ADVERTISEMENT

Explainer | ಏರ್ ಇಂಡಿಯಾ ವಿಮಾನ ಪತನ: ಇಂಧನ ನಿಯಂತ್ರಣ ಗುಂಡಿಯತ್ತಲೇ ಚರ್ಚೆ ಏಕೆ?

ರಾಯಿಟರ್ಸ್
Published 14 ಜುಲೈ 2025, 10:47 IST
Last Updated 14 ಜುಲೈ 2025, 10:47 IST
<div class="paragraphs"><p>ಏರ್‌ ಇಂಡಿಯಾ AI171 ವಿಮಾನ ಕಟ್ಟಡಕ್ಕೆ ಅಪ್ಪಳಿಸಿದ ದೃಶ್ಯ; ಕಾಕ್‌ಪಿಟ್‌ನಲ್ಲಿ ಇಂಧನ ಪೂರೈಕೆ ನಿಯಂತ್ರಿಸುವ ಗುಂಡಿ</p></div>

ಏರ್‌ ಇಂಡಿಯಾ AI171 ವಿಮಾನ ಕಟ್ಟಡಕ್ಕೆ ಅಪ್ಪಳಿಸಿದ ದೃಶ್ಯ; ಕಾಕ್‌ಪಿಟ್‌ನಲ್ಲಿ ಇಂಧನ ಪೂರೈಕೆ ನಿಯಂತ್ರಿಸುವ ಗುಂಡಿ

   
Aircraft Engine Failure: ದುರಂತಕ್ಕೀಡಾದ ವಿಮಾನದ ಎರಡೂ ಎಂಜಿನ್‌ಗಳಿಗೆ ಇಂಧನ ಪೂರೈಕೆ ಸ್ಥಗಿತಗೊಂಡಿದ್ದು ಹೇಗೆ? ಎಂಬುದರತ್ತಲೇ ಚರ್ಚೆ ನಡೆಯುತ್ತಿದೆ. ಇದು ತಾಂತ್ರಿಕ ದೋಷವೋ ಅಥವಾ ಪೈಲೆಟ್‌ಗಳ ತಪ್ಪೋ..?

ನವದೆಹಲಿ: 260 ಜನರ ಸಾವಿಗೆ ಕಾರಣವಾದ ಏರ್‌ ಇಂಡಿಯಾ (AI171) ವಿಮಾನ ಪತನಕ್ಕೂ ಮೊದಲು ಇಂಧನ ಪೂರೈಕೆ ಸ್ಥಗಿತಗೊಂಡಿದ್ದೇ ದುರಂತಕ್ಕೆ ಕಾರಣ ಎಂದು ತನಿಖೆ ನಡೆಸುತ್ತಿರುವ ವಿಮಾನ ಅಪಘಾತ ತನಿಖಾ ಸಂಸ್ಥೆ (AAIB) ಪ್ರಾಥಮಿಕ ವರದಿಯಲ್ಲಿ ಹೇಳಿರುವುದು ಈಗ ಚರ್ಚೆಗೆ ಕಾರಣವಾಗಿದೆ. 

ಜೂನ್ 12ರಂದು ಮಧ್ಯಾಹ್ನ 1.37ಕ್ಕೆ ಅಹಮದಾಬಾದ್‌ ವಿಮಾನ ನಿಲ್ದಾಣದ ರನ್‌ ವೇ 23ರಿಂದ ಹಾರಾಟ ಆರಂಭಿಸಿದ ಏರ್‌ ಇಂಡಿಯಾಗೆ ಸೇರಿದ ಬೋಯಿಂಗ್ 737–8 ಡ್ರೀಮ್‌ಲೈನರ್ ವಿಮಾನವು ಎರಡೇ ನಿಮಿಷಗಳಲ್ಲಿ (1.39ಕ್ಕೆ) ಆರ್‌.ಜಿ. ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ನಿಲಯದ ಮೇಲೆ ಪತನಗೊಂಡಿತು. 12 ಸಿಬ್ಬಂದಿ ಸಹಿತ ವಿಮಾನದಲ್ಲಿದ್ದ 241 ಜನ ಹಾಗೂ ಕಾಲೇಜು ಆವರಣದಲ್ಲಿ 19 ಜನ ಮೃತಪಟ್ಟಿದ್ದರು.

