ಬಪ್ಪನಾಡು ದುರ್ಗಾಪರಮೇಶ್ವರಿ, ಉಳ್ಳಾಲ ದರ್ಗಾ, ಅತ್ತೂರು ಸೇಂಟ್ ಲಾರೆನ್ಸ್ ಚರ್ಚ್
ಮಂಗಳೂರು: ಕೋಮು ಹತ್ಯೆ, ದ್ವೇಷ ಭಾಷಣ, ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು, ಪ್ರಚೋದನಕಾರಿ ಸುದ್ದಿ ಹರಡಿ ಸಮಾಜದಲ್ಲಿ ವಿಷಬೀಜ ಬಿತ್ತುವ ಕೃತ್ಯಗಳಿಗೆ ತಕ್ಕಮಟ್ಟಿನ ಕಡಿವಾಣ ಬಿದ್ದಿದೆ. ಜಿಲ್ಲೆಯ ಅಭಿವೃದ್ಧಿ ಮತ್ತು ಮಕ್ಕಳ ಭವಿಷ್ಯದ ಬಗೆಗೆ ಸಮುದಾಯದಲ್ಲಿ ಚಿಂತನೆ ಶುರುವಾಗಿದೆ. ದಕ್ಷಿಣ ಕನ್ನಡದಲ್ಲಿ ಬದಲಾವಣೆಯ ತಂಗಾಳಿ ಬೀಸಲಾರಂಭಿಸಿದೆ ಎಂಬ ಭಾವ ಹರಡುತ್ತಿದ್ದು, ತುಳುನಾಡಿನ ಭ್ರಾತೃತ್ವ ಮತ್ತೆ ಬೆಸೆಯುವ ಆಶಾವಾದ ಒಡಮೂಡಿದೆ.
ಸಾಮರಸ್ಯ ಮರುಸ್ಥಾಪಿಸುವ ಪ್ರಯತ್ನ ಸರ್ಕಾರ– ಸಮುದಾಯದಿಂದ ನಡೆಯುತ್ತಿವೆ. ಕೋಮುದ್ವೇಷ ತಡೆಗಾಗಿಯೇ ರಾಜ್ಯ ಸರ್ಕಾರ ದೇಶದಲ್ಲೇ ಮೊದಲ ಬಾರಿಗೆ ‘ವಿಶೇಷ ಕಾರ್ಯ ಪಡೆ’ ರಚಿಸಿದೆ. ಪೊಲೀಸ್ ಅಧಿಕಾರಿಗಳನ್ನು ಬದಲಿಸಿದ್ದು ‘ಕಿಡಿಗೇಡಿ’ಗಳ ವಿರುದ್ದ ಕ್ರಮವಾಗುತ್ತಿವೆ. ಸೌದಿ ಅರೇಬಿಯಾದಲ್ಲಿದ್ದುಕೊಂಡು, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಾಕಾರಿ ಸಂದೇಶಗಳನ್ನು ಹಂಚಿಕೊಂಡಿದ್ದ ಇಬ್ಬರನ್ನು ಲುಕ್ ಔಟ್ ಸುತ್ತೋಲೆ ಹೊರಡಿಸಿ ಕರೆಸಿಕೊಂಡ ಪೊಲೀಸರು, ಅವರನ್ನು ಬಂಧಿಸಿದ್ದಾರೆ. ಆ ಮೂಲಕ ‘ಬಿಲದಲ್ಲಿ ಅವಿತಿದ್ದರೂ ಬಿಡುವುದಿಲ್ಲ’ ಎಂಬ ಸಂದೇಶ ರವಾನಿಸಿದ್ದಾರೆ. ‘ಉಪಟಳ ನೀಡುವವರ’ ಗಡೀಪಾರಿಗೆ ಕಾನೂನು ಕ್ರಮ ಆರಂಭಿಸಿದ್ದಾರೆ. ಅಕ್ರಮ ದಂಧೆಗಳಿಗೆ ಕಡಿವಾಣ ಬೀಳುತ್ತಿದೆ.
ಇಂತಹ ಪ್ರಕರಣಗಳಲ್ಲಿ ಹೈಕೋರ್ಟ್‌ನಲ್ಲಿ ಪರಿಣಾಮಕಾರಿಯಾಗಿ ವಾದಿಸಲು ಅಡ್ವೊಕೇಟ್ ಜನರಲ್ ಅವರ ಕಚೇರಿಯ ನಾಲ್ವರು ಸರ್ಕಾರಿ ವಕೀಲರನ್ನು ಒಳಗೊಂಡ ವಿಶೇಷ ತಂಡ ನೇಮಿಸುವ ಮೂಲಕ ರಾಜ್ಯ ಸರ್ಕಾರ ಜಿಲ್ಲೆಯ ಪೊಲೀಸರಿಗೆ 'ಕಾನೂನು ಬಲ‘ವನ್ನೂ ಒದಗಿಸಿದೆ. ಈ ಎಲ್ಲ ಕ್ರಮಗಳಿಂದಾಗಿ ಕೋಮುದ್ವೇಷದ ಕಿಡಿ ಹೊತ್ತಿಸುತ್ತಿದ್ದವರ, ಜ್ವಾಲೆಗೆ ತುಪ್ಪ ಸುರಿಯುವವರ ಧ್ವನಿ ಕ್ಷೀಣಿಸಿದೆ. ಕೆಲ ಧಾರ್ಮಿಕ ಮುಖಂಡರು ಸಹ ತಮ್ಮ ಎಂದಿನ ಶೈಲಿಯಲ್ಲಿ ಮಾತನಾಡುವುದನ್ನು ಸದ್ಯಕ್ಕೆ ನಿಲ್ಲಿಸಿದ್ದಾರೆ.
