ಎಸ್. ಜೈಶಂಕರ್ ಮತ್ತು ಅಮೀರ್ ಖಾನ್ ಮುತ್ತಕಿ
ಎಕ್ಸ್ ಚಿತ್ರ
ಆಫ್ಗಾನಿಸ್ತಾನದ ತಾಲಿಬಾನ್ ಸರ್ಕಾರದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರು ಭಾರತಕ್ಕೆ ಭೇಟಿ ನೀಡಿದ್ದಾರೆ. ಯಾರೂ ಊಹಿಸದ ಈ ಬೆಳವಣಿಗೆಯನ್ನು ಪಾಕಿಸ್ತಾನ ಸಹಿತ ಜಗತ್ತಿನ ಪ್ರಮುಖ ರಾಷ್ಟ್ರಗಳು ಸೂಕ್ಷ್ಮವಾಗಿ ಗಮನಿಸುತ್ತಿವೆ.
2021ರಲ್ಲಿ ಅಧಿಕಾರ ವಹಿಸಿಕೊಂಡ ತಾಲಿಬಾನ್ ಜತೆಗೆ ಜಗತ್ತಿನ ಯಾವ ರಾಷ್ಟ್ರಗಳೂ ಉತ್ತಮ ಸಂಬಂಧ ಹೊಂದಿರಲಿಲ್ಲ. ಆದರೆ ರಷ್ಯಾ ತಾಲಿಬಾನ್ ಜತೆ ಉತ್ತಮ ಒಡನಾಟ ಹೊಂದಿತ್ತು. ಆದರೆ ಇದೀಗ ತಾಲಿಬಾನ್‌ನ ವಿದೇಶಾಂಗ ಸಚಿವ ಭಾರತ ಭೇಟಿ ನೀಡಿರುವುದು ಜಾಗತಿಕ ಮಟ್ಟದಲ್ಲೂ ಚರ್ಚೆಗೆ ಕಾರಣವಾಗಿದೆ.
ವಿಶ್ವಸಂಸ್ಥೆಯ ನಿರ್ಬಂಧಗಳಿಂದ ತಾತ್ಕಾಲಿಕ ವಿನಾಯಿತಿ ಪಡೆದ ಮುತ್ತಕಿ, ರಷ್ಯಾದಿಂದ ದೆಹಲಿಗೆ ವಿಮಾನ ಮೂಲಕ ಬಂದಿಳಿದಿದ್ದಾರೆ.
ಭಾರತ ಭೇಟಿ ಸಂದರ್ಭದಲ್ಲಿ ಅವರು ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಇತರ ಅಧಿಕಾರಿಗಳೊಂದಿಗೆ ರಾಜತಾಂತ್ರಿಕ, ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳ ಕುರಿತು ಚರ್ಚಿಸಲಿದ್ದಾರೆ ಎಂದೆನ್ನಲಾಗಿದೆ. ಇದರಲ್ಲಿ ಭಾರತ ಮತ್ತು ಆಫ್ಗಾನಿಸ್ತಾನದ ಸಂಬಂಧ ಮತ್ತು ಉಭಯ ರಾಷ್ಟ್ರಗಳ ಬಲವರ್ದನೆ ನಿರೀಕ್ಷಿಸಲಾಗುತ್ತಿದೆ.
ತಾಲಿಬಾನ್ ಅಧಿಕಾರ ವಹಿಸಿಕೊಂಡ ಕೂಡಲೇ ಪಾಕಿಸ್ತಾನದೊಂದಿಗೆ ಅಲ್ಲಿನ ಸರ್ಕಾರದ ಸಂಬಂಧ ಹದಗೆಡಲಾರಂಭಿಸಿತು. ಮತ್ತೊಂದೆಡೆ ದ್ವಿಪಕ್ಷೀಯ ಸಂಬಂಧ ಉತ್ತಮಪಡಿಸಲು ಭಾರತದೊಂದಿಗೆ ತಾಲಿಬಾನ್ ಕೈಜೋಡಿಸಲಿದೆ ಎಂದು ಇಸ್ಲಾಮಾಬಾದ್ ಎಂದೂ ಊಹಿಸಿರಲಿಲ್ಲ.
