ಬೆಂಗಳೂರು: ಅಭಿಮಾನಿಗಳಲ್ಲಿ ಭುಗಿಲೆದ್ದ ಜಯದ ಉನ್ಮಾದ, ವಿವೇಚನಾರಹಿತ ತೀರ್ಮಾನ, ಹೆಜ್ಜೆ ಹೆಜ್ಜೆಗೂ ನಡೆದ ಪ್ರಮಾದ, ಅಸಹಾಯಕರಾಗಿ ನಿಲ್ಲಬೇಕಾದ ಪೊಲೀಸರ ಸ್ಥಿತಿ... ಇವೆಲ್ಲವೂ ಸೇರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿಜಯದ ಸಂಭ್ರಮವು ನಾಡಿನ ಚರಿತ್ರೆಯಲ್ಲಿ ದಿನವೊಂದು ಕರಾಳ ನೆನಪಾಗಿ ಉಳಿಯುವಂತಹ ಘೋರ ದುರಂತವಾಗಿ ಮಾರ್ಪಟ್ಟಿತು.
ಎಂತಹದೇ ಪರಿಸ್ಥಿತಿಯನ್ನು ನಿಭಾಯಿಸುವ ಛಾತಿಯವರು ಎಂಬ ಮೆಚ್ಚುಗೆ ಪಡೆದಿದ್ದ ಕರ್ನಾಟಕದ ಪೊಲೀಸರು, ವರ್ಚಸ್ಸು ಹೆಚ್ಚಿಸಿಕೊಳ್ಳುವ ಆತುರದಲ್ಲಿದ್ದವರು ಮಾಡಿದ ಪ್ರಮಾದದಿಂದಾಗಿ ಎಂದೆಂದೂ ಮರೆಯಲಾಗದ ಕಳಂಕವೊಂದನ್ನು ಅಂಟಿಸಿಕೊಳ್ಳಬೇಕಾಯಿತು. ಎದೆಯೆತ್ತರ ಬೆಳೆಯುತ್ತಿದ್ದ ಕನಸುಕಂಗಳ ಮಕ್ಕಳನ್ನು ಕಣ್ಣುರೆಪ್ಪೆಯೊಳಗೆ ಇಟ್ಟು ಕಾಪಿಡುತ್ತಿದ್ದ 11 ಪೋಷಕರು ತಮ್ಮ ಕಣ್ಣೆದುರೇ ಮಣ್ಣಾದ ಕಂದಮ್ಮಗಳನ್ನು ನೆನೆದು ಜೀವನಪೂರ್ತಿ ಕೊರೆಗುವಿಕೆಗೂ ಕಾರಣವಾಯಿತು.
18 ವರ್ಷದ ಬಳಿಕ ‘ಕಪ್’ ಗೆದ್ದು ‘ನಮ್ದು’ ಎಂದು ಬೀಗಿದ ಆರ್‌ಸಿಬಿ ತಂಡಕ್ಕೆ ಜೂನ್ 4ರಂದು ವಿಧಾನಸೌಧದ ಎದುರು ನಡೆದ ಸನ್ಮಾನ, ಚಿನ್ನಸ್ವಾಮಿ ಕ್ರೀಡಾಂಗಣದೊಳಗೆ ಹಮ್ಮಿಕೊಂಡ ಸಂಭ್ರಮಾಚರಣೆ ಕಾಲ್ತುಳಿತಕ್ಕೆ ದಾರಿ ಮಾಡಿಕೊಟ್ಟು, ಸಾವಿನ ಮನೆಯ ಬಾಗಿಲನ್ನು ತೆರೆಯಿತು. ಅನಾಹುತಕ್ಕೆ ಯಾರು ಹೊಣೆ ಎಂದು ಹುಡುಕುತ್ತಾ ಹೊರಟರೆ ಸಾವಿನ ಮನೆಗೆ ಅಭಿಮಾನಿಗಳನ್ನು ದೂಡಿದವರು ಯಾರೆಂಬ ಹಲವು ಎಳೆಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ.
ಉನ್ಮಾದದ ಮುಗಿಲು–ಕಾಲ್ತುಳಿತಕ್ಕೆ ಬಾಗಿಲು: ಐಪಿಎಲ್ ಕ್ರಿಕೆಟ್ ಆಯೋಜಕರು ತಮ್ಮ ಅಭಿಮಾನಿ ಪಡೆಯನ್ನು ಹುಚ್ಚೆಬ್ಬಿಸಿ, ಸದಾ ತಮ್ಮ ಪರವಾದ ಅಲೆಯನ್ನು ಇರುವಂತೆ ನೋಡಿಕೊಳ್ಳುವತ್ತ ಲಕ್ಷ್ಯ ನೆಟ್ಟಿದ್ದರು. ಈ ಉನ್ಮಾದವೇ ವಿಜಯೋತ್ಸವಕ್ಕೆ ದಾರಿ ಮಾಡಿಕೊಟ್ಟಿತು. ಜೂನ್ 3ರಂದು ನಡೆದ ಐಪಿಎಲ್ ಅಂತಿಮ ಪಂದ್ಯದತ್ತ ಕೋಟ್ಯಂತರ ಜನರು ಕಣ್ಣುನೆಟ್ಟಿದ್ದರು. ಆರ್‌ಸಿಬಿ ಗೆದ್ದರೆ ದೇಶವೇ ಗೆದ್ದಂತೆ ಎಂದು ಬಿಂಬಿಸಲಾಗಿತ್ತು. ಈ ಕಾರಣದಿಂದಾಗಿಯೇ ಅಂತಿಮ ಪಂದ್ಯದ ರೋಚಕತೆಯನ್ನು ಕಂಡು, ಇಡೀ ರಾತ್ರಿ ಸಂಭ್ರಮಿಸಿದ್ದರು. ಅದೇ, ಉಮೇದು ಹಾಗೂ ಉತ್ಸಾಹವು ಕೆಲವು ದಿನಗಳು ಅಭಿಮಾನಿಗಳ ಎದೆಯಲ್ಲಿ ಸಂತಸದ ಅರಳುವಿಕೆಗೂ ಕಾರಣವಾಗಬಹುದಿತ್ತು.
