ADVERTISEMENT

ಒಳನೋಟ: ಹವಾಲಾದಂತಾದ ಅಡಿಕೆ ವಹಿವಾಟು

ಮಧ್ಯವರ್ತಿಗಳಿಂದ ಭಾರಿ ಪ್ರಮಾಣದ ಅಡಿಕೆ ಖರೀದಿ, ಸಂಗ್ರಹವೇ ಧಾರಣೆ ಏರಿಳಿತದ ಮೂಲ

ಚಂದ್ರಹಾಸ ಹಿರೇಮಳಲಿ
Published 18 ಡಿಸೆಂಬರ್ 2021, 19:20 IST
Last Updated 18 ಡಿಸೆಂಬರ್ 2021, 19:20 IST
ಮಲೆನಾಡಿನ ಅಡಿಕೆ
ಮಲೆನಾಡಿನ ಅಡಿಕೆ   

ಶಿವಮೊಗ್ಗ: ಐದು ವರ್ಷಗಳಿಂದ ಕ್ವಿಂಟಲ್‌ಗೆ ₹ 40 ಸಾವಿರ ಆಸುಪಾಸಿನಲ್ಲೇ ಇದ್ದ ಅಡಿಕೆ ಧಾರಣೆ ನಾಲ್ಕು ತಿಂಗಳ ಹಿಂದೆ ಒಮ್ಮೆಲೇ ₹ 60 ಸಾವಿರಕ್ಕೆ ಜಿಗಿತ ಕಂಡಾಗ ಅಡಿಕೆ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಯಾಗಿತ್ತು. ದರ ಏರಿಕೆ ಕೆಲವು ಬೆಳೆಗಾರರಲ್ಲಿ ಸಂಭ್ರಮಕ್ಕೆ ಕಾರಣವಾದರೆ, ಅದಕ್ಕೆ ಮೊದಲೇ ಮಾರಾಟ ಮಾಡಿದ ರೈತರಲ್ಲಿ ನಿರಾಶೆ ಮೂಡಿಸಿತ್ತು.

ರಾಜ್ಯದಲ್ಲಿ ಪ್ರತಿವರ್ಷ ಸುಮಾರು ₹ 30 ಸಾವಿರ ಕೋಟಿ ಮೌಲ್ಯದ ಅಡಿಕೆ ವಹಿವಾಟು ನಡೆಯುತ್ತದೆ. ಉತ್ತರ ಭಾರತದ ಬೆರಳೆಣಿಕೆಯಷ್ಟು ಮಧ್ಯವರ್ತಿಗಳು ರಾಜ್ಯದ ಅಡಿಕೆ ಮಾರುಕಟ್ಟೆ ನಿಯಂತ್ರಿಸುತ್ತಾ ಬಂದಿದ್ದಾರೆ. ನಾಲ್ಕು ತಿಂಗಳ ಹಿಂದೆ ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಗುಜರಾತ್‌ನ ಒಬ್ಬ ಮಧ್ಯವರ್ತಿ, ಮಲೆನಾಡಿನ ಪ್ರಮುಖ ರಾಜಕಾರಣಿಯೊಬ್ಬರ ಕುಟುಂಬ ಹಾಗೂ ತೀರ್ಥಹಳ್ಳಿ ಮೂಲದ ಶ್ರೀಮಂತ ಉದ್ಯಮಿಯೊಬ್ಬರು ಒಮ್ಮೆಲೇ ಐದಾರು ಸಾವಿರ ಕೋಟಿ ರೂಪಾಯಿ ಮೌಲ್ಯದ ಅಡಿಕೆ ಖರೀದಿಗೆ ಮುಂದಾಗಿದ್ದೇ ದಿಢೀರ್ ಬೆಲೆ ಏರಿಕೆ ಕಾರಣ ಎನ್ನುವ ಸುದ್ದಿಗಳು ಮಲೆನಾಡಿನ ತುಂಬಾ ಹರಿದಾಡುತ್ತಿವೆ.‌

