ಆಕಾಶತೀರ ಎಂಬ ಎಐ ಆಧಾರಿತ ರಕ್ಷಣಾ ವ್ಯವಸ್ಥೆಯಿಂದಾಗಿ ಶತ್ರುಗಳ ಕ್ಷಿಪಣಿ, ಡ್ರೋನ್ ಹೊಡೆದುರುಳಿಸಲು ಸಾಧ್ಯವಾಗಿದೆ.
-ಪಿಟಿಐ ಚಿತ್ರ
ಪಾಕಿಸ್ತಾನ ಮತ್ತು ಅದರ ಆಕ್ರಮಿತ ಪ್ರದೇಶದಲ್ಲಿದ್ದ 8 ವಾಯು ನೆಲೆಗಳೂ ಸೇರಿದಂತೆ 13 ಗುರಿಗಳನ್ನು ಭಾರತವು ನುಗ್ಗಿ ಹೊಡೆಯುವುದು ಸಾಧ್ಯವಾಗಿದ್ದು ಹೇಗೆ? ಈ ಸಂಘರ್ಷದಲ್ಲಿ ಪಾಕಿಸ್ತಾನವು ಈ ಪರಿಯಾಗಿ ವೈಫಲ್ಯ ಅನುಭವಿಸಿ, ಭಾರತವು ಅಭೇದ್ಯವಾಗಿ ಉಳಿದದ್ದು ಹೇಗೆ? ಈ ಪ್ರಶ್ನೆಗಳು ಜಗತ್ತಿನಾದ್ಯಂತ ರಕ್ಷಣಾ ತಜ್ಞರನ್ನು ಈಗಲೂ ಕಾಡುತ್ತಿದೆ.
ಮೇ 9 ಹಾಗೂ ಮೇ 10ರ ನಡುವಿನ ಮಧ್ಯರಾತ್ರಿ, ಪಾಕಿಸ್ತಾನವು ಭಾರತೀಯ ಸೇನೆ ಮತ್ತು ನಾಗರಿಕ ಪ್ರದೇಶಗಳ ಮೇಲೆ ಕ್ಷಿಪಣಿ, ಡ್ರೋನ್‌ಗಳ ಮೂಲಕ ದಾಳಿ ಮಾಡಲು ಪ್ರಯತ್ನಿಸಿದಾಗ, ಭಾರತದ ಪ್ರದೇಶವನ್ನು ಉಕ್ಕಿನ ಕೊಡೆಯಂತೆ ರಕ್ಷಿಸಿದ್ದು, ಭಾರತದ ಹೆಮ್ಮೆಯ ಸುರಕ್ಷಾ ಕವಚ - ಆಕಾಶತೀರ!
ಪಾಕಿಸ್ತಾನವು ವಾಯುಮಾರ್ಗದಲ್ಲಿ ಹರಿಬಿಟ್ಟ ಡ್ರೋನ್‌ಗಳು, ಕ್ಷಿಪಣಿಗಳು, ಇತರ ಪುಟ್ಟ ಯುಎವಿಗಳು (ಮಾನವರಹಿತ ವಿಮಾನ) ಹಾಗೂ ಶಸ್ತ್ರಾಸ್ತ್ರಗಳನ್ನೆಲ್ಲ ಭಾರತೀಯ ವಾಯು ಪ್ರದೇಶದಲ್ಲಿ ಮಾರ್ಗಮಧ್ಯದಲ್ಲೇ ಪತ್ತೆ ಮಾಡಿ ತಡೆಹಿಡಿಯಲು ನೆರವಾಗಿದ್ದು ಇದೇ 'ಆಕಾಶತೀರ'.