ರಾಜ್ಯದ ಕರಾವಳಿ ಪ್ರಕೃತಿದತ್ತವಾಗಿ ಸಂಪದ್ಭರಿತ. ‘ದೇವರ ನಾಡು’ ಎಂಬ ಪ್ರತೀತಿ. ಎಲ್ಲ ಜಾತಿ– ಪ್ರದೇಶದ ಜನರಿಗೂ ಆಶ್ರಯತಾಣ. ಕ್ರೈಸ್ತ ಮಿಷನರಿಗಳು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆದವು. ಇತರೆ ಸಮುದಾಯವರೂ ಶಿಕ್ಷಣ ಸಂಸ್ಥೆಗಳನ್ನು ತೆರೆದು ಕೈಜೋಡಿಸಿದ್ದರಿಂದ ಇಲ್ಲಿಯ ಶಿಕ್ಷಣ ಸಂಸ್ಥೆಗಳು ವಿದೇಶಗಳಲ್ಲೂ ಛಾಪು ಮೂಡಿಸಿವೆ. ದೀನ–ದಲಿತರಿಗೆ ಶಿಕ್ಷಣ ಒದಗಿಸಲು ಶ್ರಮಿಸಿದ ಕುದ್ಮುಲ್ ರಂಗರಾವ್ ಅವರಂಥ ಪ್ರಾತಃ ಸ್ಮರಣೀಯರನ್ನು ಕೊಟ್ಟ ನಾಡಿದು. ಇಲ್ಲಿಯ ಜನ ಜಗತ್ತಿನ ಬಹುತೇಕ ದೇಶಗಳಲ್ಲಿ ನೆಲೆಸಿದ್ದಾರೆ. ವ್ಯಾಸಂಗ ಮತ್ತಿತರ ಕಾರಣಗಳಿಗಾಗಿ ನೂರಕ್ಕೂ ಹೆಚ್ಚು ದೇಶಗಳವರು ಇಲ್ಲಿದ್ದಾರೆ. ದೇಶದ ಬ್ಯಾಂಕಿಂಗ್ ಕ್ಷೇತ್ರಕ್ಕೆ ಇಲ್ಲಿಯವರ ಕೊಡುಗೆ ದೊಡ್ಡದು. ಮಾತೃ ಪ್ರಧಾನ ವ್ಯವಸ್ಥೆ ಇಲ್ಲಿಯ ಇನ್ನೊಂದು ವಿಶೇಷತೆ. ದ.ಕ ಸಂಪೂರ್ಣ ಸಾಕ್ಷರ ಜಿಲ್ಲೆ ಎಂಬ ಘೋಷಣೆಗೆ ಸಿದ್ಧತೆ ನಡೆದಿವೆ.
ಇಲ್ಲಿಯ ಸೌಹಾರ್ದ ಪರಂಪರೆ ದೊಡ್ಡದು. ಬಪ್ಪನಾಡು ದುರ್ಗಾ ಪರಮೇಶ್ವರಿ ದೇವಸ್ಥಾನ ಕಟ್ಟಿಸಿದ್ದು ಬ್ಯಾರಿ ಸಮುದಾಯದ ಬಪ್ಪ ಬ್ಯಾರಿ. ಪ್ರತಿ ವರ್ಷದ ಜಾತ್ರೆಯ ಸಮಯದಲ್ಲಿ ದೇವಸ್ಥಾನ ಸಮಿತಿಯಿಂದ ಬಪ್ಪ ಬ್ಯಾರಿ ಅವರ ಕುಟುಂಬದವರಿಗೆ ಪ್ರಸಾದ (ಹೂವು) ನೀಡಲಾಗುತ್ತದೆ. ಉಳ್ಳಾಲದ ಪ್ರಸಿದ್ಧ ಮದನಿ ದರ್ಗಾಕ್ಕೆ ಜಾಗ ನೀಡಿದ್ದು ಹಿಂದೂಗಳು.
ತುಳುನಾಡಿನ ಭಾಗವಾಗಿರುವ ಮಂಜೇಶ್ವರದ ಉದ್ಯಾವರ ಶ್ರೀ ಅರಸು ದೈವಗಳ ವಾರ್ಷಿಕ ಜಾತ್ರೆಯಲ್ಲಿ ಗ್ರಾಮದ ‘ಸಾವಿರ ಜಮಾತ್ ಮಸೀದಿ’ ಭೇಟಿ ನೀಡುವ ಸಂಪ್ರದಾಯವಿದೆ. ಧರ್ಮಸ್ಥಳದ ಮಂಜುನಾಥ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದುರ್ಗಾಪರಮೇಶ್ವರಿ, ಕೊಲ್ಲೂರು ಮೂಕಾಂಬಿಕಾ, ಕುತ್ತಾರಿನ ಸ್ವಾಮಿ ಕೊರಗಜ್ಜ ದೇವಸ್ಥಾನ, ಕಾರ್ಕಳ ಬಳಿಯ ಅತ್ತೂರಿನ ಸಂತ ಲಾರೆನ್ಸ್ ಚರ್ಚ್, ಉಳ್ಳಾಲದ ದರ್ಗಾ ಮುಂತಾದವು ಸರ್ವಧರ್ಮಗಳ ಶ್ರದ್ಧಾ ಕೇಂದ್ರಗಳಾಗಿವೆ.
ಇಂತಹ ಸೌಹಾರ್ದ ಪರಂಪರೆಗೆ ಕೊಳ್ಳಿ ಇಡುವ ಕೆಲಸ ಹಲವು ದಶಕಗಳಿಂದ ನಿರಂತರವಾಗಿ ನಡೆದಿದ್ದರಿಂದ ಕಳಂಕ ಅಂಟಿಕೊಂಡಿದೆ. ಬೇರೆಡೆಯ ರಾಜಕೀಯದಲ್ಲಿ ಜಾತಿ– ಒಳಜಾತಿ ಪ್ರಮುಖ ಪಾತ್ರ ವಹಿಸುತ್ತಿದ್ದರೆ, ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಧರ್ಮವೇ ಪ್ರಧಾನ ಎಂದಾಗಿದೆ. ಸೇರಿಗೆ ಸವ್ವಾಸೇರು ಎಂಬಂತಹ ಭಾವನೆ ಎರಡೂ ಕಡೆಯ ಕೆಲವರಲ್ಲಿ ಬಂದಿರುವುದು ಪರಿಸ್ಥಿತಿ ಬಿಗಡಾಯಿಸಲು ಕಾರಣ ಎಂಬ ವ್ಯಾಖ್ಯಾನವೂ ಇದೆ.
