
ಕಿನ್ನಾಳ ಕಲಾಕೃತಿ ತಯಾರಿಕೆಯಲ್ಲಿ ತೊಡಗಿದ್ದ ಸಂತೋಷಕುಮಾರ್ ಚಿತ್ರಗಾರ
ಪ್ರಜಾವಾಣಿ ಚಿತ್ರ/ಭರತ್ ಕಂದಕೂರ
ಕೊಪ್ಪಳ: ಎಂಟು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಆ್ಯನಿಮೇಷನ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಿನ್ನಾಳದ ಸಂತೋಷಕುಮಾರ್ ಚಿತ್ರಗಾರ ಎಂಬ ಯುವಕನಿಗೆ ಕೈತುಂಬಾ ಸಂಬಳ, ಕಚೇರಿಯಲ್ಲಿ ಉತ್ತಮ ಸ್ಥಾನಮಾನ, ಸ್ನೇಹಿತರೊಂದಿಗೆ ಊರೂರು ಅಲೆದಾಟ, ಬದುಕಿನ ಸಡಗರಕ್ಕೆ ಪಾರವೇ ಇಲ್ಲ ಎನ್ನುವಂಥ ಸಂಭ್ರಮ.
ದೊಡ್ಡ ಸಂಬಳದ ನೌಕರಿಯಿದ್ದರೂ ಒಂದೆಡೆ ಕೆಲಸದ ಏಕಾತನತೆ, ಕಂಪನಿ ಹೇಳಿದ್ದಷ್ಟೇ ಕೆಲಸ ಮಾಡಬೇಕಾದ ಅನಿವಾರ್ಯತೆ. ದಿನಗಳು ಉರುಳಿದಂತೆ ತಮ್ಮೊಳಗಿನ ಹೊಸತನ ಸತ್ತು ಹೋಗುತ್ತಿದೆ ಎನ್ನುವ ಬೇಸರದ ಭಾವ ಅವರನ್ನು ಬಲವಾಗಿ ಕಾಡಿತು. ತಮ್ಮೂರಿನಲ್ಲಿ ತಂದೆ ಮಾಡುತ್ತಿದ್ದ ಕಿನ್ನಾಳ ಕಲಾಕೃತಿಗಳನ್ನು ನೋಡಿದ್ದರಿಂದ ಅವರ ಮನಸ್ಸು ಊರಿನತ್ತ ಸೆಳೆಯುತ್ತಲೇ ಇತ್ತು. ದೇವರ ಮೂರ್ತಿಗಳನ್ನಷ್ಟೇ ತಯಾರಿಸಿ ಅಷ್ಟಕ್ಕೇ ತಮ್ಮ ಕಲಾಪ್ರಪಂಚ ಸೀಮಿತ ಮಾಡಿಕೊಂಡಿದ್ದ ಊರಿನ ಹಿರಿಯರ ಸ್ಥಿತಿಯ ಬಗ್ಗೆಯೂ ಬೇಸರ ಕಾಡಿತ್ತು. ಆದ್ದರಿಂದ ಸಂತೋಷಕುಮಾರ್ ತಮ್ಮ ಕೆಲಸಕ್ಕೆ ವಿದಾಯ ಹೇಳಿ ಗ್ರಾಮಕ್ಕೆ ಮರಳಿ ಕಿನ್ನಾಳ ಕಲೆಗೆ ಆಧುನಿಕ ಸ್ಪರ್ಶ ನೀಡಿ, ಯುವಕರ ತಂಡವನ್ನೇ ಕಟ್ಟಿ ಕಿನ್ನಾಳಕ್ಕೆ ಆನ್‌ಲೈನ್ ಮಾರುಕಟ್ಟೆ ಸೃಷ್ಟಿಸಿದ್ದಾರೆ.
ಕಿನ್ನಾಳದ ಹಿಂದಿನ ತಲೆಮಾರಿನವರು ಕಲೆಯನ್ನು ದೇವರ ಮೂರ್ತಿ, ಪಲ್ಲಕ್ಕಿ ತಯಾರಿಸಲು ಸೀಮಿತ ಮಾಡಿದ್ದರು. ಸಂತೋಷಕುಮಾರ್ ಗ್ರಾಹಕರ ಬೇಡಿಕೆಗೆ ತಕ್ಕಂತೆ ಗೃಹಬಳಕೆಯ ಅಲಂಕೃತ ವಸ್ತುಗಳನ್ನು ತಯಾರಿಸಿದರು. ಹೊಸತನದ ಆಸೆ ಇಟ್ಟುಕೊಂಡು ಊರಿಗೆ ಬಂದಾಗ ಅವರಿಗೆ ಎದುರಾಗಿದ್ದು ಮುಳ್ಳಿನ ಹಾದಿ. ತಯಾರಿಸಿದ ಒಂದು ಕಲಾಕೃತಿ ಮಾರಾಟವಾದ ಬಳಿಕವೇ ಮತ್ತೊಂದು ಕಲಾಕೃತಿ ತಯಾರಿಸಬೇಕಾದ ಅಸಹಾಯಕತೆ, ಆರ್ಥಿಕ ಅನಾನುಕೂಲತೆ ಇತ್ತು. ಆದ್ದರಿಂದ ಗ್ರಾಹಕರನ್ನು ಕಾಯಬೇಕಾದ ಅನಿವಾರ್ಯತೆಯಿತ್ತು. ನೂರಾರು ವರ್ಷಗಳ ಇತಿಹಾಸವಿದ್ದರೂ ಕಾಲಕ್ಕೆ ತಕ್ಕಂತೆ ಮಾರುಕಟ್ಟೆಯ ಕೊರತೆ ಹಾಗೂ ಚಿತ್ರಗಾರ ಸಮುದಾಯದ ಯುವಕರ ನಿರಾಸಕ್ತಿಯಿಂದ ಈ ಕಲೆಯ ಕಥೆ ಮುಗಿದೇ ಹೋಯಿತು ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು.