ರಾಶಿ ಕೆಂಪಡಿಕೆಯ ಧಾರಣೆ 2010ರವರೆಗೂ ಕ್ವಿಂಟಲ್‌ಗೆ ₹ 10 ಸಾವಿರದಿಂದ ₹ 15 ಸಾವಿರದ ಆಸುಪಾಸು ಇತ್ತು.2014ರಲ್ಲಿ ₹ 1 ಲಕ್ಷದ ಗಡಿಮುಟ್ಟಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು. ನಂತರ ಮತ್ತೆ ಕುಸಿತ ಕಂಡಿತ್ತು. 2020ರಲ್ಲಿ ಗರಿಷ್ಠ ಧಾರಣೆ ₹ 42 ಸಾವಿರ ದಾಟಿತ್ತು. ನಾಲ್ಕು ತಿಂಗಳ ಹಿಂದೆ ₹ 60 ಸಾವಿರ ದಾಡಿದ ಧಾರಣೆಯ ಭಾರಿ ಜಿಗಿತ ಬೆಳೆಗಾರರು, ವರ್ತಕರಲ್ಲಿ ಸಂತಸ ಮೂಡಿಸುವುದಕ್ಕಿಂತ ಆತಂಕದ ಕಾರ್ಮೋಡ ಸೃಷ್ಟಿಸಿದೆ. ಇದಕ್ಕೆ ಕಾರಣ ಮಾರುಕಟ್ಟೆಯಲ್ಲಿ ಇಂತಹ ಬೆಲೆ ಏರಿಕೆಯ ‘ಸುನಾಮಿ’ಗಳು ಸೃಷ್ಟಿಸುವ ಅವಾಂತರಗಳು.

ADVERTISEMENT

ಉತ್ತರ ಭಾರತವೇ ಪ್ರಮುಖ ಮಾರುಕಟ್ಟೆ: ಗುಜರಾತ್, ಮಹಾರಾಷ್ಟ್ರ ಜೊತೆಗೆ ದೆಹಲಿ ಸೇರಿದಂತೆ ಉತ್ತರ ಭಾರತದ ಗುಟ್ಕಾ, ಪಾನ್‌ಮಸಾಲ ಕಂಪನಿಗಳೇ ರಾಜ್ಯದ ಅಡಿಕೆಗೆ ಪ್ರಮುಖ ಮಾರುಕಟ್ಟೆ. ವಿಮಲ್, ಕಮಲಾ ಪಸಂದ್, ಮಾಣಿಕ್ ಚಂದ್, ಶಿಖರ್, ಎಂಆರ್‌ಡಿ ಮತ್ತಿ ತರ ಪಾನ್‌ಮಸಾಲಾ ಒಳಗೊಂಡಂತೆ ಏಳೆಂಟು ಕಂಪನಿಗಳು ರಾಜ್ಯದಲ್ಲಿ ಬೆಳೆಯುವ ಶೇ 80ರಷ್ಟು ಅಡಿಕೆ ಖರೀದಿಸುತ್ತವೆ. ಮೊದಲು ಮಲೆನಾಡಿನ ವರ್ತಕರೇ ಅಡಿಕೆ ಖರೀದಿಸಿ ಕಂಪನಿ ಗಳಿಗೆ ಕಳುಹಿಸುತ್ತಿದ್ದರು. ಈಗ ಮಧ್ಯವರ್ತಿಗಳ ಮೂಲಕವೇ ವಹಿವಾಟು ನಡೆಸುತ್ತಿವೆ. ಮಧ್ಯವರ್ತಿಗಳು ಇಲ್ಲಿನ ಸ್ಥಳೀಯ ವರ್ತಕರ ಮಂಡಿಗಳಲ್ಲಿ ಟೆಂಡರ್‌ ಬರೆಸಿ, ಅಡಿಕೆ ಖರೀದಿಸುತ್ತಾರೆ.