ಕರಾವಳಿ ಹೀಗೇಕಾಯಿತು ಎಂದು ಕೇಳಿದರೆ, ‘ಎರಡೂ ಕಡೆಯ ಕೆಲವರು ಬಿತ್ತಿರುವ ಧರ್ಮದ ವಿಷಬೀಜ ಹೆಮ್ಮರವಾಗಿದೆ. ಸಮುದ್ರದ ಅಲೆಗಿಂತಲೂ ಧರ್ಮಾಭಿಮಾನದ ಅಬ್ಬರ ಜೋರಾಗಿದೆ. ಉಭಯ ಧರ್ಮಗಳಲ್ಲಿಯ ಧರ್ಮಾಂಧತೆ ಈ ಪ್ರದೇಶಕ್ಕೆ ಕಡಲ್ಕೊರೆತಕ್ಕಿಂತಲೂ ಹೆಚ್ಚಿನ ಹಾನಿ ಮಾಡಿದೆ. ಧರ್ಮದ ಅಮಲಿನೊಂದಿಗೆ ಡ್ರಗ್ಸ್ ಮಾಫಿಯಾ, ಮರಳು ಮಾಫಿಯಾ ಸೇರಿ ಹಲವು ಮಾಫಿಯಾಗಳು ಕೆಲಸ ಮಾಡಿದ್ದು, ಧರ್ಮಾಧಾರಿತ ಕೊಲೆ ನಡೆದಿವೆ. ಧರ್ಮಾಧಾರಿತ ಒಂದು ಕೊಲೆ ನಡೆದರೆ ಕೆಲವೇ ದಿನಗಳ ಅಂತರದಲ್ಲಿ ಕನಿಷ್ಠ 3–4 ಹೆಣ ಉರುಳಿವೆ ಎಂಬ ಉದಾಹರಣೆಯನ್ನು ಇಲ್ಲಿಯ ಜನ ನೀಡುತ್ತಾರೆ. ಇದರ ದುಷ್ಪರಿಣಾಮ ಇಲ್ಲಿಯ ವಾಣಿಜ್ಯೋದ್ಯಮ, ಶಿಕ್ಷಣ ಸಂಸ್ಥೆಗಳ ಮೇಲೂ ಬಿದ್ದಿದೆ. ಕೆಲ ವರ್ಷಗಳಿಂದ ಉನ್ನತ ಶಿಕ್ಷಣ ಪ್ರವೇಶ ಕಡಿಮೆಯಾಗುತ್ತಿದೆ. ಗೋವಾಕ್ಕೆ ಸರಿಸಮವಾಗಿ ಪ್ರವಾಸೋದ್ಯಮ ಬೆಳೆಯಲು ಅವಕಾಶ ಇದ್ದರೂ, ಅದು ಸಾಧ್ಯವಾಗುತ್ತಿಲ್ಲ’ ಎಂಬ ಆತಂಕವನ್ನು ಹಲವರದ್ದು.
‘ನಾನು 1 ಲಕ್ಷ ಚದರ ಅಡಿಯ ಕಟ್ಟಡ ಕಟ್ಟುತ್ತಿದ್ದೇನೆ. ವಿದೇಶಿ ಕಂಪನಿಯೊಂದು ಬಾಡಿಗೆಗೆ ಒಡಂಬಡಿಕೆ ಮಾಡಿಕೊಂಡಿತ್ತು. ಇಲ್ಲಿಯ ಘಟನಾವಳಿಗಳ ಕಾರಣಕ್ಕಾಗಿ ಆ ಕಂಪನಿ ಈಗ ಬರಲು ಹಿಂದೇಟು ಹಾಕುತ್ತಿದೆ. ಕೋಮುಗಲಭೆ ನಡೆದಾಗ ಕೆಲ ದಿನ ಧಾರ್ಮಿಕ ಕ್ಷೇತ್ರಗಳಿಗೂ ಹೊರಗಿನ ಜನ ಬರಲ್ಲ’ ಎಂಬ ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ ಕುಮಾರ್ ರೈ ಅವರು ಹೇಳಿಕೆ ಇಲ್ಲಿಯ ಅಭಿವೃದ್ಧಿಗೆ ಕುತ್ತು ಎದುರಾಗಿರುವುದಕ್ಕೆ ಸಾಕ್ಷಿಯಂತಿದೆ.
‘ಎರಡೂ ಜಿಲ್ಲೆಯಲ್ಲಿ 250 ಐಟಿ ಕಂಪನಿಗಳಿವೆ. 200ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿವೆ. ರಾಜ್ಯದ ಜಿಡಿಪಿಗೆ ಮಂಗಳೂರಿನ ಕೊಡುಗೆಯೂ ಹೆಚ್ಚಿದೆ. ವಾಣಿಜ್ಯೋದ್ಯಮ ಬೆಳವಣಿಗೆಗೆ ಸೌಹಾರ್ದ ವಾತಾವರಣವೂ ಬೇಕು’ ಎಂಬುದು ಕೆನರಾ ವಾಣಿಜ್ಯೋದ್ಯಮ ಸಂಸ್ಥೆಯ ಕಳಕಳಿ.
ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಅತ್ತೂರು ಸೇಂಟ್ ಲಾರೆನ್ಸ್ ಚರ್ಚ್
ಬಪ್ಪನಾಡು ದುರ್ಗಾಪರಮೇಶ್ವರಿ ಜಾತ್ರೆ
ಉಳ್ಳಾಲ ದರ್ಗಾ
ಹೀಗೇಕಾಯಿತು?:
‘ಮಂಗಳೂರು ಮುಂಬೈಯಿಂದ ಪ್ರಭಾವಿತವಾಗಿರುವ ನಗರ. ಇಲ್ಲಿಯವರು ಕೆಲಸಕ್ಕಾಗಿ ಮುಂಬೈಗೆ ಹೋಗುತ್ತಿದ್ದರು. ಅಲ್ಲಿಯ ಭೂಗತ ಚಟುವಟಿಕೆಯತ್ತ ಕೆಲವರು ಆಕರ್ಷಿತರಾದರು. 90ರ ದಶಕದ ವರೆಗೆ ಇಲ್ಲಿಯ ಭೂಗತ ಚಟುವಟಿಕೆಗೆ ಮುಂಬೈ ಲಿಂಕ್ ಇತ್ತು. ಇಂತಹ ಗ್ಯಾಂಗ್‌ನಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲ ಧರ್ಮೀಯ ಕ್ರಿಮಿನಲ್‌ಗಳೂ ಇದ್ದರು. ರಾಮಜನ್ಮಭೂಮಿ– ಬಾಬರಿ ಮಸೀದಿ ಆಂದೋಲನ ಆರಂಭವಾದ ನಂತರ, ಈ ಭೂಗತ ಗ್ಯಾಂಗ್‌ಗಳು ಹಿಂದೂ– ಮುಸ್ಲಿಂ ಕ್ರಿಮಿನಲ್‌ಗಳ ಗ್ಯಾಂಗ್‌ಗಳಾಗಿ ಬದಲಾದವು. ಕ್ರಿಯೆಗೆ– ಪ್ರತಿಕ್ರಿಯೆ ಎಂಬುದು ಎರಡೂ ಕಡೆಯಿಂದ ಆರಂಭವಾಯಿತು. ಎರಡೂ ಕಡೆಯ ಕ್ರಿಮಿನಲ್‌ಗಳಿಗೆ ಧರ್ಮ ಆಶ್ರಯ ತಾಣಗಳಾದವು. ಏನೇ ಅನ್ಯಾಯ ಮಾಡಿದರೂ ಧರ್ಮದ ಹೆಸರಲ್ಲಿ ರಕ್ಷಣೆ ಸಿಗುತ್ತದೆ ಎಂಬಂತಾಯಿತು. ಜನಮಾನಸವೇ ಹಿಂದೂ– ಮುಸ್ಲಿಂ ಎಂಬ ಎರಡು ಗುಂಪು ಆಗುವ ಸ್ಥಿತಿ ಬಂತು’ ಎಂಬ ವಿಶ್ಲೇಷಣೆ ಮುಂದಿಡುತ್ತಾರೆ ಹೋರಾಟಗಾರ ಮತ್ತು ಕಾಂಗ್ರೆಸ್ ರಾಜ್ಯ ವಕ್ತಾರ ಎಂ.ಜಿ. ಹೆಗಡೆ.
‘ಇಲ್ಲಿ ನಡೆದ ಮತೀಯ ಕೊಲೆಗಳು ಹಿಂದೂ ಮುಸ್ಲಿಂ ಗಲಾಟೆ ಅಲ್ಲ. ಹಿಂದೂ– ಮುಸ್ಲಿಂ ಕ್ರಿಮಿನಲ್‌ಗಳ ಗಲಾಟೆ. 30 ಕೊಲೆಗಳು ನಡೆದಿದ್ದರೆ ಅವುಗಳಲ್ಲಿ 5–6 ಧರ್ಮದ ಪ್ರತೀಕಾರದ ಕೊಲೆಗಳು ಇರಬಹುದು. ಅಕ್ರಮ ಚಟುವಟಿಕೆಗಳಿಂದ ಬರುವ ಪಾಲು ಹಿಂದೆ ಭೂಗತ ಪಾತಕಿಗಳಿಗೆ ಹೋಗುತ್ತಿತ್ತು. ಈಗ ಅದು ಜಾತಿವಾದಿ ಸಂಘಟನೆಗಳಲ್ಲಿರುವ ಕ್ರಿಮಿನಲ್‌ಗಳಿಗೆ ಹೋಗುತ್ತಿದ್ದು, ಈ ಸರಪಳಿಯನ್ನು ತುಂಡರಿಸಬೇಕಿದೆ’ ಎಂಬುದು ಅವರ ಪ್ರತಿಪಾದನೆ.
ಆದರೆ, ಇದನ್ನು ವಿಶ್ವ ಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ್ಯ ಸಹಕಾರ್ಯವಾಹ ಶರಣ್ ಪಂಪ್‌ವೆಲ್ ಒಪ್ಪುವುದಿಲ್ಲ. ‘ಇಲ್ಲಿಯದು ಹಿಂದೂ– ಮುಸ್ಲಿಂರ ಮಧ್ಯದ ಗಲಾಟೆ ಅಲ್ಲ. ಹಿಂದೂ ಸಮಾಜದ ಸಂಸ್ಕೃತಿ, ಹಿಂದೂಗಳ ಭಾವನೆಗೆ ನೋವುಂಟು ಮಾಡುವ ಕೆಲಸ ಹಲವಾರು ವರ್ಷಗಳಿಂದ ಆಗಿದೆ. ಗೋ ಕಳ್ಳತನ, ಗೋ ಹತ್ಯೆ, ಲವ್ ಜಿಹಾದ್ ಪ್ರಶ್ನಿಸಿದ್ದಕ್ಕೆ ನಮ್ಮ ಕಾರ್ಯಕರ್ತರಿಗೆ ತೊಂದರೆ ಕೊಡುವ ಕೆಲಸ ನಡೆದಿದೆ. ವೈಯಕ್ತಿಕ ಕಾರಣಗಳಿಗಾಗಿ ಮುಸ್ಲಿಮರ ಕೊಲೆ ನಡೆದರೆ ಅದಕ್ಕೆ ಪ್ರತೀಕಾರವಾಗಿ ಹಿಂದೂಗಳ ಕೊಲೆ ಮಾಡಲಾಗಿದೆ. ಇಸ್ಲಾಂ ಮತೀಯವಾದ ಇಲ್ಲಿ ಹೆಚ್ಚಿದೆ. ಅವರಿಗೆ ವಿದೇಶದಿಂದ ಹಣ ಬರುತ್ತಿದೆ. ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ಇದು ಸಾಬೀತಾಗಿದೆ. ಪಕ್ಕದ ಕೇರಳದಲ್ಲಿ ಇಸ್ಲಾಂ ಮತೀಯವಾದಿಗಳ ಸಂಖ್ಯೆ ಹೆಚ್ಚಾಗಿದೆ. ಇಲ್ಲಿಯ ಪಿಎಫ್‌ಐ ಪ್ರೇರಿತ ಹುಡುಗರಿಗೆ ಅಲ್ಲಿಯವರಿಂದ ನೆರವು–ತರಬೇತಿ ಸುಲಭವಾಗಿ ಸಿಗುತ್ತಿದೆ. ಫಂಡಿಂಗ್– ಪ್ಲ್ಯಾನಿಂಗ್– ಟ್ರೇನಿಂಗ್ ವ್ಯವಸ್ಥಿತವಾಗಿ ನಡೆಯುತ್ತಿದೆ. ಸ್ಲೀಪರ್ ಸೆಲ್‌ಗಳು ಕೆಲಸ ಮಾಡುತ್ತಿವೆ. ಹೀಗಾಗಿ ಅವರು ದಕ್ಷಿಣ ಕನ್ನಡವನ್ನು ಟಾರ್ಗೆಟ್ ಮಾಡಿಕೊಂಡಿದ್ದಾರೆ’ ಎನ್ನುತ್ತಾರೆ ಅವರು.