ಲಲಿತ ಕಲೆಯಲ್ಲಿ ಪದವಿ ಮತ್ತು ದೃಶ್ಯಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸಂತೋಷಕುಮಾರ್ ಕಿನ್ನಾಳ ಕಲಾಕೃತಿಗಳಿಗೆ ಮಾರುಕಟ್ಟೆ ಗಳಿಸಿಕೊಳ್ಳಲು ಸಾಮಾಜಿಕ ಜಾಲತಾಣಗಳಲ್ಲಿ ಕಲೆಯ ಮಹತ್ವ, ಗುಣಮಟ್ಟ, ತಯಾರಿಕೆಯ ವಿಧಾನ, ಬಾಳಿಕೆ ಬರುವ ಅವಧಿ ಹೀಗೆ ಇಂಚಿಂಚೂ ಮಾಹಿತಿ ಹಂಚಿಕೊಂಡು ‘ಕಿನ್ನಾಳ ಕಲೆಕ್ಷನ್ಸ್’ ವೆಬ್‌ಸೈಟ್ ರೂಪಿಸಿ ‘ಮನೆಬಾಗಿಲಿಗೆ ಕಲಾಕೃತಿ ತಲುಪಿಸುತ್ತೇವೆ’ ಎಂದು ಪ್ರಚಾರ ಮಾಡಿದರು. ಕಿನ್ನಾಳಕ್ಕೆ ಮರಳಿ ಸಮಾನ ಮನಸ್ಕ ಸ್ನೇಹಿತರನ್ನು ಒಳಗೊಂಡ ತಂಡವನ್ನು ಕಟ್ಟಿದರು. ಚಿತ್ರಗಾರ ಕುಟುಂಬದ ಬಹುತೇಕರು ದೇವರ ವಿಗ್ರಹ, ಪಲ್ಲಕ್ಕಿ ತಯಾರಿಸಲು ಸೀಮಿತರಾಗಿದ್ದರು. ಇದರ ವಿರುದ್ಧ ದಿಕ್ಕಿನಲ್ಲಿ ಕೆಲಸ ಮಾಡಿದ ಸಂತೋಷಕುಮಾರ ಗ್ರಾಹಕರ ಬೇಡಿಕೆಯ ನಾಡಿಮಿಡಿತ ಅರಿತು ಗೃಹಾಲಂಕಾರ ವಸ್ತುಗಳು, ಮಕ್ಕಳ ಆಟಿಕೆ ತಯಾರಿಕೆಗೆ ಒತ್ತು ನೀಡಿದ್ದರಿಂದ ಜನರಿಂದ ವ್ಯಾಪಕ ಬೇಡಿಕೆ ವ್ಯಕ್ತವಾಗುತ್ತಿದೆ.
‘ಸಕ್ರಿಯವಾಗಿ ಕೆಲಸ ಮಾಡುವ ಕುಟುಂಬದವರು ಮನೆಯಿಂದಲೇ ವಾರ್ಷಿಕ ₹6 ಲಕ್ಷದಿಂದ ₹7 ಲಕ್ಷ ಆದಾಯ ಗಳಿಸುತ್ತಿದ್ದಾರೆ. ಬುಕ್ಕಿಂಗ್ ಮಾಡಿದ ಬಳಿಕ ಗ್ರಾಹಕರಿಗೆ ಬೇಕಾದ ಅಳತೆಗೆ ತಕ್ಕಂತೆ ಕಲಾಕೃತಿಗಳನ್ನು ತಯಾರಿಸಲಾಗುತ್ತದೆ. ಹೀಗಾಗಿ ಎಲ್ಲ ಕಲಾವಿದರಿಗೂ ಕೈತುಂಬಾ ಕೆಲಸ ಹಾಗೂ ಹಣ ಲಭಿಸುತ್ತಿದೆ’ ಎಂದು ಸಂತೋಷಕುಮಾರ್ ಖುಷಿಯಿಂದ ಹೇಳುತ್ತಾರೆ. ಕೆಲವು ತಿಂಗಳುಗಳ ಹಿಂದೆ ಕೇಂದ್ರ ಸರ್ಕಾರ ಈ ಕಲಾಕೃತಿಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಶೇ 12ರಿಂದ ಶೇ 5ಕ್ಕೆ ಇಳಿಸಿದ ಬಳಿಕ ಕಲಾವಿದರು ಹಾಗೂ ಗ್ರಾಹಕರಿಗೂ ಲಾಭವಾಗುತ್ತಿದೆ. ಸಣ್ಣ ಊರಿನಲ್ಲಿ ಕಿನ್ನಾಳದ ಕಲಾವಿದರ ವಾರ್ಷಿಕ ಗಳಿಕೆಯೇ ₹1 ಕೋಟಿಯಿಂದ ₹1.5 ಕೋಟಿಯಷ್ಟಿದೆ.
