ಡೊನಾಲ್ಡ್ ಟ್ರಂಪ್
ರಾಯಿಟರ್ಸ್ ಚಿತ್ರ
Trump's Third Term?: ‘ಮೂರನೇ ಬಾರಿಯೂ ನಾನೇ ಅಧ್ಯಕ್ಷನಾಗಬೇಕೆಂದು ಜನ ಬಯಸುತ್ತಿದ್ದಾರೆ’ ಎಂಬ ಟ್ರಂಪ್ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ಆದರೆ, ಅಮೆರಿಕ ಸಂವಿಧಾನದ 22ನೇ ತಿದ್ದುಪಡಿ ಇದನ್ನು ಅನುವು ಮಾಡಿಕೊಡುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ವಾಷಿಂಗ್ಟನ್: ಅಮೆರಿಕ ಸಂವಿಧಾನದಲ್ಲಿ ವ್ಯಕ್ತಿಯೊಬ್ಬರಿಗೆ ಎರಡು ಬಾರಿಯಷ್ಟೇ ಅಧ್ಯಕ್ಷರಾಗಲು ಅವಕಾಶವಿದೆ. ಆದರೆ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ‘ಮೂರನೇ ಬಾರಿಯೂ ನಾನೇ ಅಧ್ಯಕ್ಷನಾಗಬೇಕೆಂದು ಜನ ಬಯಸುತ್ತಿದ್ದಾರೆ’ ಎಂದು ಹೇಳಿರುವುದಕ್ಕೆ ಚರ್ಚೆಯನ್ನು ಹುಟ್ಟುಹಾಕಿದೆ.
ಮೂರನೇ ಬಾರಿ ಅಧ್ಯಕ್ಷರಾಗುವ ಇಂಗಿತ ಕುರಿತು ಮಂಗಳವಾರ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಟ್ರಂಪ್, ‘ನನಗೇನೂ ಗೊತ್ತಿಲ್ಲ. ಆ ವಿಷಯ ಕುರಿತು ನಾನು ಯೋಚಿಸಿಲ್ಲ. ಮೂರನೇ ಬಾರಿ ಅಧ್ಯಕ್ಷರಾಗಲು ಮಾರ್ಗಗಳಿದ್ದು, ಆಗಿಬಿಡಿ ಎಂದು ಅವರು ಹೇಳುತ್ತಿದ್ದಾರೆ’ ಎಂದಿದ್ದಾರೆ.
ಮೂರನೇ ಬಾರಿ ಅಧ್ಯಕ್ಷರಾಗುವ ಅವಕಾಶ ಸಿಕ್ಕರೆ ಬರಾಕ್ ಒಬಾಮಾ ಅವರು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರಲ್ಲಾ ಎಂಬ ಪ್ರಶ್ನೆಗೆ, ‘ಅದು ಉತ್ತಮವಾಗಿರುತ್ತದೆ. ಇಂಥದ್ದನ್ನು ನಾನು ಇಷ್ಟಪಡುತ್ತೇನೆ. ಆದರೆ ಮೂರನೇ ಬಾರಿ ಅಧ್ಯಕ್ಷನಾಗುವುದು ಹಾಸ್ಯವಂತೂ ಅಲ್ಲ’ ಎಂದಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.
ರಿಪಬ್ಲಿಕನ್ ಪಕ್ಷದ 78 ವರ್ಷದ ಟ್ರಂಪ್ ಅವರು 2017ರಿಂದ 2021ರವರೆಗೆ ಮೊದಲ ಬಾರಿಗೆ ಅಧ್ಯಕ್ಷರಾಗಿದ್ದರು. 2025ರ ಜ. 20ರಂದು ಎರಡನೇ ಬಾರಿಗೆ ಅಧ್ಯಕ್ಷ ಹುದ್ದೆ ಅಲಂಕರಿಸಿದರು.