ಆಕಾಶ ತೀರ ಎಂಬುದು ಬಹುಶಃ ಕಾರ್ಯಾಚರಣೆಯಲ್ಲಿರುವ ಮತ್ತು ಯಾವುದೇ ವಿದೇಶಿ ಬಿಡಿಭಾಗಗಳ ಅವಲಂಬನೆ ಇಲ್ಲದೆಯೇ ಭಾರತ ನಿರ್ಮಿಸಿದ ಮೊದಲ ಎಐ ವಾರ್-ಕ್ಲೌಡ್ ವ್ಯವಸ್ಥೆ. 'ಆಕಾಶತೀರ'ಕ್ಕೆ ಹೋಲಿಸಿದರೆ, HQ-9 ಮತ್ತು HQ-16 ಹೊಂದಿರುವ ಪಾಕಿಸ್ತಾನದ ವಾಯು ರಕ್ಷಣಾ ಪ್ರತಿಸ್ಪಂದಕ ವ್ಯವಸ್ಥೆಯು ನಮ್ಮ ಭಾರತದ ಪ್ರಾಜೆಕ್ಟೈಲ್‌ಗಳನ್ನು ಪತ್ತೆ ಮಾಡುವಲ್ಲಿ ಮತ್ತು ಸಕಾಲಿಕವಾಗಿ ಅವುಗಳನ್ನು ತಡೆಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇದರ ಪರಿಣಾಮ ಪಾಕಿಸ್ತಾನಕ್ಕೆ ಅವಮಾನಕಾರಿ ಹಿನ್ನಡೆ ಮತ್ತು ಅನೂಹ್ಯ ಹಾನಿ. ಆಕಾಶತೀರ ಎಂಬ ಸಂಪೂರ್ಣವಾಗಿ ಎಐ (ಕೃತಕ ಬುದ್ಧಿಮತ್ತೆ)ಯಿಂದ ಬಲಯುತವಾಗಿರುವ ಸ್ವಾಯತ್ತ ರಕ್ಷಣಾ ವ್ಯವಸ್ಥೆಯು ವೈರಿಯನ್ನು ಸಕಾಲಿಕವಾಗಿ ಮತ್ತು ಯಶಸ್ವಿಯಾಗಿ ಪತ್ತೆ ಮಾಡಿದ್ದಲ್ಲದೆ, ಡ್ರೋನ್‌ಗಳೇ ಮೇಳೈಸಿದ್ದ ಯುದ್ಧ ವ್ಯವಸ್ಥೆಯಲ್ಲಿ ಮೇಲುಗೈ ಸಾಧಿಸಿದೆ.
ಆಕಾಶತೀರವು ಸಂಬಂಧಿತ ಎಲ್ಲ ವಿಭಾಗಗಳಿಗೆ (ಕಂಟ್ರೋಲ್ ರೂಂ, ರಾಡಾರ್‌ಗಳು ಮತ್ತು ವಾಯು ರಕ್ಷಣಾ ಗನ್‌ಗಳು) ನೈಜ-ಸಮಯದಲ್ಲಿ ವಾಯುಕ್ಷೇತ್ರದ ಚಿತ್ರಣವನ್ನು ಒದಗಿಸುತ್ತದೆ. ಇದರ ಮೂಲಕ ಎಲ್ಲ ವಿಭಾಗಗಳ ಸಮನ್ವಯದಲ್ಲಿ ವಾಯು ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವುದಕ್ಕೆ ಸಾಧ್ಯವಾಗಿದೆ. ಶತ್ರು ವಿಮಾನಗಳು, ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಪತ್ತೆ ಮಾಡುವ, ಜಾಡು ಹಿಡಿಯುವ (ಟ್ರ್ಯಾಕಿಂಗ್) ಮತ್ತು ಎದುರಿಸುವುದನ್ನು ಸ್ವಯಂಚಾಲಿತಗೊಳಿಸಲು ರೂಪಿಸಲಾದ ರಕ್ಷಣಾ ವ್ಯವಸ್ಥೆಯಿದು. ವೈವಿಧ್ಯಮಯ ರಾಡಾರ್ ಸಿಸ್ಟಂಗಳು, ಸೆನ್ಸರ್‌ಗಳು ಮತ್ತು ಸಂವಹನ ತಂತ್ರಜ್ಞಾನಗಳನ್ನೆಲ್ಲಾ ಇದು ಒಂದೇ ಕಾರ್ಯಾಚರಣಾ ಚೌಕಟ್ಟಿನೊಳಗೆ ಸಮ್ಮಿಳಿತಗೊಳಿಸುತ್ತದೆ.
ಬಹುವಿಧದ ಮೂಲಗಳಿಂದ ದತ್ತಾಂಶವನ್ನು ಸಂಗ್ರಹಿಸುವ ಆಕಾಶತೀರ, ಅವುಗಳನ್ನೆಲ್ಲ ಯೋಜನಾಬದ್ಧವಾಗಿಸಿ, ಸ್ವಯಂಚಾಲಿತ ಮತ್ತು ನೈಜ-ಸಮಯದ ಮುಖಾಮುಖಿಯ ನಿರ್ಧಾರ ಕೈಗೊಳ್ಳಲು ನೆರವಾಗುತ್ತದೆ. ಆಕಾಶತೀರವು ವಿಸ್ತರಿತ C4ISR (Command, Control, Communications, Computers, Intelligence, Surveillance and Reconnaissance) ಚೌಕಟ್ಟಿನ ಭಾಗವಾಗಿದ್ದು, ಇಸ್ರೊ ಉಪಗ್ರಹಗಳು ಮತ್ತು ನಾವಿಕ್ ಜಿಪಿಎಸ್ ಮುಂತಾದ ಭಾರತೀಯ ವ್ಯವಸ್ಥೆಗಳೊಂದಿಗಿನ ಸಮನ್ವಯದಲ್ಲಿ ಕೆಲಸ ಮಾಡುತ್ತದೆ.