ಜೊತೆಯಾದ ಸ್ನೇಹಿತರು
ಸಂತೋಷಕುಮಾರ್ ಅವರ ಕಾರ್ಯಕ್ಕೆ ಊರಿನಲ್ಲಿ ಜೊತೆಯಾಗಿದ್ದು, 24 ವರ್ಷದ ಭರತ್ ಚಿತ್ರಗಾರ. ಭರತ್ ಅವರ ತಂದೆ ಹತ್ತು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಓದಬೇಕಾದ ವಯಸ್ಸಿನಲ್ಲಿ ಕುಟುಂಬದ ಜವಾಬ್ದಾರಿ ಹೊತ್ತುಕೊಳ್ಳಬೇಕಾದ ಅನಿವಾರ್ಯತೆಯಿಂದಾಗಿ ಭರತ್ ಓದುತ್ತಲೇ, ಕುಟುಂಬದ ಸಾಂಪ್ರದಾಯಿಕ ಕಿನ್ನಾಳ ಕಲೆಯಲ್ಲಿ ಕಲಾಕೃತಿ ತಯಾರಿಸುವುದನ್ನು ಕಲಿತುಕೊಂಡರು. ಡಿಪ್ಲೊಮೊ ಪೂರ್ಣಗೊಳಿಸಿ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 31 ವರ್ಷದ ಶ್ರೀನಿವಾಸ್ ಚಿತ್ರಗಾರ ಕೂಡ ತಮ್ಮ ತಂದೆಗೆ ಅನಾರೋಗ್ಯ ಕಾಡಿದ್ದರಿಂದ ಅವರ ಆರೈಕೆಗಾಗಿ ಮರಳಿ ಗೂಡು ಸೇರಿದರು. ಊರಿನ ಯುವಕರ ಜೊತೆಗೂಡಿ ಕಲಾಕೃತಿಗಳ ತಯಾರಿ ರೂಢಿಸಿಕೊಂಡರು. ಹೀಗೆ ಅನಿರೀಕ್ಷಿತವಾಗಿ ಹಾಗೂ ಅನಿವಾರ್ಯಕ್ಕಾಗಿ ಹುಟ್ಟೂರಿಗೆ ವಾಪಸ್ ಬಂದವರು ಬೆಳೆಸಿದ ‘ಕಿನ್ನಾಳ ಕಲಾಲೋಕ’ ಎಲ್ಲರ ಗಮನ ಸೆಳೆಯುತ್ತಿದೆ.
ಇವು ಕೆಲವು ಉದಾಹರಣೆಗಳಷ್ಟೇ. ‘ಕರಕುಶಲ ಕಲೆಗಳ ತವರೂರು’ ಎನ್ನುವ ಫಲಕದಿಂದ ತಮ್ಮೂರಿಗೆ ಸ್ವಾಗತಿಸುವ, ಕೊಪ್ಪಳದಿಂದ 10 ಕಿ.ಮೀ ದೂರದಲ್ಲಿರುವ ಕಿನ್ನಾಳ ಎನ್ನುವ ಪುಟ್ಟಗ್ರಾಮ ಕಲೆಯ ಸೊಬಗು, ಆಕರ್ಷಣೆ ಮತ್ತು ಸೌಂದರ್ಯದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಈ ಗ್ರಾಮದಲ್ಲೊಂದು ಸುತ್ತು ಹಾಕಿ ಬಂದರೆ ಮನೆಯಲ್ಲಿದ್ದುಕೊಂಡೇ ವಾರ್ಷಿಕ ಲಕ್ಷಾಂತರ ರೂಪಾಯಿ ದುಡಿಯುವ ಯುವಕರ ಸಾಹಸದ ಕಥನ ಅನಾವರಣಗೊಳ್ಳುತ್ತದೆ.
ವಿಜಯನಗರ ಸಾಮ್ರಾಜ್ಯದ ಕಾಲದ ಕಿನ್ನಾಳದ ಕಲಾಕೃತಿಗಳು ಹಂಪಿಯ ಪಂಪಾ ವಿರೂಪಾಕ್ಷೇಶ್ವರ, ವಿಜಯವಿಠ್ಠಲ ದೇವಾಲಯ, ಕೊಪ್ಪಳ ಜಿಲ್ಲೆಯ ಕನಕಗಿರಿಯ ಕನಕಾಚಲಪತಿ ಹೀಗೆ ಬಹಳಷ್ಟು ದೇವಸ್ಥಾನಗಳಲ್ಲಿ ಈ ಕಲಾಕೃತಿಗಳಿವೆ. ವಿಜಯನಗರ ಅರಸರು ತಾವು ಕುಳಿತುಕೊಳ್ಳುವ ಸಿಂಹಾಸನಕ್ಕೆ ಕಿನ್ನಾಳ ಕಲಾಕೃತಿ ಬಳಸಿಕೊಂಡಿದ್ದರು ಎನ್ನುವ ಐತಿಹ್ಯವಿದೆ. ಆ ಕಾಲದ ಚಿತ್ರಗಾರ ಕುಟುಂಬದವರು ಹಂಪಿ ಹಾಗೂ ಸುತ್ತಮುತ್ತಲಿನ ಪ್ರದೇಶದಿಂದ ಸಮೀಪದ ಕಿನ್ನಾಳ ಗ್ರಾಮಕ್ಕೆ ಬಂದು ನೆಲೆ ನಿಂತು ಈ ಕಲೆಯನ್ನು ಪೋಷಿಸಿದ್ದಾರೆ.
ಕಣ್ಣು ತುಂಬಾ ಹೊಳಪು, ಅಂದದ ಅಲಂಕಾರ, ಮೈಮೇಲೆ ಆಭರಣ, ಆಡಂಬರವಿಲ್ಲದ ಬಣ್ಣ, ಕೊರಳ ತುಂಬಾ ಸರಗಳು, ನವಿರಾದ ಹುಬ್ಬು ಇವೆಲ್ಲವೂ ಕಲಾಕೃತಿಗಳ ಜೀವಂತಿಕೆ ಹೆಚ್ಚಿಸುತ್ತವೆ. ಒಂದು ಬಾರಿ ತಯಾರಿಸಿದರೆ ಕನಿಷ್ಠ ನೂರು ವರ್ಷ ಬಾಳಿಕೆ ಬರುತ್ತವೆ ಎನ್ನುವ ಕಾರಣಕ್ಕೆ ಕಿನ್ನಾಳ ಕಲೆ ಈಗಲೂ ಪ್ರಾಮುಖ್ಯತೆ ಉಳಿಸಿಕೊಂಡಿವೆ. ಯುವಕರು ಶ್ರಮಪಟ್ಟು ನೀಡಿದ ಆಧುನಿಕ ಸ್ಪರ್ಶದಿಂದಾಗಿ ಅವರ ಬದುಕು ಕಿನ್ನಾಳ ಗೊಂಬೆಗಳ ಮೊಗದ ಮೇಲಿನ ನಗೆಯಂತೆಯೇ ನಲಿದಾಡುತ್ತಿದೆ. ಕಲಾಕೃತಿಗಳು ದೇಶ–ವಿದೇಶಗಳಲ್ಲಿ ಕಂಗೊಳಿಸುತ್ತಿವೆ.
