ಬೆಂಗಳೂರಿನ ಸುಲ್ತಾನ್ ಪೇಟೆಯ ಬೀದಿಯಲ್ಲಿ ಪಟಾಕಿ ಮಾರಾಟ
ಪ್ರಜಾವಾಣಿ ಚಿತ್ರ/ ರಂಜು ಪಿ
ಬೆಂಗಳೂರು: ರಾಜ್ಯದ ಎಲ್ಲೆಡೆಯೂ ಹಸಿರು ಪಟಾಕಿಯನ್ನಷ್ಟೇ ಮಾರಾಟ ಮಾಡಬೇಕು ಮತ್ತು ಪರವಾನಗಿ ಇದ್ದವರಷ್ಟೇ ವ್ಯಾಪಾರ ನಡೆಸಬೇಕು ಎಂಬ ನಿಯಮ ಜಾರಿಯಲ್ಲಿದೆ. ಆದರೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹಸಿರು ಪಟಾಕಿ ಹೆಸರಿನಲ್ಲಿ ಸಾಂಪ್ರದಾಯಿಕ ಪಟಾಕಿಗಳ ಮಾರಾಟ ಅವ್ಯಾಹತವಾಗಿ ನಡೆದಿದೆ, ಪರವಾನಗಿ ಇಲ್ಲದವರೂ ಮಾರಾಟ ನಡೆಸುತ್ತಿದ್ದಾರೆ.
ಈ ಮೊದಲು ರಾಜ್ಯದೆಲ್ಲೆಡೆ ದೀಪಾವಳಿ ಸಂದರ್ಭದಲ್ಲಿ ಸಾಮಾನ್ಯ ಪಟಾಕಿಗಳನ್ನು ಮಾರಾಟ ಮಾಡಲಾಗುತ್ತಿತ್ತು. 2024ರ ದೀಪಾವಳಿ ವೇಳೆ ತಮಿಳುನಾಡಿನ ಹೊಸೂರಿನ ಗಡಿಗೆ ಹೊಂದಿಕೊಂಡಿರುವ ಅತ್ತಿಬೆಲೆಯಲ್ಲಿ ಹಲವು ಪಟಾಕಿ ಅಂಗಡಿಗಳಿಗೆ ಬೆಂಕಿ ಬಿದ್ದು, 14 ಮಂದಿ ಮೃತಪಟ್ಟಿದ್ದರು ಮತ್ತು ಹಲವರು ಗಾಯಗೊಂಡಿದ್ದರು. ಆನಂತರ ಎಚ್ಚೆತ್ತಿದ್ದ ರಾಜ್ಯ ಸರ್ಕಾರವು, ಸುರಕ್ಷತಾ ಕ್ರಮಗಳನ್ನು ಹೊಂದಿದ ಅಂಗಡಿಗಳಷ್ಟೇ ಪರವಾನಗಿ ಪಡೆದು ಪಟಾಕಿ ಮಾರಾಟ ಮಾಡಬೇಕು ಎಂಬ ನಿಯಮದ ಕಟ್ಟುನಿಟ್ಟಿನ ಜಾರಿಗೆ ಮುಂದಾಯಿತು.
ಮೇಲ್ನೋಟಕ್ಕೆ ಈ ನಿಯಮ ಕಟ್ಟುನಿಟ್ಟಾಗಿ ಜಾರಿಯಾದಂತೆ ಕಾಣುತ್ತದೆಯಾದರೂ, ಬೆಂಗಳೂರಿನ ಕೃಷ್ಣರಾಜ ಮಾರುಕಟ್ಟೆಯ ಸುತ್ತಮುತ್ತಲ ಪ್ರದೇಶದ ಬೀದಿಬದಿಯಲ್ಲಿ ಇರಿಸಿಕೊಂಡೇ ಪಟಾಕಿ ಮಾರಾಟ ಮಾಡಲಾಗುತ್ತಿದೆ. ಬೆಂಗಳೂರಿನ ಸುಲ್ತಾನ್ ಪೇಟೆಯು ಸುತ್ತಮುತ್ತಲ ಐದಾರು ಜಿಲ್ಲೆಗಳಿಗೆ ಪಟಾಕಿ ಪೂರೈಕೆ ಮಾಡುವ ಪ್ರಮುಖ ಕೇಂದ್ರ. ಬೇರೆಲ್ಲಾ ಜಿಲ್ಲೆಗಳ ವ್ಯಾಪಾರಿಗಳು ಹೊಸೂರಿನಿಂದ ಪಟಾಕಿ ಖರೀದಿಸುತ್ತರಾದರೂ, ಸಣ್ಣ–ಪುಟ್ಟ ವ್ಯಾಪಾರಿಗಳು ಸುಲ್ತಾನ್ ಪೇಟೆಯ ವ್ಯಾಪಾರಿಗಳಿಂದಲೇ ಖರೀದಿಸುತ್ತಾರೆ. ಆದರೆ ಪಟಾಕಿ ಮಾರಾಟ ನಿಯಮಗಳನ್ನು ಸರ್ಕಾರವು ಬಿಗಿಗೊಳಿಸಿರುವ ಕಾರಣ, ಸುಲ್ತಾನ್ ಪೇಟೆಯ ಅಂಗಡಿಗಳಿಗೆ ಬೀಗ ಬಿದ್ದಿದೆ. ಪರವಾನಗಿ ಹೊಂದಿರುವ ಮೂರು ಅಂಗಡಿಗಳಲ್ಲಿ ಮಾತ್ರವೇ ಮಾರಾಟ ನಡೆಯುತ್ತಿದೆ.
