ದೇಶಭಕ್ತಿಗೆ ಹೆಸರಾಗಿದ್ದ ದರ್ಭಾಂಗ ರಾಜಮನೆತನದ ಕೊಂಡಿಯೊಂದು ಕಳಚಿದೆ. ಈ ಮನೆತನದ ಕೊನೆಯ ಮಹಾರಾಣಿ 'ಕಾಮಸುಂದರಿ ದೇವಿ' ಅವರು ಸೋಮವಾರ (ಜನವರಿ 12) ನಿಧನರಾಗಿದ್ದಾರೆ. ಅವರ ನಿಧನವು ದರ್ಭಾಂಗ ರಾಜಮನೆತನದ ಐತಿಹಾಸಿಕ ಕೊಡುಗೆಗಳನ್ನು ಮತ್ತೆ ಮುನ್ನೆಲೆಗೆ ತಂದಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಮಹಾರಾಣಿ ಕಾಮಸುಂದರಿ ಅವರು, ಬಿಹಾರದ ದರ್ಭಾಂಗದಲ್ಲಿರುವ ತಮ್ಮ ಐತಿಹಾಸಿಕ ನಿವಾಸ 'ಕಲ್ಯಾಣಿ'ಯಲ್ಲಿ ಕೊನೆಯುಸಿರೆಳೆದರು. ಅವರ ನಿಧನದೊಂದಿಗೆ ಮಿಥಿಲಾಂಚಲ ಭಾಗದ ಪ್ರಸಿದ್ಧ ರಾಜಮನೆತನದ ಯುಗ ಅಂತ್ಯಗೊಂಡಂತಾಗಿದೆ.
1962ರ ಭಾರತ-ಚೀನಾ ಯುದ್ಧದ ಸಂದರ್ಭದಲ್ಲಿ, ಸರ್ಕಾರ ಯುದ್ಧದ ವೆಚ್ಚಕ್ಕಾಗಿ ನೆರವು ನೀಡುವಂತೆ ಮನವಿ ಮಾಡಿತ್ತು. ಆ ಮನವಿಗೆ ಸ್ಪಂದಿಸಿದ್ದ ಮಹಾರಾಣಿಯ ಕುಟುಂಬವು, ದರ್ಭಾಂಗದ ಇಂದ್ರಭವನ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ, ದೇಶದ ರಕ್ಷಣಾ ನಿಧಿಗೆ ಸುಮಾರು 15 ಮಣ (ಸುಮಾರು 600 ಕೆಜಿ ) ಚಿನ್ನವನ್ನು ದಾನವಾಗಿ ನೀಡಿತ್ತು. ಇದರ ಜತೆಗೆ, ಮೂರು ವಿಮಾನಗಳು ಮತ್ತು 90 ಎಕರೆ ಭೂಮಿಯನ್ನು ಸರ್ಕಾರಕ್ಕೆ ಹಸ್ತಾಂತರಿಸಿದ್ದರು. ಅಂದು ಅವರು ನೀಡಿದ ಆ ಜಾಗವೇ ಇಂದು 'ದರ್ಭಾಂಗ ವಿಮಾನ ನಿಲ್ದಾಣ'ವಾಗಿ ಅಭಿವೃದ್ಧಿಪಡಿಸಲಾಗಿದೆ.
ಅಲ್ಲದೇ ಈ ಮನೆತನ ಹಲವಾರು ವಿಶ್ವವಿದ್ಯಾಲಯಗಳು, ಸಕ್ಕರೆ ಮತ್ತು ಕಾಗದದ ಕಾರ್ಖಾನೆಗಳನ್ನು ಸ್ಥಾಪಿಸುವ ಮೂಲಕ ಶಿಕ್ಷಣ ಮತ್ತು ಕೈಗಾರಿಕಾ ಕ್ಷೇತ್ರಕ್ಕೂ ಗಮನಾರ್ಹ ಕೊಡುಗೆಗಳನ್ನು ನೀಡಿದೆ.
ಕಾಮಸುಂದರಿ ದೇವಿ
1962ರಲ್ಲಿ, ಕೊನೆಯ ಮಹಾರಾಜ ಕಾಮೇಶ್ವರ ಸಿಂಗ್ ನಿಧನರಾದಾಗ, ದರ್ಭಾಂಗ ಮನೆತನದ ಸಂಪತ್ತು ಸುಮಾರು ₹2,000 ಕೋಟಿ ಎಂದು ಅಂದಾಜಿಸಲಾಗಿತ್ತು. ನಂತರದ ವರ್ಷಗಳಲ್ಲಿ, ಈ ಮನೆತನದ ಟ್ರಸ್ಟಿಗಳು ಈ ಅಪಾರ ಸಂಪತ್ತಿನ ಬಹುಭಾಗವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದಾಗಿ ಸಂಪತ್ತು ಕ್ರಮೇಣ ಕ್ಷೀಣಿಸಿದೆ ಎಂದು ವರದಿಯಾಗಿದೆ.