ADVERTISEMENT

‘ವಿಮಾನ ಟೇಕಾಫ್‌ ಆದ ನಂತರ ಗರಿಷ್ಠ ವೇಗ ಪಡೆದುಕೊಂಡ ಹೊತ್ತಿಗೆ ಎಂಜಿನ್‌–1 ಹಾಗೂ ಎಂಜಿನ್‌–2ಕ್ಕೆ ಇಂಧನ ಪೂರೈಕೆ ಸ್ಥಗಿತಗೊಂಡಿದೆ. ಇದು ‘ರನ್‌’ ಸ್ಥಿತಿಯಿಂದ ‘ಕಟ್‌ಆಫ್‌’ ಸ್ಥಿತಿಗೆ ತಲುಪಿದೆ. ಈ ಎರಡೂ ಎಂಜಿನ್‌ಗಳು ಒಂದು ಸೆಕೆಂಡುಗಳ ಅಂತರದಲ್ಲಿ ತಮ್ಮ ಕಾರ್ಯ ಸ್ಥಗಿತಗೊಳಿಸಿವೆ. ಕಾಕ್‌ಪಿಟ್‌ನ ಸಂಭಾಷಣೆಯೂ ಕಪ್ಪು ಪೆಟ್ಟಿಗೆಯಲ್ಲಿ ದಾಖಲಾಗಿದ್ದು, ಎಂಜಿನ್ ತನ್ನ ಕಾರ್ಯ ಸ್ಥಗಿತಗೊಳಿಸಿದ್ದರ ಕುರಿತು ಒಬ್ಬ ಪೈಲೆಟ್‌ ಮತ್ತೊಬ್ಬರನ್ನು ಕೇಳಿದ್ದಾರೆ. ತಾನು ಹಾಗೆ ಮಾಡಿಲ್ಲ ಎಂದು ಮತ್ತೊಬ್ಬ ಪೈಲೆಟ್ ಉತ್ತರಿಸಿದ್ದಾರೆ’ ಎಂದೂ ವರದಿಯಲ್ಲಿ ಹೇಳಲಾಗಿದೆ.

ಎರಡೂ ಎಂಜಿನ್‌ಗಳ (ಎಂಜಿನ್‌ 1– 1:38:52 ಹಾಗೂ ಎಂಜಿನ್‌ 2– 1:38:56) ಇಂಧನ ಪೂರೈಕೆ ಸ್ಥಿತಿಯು ಮಧ್ಯಾಹ್ನ 1.38ಕ್ಕೆ ‘ಕಟ್‌ಆಫ್‌’ ಸ್ಥಿತಿಯಿಂದ ‘ರನ್‌’ ಸ್ಥಿತಿಗೆ ಮರಳಿ ತರಲಾಗಿದೆ. ಈ ಹೊತ್ತಿಗೆ ಎರಡೂ ಎಂಜಿನ್‌ಗಳ ತಾಪಮಾನ ಏರಿಕೆಯಾಗಿದೆ. ಇದು ವಿಮಾನವನ್ನು ಮರಳಿ ಸಹಜ ಸ್ಥಿತಿಗೆ ತರುವ ಪ್ರಯತ್ನವಾಗಿದೆ. ಸ್ಥಗಿತಗೊಂಡಿದ್ದ ವಿಮಾನದ ಎಂಜಿನ್‌–1 ಸಹಜ ಸ್ಥಿತಿಗೆ ಮರಳುತ್ತಿತ್ತು. ಎಂಜಿನ್‌–2 ಸಹ ತನ್ನ ಕಾರ್ಯಾಚರಣೆ ಆರಂಭಿಸಿತು. ಆದರೆ ಅಗತ್ಯ ವೇಗವನ್ನು ವಿಮಾನಕ್ಕೆ ನೀಡಲು ಅದಕ್ಕೆ ಸಾಧ್ಯವಾಗಲಿಲ್ಲ. ಈ ಹಂತದಲ್ಲಿ ಪದೇ ಪದೇ ಇಂಧನ ಮರು ಪೂರೈಕೆಯ ಯತ್ನ ನಡೆಸಲಾಗಿದೆ. ಮಧ್ಯಾಹ್ನ 1:39:05ಕ್ಕೆ ‘ಮೇ ಡೇ, ಮೇ ಡೇ, ಮೇ ಡೇ’ ಕರೆಯನ್ನು ಪೈಲೆಟ್ ನೀಡಿರುವುದು ದಾಖಲಾಗಿದೆ. ವಿಮಾನದಲ್ಲಿದ್ದ ರೆಕಾರ್ಡರ್‌ 1:39:11ಕ್ಕೆ ಸ್ಥಗಿತಗೊಂಡಿದೆ ಎಂದು ವರದಿಯಲ್ಲಿ ನಮೂದಿಸಲಾಗಿದೆ.