ಪಾಶ್ಚಾತ್ಯ ರಾಷ್ಟ್ರಗಳು ಬೆಂಬಲಿಸಿದ್ದ ಆಫ್ಗನ್ ಸರ್ಕಾರವನ್ನು ಹಿಂದೆ ಭಾರತವೂ ಬೆಂಬಲಿಸುತ್ತಿತ್ತು. ಆದರೆ, ಅಧಿಕಾರವನ್ನು ತಾಲಿಬಾನ್ ಕಸಿದುಕೊಂಡಿತು. ಇದಾದ ನಂತರ ಎರಡೂ ರಾಷ್ಟ್ರಗಳ ನಡುವೆ ಯಾವುದೇ ವ್ಯವಹಾರ ಇರಲಿಲ್ಲವಾದರೂ, ಮುತ್ತಕಿ ಅವರ ಸದ್ಯದ ಭೇಟಿಯು ರಾಜತಾಂತ್ರಿಕ, ರಾಜಕೀಯ ಮತ್ತು ವ್ಯಾಪಾರ ಸಂಬಂಧಗಳನ್ನು ನವೀಕರಿಸುವ ಗಂಭೀರ ಸೂಚನೆ ನೀಡಿದೆ.
ವಿದೇಶಾಂಗ ಸಚಿವಾಲಯ ಮತ್ತು ವಾಣಿಜ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಮುತ್ತಕಿ ಮಾತುಕತೆ ನಡೆಸಿದ್ದಾರೆ. ಜತೆಗೆ ಮುತ್ತಕಿ ಅವರೊಂದಿಗೆ ಬಂದಿರುವ ನಿಯೋಗವು, ಭಾರತೀಯ ವ್ಯಾಪಾರ ಸಮುದಾಯದ ಪ್ರತಿನಿಧಿಗಳನ್ನೂ ಭೇಟಿ ಮಾಡಲಿದೆ ಎಂದು ವರದಿಯಾಗಿದೆ.
‘ದ್ವಿಪಕ್ಷೀಯ ಸಂಬಂಧಗಳು ಮತ್ತು ಪ್ರಾದೇಶಿಕ ವಿಷಯಗಳ ಕುರಿತು ಅವರೊಂದಿಗೆ ಚರ್ಚೆಯನ್ನು ನಾವು ಎದುರು ನೋಡುತ್ತಿದ್ದೇವೆ’ ಎಂದು ಭಾರತೀಯ ವಿದೇಶಾಂಗ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.
ಆಫ್ಗಾನಿಸ್ತಾನದ ಸದ್ಯದ ಆಡಳಿತಗಾರರೊಂದಿಗೆ ಭಾರತವು ಔಪಚಾರಿಕವಾಗಿ ಗುರುತಿಸಿಕೊಳ್ಳದಿದ್ದರೂ, ತಾಲಿಬಾನ್‌ನೊಂದಿಗೆ ಕೆಲವು ಬಗೆಯ ರಾಜತಾಂತ್ರಿಕ ಅಥವಾ ಅನೌಪಚಾರಿಕ ಸಂಬಂಧಗಳನ್ನು ಕಾಯ್ದುಕೊಳ್ಳುವ ಹಲವಾರು ದೇಶಗಳಲ್ಲಿ ಒಂದಾಗಿದೆ. ವಿಶ್ವದಲ್ಲೇ ಅತ್ಯಂತ ಬಡ ದೇಶಗಳಲ್ಲಿ ಒಂದಾಗಿರುವ ಆಫ್ಗಾನಿಸ್ತಾನಕ್ಕೆ ಮಾನವೀಯ ನೆಲೆಗಟ್ಟಿನಲ್ಲಿ ಭಾರತ ನೆರವು ನೀಡುತ್ತಿದೆ.