ಒಮ್ಮೆಲೆಗೇ ಭಾರಿ ಅಡಿಕೆ ಖರೀದಿ: ನಾಲ್ಕು ತಿಂಗಳ ಹಿಂದೆ ಐದಾರು ಬಾರಿ ಶಿವಮೊಗ್ಗಕ್ಕೆ ಬಂದಿದ್ದ ಅಹಮದಾಬಾದ್‌ನ ಮಧ್ಯವರ್ತಿಯೊಬ್ಬರು ಇಲ್ಲಿನ ಶ್ರೀಮಂತ ವರ್ತಕರೊಬ್ಬರ ಸಹಕಾರದಿಂದ ಭಾರಿ ಪ್ರಮಾಣದಲ್ಲಿ ಅಡಿಕೆ ಖರೀದಿಗೆ ಮುಂದಾಗಿದ್ದರು. ಅದಕ್ಕಾಗಿ ಸ್ವಲ್ಪ ಪ್ರಮಾಣದಲ್ಲಿ ಧಾರಣೆ ಹೆಚ್ಚಿಸಿದ್ದರು. ಇದರಿಂದ ಆತಂಕಕ್ಕೆ ಒಳಗಾದ ಇತರೆ ಮಧ್ಯವರ್ತಿಗಳು ಪೂರ್ವನಿಗದಿತ ಒಪ್ಪಂದಂತೆ ತಮ್ಮ ಕಂಪನಿಗಳಿಗೆ ಅಡಿಕೆ ಪೂರೈಸಲು ಸಾಧ್ಯವಾಗದು ಎಂದು ಆತಂಕಕ್ಕೆ ಒಳಗಾಗಿ ಅನೈತಿಕ ದರ ಸಮರ ಆರಂಭಿಸಿದ್ದರು. ಇದರಿಂದ ಎರಡು ವಾರಗಳಲ್ಲಿ ಅಡಿಕೆ ಧಾರಣೆ ₹ 20 ಸಾವಿರದಷ್ಟು ಜಿಗಿತ ಕಂಡಿತ್ತು.

ಹಲವು ಶ್ರೀಮಂತ ವರ್ತಕರು ದೊಡ್ಡ ಪ್ರಮಾಣದಲ್ಲಿ ಅಡಿಕೆ ಖರೀದಿಸಿ, ಸಂಗ್ರಹ ಮಾಡುತ್ತಿದ್ದಾರೆ. ರೈತರು ಸಹ ತಾವು ಬೆಳೆದ ಅಡಿಕೆಯನ್ನು ಅಗತ್ಯವಿದ್ದಷ್ಟೆ ಮಾರಾಟ ಮಾಡಿ, ಉಳಿದದ್ದನ್ನು ಕನಿಷ್ಠ ಎರಡು, ಮೂರು ವರ್ಷಗಳ ಕಾಲ ದಾಸ್ತಾನು ಮಾಡುತ್ತಿದ್ದಾರೆ. ಇದೂ ಅಡಿಕೆ ಬೆಲೆ ಕುಸಿಯದೆ ಸ್ಥಿರತೆ ಕಾಯ್ದುಕೊಳ್ಳಲು ಕಾರಣ ಎನ್ನುತ್ತಾರೆ ಮಾರುಕಟ್ಟೆ ವಿಶ್ಲೇಷಕರು.

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದ ನಂತರ ಮಾರುಕಟ್ಟೆ ಹೊರಗೆ ಖರೀದಿಸಿದರೆ ಶೇ 2 ಕಮಿಷನ್‌, ಶೇ 0.6 ಸೆಸ್‌ ಉಳಿಸುತ್ತಾರೆ. ಕೈ ವ್ಯಾಪಾರದ ಬಹುತೇಕ ಅಡಿಕೆ, ಶೇ 5ರಷ್ಟು ಜಿಎಸ್‌ಟಿ ವಂಚಿಸಿ, ಅಕ್ರಮವಾಗಿ ಸಾಗಣೆ ಮಾಡುತ್ತಿದ್ದಾರೆ. ಹಾಗಾಗಿಯೇ, ಮಾರುಕಟ್ಟೆ ಹೊರಗೆ ಅಧಿಕ ದರ ನೀಡಲಾಗುತ್ತಿದೆ ಎನ್ನುವ ಆರೋಪವೂ ಇದೆ.