ಪರವಾನಗಿ ಇಲ್ಲದವರು ಕದ್ದುಮುಚ್ಚಿ, ಸುಲ್ತಾನ್ ಪೇಟೆಯಲ್ಲಿ ವ್ಯಾಪಾರ ಮಾಡುತ್ತಲೇ ಇದ್ದಾರೆ. ಇಂತಹ ವ್ಯಾಪಾರಿಗಳು ಸ್ಥಳೀಯ ತಮಿಳು ಮಹಿಳೆಯರ ಐದಾರು ಗುಂಪುಗಳನ್ನು ಮಾಡಿದ್ದು, ಅವರಿಗೆ ತಲಾ ಒಂದೆರಡು ಪಟಾಕಿ ಬಾಕ್ಸ್‌ಗಳನ್ನು ನೀಡಿರುತ್ತಾರೆ. ರಸ್ತೆಬದಿಯಲ್ಲಿ ಅವನ್ನು ಇರಿಸಿಕೊಂಡು ಆ ಮಹಿಳೆಯರು ಮಾರಾಟ ಮಾಡುತ್ತಾರೆ. ಅವು ಖಾಲಿಯಾದಂತೆ, ಗೋದಾಮಿಗೆ ಹೋಗಿ ಮತ್ತೆರಡು ಬಾಕ್ಸ್‌ಗಳನ್ನು ತಂದು ವ್ಯಾಪಾರಕ್ಕೆ ಕೂರುತ್ತಾರೆ. ಸುಲ್ತಾನ್ ಪೇಟೆಯ ಉದ್ದಕ್ಕೂ ಇಂತಹ ವ್ಯಾಪಾರ ನಡೆಯುತ್ತಿದೆ.
ಇದು ನೇರವಾಗಿ ಅಂಗಡಿಯಲ್ಲಿ ನಡೆಯುವ ವ್ಯಾಪಾರವಾದರೆ, ಪಟಾಕಿ ಚೀಟಿ ಹೆಸರಿನಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಮಂಡ್ಯ, ಹಾಸನ, ಮೈಸೂರು, ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಈಗಾಗಲೇ ಲಕ್ಷಾಂತರ ಪಟಾಕಿ ಬಾಕ್ಸ್‌ಗಳು ಮನೆ–ಮನೆ ಸೇರಿವೆ. ಎಲ್ಲ ಜಿಲ್ಲೆಗಳಲ್ಲಿ ಪರವಾನಗಿ ಹೊಂದಿರುವವರೂ ಮಾರಾಟ ಮಾಡುವುದಕ್ಕೆ, ಶನಿವಾರದವರೆಗೆ ನಿರ್ಬಂಧವಿತ್ತು. ಹೀಗಿದ್ದೂ ತಿಂಗಳ ಮೊದಲೇ ಹೊಸೂರಿನಿಂದ ಖರೀದಿಸಿ ತರಲಾಗಿರುವ ಪಟಾಕಿ ಬಾಕ್ಸ್‌ಗಳನ್ನು ಅಲ್ಲಲ್ಲಿ ಸಂಗ್ರಹಿಸಿ ಇಡಲಾಗಿದೆ. ಪಟಾಕಿ ಚೀಟಿ ಹಾಕಿರುವವರೇ ಸ್ವತಃ ಗೋದಾಮಿಗೆ ಹೋಗಿ ಬಾಕ್ಸ್‌ಗಳನ್ನು ಪಡೆದುಕೊಂಡಿದ್ದಾರೆ. ಬಹುತೇಕ ಜಿಲ್ಲೆಗಳಲ್ಲಿ ಶುಕ್ರವಾರದಿಂದಲೇ ಪಟಾಕಿ ಸದ್ದು ಕೇಳಲಾರಂಭಿಸಿದೆ.
ಬೆಂಗಳೂರು ಮತ್ತು ಸುತ್ತಮುತ್ತಲ ಜಿಲ್ಲೆಗಳನ್ನು ಹೊರತುಪಡಿಸಿದರೆ, ಅತಿಹೆಚ್ಚು ಪಟಾಕಿ ವ್ಯಾಪಾರ ನಡೆಯುವುದು ಹುಬ್ಬಳ್ಳಿ–ಧಾರವಾಡ ಮತ್ತು ಬೆಳಗಾವಿಯಲ್ಲಿ. ಅಕ್ಕಪಕ್ಕದ ಜಿಲ್ಲೆಗಳಿಗೆ ಈ ಜಿಲ್ಲೆಗಳಿಂದ ಪಟಾಕಿ ವಿತರಣೆಯಾಗುತ್ತದೆ. ತಿಂಗಳ ಹಿಂದೆಯೇ ಈ ಜಿಲ್ಲೆಗಳಿಗೆ ಲಕ್ಷಾಂತರ ಬಾಕ್ಸ್‌ಗಳಷ್ಟು ಪಟಾಕಿ ಮತ್ತು ಬಿಡಿ ಪಟಾಕಿಗಳೂ ಪೂರೈಕೆಯಾಗಿವೆ. ಅವುಗಳಲ್ಲಿ ಬಹುತೇಕ ಮಾಲು ಈಗಾಗಲೇ ಮಾರಾಟವಾಗಿದ್ದು, ಶಿವಕಾಶಿಯಿಂದ ಮತ್ತೆ ಹೊಸದಾಗಿ ಪೂರೈಕೆಯಾಗಲಿದೆ ಎಂಬುದು ಬೆಳಗಾವಿಯಲ್ಲಿ ಪರವಾನಗಿ ಹೊಂದಿರುವ ಡೀಲರ್ ಒಬ್ಬರು ನೀಡಿದ ಮಾಹಿತಿ.