ಹಲವು ಗೊಂದಲ, ಬೇಕು–ಬೇಡಗಳ ನಡುವೆಯೇ ರಾಜ್ಯ ಸರ್ಕಾರ, ಆರ್‌ಸಿಬಿ, ಡಿಎನ್‌ಎ (ಇವೆಂಟ್ ಮ್ಯಾನೇಜ್‌ಮೆಂಟ್) ಹಾಗೂ ಕೆಎಸ್‌ಸಿಎ ಕಡೆಯಿಂದ ಜೂನ್ 4ರ ಬೆಳಿಗ್ಗೆ ಪೊಲೀಸರ ಮೇಲೆ ಒತ್ತಡ ಬಂತು. ಆಗಲೂ ಪೊಲೀಸರು ಅನುಮತಿ ನಿರಾಕರಿಸಿದರು. ಮತ್ತೆ ಮತ್ತೆ ಒತ್ತಡ ತಂದಾಗ ತೆರೆದ ವಾಹನದಲ್ಲಿ ಆಟಗಾರರ ಮೆರವಣಿಗೆ ಕೈಬಿಟ್ಟು ವಿಧಾನಸೌಧ ಹಾಗೂ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಸುವ ತೀರ್ಮಾನ ತೆಗೆದುಕೊಳ್ಳಲಾಯಿತು.
‘ಆರ್‌ಸಿಬಿ ಫ್ರಾಂಚೈಸಿ ತನ್ನ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಯಾವುದೇ ಅನುಮತಿ ಪಡೆಯದೇ ಬುಧವಾರ ಬೆಳಿಗ್ಗೆ ಕ್ರೀಡಾಂಗಣದಲ್ಲಿ ವಿಜಯೋತ್ಸವ, ವಿಧಾನಸೌಧದಿಂದ ಕ್ರೀಡಾಂಗಣದ ವರೆಗೆ ವಿಕ್ಟರಿ ಪರೇಡ್‌ಗೆ (ಆಟಗಾರರ ಮೆರವಣಿಗೆ) ಸಾರ್ವಜನಿಕರು ಹಾಗೂ ಅಭಿಮಾನಿಗಳು ಸೇರಬೇಕೆಂದು ಏಕಪಕ್ಷೀಯ ನಿರ್ಧಾರ ಕೈಗೊಂಡು ‘ಎಕ್ಸ್’ ಕರೆ ನೀಡಿತ್ತು. ಕ್ರೀಡಾಂಗಣದ ಪ್ರವೇಶಕ್ಕೆ ಉಚಿತ ಟಿಕೆಟ್ ನೀಡಲಾಗುವುದು ಎಂದೂ ತನ್ನ ವೆಬ್‌ಸೈಟ್‌ನಲ್ಲಿ ಆರ್‌ಸಿಬಿ ಪ್ರಕಟಣೆ ಹೊರಡಿಸಿತ್ತು. ಅತ್ತ ಸರ್ಕಾರವು ಪೊಲೀಸ್ ಇಲಾಖೆಯ ಸಲಹೆಯನ್ನು ಗಂಭೀರವಾಗಿ ಪರಿಗಣಿಸದೇ ವಿಧಾನಸೌಧ ಮೆಟ್ಟಿಲುಗಳ ಮೇಲೆ ಆರ್‌ಸಿಬಿ ಆಟಗಾರರನ್ನು ಸನ್ಮಾನಿಸುವುದಾಗಿ ಹೇಳಿತ್ತು.
ಇದರ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ, ಅದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ‘ಎಕ್ಸ್’ ಹೇಳಿಕೆಗಳು ಹೊರಬಿದ್ದು, ವಿಧಾನಸೌಧದ ಮೆಟ್ಟಿಲಿನ ಮೇಲೆ ಆರ್‌ಸಿಬಿ ತಂಡವನ್ನು ಸನ್ಮಾನಿಸುವ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತು. ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾಣದಲ್ಲಿ ಬಂದಿಳಿದ ಆರ್‌ಸಿಬಿ ತಂಡವನ್ನು ಎದುರುಗೊಳ್ಳಲು ಅಲ್ಲಿಗೆ ತೆರಳಿದ ಡಿ.ಕೆ. ಶಿವಕುಮಾರ್, ಆಟಗಾರರನ್ನು ವಿಶೇಷ ಭದ್ರತೆಯಡಿ ನಗರಕ್ಕೆ ಕರೆತಂದರು. ಈ ವಿಡಿಯೊ, ಭಾವಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಂದ ಸಾಗರೋಪಾದಿಯಲ್ಲಿ ಅಭಿಮಾನಿಗಳು ನಗರದ ಹೃದಯಭಾಗದತ್ತ ನುಗ್ಗಲು ಇದು ಪ್ರಮುಖ ಕಾರಣವಾಯಿತು.
ಹೆಜ್ಜೆ ಹೆಜ್ಜೆಗೂ ತಪ್ಪುಗಳು: ಗೆದ್ದು ಬೀಗಿದ ಆರ್‌ಸಿಬಿ ತಂಡವನ್ನು ಕಣ್ತುಂಬಿಕೊಳ್ಳುವ ತವಕ ಸಹಜವಾಗಿಯೇ ಅಭಿಮಾನಿಗಳಲ್ಲಿ ಇತ್ತು. ಗುಜರಾತ್‌ನ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಐಪಿಎಲ್ ಅಂತಿಮ ಪಂದ್ಯದ ಟಾಸ್ ಪ್ರಕ್ರಿಯೆ ಆರಂಭವಾಗುವ ಹೊತ್ತಿನಲ್ಲೇ ವಿಜಯೋತ್ಸವ ಆಚರಣೆ ಬಗ್ಗೆ ನಿರ್ಧಾರವಾಯಿತು. ತರಾತುರಿಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶುಭೇಂದ್ ಘೋಷ್ ಅವರು ಕಬ್ಬನ್ ಪಾರ್ಕ್ ಠಾಣೆಗೆ ತೆರಳಿ, ಆರ್‌ಸಿಬಿ ತಂಡದ ವಿಜಯೋತ್ಸವ ಕಾರ್ಯಕ್ರಮವನ್ನು ಜೂನ್ 4ರಂದು ಸಂಜೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದು, ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ಠಾಣೆಯ ಇನ್‌ಸ್ಪೆಕ್ಟರ್ ಎ.ಕೆ.ಗಿರೀಶ್ ಅವರಿಗೆ ಮನವಿ ಸಲ್ಲಿಸಿದ್ದರು.