ಕಿನ್ನಾಳ ಕಲಾಕೃತಿ ತಯಾರಿಕೆಯಲ್ಲಿ ಪ್ರದೀಪ್ ಆರೇರ
ಯುವಕರ ಕರಾಮತ್ತು
ಹೊಸ ತಲೆಮಾರಿನ ಯುವಕರು ಇ–ಕಾಮರ್ಸ್ ಮಾರುಕಟ್ಟೆಯ ಮೊರೆ ಹೋಗದೆ ಕಿನ್ನಾಳ ಕಲೆಯ ಬಗ್ಗೆ ಪ್ರತ್ಯೇಕವಾಗಿ ಸಾಮಾಜಿಕ ತಾಣದಲ್ಲಿ ಮಾಹಿತಿ ಹಂಚಿಕೊಂಡು ಸಂಪರ್ಕದ ಮಾಹಿತಿ ನೀಡಿದ್ದರಿಂದ ಕಡಿಮೆ ಸಮಯದಲ್ಲಿ ಬೇಡಿಕೆ ಹೆಚ್ಚಾಯಿತು. ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್ ಮೂಲಕ ಕಲಾಕೃತಿಗಳನ್ನು ಖರೀದಿಸಲು ಮುಂಗಡ ಬುಕ್ಕಿಂಗ್ ಬರುತ್ತಿವೆ. ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದರಿಂದ ಜರ್ಮನಿ, ಇಂಗ್ಲೆಂಡ್, ಮಲೇಷ್ಯಾ, ಸಿಂಗಪುರ, ಯುಎಇ, ಸ್ವಿಟ್ಜರ್‌ಲೆಂಡ್... ಹೀಗೆ ಅನೇಕ ರಾಷ್ಟ್ರಗಳಿಗೆ ಕಿನ್ನಾಳ ಕಲಾಕೃತಿಗಳು ರಫ್ತಾಗಿವೆ.
ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದರಿಂದ ಕಲಾವಿದರಿಗೆ ಈಗ ನಿರಂತರ ಕೆಲಸ. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂತೋಷಕುಮಾರ್ ತಯಾರಿಸಿದ ‘ಸಿಂಫನಿ ಆಫ್ ಎಮೋಷನ್ಸ್’ ಮತ್ತು ‘ಟಾಯ್ಸ್’ ಶೀರ್ಷಿಕೆಯ ಕಲಾಕೃತಿಗಳನ್ನು ಅಳವಡಿಸಲಾಗಿದೆ. ಗೂಗಲ್‌ನಲ್ಲಿ ಸಿಗುವ ‘ಕಿನ್ನಾಳ ಕಲೆಕ್ಷನ್ಸ್’ ಮೇಲೆ ಲಿಂಕ್ ಕ್ಲಿಕ್ ಮಾಡಿದರೆ ನೇರವಾಗಿ ಕಲಾವಿದರ ಸಂಪರ್ಕ ಹಾಗೂ ಮುಂಗಡ ಬುಕ್ಕಿಂಗ್ ಮಾಡುವ ಸೌಲಭ್ಯಗಳು ಸಿಗುತ್ತವೆ.
ಸಾಮಾಜಿಕ ತಾಣಗಳಲ್ಲಿ ಪ್ರಚಾರದ ಜೊತೆಗೆ ದೇಶದ ವಿವಿಧೆಡೆ ನಡೆದ ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟದಲ್ಲಿ ಕಿನ್ನಾಳ ಕಲಾಕೃತಿಗಳನ್ನು ತೆಗೆದುಕೊಂಡು ಹೋಗಲಾಯಿತು. ಮೊದಲು ಚಿತ್ರಗಾರ ಸಮುದಾಯದವರು ಮಾತ್ರ ಕಿನ್ನಾಳ ಕಲೆಯನ್ನು ತಯಾರಿಸುತ್ತಿದ್ದರು. ಬೇಡಿಕೆ ಹೆಚ್ಚಾಗಿದ್ದರಿಂದ ಸಂತೋಷ್, ಕಲಿಯುವ ಆಸಕ್ತಿಯುಳ್ಳ ಅನೇಕ ಯುವಕರಿಗೆ ತರಬೇತಿ ನೀಡಿದ್ದಾರೆ. ಎಂಟು ವರ್ಷಗಳ ಹಿಂದೆ ಅವರು ಮಾಡಿದ ಪ್ರಯೋಗಗಳು ಈಗ ಗ್ರಾಮದ ಯುವಕರನ್ನು ಆಕರ್ಷಿಸಿದ್ದು ಕಲಾಕೃತಿ ತಯಾರಿಸುವ ಮಧ್ಯ ವಯಸ್ಕರಿಗೂ ಕೈತುಂಬಾ ಕೆಲಸವಿದೆ. ಕಲಾಕೃತಿಗಳ ತಯಾರಿಕೆಗೆ ಮುಂಗಡ ಬುಕ್ಕಿಂಗ್ ಬರುತ್ತಿವೆ.