ಕಲಬೆರಕೆಗೆ ರೆಡ್‌ಆಕ್ಸೈಡ್‌ ಬಳಕೆ
ಶಿವಮೊಗ್ಗ: ಮಲೆನಾಡಿನ ರಾಶಿ ಪ್ರಕಾರದ ಕೆಂಪಡಿಕೆಗೆ ಸಾಕಷ್ಟು ಬೇಡಿಕೆ ಇದೆ. ಕೆಲವು ವರ್ತಕರು ಶ್ರೀಲಂಕಾ, ಮಲೇಷ್ಯಾ, ಮ್ಯಾನ್ಮಾರ್, ದೇಶದ ಅಸ್ಸಾಂ, ಕೇರಳ ಹಾಗೂ ಪಶ್ಚಿಮ ಬಂಗಾಳದ ಅರಣ್ಯದಲ್ಲಿ ಬೆಳೆಯುವ ಅಡಿಕೆಯನ್ನು ಕಡಿಮೆ ಬೆಲೆಗೆ ಖರೀದಿ ಮಾಡಿ, ಕಳಪೆ ಅಡಕೆಗೆ ಬಣ್ಣ ಹಚ್ಚಿ ಇಲ್ಲಿನ ಗುಣಮಟ್ಟದ ಅಡಿಕೆ ಜತೆ ಬೆರೆಸಿ ಸಾಗಣೆ ಮಾಡುತ್ತಿದ್ದರು.

ಕೆಲವು ವರ್ತಕರು ಮಿಶ್ರಣಕ್ಕಾಗಿ ಎಪಿಎಂಸಿ ಆವರಣದ ಮಳಿಗೆಗಳಲ್ಲೇ ಯಂತ್ರಗಳನ್ನು ಇಟ್ಟುಕೊಂಡಿದ್ದರು. ಅಡಿಕೆಗೆ ರೆಡ್‌ಆಕ್ಸೈಡ್‌ ಹಚ್ಚಿ, ರೈತರಿಂದ ಖರೀದಿಸಿದ ಅಡಿಕೆ ಜತೆ ಬೆರೆಸುತ್ತಿದ್ದರು. ಕಳಪೆ ಗುಣಮಟ್ಟದ ಅಡಿಕೆ ವಿರುದ್ಧ ಕ್ರಮಕ್ಕೆ ಮುಂದಾಗಿದ್ದ ಎಪಿಎಂಸಿ ಹಿಂದಿನ ಅಧ್ಯಕ್ಷ ದುಗ್ಗಪ್ಪ ಗೌಡ ಅವರಿಗೆ ಕೆಲವುವರ್ತಕರು ಬೆದರಿಕೆ ಹಾಕಿದ್ದರು.

ಹಲವು ವರ್ಷಗಳಿಂದ ಸುಂಕ ಪಾವತಿಸದೆ ನಡೆಸುವ ವಹಿವಾಟಿನಿಂದಾಗಿ ₹ 16 ಸಾವಿರ ಕೋಟಿ ಅವ್ಯವಹಾರ ನಡೆದಿತ್ತು. ಈ ಪ್ರಕರಣವನ್ನು ಮುಂಬೈ ಹೈಕೋರ್ಟ್‌ನ ನಾಗಪುರ ಪೀಠ ಸಿಬಿಐ ತನಿಖೆಗೆ ಒಪ್ಪಿಸಿತ್ತು. ಇದಾದ ನಂತರ ಕೆಲವು ವರ್ತಕರು ಕಳುಹಿಸಿದ್ದ ಅಡಿಕೆಯನ್ನು ಕಂಪನಿಗಳು ತಿರಿಸ್ಕರಿಸಿದವು. ಈ ಎಲ್ಲ ಬೆಳವಣಿಗೆಗಳ ನಂತರ ಕಲಬೆರಕೆ ದಂಧೆ ಕ್ಷೀಣಿಸುತ್ತಿದೆ.

