರೋಪದ ಮೇಲೆ ಬೆಂಗಳೂರು ಮೂಲದ ಪರಿಸರ ಹೋರಾಟಗಾರ್ತಿ ದಿಶಾ ರವಿ(22) ಎಂಬುವವರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಅಸಲಿಗೆ ದಿಶಾ ರವಿ ಯಾರು? ಟೂಲ್‌ ಕಿಟ್‌ ಎಂದರೆ ಏನು? ದಿಶಾ ರವಿ ಅವರ ಮೇಲೆ ಇರುವ ಆರೋಪಗಳೇನು? ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಯಾರು ಈ ದಿಶಾ ರವಿ?

ಜಾಗತಿಕ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್ ಅವರು 2018ರಲ್ಲಿ ಸ್ಥಾಪಿಸಿದ ‘ಫ್ರೈಡೇ ಫಾರ್‌ ಫ್ಯೂಚರ್‌’ ಹೆಸರಿನ ಸಂಘಟನೆಯ ಸಹ ಸಂಸ್ಥಾಪಕಿ ದಿಶಾ ರವಿ. ರವಿ ಅವರು 2019 ರಲ್ಲಿ 'ಫ್ರೈಡೇ ಫಾರ್ ಫ್ಯೂಚರ್‌'ನ ಭಾರತ ಘಟಕ ಪ್ರಾರಂಭಿಸಿದರು. ನಗರದ ಹೊರವಲಯದಲ್ಲಿರುವ ಚಿಕ್ಕಬಾಣಾವರದಲ್ಲಿ ನೆಲೆಸಿರುವ ಅವರು ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು. ನಗರದ ಖಾಸಗಿ ಕಂಪನಿಯೊಂದರಲ್ಲಿ ವ್ಯವಸ್ಥಾಪಕಿ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ADVERTISEMENT
ಪ್ರತಿಭಟನೆಯೊಂದರಲ್ಲಿ ದಿಶಾ

ಇವರು ಹವಾಮಾನ ಸಂಬಂಧಿತ ಸಮಸ್ಯೆಗಳ ವಿರುದ್ಧ ನಿರಂತರವಾಗಿ ಪ್ರತಿ ಶುಕ್ರವಾರವೂ ಹೋರಾಟ ಮಾಡುತ್ತಿದ್ದರು. ಕೆಲವು ಬಾರಿ ಅವರ ಹೋರಾಟಕ್ಕೆ ಯಾರೂ ಬರುತ್ತಿರಲಿಲ್ಲ. ಹೀಗಾಗಿ, ಅವರೊಬ್ಬರೇ ರಸ್ತೆಯಲ್ಲಿ ಘೋಷಣಾ ಫಲಕಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆಗಳ ಪ್ರಚಾರಕ್ಕೆ ಹಾಗೂ ಪ್ರತಿಭಟನೆಗೆ ಜನರನ್ನು ಸೇರಿಸಲು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದರು. ರಾಜ್ಯ, ನಗರ ಹಾಗೂ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸಲು ಬೆಂಗಳೂರಿನಲ್ಲಿ ನಡೆಯುತ್ತಿದ್ದ ಸಭೆಗಳಲ್ಲೂ ಇವರು ಪಾಲ್ಗೊಳ್ಳುತ್ತಿದ್ದರು. ದಿಶಾ ಅವರ ತಂದೆ ಕ್ರೀಡಾ ಕೋಚ್‌ ಆಗಿದ್ದು, ತಾಯಿ ಗೃಹಿಣಿ.

ದಿಶಾ ರವಿ ಬಂಧನ ಏಕೆ?

ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಹೇಗೆ ಬೆಂಬಲಿಸಬೇಕು ಎಂಬುದನ್ನು ವಿವರಿಸುವ ‘ಟೂಲ್‌ಕಿಟ್‌’ ಅನ್ನು ಸಿದ್ಧಪಡಿಸಿದ ಆರೋಪವನ್ನು ದಿಶಾ ರವಿ ಅವರ ಮೇಲೆ ಹೊರಿಸಲಾಗಿದೆ. ರೈತರ ಪ್ರತಿಭಟನೆಯನ್ನು ಬೆಂಬಲಿಸಲು ತಾನು ಬಯಸಿದ್ದೆ. ಅದಕ್ಕಾಗಿ ಟೂಲ್‌ಕಿಟ್‌ನ ಎರಡು ಸಾಲನ್ನು ತಿದ್ದಿ ಕೊಟ್ಟಿದ್ದೆ ಎಂದು ದಿಶಾ ನ್ಯಾಯಾಧೀಶರಿಗೆ ತಿಳಿಸಿದ್ದಾರೆ.

