ADVERTISEMENT

ಒಳನೋಟ | ಸರಾಗವಾಗಲಿದೆಯೇ ಇ.ವಿ. ಪಯಣ: ಗುರಿ ಈಡೇರೀತೇ?

ವಿಜಯ್ ಜೋಷಿ
Published 10 ಅಕ್ಟೋಬರ್ 2021, 1:15 IST
Last Updated 10 ಅಕ್ಟೋಬರ್ 2021, 1:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ದೇಶದ ವಾಹನ ಮಾರುಕಟ್ಟೆಯಲ್ಲಿ 2030ರ ವೇಳೆಗೆ ವಿದ್ಯುತ್ ಚಾಲಿತ ವಾಹನಗಳ ಪ್ರಾಬಲ್ಯ ಇರಬೇಕು ಎಂಬ ಮಹತ್ವಾಕಾಂಕ್ಷೆಯನ್ನು ‘ನೀತಿ ಆಯೋಗ’ ಹೊಂದಿದೆ. ಆದರೆ, ವಿದ್ಯುತ್ ಚಾಲಿತ (ಇ.ವಿ.) ವಾಹನಗಳಿಗೆ ಸಂಬಂಧಿಸಿದಂತೆ ಈಗ ಇರುವ ನೀತಿಗಳು, ಮಾರುಕಟ್ಟೆ ಪರಿಸ್ಥಿತಿ ಹಾಗೂ ಮೂಲಸೌಕರ್ಯ ಇದರ ಈಡೇರಿಕೆಗೆ ಪೂರಕವಾಗಿ ಇವೆಯೇ?

‘ಕೇಂದ್ರ ಸರ್ಕಾರವು ತನ್ನ ಕಡೆಯಿಂದ ಸಾಧ್ಯವಿರುವ ಬಹುತೇಕ ಕೆಲಸಗಳನ್ನು ಮಾಡುತ್ತಿದೆ, ಅಗತ್ಯ ಸಬ್ಸಿಡಿ ನೀಡುತ್ತಿದೆ. ಆದರೆ ಇಷ್ಟೇ ಸಾಕಾಗದು. ಇ.ವಿ.ಗಳತ್ತ ಗ್ರಾಹಕರು ಹೆಚ್ಚು ಆಸಕ್ತಿ ತೋರಿಸಬೇಕು, ಒಳ್ಳೆಯ ಉತ್ಪನ್ನಗಳು ಮಾರುಕಟ್ಟೆಗೆ ಬರಬೇಕು, ಚಾರ್ಜಿಂಗ್ ಮೂಲಸೌಕರ್ಯ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಬೇಕು. ಇವೆಲ್ಲವುಗಳ ಜೊತೆಯಲ್ಲೇ, ಇ.ವಿ. ಖರೀದಿಸುವುದನ್ನು ಉತ್ತೇಜಿಸುವ ರೀತಿಯ ಸಾಲದ ನೆರವು ಹಣಕಾಸು ಸಂಸ್ಥೆಗಳಿಂದ ಸಿಗಬೇಕು’ ಎಂದು ಉದ್ಯಮ ವಲಯದ ಪ್ರಮುಖರು ಹಾಗೂ ಮಾರುಕಟ್ಟೆ ತಜ್ಞರು ಹೇಳುತ್ತಾರೆ.

ನೀತಿ ಆಯೋಗ ಮತ್ತು ಆರ್‌ಎಂಐ ಸಂಸ್ಥೆಯ ಅಂದಾಜಿನ ಪ್ರಕಾರ 2030ರ ವೇಳೆಗೆ ದೇಶದ ದ್ವಿಚಕ್ರ ವಾಹನಗಳ ಪೈಕಿ ಶೇ 80ರಷ್ಟು, ನಾಲ್ಕು ಚಕ್ರದ ವಾಹನಗಳ ಪೈಕಿ ಶೇ 50ರಷ್ಟು ಹಾಗೂ ಬಸ್ಸುಗಳ ಪೈಕಿ ಶೇ 40ರಷ್ಟು ಇ.ವಿ. ಆಗಿರಬೇಕು. ‘ವಾಹನ ಮಾರುಕಟ್ಟೆಯಲ್ಲಿ ಇ.ವಿ.ಗಳ ಪಾಲು ಹೆಚ್ಚಾಗಬೇಕು ಎಂದಾದರೆ ಸರ್ಕಾರದ ನೀತಿಗಳು ಹೇಗಿರುತ್ತವೆ ಎಂಬುದೇ ಮುಖ್ಯವಾಗುತ್ತವೆ’ ಎಂದು ಮರ್ಸಿಡೀಸ್ ಬೆಂಜ್ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಮಾರ್ಟಿನ್ ಶ್ವೆಂಕ್ ‘ಪ್ರಜಾವಾಣಿ’ ಜೊತೆ ಅಭಿಪ್ರಾಯ ಹಂಚಿಕೊಂಡರು.