ಮಲೆನಾಡಿನ ಕೆಲವು ಭಾಗಗಳಲ್ಲಿ ರೈತರು ಸಹ ಅಡಿಕೆ ಉತ್ತಮ ಗುಣಮಟ್ಟದಂತೆ ಕಾಣಲು ಬೇಯಿಸುವಾಗಲೇ ರೆಡ್‌ಆಕ್ಸೈಡ್‌ ಮಿಶ್ರಣ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

ಬಿಡಾ ಅಂಗಡಿ ಇಟ್ಟಿದ್ದವ ಸಾವಿರಾರು ಕೋಟಿ ಒಡೆಯ!
ಆಹಾರ ಪದಾರ್ಥ, ಅಗತ್ಯ ವಸ್ತುಗಳಂತೆ ವಾಣಿಜ್ಯ ಬೆಳೆ ಅಡಿಕೆ ಸಂಗ್ರಹದ ಮೇಲೆ ಯಾವುದೇ ನಿರ್ಬಂಧಗಳು ಇಲ್ಲ. ಇಂತಹ ಅವಕಾಶದ ಲಾಭ ಪಡೆಯುವ ಪ್ರಮುಖ ರಾಜಕಾರಣಿಗಳು, ರಿಯಲ್‌ ಎಸ್ಟೇಟ್‌ ಕುಳಗಳು, ಶ್ರೀಮಂತರು ಹವಾಲಾ ರೀತಿ ಅಡಿಕೆ ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುತ್ತಿದ್ದಾರೆ.

ಅವರು ಖರೀದಿಸುವ ಪ್ರಮಾಣ ಇಲ್ಲಿನ ಮ್ಯಾಮ್‌ಕೋಸ್‌, ತುಮ್‌ಕೋಸ್‌ನಂತಹ ಸಹಕಾರ ಸಂಘಗಳ ವಾರ್ಷಿಕ ವಹಿವಾಟುಗಳಿಗಿಂತಲೂ ಅಧಿಕ. ಗುಜರಾತ್‌ನಿಂದ ಅಡಿಕೆ ಖರೀದಿಸಲು ಹೆಲಿಕಾಪ್ಟರ್‌ನಲ್ಲಿ ಶಿವಮೊಗ್ಗಕ್ಕೆ ಬಂದ ಮಧ್ಯವರ್ತಿಗೆ ಕೇಂದ್ರ ಸರ್ಕಾರದ ಪ್ರಭಾವಿ ಸಚಿವರೊಬ್ಬರ ನಂಟಿದೆ ಎಂಬುದು ಶಿವಮೊಗ್ಗದ ಅಡಿಕೆಯ ದೊಡ್ಡ ಮಟ್ಟದ ವರ್ತಕರಿಗೆಲ್ಲ ಸ್ಪಷ್ಟ. ಅಂತಹ ನಂಟಿನ ಫಲವಾಗಿಯೇ, ಅಹಮದಾಬಾದ್‌ನಲ್ಲಿ ಬೀಡಾ ಅಂಗಡಿ ಇಟ್ಟುಕೊಂಡಿದ್ದವ ಇಂದು ಪ್ಯಾರಿಸ್‌ನಲ್ಲಿ ಮಗಳ ಮದುವೆ ಮಾಡುವಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಅವರು ಬಂದ ನಂತರವೇ ದಿಢೀರನೆ ಅಡಿಕೆ ಧಾರಣೆ ಏರಿಕೆಯಾಗಿದೆ ಎನ್ನುತ್ತವೆ ಎಪಿಎಂಸಿ ಮೂಲಗಳು.