ಅಮೆರಿಕದ ರಾಜಕೀಯ ಇತಿಹಾಸದಲ್ಲಿ 1797ರಲ್ಲಿ ಅಧ್ಯಕ್ಷರಾಗಿದ್ದ ಜಾರ್ಜ್ ವಾಷಿಂಗ್ಟನ್ ಅವರು ಒಬ್ಬ ವ್ಯಕ್ತಿ ಮೂರನೇ ಬಾರಿ ಅಧ್ಯಕ್ಷರಾಗಬಾರದು ಎಂಬ ಪರಂಪರೆಯನ್ನು ಆರಂಭಿಸಿದರು. ಆದರೆ ಹಾಲಿ ಅಧ್ಯಕ್ಷ ಮೂರನೇ ಬಾರಿಗೆ ಅಧ್ಯಕ್ಷರಾಗಲು ಈಗಲೇ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅವರ ಬೆಂಬಲಿಗರೂ ಇದಕ್ಕೆ ಮಾರ್ಗಗಳಿವೆ ಎಂದೆನ್ನುತ್ತಿದ್ದಾರೆ.
ಎನ್‌ಬಿಸಿಗೆ ಟ್ರಂಪ್ ನೀಡಿರುವ ಸಂದರ್ಶನದಲ್ಲಿ ತಮ್ಮ ಮೂರನೇ ಅವಧಿಯ ಕನಸಿನ ಕುರಿತು ಮಾತನಾಡಿದ್ದು, ‘ನಾನೇನು ತಮಾಷೆ ಮಾಡುತ್ತಿಲ್ಲ. ಬಹಳಷ್ಟು ಜನರು ಈ ಬಯಕೆ ಹೊಂದಿದ್ದಾರೆ. ಅದಕ್ಕೆ ಇನ್ನೂ ಬಹಳಷ್ಟು ಕಾಲ ಬೇಕಿದೆ. ಆಡಳಿತದಲ್ಲಿ ಈ ಕುರಿತ ಚರ್ಚೆಗೆ ಕಾಲ ಪಕ್ವವಾಗಿಲ್ಲ ಎಂದಷ್ಟೇ ಹೇಳಿದ್ದೇನೆ’ ಎಂದಿದ್ದಾರೆ.
ತಮ್ಮ ಎರಡನೇ ಅವಧಿ ಕೊನೆಗೊಳ್ಳುವ ಹೊತ್ತಿಗೆ ಟ್ರಂಪ್ ಅವರಿಗೆ 82 ವರ್ಷವಾಗಿರುತ್ತದೆ. ನಂತರವೂ ದೇಶದ ಅತ್ಯಂತ ಒತ್ತಡದ ಕೆಲಸದಲ್ಲಿ ಮುಂದುವರಿಯಲೊಪ್ಪುತ್ತಾರೆಯೇ ಎಂಬ ಮಾತುಗಳೂ ಕೇಳಿಬಂದಿವೆ. ಆದರೆ ಮೂರನೇ ಅವಧಿಯ ಟ್ರಂಪ್ ಮಾತುಗಳು ಇದೇ ಮೊದಲಲ್ಲ. ಜನವರಿಯಲ್ಲೂ ಇಂಥದ್ದೇ ಮಾತುಗಳನ್ನು ಆಡಿದ್ದರು. ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ್ದ ಟ್ರಂಪ್, ‘ಇದು ಮೊದಲಲ್ಲ, 2ನೇ, 3ನೇ ಅಥವಾ ನಾಲ್ಕನೇ ಬಾರಿಯೂ ಆಗಬಹುದು’ ಎಂದಿದ್ದ ಅವರು, ಸುಳ್ಳು ಸುದ್ದಿ ಹರಡುವವರಿಗೆ ಮಾತ್ರ ಇದನ್ನು ಹೇಳಿದ್ದು ಎಂದಿದ್ದರು.