‘ನೀವು ತಿಳಿಸಿದಂತೆ ಕಾರ್ಯಕ್ರಮ ಆಯೋಜಿಸಿದರೆ ಲಕ್ಷಾಂತರ ಜನರು ಜಮಾವಣೆಗೊಂಡು ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ. ಅಲ್ಲದೇ ಸಮರ್ಪಕ ಬಂದೋಬಸ್ತ್ ವ್ಯವಸ್ಥೆಗೂ ಸಮಯಬೇಕಿದೆ’ ಎಂದು ಪೊಲೀಸರು ಹೇಳಿ ಅನುಮತಿ ನಿರಾಕರಿಸಿದ್ದರು ಎಂಬ ಮಾಹಿತಿ ಪೊಲೀಸ್ ಎಫ್‌ಐಆರ್‌ನಲ್ಲಿದೆ.
ಅತ್ತ ಆರ್‌ಸಿಬಿ ತಂಡ ಜಯಗಳಿಸುತ್ತಿದ್ದಂತೆಯೇ ರಾಜ್ಯದಲ್ಲೂ ಸಂಭ್ರಮಾಚರಣೆಗಳು ರಾತ್ರಿಯಿಡೀ ನಡೆದವು. ರಾತ್ರಿಯಿಡಿ ಬಂದೋಬಸ್ತ್ ನಡೆಸಿದ್ದ ಪೊಲೀಸರು ಬೆಳಗಿನ ಜಾವದ ಸುಮಾರಿಗೆ ಮನೆಗೆ ಹೋಗಿ ನಿದ್ರೆಗೆ ಜಾರಿದ್ದರು. ಅದೇ ಹೊತ್ತಿನೊಳಗೆ, ಅದೇ ದಿನ ವಿಜಯೋತ್ಸವ ಆಚರಿಸಬೇಕೆಂಬ ತೀರ್ಮಾನವೂ ಹೊರಬಿತ್ತು.
ಹೀಗೆ ದಿಢೀರ್ ಆಯೋಜನೆ ಮಾಡಿದರೆ ಎಷ್ಟು ಜನ ಸೇರಬಹುದು; ಲಕ್ಷಾಂತರ ಜನ ಸೇರಿದ ಅವರನ್ನು ನಿಯಂತ್ರಿಸಲು ಬೇಕಾದ ಪೂರ್ವ ತಯಾರಿ ಏನು ಎಂಬ ವ್ಯವಧಾನಕ್ಕೂ ಅವಕಾಶ ಕೊಡದೇ ಕಾರ್ಯಕ್ರಮ ನಡೆಸಿಯೇ ಬಿಡುವ ಆತುರವನ್ನು ಸರ್ಕಾರ ಹಾಗೂ ಆರ್‌ಸಿಬಿ ತಂಡ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಹಾಗೂ ಈವೆಂಟ್ ಮ್ಯಾನೇಜ್‌ಮೆಂಟ್ ನಡೆಸುವ ಡಿಎನ್‌ಎ ಸಂಸ್ಥೆ ಕೈಗೊಂಡವು. ಪೊಲೀಸ್ ಮುಖ್ಯಸ್ಥರು ಕೇಳಿಕೊಂಡರೂ ಅದನ್ನು ಒಪ್ಪದೇ ವಿಜಯೋತ್ಸವ ನಡೆಸಿಯೇ ಬಿಡುತ್ತವೆ ಎಂಬ ಹಟವೇ ಅನಾಹುತಕ್ಕೆ ದಾರಿಯಾಯಿತು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ವಿಧಾನಸೌಧದ ಎದುರು ಆರ್‌ಸಿಬಿ ತಂಡವನ್ನು ಸನ್ಮಾನಿಸಿದರೆ ಸರ್ಕಾರದ ವರ್ಚಸ್ಸು ಹೆಚ್ಚಾಗುತ್ತದೆ ಎಂದು ಕೆಲವರು ನೀಡಿದ ಸಲಹೆ ಪಾಲಿಸಲು ಮುಂದಾದ ಆಡಳಿತಾರೂಢರು ತರಾತುರಿಯಲ್ಲಿ ಎಲ್ಲದಕ್ಕೂ ಅನುಮತಿ ಕೊಡಿಸಿದರು. ಕೆಲವೇ ಗಂಟೆಗಳಲ್ಲಿ ವೇದಿಕೆ ನಿರ್ಮಾಣಗೊಂಡು ಎಲ್ಲವೂ ಸಜ್ಜಾಯಿತು.
ಮೆಟ್ಟಿಲುಗಳ ಮೇಲೆ ಹಾಕಲಾದ ವೇದಿಕೆಯಲ್ಲಿ ಮೇಲೆ 25-30 ಅತಿಥಿಗಳಿಗೆ ಮಾತ್ರ ಅನುಮತಿಸಬಹುದು ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರು ವಿಧಾನಸೌಧ ಭದ್ರತಾ ವಿಭಾಗದ ಪೊಲೀಸ್ ಇನ್‌ಸ್ಪೆಕ್ಟರ್‌ಗೆ ಅಭಿಪ್ರಾಯ ನೀಡಿದ್ದರು. ಆದರೆ ವೇದಿಕೆ ಮೇಲೆ ಸುಮಾರು 200ಕ್ಕೂ ಅಧಿಕ ಜನರು ಜಮಾವಣೆಯಾಗಿದ್ದರು. ಆರ್‌ಸಿಬಿ ತಂಡದ ಸದಸ್ಯರ ಸನ್ಮಾನ ವೇಳೆ ಅವರ ಜೊತೆ ಫೋಟೊ, ಸೆಲ್ಫಿ ಕ್ಲಿಕ್ಕಿಸಲು ಸಚಿವರು, ಶಾಸಕರು, ಅವರ ಕುಟುಂಬಸ್ಥರು, ಮಕ್ಕಳು ಸೇರಿ ನೂರಾರು ಜನರು ಜಮಾವಣೆಯಾಗಿದ್ದರು.
ಹೀಗೆ ಕಾರ್ಯಕ್ರಮಕ್ಕೆ ನಡೆಸಲು ಸಲಹೆ ಹಾಗೂ ಒತ್ತಡ ಹೇರಿದ್ದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು ಅವರು, ಅನಾಹುತ ನಡೆಯಲು ಕಾರಣರಾಗಿದ್ದಾರೆ. ಇದರಿಂದ ಸರ್ಕಾರಕ್ಕೆ ಮುಜುಗರವಾಗಿದ್ದು ಅವರನ್ನು ಆ ಹುದ್ದೆಯಿಂದ ಕೈಬಿಡಬೇಕು ಎಂದು ಎಂದು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಲವು ಸಚಿವರು ಒತ್ತಡ ಹೇರಿದ್ದರು. ಹೀಗಾಗಿ, ಶುಕ್ರವಾರವೇ ಗೋವಿಂದರಾಜು ಅವರಿಗೆ ನೀಡಿದ್ದ ವಿಶೇಷ ಸ್ಥಾನವನ್ನು ವಾಪಸ್ ಪಡೆಯಲಾಯಿತು ಎಂದು ಮೂಲಗಳು ಹೇಳಿವೆ.