ಆಯಕಟ್ಟಿನ ರಾಜಕಾರಣಿಗಳ ಸಂಪರ್ಕದಿಂದಲೇ ಇಂತಹ ಮಧ್ಯವರ್ತಿಗಳು ಸಾವಿರಾರು ಕೋಟಿ ಮೌಲ್ಯದ ಅಡಿಕೆಯನ್ನು ಏಕಕಾಲದಲ್ಲಿ ಖರೀದಿಸಿ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ. ಪ್ರತಿ ವರ್ಷ ಅಡಿಕೆ ಬೆಳೆ ಕ್ಷೇತ್ರ ಗಣನೀಯವಾಗಿ ಹೆಚ್ಚಳವಾಗಿ, ಉತ್ಪಾದನೆ ಅಧಿಕಗೊಂಡರೂ, ಮಾರುಕಟ್ಟೆಯಲ್ಲಿ ಕಂಪನಿಗಳ ಬೇಡಿಕೆಯಷ್ಟು ಅಡಿಕೆ ದೊರಕದಂತಾಗಿದೆ.

*

ಧಾರಣೆ ಸ್ಥಿರತೆಗೆ ಹಲವು ಆಯಾಮಗಳಿದ್ದರೂ ಏರಿಳಿತಗಳಿಗೆ ಮಧ್ಯವರ್ತಿಗಳೇ ಕಾರಣ ಎನ್ನುವುದು ನಿಜ. ಮಧ್ಯವರ್ತಿಗಳು ಮೂರ್‍ನಾಲ್ಕು ತಿಂಗಳ ಮೊದಲೇ ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡಿರುತ್ತಾರೆ. ಪ್ರತಿ ತಿಂಗಳು ಪೂರೈಸುವ ಆವಕವನ್ನು ರಾಜ್ಯದ ಮಾರುಕಟ್ಟೆ, ಸಹಕಾರ ಸಂಘಗಳಿಂದ ಸಂಗ್ರಹಿಸಿರುತ್ತಾರೆ. ಅಡಿಕೆ ಕೊರತೆ ಬಿದ್ದಾಗ ದಿಢೀರ್ ಬೆಲೆ ಏರಿಕೆ ಮಾಡುತ್ತಾರೆ. ಇದರಿಂದ ಪೂರೈಕೆ ಹೆಚ್ಚಾಗುತ್ತದೆ. ಬೇಡಿಕೆ ಕುಸಿದ ನಂತರ ಮತ್ತೆ ಇಳಿಕೆಯತ್ತ ಸಾಗುತ್ತದೆ.
–ಎಚ್‌.ಎಸ್‌.ಮಹೇಶ್ ಹುಲುಕುಳಿ, ಉಪಾಧ್ಯಕ್ಷರು, ಮ್ಯಾಮ್‌ಕೋಸ್‌, ಶಿವಮೊಗ್ಗ.

*

ಅಂತರರಾಷ್ಟ್ರೀಯ ಮಾರುಕಟ್ಟೆಯಿಂದ ಅನಧಿಕೃತವಾಗಿ ಅಡಿಕೆ ದೇಶಕ್ಕೆ ನುಸುಳುವುದು ನಿಂತಿದೆ. ಕಳೆದ ವರ್ಷ ಶೇ 40ರಷ್ಟು ಬೆಳೆನಷ್ಟ ವಾಗಿದೆ. ಮಳೆಯ ಕಾರಣ ಹೊಸ ಚಾಲಿ ಮಾರುಕಟ್ಟೆಗೆ ಬರುವುದು ವಿಳಂಬವಾಗಿದೆ. ಇದು ಸಹಜವಾಗಿ ಬೆಲೆ ಏರಿಕೆಗೆ ಕಾರಣವಾಗಿದೆ.
–ಕಿಶೋರ್‌ಕುಮಾರ್ ಕೊಡ್ಗಿ, ಕ್ಯಾಂಪ್ಕೊ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.