ರಾಜ್ಯದಲ್ಲಿ ಪಟಾಕಿ ತಯಾರಿಕಾ ಘಟಕಗಳೇ ಇಲ್ಲ ಎನ್ನಬಹುದು. ‘ಸಿಎಸ್‌ಐಆರ್–ನೀರಿ‘ಯಿಂದ ಪರವಾನಗಿ ಪಡೆದ 1,403 ತಯಾರಕರಲ್ಲಿ ಕರ್ನಾಟಕದ ಒಂದು ಕಂಪನಿಯೂ ಇಲ್ಲ. ಹೀಗಾಗಿ ರಾಜ್ಯದಲ್ಲಿ ಬಳಕೆಯಾಗುವ ಪಟಾಕಿಗಳು ತಮಿಳುನಾಡಿನ ಶಿವಕಾಶಿಯಿಂದ, ಹೊಸೂರು ಮೂಲಕವೇ ರಾಜ್ಯಕ್ಕೆ ಪ್ರವೇಶಿಸುತ್ತವೆ. ಇನ್ನು ದೂರದ ರಾಜಸ್ಥಾನ ಮತ್ತು ಗುಜರಾತ್‌ನಿಂದಲೂ ಪಟಾಕಿಗಳು ರಾಜ್ಯಕ್ಕೆ ಬರುತ್ತವೆಯಾದರೂ, ಅದರ ಪ್ರಮಾಣ ಗಣನೀಯವಲ್ಲ. ಆದರೆ ಹೊಸೂರು–ಅತ್ತಿಬೆಲೆ ಗಡಿಯಲ್ಲಿ ವಾಹನಗಳನ್ನು ಸರಿಯಾಗಿ ತಪಾಸಣೆ ನಡೆಸದೇ ಬಿಡಲಾಗುತ್ತಿರುವ ಕಾರಣ, ರಾಜ್ಯಕ್ಕೆ ಎಷ್ಟು ಪಟಾಕಿ ಬಂದಿತು ಎಂಬುದರ ಲೆಕ್ಕವೇ ಇರುವುದಿಲ್ಲ. ಒಟ್ಟಿನಲ್ಲಿ ಪರವಾನಗಿ ಇಲ್ಲದವರು ಪಟಾಕಿ ಮಾರುವುದಕ್ಕೆ ನಿಷೇಧವಿದ್ದರೂ, ಬೀದಿಬದಿಗಳಲ್ಲಿ ಎಗ್ಗಿಲ್ಲದೆ ಪಟಾಕಿ ಮಾರಾಟ ಮಾಡಲಾಗುತ್ತಿದೆ ಮತ್ತು ಮನೆ–ಮನೆಗೆ ವಿತರಣೆ ಮಾಡಲಾಗಿದೆ.
ಹೊಸೂರಿನಿಂದ ತರಲಾದ, ಸುಲ್ತಾನ್ ಪೇಟೆಯಲ್ಲಿ ಖರೀದಿಸಲಾದ, ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಮಾರಾಟವಾಗುತ್ತಿರುವ ಪಟಾಕಿ ಬಾಕ್ಸ್‌ಗಳ ಮಾದರಿಗಳನ್ನು ಪರಿಶೀಲಿಸಿದಾಗ, ಅವೆಲ್ಲವೂ ಹಸಿರು ಪಟಾಕಿ ಹೆಸರಿನಲ್ಲಿರುವ ಸಾಂಪ್ರದಾಯಿಕ ಪಟಾಕಿಗಳು ಎಂಬುದು ಗೊತ್ತಾಯಿತು.
