ADVERTISEMENT

ಒಳನೋಟ: 15 ಕ್ಯಾನ್‌ ಹಾಲಿಗೆ 10 ಕ್ಯಾನ್‌ ನೀರು!

ಹೊರಬಾರದ ಸಿಐಡಿ ತನಿಖಾ ವರದಿ; ರಾಜಕೀಯ ಸ್ವರೂಪ ಪಡೆದ ಅವ್ಯವಹಾರ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2022, 19:30 IST
Last Updated 5 ಫೆಬ್ರುವರಿ 2022, 19:30 IST
ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಕಚೇರಿ
ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಕಚೇರಿ   

ಮಂಡ್ಯ: ಜಿಲ್ಲಾ ಹಾಲು ಒಕ್ಕೂಟದ (ಮನ್‌ಮುಲ್‌) ಶೀತಲೀಕರಣ ಘಟಕಗಳಲ್ಲಿ ಸಂಗ್ರಹವಾಗುತ್ತಿದ್ದ ಪ್ರತಿ 15 ಕ್ಯಾನ್‌ ಹಾಲಿಗೆ 10 ಕ್ಯಾನ್‌ ನೀರು ಹಾಗೂ ರಾಸಾಯನಿಕ ಬೆರೆಸುತ್ತಿದ್ದರೆಂಬ ಪ್ರಕರಣ ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ.

8 ತಿಂಗಳ ಹಿಂದೆ ಹಲವು ಬಿಎಂಸಿ (ಶೀತಲೀಕರಣ ಘಟಕ)ಗಳಲ್ಲಿ ನೀರು ಬೆರೆಸುತ್ತಿರುವ ಪ್ರಕರಣ ಬಯಲಿಗೆ ಬಂದಿತ್ತು. ಮಾರ್ಪಡಿಸಿದ ಟ್ಯಾಂಕರ್‌ಗಳ ಮೂಲಕ ನೀರು ಬೆರೆಸಿ ಒಕ್ಕೂಟಕ್ಕೆ ಪೂರೈಸಿದ ಪ್ರಕರಣದಲ್ಲಿ ಒಕ್ಕೂಟದ 6 ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು. ತನಿಖೆ ಪೂರ್ಣಗೊಂಡು 6 ತಿಂಗಳಾಗಿದ್ದರೂ ಸಿಐಡಿ ವರದಿ ಬಹಿರಂಗಗೊಂಡಿಲ್ಲ. ಇದಕ್ಕೆ ರಾಜಕೀಯ ಒತ್ತಡವೇ ಕಾರಣ ಎನ್ನಲಾಗಿದೆ. ನೀರು ಹಾಗೂ ರಾಸಾಯನಿಕ ಮಿಶ್ರಣ –ಎರಡೂ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಈಚೆಗೆ ಇನ್ನೊಂದು ಬಿಎಂಸಿಯಲ್ಲಿ ನೀರಿನ ಜೊತೆಗೆ ಹಾಲಿನ ಕೊಬ್ಬು ಹೆಚ್ಚಿಸುವ ರಾಸಾಯನಿಕ ಬೆರೆಸುತ್ತಿದ್ದರೆಂಬ ಪ್ರಕರಣದಲ್ಲಿ ಬಂಧಿತರಾಗಿದ್ದ ನಾಲ್ವರಿಗೆ ಜಾಮೀನು ದೊರಕಿದೆ. ರೈತರಿಂದ ಖರೀದಿಸಿದ ಹಾಲಿನಲ್ಲಿದ್ದಷ್ಟೇ ಕೊಬ್ಬಿನ ಪ್ರಮಾಣ ರಾಸಾಯನಿಕ ಮಿಶ್ರಿತ ಹಾಲಿನಲ್ಲೂ ಬರುತ್ತಿದ್ದುದರಿಂದ ಆರೋಪಿಗಳು ನೀರಿನ ಜೊತೆಗೆ ರಾಸಾಯನಿಕವನ್ನೂ ಬೆರೆಸಿ ಪೂರೈಸುತ್ತಿದ್ದರೆಂಬ ಅಂಶ ಬೆಳಕಿಗೆ ಬಂದಿದೆ. ಈ ವಿವಾದದ ನಡುವೆಯೇ ಒಕ್ಕೂಟದಲ್ಲಿ ನೂರಾರು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿರುವುದು ಅನುಮಾನ ಮೂಡಿಸಿದೆ.