ಆಕಾಶತೀರದ ಅದ್ಭುತ ಶಕ್ತಿಯ ಹಿಂದಿರುವುದು ಯಾಂತ್ರಿಕತೆಯಷ್ಟೇ ಅಲ್ಲ, ಬದಲಾಗಿ ಜಾಣ್ಮೆಯ ಯುದ್ಧಕೌಶಲ. ವಾಯುರಕ್ಷಣೆಯ ಸಾಂಪ್ರದಾಯಿಕ ಮಾಡೆಲ್‌ಗಳೆಲ್ಲವೂ ನೆಲದಲ್ಲಿರುವ ರಾಡಾರ್‌ಗಳು, ಮಾನವಶಕ್ತಿ ಮೇಲ್ವಿಚಾರಣೆಯ ವ್ಯವಸ್ಥೆಗಳು ಮತ್ತು ಕಮಾಂಡ್‌ಗಳ ಸರಣಿಯಿಂದಲೇ ಟ್ರಿಗರ್ ಆಗುವ ಕ್ಷಿಪಣಿ ಬ್ಯಾಟರಿಗಳನ್ನು ಅತಿಯಾಗಿ ಅವಲಂಬಿಸಿರುತ್ತವೆ. ಆದರೆ ಆಕಾಶತೀರಕ್ಕೆ ಈ ಕಟ್ಟುಪಾಡುಗಳಿಲ್ಲ. ಯುದ್ಧಭೂಮಿಯ ಕೆಳ ಮಟ್ಟದ ವಾಯುಪ್ರದೇಶದಲ್ಲಿ ಏನಾಗುತ್ತದೆ ಎಂಬುದನ್ನೆಲ್ಲ ಅರಿಯುವ ಅದರ ತಂತ್ರಜ್ಞಾನವು, ನೆಲದಲ್ಲಿರುವ ವಾಯು ರಕ್ಷಣಾ ಶಸ್ತ್ರಾಸ್ತ್ರ ವ್ಯವಸ್ಥೆಗಳ ಸಮರ್ಥ ನಿಯಂತ್ರಣಕ್ಕೆ ಅನುಕೂಲ ಮಾಡಿಕೊಡುತ್ತದೆ.
ಆಕಾಶತೀರವು ಶತ್ರುಗಳ ಕಡೆಯಿಂದ ಬರುವ ವೈಮಾನಿಕ ವಾಹನಗಳನ್ನು (ಯುಎವಿ) ಕ್ಷಿಪ್ರವಾಗಿ ಪತ್ತೆ ಮಾಡಿ, ನಿಷ್ಕ್ರಿಯಗೊಳಿಸುವ ಸಾಮರ್ಥ್ಯ ಹೊಂದಿದೆ. ಸ್ಟೆಲ್ತ್ ಡ್ರೋನ್ ಟ್ರ್ಯಾಕಿಂಗ್, ಉಪಗ್ರಹ ಕಣ್ಗಾವಲು ಮತ್ತು ಎಐ ಆಧಾರಿತ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಅದು ಅವಲಂಬಿಸಿದೆ.
ಪರಿಸ್ಥಿತಿಗನುಗುಣವಾಗಿ ಡ್ರೋನ್‌ಗಳ ಹಾರಾಟದ ಎತ್ತರವನ್ನು ಬದಲಿಸುವುದು, ಗುರಿಗಳನ್ನು ನಿರ್ಣಯಿಸುವುದು ಮತ್ತು ಆಪರೇಟರ್ ಹಸ್ತಕ್ಷೇಪವಿಲ್ಲದೆಯೇ ದಾಳಿ ಕೈಗೊಳ್ಳುವಲ್ಲಿ ಆಕಾಶತೀರವು ಸ್ವಾಯತ್ತೆಯಿಂದ ಕೆಲಸ ಮಾಡುತ್ತದೆ. ಈ ವ್ಯವಸ್ಥೆಯು ಯಾವುದೇ ಪ್ರತಿಕೂಲ ಪರಿಸ್ಥಿತಿಯಲ್ಲೂ ಓಡಾಡಬಲ್ಲ ವಾಹನದ ಮೇಲಿರುತ್ತದೆ. 3ಡಿ ರಾಡಾರ್‌ಗಳು ಮತ್ತು ಆಕಾಶ್ ಶಸ್ತ್ರ ವ್ಯವಸ್ಥೆಗಳೊಂದಿಗೆ ಇದರಲ್ಲಿರುವ ಸೆನ್ಸರ್‌ಗಳನ್ನು ಸಂಯೋಜಿಸಲಾಗಿದೆ.
