ADVERTISEMENT

National Youth Day 2026: ಯುವಜನತೆ ಅನುಸರಿಸಬೇಕಾದ ಆರೋಗ್ಯಕರ ಅಭ್ಯಾಸಗಳಿವು..

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜನವರಿ 2026, 9:36 IST
Last Updated 12 ಜನವರಿ 2026, 9:36 IST
   
ಯುವಜನತೆಗೆ ಸ್ಫೂರ್ತಿಯಾಗಿರುವ ಸ್ವಾಮಿ ವಿವೇಕಾನಂದ ಅವರ ಜನ್ಮದಿನವನ್ನು ಪ್ರತಿ ವರ್ಷ ಜನವರಿ 12ರಂದು 'ರಾಷ್ಟ್ರೀಯ ಯುವದಿನ'ವನ್ನಾಗಿ ಆಚರಿಸಲಾಗುತ್ತದೆ. ಈ ದಿನದ ಹಿನ್ನೆಲೆ ಯುವಜನತೆ ಅನುಸರಿಸಬೇಕಾದ ಆರೋಗ್ಯಕರ ಅಭ್ಯಾಸಗಳಾವುವು ಎಂಬುವುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ರಾಷ್ಟ್ರೀಯ ಯುವ ದಿನದ ಇತಿಹಾಸ

ಭಾರತ ಸರ್ಕಾರ 1984 ರಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಆ ಬಳಿಕ 1985 ರಲ್ಲಿ ಮೊದಲ ಬಾರಿಗೆ ದೇಶದಲ್ಲಿ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜನವರಿ 12 ರಂದು ರಾಷ್ಟ್ರೀಯ ಯುವ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಆರೋಗ್ಯದ ಬಗ್ಗೆ ಜಾಗೃತಿ ವಹಿಸಿ

ಯುವಜನತೆ ಆರೋಗ್ಯದ ಬಗ್ಗೆ ಜಾಗೃತಿ ವಹಿಸುವುದು ಅತ್ಯಂತ ಮುಖ್ಯವಾಗಿದೆ. ಏಕೆಂದರೆ ಅನೇಕ ದೀರ್ಘಕಾಲಿಕ ರೋಗಗಳು ಹದಿಹರೆಯದ ಮತ್ತು ಪ್ರೌಢವಸ್ಥೆಯಲ್ಲಿಯೇ ಕಾಣಿಸಿಕೊಳ್ಳಲಾರಾಂಭಿಸುತ್ತವೆ. ಇತ್ತೀಚೀನ ವರದಿಗಳ ಪ್ರಕಾರ ಕೆಟ್ಟ ಆಹಾರ ಪದ್ಧತಿ, ದೈಹಿಕ ಚಟುವಟಿಕೆಯ ಕೊರತೆ, ಮಾನಸಿಕ ಒತ್ತಡ ಮತ್ತು ನಿದ್ರೆಯ ಅಭಾವ ಇದಕ್ಕೆ ಮುಖ್ಯ ಕಾರಣ. ಇದರಿಂದಾಗಿ ಸ್ಥೂಲಕಾಯ, ಟೈಪ್–2 ಮಧುಮೇಹ, ರಕ್ತದೊತ್ತಡ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎನ್ನುತ್ತವೆ ಸಂಶೋಧನೆಗಳು.

ಹಾಗಾಗಿ ಯುವಜನತೆ ಮಾನಸಿಕ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವುದು ಅಗತ್ಯ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, 10 ರಿಂದ 19 ವರ್ಷದೊಳಗಿನ ಪ್ರತೀ ಏಳು ಮಂದಿ ಹದಿ ಹರೆಯದವರಲ್ಲಿ ಒಬ್ಬರಿಗೆ ಮಾನಸಿಕ ಆರೋಗ್ಯ ಸಮಸ್ಯೆ ಇದೆ. ಪ್ರಾರಂಭಿಕ ಹಂತದಲ್ಲೇ ಸಮಸ್ಯೆ ಪತ್ತೆಯಾದರೆ ಸೂಕ್ತ ಚಿಕಿತ್ಸೆ ಪಡೆದು ಸಮಸ್ಯೆಯಿಂದ ಮುಕ್ತವಾಗಬಹುದು.