ಅವರ ಕೆಲಸಕ್ಕೆ ಕಲಾವಿದರಾದ ಸಮರ್ಥ್ ಚಿತ್ರಗಾರ, ಪ್ರದೀಪ್ ಮಾನಪ್ಪ, ರಾಮುಶಂಕರರಾವ್ ಚಿತ್ರಗಾರ, ಮಂಜುನಾಥ ಚಿತ್ರಗಾರ, ವೆಂಕಟೇಶ್ ಚಿತ್ರಗಾರ, ರಮೇಶ ಚಿತ್ರಗಾರ, ಪದ್ಮಾವತಿ ಚಿತ್ರಗಾರ, ನಾಗರಾಜ ಚಿತ್ರಗಾರ, ಲಕ್ಷ್ಮೀಕಾಂತ್ ದೇವಿ, ರಮೇಶ ಗಾರವಾರ ಹೀಗೆ ಅನೇಕರು ಕೈ ಜೋಡಿಸಿದ್ದಾರೆ. ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಗ್ರಾಹಕರೇ ಖರೀದಿಸಲು ಅವಕಾಶವಿದೆ. ಈಗ ದೇಶಿಯವಾಗಿಯೇ ಸಾಕಷ್ಟು ಬೇಡಿಕೆ ವ್ಯಕ್ತವಾಗುತ್ತಿದ್ದು, ವಿದೇಶದಿಂದ ಬರುವ ಬೇಡಿಕೆಗೆ ತಕ್ಕಷ್ಟು ಪೂರೈಸಲು ಅವರಿಗೆ ಸಮಯ ಸಿಗುತ್ತಿಲ್ಲ. ಹೊಸ ಪೀಳಿಗೆಯ ಕಲಾವಿದರಿಗೆ ತಮ್ಮ ಕುಟುಂಬದ ಹಿರಿಯರಿಂದ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿವಿಧ ಯೋಜನೆಗಳಡಿ ತರಬೇತಿ ದೊರಕಿದೆ.
‘ಗೃಹಲಂಕಾರ ವಸ್ತುಗಳಿಗೆ ವ್ಯಾಪಕ ಬೇಡಿಕೆಯಿದ್ದರೂ ಈ ವರ್ಷ ದೇವರ ಮೂರ್ತಿ ಹಾಗೂ ಪಲ್ಲಕ್ಕಿಗಳನ್ನು ಮಾತ್ರ ತಯಾರಿಸುತ್ತಿದ್ದೇವೆ. ರಾಜ್ಯದ ಬಹಳಷ್ಟು ಊರುಗಳಲ್ಲಿ ಐದು ವರ್ಷಗಳಿಗೊಮ್ಮೆ ದೇವಿ ಜಾತ್ರೆ ನಡೆಯುತ್ತಿದ್ದು ಕೈತುಂಬಾ ಕೆಲಸವಿದೆ. ವರ್ಷಕ್ಕೂ ಮೊದಲೇ ಇವುಗಳ ಆರ್ಡರ್ ಬಂದಿರುತ್ತದೆ. ಮೊದಲು ಈ ಕೆಲಸ ಮುಗಿಸಿಯೇ ಗೃಹಲಂಕಾರ ವಸ್ತುಗಳನ್ನು ತಯಾರಿಸಲಾಗುವುದು. ಇನ್ನಷ್ಟು ಯುವಕರಿಗೆ ಸರ್ಕಾರ ತರಬೇತಿ ಕೊಟ್ಟರೆ ಗ್ರಾಹಕರ ಬೇಡಿಕೆಗೆ ತಕ್ಕಷ್ಟು ಕಲಾಕೃತಿ ಪೂರೈಸಲು ಸಾಧ್ಯವಾಗುತ್ತದೆ’ ಎಂದು 46 ವರ್ಷದ ಮಂಜುನಾಥ್ ಚಿತ್ರಗಾರ ಹೇಳುತ್ತಾರೆ.
ಕಿನ್ನಾಳ ಕಲೆಯಲ್ಲಿ ಗೌರಿಮುಖ
ಅಳಿವಿನಿಂದ ಉಳಿವಿನೆಡೆಗೆ
ಕಿನ್ನಾಳ ಗ್ರಾಮದಲ್ಲಿ ಎರಡ್ಮೂರು ದಶಕಗಳ ಹಿಂದೆ ಕಲಾಕೃತಿಗಳನ್ನು ತಯಾರಿಸುವ ನೂರಾರು ಕುಟುಂಬಗಳಿದ್ದವು. ಕಾಲದ ಹೊಡೆತಕ್ಕೆ ಸಿಲುಕಿ ಈ ಕಲೆ ಅವಸಾನದತ್ತ ಸಾಗಿದ್ದರಿಂದ ಪ್ರಸ್ತುತ ಗ್ರಾಮದಲ್ಲಿರುವ 67 ಚಿತ್ರಗಾರ ಕುಟುಂಬಗಳಲ್ಲಿ 35 ಕುಟುಂಬಗಳಷ್ಟೇ ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ಹತ್ತು ಕುಟುಂಬಗಳ ಸದಸ್ಯರು ದೇವರ ವಿಗ್ರಹ, ಚೌಕಿ, ಗೊಂಬೆ, ವಾಲ್‌ಪ್ಲೇಟ್‌ಗಳು ಹೀಗೆ ನಿರ್ದಿಷ್ಟ ಕಲಾಕೃತಿಗಳನ್ನು ತಯಾರಿಸುತ್ತಾರೆ.