‘ಭೂಗತ ಪಾತಕಿಗಳೇ ಧರ್ಮದ ಹೆಸರಲ್ಲಿ ರಕ್ಷಣೆ ಪಡೆಯುತ್ತಿದ್ದಾರೆ, ಅಕ್ರಮದ ದುಡ್ಡು ಅವರಿಗೆ ಸೇರುತ್ತಿದೆ ಎಂಬ ವಾದವನ್ನು ನಾನು ಒಪ್ಪುವುದಿಲ್ಲ. ಇಂತಹ ಅನೈತಿಕ–ಅಕ್ರಮ ಕೆಲಸ ಹಿಂದೂಗಳು ಮಾಡುತ್ತಿಲ್ಲ’ ಎಂದು ಶರಣ್ ಹೇಳುತ್ತಾರೆ.
‘ವಿದೇಶಿ ನೆರವು’ ಎಂಬುದನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ (ಎಸ್‌ಡಿಪಿಐ) ಮುಖಂಡ ಅನ್ವರ್ ಸಾದತ್ ಒಪ್ಪುವುದಿಲ್ಲ. ‘ದಕ್ಷಿಣ ಕನ್ನಡದ ಆರ್ಥಿಕತೆ ನಿಂತಿರುವುದೇ ಗಲ್ಫ್‌ನಲ್ಲಿರುವ ಇಲ್ಲಿಯ ಉದ್ಯೋಗಿಗಳ ಮೇಲೆ. ಬ್ಯಾರಿ (ಮುಸ್ಲಿಂ) ಸಮುದಾಯದ ಶೇ 50ರಷ್ಟು ಜನ ಗಲ್ಫ್‌ನಲ್ಲಿ ಉದ್ಯೋಗದಲ್ಲಿದ್ದಾರೆ. ಇತರೆ ಧರ್ಮೀಯರೂ ಇದ್ದಾರೆ. ಊರಲ್ಲಿ ಸಾಮಾಜಿಕ–ಧಾರ್ಮಿಕ–ಕ್ರೀಡಾ ಕಾರ್ಯಕ್ರಮಗಳ ಕನಿಷ್ಠ ಅರ್ಧದಷ್ಟು ವೆಚ್ಚವನ್ನು ಭರಿಸುವವರು ವಿದೇಶದಲ್ಲಿ ಉದ್ಯೋಗದಲ್ಲಿರುವ ಆ ಊರಿನವರು. ಸ್ಥಿತಿವಂತರು ಹಬ್ಬದ ವೇಳೆ ತಮ್ಮ ಬಂಧುಗಳಿಗೆ ಉಡುಗೊರೆ ನೀಡುವುದು ನಮ್ಮ ಸಂಪ್ರದಾಯ. ಹೀಗೆ ಬಂದ ಹಣವನ್ನೇ ಇಲ್ಲಿಯ ಚಟುವಟಿಕೆಗೆ ವಿದೇಶಿ ಹಣ ಬರುತ್ತದೆ ಎಂದು ಹುಯಿಲೆಬ್ಬಿಸಿದರೆ ಹೇಗೆ’ ಎಂಬುದು ಅವರ ಪ್ರಶ್ನೆ.
‘ಬಿಜೆಪಿ ಇದನ್ನು ಹಿಂದುತ್ವದ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡಿದೆ. ಬಹುತೇಕ ಮಾಧ್ಯಮಗಳೂ ಏಕಮುಖವಾಗಿವೆ. ಇನ್ನೊಂದು ಕೋಮಿನವರ ಕಣ್ಣೀರು ಒರೆಸುವ ಕೆಲಸವಾಗುತ್ತಿಲ್ಲ. ಇದರಿಂದಾಗಿ ಬಿಜೆಪಿ ಮತ್ತು ಸಂಘ ಪರಿವಾರದವರಿಗೆ ನಡೆದಿದ್ದೇ ದಾರಿ ಎಂಬಂತಾಗಿದೆ’ ಎನ್ನುತ್ತಾರೆ ಅನ್ವರ್ ಸಾದತ್.
ಇಲ್ಲಿಯ ಬಹುಪಾಲು ಕ್ರಿಶ್ಚಿಯನ್‌ರು ಸಮಾನಂತರ ಕಾಯ್ದುಕೊಂಡು ‘ತಮ್ಮ ಪಾಡಿಗೆ ತಾವಿದ್ದಾರೆ’.
‘ಇಲ್ಲಿಯದು ಸೈದ್ಧಾಂತಿಕ ಸಂಘರ್ಷ. ಅಕ್ರಮ ದಂಧೆ ಮಟ್ಟಹಾಕಬೇಕು. ವಿದ್ಯಾರ್ಥಿ ಮತ್ತು ಸಮುದಾಯದಲ್ಲಿ ಸಾಮರಸ್ಯ ಮೂಡಿಸುವ ಕೆಲಸವಾಗಬೇಕು’ ಎಂಬುದು ಸಿಪಿಎಂ ಮುಖಂಡ ಮುನೀರ್ ಕಾಟಿಪಳ್ಳ ಅವರ ಸಲಹೆ.