ದೇಶದ್ರೋಹ, ಜನರ ನಡುವೆ ದ್ವೇಷಕ್ಕೆ ಕುಮ್ಮಕ್ಕು ಮತ್ತು ಅಪರಾಧ ಒಳಸಂಚಿಗೆ ಸಂಬಂಧಿಸಿ ಫೆ. 4ರಂದು ದೆಹಲಿಯ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದರು. ಅದರ ಆಧಾರದಲ್ಲಿ ದಿಶಾ ಅವರನ್ನು ಬಂಧಿಸಲಾಗಿದೆ.

ಏನಿದು ಟೂಲ್‌ ಕಿಟ್‌?

ಟೂಲ್‌ಕಿಟ್‌ ಎನ್ನುವುದು ಸಾಮಾಜಿಕ ಮಾಧ್ಯಮ ದಾಖಲೆ. ಸಮಸ್ಯೆ ಮತ್ತು ಅದರ ವಿರುದ್ಧದ ಹೋರಾಟದ ಯೋಜನೆ, ರೂಪುರೇಷೆಗಳನ್ನು ವಿವರಿಸುತ್ತದೆ. ದೇಶದಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಸ್ವೀಡನ್‌ನ ಜಾಗತಿಕ ಪರಿಸರ ಹೋರಾಟಗಾರ್ತಿ ಗ್ರೇತಾ ಥನ್‌ಬರ್ಗ್‌ ಬೆಂಬಲ ನೀಡಿದಾಗ ಇಂಥದ್ದೊಂದು ಟೂಲ್‌ ಕಿಟ್‌ ಅನ್ನು ಅವರು ಟ್ವಿಟರ್‌ನಲ್ಲಿ ಬಹಿರಂಗವಾಗಿ ಹಂಚಿಕೊಂಡಿದ್ದರು. 'ಭಾರತದ ವಿರುದ್ಧ ಬಲವಾದ ಸಾಮಾಜಿಕ ಮಾಧ್ಯಮ ಅಭಿಯಾನವನ್ನು ರೂಪಿಸಲಾಗುತ್ತಿದೆ ಎಂಬುದಕ್ಕೆ ಟೂಲ್‌ಕಿಟ್ ಸಾಕ್ಷಿಯಾಗಿದೆ,' ಎಂದು ಭಾರತದ ಮಾಹಿತಿ ತಂತ್ರಜ್ಞಾನ ಇಲಾಖೆ ಆರೋಪಿಸಿತ್ತು.

ಈ ಟೂಲ್‌ಕಿಟ್‌ನ ಹಿಂದೆ ಖಲಿಸ್ತಾನ ಪ್ರತ್ಯೇಕತಾವಾದಿಗಳು ಇದ್ದಾರೆ ಎಂದು ದೆಹಲಿ ಪೊಲೀಸರು ಆರಂಭದಲ್ಲಿ ಹೇಳಿದ್ದರು. ನಂತರ ಖಲಿಸ್ತಾನಿಗಳ ಪರ ಇರುವ "ಪೊಯೆಟಿಕ್ ಜಸ್ಟೀಸ್ ಫೌಂಡೇಶನ್" ಇದೆ ಎಂಬ ಮಾಹಿತಿ ಹೊರಬಿದ್ದಿತ್ತು.

‘ಗ್ರೇಟಾ’ ಹಂಚಿಕೊಂಡ ಟೂಲ್ ಕಿಟ್‌ನಲ್ಲಿ ಏನಿತ್ತು?

ಭಾರತದ ರೈತರ ಜತೆ ಚರ್ಚೆ ನಡೆಸದೇ ನೂತನ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಇವು ರೈತರನ್ನು ಕಾರ್ಪೊರೇಟ್‌ ಕಂಪನಿಗಳ ನಿಯಂತ್ರಣಕ್ಕೆ ಸಿಲುಕಿಸುತ್ತವೆ. ಇವುಗಳ ವಿರುದ್ಧ ಹೋರಾಡುತ್ತಿರುವ ರೈತರಿಗೆ ಬೆಂಬಲ ಸೂಚಿಸಿ. ಅವರ ಹೋರಾಟದಲ್ಲಿ ಭಾಗಿಯಾಗಿ ಎಂದು ಟೂಲ್‌ಕಿಟ್‌ನಲ್ಲಿ ಹೇಳಲಾಗಿತ್ತು. ಕ್ರಿಪ್ಟೋಪ್ಯಾಡ್‌ನಲ್ಲಿ ಈ ಟೂಲ್‌ಕಿಟ್ ಇತ್ತು.