ಅಮೆರಿಕದ ಸಂವಿಧಾನಕ್ಕೆ ಮಾಡಲಾದ 22ನೇ ತಿದ್ದುಪಡಿಯಲ್ಲಿ ಒಬ್ಬ ವ್ಯಕ್ತಿ ಮೂರನೇ ಬಾರಿ ಅಧ್ಯಕ್ಷನಾಗಲು ಅವಕಾಶವಿಲ್ಲ ಎಂದಿದೆ. ‘ಯಾವುದೇ ವ್ಯಕ್ತಿ ಅಧ್ಯಕ್ಷರ ಕಚೇರಿಗೆ ಎರಡಕ್ಕಿಂತ ಹೆಚ್ಚು ಬಾರಿ ಆಯ್ಕೆಯಾಗುವಂತಿಲ್ಲ. ಅಧ್ಯಕ್ಷರಾಗಿದ್ದವರ ಬದಲಿಗೆ ಕಾರಣಾಂತರಗಳಿಂದ ಹಂಗಾಮಿ ಅಧ್ಯಕ್ಷರಾಗಿ ಎರಡು ವರ್ಷ ಕೆಲಸ ಮಾಡಿದಲ್ಲಿ, ಒಂದಕ್ಕಿಂತ ಹೆಚ್ಚು ಬಾರಿಯಷ್ಟೇ ಅಧ್ಯಕ್ಷರಾಗಲು ಸಾಧ್ಯ ಎಂದಿದೆ.
ಸಂವಿಧಾನ ಬದಲಿಸಲು ಮೇಲ್ಮನೆ ಹಾಗೂ ಕೆಳಮನೆಗಳಲ್ಲಿ ಮೂರನೇ ಎರಡರಷ್ಟು ಸಂಸದರ ಒಪ್ಪಿಗೆ ಬೇಕು. ಜತೆಗೆ ದೇಶದ ಇತರ ರಾಜ್ಯಗಳ ನಾಲ್ಕರಲ್ಲಿ ಮೂರು ಭಾಗಗಳ ಒಪ್ಪಿಗೆಯೂ ಬೇಕು. ಟ್ರಂಪ್ ಅವರ ರಿಪಬ್ಲಿಕನ್ ಪಕ್ಷವು ಸರ್ಕಾರ ರಚಿಸಲು ಬಲ ಹೊಂದಿದ್ದರೂ, ಮಸೂದೆ ಬದಲಿಸಲು ಅಗತ್ಯವಿರುವಷ್ಟು ಬಹುಮತವಿಲ್ಲ. 50 ರಾಜ್ಯಗಳಲ್ಲಿ 18ರಲ್ಲಿ ಡೆಮಾಕ್ರೆಟಿಕ್ ಪಕ್ಷದ ಹಿಡಿತ ಹೊಂದಿರುವುದೂ ಸಂವಿಧಾನ ತಿದ್ದುಪಡಿಗೆ ತೊಡಕಾಗಲಿದೆ ಎಂದು ತಜ್ಞರು ಹೇಳಿದ್ದಾರೆ.
2028ರ ಚುನಾವಣೆಯಲ್ಲಿ ಟ್ರಂಪ್ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಲು ಸಾಧ್ಯವಿಲ್ಲದಿದ್ದರೂ, ಉಪಾಧ್ಯಕ್ಷ ಹುದ್ದೆಗೆ ಸ್ಪರ್ಧಿಸಬಹುದು. ಅಂಥ ಸಂದರ್ಭದಲ್ಲಿ ಹಾಲಿ ಉಪಾಧ್ಯಕ್ಷ ಜೆ.ಡಿ.ವಾನ್ಸ್ ಅವರು ಅಧ್ಯಕ್ಷರಾಗಿ, ಪ್ರಮಾಣವಚನ ಸ್ವೀಕರಿಸಿದ ನಂತರ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು. ಆಗ ಹಂಗಾಮಿ ಅಧ್ಯಕ್ಷರಾಗಿ ಟ್ರಂಪ್ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಬಹುದು ಎಂದು ಟ್ರಂಪ್‌ನ ಕಟ್ಟಾ ಬೆಂಬಲಿಗರು ಹೇಳುತ್ತಿದ್ದಾರೆ.