ಉಳಿದ 25 ಕುಟುಂಬಗಳು ಮಾತ್ರ ಕಿನ್ನಾಳಕಲೆಯ ವೈಶಿಷ್ಟಗಳಾದ ದುರ್ಗಾದೇವಿ, ಕೀಲುಗೌರಿ, ಕೀಲುಗೊಂಬೆ, ಅಲಂಕಾರಿಕ ಸಾಮಗ್ರಿಗಳು, ಆಕಳು, ಆನೆ, ಲಕ್ಷ್ಮಿ, ಸರಸ್ವತಿ, ಗಣೇಶ, ಮತ್ಸ್ಯ, ದ್ವಾರಪಾಲಕರು, ಆಂಜನೇಯ, ಪಲ್ಲಕ್ಕಿ, ಜಾತ್ರೆಯ ಸಾಮಗ್ರಿ, ಟೀಪಾಯಿ, ಗರುಡ, ಆಂಜನೇಯ, ರತಿ–ಮನ್ಮಥ, ಕೂರ್ಮಾವತಾರ, ವರಾಹ, ನರಸಿಂಹ, ವಾಮನ, ಕೊಂತಿ ಪಟ್ಟಿ ಹೀಗೆ ಅನೇಕ ಕಲಾಕೃತಿಗಳನ್ನು ತಯಾರಿಸುತ್ತಿದ್ದಾರೆ. ಈಗ ಕೆಲಸ ಮಾಡುತ್ತಿರುವವರಲ್ಲಿ ಬಹುತೇಕರು ಯುವಕರು ಮತ್ತು ಮಧ್ಯವಯಸ್ಕರು. ಜನರ ಅಭಿರುಚಿ, ಆಸಕ್ತಿ ಹಾಗೂ ಮಾರುಕಟ್ಟೆಗೆ ತಕ್ಕಂತೆ ಕಲಾಕೃತಿಗಳನ್ನು ತಯಾರಿಸುತ್ತಿರುವುದರಿಂದ ಬೇಡಿಕೆ ವ್ಯಾಪಕವಾಗಿದೆ.
ಕಿನ್ನಾಳ ಕಲೆಗಳನ್ನು ಅರಳಿಸುತ್ತಿರುವ ರಮೇಶ ಹಾಗೂ ಪದ್ಮಾವತಿ ಚಿತ್ರಗಾರ ದಂಪತಿ
ಕಲೆ ಉಳಿಸಿದ ಹಿರಿಯರು
ಹೊಸತಲೆಮಾರಿನ ಯುವಕರು ಕಿನ್ನಾಳ ಕಲೆಗೆ ಆಧುನಿಕ ಸ್ಪರ್ಶ ನೀಡಿ ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಸಿದ್ದು ಸಾಧನೆಯೇ. ಆದರೆ, ಈ ಕಲೆಯ ಉಳಿವಿಗೆ ವಿಜಯನಗರ ಕಾಲದಿಂದ ಈಗಿನ ತನಕ ಗ್ರಾಮದ ಹಿರಿಯರು ಕೂಡ ಸಾಕಷ್ಟು ಶ್ರಮಿಸಿದ್ದಾರೆ.
ಕಲಾಕೃತಿಗಳನ್ನು ತಯಾರಿಸುವ ಪರಿಣತಿ ಹೊಂದಿರುವ ಚಿತ್ರಗಾರ ಸಮುದಾಯದ ಹಿರಿಯರಾದ ಸೀತಮ್ಮ, ಭಾಗ್ಯಮ್ಮ ಮತ್ತು ಲಕ್ಷ್ಮಮ್ಮ ಅವರಂತಹ ಅನೇಕರು ಸಂಕಷ್ಟದ ಸಮಯದಲ್ಲಿ ಕಲೆಗೆ ಜೀವ ತುಂಬಿದ್ದಾರೆ. ಮದುವೆಯಾಗಿ ಕಿನ್ನಾಳ ಗ್ರಾಮಕ್ಕೆ ಬಂದ ಸೀತಮ್ಮ ತಾವೂ ಕಲಾಕೃತಿ ರಚನೆ ಕಲಿತು, ತಮ್ಮ ಮಗ ಹಾಗೂ ಸೊಸೆಗೂ ಕಲಿಸಿದ್ದಾರೆ. ಕಿನ್ನಾಳ ಕಲೆಯಲ್ಲಿ ತಯಾರಿಸಿದ ದೇವಿಯರ ಮೂರ್ತಿಗಳ ಕೆತ್ತನೆ ಮಾಡಿ ಏಳು ದಶಕಗಳ ಹಿಂದೆ ಊರೂರು ಅಲೆದಾಡಿದ ಸಣ್ಣರಂಗಪ್ಪ ಚಿತ್ರಗಾರ ಯುವ ಸಮುದಾಯಕ್ಕೆ ಮಾದರಿಯಂತಿದ್ದಾರೆ. ಹಲವು ದಶಕಗಳ ಹಿಂದೆ ಕೆಲ ಊರುಗಳಿಗೆ ಸೀಮಿತವಾಗಿದ್ದ ಕಿನ್ನಾಳ ಕಲೆ ಹೊಸತಲೆಮಾರಿನ ಯುವಕರ ಶ್ರಮದಿಂದಾಗಿ ವಿದೇಶಗಳಲ್ಲಿ ವಿಜೃಂಭಿಸುತ್ತಿವೆ.
ದೇಶ, ವಿದೇಶಗಳಿಗೆ ಹೋದಾಗ ಕಿನ್ನಾಳ ಕಲೆ ಹೆಸರು ಹೇಳಿದರೆ ಕೊಪ್ಪಳ ಜಿಲ್ಲೆಯನ್ನು ಹಾಗೂ ಕರ್ನಾಟಕವನ್ನು ಗುರುತಿಸುವಷ್ಟು ಭೌಗೋಳಿಕ ಸೂಚನೆ (ಜಿಐ) ಟ್ಯಾಗ್ ಹೊಂದಿರುವ ಕಲಾಕೃತಿಗಳು ಖ್ಯಾತಿ ಪಡೆದಿವೆ. ಈ ಕಲೆಗಳನ್ನು ತಯಾರಿಸುವ ಕಲಾವಿದರು ದೇಶ ಹಾಗೂ ವಿದೇಶಗಳನ್ನು ಸುತ್ತಾಡದಿದ್ದರೂ ತಾವು ತಯಾರಿಸಿದ ಕಲೆಗಳು ಮಾತ್ರ ಎಲ್ಲೆಡೆಯೂ ಕಂಗೊಳಿಸುತ್ತಿರುವುದು ಅವರಲ್ಲಿಯೂ ಹೆಮ್ಮೆಯ ಭಾವ ಮೂಡಿಸಿವೆ.