ರೈತರ ಹೋರಾಟಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಪ್ರತಿಭಟನೆ ನಡೆಸಿ ಎಂದು ಈ ಟೂಲ್‌ಕಿಟ್‌ನಲ್ಲಿ ಕರೆ ನೀಡಲಾಗಿದೆ. ಫೆಬ್ರುವರಿ 13/14ರಂದು ಡಿಜಿಟಲ್ ಸ್ಟ್ರೈಕ್‌ ನಡೆಸಿ. ಸಾಮಾಜಿಕ ಜಾಲತಾಣಗಳಲ್ಲಿ #FarmersProtest #StandWithFarmers ಹ್ಯಾಶ್‌ಟ್ಯಾಗ್ ಬಳಸಿ, ಪೋಸ್ಟ್‌ ಮಾಡಿ. ಭಾರತದ ರಾಯಭಾರ ಕಚೇರಿಗಳ ಎದುರು ಪ್ರತಿಭಟನೆ ನಡೆಸಿ. ಫೆಬ್ರುವರಿ 13/14ಕ್ಕೂ ಮೊದಲೂ ಪ್ರತಿಭಟನೆ ನಡೆಸಿ. #AskIndiaWhy ಹ್ಯಾಶ್‌ಟ್ಯಾಗ್‌ನಲ್ಲಿ ಟ್ವೀಟ್ ಮಾಡಿ. ಟ್ವೀಟ್‌ನಲ್ಲಿ ಭಾರತದ ಪ್ರಧಾನಿ ಮತ್ತು ಕೃಷಿ ಸಚಿವರನ್ನು ಟ್ಯಾಗ್ ಮಾಡಿ ಎಂದು ಈ ಟೂಲ್‌ಕಿಟ್‌ನಲ್ಲಿ ಕರೆ ನೀಡಲಾಗಿತ್ತು.

ಜನವರಿ 23 ಮತ್ತು 26ರ ಪ್ರತಿಭಟನೆಯ ವಿಚಾರ ಟೂಲ್‌ಕಿಟ್‌ನಲ್ಲಿ ಇತ್ತು ಎಂದು ಪೊಲೀಸರು ಹೇಳಿದ್ದರು. ಆದರೆ ಆ ಮಾಹಿತಿ ಇರಲಿಲ್ಲ.

ಬಂಧನಕ್ಕೆ ವಿರೋಧ

ದಿಶಾ ಬಂಧನವನ್ನು ಕೆಲವರು ಖಂಡಿಸಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ನಾನು ದಿಶಾ ಅವರನ್ನು ಬೆಂಗಳೂರು ನಾಗರಿಕರ ಸಭೆಯೊಂದರಲ್ಲಿ ಭೇಟಿಯಾಗಿದ್ದೆ. ವಿಶ್ವ ಮಟ್ಟದ ಒಂದು ಹೋರಾಟದ ಭಾಗವಾಗಿ ಬೆಂಗಳೂರಿನಲ್ಲಿ ನಾಯಕತ್ವ ವಹಿಸಿಕೊಂಡು ಅವರು ಕೆಲಸ ಮಾಡುತ್ತಿರುವುದು ತಿಳಿಯಿತು. ಅವರ ಕೆಲಸಗಳ ಚಿತ್ರ ನೋಡಿ ಅಚ್ಚರಿ ಮತ್ತು ಹೆಮ್ಮೆ ಆಯಿತು. ಅವರು ನಿಜವಾಗಲೂ ಚಿಕ್ಕ ವಯಸ್ಸಿನಲ್ಲೇ ಯಾರೂ ಯೋಚಿಸಲಾಗದ ವಿಚಾರದ ಬಗ್ಗೆ ಹೋರಾಟ ಮಾಡುತ್ತಿದ್ದಾರೆ’ ಎಂದು ಎಎಪಿ ಯುವ ಘಟಕದ ಮುಕುಂದ್ ಗೌಡ ಹೇಳಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.