ADVERTISEMENT

ಯುವಜನತೆ ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳು

  • ಚಯಾಪಚಯ ಕ್ರಿಯೆ ಸಮಸ್ಯೆ(Metabolic disorders):

    ಸಂಸ್ಕರಿತ ಆಹಾರಗಳ ಅತಿಯಾದ ಸೇವನೆಯಿಂದ ಉಂಟಾಗುವ ತೂಕ ಹೆಚ್ಚಳ, ಸ್ಥೂಲತೆ ಹಾಗೂ ಟೈಪ್–2 ಮಧುಮೇಹ.

  • ಹೃದಯ–ರಕ್ತನಾಳ ಸಂಬಂಧಿತ ಸಮಸ್ಯೆ: ಚಿಕ್ಕ ವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತಿರುವ ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟ ಹೆಚ್ಚಳ.

  • ಮಾನಸಿಕ ಆರೋಗ್ಯ ಸಮಸ್ಯೆಗಳು: ಖಿನ್ನತೆ ಮತ್ತು ಆತಂಕ

  • ಲೈಂಗಿಕ ಸಂಪರ್ಕದಿಂದ ಹರಡುವ ಸೋಂಕುಗಳು: ಅಸುರಕ್ಷಿತ ಲೈಂಗಿಕ ಕ್ರಿಯೆಗಳಿಂದ ಉಂಟಾಗುವ ಕ್ಲಮೈಡಿಯಾ, ಗೊನೋರಿಯಾ, ಎಚ್‌ಐವಿ ಮತ್ತು ಎಚ್‌ಪಿವಿ ಸೋಂಕುಗಳು.

  • ಕೆಟ್ಟ ಜೀವನಶೈಲಿಯಿಂದ ಉಂಟಾಗುವ ಸಮಸ್ಯೆಗಳು: ಅತಿಯಾದ ಮೊಬೈಲ್ ಬಳಕೆ, ನಿದ್ರಾ ಹೀನತೆ ಮತ್ತು ಒತ್ತಡ.

  • ಪೌಷ್ಟಿಕಾಂಶ ಕೊರತೆ: ಕಬ್ಬಿಣಾಂಶ ಕೊರತೆ, ವಿಟಮಿನ್ ಡಿ ಕೊರತೆ ಮತ್ತು ಅಸಮರ್ಪಕ ಆಹಾರ ಪದ್ಧತಿಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.

  • ಮಾದಕ, ಹಾನಿಕಾರಕ ವಸ್ತುಗಳ ಸೇವನೆ: ತಂಬಾಕು, ಗುಟ್ಕಾ ಸೇವನೆ, ಧೂಮಪಾನ ಮತ್ತು ಮದ್ಯಪಾನದಿಂದ ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ.

ಆರೋಗ್ಯ ತಪಾಸಣೆ ಮುಖ್ಯ

ನಿಯಮಿತವಾಗಿ ಅರೋಗ್ಯ ತಪಾಸಣೆಗೆ ಒಳಗಾಗುವುದರಿಂದ ಆರಂಭಿಕ ಹಂತದಲ್ಲಿಯೇ ರೋಗಗಳನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಇದರಿಂದ ಸಮಯೋಚಿತ ಚಿಕಿತ್ಸೆ ಪಡೆಯಬಹುದು ಮತ್ತು ಆರೋಗ್ಯಕರ ಜೀವನಶೈಲಿ ರೂಪಿಸಿಕೊಳ್ಳಬಹುದು. ಯುವಜನರಿಗೆ ಶಾರೀರಿಕ ಫಿಟ್ನೆಸ್ ಮತ್ತು ಪೌಷ್ಟಿಕ ಆಹಾರ ಹಾಗೂ ಸುರಕ್ಷಿತ ಲೈಂಗಿಕ ಕ್ರಿಯೆ ಬಗ್ಗೆ ಸಲಹೆ ಸೂಚನೆ ಅಗತ್ಯ. ಇದರಿಂದಾಗಿ ಆರೋಗ್ಯ ಸಮಸ್ಯೆಗಳು ಎದುರಾದಾಗ ಸಮಯಕ್ಕೆ ಸರಿಯಾದ ಆರೈಕೆ ದೊರಕುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.