ಕೇಂದ್ರ ಸರ್ಕಾರದ ‘ಸಿಎಸ್‌ಐಆರ್–ನೀರಿ’ ಸಂಸ್ಥೆಯು ಹಸಿರು ಪಟಾಕಿಯ ರಾಸಾಯನಿಕ ಸಂಯೋಜನೆಯನ್ನು ನಿಗದಿ ಮಾಡಿದ್ದು, ಅವುಗಳ ಆಧಾರದಲ್ಲಿ ಪಟಾಕಿಗಳನ್ನು ತಯಾರಿಸಬೇಕು. ಅಂತಹ ಪಟಾಕಿಗಳಿಗಷ್ಟೇ, ‘ಹಸಿರು ಪಟಾಕಿ’ ಪರವಾನಗಿ ನೀಡಲಾಗುತ್ತದೆ. ಈ ಪರವಾನಗಿ ಲೋಗೊವು ಎಲ್ಲ ಸ್ವರೂಪದ ಪಟಾಕಿಗಳಿಗೂ ಭಿನ್ನವಾಗಿರುತ್ತದೆ. ತಯಾರಕರಿಗೆ ನೀಡಲಾದ ಪರವಾನಗಿಯ ಸಂಖ್ಯೆ ಉಳ್ಳ ಲೋಗೊವನ್ನು ಬಾಕ್ಸ್‌ನ ಮೇಲೆ ಮುದ್ರಿಸಿರಬೇಕು ಮತ್ತು ಕ್ಯುಆರ್ ಕೋಡ್ ಅನ್ನೂ ಮುದ್ರಿಸಿರಬೇಕು. ಆ ಕ್ಯುಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ, ತಯಾರಕರ ಪರವಾನಗಿ ಪತ್ರ ಮತ್ತು ವಿವರಗಳು ತೆರೆದುಕೊಳ್ಳುತ್ತವೆ. ಬಾಕ್ಸ್‌ನಲ್ಲಿರುವ ವಿವಿಧ ಸ್ವರೂಪದ ಪಟಾಕಿಗಳಿಗೂ ಪ್ರತ್ಯೇಕ ಲೋಗೊ ಜತೆಗೆ, ಪ್ರತ್ಯೇಕ ಪರವಾನಗಿಯ ಸಂಖ್ಯೆಯೂ ಇರಬೇಕು ಎಂಬುದು ನಿಯಮ.
ಮೇಲೆ ಉಲ್ಲೇಖಿಸಲಾದ ಪಟಾಕಿ ಬಾಕ್ಸ್‌ಗಳ ಮಾದರಿಗಳ ಮೇಲೆ ಇದ್ದ ‘ಹಸಿರು ಪಟಾಕಿ’ ಲೋಗೊಗಳು ನಕಲಿಯಾಗಿದ್ದವು. ಈ ಲೋಗೊಗಳ ಮೇಲೆ ತಯಾರಕರ ಪರವಾನಗಿ ಸಂಖ್ಯೆ ಮತ್ತು ಪರವಾನಗಿ ನೀಡಿದ ಕೇಂದ್ರದ ವಿಳಾಸ ಇರಲಿಲ್ಲ. ಇನ್ನು ಬಾಕ್ಸ್‌ನೊಳಗಿದ್ದ ಪಟಾಕಿಗಳ ಪೈಕಿ ಯಾವೊಂದರ ಪೊಟ್ಟಣದ ಮೇಲೂ ಹಸಿರು ಪಟಾಕಿಯ ಲೋಗೊ ಇರಲಿಲ್ಲ. ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿದರೆ, ಯಾವ ಪರವಾನಗಿ ಪತ್ರವೂ ತೆರೆದುಕೊಳ್ಳುತ್ತಿರಲಿಲ್ಲ. ವಾಸ್ತವದಲ್ಲಿ ಆ ಕ್ಯುಆರ್ ಕೋಡ್‌ಗೆ ಯಾವುದೇ ವಿಳಾಸ ಇರಲಿಲ್ಲ. ಬಾಕ್ಸ್ ಒಳಗಿನ ಬಿಡಿ ಪಟಾಕಿಗಳ ಪೊಟ್ಟಣಗಳದ್ದೂ ಇದೇ ಕತೆ. ಸಾಂಪ್ರದಾಯಿಕ ಪಟಾಕಿಗಿಂತ ದುಬಾರಿಯಾದ ಕಾರಣ ಹಸಿರು ಪಟಾಕಿಗಳತ್ತ ಜನರ ಒಲವೂ ಕಡಿಮೆ ಇದೆ. ಒಟ್ಟಿನಲ್ಲಿ ಹಸಿರು ಪಟಾಕಿ ಎಂಬುದು ಸರ್ಕಾರದ ಸುತ್ತೋಲೆಗಳಲ್ಲಿ, ಪಟಾಕಿ ಬಾಕ್ಸ್‌ಗಳ ಮೇಲಿನ ನಕಲಿ ಲೋಗೊಗಳ ಮೇಲಷ್ಟೇ ಉಳಿದಿದೆ.
ಹಸಿರು ಪಟಾಕಿ ಎಂದರೇನು?
ಸಾಂಪ್ರದಾಯಿಕ ಪಟಾಕಿಗಳಿಗೂ ಹಸಿರು ಪಟಾಕಿಗಳಿಗೂ ಇರುವ ಬಹುದೊಡ್ಡ ವ್ಯತ್ಯಾಸವೆಂದರೆ, ಅವು ಮಾಡುವ ಮಾಲಿನ್ಯದ ಪ್ರಮಾಣ. ಪಟಾಕಿ ಸುಟ್ಟಾಗ ಅವುಗಳಿಂದ ಸದ್ದು, ಹೊಗೆ ಬರುತ್ತದೆ. ಆ ಹೊಗೆಯಲ್ಲಿ ಇರುವುದು ಹಾನಿಕಾರಕ ಗಂಧಕದ ಡೈಆಕ್ಸೈಡ್ (ಎಸ್‌ಒ2) ಮತ್ತು ಸಾರಜನಕದ ಡೈಆಕ್ಸೈಡ್ (ಎನ್‌ಒ2).
