ಸೋನಮ್ ವಾಂಗ್ಚುಕ್
ಪಿಟಿಐ ಚಿತ್ರ
ಲಡಾಖ್: ಬಾಲಿವುಡ್‌ನ ‘3 ಈಡಿಯಟ್ಸ್’ ಸಿನಿಮಾ ನೋಡಿದವರಿಗೆ ಫುನ್ಸುಕ್ ವಾಂಗ್ಡು ಎಂಬ ಪಾತ್ರ ನೆನೆಪಿರಬಹುದು. ಮೇಧಾವಿ, ತನ್ನ ವೈಜ್ಞಾನಿಕ ಆವಿಷ್ಕಾರಗಳಿಂದ ಪ್ರಾಧ್ಯಾಪಕರನ್ನೇ ಬೆರುಗುಗೊಳಿಸಿದ ವಿದ್ಯಾರ್ಥಿ, ವಿಜ್ಞಾನಿಯ ಪಾತ್ರದಲ್ಲಿ ಆಮೀರ್ ಖಾನ್ ನಟಿಸಿದ್ದರು. ಈ ಚಿತ್ರ ಬಿಡುಗಡೆಗೊಂಡು 16 ವರ್ಷಗಳ ನಂತರ ನಿಜ ಜೀವನದ ಆ ಚುತರ ವಿಜ್ಞಾನಿ ಸುದ್ದಿಯಲ್ಲಿದ್ದಾರೆ.
ಲಡಾಖ್‌ನ ಜನರಿಗಾಗಿ ಹೋರಾಡುತ್ತಿರುವ ಸೋನಮ್ ವಾಂಗ್ಚುಕ್ 2009ರಲ್ಲಿ ತೆರೆಕಂಡ ‘3 ಈಡಿಯಟ್ಸ್’ ಚಿತ್ರಕ್ಕಾಗಿ ಆಮೀರ್ ಖಾನ್‌ಗೆ ಸ್ಫೂರ್ತಿಯಾದವರು. ಸದ್ಯ ಲಡಾಖ್ ಜನರು ತಮ್ಮ ಬೇಡಿಕೆಗಾಗಿ ನಡೆಸುತ್ತಿರುವ ಪ್ರತಿಭಟನೆಯ ಹಿಂದಿನ ಪ್ರೇರಣೆಯೂ ಇದೇ ವಾಂಗ್ಚುಕ್ ಇದ್ದಾರೆ. ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಈವರೆಗೂ ನಾಲ್ಕು ಜನ ಪ್ರಾಣ ಕಳೆದುಕೊಂಡಿದ್ದಾರೆ. ಹಿಂಸಾಚಾರಕ್ಕೆ ಪ್ರೇರಣೆ ನೀಡಿದ್ದಾರೆ ಎಂದು ವಾಂಗ್ಚುಕ್ ವಿರುದ್ಧ ಆರೋಪ ಮಾಡಿರುವ ಕೇಂದ್ರ ಸರ್ಕಾರ, ಬಂಧಿಸಿದೆ.
ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ವಾಂಗ್ಚುಕ್ ಅವರಿಗೆ ಸೇರಿದ ಸಂಸ್ಥೆಗಳಿಗೆ ವಿದೇಶಗಳಿಂದ ಅಕ್ರಮವಾಗಿ ಹಣ ಹರಿದುಬಂದಿದೆ ಎಂದು ಆರೋಪಿಸಿ ಸಿಬಿಐ ತನಿಖೆ ಆರಂಭಿಸಿದೆ. ಇವೆಲ್ಲವನ್ನೂ ನಿರಾಕರಿಸಿರುವ ವಾಂಗ್ಚುಕ್, ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ತನ್ನ ಬಂಧನವಾಗಿದೆ ಎಂದು ಅವರು ಹೇಳಿದ್ದಾರೆ.
ಸೋನಮ್ ವಾಂಗ್ಚುಕ್
ಲೇಹ್ ಬಳಿಯ ಉಲೆಟೊಕ್ಪೊ ಎಂಬ ಊರಿನಲ್ಲಿ ಸೋನಮ್ ವಾಂಗ್ಚುಕ್ ಜನಿಸಿದರು. 9 ವರ್ಷ ಆಗುವವರೆಗೂ ಅವರಿಗೆ ಮನೆಯೇ ಪಾಠಶಾಲೆಯಾಗಿತ್ತು. ಏಕೆಂದರೆ ಈ ಗ್ರಾಮದಲ್ಲಿ ಶಾಲೆ ಇರಲಿಲ್ಲ. 1975ರಲ್ಲಿ ಸೋನಮ್ ಅವರ ತಂದೆ ಶ್ರೀನಗರಕ್ಕೆ ಸ್ಥಳಾಂತರಗೊಂಡರು. ಹೊಸ ಶಿಕ್ಷಣ ವ್ಯವಸ್ಥೆಗೆ ಅಲ್ಲಿ ತೆರೆದುಕೊಂಡ ಅವರಿಗೆ ಆರಂಭದಲ್ಲಿ ಭಾಷೆಯ ಸಮಸ್ಯೆ ಕಾಡಿತು. 12ನೇ ವಯಸ್ಸಿನಲ್ಲಿ ಒಬ್ಬರೇ ದೆಹಲಿಗೆ ಪ್ರಯಾಣಿಸಿದರು. ಕೇಂದ್ರೀಯ ವಿದ್ಯಾಲಯದಲ್ಲಿ ಸ್ಥಾನ ಪಡೆದರು. ನಂತರ ಶ್ರೀನಗರದಲ್ಲಿರುವ ಎನ್‌ಐಟಿಯಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡಿದರು.