ಗೃಹ ಸಚಿವ ಜಿ.ಪರಮೇಶ್ವರ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ ಮಂಗಳೂರಲ್ಲಿ ನಡೆದ ಸೌಹಾರ್ದ ಸಭೆಯಲ್ಲಿ ಹೊರಹೊಮ್ಮಿದ ಒಟ್ಟಾರೆ ಆಶಯವೂ ಸಾಮರಸ್ಯದ ಮೂಲಕ ಜಿಲ್ಲೆಯ ಗತವೈಭವ ಮರಳಿ ತರುವುದೇ ಆಗಿತ್ತು.
ಆದರೆ, ಇದಕ್ಕೆ ಕಪ್ಪುಚುಕ್ಕೆ ಎಂಬಂತೆ ಪುತ್ತೂರು ಮತ್ತು ವಿಟ್ಲದಲ್ಲಿ ಈ ತಿಂಗಳು ಎರಡು ಮತೀಯ ಗೂಂಡಾಗಿರಿ, ಉಡುಪಿ ಜಿಲ್ಲಾಯಲ್ಲಿ ದ್ವೇಷ ಭಾಷಣದ ಒಂದು ಪ್ರಕರಣ ದಾಖಲಾಗಿವೆ.
ಅತ್ತೂರು ಚರ್ಚ್ ಜಾತ್ರೆಯಲ್ಲಿ ಸರ್ವಧರ್ಮ ಭಕ್ತರ ಸಮಾಗಮ
ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಮಹೋತ್ಸವದಲ್ಲಿ ಹಿಂದೂ ವರ್ತಕರ ಮಳಿಗೆಯಲ್ಲಿ ಖರೀದಿಯಲ್ಲಿ ತೊಡಗಿದ್ದ ಮುಸ್ಲಿಂ ಕುಟುಂಬ
ಮರೆಯಾಗಿಲ್ಲ ಮಾನವೀಯತೆ:
ಸಂಕಷ್ಟದಲ್ಲಿರುವವರಿಗೆ ನೆರವಾಗುವ ಇಲ್ಲಿಯವರ ಮಾನವೀಯ ಸೇವೆಗೆ ಈ ಸಂಘರ್ಷ ಅಡ್ಡಿ ಬಂದಿಲ್ಲ. ಅಶಕ್ತರಿಗೆ ಚಿಕಿತ್ಸೆ ಕೊಡಿಸುವ, ವಿವಾಹಕ್ಕೆ ನೆರವು ನೀಡುವ, ಸೂರು ಕಲ್ಪಿಸುವ... ಸಂಕಷ್ಟದಲ್ಲಿದ್ದವರ ಕಣ್ಣೀರು ಒರೆಸುವ ವಿಷಯ ಬಂದಾಗ ಎಲ್ಲ ಧರ್ಮೀಯ ದಾನಿಗಳೂ ನೆರವಿನ ಹಸ್ತ ಚಾಚುತ್ತಾರೆ.
ಇದು ಇದೇ ಜೂನ್ ತಿಂಗಳ ಪ್ರಕರಣ. ಬಂಟ್ವಾಳ ತಾಲ್ಲೂಕಿನ ದೇವಸ್ಥಾನವೊಂದರ ಅರ್ಚಕ ಹಿರಣ್ಯಾಕ್ಷ ಅವರ ಐದು ವರ್ಷ ಬಾಲಕಿಗೆ ಅಸ್ಥಿ ಮಜ್ಜೆ ಟ್ರಾನ್ಸ್‌ಪ್ಲಾಂಟ್ ಚಿಕಿತ್ಸೆಗೆ ಸುಮಾರು ₹50 ಲಕ್ಷ ಹಣ ಹೊಂದಿಸಬೇಕಿತ್ತು. ಸಮಾಜ ಸೇವಕ ಮಂಗಳೂರಿನ ಫಯಾಜ್ ಮಾಡೂರು ಹಾಗೂ ಅವರ ತಂಡದವರು ನೆರವು ಯಾಚಿಸಿ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದರು. ಕೇವಲ 15 ಗಂಟೆಗಳಲ್ಲಿ ₹75 ಲಕ್ಷ ನೆರವು ಸಂಗ್ರಹವಾಯಿತು. ಈಗ ಆ ಬಾಲೆಯ ಚಿಕಿತ್ಸೆ ನಡೆಯುತ್ತಿದೆ.
‘ಈವರೆಗೆ ಹೀಗೆ ₹25 ಕೋಟಿಗೂ ಅಧಿಕ ಮೊತ್ತ ಸಂಗ್ರಹಿಸಿ ಕೊಟ್ಟಿರಬಹುದು. ಎಲ್ಲ ಧರ್ಮದವರೂ ಧಾರಾಳವಾಗಿ ಧನಸಹಾಯ ಮಾಡುತ್ತಾರೆ’ ಎನ್ನುತ್ತಾರೆ ಫಯಾಜ್ ಮಾಡೂರು. ಇದು ಈ ಮಣ್ಣಿನ ಗುಣ.
ಏತನ್ಮಧ್ಯೆ ದಕ್ಷಿಣ ಕನ್ನಡ ಹೆಸರನ್ನು ಬದಲಿಸಬೇಕು ಎಂಬ ಪರ–ವಿರೋಧ ಚರ್ಚೆ, ಮಂಗಳೂರು ನೈಟ್‌ಲೈಫ್‌ಗೆ ತೆರೆದು
ಕೊಳ್ಳಬೇಕು ಎಂಬ ಕೂಗು ಸಹ ಎದ್ದಿದೆ. ಒಟ್ಟಾರೆ ಅಭಿವೃದ್ಧಿ ಮೇಲುಗೈ ಸಾಧಿಸಲಿ; ಕೋಮುದ್ವೇಷ ಕೊನೆಯಾಗಲಿ. ತುಳುನಾಡಿನ ಗತವೈಭವ ಮರುಕಳಿಸಲಿ ಎಂಬುದು ಇಲ್ಲಿಯ ಶ್ರೀಸಾಮಾನ್ಯರ ಆಶಾವಾದ.