ಸಾಂಪ್ರದಾಯಿಕ ಪಟಾಕಿಗಳು ಉಗುಳುವ ಎಸ್‌ಒ2 ಮತ್ತು ಎನ್‌ಒ2 ಪರಿಮಾಣಕ್ಕೆ ಹೋಲಿಸಿದರೆ, ಹಸಿರು ಪಟಾಕಿಗಳಲ್ಲಿ ಇವೇ ಆಕ್ಸೈಡ್‌ಗಳನ್ನು ಶೇ 30ರಷ್ಟು ಕಡಿಮೆ ಉಗುಳಬೇಕು. ಪಟಾಕಿಗಳಲ್ಲಿ ಯಾವುದೇ ರೀತಿಯ ಭಾರ ಲೋಹಗಳು ಮತ್ತು ವಿಷಪೂರಿತ ಆರ್ಸನಲ್ ಬಣ್ಣಗಳನ್ನು ಬಳಸಬಾರದು ಎಂದುಬುದು ಸಿಎಸ್‌ಐಆರ್–ನೀರಿಯ ನಿಯಮ.
ಯಾವುದೇ ಕಂಪನಿ ತಾನು ಅಭಿವೃದ್ಧಿ ಪಡಿಸುವ ಹಸಿರು ಪಟಾಕಿಯನ್ನು ಸಿಎಸ್‌ಐಆರ್–ನೀರಿಗೆ ಸಲ್ಲಿಸಿ, ಪರೀಕ್ಷಿಸಿಬೇಕು. ಮೇಲಿನ ಷರತ್ತುಗಳನ್ನು ಪೂರೈಸಿದರಷ್ಟೇ ಆ ಪಟಾಕಿಗಳಿಗೆ ‘ಹಸಿರು ಪಟಾಕಿ’ ಎಂಬ ಪರವಾನಗಿ ಸಿಗುತ್ತದೆ. ತಯಾರಿಕಾ ಕಂಪನಿಗೆ ನೀಡುವ ಪರವಾನಗಿ ಮತ್ತು ಪಟಾಕಿಗೆ ನೀಡುವ ಪರವಾನಗಿ ಒಂದೇ ಅಲ್ಲ. ಪಟಾಕಿ ಬಾಕ್ಸ್ ಮೇಲೆ ಹಸಿರು ಪಟಾಕಿಯ ಅಧಿಕೃತ ಲೋಗೊ ಇದ್ದರೂ, ಅದರೊಳಗೆ ಇರುವ ಪ್ರತಿ ಪಟಾಕಿ ಪೊಟ್ಟಣಕ್ಕೆ ಪ್ರತ್ಯೇಕ ಲೋಗೊ ಮತ್ತು ಅವುಗಳ ಪರವಾನಗಿ ಸಂಖ್ಯೆ ಇರಬೇಕು. ಆಗ ಮಾತ್ರವೇ ಅದು ಹಸಿರು ಪಟಾಕಿ ಎನಿಸಿಕೊಳ್ಳುತ್ತದೆ.
–ಬಾಲಕೃಷ್ಣ ಪಿ.ಎಚ್.
ಬೆಂಗಳೂರು: ಬೆಂಗಳೂರು ಮತ್ತು ಸುತ್ತಮುತ್ತಲ ಜಿಲ್ಲೆಗಳಿಗೆ ಬಹುಪಾಲು ಪಟಾಕಿ ಪೂರೈಕೆಯಾಗುವುದು ಪಕ್ಕದ ತಮಿಳುನಾಡಿನ ಹೊಸೂರಿನಿಂದ. ಶಿವಕಾಶಿಯಿಂದ ತರಲಾದ ಪಟಾಕಿಗಳನ್ನು ಅತ್ತಿಬೆಲೆಯ ಗಡಿಯಾಚೆಗೆ ಹೊಸೂರಿನ ಹೆದ್ದಾರಿಯ ಎರಡೂ ಬದಿ ನೂರರಷ್ಟು ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಪಟಾಕಿ ಬಾಕ್ಸ್ ಮತ್ತು ಪೊಟ್ಟಣಗಳ ಮೇಲೆ ಇರುವ ಗರಿಷ್ಠ ಮಾರಾಟ ಬೆಲೆಯ (ಎಂಅರ್‌ಪಿ) ಮೇಲೆ ಶೇ 90ರವರೆಗೂ ರಿಯಾಯಿತಿ ಇದೆ. ಹೀಗಾಗಿ ಬೆಂಗಳೂರು ಚಿಕ್ಕಬಳ್ಳಾಪುರ ಬೆಂಗಳೂರು ಗ್ರಾಮಾಂತರ ಬೆಂಗಳೂರು ದಕ್ಷಿಣ ಕೋಲಾರ ತುಮಕೂರು ಚಿತ್ರದುರ್ಗ ಹಾಸನ ಮಂಡ್ಯ ಬೆಳಗಾವಿ ಧಾರವಾಡ ಜಿಲ್ಲೆಗಳ ವ್ಯಾಪಾರಿಗಳು ಪ್ರಮುಖವಾಗಿ ಮತ್ತು ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲೆಗಳ ವ್ಯಾಪಾರಿಗಳು ಹೊಸೂರಿನಿಂದಲೇ ಪಟಾಕಿ ಖರೀದಿಸುತ್ತಾರೆ. ಹೊಸೂರಿಗೆ ಭೇಟಿ ನೀಡಿದಾಗ ಅಲ್ಲಿನ ಬಹುತೇಕ ಅಂಗಡಿಗಳಲ್ಲಿ ಜಿಎಸ್‌ಟಿ ರಸೀದಿ ನೀಡುತ್ತಿರಲಿಲ್ಲ ಎಂಬುದು ಪತ್ತೆಯಾಯಿತು. ಬಿಲ್ ಕೇಳಿದರೆ ಜಿಎಸ್‌ಟಿ ಅಷ್ಟಾಗುತ್ತದೆ ಮತ್ತು ಅದನ್ನು ಪಾವತಿ ಮಾಡಬೇಕು ಎಂದೇ ಅಂಗಡಿಯವರು ಹೇಳುತ್ತಿದ್ದರು. ಕೆಲವರು ನಕಲಿ ಜಿಎಸ್‌ಟಿ ರಸೀದಿ ನೀಡುತ್ತಿದ್ದರು. ಇನ್ನು ಇಲ್ಲಿ ಖರೀದಿಸಲಾದ ಪಟಾಕಿಗಳನ್ನು ಖಾಸಗಿ ಕಾರುಗಳಲ್ಲಿ (ವೈಟ್‌ಬೋರ್ಡ್ ಕಾರುಗಳು) ತಮಿಳುನಾಡಿನಿಂದ ಕರ್ನಾಟಕಕ್ಕೆ ಸಾಗಿಸಲಾಗುತ್ತದೆ. ಕರ್ನಾಟಕಕ್ಕೆ ಸಾಗಿಸಬೇಕಾದ ಪಟಾಕಿಗಳಿಗೆ ನಿಯಮಗಳ ಪ್ರಕಾರ ಶೇ 18ರಷ್ಟು ಐಜಿಎಸ್‌ಟಿ ಪಾವತಿ ಮಾಡಬೇಕು. ಆದರೆ ಐಜಿಎಸ್‌ಟಿ ಪಾವತಿ ಮಾಡದೆ ಖಾಸಗಿ ವಾಹನಗಳಲ್ಲಿ ತಮಿಳುನಾಡಿನ ಪಟಾಕಿಗಳು ಸುಲಭವಾಗಿ ಕರ್ನಾಟಕ ಪ್ರವೇಶಿಸುತ್ತಿದ್ದವು. ವಾಣಿಜ್ಯ ವಾಹನಗಳ ಮೂಲಕ ಬರುವ ಪಟಾಕಿಗಳನ್ನಷ್ಟೇ ಗಡಿಠಾಣೆಯಲ್ಲಿ ತಪಾಸಣೆ ಮಾಡಲಾಗುತ್ತಿದೆ. ಇದನ್ನು ಅರಿತಿರುವ ವ್ಯಾಪಾರಿಗಳು ದೊಡ್ಡ ಎಸ್‌ಯುವಿಗಳಲ್ಲಿ ವ್ಯಾನ್‌ಗಳಲ್ಲಿ ಭಾರಿ ಸಂಖ್ಯೆಯಲ್ಲಿ ಪಟಾಕಿ ಬಾಕ್ಸ್‌ಗಳನ್ನು ಕರ್ನಾಟಕದೊಳಕ್ಕೆ ತರುತ್ತಿದ್ದಾರೆ. ಶೇ 70ರಿಂದ ಶೇ 90ರಷ್ಟು ರಿಯಾಯಿತಿಯಲ್ಲಿ ಖರೀದಿಸಿದ ಪಟಾಕಿಗಳನ್ನು ಶೇ 40–50ರ ರಿಯಾಯಿತಿಯಲ್ಲಿ ಮಾರಾಟ ಮಾಡುತ್ತಾರೆ. ಭಾರಿ ಪ್ರಮಾಣದ ರಿಯಾಯಿತಿ ಇರುವ ಕಾರಣ ಒಂದೆರಡು ಬಾಕ್ಸ್‌ಗಳ ಖರೀದಿಗೂ ಬೆಂಗಳೂರಿನ ಮಂದಿ ಅಲ್ಲಿಗೆ ಹೋಗುತ್ತಾರೆ. ಆ ಪಟಾಕಿಗಳೂ ತೆರಿಗೆ ಇಲ್ಲದೆ ಕರ್ನಾಟಕ ಪ್ರವೇಶಿಸುತ್ತವೆ. ದೀಪಾವಳಿ ಸಂದರ್ಭದಲ್ಲಿ ದೇಶದಾದ್ಯಂತ ಸುಮಾರು ₹15000 ಕೋಟಿಯಷ್ಟು ಪಟಾಕಿ ವಹಿವಾಟು ನಡೆಯುತ್ತದೆ. ಬೆಂಗಳೂರಿನಲ್ಲೇ ₹150 ಕೋಟಿಯಷ್ಟು ಸುತ್ತಮುತ್ತಲ ಜಿಲ್ಲೆಗಳಲ್ಲಿ ₹100 ಕೋಟಿ ಮೌಲ್ಯದಷ್ಟು ಪಟಾಕಿ ಮಾರಾಟವಾಗುತ್ತದೆ. ಇವೆಲ್ಲವೂ ಶಿವಕಾಶಿ–ಹೊಸೂರಿನಿಂದಲೇ ಪೂರೈಕೆಯಾಗುತ್ತವೆ. ಇಲ್ಲಿರುವ ಲೆಕ್ಕಾಚಾರವು ಶಿವಕಾಶಿಯಲ್ಲಿ ಮಾರಾಟವಾದ ಸರಕಿನ ಮೌಲ್ಯ. ಇವೆಲ್ಲವೂ ತೆರಿಗೆ ಪಾವತಿಸಿಯೇ (ಐಜಿಎಸ್‌ಟಿ) ಬೆಂಗಳೂರು ಮತ್ತು ಸುತ್ತಮುತ್ತಲ ಜಿಲ್ಲೆ ತಲುಪುತ್ತವೆ ಎಂದು ಹೇಳಲಾಗದು.