ವಿಧಾನಸೌಧದ ಎದುರು ಕಾರ್ಯಕ್ರಮ ನಡೆಸಿ, ರಾಜ್ಯದ ಜನರಿಂದ ಭೇಷ್ ಎನ್ನಿಸಿಕೊಳ್ಳುವ ಉಮೇದು ಆಡಳಿತಾರೂಢರಲ್ಲಿತ್ತು. ಅದೇ ಕಾರಣಕ್ಕೆ, ವಿಧಾನಸೌಧದ ಎದುರಿನ ಸಮಾರಂಭಕ್ಕೆ ಜನ ಬನ್ನಿ ಎಂಬ ಆಹ್ವಾನವನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಯಿತು. ಚಿನ್ನಸ್ವಾಮಿ ಕ್ರೀಡಾಂಗಣದೊಳಗೆ ಹೋಗಿ ತಮ್ಮ ನೆಚ್ಚಿನ ಆಟಗಾರರನ್ನು ನೋಡಲಾಗುವುದಿಲ್ಲ; ವಿಧಾನಸೌಧ ಎದುರಾದರೆ ನೋಡಬಹುದು ಎಂಬ ಲೆಕ್ಕಾಚಾರ ಹಾಕಿದ ಅಭಿಮಾನಿಗಳು ಪ್ರವಾಹೋಪಾದಿಯಲ್ಲಿ ಹರಿದುಬಂದರು. ಅನಿರೀಕ್ಷಿತ ಹಾಗೂ ಅನಿಯಂತ್ರಿತ ಜನಸಾಗರವು ಸಮಸ್ಯೆ ಸೃಷ್ಟಿಯಾಗಲು ಕಾರಣವಾಯಿತು.
ನುಗ್ಗಿದ ಜನ: ಅಸಹಾಯಕ ಪೊಲೀಸರು
ಸರ್ಕಾರ ಹಾಗೂ ಆಯೋಜಕರಿಂದ ಒತ್ತಡ ಬರುತ್ತಿದ್ದಂತೆ ಅಣಿಯಾದ ಪೊಲೀಸ್ ಅಧಿಕಾರಿಗಳ ಬಂದೋಬಸ್ತ್‌ಗೆ ಸಿದ್ಧತೆ ನಡೆಸಿದರು.
‘ಬುಧವಾರ ಬೆಳಿಗ್ಗೆ ಹಿರಿಯ ಅಧಿಕಾರಿಗಳ ಜತೆಗೆ ಚರ್ಚಿಸಿ ಥಣಿಸಂದ್ರದಲ್ಲಿ ತರಬೇತಿಯಲ್ಲಿದ್ದ ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ಕರೆಸಿಕೊಳ್ಳಲಾಗಿತ್ತು. ಆದರೆ, ದೂರದ ಜಿಲ್ಲೆಗಳ ಸಿಬ್ಬಂದಿ ಹಾಗೂ ನಗರದಲ್ಲಿ ರಾತ್ರಿ ಕರ್ತವ್ಯದಲ್ಲಿದ್ದ ಸಿಬ್ಬಂದಿಯನ್ನು ಕರೆಸಿಕೊಳ್ಳಲು ಸಾಧ್ಯವಾಗಲಿಲ್ಲ. ಪೂರ್ವ ತಯಾರಿ ಇಲ್ಲದೇ ಹೀಗೆ ಕಾರ್ಯಕ್ರಮ ಆಯೋಜಿಸಿದ್ದರಿಂದಾಗಿ, ಜನರನ್ನು ನಿಯಂತ್ರಿಸುವ ಯಾವ ಸೂತ್ರ ಹಾಗೂ ಅಸ್ತ್ರವೂ ಇರಲಿಲ್ಲ’ ಎಂದು ಪೊಲೀಸರು ಹೇಳುತ್ತಾರೆ.
ವಿಧಾನಸೌಧದ ಎದುರು ನಡೆಯಲಿರುವ ಕಾರ್ಯಕ್ರಮಕ್ಕೆ ಹೋಗಿಯೇ ತೀರಬೇಕೆಂಬ ಹಟಕ್ಕೆ ಬಿದ್ದ ಅಭಿಮಾನಿಗಳು ಬಸ್ಸು, ಸ್ವಂತ ವಾಹನ, ದ್ವಿಚಕ್ರ, ಲಾರಿ ಹಿಡಿದು ದೌಡಾಯಿಸಿದರು. ಮೆಟ್ರೊ ರೈಲಂತೂ ಜನಸಾಗರವನ್ನೇ ತುಂಬಿಕೊಂಡು ವಿಧಾನಸೌಧ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದತ್ತ ಜನ ಸುನಾಮಿಯನ್ನೇ ಚಿಮ್ಮಿಸಿತು. ಸರಾಸರಿ 5 ನಿಮಿಷಕ್ಕೆ ಒಂದು ಬಾರಿ ಚಲಿಸುವ ಮೆಟ್ರೊ ಅಂದು, ಎರಡು ನಿಮಿಷಕ್ಕೆ ಒಂದರಂತೆ ಸಂಚರಿಸಿ ಜನರನ್ನು ಹೊತ್ತು ತಂದಿತು. ಇದರಿಂದಾಗಿ, ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ಮೆಟ್ರೊ ನಿಲ್ದಾಣದಲ್ಲಿ ನೂಕುನುಗ್ಗಲು ಉಂಟಾಯಿತು. ಜನದಟ್ಟಣೆಯನ್ನು ತಡೆಯಲು ಕೊನೆಗೆ ವಿಧಾನಸೌಧ, ಕಬ್ಬನ್ ಪಾರ್ಕ್ ನಿಲ್ದಾಣಗಳಲ್ಲಿ ಮೆಟ್ರೊ ನಿಲ್ಲಿಸುವುದಕ್ಕೆ ನಿರ್ಬಂಧ ಹೇರಲಾಯಿತು. ಆದರೂ ಸಾವಿರಾರು ಜನ ನುಗ್ಗಿದರು.