‘ಹೂವು ಕೊಡುತ್ತಾರೆ; ಹೂವು ಮಾರಲು ಬಿಡುತ್ತಿಲ್ಲ’
‘ಬಪ್ಪನಾಡು ದುರ್ಗಾ ಪರಮೇಶ್ವರಿ ದೇವಸ್ಥಾನದ ಜಾತ್ರೆಯ ದಿನ ರಥದ ಸವಾರಿ ವೇಳೆ ಜಾತ್ರಾ ಸಮಿತಿಯವರು ನಮ್ಮ ಮನೆಗೆ ಬಂದು ಹೂವು, ಹಣ್ಣು ಕೊಡುವ ಪರಂಪರೆ ಇದೆ. ಅದು ನಡೆದುಕೊಂಡು ಬರುತ್ತಿದೆ. ಆದರೆ, ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಹೂವು ಮಾರಲು ಕೆಲ ವರ್ಷಗಳಿಂದ ಅವಕಾಶ ನೀಡುತ್ತಿಲ್ಲ’ ಎಂದು ಹೇಳುತ್ತಾರೆ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ ನಿರ್ಮಿಸಿರುವ ಬಪ್ಪ ಬ್ಯಾರಿ ಕುಟುಂಬಕ್ಕೆ ಸೇರಿರುವ ಅಬ್ದುಲ್ ರಜಾಕ್ ಮೂಲ್ಕಿ.
‘ಬಪ್ಪನಾಡು ದೇವಸ್ಥಾನವು ಮುಜುರಾಯಿ ಇಲಾಖೆಗೆ ಸೇರಿದ್ದರಿಂದ ಎಲ್ಲ ಪ್ರಕ್ರಿಯೆ ಇಲಾಖೆಯ ನೀತಿ-ನಿಯಮದಂತೆ ನಡೆಯುತ್ತವೆ. ದೇವಳದ ಸುತ್ತಮುತ್ತ ಹೂ ಮಾರಾಟದ ವಿಷಯದಲ್ಲಾಗಲಿ, ದೇವಳ ವಠಾರದಲ್ಲಿನ ವ್ಯಾಪಾರ ವ್ಯವಹಾರಕ್ಕೆ ನಿಯಮಗಳನ್ನು ಪಾಲಿಸಿಕೊಂಡು, ಅದನ್ನು ಮೀರದಂತೆ ಕ್ರಮ ಕೈಗೊಂಡಿದ್ದೇವೆ. ಈಗ ಯಾವುದೇ ರೀತಿಯ ಗೊಂದಲಗಳಿಲ್ಲ’ ಎನ್ನುವುದು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಎಂ.ದುಗ್ಗಣ್ಣ ಸಾವಂತರು ಅವರ ವಿವರಣೆ.
‘ಈಚೆಗೆ ಉಳ್ಳಾಲ ದರ್ಗಾದ ಉರುಸ್ ನಡೆದಾಗ ಎಲ್ಲ ಧರ್ಮೀಯರೂ ವ್ಯಾಪಾರ ನಡೆಸಿದರು. ಆದರೆ, ಕೆಲವೆಡೆ ಸೀಮಿತ ಧರ್ಮದವರಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ಎಂಬ ಸಂವಿಧಾನ ವಿರೋಧ ನಡೆ ಅನುಸರಿಸಲಾಗುತ್ತಿದೆ. ಅದನ್ನು ತಡೆಯಬೇಕು. ಸಂವಿಧಾನ ವಿರೋಧಿ ಸಂಘ–ಸಂಸ್ಥೆಗಳನ್ನು ನಿಷೇಧಿಸಬೇಕು’ ಎಂಬುದು ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಬಿ.ಜಿ. ಹನೀಫ್ ಹಾಜಿ ಅವರ ಆಗ್ರಹ.
ತುಳುನಾಡಿನ ಭಾಗವಾಗಿರುವ ಮಂಜೇಶ್ವರದ ಉದ್ಯಾವರ ಮಾಡ ಶ್ರೀ ಅಸರು ದೈವಗಳ ವಾರ್ಷಿಕ ಜಾತ್ರೆಯಲ್ಲಿ ಗ್ರಾಮದ ‘ಸಾವಿರ ಜಮಾತ್ ಮಸೀದಿ’ ಭೇಟಿ
ತುಳುನಾಡಿನ ಭಾಗವಾಗಿರುವ ಮಂಜೇಶ್ವರದ ಉದ್ಯಾವರ ಮಾಡ ಶ್ರೀ ಅಸರು ದೈವಗಳ ವಾರ್ಷಿಕ ಜಾತ್ರೆಯಲ್ಲಿ ಗ್ರಾಮದ ‘ಸಾವಿರ ಜಮಾತ್ ಮಸೀದಿ’ ಭೇಟಿ