ಪಟಾಕಿ ಇತಿಹಾಸ
ಪಟಾಕಿ ಸಿಡಿಸುವುದು ದೀಪಾವಳಿಯ ಸಂಪ್ರದಾಯವೇ ಆಗಿ ಹೋಗಿದೆ. ಆದರೆ ಪಟಾಕಿಯ ಇತಿಹಾಸ ನೂರು ವರ್ಷಗಳಿಗಿಂತ ಹೆಚ್ಚು ಇಲ್ಲ. 16ನೇ ಶತಮಾನದ ನಂತರ ಯುದ್ಧಗಳನ್ನು ರಾಜರು ಗೆದ್ದಾಗ ಸಿಡಿಮದ್ದು ಸಿಡಿಸಿ ಸಂಭ್ರಮಿಸಿದ ಇತಿಹಾಸಗಳಿವೆ. ದೀಪಾವಳಿಗೆ ಪಟಾಕಿ ಹೊಡೆಯುವುದು 20ನೇ ಶತಮಾನದಲ್ಲಿ ಬಂತು. 19ನೇ ಶತಮಾನದಲ್ಲಿ ಕೋಲ್ಕತಾದಲ್ಲಿ ದೇಶದ ಮೊದಲ ಪಟಾಕಿ ಕಾರ್ಖಾನೆ ತೆರೆದುಕೊಂಡರೂ ಸ್ವಾತಂತ್ರ್ಯ ನಂತರ ಅಲ್ಲಿ ಪಟಾಕಿ ನಿಷೇಧಿಸಿದ್ದರಿಂದ ತಮಿಳುನಾಡಿನ ಶಿವಕಾಶಿಯೇ ಪಟಾಕಿ ಕೇಂದ್ರವಾಯಿತು. ಕೋಲ್ಕತಾದಿಂದಲೇ ಪಟಾಕಿ ತಯಾರಿಯ ತಂತ್ರಜ್ಞಾನವು ಶಿವಕಾಶಿಗೆ ಬಂದಿತ್ತು. 1923ರಲ್ಲಿ ಬೆಂಕಿಪೆಟ್ಟಿಗೆ ತಯಾರಿ ಆರಂಭವಾಗಿತ್ತು. 1925ರಲ್ಲಿ ಇಲ್ಲಿ ಮೊದಲ ಬಾರಿಗೆ ಪಟಾಕಿ ತಯಾರಿಸಲಾಯಿತು. 1940ರಲ್ಲಿ ಕಟ್ಟುನಿಟ್ಟಿನ ನಿಯಮಾವಳಿಯ ಅಡಿಯಲ್ಲಿ ಸಂಘಟಿತ ಪಟಾಕಿ ಕಾರ್ಖಾನೆ ಆರಂಭಗೊಂಡಿತು.
ದೀಪ ಬೆಳಕಿನ ಹಬ್ಬವಾಗಲಿ
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ರಾಜ್ಯದಲ್ಲಿ ಸಾಂಪ್ರಾಯಿಕ– ರಾಸಾಯನಿಕ ಪಟಾಕಿಗಳನ್ನು ನಿಷೇಧಿಸಲಾಗಿದೆ. ಹಸಿರು ಪಟಾಕಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಆದರೆ ಹಸಿರು ಪಟಾಕಿ ಸಿಡಿಸುವುದೂ ಕೊನೆಯ ಆಯ್ಕೆಯಾಗಿರಬೇಕು. ದೀಪಾವಳಿ ಪರಿಸರ ಸ್ನೇಹಿಯಾಗಿ ದೀಪ– ಬೆಳಕಿನ ಹಬ್ಬವಾಗಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು ಮಂಡಳಿಯ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು. ಜನರು ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ಅವರ ಮನೆಯಲ್ಲಿರುವ ವೃದ್ಧರು ಮಕ್ಕಳ ಬಗ್ಗೆ ಚಿಂತಿಸಬೇಕು. ಕುಟುಂಬದವರ ಉಸಿರಾಟದ ತೊಂದರೆ ಮಾಡುವ ಪಟಾಕಿಗಳಿಂದ ದೂರವಾಗಬೇಕು. ಶಿಕ್ಷಣದಲ್ಲಿ ಪರಿಸರದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದರೆ ಪಟಾಕಿಯಂತಹ ಮಾಲಿನ್ಯ ಮನೆ ಅಂಗಳ ರಸ್ತೆ ಹಳ್ಳಿ ಪಟ್ಟಣ ನಗರದಿಂದ ದೂರವಾಗುತ್ತದೆ. ಸಾರ್ವಜನಿಕ ಸಭೆ ಸಮಾರಂಭಗಳಲ್ಲೂ ಪಟಾಕಿ ಬಳಸಬಾರದು ಎಂದರು.