ವಿಧಾನಸೌಧದ ಎದುರು ಕಾರ್ಯಕ್ರಮ ನಡೆಯುವ ಹೊತ್ತಿನಲ್ಲೇ, ಚಿನ್ನಸ್ವಾಮಿ ಕ್ರೀಡಾಂಗಣದ ಕೆಲವು ಗೇಟ್‌ಗಳಲ್ಲಿ ಉಚಿತ ಪ್ರವೇಶವಿದೆ ಎಂಬ ಸುದ್ದಿ ಹರಿದಾಡಿತು. ಅಣತಿ ದೂರದಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣದ ಕಡೆ ಜನ ನುಗ್ಗಿದರು. ಕ್ರೀಡಾಂಗಣದ ಬಳಿ ಏಕಾಏಕಿ ಲಕ್ಷಾಂತರ ಜನರು ಜಮಾವಣೆಗೊಂಡರು. ಕ್ರೀಡಾಂಗಣದ ಒಳಕ್ಕೆ ತೆರಳಲು ಆಯೋಜಕರು ಸೂಕ್ತ ವ್ಯವಸ್ಥೆ ಮಾಡಿರಲಿಲ್ಲ. ಕೆಲವರು ಪೊಲೀಸರ ಮೇಲೆ ಚಪ್ಪಲಿ ಎಸೆದರು. ಗೇಟ್‌ವೊಂದರ ಬಳಿ ಸ್ಲ್ಯಾಬ್ ಕುಸಿದು ಬಿತ್ತು. ಜನರು ಗಾಬರಿಯಿಂದ ಓಡಿದರು. ಆಗ ಲಾಠಿ ಪ್ರಹಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲಿ ಸೇರಿದ್ದ ಜನರಲ್ಲಿ ಯುವಕ–ಯುವತಿಯೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಯಾರ ಮಾತನ್ನೂ ಕೇಳದೇ ಹೇಗಾದರೂ ಒಳ ನುಗ್ಗಲೇ ಬೇಕೆಂಬ ಹಪಹಪಿಯಲ್ಲಿದ್ದರು. ಅವರನ್ನು ನಿಯಂತ್ರಿಸಲು ಸಾಕಷ್ಟು ಪೊಲೀಸರು ಇರಲಿಲ್ಲ. ಹೀಗಾಗಿ, ಕಾಲ್ತುಳಿತ ಸಂಭವಿಸಿ 11 ಜನ ಪ್ರಾಣ ಕಳೆದುಕೊಂಡರು.
‘ಕ್ರೀಡಾಂಗಣದ ಪ್ರವೇಶಕ್ಕೆ ಉಚಿತ ಟಿಕೆಟ್ ನೀಡಲಾಗುವುದು ಎಂದು ಹೇಳಿದ್ದು, ವಿಕ್ಟರಿ ಪರೇಡ್ ವೇಳೆ ನೆಚ್ಚಿನ ಆಟಗಾರರನ್ನು ಸಮೀಪದ ನೋಡಬಹುದೆಂದು ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಂದ ಸಾಗರೋಪಾದಿಯಲ್ಲಿ ಅಭಿಮಾನಿಗಳು ಕ್ರೀಡಾಂಗಣದತ್ತ ಧಾವಿಸಿದ್ದರು.ವಿಧಾನಸೌಧದ ಎದುರು ಅಪಾರ ಸಂಖ್ಯೆಯ ಅಭಿಮಾನಿಗಳು ಕಾಣಿಸಬೇಕು ಎನ್ನುವ ಕಾರಣಕ್ಕೆ ಕೆಲವರು ಒತ್ತಡ ತಂದು ಕ್ರೀಡಾಂಗಣದ ಗೇಟ್‌ಗಳನ್ನು ಬಂದ್ ಮಾಡಿಸಿದ್ದರು. ಮಧ್ಯಾಹ್ನ 3 ಗಂಟೆಯ ನಂತರ ಒಂದೊಂದೇ ಗೇಟ್ ತೆರೆದು ಪ್ರವೇಶ ನೀಡಲಾಯಿತು. ಆ ವೇಳೆಗೆ ಹೆಚ್ಚಿನ ಜನರು ಜಮಾವಣೆ ಆಗಿದ್ದರು. ಅದರಿಂದ ತಳ್ಳಾಟ, ನೂಕುನುಗ್ಗಲು ನಡೆಯಿತು. ಮತ್ತೆ ಗೇಟ್ ಬಂದ್ ಮಾಡಿದ್ದು, ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿ ಗೇಟ್ ಅನ್ನು ತಳ್ಳಿದರು. ಕೆಲವರು ಕಾಂಪೌಂಡ್ ಹತ್ತಿದರು. ಕೆಲವೇ ನಿಮಿಷಗಳ ಅಂತರದಲ್ಲಿ ಗೇಟ್ ನಂಬರ್ 6, 7, 2, 2ಎ, 17, 18, 21, 16ನೇ ಗೇಟ್‌ಗಳಲ್ಲಿ ಕಾಲ್ತುಳಿತ ಸಂಭವಿಸಿತು’ ಎಂದು ಸ್ಥಳದಲ್ಲಿದ್ದ ಅಧಿಕಾರಿಯೊಬ್ಬರು ಘಟನೆಯ ಬಗ್ಗೆ ವಿವರಿಸಿದರು.
‘ಆರ್‌ಸಿಬಿ ವಿಜಯೋತ್ಸವ ಬಗ್ಗೆ ಅಧಿಕೃತ ಟ್ವಿಟರ್ ಮತ್ತು ಜಾಲತಾಣದಲ್ಲಿ ಪೋಸ್ಟ್ ನೋಡಿದೆ. ಟಿಕೆಟ್ ಇಲ್ಲದೆಯೂ ಪ್ರವೇಶ ನೀಡುವ ಮಾಹಿತಿ ಹಂಚಿಕೊಳ್ಳಲಾಗಿತ್ತು. ಹಾಗಾಗಿ, ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್ ನಂ.6ರ ಬಳಿ ಬಂದಾಗ ಜನಸಂದಣಿ ಇತ್ತು. ಸಂಜೆ 5 ಗಂಟೆಗೆ ಗೇಟ್ ತೆರೆಯುತ್ತಿದ್ದಂತೆ ಜನರು ಒಮ್ಮೆಲೆ ಕ್ರೀಡಾಂಗಣ ಪ್ರವೇಶಿಸಲು ಯತ್ನಿಸಿದರು. ಗೇಟ್ ಕಿರಿದಾಗಿತ್ತು. ಒಳ ಪ್ರವೇಶಿಸುವ ವೇಳೆ ಹಲವರು ಎಡವಿಬಿದ್ದರು. ನಂತರ, ಅವರನ್ನು ತುಳಿದುಕೊಂಡೇ ಹೋದರು. ಬ್ಯಾರಿಕೇಡ್ ನನ್ನ ಬಲಗಾಲಿನ ಮೇಲೆ ಬಿತ್ತು. ಆಟೊದಲ್ಲಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದೆ’ ಎಂದು ಗಾಯಾಳು ವೇಣು ಘಟನೆ ಬಗ್ಗೆ ವಿವರಿಸಿದರು.