ಪಾಕಿಸ್ತಾನದೊಂದಿಗೆ ತಾಲಿಬಾನ್ ಸರ್ಕಾರದ ಸಂಬಂಧ ಹದಗೆಡುತ್ತಿರುವ ಸಂದರ್ಭದಲ್ಲೇ ಅಲ್ಲಿನ ವಿದೇಶಾಂಗ ಸಚಿವರೊಬ್ಬರ ಭಾರತ ಭೇಟಿ ವ್ಯಾಪಕ ಚರ್ಚೆಗೆ ಒಳಗಾಗಿದೆ. ಇದು ಪಾಕಿಸ್ತಾನಕ್ಕೆ ಹಿನ್ನಡೆ ಮತ್ತು ತಾಲಿಬಾನ್ ಆಡಳಿತದ ದೃಷ್ಟಿಯಲ್ಲಿ ಮಹತ್ವದ ಹೆಜ್ಜೆ ಎಂದೇ ಹಲವರು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
2021ರಲ್ಲಿ ಅಮೆರಿಕ ನೇತೃತ್ವದ ಪಡೆಗಳು ಆಫ್ಗಾನಿಸ್ತಾನದಿಂದ ಹಿಂದೆ ಸರಿಯಲು ಸಮಯ ನಿಗದಿಪಡಿಸಿದ ನಂತರ, ಭಾರತದ ನೀತಿ ವಲಯದಲ್ಲಿ ಆತಂಕ ಆವರಿಸಿತ್ತು. 2021ರ ಆ. 15ರಂದು ಕಾಬೂಲ್ ಅನ್ನು ತಾಲಿಬಾನ್ ವಶಪಡಿಸಿಕೊಂಡಾಗ, ಭಾರತವು ಅಫ್ಘಾನಿಸ್ತಾನದಲ್ಲಿರುವ ತನ್ನ ರಾಯಭಾರ ಕಚೇರಿ ಮತ್ತು ನಾಲ್ಕು ದೂತಾವಾಸಗಳನ್ನು ಮುಚ್ಚಿತು.
ಆಫ್ಗಾನಿಸ್ತಾನಕ್ಕೆ ಪ್ರಯಾಣಿಸಲಿಚ್ಛಿಸುವ ವಿದ್ಯಾರ್ಥಿಗಳು, ರೋಗಿಗಳು, ವ್ಯಾಪಾರಿಗಳು ಮತ್ತು ಮಾಜಿ ಸರ್ಕಾರಿ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಸೇರಿದಂತೆ ಎಲ್ಲರಿಗೂ ವೀಸಾ ನೀಡುವುದನ್ನು ನಿಲ್ಲಿಸಿತು. ಭದ್ರತೆಯ ದೃಷ್ಟಿಯಿಂದ ಒಂದು ಕ್ಲಿಕ್‌ನಲ್ಲಿ ಆವರೆಗೂ ನೀಡಲಾಗಿದ್ದ ಎಲ್ಲಾ ವೀಸಾಗಳನ್ನೂ ರದ್ದುಗೊಳಿಸಿತ್ತು.
ಆದರೆ 2022 ಜೂನ್‌ನಲ್ಲಿ ಭಾರತವು ತನ್ನ ರಾಜತಾಂತ್ರಿಕ ಉಪಸ್ಥಿತಿಯನ್ನು ಆಫ್ಗಾನಿಸ್ತಾನದಲ್ಲಿ ಮರುಸ್ಥಾಪಿಸಿತು. ಮಾನವೀಯ ನೆರವು ನೀಡಲು ಮತ್ತು ಅದರ ಮೇಲ್ವಿಚಾರಣೆಗೆ ‘ತಾಂತ್ರಿಕ ತಂಡ’ವನ್ನು ಆಫ್ಗಾನಿಸ್ತಾನಕ್ಕೆ ಭಾರತ ಕಳುಹಿಸಿತ್ತು.
ತಾಲಿಬಾನ್‌ನ ಪ್ರಭಾವಿ ವ್ಯಕ್ತಿಗಳು, ಅಲ್ಲಿನ ಸರ್ಕಾರಿ ಅಧಿಕಾರಿಗಳು ಮತ್ತವರ ಕುಟುಂಬ ಸದಸ್ಯರಿಗೆ ಭಾರತ ವೀಸಾ ನೀಡಲು ಪ್ರಾರಂಭಿಸಿತು. ಅವರ ಭೇಟಿ ಅಧಿಕೃತ ಎಂದು ಘೋಷಿಸದಿದ್ದರೂ ವಿಶ್ವಾಸ ಮತ್ತು ತಿಳಿವಳಿಕೆ ಬೆಳೆಸಲು ಸಹಾಯ ಮಾಡಿತು ಎಂದು ಬಿಬಿಸಿ ವರದಿ ಮಾಡಿದೆ.