ಪ್ರಮುಖ ಆರೋಗ್ಯ ಪರೀಕ್ಷೆಗಳು

ಸಾಮಾನ್ಯ ಹಾಗೂ ಪರಿಣಾಮಕಾರಿ ಸಮಸ್ಯೆಗಳನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆಹಚ್ಚಲು ಕೆಲವು ತಪಾಸಣೆಗಳು ಅಗತ್ಯ ಎನ್ನುತ್ತಾರೆ ತಜ್ಞರು. ಪ್ರಮುಖ ಆರೋಗ್ಯ ಪರೀಕ್ಷೆಗಳು ಹೀಗಿವೆ...

  • ರಕ್ತದೊತ್ತಡ ಪರೀಕ್ಷೆ

  • ಬಾಡಿ ಮಾಸ್ ಇಂಡೆಕ್ಸ್ (BMI)– ಇದು ದೇಹದಲ್ಲಿನ ಕೊಬ್ಬಿನ ಪ್ರಮಾಣ ಅಂದಾಜು, ಸ್ಥೂಲಕಾಯತೆ ಮತ್ತು ಸಂಬಂಧಿತ ಕಾಯಿಲೆಗಳನ್ನು ಪತ್ತೆ ಹಚ್ಚಲು ಸಹಾಯಕ.

  • ಲಿಪಿಡ್ ಪ್ರೊಫೈಲ್ (Lipid Profile) ಇದು ರಕ್ತ ಪರೀಕ್ಷೆಯಾಗಿದ್ದು, ರಕ್ತದಲ್ಲಿರುವ ಕೊಬ್ಬಿನ (ಲಿಪಿಡ್) ಮಟ್ಟವನ್ನು ಅಳೆಯುತ್ತದೆ. ಮುಖ್ಯವಾಗಿ ಒಟ್ಟು ಕೊಲೆಸ್ಟ್ರಾಲ್ ಪ್ರಮಾಣ, ಕೆಟ್ಟ ಕೊಲೆಸ್ಟ್ರಾಲ್ (LDL), ಒಳ್ಳೆಯ ಕೊಲೆಸ್ಟ್ರಾಲ್ (HDL), ಮತ್ತು ಟ್ರೈಗ್ಲಿಸರೈಡ್‌ಗಳನ್ನು ಪರಿಶೀಲಿಸಲು ಸಹಾಯಕ.

  • ಫಾಸ್ಟಿಂಗ್ ಬ್ಲಡ್ ಶುಗರ್ (FBS) ಪರೀಕ್ಷೆ ಅಥವಾ HbA1c ಪರೀಕ್ಷೆ –ಇದು ರಕ್ತದಲ್ಲಿನ ಸಕ್ಕರೆಯ (ಗ್ಲೂಕೋಸ್) ಪ್ರಮಾಣವನ್ನು ಅಳೆಯುವ ಪರೀಕ್ಷೆಯಾಗಿದೆ.

  • ರಕ್ತಹೀನತೆ ಮತ್ತು ಸೋಂಕುಗಳನ್ನು ಪತ್ತೆಹಚ್ಚಲು ಸಿಬಿಸಿ (Complete Blood Count) ಪರೀಕ್ಷೆ–

    ಇದು ರಕ್ತದಲ್ಲಿರುವ ಕೆಂಪು ರಕ್ತ ಕಣಗಳು (RBC), ಬಿಳಿ ರಕ್ತ ಕಣಗಳು (WBC) ಮತ್ತು ಪ್ಲೇಟ್‌ಲೆಟ್‌ಗಳ ಸಂಖ್ಯೆಯನ್ನು ಅಳೆಯುವ ಒಂದು ಸಾಮಾನ್ಯ ರಕ್ತ ಪರೀಕ್ಷೆಯಾಗಿದೆ. ಈ ಪರೀಕ್ಷೆಯು ಒಟ್ಟಾರೆ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತದೆ. ಜೊತೆಗೆ ಸೋಂಕುಗಳು, ರಕ್ತಹೀನತೆ (anemia), ರಕ್ತದ ಕ್ಯಾನ್ಸರ್‌ನಂತಹ ರೋಗಗಳನ್ನು ಪತ್ತೆಹಚ್ಚಲು ಸಹಾಯಕ.