‘ಆರ್‌ಸಿಬಿ ತಂಡದ ಆಟಗಾರರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಗುವುದು ಎಂದು ಅಧಿಕೃತ ಟ್ವಿಟರ್ ಮತ್ತು ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿತ್ತು. ಚಿನ್ನಸ್ವಾಮಿ ಗೇಟ್ ನಂ.17ರ ಬಳಿ ಬಂದಾಗ ಸಾವಿರಾರು ಜನರು ಸೇರಿದ್ದರು. ಮಧ್ಯಾಹ್ನ 3.10ಕ್ಕೆ ಗೇಟ್ ತೆರೆಯುತ್ತಿದ್ದಂತೆ ನುಗ್ಗಲು ಯತ್ನಿಸಿದರು. ಗೇಟ್ ಕಿರಿದಾಗಿದ್ದರಿಂದ ಒಳ ಪ್ರವೇಶಿಸುವಾಗ ಉಂಟಾದ ನೂಕು–ನುಗ್ಗಲಿನಲ್ಲಿ ಹಲವರು ಕೆಳಗೆ ಬಿದ್ದರು. ಅವರನ್ನು ತುಳಿದುಕೊಂಡು ಹೋದರು. ನನ್ನ ಬಲಗೈ ಮುರಿದಿದೆ. ಅಪರಿಚಿತರು ನನ್ನನ್ನು ಆಸ್ಪತ್ರೆಗೆ ಕರೆತಂದು ದಾಖಲಿಸಿದರು’ ಎಂದು ಗಾಯಾಳು ರೋಲಾನ್ ಗೋಮ್ಸ್ ಹೇಳಿದರು.
ಕ್ರಿಕೆಟ್‌ನ ಗಂಧ ಗಾಳಿ ಗೊತ್ತಿಲ್ಲದ ಭಾರದ್ವಾಜ್ ತನ್ನ ಸ್ನೇಹಿತರ ಜತೆ ಆಟಗಾರರನ್ನು ನೋಡಲು ಬಂದು ಜನಸಂದಣಿಯಲ್ಲಿ ಸಿಲುಕಿ ಪರದಾಡಿದರು. ‘ನನಗೆ ಕ್ರಿಕೆಟ್ ಆಸಕ್ತಿ ಇಲ್ಲ. ಸ್ನೇಹಿತರ ಒತ್ತಾಯಕ್ಕೆ ಆಟಗಾರರನ್ನು ನೋಡಲು ಬಂದೆ. ಆದರೆ, ಜನಸಂದಣಿಯಲ್ಲಿ ಎಲ್ಲರೂ ಸಿಲುಕಿಕೊಂಡೆವು. ಉಸಿರಾಡಲು ಕಷ್ಟವಾಯಿತು. ಹೇಗೋ ಹೊರ ಬಂದು ಜೀವ ಉಳಿಸಿಕೊಂಡೆವು’ ಎಂದು ನಿಟ್ಟುಸಿರುಬಿಟ್ಟರು.
ಸಮಯಾವಕಾಶ ಕೊಟ್ಟು ಕಾರ್ಯಕ್ರಮಕ್ಕೆ ಬಂದೋಬಸ್ತ್‌ಗೆ ಬೇಕಾದ ಬ್ಯಾರಿಕೇಡ್ ಅಳವಡಿಕೆ, ಆಂಬುಲೆನ್ಸ್, ಆರೋಗ್ಯ ಸಿಬ್ಬಂದಿ ಎಲ್ಲರನ್ನೂ ಸೇರಿಸಬಹುದಿತ್ತು. ಏಕಾಏಕಿ ಸಮಾರಂಭ ಆಯೋಜನೆಗೊಂಡಿದ್ದರಿಂದಾಗಿ, ಅಕ್ಕಪಕ್ಕದ ಜಿಲ್ಲೆಗಳಿಂದ ಪೊಲೀಸರನ್ನು ಕರೆಸಲು ಸಾಧ್ಯವಿತ್ತು. ತರಬೇತಿಯಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ಪರಿಸ್ಥಿತಿ ನಿಭಾಯಿಸುವ ತಂತ್ರಗಳೇ ಗೊತ್ತಿರಲಿಲ್ಲ. ಇದು ಜನಸಾಗರ ನುಗ್ಗಲು ದಾರಿ ಮಾಡಿಕೊಟ್ಟಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಸರ್ಕಾರ
ಕಾರ್ಯಕ್ರಮಕ್ಕೆ ಅಗತ್ಯ ಅನುಮತಿ ದೊರೆತಿದೆಯೇ ಮತ್ತು ಸಿದ್ದತೆ ಮಾಡಿಕೊಳ್ಳಲಾಗಿದೆಯೇ ಎಂಬುದನ್ನು ಪರಿಗಣಿಸದೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಕಾರ್ಯಕ್ರಮ ಘೋಷಿಸಿದ್ದು
ಆಟಗಾರರನ್ನು ಸ್ವಾಗತಿಸಲು ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಸ್ವತಃ ಉಪ ಮುಖ್ಯಮಂತ್ರಿ ತೆರಳಿ, ಇಡೀ ಬೆಳವಣಿಗೆ ಸುದ್ದಿ ವಾಹಿನಿಗಳಲ್ಲಿ ನೇರ ಪ್ರಸಾರವಾಗಲು ಕಾರಣವಾಗಿದ್ದು
ಲಕ್ಷಾಂತರ ಜನ ಸೇರಿದ್ದರೂ ಭದ್ರತೆ ಹೆಚ್ಚಿಸಲು ಅಥವಾ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಲು ಕ್ರಮ ತೆಗೆದುಕೊಳ್ಳದೇ ಇದ್ದುದು
ಸಮಾರಂಭಕ್ಕೆ ಪೊಲೀಸರಿಂದ ಪೂರ್ವಸಿದ್ಧತೆ ಆಗಿರಲಿಲ್ಲ. ವಿಧಾನಸೌಧ ಹಾಗೂ ಕ್ರೀಡಾಂಗಣದ ಬಳಿ 2.5 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ಆದರೆ, ಎರಡೂ ಕಡೆ ಇದ್ದ ಸಿಬ್ಬಂದಿ 1,318 ಮಾತ್ರ
ಜನರು ರಸ್ತೆಗೆ ಇಳಿಯುವುದನ್ನು ತಡೆಯಲು ಮತ್ತು ಸರತಿಯಲ್ಲಿ ನಿಲ್ಲುವಂತೆ ಮಾಡಲು ಎಲ್ಲೆಡೆ ಬ್ಯಾರಿಕೇಡ್ ಹಾಕಿರಲಿಲ್ಲ
ತರಬೇತಿ ಹಂತದಲ್ಲಿದ್ದ ಸಿಬ್ಬಂದಿಯನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಂಗಣದ ಬಳಿ ನಿಯೋಜನೆ ಮಾಡಲಾಗಿತ್ತು