ಈ ಎಲ್ಲಾ ಅಂಶಗಳು ವಿಮಾನದ ಎರಡೂ ಎಂಜಿನ್‌ಗಳಿಗೆ ಇಂಧನ ಪೂರೈಕೆ ಸ್ಥಗಿತಗೊಂಡಿದ್ದು ಹೇಗೆ? ಎಂಬುದರತ್ತಲೇ ಚರ್ಚೆ ಗಿರಕಿ ಹೊಡೆಯುತ್ತಿದೆ. ಇದು ತಾಂತ್ರಿಕ ದೋಷವೋ ಅಥವಾ ಪೈಲೆಟ್‌ಗಳ ತಪ್ಪೋ ಎಂಬುದರತ್ತಲೂ ಪ್ರಶ್ನೆಯನ್ನೂ ಹುಟ್ಟುಹಾಕಿದೆ.

ಹಾಗಿದ್ದರೆ, ಇಂಧನ ಪೂರೈಕೆ ಸ್ವಿಚ್‌ ಎಂದರೇನು?

ವಿಮಾನದ ಎಂಜಿನ್‌ಗಳಿಗೆ ಇಂಧನ ಪೂರೈಕೆ ನಿಯಂತ್ರಿಸುವ ಗುಂಡಿಯನ್ನೇ ಸ್ವಿಚ್‌ ಎಂದು ಕರೆಯಲಾಗುತ್ತದೆ. ಇದನ್ನು ಪೈಲೆಟ್‌ಗಳು ನಿಯಂತ್ರಿಸುತ್ತಾರೆ. ಇದರ ಆರಂಭ ಮತ್ತು ಎಂದು ಸ್ಥಗಿತಗೊಳಿಸಬೇಕು, ನೆಲೆ ಮೇಲೋ ಅಥವಾ ಆಗಸದಲ್ಲೋ, ಮ್ಯಾನುಯಲ್ ಶಟ್‌ಡೌನ್ ಅಥವಾ ಎಂಜಿನ್ ರಿಸ್ಟಾರ್ಟ್‌ ಮಾಡುವುದು, ಹಾರಾಟ ಸಂದರ್ಭದಲ್ಲಿ ಎಂಜಿನ್‌ ಕೈಕೊಟ್ಟರೆ ಇಂಥ ಸಂದರ್ಭಗಳಲ್ಲಿ ಇಂಧನ ಪೂರೈಕೆ ಸ್ವಿಚ್‌ ನಿಯಂತ್ರಿಸುವ ಕೆಲಸವನ್ನು ಪೈಲೆಟ್‌ ಮಾಡುತ್ತಾರೆ.