ADVERTISEMENT

‘ಮುಂದಿನ ಎರಡು ವರ್ಷಗಳಲ್ಲಿ ಇ.ವಿ. ಸಂಬಂಧಿತ ನೀತಿ ಹೇಗಿರುತ್ತದೆ ಎಂಬುದನ್ನು ಈಗಲೇ ಊಹಿಸಲು ಆಗದು. ಮುಂದಿನ ಹತ್ತು ವರ್ಷಗಳಲ್ಲಿ ದೇಶದಲ್ಲಿ ನಾಲ್ಕು ಚಕ್ರಗಳ ವಾಹನ ಮಾರುಕಟ್ಟೆಯಲ್ಲಿ ಇ.ವಿ.ಗಳ ಪಾಲು ಏನಾಗಬಹುದು ಎಂಬುದನ್ನು ಈಗಲೇ ಊಹಿಸುವುದಕ್ಕೂ ಸಾಧ್ಯವಿಲ್ಲ’ ಎಂದು ಶ್ವೆಂಕ್ ಭವಿಷ್ಯ ನುಡಿದರು.

ಕಂಪನಿಗಳು, ಇ.ವಿ.ಗಳನ್ನು ಭಾರತದಲ್ಲಿಯೇ ತಯಾರಿಸಲು ಪೂರ್ತಿಯಾಗಿ ಆರಂಭಿಸಿದ ನಂತರ ವಾಹನಗಳ ಬೆಲೆ ತುಸು ಕಡಿಮೆ ಆಗಬಹುದು. ಅಲ್ಲದೆ, ವಾಹನಗಳ ಉತ್ಪಾದನೆ ದೊಡ್ಡ ಪ್ರಮಾಣದಲ್ಲಿ ಆದಾಗ ಬೆಲೆ ತಗ್ಗುತ್ತದೆ. ಬ್ಯಾಟರಿ ತಂತ್ರಜ್ಞಾನ ಅಭಿವೃದ್ಧಿಗೆ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಆಗುತ್ತಿದೆ, ಸಂಶೋಧನೆಗಳು ನಡೆಯುತ್ತಿವೆ. ಹಾಗಾಗಿ, ಮುಂದಿನ ದಿನಗಳಲ್ಲಿ ಇ.ವಿ. ಬೆಲೆ ಖಂಡಿತ ಇನ್ನಷ್ಟು ತಗ್ಗುವುದು ಖಚಿತ ಎಂದು ಪ್ರಮುಖ ವಾಹನ ಮಾರಾಟ ಕಂಪನಿಯೊಂದರ ಹಿರಿಯ ಅಧಿಕಾರಿ ತಿಳಿಸಿದರು.

ಹಣಕಾಸು ನೆರವು: ಇ.ವಿ. ಇನ್ನಷ್ಟು ಜನಪ್ರಿಯ ಆಗಬೇಕು ಎಂದಾದರೆ ಹಣಕಾಸು ಸಂಸ್ಥೆಗಳಿಂದ ಸಾಲ ಹೆಚ್ಚಿನ ಪ್ರಮಾಣದಲ್ಲಿ ಸಿಗುವಂತೆ ಆಗಬೇಕು ಎಂದು ರೇಟಿಂಗ್ಸ್‌ ಸಂಸ್ಥೆ ಕ್ರಿಸಿಲ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ಹೇಮಲ್ ಥಕ್ಕರ್ ‘ಪ್ರಜಾವಾಣಿ’ ಜೊತೆ ಅನಿಸಿಕೆ ಹಂಚಿಕೊಂಡರು.