ಸರ್ಕಾರ ಮತ್ತು ಸಂಬಂಧಿತ ಪ್ರಾಧಿಕಾರಗಳಿಂದ ಅನುಮತಿ ದೊರೆಯುವ ಮುನ್ನವೇ ಮೆರವಣಿಗೆ, ವಿಜಯೋತ್ಸವ ಕಾರ್ಯಕ್ರಮ ಘೋಷಿಸಿದ್ದು
ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಎಷ್ಟು ಜನಕ್ಕೆ ಅವಕಾಶವಿದೆ ಎಂದು ಬಹಿರಂಗಪಡಿಸದೇ ಇದ್ದುದು
ಕ್ರೀಡಾಂಗಣ ಪ್ರವೇಶಕ್ಕೆ ಉಚಿತ ಪಾಸ್ ಎಂದು ಘೋಷಿಸಿದ್ದು ಮತ್ತು ನೋಂದಣಿ ಲಿಂಕ್ ಕೆಲಸ ಮಾಡದೇ ಇದ್ದುದು
ಗೃಹ ಸಚಿವ ಜಿ.ಪರಮೇಶ್ವರ ಅವರು ತೆರೆದ ವಾಹನದಲ್ಲಿ ಆಟಗಾರರ ಮೆರವಣಿಗೆಗೆ ಅವಕಾಶ ನೀಡುವುದಿಲ್ಲ ಎಂದು ಖಚಿತಪಡಿಸಿದ ನಂತರ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದು
ತೆರೆದ ವಾಹನದಲ್ಲಿ ಮೆರವಣಿಗೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ‘ಎಕ್ಸ್’ನಲ್ಲಿ ಪೋಸ್ಟ್ ಹಾಕಿದ್ದು
ಆಟಗಾರರು ಎಲ್ಲಿ ಬಂದಿಳಿದರು, ಯಾವ ಹಾದಿಯಲ್ಲಿದ್ದಾರೆ, ಎಲ್ಲಿಗೆ ಹೋಗುತ್ತಿದ್ದಾರೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊಗಳನ್ನು ಹಾಕಿದ್ದು, ಉಚಿತ ಪಾಸ್‌ಗೆ ನೋಂದಣಿ ಮಾಡಿಕೊಳ್ಳಲಾಗದ ಎಲ್ಲರೂ ಕ್ರೀಡಾಂಗಣದತ್ತ ಧಾವಿಸಿ ಬಂದಿದ್ದು
ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ, ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್, ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಎಚ್.ತೆಕ್ಕಣ್ಣವರ, ಕಬ್ಬನ್ ಪಾರ್ಕ್ ಉಪವಿಭಾಗದ ಎಸಿಪಿ ಸಿ.ಬಾಲಕೃಷ್ಣ ಸೇರಿ ನಾಲ್ವರು ಐಪಿಎಸ್ ಅಧಿಕಾರಿಗಳು ಮತ್ತು ಕಬ್ಬನ್ ಪಾರ್ಕ್ ಇನ್‌ಸ್ಪೆಕ್ಟರ್ ಎ.ಕೆ.ಗಿರೀಶ್ ಅಮಾನತು
ಕಾರ್ಯಕ್ರಮ ಆಯೋಜಿಸಲು ಒತ್ತಡ ತಂದಿದ್ದರು ಎಂಬ ಆರೋಪ ಬಂದ ಬೆನ್ನಲ್ಲೇ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು ಅವರಿಗೆ ಆ ಹುದ್ದೆಯಿಂದ ಬಿಡುಗಡೆ
ಗುಪ್ತಚರ ವೈಫಲ್ಯ ಕಾರಣ ಎಂಬ ಆರೋಪದಿಂದ ಗುಪ್ತಚರ ವಿಭಾಗದ ಮುಖ್ಯಸ್ಥ ಹೇಮಂತ್ ನಿಂಬಾಳ್ಕರ್ ಎತ್ತಂಗಡಿ
11 ಮಂದಿ ಸಾವು
64 ಮಂದಿಗೆ ಗಾಯ
5 ಅಮಾನತುಗೊಂಡ ಪೊಲೀಸ್ ಅಧಿಕಾರಿಗಳು
1. ಬೆಂಗಳೂರು ಜಿಲ್ಲಾಧಿಕಾರಿ ಜಗದೀಶ್ ನೇತೃತ್ವದಲ್ಲಿ ಮ್ಯಾಜಿಸ್ಟೀರಿಯಲ್ ತನಿಖೆ
2. ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ.ಕುನ್ಹ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ
3. ಕೆಎಸ್‌ಸಿಎ, ಆರ್‌ಸಿಬಿ, ಡಿಎನ್ಎ ಸಂಸ್ಥೆಗಳ ವಿರುದ್ಧ ಸಿಐಡಿ ತನಿಖೆ
4. ಕಬ್ಬನ್ ಪಾರ್ಕ್ ಪೊಲೀಸರ ತನಿಖೆ
ಒಂದೆಡೆ ನಿರ್ದಿಷ್ಟ ವಯೋಮಾನದವರು ಗುಂಪಾಗಿ ಸೇರಿದಾಗ ನೇರವಾಗಿ ಅಥವಾ ಪರೋಕ್ಷವಾಗಿ ಒಬ್ಬರಿಗೊಬ್ಬರು ಪ್ರಭಾವಿಸುತ್ತಾರೆ. ಇದನ್ನು ಸಮೂಹ ಮನಃಸ್ಥಿತಿ ಎನ್ನುತ್ತಾರೆ. ಯಾವುದೇ ಒಬ್ಬ ವ್ಯಕ್ತಿ ದುಡುಕಿನ ನಿರ್ಧಾರ ಕೈಗೊಂಡರೆ ಅದು ಉಳಿದವರ ಮನಃಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರಿ, ಅವರು ಸಹ ಅದೇ ಹಾದಿಯಲ್ಲಿ ಸಾಗುವ ಸಾಧ್ಯತೆ ಇರುತ್ತದೆ. ಈ ಮನಃಸ್ಥಿತಿ ಯುವಜನರಲ್ಲಿ ಇತ್ತೀಚೆಗೆ ಸಾಮಾನ್ಯವಾಗಿದ್ದು, ಕೆಲ ಸಂದರ್ಭದಲ್ಲಿ ವಿಕೋಪಕ್ಕೆ ಹೋಗಿ ಅವಘಡಗಳು ಸಂಭವಿಸುತ್ತಿವೆ.