  • ವಿಟಮಿನ್ ಡಿ ಪರೀಕ್ಷೆ–ಮೂಳೆಗಳ ಆರೋಗ್ಯ ಮತ್ತು ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ಸಹಾಯಕ.

  • STD ಪರೀಕ್ಷೆ – ಲೈಂಗಿಕ ಸಂಪರ್ಕದಿಂದ ಹರಡುವ ರೋಗಗಳ ಪತ್ತೆಗೆ STD/STI ಪರೀಕ್ಷೆ ಮಾಡಲಾಗುತ್ತದೆ.

ಯಾರು ಈ ಆರೋಗ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು?
  • ಹೃದಯ ರೋಗ, ಮಧುಮೇಹ ಅಥವಾ ಕ್ಯಾನ್ಸರ್‌ ಇತಿಹಾಸ ಹೊಂದಿರುವ ಕುಟುಂಬದಿಂದ ಬಂದವರಿಗೆ ಹೆಚ್ಚಿನ ಅಪಾಯ ಎದುರಾಗುವ ಸಾಧ್ಯತೆ ಇರುತ್ತದೆ.

  • ಲೈಂಗಿಕವಾಗಿ ಸಕ್ರಿಯರಾಗಿರುವವರು ಅಥವಾ ಅನೇಕ ಸಂಗಾತಿಗಳನ್ನು ಹೊಂದಿರುವವರು ನಿಯಮಿತವಾಗಿ ಲೈಂಗಿಕ ಸಂಪರ್ಕದಿಂದ ಹರಡುವ ಸೋಂಕುಗಳ (STI) ತಪಾಸಣೆ ಮಾಡಿಸಿಕೊಳ್ಳಬೇಕು.

  • ಕ್ರೀಡಾಪಟುಗಳು ಮತ್ತು ಫಿಟ್ನೆಸ್ ಆಸಕ್ತರು. ಅತಿಯಾದ ಅಭ್ಯಾಸದಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಅರಿತು ಕೊಳ್ಳುವುದು ಒಳಿತು.

  • ನಿರಂತರ ದಣಿವು, ತೂಕದಲ್ಲಿ ಏರುಪೇರು ಹಾಗೂ ನಿರಂತರವಾಗಿ ಒತ್ತಡದಂತ ಸಮಸ್ಯೆಗಳನ್ನು ಹೊಂದಿರುವವರು.

  • ಹೆಚ್ಚಿನ ಒತ್ತಡ ಅನುಭವಿಸುವ ವಿದ್ಯಾರ್ಥಿಗಳು ಮತ್ತು ಉದ್ಯೋಗದಲ್ಲಿರುವರು.

  • ಅಸಮರ್ಪಕ ಆಹಾರ ಪದ್ಧತಿ ಅಥವಾ ಜೀವನಶೈಲಿ ಅನುಸರಿಸುತ್ತಿರುವವರು.

  • ತಂಬಾಕು, ಮದ್ಯ ಅಥವಾ ಇತರ ಮಾದಕವಸ್ತುಗಳನ್ನು ಬಳಸುವವರು.

ಎಷ್ಟು ಅವಧಿಗೆ ಒಮ್ಮೆ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಬೇಕು?
  • 18 ರಿಂದ 30 ವರ್ಷದೊಳಗಿನವರು ಪ್ರತಿವರ್ಷವೂ ಸಮಗ್ರ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ.

  • ಕೊಲೆಸ್ಟ್ರಾಲ್ (ಲಿಪಿಡ್ ಪ್ರೊಫೈಲ್) ಪರೀಕ್ಷೆಯನ್ನು ಸಾಮಾನ್ಯವಾಗಿ ಪ್ರತಿ 4–6 ವರ್ಷಗಳಿಗೆ ಒಮ್ಮೆ ಮಾಡಿಸಿಕೊಂಡರೆ ಸಾಕು.