1988ರಲ್ಲೇ ವಾಂಗ್ಚುಕ್ ಅವರು ಲಡಾಖ್ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಸಾಂಸ್ಕೃತಿಕ ಚಳವಳಿ (SECMOL) ಹುಟ್ಟುಹಾಕಿದರು. ಇದಕ್ಕೆ ಇವರ ಸೋದರರು ಮತ್ತು ಸಹೋದ್ಯೋಗಿಗಳ ನೆರವೂ ಅವರಿಗೆ ಸಿಕ್ಕಿತ್ತು. ಈ ಗುಂಪು ಲಡಾಖ್‌ನಲ್ಲಿ ತರಗತಿಗಳ ಸ್ವರೂಪವನ್ನು ಬದಲಿಸಿದರು. ಅಲ್ಲಿ ಲಡಾಖ್‌ನ ಸಂಸ್ಕೃತಿಯನ್ನು ಅಳವಡಿಸಿದರು. ಇದರಲ್ಲಿ ಶಿಕ್ಷಕರಿಗೆ ತರಬೇತಿ, ಪಠ್ಯದ ಪರಿಷ್ಕರಣೆ ಮತ್ತು ‘ಹೊಸ ಭರವಸೆಯ ಅಭಿಯಾನ’ ಶೀರ್ಷಿಕೆಯಡಿ ಈ ತಂಡ ಕೆಲಸ ಮಾಡಿತು.
SECMOLನ ಈ ಕೆಲಸಕ್ಕಾಗಿ ಅಂತರರಾಷ್ಟ್ರೀಯ ಟೆರ್ರಾ ಪ್ರಶಸ್ತಿ ಈ ತಂಡಕ್ಕೆ 2016ರಲ್ಲಿ ಲಭಿಸಿತು. ಲಡಾಖ್‌ನಲ್ಲಿನ ನೀರಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ಮನುಷ್ಯ ನಿರ್ಮಿತ ನೀರ್ಗಲ್ಲು ಸ್ಥಾಪಿಸುವ ’ಐಸ್ ಸ್ತೂಪ’ ಯೋಜನೆ ಸಹಿತ ಹಲವು ಸಮುದಾಯ ಆಧಾರಿತ ಆವಿಷ್ಕಾರಗಳನ್ನು ವಾಂಗ್ಚುಕ್ ನಡೆಸಿದರು. ಇದಕ್ಕಾಗಿ 2018ರಲ್ಲಿ ಅವರಿಗೆ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿತು.
ಸೋನಮವ ವಾಂಗ್ಚುಕ್ ಬಂಧನ ಖಂಡಿಸಿ ಲಡಾಖ್‌ನ ಹೋರಾಟಗಾರರು ಪ್ರತಿಭಟನೆ ನಡೆಸಿದರು
ಸಂವಿಧಾನದ 370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ 2019ರಲ್ಲಿ ಹಿಂಪಡೆಯಿತು. ಲಡಾಖ್‌ಗೆ ರಾಜ್ಯದ ಸ್ಥಾನಮಾನ ನೀಡಬೇಕು. ಲಡಾಖ್ ಅನ್ನು ಸಂವಿಧಾನದ ಆರನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಿ ಸ್ವಾಯತ್ತ ಪ್ರದೇಶ ಎಂದು ಘೋಷಿಸಬೇಕು ಎಂಬುದು ಲಡಾಖ್ ಜನರ ಪ್ರಮುಖ ಬೇಡಿಕೆಯಾಗಿದೆ. ಈ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿರುವ ವಾಂಗ್ಚುಕ್, ಲಡಾಖ್‌ನಲ್ಲಿರುವ ನಿರುದ್ಯೋಗ ಸಮಸ್ಯೆ, ಪರಿಸರ ಅಪಾಯಗಳು ಮತ್ತು ಸಾಂಸ್ಕೃತಿಕ ಸಂರಕ್ಷಣೆಯ ಕಾಳಜಿ ವ್ಯಕ್ತಪಡಿಸಿದ್ದಾರೆ.