ಭಾರತದಲ್ಲಿ ರಾಯಭಾರ ಕಚೇರಿ ತೆರೆಯಲು ಮತ್ತು ರಾಯಭಾರಿಯನ್ನು ನೇಮಿಸಲು 2024ರ ನವೆಂಬರ್‌ನಲ್ಲಿ ನವದೆಹಲಿ ಒಪ್ಪಿಗೆ ಸೂಚಿಸಿತು. ಮೊದಲು ಮುಂಬೈ ಎಂದು ಸ್ಥಳ ನಿಯುಕ್ತಿಯಾಗಿದ್ದರೂ, ನಂತರ ಅದನ್ನು ಹೈದರಾಬಾದ್‌ಗೆ ಸ್ಥಳಾಂತರಿಸಲಾಯಿತು.
ಹೀಗಾಗಿ ಕಳೆದ ಮೂರು ವರ್ಷಗಳಲ್ಲಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಕ್ರಮೇಣ ಉತ್ತಮಗೊಳ್ಳುತ್ತಾ ಸಾಗಿದೆ. ವಿದೇಶಿ ನೆಲದಲ್ಲಿ ಉಭಯ ರಾಷ್ಟ್ರಗಳ ನಾಯಕರು ಹಲವು ಸಭೆಗಳನ್ನು ನಡೆಸಿದ್ದಾರೆ. ಇದರಲ್ಲಿ 2025ರ ಜನವರಿಯಲ್ಲಿ ದುಬೈನಲ್ಲಿ ನಡೆದ ಸಭೆಯಲ್ಲಿ ಮುತ್ತಕಿ ಮತ್ತು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ನಡುವಿನ ಸಭೆಯೂ ಒಂದು.
ತಾಲಿಬಾನ್ ಜತೆ ಪಾಕಿಸ್ತಾನ ನಿಕಟ ಸಂಬಂಧ ಹೊಂದಿತ್ತು. 1994ರಲ್ಲಿ ಭಾರತೀಯ ಸೇನೆ ಮತ್ತು ರಾಜಕೀಯ ಸ್ಥಾಪನೆಯಾದ ನಂತರದಲ್ಲಿ, ಇದನ್ನು ಹೊರಹಾಕಲು ಪಾಕಿಸ್ತಾನ ನಿರಂತರವಾಗಿ ಪ್ರಯತ್ನಿಸುತ್ತಲೇ ಇತ್ತು.
2001ರಲ್ಲಿ ಅಮೆರಿಕದ ಆಕ್ರಮಣದ ನಂತರ ಆಫ್ಗಾನಿಸ್ತಾನದಲ್ಲಿ ತಾಲಿಬಾನ್ ವಿರುದ್ಧ ಹೋರಾಡುವ ಬಣಗಳೊಂದಿಗೆ ಭಾರತ, ರಷ್ಯಾ ಮತ್ತು ಇರಾನ್ ಬೆಂಬಲಿಸಿದವು. ನಂತರದ ಎರಡು ದಶಕಗಳ ಕಾಲ ತಾಲಿಬಾನ್ ಬಣವು ಹೆಚ್ಚು ರಕ್ತಸಿಕ್ತ ಹೋರಾಟ ನಡೆಸುತ್ತಿದ್ದಾಗ, ಭಾರತವು ಅಮೆರಿಕ ಬೆಂಬಲಿತ ಆಫ್ಗನ್ ಸರ್ಕಾರದ ಪ್ರಮುಖ ಬೆಂಬಲಿಗನಾಗಿ ಉಳಿಯಿತು.