ವಿಮಾನಯಾನ ತಂತ್ರಜ್ಞರ ಪ್ರಕಾರ, ವಿಮಾನ ಹಾರಾಟ ಸಂದರ್ಭದಲ್ಲಿ ಪೈಲೆಟ್‌ಗಳು ತಪ್ಪಾಗಿಯೂ ಇಂಧನ ನಿಯಂತ್ರಣ ಗುಂಡಿಯ ಸ್ಥಿತಿಯನ್ನು ಬದಲಿಸಲು ಸಾಧ್ಯವಿಲ್ಲ. ಒಂದೊಮ್ಮೆ ಮಾಡಿದ್ದೇ ಆದಲ್ಲಿ, ಎಂಜಿನ್ ಆತಕ್ಷಣವೇ ಸ್ಥಗಿತಗೊಳ್ಳಲಿದೆ ಎಂದೆನ್ನುತ್ತಾರೆ.

ಇಲ್ಲಿ ಪ್ರತ್ಯೇಕ ಪವರ್‌ ಸಿಸ್ಟಂ ಹಾಗೂ ಇಂಧನ ಸ್ಥಗಿತಗೊಳಿಸುವ ಸ್ವಿಚ್ ಮತ್ತು ಇಂಧನ ವಾಲ್ವ್‌ಗಳ ನಿಯಂತ್ರಣಕ್ಕೆ ಪ್ರತ್ಯೇಕ ವೈರಿಂಗ್ ಕೂಡಾ ಇರುತ್ತದೆ ಎಂದು ಅಮೆರಿಕದ ವಿಮಾನ ಸುರಕ್ಷತಾ ತಜ್ಞ ಜಾನ್ ಕಾಕ್ಸ್‌ ತಿಳಿಸಿದ್ದಾರೆ.

ಫ್ಯುಯಲ್ ಸ್ವಿಚ್‌ ಎಲ್ಲಿರುತ್ತದೆ..?

ಬೋಯಿಂಗ್ 787 ವಿಮಾನದಲ್ಲಿ ಇಂಧನ ನಿಯಂತ್ರಣ ಗುಂಡಿಗಳು 2 ಜಿಇ (GE.N) ನಲ್ಲಿ ಅಳವಡಿಸಿರಲಾಗುತ್ತದೆ. ಥ್ರಸ್ಟ್‌ ಲಿವರ್‌ ಕೆಳಗೇ ಈ ಗುಂಡಿಗಳೂ ಇರುತ್ತವೆ. ಇವುಗಳು ತಮ್ಮ ಸ್ಥಿತಿಯಲ್ಲಿರುವಂತೆ ಸ್ಪ್ರಿಂಗ್‌ ಅಳವಡಿಸಿರಲಾಗುತ್ತದೆ. ಒಂದೊಮ್ಮೆ ಈ ಗುಂಡಿಯ ಸ್ಥಿತಿಯನ್ನು ಬದಲಿಸಬೇಕೆಂದರೆ, ಮೊದಲು ಪೈಲೆಟ್‌ ‘ಸ್ವಿಚ್‌ ಅಪ್‌’ ಮಾಡಬೇಕು. ನಂತರ ‘ರನ್‌’ ಸ್ಥಿತಿಯಿಂದ ‘ಕಟ್‌ಆಫ್‌’ ಸ್ಥಿತಿಗೆ ತರಬೇಕು.

ದುರಂತಕ್ಕೀಡಾದ ಏರ್‌ ಇಂಡಿಯಾ ವಿಮಾನದಲ್ಲಿ ನಡೆದದ್ದೇನು?

ಪತನಗೊಂಡ ವಿಮಾನದಿಂದ ಸಂಗ್ರಹಿಸಿದ ಕಪ್ಪುಪೆಟ್ಟಿಗೆಯಲ್ಲಿ ದಾಖಲಾದ ಮಾಹಿತಿ ಅನ್ವಯ, ಹಾರಾಟ ಆರಂಭಿಸಿದ ಒಂದು ನಿಮಿಷದಲ್ಲಿ ಒಂದು ಸೆಕೆಂಡಿನ ಅಂತರದಲ್ಲಿ ಎರಡೂ ಎಂಜಿನ್‌ಗಳಿಗೆ ಪುರೈಕೆಯಾಗುತ್ತಿದ್ದ ಇಂಧನವನ್ನು ‘ರನ್‌’ ಸ್ಥಿತಿಯಿಂದ ‘ಕಟ್‌ಆಫ್‌’ ಸ್ಥಿತಿಗೆ ಬಂದಿದೆ. ಇದರಿಂದಾಗಿ ಎಂಜಿನ್ ತನ್ನ ಶಕ್ತಿಯನ್ನು ಕಳೆದುಕೊಂಡಿದೆ.

