ADVERTISEMENT

EXPLAINER | ಮಿಟ್ಸುಬಿಷಿ F-X: 6ನೇ ತಲೆಮಾರಿನ ಫೈಟರ್‌ ಜೆಟ್ ಸಿದ್ಧಪಡಿಸಿದ ಜಪಾನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಫೆಬ್ರುವರಿ 2025, 13:58 IST
Last Updated 27 ಫೆಬ್ರುವರಿ 2025, 13:58 IST
<div class="paragraphs"><p>ಮಿಟ್ಸುಬಿಷಿ ಎಫ್‌–ಎಕ್ಸ್‌</p></div>

ಮಿಟ್ಸುಬಿಷಿ ಎಫ್‌–ಎಕ್ಸ್‌

   

ಎಕ್ಸ್ ಚಿತ್ರ

ವಾಯುಸೇನೆ ಕ್ಷೇತ್ರದಲ್ಲಿ ಸದ್ಯ ಚರ್ಚೆಯಲ್ಲಿರುವ ಹಾಗೂ ಅಮೆರಿಕ, ಚೀನಾ ಮತ್ತು ರಷ್ಯಾದ ಬಳಿ ಮಾತ್ರ ಇರುವ 6ನೇ ತಲೆಮಾರಿನ ಫೈಟರ್ ಜೆಟ್‌ ಅನ್ನು ಜಪಾನ್‌ ಬಿಡುಗಡೆ ಮಾಡಿದೆ.

ಮಿಟ್ಸುಬಿಷಿ ಎಫ್‌–ಎಕ್ಸ್ ಎಂದು ಕರೆಯಲಾಗುವ ಈ ಫೈಟರ್‌ ಜೆಟ್‌, ರಾಡಾರ್‌ಗೂ ಸಿಗದ, ಅತಿ ವೇಗದ ಹಾರಾಟದ ಅತ್ಯಾಧುನಿಕ ಯುದ್ಧ ವಿಮಾನವಾಗಿದೆ. ಆಧುನಿಕ ಯುಗದಲ್ಲಿ ಜಗತ್ತಿನ ಮೂರು ಪ್ರಮುಖ ರಾಷ್ಟ್ರಗಳ ಬಳಿ ಮಾತ್ರ ಇರುವ ಇಂಥ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿರುವ ಜಪಾನ್‌, ಭವಿಷ್ಯದಲ್ಲಿ ಎದುರಾಗಬಹುದಾದ ಅಪಾಯಗಳಿಗೆ ತನ್ನ ತಂತ್ರಜ್ಞಾನ ಸಾಮರ್ಥ್ಯದ ಮೂಲಕವೇ ಉತ್ತರ ರವಾನಿಸಿದೆ. ಇದರಿಂದ ಇಂಡೊ–ಪೆಸಿಫಿಕ್ ಪ್ರಾಂತ್ಯದಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಂಡಿದೆ.

ADVERTISEMENT

ಮಿಟ್ಸುಬಿಷಿ ಎಫ್‌–ಎಕ್ಸ್‌ನ ಸಾಮರ್ಥ್ಯವೇನು?

2000 ಇಸವಿಯಲ್ಲಿ ತಾನು ಅಭಿವೃದ್ಧಿಪಡಿಸಿದ ಎಫ್‌–22 ರ‍್ಯಾಪ್ಟರ್‌ ರಫ್ತು ಮೇಲೆ ಅಮೆರಿಕ ನಿಷೇಧ ಹೇರಿತು. ಆ ಸಂದರ್ಭದಲ್ಲಿ 5ನೇ ತಲೆಮಾರಿನ ಯುದ್ಧ ವಿಮಾನವಿಲ್ಲದೆ ಪರದಾಡಿದ ಜಪಾನ್‌, ತನ್ನದೇ ಆದ ಯುದ್ಧ ಸಾಧನಗಳ ಅಭಿವೃದ್ಧಿಗೆ ಕೈಹಾಕಿತು. ಆಗಲೇ ಮಿಟ್ಸುಬಿಷಿ ಎಫ್‌–ಎಕ್ಸ್‌ನ ತಯಾರಿಕೆ ಕಾರ್ಯಕ್ರಮ ಪ್ರಾರಂಭವಾಯಿತು.