ಆಕಾಶತೀರವು ನಮ್ಮ ಯುದ್ಧಕೌಶಲ್ಯಗಳ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯ. ಭಯೋತ್ಪಾದಕ ಬೆದರಿಕೆಗಳನ್ನು ಸಾಂಪ್ರದಾಯಿಕವಾಗಿ ಎದುರಿಸುವ ಬದಲು, ಕ್ರಿಯಾತ್ಮಕ ಪ್ರತಿದಾಳಿ ಸಂಘಟಿಸಲು ಅದು ಪೂರಕ.
ಪಾಕಿಸ್ತಾನದ ಅಣ್ವಸ್ತ್ರ ಬಳಕೆಯ ಬೆದರಿಕೆಗಳ ಮೂಲಕ ಭಾರತವನ್ನು ಬ್ಲ್ಯಾಕ್‌ಮೇಲ್ ಮಾಡಲಾಗದು ಮತ್ತು, ಅಗತ್ಯ ಬಿದ್ದರೆ ಅವರ ಗಡಿಯೊಳಗೆ ನುಗ್ಗಿ ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತುಹಾಕಲು ಕೂಡ ಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಷ್ಟವಾಗಿ ಹೇಳಿರುವುದರ ಹಿಂದೆ ಇಂಥ ಅತ್ಯಾಧುನಿಕ ತಂತ್ರಜ್ಞಾನಗಳುಳ್ಳ ಸಮರ ಯಂತ್ರಗಳ ಬಲ ಇದೆ. ನಮ್ಮ ಮಿಲಿಟರಿಯ ಅತ್ಯದ್ಭುತ ಆಸ್ತಿಯೇ ಆಗಿರುವ ಆಕಾಶತೀರದ ಇರುವಿಕೆಯು, ಭಯೋತ್ಪಾದನೆಯನ್ನು ಪ್ರಾಯೋಜಿಸುವ ಪಾಕಿಸ್ತಾನದ ವಾಯು ರಕ್ಷಣಾ ಸಾಮರ್ಥ್ಯಗಳನ್ನು ಎದುರಿಸಲು ಭಾರತೀಯ ಪಡೆಗಳಿಗೆ ಹೆಚ್ಚು ಆತ್ಮವಿಶ್ವಾಸವನ್ನು ನೀಡುತ್ತಿದೆ.
ಸ್ವಾಯತ್ತ ಡ್ರೋನ್ ವ್ಯವಸ್ಥೆ, ಸ್ವದೇಶಿ ಉಪಗ್ರಹ ವಿಚಕ್ಷಣೆ ಮತ್ತು ಕೃತಕ ಬುದ್ಧಿಮತ್ತೆಯ ಸಮನ್ವಯತೆಯಿಂದ ನೈಜ-ಸಮಯದ ಸಮರ ವೇದಿಕೆ 'ಆಕಾಶತೀರ'ವನ್ನು ಯಶಸ್ವಿಯಾಗಿ ಸಜ್ಜುಗೊಳಿಸಿದ ಮೊದಲ ದೇಶ ಭಾರತ. ಒಂದೇ ಸಾಲಿನಲ್ಲಿ ಹೇಳುವುದಾದರೆ, ತನ್ನೆದುರು ಎದುರಾಳಿ ಮುಂದಿಡುವ ಯಾವುದನ್ನೇ ಆಗಲಿ ಆಕಾಶತೀರವು ನೋಡುತ್ತದೆ, ನಿರ್ಧರಿಸುತ್ತದೆ ಮತ್ತು ಅನೂಹ್ಯ ವೇಗದಿಂದ ಹೊಡೆದುರುಳಿಸುತ್ತದೆ.
ಆಕಾಶತೀರ ಎಂಬ ಎಐ ಆಧಾರಿತ ರಕ್ಷಣಾ ವ್ಯವಸ್ಥೆಯಿಂದಾಗಿ ಶತ್ರುಗಳ ಕ್ಷಿಪಣಿ, ಡ್ರೋನ್ ಹೊಡೆದುರುಳಿಸಲು ಸಾಧ್ಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.