ಕುಟುಂಬದ ಪ್ರಸ್ತುತ ಸಂಪತ್ತಿನ ನಿಖರವಾದ ಅಂಕಿ ಅಂಶ ಲಭ್ಯವಿಲ್ಲ. ಆದರೆ 1962ರಲ್ಲಿ ಸುಮಾರು ₹2,000 ಕೋಟಿ ಮೌಲ್ಯದ ಈ ಮನೆತನದ ಆಸ್ತಿಯ ಪ್ರಸ್ತುತ ಮಾರುಕಟ್ಟೆ ಮೌಲ್ಯ ಸುಮಾರು ₹4 ಲಕ್ಷ ಕೋಟಿ ಇರಬಹುದು ಎಂದು 'ಇಂಡಿಯಾ ಟುಡೇ' ವರದಿ ಮಾಡಿದೆ.
ಈ ಆಸ್ತಿಯಲ್ಲಿ 14 ದೊಡ್ಡ ಕಂಪನಿಗಳು, ಭಾರತ ಮತ್ತು ವಿದೇಶಗಳಲ್ಲಿರುವ ಬಂಗಲೆಗಳು, ಚಿನ್ನಾಭರಣ, ಭೂಮಿ ಮತ್ತು ಷೇರು ಮಾರುಕಟ್ಟೆಯಲ್ಲಿನ ಹೂಡಿಕೆಗಳು ಸೇರಿವೆ.
ಕಾಮಸುಂದರಿ ದೇವಿ
ದರ್ಭಾಂಗ ರಾಜಮನೆತನ ಶಿಕ್ಷಣ ಮತ್ತು ಕೈಗಾರಿಕಾ ಅಭಿವೃದ್ಧಿಯಲ್ಲಿಯೂ ಪ್ರಮುಖ ಪಾತ್ರ ವಹಿಸಿದೆ. ಲಲಿತ್ ನಾರಾಯಣ್ ಮಿಥಿಲಾ ವಿಶ್ವವಿದ್ಯಾಲಯವು ರಾಜಮನೆತನದ ಸಂಕೀರ್ಣದಲ್ಲಿದೆ. ಬನಾರಸ್ ಹಿಂದೂ ವಿಶ್ವವಿದ್ಯಾಲಯ, ಕಲ್ಕತ್ತಾ ವಿಶ್ವವಿದ್ಯಾಲಯ, ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಮತ್ತು ಪಟ್ನಾ ವಿಶ್ವವಿದ್ಯಾಲಯಗಳಿಗೆ ಈ ಕುಟುಂಬ ಅಪಾರ ಆರ್ಥಿಕ ನೆರವು ನೀಡಿದೆ. ದರ್ಭಾಂಗ ವೈದ್ಯಕೀಯ ಕಾಲೇಜು ಕೂಡ ಇದರ ಕೊಡುಗೆಗಳಲ್ಲಿ ಒಂದು.
ಇದಲ್ಲದೇ ಸಕ್ರಿ, ಲೋಹತ್, ರಾಯಮ್ ಮತ್ತು ಹಸನ್‌ಪುರದಲ್ಲಿ ಸಕ್ಕರೆ ಕಾರ್ಖಾನೆಗಳನ್ನು, ಹಯಾಘಾಟ್‌ನಲ್ಲಿ ಅಶೋಕ್ ಕಾಗದ ಕಾರ್ಖಾನೆ ಮತ್ತು ಸಮಷ್ಟಿಪುರದಲ್ಲಿ ರಾಮೇಶ್ವರ ಸೆಣಬಿನ ಕಾರ್ಖಾನೆ ಸ್ಥಾಪಿಸಿದ್ದರು.
ಕಾಮಸುಂದರಿ ದೇವಿ
ಮಹಾರಾಣಿ ಕಾಮಸುಂದರಿ ದೇವಿ ಅವರು ಕಾಮೇಶ್ವರ ಸಿಂಗ್ ಅವರ ಮೂರನೇ ಪತ್ನಿ. 1932 ಅಕ್ಟೋಬರ್ 22, ರಂದು ಒಡಿಶಾದ ಮಧುಬನಿ ಜಿಲ್ಲೆಯಲ್ಲಿ ಜನಿಸಿದರು. ಎಂಟನೇ ವಯಸ್ಸಿನಲ್ಲಿ ಅವರು ವಿವಾಹವಾಗಿದ್ದರು. 1962ರಲ್ಲಿ ಮಹಾರಾಜ ಕಾಮೇಶ್ವರ ಸಿಂಗ್ ನಿಧನದನಂತರ 64 ವರ್ಷಗಳ ಕಾಲ ಒಂಟಿಯಾಗಿಯೇ (ವಿಧವೆ) ಜೀವನ ಸಾಗಿಸಿದ್ದರು.
ಪತಿಯೊಂದಿಗೆ ಕಾಮಸುಂದರಿ ದೇವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.