ಮಿಟ್ಸುಬಿಷಿ ಎಫ್‌–2 ಈಗಾಗಲೇ ಬಳಕೆಯಲ್ಲಿದೆ. ಅದರ ನಂತರದ ಅವತರಿಣಿಕೆಯೇ ಮಿಟ್ಸುಬಿಷಿ ಎಫ್‌–ಎಕ್ಸ್‌. ಹಲವು ಬಗೆಯ ಕಾರ್ಯಗಳನ್ನು ನಿರ್ವಹಿಸಬಲ್ಲ ಸಾಮರ್ಥ್ಯವುಳ್ಳ ಈ ಯುದ್ಧ ವಿಮಾನವು, ವಾಯು ಮಾರ್ಗದಲ್ಲಿ ಎದುರಾಗಬಹುದಾದ ಅಪಾಯವನ್ನು ಬೇಗನೆ ಗ್ರಹಿಸಿ, ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸುವ ಸಾಮರ್ಥ್ಯ ಹೊಂದಿದೆ. 

ಜಪಾನ್‌ನ ಈ ಯುದ್ಧ ವಿಮಾನವು ರಹಸ್ಯ ಹಾರಾಟ ನಡೆಸಬಲ್ಲದು, ಶಸ್ತ್ರಾಸ್ತ್ರಗಳನ್ನು ಹೊತ್ತು ಸಾಗಬಲ್ಲದು ಮತ್ತು ಎಂಜಿನ್‌, ಹಾರಾಟವನ್ನು ನೆಲದಿಂದಲೇ ನಿಯಂತ್ರಿಸಬಲ್ಲ ಏವಿಯಾನಿಕ್ಸ್‌ ಸೌಕರ್ಯವನ್ನೂ ಹೊಂದಿದೆ.

ಜಪಾನ್ ಮಾತ್ರ ಈ ಯುದ್ಧ ವಿಮಾನ ಅಭಿವೃದ್ಧಿಪಡಿಸಿತೇ?

ಮಿಟ್ಸುಬಿಷಿ ಎಫ್‌–ಎಕ್ಸ್ ಯುದ್ಧ ವಿಮಾನ ಅಭಿವೃದ್ಧಿಯಲ್ಲಿ ಜಪಾನ್‌ ಜತೆಗೆ ಯುರೋಪ್‌ನ ಕೆಲ ರಾಷ್ಟ್ರಗಳೂ ಜತೆಗೂಡಿವೆ. 2022ರ ಡಿಸೆಂಬರ್‌ನಲ್ಲಿ ಅತ್ಯಾಧುನಿಕ ಯುದ್ಧ ವಿಮಾನ ಅಭಿವೃದ್ಧಿಯಲ್ಲಿ ಜಪಾನ್‌ ಜತೆಗೆ ಬ್ರಿಟನ್ ಮತ್ತು ಇಟಲಿ ಅಧಿಕೃತವಾಗಿ ಜತೆಗೂಡಿದವು. ಇದಕ್ಕಾಗಿ ಜಾಗತಿಕ ಯುದ್ಧ ವಿಮಾನ ಕಾರ್ಯಕ್ರಮ (GCAP) ಅಸ್ತಿತ್ವಕ್ಕೆ ಬಂದಿತು. 

ಈ ಒಪ್ಪಂದದ ಭಾಗವಾಗಿ ಜಪಾನ್‌ನ ಮಿಟ್ಸುಬಿಷಿ ಎಫ್‌–ಎಕ್ಸ್‌, ಬ್ರಿಟನ್‌ನ ಟೆಂಪೆಸ್ಟ್‌ ಫೈಟರ್ ಜೆಟ್‌ ಮತ್ತು ಇಟಲಿಯ ಮುಂದಿನ ತಲೆಮಾರಿನ ಯುದ್ಧ ವಿಮಾನ ತಂತ್ರಜ್ಞಾನ ಕಾರ್ಯಕ್ರಮಗಳು ರಚನೆಗೊಂಡವು.

ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿರುವ ಈ ಪಾಲುದಾರಿಕೆಯ ಬಳಕೆಯೋಗ್ಯ 6ನೇ ತಲೆಮಾರಿನ ಯುದ್ಧ ವಿಮಾನವು 2035ರ ಹೊತ್ತಿಗೆ ಹೊಸ ತಂತ್ರಜ್ಞಾನದೊಂದಿಗೆ ಲಭ್ಯವಾಗಲಿದೆ. ಇದರಲ್ಲಿ ರಹಸ್ಯ ಹಾರಾಟದೊಂದಿಗೆ ಕೃತಕ ಬುದ್ಧಿಮತ್ತೆಯ ಸೌಲಭ್ಯ ಮತ್ತು ಮುಂದಿನ ತಲೆಮಾರಿನ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊತ್ತು ಸಾಗುವ ಸಾಮರ್ಥ್ಯ ಇರಲಿದೆ ಎಂದೆನ್ನಲಾಗಿದೆ.

ಈ ಪಾಲುದಾರಿಕೆಯಲ್ಲಿ ಡಿಜಿಟಲ್ ನಿಯಂತ್ರಕಗಳು, ರಹಸ್ಯ ಕಾರ್ಯಾಚರಣೆಗೆ ಅಗತ್ಯವಿರುವ ಕವಚ, ಹಾರಾಟದ ಸಂದರ್ಭದಲ್ಲಿ ಸಂಗ್ರಹಿಸುವ ಮಾಹಿತಿ ವಿಶ್ಲೇಷಿಸುವ ತಂತ್ರಜ್ಞಾನವನ್ನು ಬ್ರಿಟನ್ ನಿರ್ವಹಿಸುತ್ತಿದೆ.

ರಾಡಾರ್‌ ಅಭಿವೃದ್ಧಿ ಮತ್ತು ನೆಟ್‌ವರ್ಕ್‌ ಕೇಂದ್ರಿತ ಯುದ್ಧ ಕೌಶಲಗಳನ್ನು ಅಳವಡಿಸುವ ಹೊಣೆಯನ್ನು ಇಟಲಿ ಹೊತ್ತಿದೆ.

ನೆಲದಿಂದಲೇ ವಿಮಾನ ನಿಯಂತ್ರಿಸುವ ಏವಿಯಾನಿಕ್ಸ್‌, ಎಲೆಕ್ಟ್ರಾನಿಕ್‌ ಯುದ್ಧ ಕೌಶಲ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಹೊಣೆಯನ್ನು ಜಪಾನ್‌ ವಹಿಸಿಕೊಂಡಿದೆ.

ಮಿಟ್ಸುಬಿಷಿ ಎಫ್‌–ಎಕ್ಸ್‌ನ ತಂತ್ರಜ್ಞಾನವೇನು?

ರಹಸ್ಯ ಕಾರ್ಯಾಚರಣೆ: ಸದ್ಯ ಬಳಕೆಯಲ್ಲಿರುವ ರಾಡಾರ್‌ಗಳಿಗೆ ಮಿಟ್ಸುಬಿಷಿ ಎಫ್‌–ಎಕ್ಸ್‌ ಕಾಣಿಸದು ಎಂದು ಹೇಳಲಾಗುತ್ತಿದೆ. ವಿಮಾನ ತಯಾರಿಕೆಯಲ್ಲಿ ಬಳಕೆಯಾಗಿರುವ ಲೋಹದಲ್ಲೇ ಇದಕ್ಕೆ ಪೂರಕ ವಸ್ತುಗಳನ್ನು ಬಳಸಲಾಗಿದೆ. ಆ್ಯಕ್ಟೀವ್ ಕೆಮೊಫ್ಲೇಜ್‌ ತಂತ್ರಜ್ಞಾನ ಅಳವಡಿಸಲಾಗಿದೆ. ಇದರಿಂದ ಈ ಯುದ್ಧ ವಿಮಾನವನ್ನು ಪತ್ತೆ ಮಾಡುವುದು ಅಸಾಧ್ಯ ಎಂದೆನ್ನಲಾಗಿದೆ.