ಪಟಾಕಿ ಖರೀದಿಸಲೇ ಬೇಕಾದಲ್ಲಿ ಐಎಸ್ಐ ಪ್ರಮಾಣೀಕರಣದ ಹಸಿರು ಪಟಾಕಿಗಳನ್ನು ಖರೀದಿಸಿ
ಪಟಾಕಿಗಳ ಮೇಲಿರುವ ಎಚ್ಚರಿಕೆ ಸೂಚನೆ ಅನುಸರಿಸಿ. ಮೈದಾನ ಖಾಲಿ ಜಾಗಗಳಲ್ಲಷ್ಟೇ ಪಟಾಕಿ ಹಚ್ಚಿ
ಕನಿಷ್ಠ 2-3 ಅಡಿ ದೂರದಿಂದ ಪಟಾಕಿ ಹಚ್ಚಿ ಕಣ್ಣುಗಳ ರಕ್ಷಣೆಗೆ ಸುರಕ್ಷತಾ ಕನ್ನಡಕ ಧರಿಸಿ. ಪಟಾಕಿ ಹಚ್ಚಲು ಉದ್ದನೆಯ ಊದುಬತ್ತಿ ಬಳಸಿ
ಬೆಂಕಿ ಹಾಗೂ ಥಟ್ಟನೆ ಹೊತ್ತಿಕೊಳ್ಳುವ ವಸ್ತುಗಳ ಬಳಿ ಪಟಾಕಿ ಸಂಗ್ರಹಿಸಿಡಬೇಡಿ
ಪಟಾಕಿ ಸುಡುವುದಕ್ಕೆ ಗಾಜಿನ ಬಾಟಲಿಗಳನ್ನು ಬಳಸಬೇಡಿ. ಇದರಿಂದ ಸಿಡಿಯುವ ಚೂರುಗಳು ಕಣ್ಣಿಗೆ ಹಾನಿ ಮಾಡಬಹುದು
ಮಕ್ಕಳು ಒಂಟಿಯಾಗಿ ಪಟಾಕಿ ಸಿಡಿಸುವುದಕ್ಕೆ ಅವಕಾಶ ನೀಡಬೇಡಿ. ಜತೆಯಲ್ಲಿ ಪಾಲಕರು ಇರಲಿ
ಪಟಾಕಿ ಸಿಡಿದಾಗ ಕಿಡಿ ಬಿದ್ದರೆ ಕಣ್ಣನ್ನು ಉಜ್ಜಿಕೊಳ್ಳಬೇಡಿ. ಪಟಾಕಿಯಿಂದ ಕಣ್ಣಿಗೆ ಹಾನಿಯಾದಲ್ಲಿ ಸ್ವಚ್ಛ ನೀರಿನಿಂದ ನಿಧಾನವಾಗಿ ಕಣ್ಣನ್ನು ತೊಳೆಯಿರಿ. ಬಳಿಕ ಹತ್ತಿರದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಿ
ಅರೆಬರೆ ಸುಟ್ಟ ಪಟಾಕಿ ತುಂಡನ್ನು ಗಾಳಿಯಲ್ಲಿ ಎಸೆಯಬೇಡಿ. ಅರೆಬರೆ ಸುಟ್ಟ ಪಟಾಕಿಯನ್ನು ಕೈಯಿಂದ ಹೊಸಕಿ ನಂದಿಸಲು ಯತ್ನಿಸಬೇಡಿ
ಕೈಯಲ್ಲೇ ಪಟಾಕಿ ಸಿಡಿಸುವ ಸಾಹಸ ಬೇಡ
ಪಟಾಕಿ ಸಿಡಿದ ಅಥವಾ ಸುಟ್ಟ ಬಳಿಕ ಅದರ ಮೇಲೆ ನೀರು ಹಾಕಿ. ಇದರಿಂದ ಮಾಲಿನ್ಯದ ಪ್ರಮಾಣ ಕಡಿಮೆ ಆಗುವ ಜತೆಗೆ ಸುಟ್ಟ ಪಟಾಕಿಗಳ ಬಿಸಿ ತುಂಡುಗಳನ್ನು ಅರಿವಿಲ್ಲದೆ ಮೆಟ್ಟುವುದು ತಪ್ಪಲಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.