ADVERTISEMENT

ನಕಲಿ ತುಪ್ಪ: ಹೊರಬಾರದ ಅಸಲಿಯತ್ತು!

ಮೈಸೂರು ತಾಲ್ಲೂಕಿನ ಹೊಸಹುಂಡಿ ಗ್ರಾಮದ ಹೊರವಲಯದಲ್ಲಿ ಕಳೆದ ವರ್ಷದ ಡಿಸೆಂಬರ್‌ 16ರಂದು ಪತ್ತೆಯಾದ ನಕಲಿ ನಂದಿನಿ ತುಪ್ಪ ತಯಾರಿಕಾ ಘಟಕದಲ್ಲಿ ಒಂದೂವರೆ ಟನ್‌ನಷ್ಟು ಕಲಬೆರಕೆ ತುಪ್ಪ, 500 ಕೆ.ಜಿ ವನಸ್ಪತಿ, 500 ಲೀಟರ್ ಪಾಮೊಲಿನ್‌ ಅನ್ನು ಜಿಲ್ಲಾ ಹಾಲು ಒಕ್ಕೂಟ ಹಾಗೂ ಆಹಾರ ಸುರಕ್ಷತೆ, ಗುಣಮಟ್ಟ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

7 ಆರೋಪಿಗಳನ್ನು ಬಂಧಿಸಿದ ಬಳಿಕ, ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆಯು ‘ತನಿಖೆ ದಿಕ್ಕು ತಪ್ಪಿದೆ’ ಎಂದು ಆರೋಪಿಸಿತ್ತು. ‘ಪ್ರಮುಖ ಆರೋಪಿಗಳನ್ನು ರಕ್ಷಿಸಲಾಗುತ್ತಿದ್ದು, ಸಿಐಡಿ ಅಥವಾ ಸಿಬಿಐ ತನಿಖೆಗೆ ನೀಡಬೇಕು’ ಎಂದು ಆಗ್ರಹಿಸಿ ಸಂಘಟನೆಗಳು ಪ್ರತಿಭಟನೆಯನ್ನೂ ನಡೆಸಿದ್ದವು.

ಬಂಧಿತರಾಗಿರುವವರು ನಕಲಿ ತುಪ್ಪವನ್ನು ಸಿಹಿತಿನಿಸು ಮಾರುವ ಪ್ರತಿಷ್ಠಿತ ಅಂಗಡಿಗಳಿಗೆ ಹಾಗೂ ತಮಿಳುನಾಡಿನ ಹಲವೆಡೆ ಪೂರೈಸುತ್ತಿದ್ದರೆಂಬುದು ಗೊತ್ತಾಗಿದೆ. ‘ಘಟಕ ಆರಂಭಿಸಿದ ಪ್ರಭಾವಿಯೊಬ್ಬರು ಅದನ್ನು ಬೇರೆಯವರ ಸುಪರ್ದಿಗೆ ನೀಡಿದ್ದರು. ದಂಪತಿಯ ಜಗಳದಿಂದ ಘಟಕದಲ್ಲಿನ ಅಕ್ರಮ ಬೆಳಕಿಗೆ ಬಂತು’ ಎನ್ನಲಾಗಿದೆ.

‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ‘7 ಆರೋಪಿಗಳನ್ನು ಬಂಧಿಸಿದ್ದು, ಇನ್ನಿಬ್ಬರ ಹುಡುಕಾಟ ನಡೆದಿದೆ. ತನಿಖಾ ಹಂತದಲ್ಲಿರುವುದರಿಂದ ವಿವರಗಳನ್ನು ಬಹಿರಂಗಪಡಿಸಲಾಗದು’ ಎಂದರು

-ಕೆ.ಎಸ್‌.ಗಿರೀಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.