ಕೃತಕ ಬುದ್ಧಿಮತ್ತೆ ಮತ್ತು ಸ್ವಯಂಚಾಲಿತ ವಿಮಾನ: ಪ್ರತಿ ಕ್ಷಣದ ಮಾಹಿತಿಯನ್ನು ಸಂಗ್ರಹಿಸಿ, ವಿಶ್ಲೇಷಿಸಿ ಪೈಲಟ್‌ಗೆ ಮಾಹಿತಿ ರವಾನಿಸುವ ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನವು ಸೆಕೆಂಡ್‌ ಒಳಗಾಗಿ ವಿಮಾನದ ಗತಿ ಬದಲಿಸುವ ಸಾಮರ್ಥ್ಯ ಹೊಂದಿದೆ. ಜತೆಗೆ ಈ ವಿಮಾನದೊಂದಿಗೆ ಸ್ವಯಂ ಚಾಲಿತ ಡ್ರೋನ್‌ ಕೂಡಾ ಹಾರಾಟ ನಡೆಸಿ, ಮಾರ್ಗದರ್ಶನ ಮಾಡುವ ವ್ಯವಸ್ಥೆಯನ್ನೂ ಇದರಲ್ಲಿ ಅಳವಡಿಸಲಾಗಿದೆ.

ಹೈಪರ್‌ಸಾನಿಕ್‌, ಲೇಸರ್‌ ಶಸ್ತ್ರಾಸ್ತ್ರ ಅಳವಡಿಕೆ: ಮಾರ್ಕ್‌ 5 ವೇಗದಲ್ಲಿ ಹೈಪರ್‌ಸಾನಿಕ್ ಕ್ಷಿಪಣಿಗಳನ್ನು ಇದರಲ್ಲಿ ಅಳವಡಿಸಬಹುದಾಗಿದೆ. ಇದರೊಂದಿಗೆ ಲೇಸರ್ ಆಧಾರಿತ ಯುದ್ಧ ವಿಮಾನಗಳಲ್ಲಿ ಬಳಸುವ ರಕ್ಷಣಾ ಸಾಮಗ್ರಿಗಳು, ಕ್ಷಿಪಣಿಗಳನ್ನು ಹೊಡೆದುರುಳಿಸಬಲ್ಲ ಸಾಧನಗಳನ್ನು ಇದು ಹೊತ್ತು ಸಾಗುವ ಸಾಮರ್ಥ್ಯ ಹೊಂದಿದೆ.

ಅತ್ಯಾಧುನಿಕ ಏವಿಯಾನಿಕ್ಸ್‌, ಸೆನ್ಸರ್‌ಗಳು: ಮಿಟ್ಸುಬಿಷಿ ಎಫ್‌–ಎಕ್ಸ್‌ನಲ್ಲಿ 360 ಡಿಗ್ರಿಯಲ್ಲಿ ಕಾರ್ಯನಿರ್ವಹಿಸಬಲ್ಲ ಸೆನ್ಸರ್‌ಗಳನ್ನು ಅಳವಡಿಸಲಾಗಿದೆ. ಇದು ಎಫ್‌–35 ಮಾದರಿಯಂತೆಯೇ ಆದರೂ, ಆಧುನಿಕ ಸ್ಪರ್ಶ ನೀಡಲಾಗಿದೆ ಎಂದು ವರದಿಯಾಗಿದೆ. ಬಹು ಆಯಾಮಗಳಿಂದ ಮಾಹಿತಿ ಸಂಗ್ರಹಿಸಿ ವಿಶ್ಲೇಷಿಸುವ ಈ ಸಾಧನವು, ಆ ಕ್ಷಣದ ಪರಿಸ್ಥಿತಿಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಲು ನೆರವಾಗಲಿದೆ. 