ತಮ್ಮ ಬೇಡಿಕೆಗಳ ಈಡೇರಿಕೆಗೆ ವಾಂಗ್ಚುಕ್ ಅವರು ಕಳೆದ ಎರಡು ವರ್ಷಗಳಲ್ಲಿ ಹಲವು ಬಾರಿ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಕಳೆದ 35 ದಿನಗಳಿಂದ ಅವರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಲೇಹ್ ಅಪೆಕ್ಸ್ ಬಾಡಿ (ಎಲ್‌ಎಬಿ) ಸೇರಿದಂತೆ ಲಡಾಖ್‌ನ ಜನರು ಬೆಂಬಲ ವ್ಯಕ್ತಪಡಿಸಿದ್ದರು. ಇದು ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಅಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಇದರ ಬೆನ್ನಲ್ಲೇ ತಮ್ಮ ಸತ್ಯಾಗ್ರಹ ಅಂತ್ಯಗೊಳಿಸಿದ ವಾಂಗ್ಚುಕ್, ‘ಶಾಂತಿಯುತ ಮಾರ್ಗದ ಸಂದೇಶ ವಿಫಲವಾಗಿದೆ’ ಎಂದಿದ್ದಾರೆ. ಜತೆಗೆ ಹಿಂಸಾಚಾರದಲ್ಲಿ ತೊಡಗದಂತೆ ಯುವ ಸಮುದಾಯವನ್ನು ಕೋರಿದ್ದರು.
ಲಡಾಖ್‌ನಲ್ಲಿ ಹಿಂಸಾಚಾರ ಬುಗಿಲೇಳುತ್ತಿದ್ದಂತೆ ವಾಂಗ್ಚುಕ್ ಅವರನ್ನು ರಾಷ್ಟ್ರೀಯ ಭದ್ರತಾ ದಳ (NSA) ಸೆ. 26ರಂದು ಬಂಧಿಸಿದೆ. ಪೂರ್ವಗ್ರಹಪೀಡಿತರಾಗಿ ಧರಣಿ ನಡೆಸುತ್ತಿರುವ ವಾಂಗ್ಚುಕ್ ಅವರಿಂದಾಗಿ ರಾಜ್ಯದ ಭದ್ರತೆ ಮತ್ತು ಶಾಂತಿ ಕಾಪಾಡುವುದು ಕಷ್ಟವಾಗಿದೆ. ಅಗತ್ಯ ವಸ್ತುಗಳನ್ನು ಸಮುದಾಯಗಳಿಗೆ ತಲುಪಿಸುವುದು ಕಷ್ಟವಾಗಿರುವುದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗಿದೆ’ ಎಂದು ಲಡಾಖ್‌ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಹೇಳಿದ್ದಾರೆ.
‘ನೇಪಾಳದಲ್ಲಿ ನಡೆದ ಜನಾಂದೋಲನವನ್ನು, ಅರಬ್ ಸ್ಪ್ರಿಂಗ್ ಪ್ರತಿಭಟನೆಗಳನ್ನು ಪ್ರಸ್ತಾಪಿಸಿ ವಾಂಗ್ಚುಕ್ ಅವರ ಭಾಷಣದಿಂದಾಗಿ ಸೆ.24ರಂದು ಪ್ರತಿಭಟನೆ ಕಾವೇರಿತು. ಕಲ್ಲು ತೂರಾಟ ಮತ್ತು ವಾಹನಗಳಿಗೆ ಬೆಂಕಿ ಹಚ್ಚಿ ಹಲವರು ಪ್ರತಿಭಟನೆ ನಡೆಸಿದರು. ಪೊಲೀಸರ ಮೇಲೂ ದಾಳಿ ನಡೆಯಿತು. ಘರ್ಷಣೆಯಲ್ಲಿ ಹಲವರು ಪ್ರಾಣ ಕಳೆದುಕೊಂಡರು. ವಾಂಗ್ಚುಕ್ ಅವರು ತಮ್ಮ ವೈಯಕ್ತಿಕ ಮತ್ತು ರಾಜಕೀಯ ಮಹತ್ವಾಕಾಂಕ್ಷೆಯನ್ನು ಬದಿಗಿಟ್ಟು ಸರ್ಕಾರದೊಂದಿಗೆ ಮಾತುಕತೆಗೆ ಮುಂದಾಗಿದ್ದರೆ ಲಡಾಖ್‌ನಲ್ಲಿನ ಹಿಂಸಾಚಾರವನ್ನು ತಡೆಗಟ್ಟಬಹುದಿತ್ತು’ ಎಂದು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.