
ಪ್ರತಿ ವರ್ಷ ಮಾರ್ಚ್ 3ರಂದು ಪ್ರಪಂಚದಾದ್ಯಂತ 'ವಿಶ್ವ ವನ್ಯಜೀವಿ ದಿನ'ವನ್ನು ಆಚರಿಸಲಾಗುತ್ತದೆ. ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ರಕ್ಷಿಸುವುದು ಮತ್ತು ವನ್ಯಜೀವಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಪ್ರಮುಖ ಉದ್ದೇಶ.
ಆವಾಸಸ್ಥಾನ ನಾಶ, ಹವಾಮಾನ ಬದಲಾವಣೆ, ಬೇಟೆ ಮತ್ತು ಮಾನವ ಹಸ್ತಕ್ಷೇಪದಿಂದಾಗಿ ಲೆಕ್ಕವಿಲ್ಲದಷ್ಟು ಪ್ರಭೇದಗಳು ಅಳಿವಿನಂಚಿನಲ್ಲಿವೆ. ತೀವ್ರ ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ರಕ್ಷಿಸುವುದು ಮತ್ತು ಜಾಗೃತಿ ಮೂಡಿಸುವ ಸಲುವಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ (UNGA) 2013ರಲ್ಲಿ ಮಾರ್ಚ್ 3 ಅನ್ನು 'ವಿಶ್ವ ವನ್ಯಜೀವಿ ದಿನ' ಎಂದು ಘೋಷಿಸಿತು.
ದೈತ್ಯ ಪಾಂಡಾ(Giant panda)
ಚೀನಾದಲ್ಲಿ ಸ್ಥಳೀಯವಾಗಿರುವ ದೈತ್ಯ ಪಾಂಡಾಗಳು ತೀವ್ರ ಅಳಿವಿನಂಚಿನಲ್ಲಿರುವ ಪ್ರಭೇದಗಳಲ್ಲಿ ಒಂದಾಗಿದೆ. ಅರಣ್ಯನಾಶ ಮತ್ತು ಮಾನವ ಚಟುವಟಿಕೆಯಿಂದಾಗಿ ಆವಾಸಸ್ಥಾನ ನಾಶದಿಂದ ಅವುಗಳ ಸಂಖ್ಯೆ ತೀರಾ ಕಡಿಮೆಯಾಗಿದೆ.
ಸೈಬೀರಿಯನ್ ಹುಲಿ(Siberian tiger)
ರಷ್ಯಾದ ಪೂರ್ವದಲ್ಲಿ ಭಾಗದಲ್ಲಿ ಕಂಡುಬರುವ ಸೈಬೀರಿಯನ್ ಹುಲಿಗಳು ವಿಶ್ವದ ಅತಿದೊಡ್ಡ ಬೆಕ್ಕುಗಳ ಜಾತಿಗೆ ಸೇರಿವೆ. ಬೇಟೆ, ಆವಾಸಸ್ಥಾನ ನಾಶದಿಂದ ಇವುಗಳು ಸಹ ತೀವ್ರ ಅಳಿವಿನಂಚಿನಲ್ಲಿವೆ.
ಸುಮಾತ್ರನ್ ಒರಾಂಗುಟನ್ (Sumatran orangutan)
ಇಂಡೋನೇಷ್ಯಾದಲ್ಲಿ ಸ್ಥಳೀಯವಾಗಿ ಕಂಡುಬರುವ ಸುಮಾತ್ರನ್ ಒರಾಂಗುಟನ್‌ಗಳು ತೀವ್ರ ಅಳಿವಿನಂಚಿನಲ್ಲಿವೆ. ಅರಣ್ಯ ನಾಶ, ಕಾಳ್ಗಿಚ್ಚು ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ.
ಹವಾಯಿಯನ್ ಮಾಂಕ್ ಸೀಲ್ (Hawaiian monk seal)
ಹವಾಯಿಯನ್ ಮಾಂಕ್ ಸೀಲ್ ಅಪರೂಪದ ಸಮುದ್ರ ಸಸ್ತನಿಗಳಲ್ಲಿ ಒಂದಾಗಿದ್ದು, ತೀವ್ರ ಅಳಿವಿನಂಚಿನಲ್ಲಿವೆ. ಸದ್ಯ 1,500ಕ್ಕಿಂತ ಕಡಿಮೆ ಜೀವಿಗಳು ಮಾತ್ರ ಉಳಿದಿವೆ. ಮಾನವ ಚಟುವಟಿಕೆ, ಮೀನುಗಾರಿಕೆ ಮತ್ತು ಸಂತಾನೋತ್ಪತ್ತಿ ಪ್ರಮಾಣದಲ್ಲಿ ಇಳಿಕೆ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಅಮುರ್ ಚಿರತೆ(Amur leopard)
ರಷ್ಯಾದ ಪೂರ್ವ ಮತ್ತು ಈಶಾನ್ಯ ಚೀನಾಕ್ಕೆ ಸ್ಥಳೀಯವಾಗಿರುವ ಅಮುರ್ ಚಿರತೆ, ವಿಶ್ವದ ಅಪರೂಪದ ದೊಡ್ಡ ಬೆಕ್ಕುಗಳಲ್ಲಿ ಒಂದಾಗಿದೆ. ಇವುಗಳ ಸಂಖ್ಯೆ 150ಕ್ಕಿಂತ ಕಡಿಮೆ ಇದೆ. ಆವಾಸಸ್ಥಾನ ನಾಶ, ಬೇಟೆ ಇವುಗಳ ಉಳಿಯುವಿಕೆಗೆ ಅಪಾಯವನ್ನುಂಟು ಮಾಡುತ್ತಿದೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.