1996ರಿಂದ 2001ರವರೆಗಿನ ತಾಲಿಬಾನ್‌ನ ಎರಡನೇ ಅವಧಿಯ ಆರಂಭದಲ್ಲಿ ಪಾಕಿಸ್ತಾನವು ತಾಲಿಬಾನ್ ಜತೆ ಉತ್ತಮ ಸಂಬಂಧ ಹೊಂದಿತ್ತು. ಆದರೆ ನಂತರದ ದಿನಗಳಲ್ಲಿ ಇದು ಹದಗೆಡಲಾರಂಭಿಸಿತು. ಹೀಗಾಗಿ ಆಫ್ಗಾನಿಸ್ತಾನವನ್ನು ಪಾಕಿಸ್ತಾನದ ರಕ್ಷಣಾ ಸಚಿವ ಸಹಿತ ಹಲವರು ‘ಶತ್ರು ರಾಷ್ಟ್ರ’ ಎಂದು ಕರೆದಿರುವುದೇ ಉದಾಹರಣೆ. ಪಾಕಿಸ್ತಾನದ ತಾಲಿಬಾನ್ (ಟಿಟಿಪಿ) ಪಾಕಿಸ್ತಾನದೊಳಗೆ ದಾಳಿ ನಡೆಸಲು ಅಫ್ಘಾನ್ ಪ್ರದೇಶವನ್ನು ಬಳಸಲು ತಾಲಿಬಾನ್ ಸರ್ಕಾರ ಅವಕಾಶ ನೀಡಿದೆ ಎಂದು ಪಾಕಿಸ್ತಾನ ಆರೋಪಿಸಿದೆ ಮತ್ತು ಟಿಟಿಪಿ ಆಶ್ರಯ ತಾಣಗಳೆಂದು ಕರೆಯುವ ಅಫ್ಘಾನಿಸ್ತಾನದೊಳಗೆ ವಾಯುದಾಳಿಗಳನ್ನು ನಡೆಸಿದೆ.
ತಾಲಿಬಾನ್ ಜತೆಗಿನ ಉತ್ತಮ ಸಂಬಂಧ ಕಾಯ್ದುಕೊಳ್ಳಲು ಭಾರತವು ತನ್ನ ಹಿತಾಸಕ್ತಿಯನ್ನು ಮುನ್ನಡೆಸುವ ಕಾರಣ ಹೊಂದಿದೆ. ಅದರಲ್ಲೂ ಇಸ್ಲಾಮಿಕ್ ಸ್ಟೇಟ್, ಅಲ್ ಖೈದಾದಂತ ಉಗ್ರ ಸಂಘಟನೆಗಳು ಆಫ್ಗಾನಿಸ್ತಾನದ ಪ್ರದೇಶ ಬಳಸಲು ಅವಕಾಶ ನೀಡುವುದಿಲ್ಲ ಎಂದು ದೆಹಲಿಗೆ ತಾಲಿಬಾನ್ ಭರವಸೆ ನೀಡಿದೆ ಎಂದು ವರದಿಯಾಗಿದೆ.
ಆ ಮೂಲಕ ಚೀನಾ ಮತ್ತು ಪಾಕಿಸ್ತಾನದ ಪ್ರಭಾವವನ್ನು ಎದುರಿಸಲು ಹಾಗೂ ಇರಾನ್ ಮತ್ತು ಮಧ್ಯ ಏಷ್ಯಾದೊಂದಿಗೆ ಸಂಪರ್ಕವನ್ನು ಇನ್ನಷ್ಟು ಉತ್ತಪಡಿಸಿಕೊಳುವಲ್ಲಿ ದೆಹಲಿ ಮತ್ತು ತಾಲಿಬಾನ್ ಜತೆಗಿನ ಸಂಬಂಧ ಪ್ರಮುಖ ಹೆಜ್ಜೆಯಾಗಿದೆ.
ಎರಡೂ ರಾಷ್ಟ್ರಗಳ ನಡುವಿನ ಸಂಬಂಧ ಉತ್ತಮಗೊಳ್ಳುತ್ತಾ ಸಾಗುತ್ತಿರುವ ಹೊತ್ತಿಗೆ, ಇತಿಹಾಸದಲ್ಲಿನ ಕೆಲ ಸನ್ನಿವೇಶಗಳು ಸಂದೇಹದಲ್ಲೇ ಸಾಗುವಂತೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.