  • ಮಾನಸಿಕ ಆರೋಗ್ಯ ತಪಾಸಣೆಯನ್ನು ಅಗತ್ಯವಿರುವ ಸಂದರ್ಭದಲ್ಲಿ ನಡೆಸುವುದು ಸೂಕ್ತ.‌‌

ಯುವಜನತೆ ಅನುಸರಿಸಬೇಕಾದ ಆರೋಗ್ಯಕರ ಅಭ್ಯಾಸಗಳು
  • ನಿಯಮಿತ ವ್ಯಾಯಾಮ ಮಾಡಿ: ಉದಾಹರಣೆ.. ನಡೆಯುವುದು, ಸೈಕ್ಲಿಂಗ್ ಅಥವಾ ಯೋಗ ಮಾಡುವುದು ಇತ್ಯಾದಿ.

  • ಸಮತೋಲಿತ ಆಹಾರ ಸೇವಿಸಿ: ಹಣ್ಣುಗಳು, ತರಕಾರಿ ಮತ್ತು ಧಾನ್ಯಗಳನ್ನು ಹೆಚ್ಚಾಗಿ ಸೇವಿಸಿ. ಸಕ್ಕರೆ ಮತ್ತು ಸಂಸ್ಕರಿತ ಆಹಾರ ಸೇವನೆಯನ್ನು ಕಡಿಮೆ ಮಾಡಿ.

  • ಚೆನ್ನಾಗಿ ನಿದ್ರೆ ಮಾಡಿ: ಪ್ರತಿದಿನ 7–9 ಗಂಟೆಗಳ ನಿದ್ರೆ ಮಾಡುವುದು ಒಳ್ಳೆಯದು, ಇದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಾಯಕ.

  • ಒತ್ತಡವನ್ನು ನಿವಾರಿಸಿ: ಧ್ಯಾನ, ಪುಸ್ತಕ ಓದುವುದು ಸೇರಿದಂತೆ ಇತರ ಆರೋಗ್ಯಕರ ಅಭ್ಯಾಸ ರೂಡಿಸಿಕೊಳ್ಳಿ.

  • ಹಾನಿಕಾರಕ ಪದಾರ್ಥಗಳಿಂದ ದೂರವಿರಿ: ಧೂಮಪಾನ , ಮದ್ಯಪಾನ ಮಾಡಬೇಡಿ. ಮಾದಕ ವಸ್ತುಗಳಿಂದ ದೂರವಿರಿ.

  • ಸುರಕ್ಷಿತ ಲೈಂಗಿಕ ಕ್ರಿಯೆ: ಇದು ಲೈಂಗಿಕವಾಗಿ ಹರಡುವ ಅನೇಕ ಕಾಯಿಲೆಗಳಿಂದ ರಕ್ಷಿಸುತ್ತದೆ.

ಸ್ವಾಮಿ ವಿವೇಕಾನಂದ ಅವರು ಯುವಜನತೆಗೆ ನೀಡಿರುವ ಪ್ರಮುಖ ಸಂದೇಶಗಳು
  1. ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ

  2. ಎಲ್ಲ ಶಕ್ತಿಯೂ ನಿಮ್ಮೊಳಗೇ ಇದೆ. ನೀವು ಏನನ್ನಾದರೂ, ಸಾಧಿಸಬಹುದು.

  3. ಶಕ್ತಿಯೇ ಜೀವನ, ದುರ್ಬಲತೆ ಮರಣ.

  4. ಜೀವನದಲ್ಲಿ ಸವಾಲುಗಳನ್ನು ಸ್ವೀಕರಿಸಿ. ಗೆದ್ದರೆ ನಾಯಕನಾಗುತ್ತೀರಿ, ಸೋತರೆ ಮಾರ್ಗದರ್ಶಕರಾಗುವಿರಿ.

  5. ಹೃದಯ ಮತ್ತು ಮೆದುಳಿನ ನಡುವೆ ಸಂಘರ್ಷದಲ್ಲಿ ನೀವು ಸದಾ, ಹೃದಯದ ಮಾತನ್ನು ಆಲಿಸಿ.