ಪರಿಣಾಮಕಾರಿ ಇಂಧನ ಬಳಕೆ: ಅಗತ್ಯಕ್ಕೆ ತಕ್ಕಂತೆ ಇಂಧನ ಬಳಸಿ ವೇಗ ಪಡೆಯುವ ಮೂಲಕ ಇಂಧನ ಕ್ಷಮತೆಗೆ ಈ ಯುದ್ಧ ವಿಮಾನದಲ್ಲಿ ಒತ್ತು ನೀಡಲಾಗಿದೆ. ಸದ್ಯ ಇರುವ ಯುದ್ಧ ವಿಮಾನಗಳಲ್ಲಿ ವೇಗ ಹಾಗೂ ಇಂಧನ ಮಿತವ್ಯಯ ಎಂಬ ಎರಡು ಮೋಡ್‌ಗಳು ಮಾತ್ರ ಇರುತ್ತವೆ. ಆದರೆ ಇದರಲ್ಲಿ ಆ ಕ್ಷಣದ ಪರಿಸ್ಥಿತಿಗೆ ತಕ್ಕಂತೆ ಅಗತ್ಯವಿರುವಷ್ಟು ವೇಗ ಹೆಚ್ಚಿಸುವ ಹಾಗೂ ತಗ್ಗಿಸುವ ಸಾಮರ್ಥ್ಯವಿದೆ.

ಚೀನಾ ಹಿಡಿತಕ್ಕೆ ಜಪಾನ್‌ನ ಪ್ರತ್ಯುತ್ತರ

ದಕ್ಷಿಣ ಚೀನಾ ಸಮುದ್ರದಲ್ಲಿ ಬಿಗಿ ಹಿಡಿತ ಸಾಧಿಸಲು ಯತ್ನಿಸುತ್ತಿರುವ ಚೀನಾ, ಅತ್ಯಾಧುನಿಕ ರಕ್ಷಣಾ ಸಾಮಗ್ರಿಗಳ ಅಭಿವೃದ್ಧಿಯಲ್ಲಿ ತೊಡಗಿದೆ. ಚೀನಾದ ಇತ್ತೀಚಿನ ದೈತ್ಯ ಜೆ–20 ಯುದ್ಧ ವಿಮಾನ ಯೋಜನೆಗೆ ಸೆಡ್ಡು ಹೊಡೆಯುವ ಯೋಜನೆ ಹೊಂದಿರುವ ಜಪಾನ್, ಇದೀಗ ಮಿಟ್ಸುಬಿಷಿ ಎಫ್–ಎಕ್ಸ್ ಯುದ್ಧ ವಿಮಾನ ಹೊರತಂದಿವೆ.

ಈ ಯುದ್ಧ ವಿಮಾನವು ಚೀನಾ ಮಾತ್ರವಲ್ಲದೆ, ಅಮೆರಿಕ ಹಾಗೂ ರಷ್ಯಾದ ಅತ್ಯಾಧುನಿಕ ಯುದ್ಧ ವಿಮಾನಗಳಿಗೂ ಪೈಪೋಟಿ ನೀಡುವಂತೆ ಅಭಿವೃದ್ಧಿಪಡಿಸಲಾಗಿದೆ. ರಷ್ಯಾದ ಸುಕೋಯ್‌ 57, ಅಮೆರಿಕದ ಎಫ್‌–35ನಂತ ಯುದ್ಧ ವಿಮಾನಗಳ ತಂತ್ರಜ್ಞಾನವನ್ನೂ ಮೀರಿಸುವ ತಂತ್ರಜ್ಞಾನ ಇದರದ್ದಾಗಿದೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.