ಪ್ರಜಾಪ್ರಭುತ್ವ ದೇಶದಲ್ಲಿ ಮೌಲ್ಯಗಳನ್ನು ಅರಿತು ಬಾಳುವುದೇ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಭೂಮಿಯ ಋಣವನ್ನು ನಾವು ತೀರಿಸಬೇಕಿದೆ. ಗ್ರಾಮೀಣ ಪ್ರದೇಶದ ಎಲ್ಲರೂ ಒಂದಾಗಿ ದೋಣಿ ಮೂಲಕ ನಗರವನ್ನು ತಲುಪುವ ಕಾಲವಿತ್ತು. ಕಷ್ಟದ ದಿನಗಳಲ್ಲಿ ಎಲ್ಲರೂ ಪರಸ್ಪರ ಕೊಡುಕೊಳ್ಳುವಿಕೆಯಿಂದ ಜೀವನ ನಡೆಸುವುದು ನಮ್ಮ ಪದ್ಧತಿ. ಮನುಷ್ಯತ್ವ ಒಂದೇ ಧರ್ಮ. ಎಲ್ಲರೂ ಒಗ್ಗಟ್ಟಾಗಿರುವುದೇ ಸಮಾಜದ ಸುಂದರ ನೋಟ. ಬಡ ಮಕ್ಕಳಿಗೆ ಶಿಕ್ಷಣ ನೀಡುವ, ಸಾಮಾಜಿಕ ಮೌಲ್ಯಗಳನ್ನು ಬಿತ್ತುವುದು ನಮ್ಮೆಲ್ಲರ ಆದ್ಯತೆಯಾಗಬೇಕು.ಹರೇಕಳ ಹಾಜಬ್ಬ, ಅಕ್ಷರಸಂತ, ಪದ್ಮಶ್ರೀ ಪುರಸ್ಕೃತರು
ಧರ್ಮದ ಸಮಸ್ಯೆ ಇಲ್ಲ; ಧರ್ಮ ಇಲ್ಲಿ ಮುಖವಾಡ ಅಷ್ಟೇ. ಹಿಂದೂಗಳಲ್ಲಿ ಕೋಮುವಾದಿಗಳು ಇದ್ದಂತೆ ಮುಸ್ಲಿಮರಲ್ಲಿಯೂ ಇದ್ದಾರೆ. ಇದು ಆಗಬಾರದಿತ್ತು. ಆದರೆ, ಇದು ದೊಡ್ಡ ದುರಂತ. ಮುಸ್ಲಿಂ ಕೋಮುವಾದ ಬೆಳೆದಂತೆ ಹಿಂದು ಕೋಮುವಾದ ಬಲವಾಗುತ್ತದೆ. ಇಲ್ಲಿ ಜಾತ್ಯತೀತ ಪಕ್ಷಗಳಿಗೆ ಬದ್ಧತೆ ಇಲ್ಲ. ಬಿಜೆಪಿಯ ಹಿಂದುತ್ವವನ್ನು ಧೈರ್ಯವಾಗಿ ಪ್ರಶ್ನಿಸುವ ನಾಯಕತ್ವ ಇಲ್ಲ. ಪ್ರಗತಿಪರರ ಧ್ವನಿ ಕ್ಷೀಣಿಸಿದೆ. ಎಲ್ಲವೂ ಕೋಮುವಾದೀಕರಣಗೊಂಡಿದೆ. ಇದು ಕೋಮುವಾದಿಗಳು ಬೆಳೆಯಲು ಕಾರಣವಾಗುತ್ತಿದೆ. ಜಾತ್ಯತೀತರು ಮತ್ತು ಬುದ್ಧಿಜೀವಿಗಳು ಬಲಗೊಳ್ಳಬೇಕು. ಎರಡೂ ಧರ್ಮದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬಲ್ಲ ರಾಜಕೀಯ ನಾಯಕತ್ವ ಬೆಳೆಯಬೇಕು. ಸಾಹಿತ್ಯ ಮತ್ತು ಶೈಕ್ಷಣಿಕ ವಲಯ ಸಂವಿಧಾನಬದ್ಧವಾಗಿ ಇದ್ದರೆ ಸಾಕು. ಇಲಾಖೆಗಳು ಸಮರ್ಥವಾಗಿ ಕೆಲಸ ಮಾಡಬೇಕು. ಕರಾವಳಿಯ ಸೌಹಾರ್ದ ಮರುಸ್ಥಾಪನೆಗೆ ತಕ್ಷಣದ, ದೂರಗಾಮಿ ಕಾರ್ಯಯೋಜನೆ ಬೇಕು.ಮೊಹಮ್ಮದ್ ಕುಂಞಿ, ರಾಜ್ಯ ಕಾರ್ಯದರ್ಶಿ, ಜಮಾಅತೆ ಇಸ್ಲಾಮಿ ಹಿಂದ್
ಇಲ್ಲಿ ವಿದ್ಯಾರ್ಥಿ ಚಳವಳಿ ಬಲಾಢ್ಯವಾಗಿತ್ತು. ಎಸ್‌ಎಫ್‌ಐ, ಎನ್‌ಎಸ್‌ಯುಐ, ಡಿವೈಎಫ್‌ಐ ಮತ್ತು ಇವುಗಳ ವಿರುದ್ಧ ಸಿದ್ಧಾಂತದ ಎಬಿವಿಪಿ ಪ್ರಬಲವಾಗಿದ್ದವು. ಹೀಗಾಗಿ ವೈಚಾರಿಕತೆ, ಸಾಮರಸ್ಯ ಎಂಬುದು ಸಮತೋಲನವಾಗುತ್ತಿತ್ತು. ಶೈಕ್ಷಣಿಕ ವ್ಯವಸ್ಥೆ ವ್ಯಾಪಾರೀಕರಣಗೊಂಡ ಕಾರಣ ವಿದ್ಯಾರ್ಥಿ ಸಂಘಟನೆಗಳು ದುರ್ಬಲಗೊಂಡವು. ಒಂದು ಕಡೆ ಮಾತ್ರ ಯುವಕರನ್ನು ಸೆಳೆಯಲಾಯಿತು. ಯುವಕರಲ್ಲಿ ಮತೀಯ ಭಾವನೆ ಹೆಚ್ಚಿತು. ವಿದ್ಯಾರ್ಥಿಗಳಲ್ಲಿ ವೈಚಾರಿಕತೆ ಬೆಳೆಸಬೇಕಿದೆ. ಇಲ್ಲಿ ಅವೈದಿಕ ಪದ್ಧತಿ ಇತ್ತು. ದೈವಾರಾಧನೆಯಲ್ಲಿ ಧರ್ಮಗಳ ಕಟ್ಟುಪಾಡು ಇರಲಿಲ್ಲ. ಇದು ಕೋಮುಸಾಮರಸ್ಯಕ್ಕೆ ಕಾರಣವಾಗಿತ್ತು.ಗಣನಾಥ ಎಕ್ಕಾರು, ನಿವೃತ್ತ ಪ್ರಾಧ್ಯಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.