ಟ್ರಂಪ್ ಅವರ ಮಾಜಿ ಸಲಹೆಗಾರ ಸ್ಟೀವ್ ಬ್ಯಾನಾನ್ ಅವರು ಹೇಳಿರುವಂತೆ, ‘ನೋಡುತ್ತಿರಿ... ಟ್ರಂಪ್ ಅವರು ಮತ್ತೆ ಚುನಾವಣೆಗೆ ಸ್ಪರ್ಧಿಸಿ ಗೆಲ್ಲುತ್ತಾರೆ. ಇದಕ್ಕಾಗಿ ಒಂದಷ್ಟು ಪರ್ಯಾಯ ಮಾರ್ಗಗಳಿವೆ’ ಎಂದಿರುವುದು ಚರ್ಚೆ ಹುಟ್ಟುಹಾಕಿದೆ.
ಅಧ್ಯಕ್ಷ ಹುದ್ದೆಗೆ ಮೂರು ಬಾರಿ ಸ್ಪರ್ಧಿಸುವ ಕುರಿತು ಸಂವಿಧಾನದಲ್ಲಿ ತಿದ್ದುಪಡಿ ತರುವ ಮಾತುಗಳನ್ನು ರಿಪಬ್ಲಿಕನ್ ಸಂಸದ ಆ್ಯಂಡಿ ಓಗ್ಲೆಸ್ ಆಡಿದ್ದರು. ಸತತವಾಗಿ ಎರಡು ಬಾರಿ ಅಲ್ಲದಿದ್ದರೆ, (ಟ್ರಂಪ್ ಅವರು 2016ರಲ್ಲಿ ಗೆದ್ದಿದ್ದರು, 2020ರಲ್ಲಿ ಸೋತು, 2024ರಲ್ಲಿ ಗೆಲುವು ಸಾಧಿಸಿದ್ದಾರೆ) ಮೂರನೇ ಬಾರಿ ಸ್ಪರ್ಧಿಸಲು ಸಾಧ್ಯ ಎಂದೂ ಹೇಳಿದ್ದರು.
ಒಂದೊಮ್ಮೆ ಹೀಗಾದಲ್ಲಿ ಟ್ರಂಪ್ ಮಾತ್ರವಲ್ಲ, ಈ ಹಿಂದೆ ಅಧ್ಯಕ್ಷರಾಗಿರುವ ಬರಾಕ್ ಒಬಾಮಾ, ಬಿಲ್ ಕ್ಲಿಂಟನ್ ಮತ್ತು ಜಾರ್ಜ್ ಡಬ್ಲೂ. ಬುಷ್ ಕೂಡಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅರ್ಹತೆ ಪಡೆಯಲಿದ್ದಾರೆ.
ನಾಟ್ರಡೇಮ್ ವಿಶ್ವವಿದ್ಯಾಲಯ ಕಾನೂನು ವಿಭಾಗದ ಪ್ರಾಧ್ಯಾಪಕ ಡೆರೆಕ್ ಮುಲ್ಲರ್ ಎಂಬುವವರು ಬಿಬಿಸಿಗೆ ಪ್ರತಿಕ್ರಿಯೆ ನೀಡಿದ್ದು, ‘ಸಂವಿಧಾನಕ್ಕೆ ತರಲಾದ 12ನೇ ತಿದ್ದುಪಡಿಯಂತೆ, ಸಂವಿಧಾನದಲ್ಲಿ ಅಧ್ಯಕ್ಷರಾದವರು, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಸಹಜವಾಗಿ ಅರ್ಹತೆ ಕಳೆದುಕೊಳ್ಳುತ್ತಾರೆ ಎಂದಿದೆ. ಹೀಗಾಗಿ ಮತ್ತೊಮ್ಮೆ ಅಧ್ಯಕ್ಷರಾಗಲು ಯಾವುದೋ ತಂತ್ರಗಾರಿಕೆ ನಡೆಯುತ್ತದೆ ಎಂದು ನನಗನಿಸದು’ ಎಂದಿರುವುದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.