ಕಾಕ್‌ಪಿಟ್‌ನ ಧ್ವನಿ ಮುದ್ರಣದಲ್ಲಿ ‘ಇಂಧನ ಪೂರೈಕೆ ಏಕೆ ಸ್ಥಗಿತಗೊಳಿಸಿದೆ’ ಎಂದು ಒಬ್ಬರು ಕೇಳುತ್ತಾರೆ. ‘ನಾನು ಹಾಗೆ ಮಾಡಿಲ್ಲ’ ಎಂದು ಮತ್ತೊಬ್ಬರು ಪ್ರತಿಕ್ರಿಯಿಸುತ್ತಾರೆ. ಆದರೆ ಇದರಲ್ಲಿ ಯಾವ ಹೇಳಿಕೆ ಮೊದಲ ಅಧಿಕಾರಿಯಾದ ಕ್ಯಾಪ್ಟನ್‌ನಿಂದ ಬಂತು ಎಂಬುದು ತಿಳಿದುಬಂದಿಲ್ಲ.

ಹೀಗಂದು ಒಂದೇ ಸೆಕೆಂಡಿನಲ್ಲಿ ಇದೇ ಇಂಧನ ಪೂರೈಕೆ ಸ್ವಿಚ್ ಅನ್ನು ಮರಳಿ ‘ರನ್‌’ ಸ್ಥಿತಿಗೆ ತರಲಾಗಿದೆ ಎಂದು ಪ್ರಾಥಮಿಕ ತನಿಖಾ ವರದಿಯಲ್ಲಿ ಹೇಳಲಾಗಿದೆ. ವಿಮಾನ ಪತನಗೊಂಡ ಸ್ಥಿತಿಯಲ್ಲಿ ಕಾಕ್‌ಪಿಟ್‌ ಪರಿಶೀಲಿಸಿದಾಗ ಈ ಗುಂಡಿಯು ‘ರನ್‌’ ಸ್ಥಿತಿಯಲ್ಲಿದ್ದುದು ಕಂಡುಬಂದಿದೆ ಎಂದೂ ಇದರಲ್ಲಿ ಹೇಳಲಾಗಿದೆ.

‘ಇಂಧನ ನಿಯಂತ್ರಣ ಗುಂಡಿಯನ್ನು ‘ಕಟ್‌ಆಫ್‌’ನಿಂದ ‘ರನ್‌’ ಸ್ಥಿತಿಗೆ ತಂದಲ್ಲಿ ಎರಡೂ ಎಂಜಿನ್‌ಗಳು ಆ ತಕ್ಷಣದಿಂದಲೇ ಹಾರಾಟವನ್ನು ಮರಳಿ ಸಹಜ ಸ್ಥಿತಿಗೆ ತರುತ್ತದೆ. ಅಗತ್ಯವಿರುವ ಶಕ್ತಿಯನ್ನು ಮರಳಿ ಪಡೆಯಲಿದೆ. ವಿಮಾನ ನೆಲದಿಂದ ನೆಗೆದು ಏರುವ ಹೊತ್ತಿನಲ್ಲಿ ಯಾವುದೇ ವಿವೇಕಯುತ ಪೈಲೆಟ್‌ ಈ ಗುಂಡಿಯನ್ನು ಒತ್ತಿ, ಇಂಧನ ಪೂರೈಕೆ ಸ್ಥಗಿತಗೊಳಿಸುವುದಿಲ್ಲ’ ಎಂದು ಅಮೆರಿಕದ ವಿಮಾನ ಸುರಕ್ಷತಾ ತಜ್ಞ ಜಾನ್ ನ್ಯಾನ್ಸಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.