ಪ್ರಸ್ತುತ ಮುಂಗಡ ಬುಕ್ಕಿಂಗ್ ಮಾಡಿ ಕೆಲವು ದಿನ ಕಾದರಷ್ಟೇ ಕಲಾಕೃತಿಗಳು ಸಿಗುತ್ತಿದ್ದು, ದೂರದ ಊರುಗಳಿಂದ ಬಂದು ಖರೀದಿಸುವ ಆಸಕ್ತರಿಗೆ ನಿರಾಸೆಯಾಗುತ್ತಿದೆ. ಆದ್ದರಿಂದ ಸರ್ಕಾರ ಜಿಲ್ಲಾ ಕೇಂದ್ರ ಕೊಪ್ಪಳ ಅಥವಾ ಕಿನ್ನಾಳದಲ್ಲಿ ಆಫ್‌ಲೈನ್ ಮಾರುಕಟ್ಟೆ ವ್ಯವಸ್ಥೆ ಮಾಡಬೇಕು ಎನ್ನುವುದು ಕಲಾವಿದರ ಆಗ್ರಹವಾಗಿದೆ.
ಕಿನ್ನಾಳದಲ್ಲಿ ಮೊದಲು ಸರ್ಕಾರದಿಂದ ಇದ್ದ ಕಲಾಕೃತಿಗಳ ತರಬೇತಿ ಹಾಗೂ ಕರಕುಶಲ ತರಬೇತಿ ಕೇಂದ್ರ ಒಂದೂವರೆ ದಶಕದ ಹಿಂದೆಯೇ ಮುಚ್ಚಿಹೋಗಿವೆ. ಕಾವೇರಿ ಹ್ಯಾಂಡಿಕ್ರಾಫ್ಟ್ ಎಂಪೋರಿಯಂ ಅಧೀನದಲ್ಲಿದ್ದ ತರಬೇತಿ ಕೇಂದ್ರದ ನಿರ್ವಹಣೆ ಹಾಗೂ ಸಿಬ್ಬಂದಿ ಸಮಸ್ಯೆ ಕಾಡಿದ್ದರಿಂದ ಮುಚ್ಚಲಾಗಿದೆ ಎಂದು ಕಲಾವಿದರು ಹೇಳುತ್ತಾರೆ.
ಎಂಪೋರಿಯಂ ವತಿಯಿಂದಲೇ ಕಿನ್ನಾಳದ ಕಲಾವಿದರಿಗೆ ಏಳು ಎಕರೆ ಜಾಗದಲ್ಲಿ ಮನೆಕಟ್ಟಿಕೊಳ್ಳಲು ನಿವೇಶನ ಹಾಗೂ ಕಲಾಕೃತಿ ತಯಾರಿಸಲು ಮನೆಮುಂದೆಯೇ ಜಾಗದ ಸೌಲಭ್ಯ ಕಲ್ಪಿಸಲಾಗಿದೆ. ಹತ್ತು ಗುಂಟೆಯಲ್ಲಿ ಕಲಾಕೃತಿಗಳ ಮಾರಾಟ ಸೇವಾ ಕೇಂದ್ರವಿತ್ತು. ಕೇಂದ್ರವನ್ನು ಮರಳಿ ಆರಂಭಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಕಾವೇರಿ ಎಂಪೋರಿಯಂನ ಹುಬ್ಬಳ್ಳಿಯ ಪ್ರಾಜೆಕ್ಟ್ ಅಧಿಕಾರಿ ರಮೇಶ್ ತಿಳಿಸಿದರು. ಈ ಕೆಲಸ ತ್ವರಿತವಾಗಿ ಆರಂಭವಾದರೆ ಮತ್ತಷ್ಟು ಕಲಾವಿದರಿಗೆ ಬದುಕು ಕಟ್ಟಿಕೊಳ್ಳಲು ಹಾಗೂ ಜನರ ಬೇಡಿಕೆಗೆ ತಕ್ಕಷ್ಟು ಕಲಾಕೃತಿಗಳನ್ನು ಪೂರೈಸಲು ಸಾಧ್ಯವಾಗುತ್ತದೆ.
ಟಿಪಾಯಿ ಮೇಲೆ ಕಿನ್ನಾಳ ಕಲೆ
ಕಾಡುತ್ತಿದೆ ಮರಗಳ ಕೊರತೆ
ಸೆಣಬು ನೆನೆಸಿ ತುಂಡುಗಳಾಗಿ ಕತ್ತರಿಸಿ ಒಣಗಿಸಿ ಪುಡಿ ಮಾಡಲಾಗುತ್ತದೆ. ಕಟ್ಟಿಗೆಯ ಪುಡಿ ಮತ್ತು ಹುಣಸೆ ಬೀಜದ ಪೇಸ್ಟಿನೊಂದಿಗೆ ಬೆರೆಸಿ ಕಿಟ್ಟಾ ತಯಾರಿಸಿ ಕಟ್ಟಿಗೆಯ ಪುಡಿಯನ್ನು ನೀರಿನಲ್ಲಿ ಮಿಶ್ರಣ ಮಾಡಿ ಹದಗೊಳಿಸಿ ಉಂಡೆಗಳಾಗಿ ಮಾಡಿ ಒಣಗಿಸುತ್ತಾರೆ. ಆಕೃತಿಗಳನ್ನು ಜೋಡಿಸಿದ ನಂತರ ಕಿಟ್ಟಾ ಹಚ್ಚಲಾಗುತ್ತದೆ.