ಇ.ವಿ. ದ್ವಿಚಕ್ರ ವಾಹನ ಖರೀದಿಗೆ ಈಗ ಹೆಚ್ಚಿನ ಡೌನ್‌ಪೇಮೆಂಟ್‌ ಅಗತ್ಯವಿದೆ. ಹಣಕಾಸಿನ ವಿಚಾರದಲ್ಲಿ ಸುಧಾರಣೆಗಳು ಆದರೆ 2030ರ ವೇಳೆಗೆ ದೇಶದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಶೇಕಡ 45ರಿಂದ ಶೇ 50ರಷ್ಟು ಪಾಲನ್ನು ಇ.ವಿ.ಗಳು ಸುಲಭವಾಗಿ ಹೊಂದಬಹುದೆ ಎಂದು ಥಕ್ಕರ್ ವಿವರಿಸಿದರು.

'ಚಾರ್ಜಿಂಗ್ ಸೌಕರ್ಯ ಹಿಂದುಳಿದಿದೆ'
ಇ.ವಿ. ವಾಹನ ಬಳಕೆ ಹೆಚ್ಚಾಗಬೇಕು ಎಂದಾದರೆ ಚಾರ್ಜಿಂಗ್ ಮೂಲಸೌಕರ್ಯ ಇನ್ನಷ್ಟು ಹೆಚ್ಚಬೇಕು ಎಂದು ಬ್ರಿಕ್‌ವರ್ಕ್‌ ರೇಟಿಂಗ್ಸ್‌ ಸಂಸ್ಥೆಯ ಆಟೊಮೊಬೈಲ್ ವಿಭಾಗದ ನಿರ್ದೇಶಕಿ ತನು ಶರ್ಮಾ ಹೇಳಿದರು.

‘ಇ.ವಿ. ಚಾರ್ಜಿಂಗ್ ಮೂಲಸೌಕರ್ಯ ಕಲ್ಪಿಸುವಲ್ಲಿ ದೇಶವು ಹಿಂದುಳಿದಿದೆ. ಇಡೀ ದೇಶದಲ್ಲಿ ಇರುವುದು 1,800 ಚಾರ್ಜಿಂಗ್ ಕೇಂದ್ರಗಳು. ಪ್ರತಿ 100 ಕಿ.ಮೀ.ಗೆ ಒಂದಾದರೂ ಚಾರ್ಜಿಂಗ್ ಕೇಂದ್ರ ಆರಂಭಿಸಲು ಕ್ರಮ ಕೈಗೊಳ್ಳಬೇಕು ಅಥವಾ ಈಗಾಗಲೇ ಇರುವ ಪೆಟ್ರೋಲ್ ಬಂಕ್‌ಗಳಲ್ಲಿ ಇ.ವಿ. ಚಾರ್ಜಿಂಗ್‌ ಸೌಲಭ್ಯ ಕಲ್ಪಿಸಬೇಕು’ ಎಂದು ಅವರು ಹೇಳಿದರು.

ಜಾಗತಿಕ ಮಟ್ಟದಲ್ಲಿ ಇ.ವಿ.ಗಳ ಮಾರುಕಟ್ಟೆ ಪಾಲು ಶೇ 5ರಷ್ಟಿದೆ. ಆದರೆ ಭಾರತದಲ್ಲಿ ಇವುಗಳ ಪಾಲು ಶೇ 1ಕ್ಕಿಂತ ಕಡಿಮೆ ಇದೆ. 2030ರ ವೇಳೆಗೆ ದೇಶದಲ್ಲಿ ಇ.ವಿ. ಪಾಲು ಶೇ 30ರಷ್ಟು ಇರಬೇಕು ಎಂದಾದರೆ, ಇ.ವಿ. ವಾಹನಗಳ ವಾರ್ಷಿಕ ಬೆಳವಣಿಗೆ ಪ್ರಮಾಣವು ಶೇ 45ರಷ್ಟು ಇರಬೇಕಾಗುತ್ತದೆ ಎಂದು ತನು ಅಂದಾಜಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.