ಅತಿಯಾದ ಉತ್ಸಾಹದಿಂದಲೂ ಮನಸ್ಸಿನ ಮೇಲಿನ ನಿಯಂತ್ರಣ ತಪ್ಪಲಿದೆ. ಗುಂಪಾಗಿ ಸೇರಿದಾಗ ಅತಿಯಾದ ಕ್ರಿಯಾಶೀಲತೆ, ಆಕ್ರಮಣಕಾರಿ ಮನೋಭಾವ ವ್ಯಕ್ತವಾಗುವ ಸಾಧ್ಯತೆಯೂ ಇರುತ್ತದೆ.
ಈಗ ಪ್ರವೃತ್ತಿ ಬದಲಾಗುತ್ತಿದೆ. ಹಿಂದೆ ತಾರೆಗಳ ನಡೆ–ನುಡಿಯನ್ನು ಅನುಸರಿಸುತ್ತಿದ್ದರು. ಈಗ ಅವರನ್ನು ನೋಡಲು ಮುಗಿಬೀಳುವವರ ಸಂಖ್ಯೆ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣಗಳು ನೀಡುವ ಪ್ರಚೋದನೆಗಳು ಇದಕ್ಕೆ ಕಾರಣ. ಪೋಷಕರು ಮಕ್ಕಳಲ್ಲಿನ ಬದಲಾವಣೆಯನ್ನು ಬಾಲ್ಯದಿಂದಲೇ ಗುರುತಿಸಿ, ಸೂಕ್ತ ಮಾರ್ಗದರ್ಶನ ನೀಡಬೇಕು. ಇದರಿಂದ ಮುಂದೆ ಆಗಬಹುದಾದ ಅನಾಹುತ ತಡೆಯಲು ಸಾಧ್ಯ.
–ಎಚ್.ಎನ್.ಶಶಿಧರ್, ನಿಮ್ಹಾನ್ಸ್‌ನ ಸ್ಥಾನಿಕ ವೈದ್ಯಾಧಿಕಾರಿ (ಆರ್‌ಎಂಒ)
ಸಾಮೂಹಿಕ ವೈಫಲ್ಯದಿಂದಾಗಿ ದುರಂತ ಸಂಭವಿಸಿದೆ. ನಿರ್ದಿಷ್ಟವಾಗಿ ಪೊಲೀಸರನ್ನು ಹೊಣೆ ಮಾಡಿ, ಅಮಾನತು ಮಾಡಲಾಗಿದೆ. ಪ್ರಾಥಮಿಕ ವರದಿಯ ಬಗ್ಗೆ ಯಾವ ಆದೇಶ ಮಾಡದೇ ಏಕಾಏಕಿ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿರುವುದು ಅನ್ಯಾಯ. ನಗರ ಪೊಲೀಸ್ ಕಮಿಷನರ್ ಅವರು ಸಮಾರಂಭಕ್ಕೆ ಅನುಮತಿ ನಿರಾಕರಿಸಿರುವುದನ್ನು ಲಿಖಿತವಾಗಿ ನೀಡಿಲ್ಲ ಎಂದು ನೀಡಿರುವ ಕಾರಣ ಸರಿಯಲ್ಲ. ಹಾಗಿದ್ದರೆ ಸಮಾರಂಭಕ್ಕೆ ಅನುಮತಿ ಕೊಟ್ಟಿರುವ ದಾಖಲೆ ಎಲ್ಲಿದೆ? ಆರ್‌ಸಿಬಿ ಆಡಳಿತ ಮಂಡಳಿ ತಪ್ಪು ಮಾಡಿದೆ. ಆದರೆ ಪೊಲೀಸರನ್ನು ಹರಕೆಯ ಕುರಿ ಮಾಡಲಾಗಿದೆ.
ಆರ್‌ಸಿಬಿ ಗೆಲುವನ್ನು ಇಡೀ ನಗರವೇ ಆಚರಿಸಿದೆ. ಪೊಲೀಸರು ಬೆಳಗಿನ ಜಾವದವರೆಗೂ ಕರ್ತವ್ಯ ನಿರ್ವಹಿಸಿದ್ದಾರೆ. ಮತ್ತೆ ವಿಜಯೋತ್ಸವ ಸಮಾರಂಭಕ್ಕೆ ಅವರನ್ನು ಕರೆಸಿಕೊಳ್ಳಲಾಗಿದೆ. ಆರ್‌ಸಿಬಿ ತಂಡ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದೆ. ದೊಡ್ಡ ಸಮಾರಂಭ ಆಯೋಜಿಸಲು ಸಾಕಷ್ಟು ಸಮಯ, ಹೆಚ್ಚಿನ ಸಿಬ್ಬಂದಿ ಅಗತ್ಯ. ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಜನರು ಸಾಗರೋಪಾದಿಯಲ್ಲಿ ಬಂದಿದ್ದರು. ಜನಸಂಖ್ಯೆಗೆ ತಕ್ಕಂತೆ ಬಂದೋಬಸ್ತ್‌ಗೆ ಅಗತ್ಯ ಸಿಬ್ಬಂದಿ ಇರಲಿಲ್ಲ. ಶನಿವಾರ ಅಥವಾ ಭಾನುವಾರ ಸಮಾರಂಭ ಮಾಡಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ.
-ಎಸ್.ಟಿ. ರಮೇಶ್, ರಾಜ್ಯ ನಿವೃತ್ತ ಪೊಲೀಸ್ ಮಹಾನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.