ಕಲಾಕೃತಿಗಳ ಅಂದ ಹೆಚ್ಚಿಸಲು ಬಳಸುವ ಬಣ್ಣದಲ್ಲಿ ಹಾಕುವ ಚಮಟಗಿ ತಯಾರಿಸಲು ಸುಮಾರು ಒಂದು ತಾಸು ಕಲ್ಲಿನಿಂದ ಕುಟ್ಟಿದರೆ 100 ಗ್ರಾಂ ಮಾತ್ರ ಚಮಟಗಿ ತಯಾರಾಗುತ್ತದೆ. ಹೀಗೆ ತಯಾರಿಸುವ ಬಣ್ಣ ಕನಿಷ್ಠ 100 ವರ್ಷ ಬಾಳಿಕೆ ಬರುತ್ತದೆ. ಕಿನ್ನಾಳ ಕಲೆಗೆ ಕಸುಬುದಾರಿಕೆ ಪ್ರಮುಖವಾಗಿದ್ದರಿಂದ ಪೂರ್ವಸಿದ್ಧತೆಗೆ ಹೆಚ್ಚು ಸಮಯ ಬೇಕು. ನೂರಾರು ವರ್ಷ ಬಾಳಿಕೆ ಬರುವಂತೆ ಮಾಡಲು ಮೂಲವಾಗಿ ಪೊಳಕಿಮರ ಹಾಗೂ ಟಣಕಿನ ಮರದ ಹಗುರವಾದ ಕಟ್ಟಿಗೆಗಳು ಇರಬೇಕು. ಈಗ ಮರಗಳ ಕೊರತೆ ಕಾಡುತ್ತಿರುವುದು ಕಲಾವಿದರ ಚಿಂತೆಗೆ ಕಾರಣವಾಗಿದೆ.
'ತರಬೇತಿಯ ಅವಧಿ ಹೆಚ್ಚಲಿ'
ಕಿನ್ನಾಳ ಕಲಾವಿದರಿಗೆ ಸರ್ಕಾರ ವರ್ಷಕ್ಕೆ 25 ದಿನಗಳ ತರಬೇತಿ ಮಾತ್ರ ನೀಡುತ್ತಿದೆ. ಕಿರು ಅವಧಿಯ ಈ ತರಬೇತಿಯಿಂದ ಕಲಾವಿದರಿಗೆ ಏನನ್ನೂ ಕಲಿಯಲು ಸಾಧ್ಯವಾಗುತ್ತಿಲ್ಲ.
‘ಕಿನ್ನಾಳ ಕಲಾಕೃತಿಗಳನ್ನು ತಯಾರಿಸಲು ಸಾಕಷ್ಟು ತಾಳ್ಮೆ ಹಾಗೂ ಶ್ರಮ ಬೇಕಾಗುತ್ತದೆ. ಎಷ್ಟು ನಿಧಾನವಾಗಿ ಮಾಡುತ್ತವೆಯೋ ಅಷ್ಟೇ ಒಳ್ಳೆಯ ಗುಣಮಟ್ಟದ ಕಲಾಕೃತಿಗಳು ತಯಾರಾಗುತ್ತವೆ. ಸರ್ಕಾರ ಕನಿಷ್ಠ ಆರು ತಿಂಗಳಾದರೂ ತರಬೇತಿ ಕೊಟ್ಟರೆ ಅನುಭವ ಹೆಚ್ಚಿಸಿಕೊಳ್ಳಲು ಸಾಧ್ಯ’ ಎಂದು ಕಲಾವಿದ ಭರತ್ ಚಿತ್ರಗಾರ ಹೇಳುತ್ತಾರೆ.
ದೇವರ ವಿಗ್ರಹ ಹಾಗೂ ಅಲಂಕಾರಿಕ ವಸ್ತುಗಳು ಎರಡನ್ನೂ ತಯಾರಿಸುವುದರಿಂದ ಬೇಡಿಕೆ ಹೆಚ್ಚಾಗಿದೆ. ಕೆಲಸ ಮಾಡಲು ಸಮಯ ಸಾಕಾಗುತ್ತಿಲ್ಲ. ಮತ್ತಷ್ಟು ಹೊಸಬರು ಬರುವ ಅಗತ್ಯವಿದೆ.ಶಂಕರಪ್ಪ ಚಿತ್ರಗಾರ, ಕಲಾವಿದ
ಗಮನವಿಟ್ಟು ಕೆಲಸ ಮಾಡಿದರೆ ನಮ್ಮೂರಿನಿಂದಲೇ ಕೆಲಸ ಮಾಡಿ ಉತ್ತಮ ಆದಾಯ ಗಳಿಸಬಹುದು. ಯುವಜನತೆಗೆ ಬದುಕು ಕಟ್ಟಿಕೊಳ್ಳಲು ಕಿನ್ನಾಳ ಕಲೆ ದೊಡ್ಡ ವೇದಿಕೆಯಾಗಿದೆ.ನಾಗರಾಜ ಚಿತ್ರಗಾರ, ಯುವ ಕಲಾವಿದ
ಕಿನ್ನಾಳ ಕಲೆಗೆ ಉತ್ತಮ ಮಾರುಕಟ್ಟೆಯಿದ್ದು, ಜನರ ಬೇಡಿಕೆಗೆ ತಕ್ಕಂತೆ ಕಲಾಕೃತಿಗಳನ್ನು ತಯಾರಿಸಬೇಕಾಗಿದೆ. ಇನ್ನಷ್ಟು ಯುವಕರಿಗೆ ತರಬೇತಿ ಅಗತ್ಯವಿದೆ.ರಮೇಶ ಜಿ., ಕಲಾವಿದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.