  6. ಮಹತ್ಕಾರ್ಯವು ಮಹಾ ಬಲಿದಾನದ ಮೂಲಕ ಮಾತ್ರ ಸಾಧ್ಯ.

  7. ಶಿಕ್ಷಣವೆಂದರೆ ಮನುಷ್ಯನಲ್ಲಿ ಅಡಗಿರುವ ಪರಿಪೂರ್ಣತೆಯ ಅಭಿವ್ಯಕ್ತಿ.

  8. ನಾವು ನಮ್ಮ ಚಿಂತನೆಗಳಿಂದಲೇ ರೂಪುಗೊಂಡಿದ್ದೇವೆ. ಆದ್ದರಿಂದ ನೀವು ಏನು ಯೋಚಿಸುತ್ತೀರೋ ಅದರ ಬಗ್ಗೆ ಎಚ್ಚರಿಕೆಯಿಂದಿರಿ.

  9. ಜೀವನ ಎಂಬುದು ಕಠಿಣ ಸತ್ಯ, ಅದನ್ನು ಎದುರಿಸಿ. ನಿಮ್ಮ ಮಾರ್ಗದಲ್ಲಿ ಮುಂದುವರೆಯಿರಿ. ಅದು ಅಭೇದ್ಯವಾಗಿರಬಹುದು. ಆದರೆ ಆತ್ಮ ಅದಕ್ಕಿಂತ ಬಲಶಾಲಿಯಾದದ್ದು

  10. ನಮ್ಮ ಹಾಗೂ ದೇವರ ಬಗ್ಗೆ ನಮಗಿರುವ ನಂಬಿಕೆಯೇ ಹಿರಿಮೆಗೆ ಸ್ಪೂರ್ತಿ.

  11. ಶತಮೂರ್ಖ ಕೂಡ ತನ್ನ ಹೃದಯಕ್ಕೆ ಹತ್ತಿರವಾದ ಕೆಲಸವನ್ನು ಸಾಧಿಸಬಲ್ಲ. ಆದರೆ ಕೆಲಸವನ್ನು ತನ್ನ ಅಭಿರುಚಿಗೆ ತಕ್ಕಂತೆ ರೂಪಿಸುವವನು ಮಾತ್ರ ಬುದ್ಧಿವಂತ.

  12. ನನಗೆ ಬೇಕಾದುದು ಕಬ್ಬಿಣದ ಸ್ನಾಯುಗಳು, ಉಕ್ಕಿನ ನರಗಳು ಮತ್ತು ಸಿಡಿಲಿನಂಥ ಮನಸ್ಸುಗಳು. ಅಂತಹ ಕೆಲವೇ ತರುಣರಿಂದ ದೇಶದ ಭವಿಷ್ಯವನ್ನೇ ಬದಲಾಯಿಸಬಲ್ಲೇ.

  13. ದಿನದಲ್ಲಿ ಒಮ್ಮೆಯಾದರು ನಿಮ್ಮೊಂದಿಗೆ ಮಾತನಾಡಿ. ಇಲ್ಲವಾದಲ್ಲಿ ವಿಶ್ವದ ಅತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶದಿಂದ ವಂಚಿತರಾಗುತ್ತೀರಿ.

  14. ನಿಮ್ಮ ಮೇಲೆ ನೀವು ನಂಬಿಕೆ ಇಡೀ ಆಗ ಜಗತ್ತು ನಿಮ್ಮ ಪಾದದಡಿಯಲ್ಲಿರುತ್ತದೆ.

  15. ಒಂದು ಸಾಮಾನ್ಯ ಕೆಲಸವನ್ನು ಅತ್ಯುತ್ತಮವಾಗಿ ಮಾಡುವುದರಿಂದ ಶ್ರೇಷ್ಠ ಪ್ರತಿಫಲ ದೊರಕುತ್ತದೆ.

ವಿವಿಧ ಮೂಲಗಳನ್ನು ಆಧರಿಸಿ ಬರೆದ ಸುದ್ದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.