ADVERTISEMENT

‘ಸ್ವಚ್ಛ ನಗರಿ’ಯಲ್ಲೂ ತಪ್ಪದ ಪ್ಲಾಸ್ಟಿಕ್ ಕಾಟ

ಮಹಮ್ಮದ್ ನೂಮಾನ್
Published 18 ಮೇ 2019, 20:04 IST
Last Updated 18 ಮೇ 2019, 20:04 IST
   

ಮೈಸೂರು: ‘ಸ್ವಚ್ಛ ಸರ್ವೇಕ್ಷಣ್‌–2019’ ರಲ್ಲಿ ರಾಜ್ಯದ ನಂ.1 ಸ್ವಚ್ಛನಗರಿ ಹಾಗೂ ದೇಶದ ಮೂರನೇ ಸ್ವಚ್ಛನಗರಿ ಎನಿಸಿಕೊಂಡಿರುವ ಮೈಸೂರು ಕೂಡ ಪ್ಲಾಸ್ಟಿಕ್‌ ಸಮಸ್ಯೆಯಿಂದ ಮುಕ್ತವಾಗಿಲ್ಲ. ಆದರೆ ರಾಜ್ಯದ ಇತರ ನಗರಗಳಿಗೆ ಹೋಲಿಸಿದರೆ ಪಾರಂಪರಿಕ ನಗರಿಯಲ್ಲಿ ಪ್ಲಾಸ್ಟಿಕ್‌ ಬಳಕೆ ಕಡಿಮೆ.

ಕಳೆದ ಎರಡು ತಿಂಗಳಿನಿಂದ ಅಧಿಕಾರಿ ಗಳು ಪಾಲಿಕೆಯ ಎಲ್ಲ 65 ವಾರ್ಡ್‌ಗಳಲ್ಲಿ ವ್ಯಾಪಕ ದಾಳಿ ನಡೆಸುತ್ತಿದ್ದಾರೆ. ನೂರಾರು ಕೆ.ಜಿ. ಪ್ಲಾಸ್ಟಿಕ್‌ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ₹ 40 ಸಾವಿರ ದಂಡ ವಿಧಿಸಿದ್ದಾರೆ. ಪಾಲಿಕೆಯು 2017ರ ಮಾರ್ಚ್‌ನಿಂದ 2019ರ ಮಾರ್ಚ್‌ವರೆಗೆ ₹ 6.40 ಲಕ್ಷ ದಂಡ ವಸೂಲಿ ಮಾಡಿದೆ.

2018 ರಲ್ಲಿ ಒಟ್ಟು 15 ಸಾವಿರ ಕೆ.ಜಿ. ಪ್ಲಾಸ್ಟಿಕ್‌ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಮಾರ್ಚ್‌ ತಿಂಗಳೊಂದರಲ್ಲೇ 11 ಸಾವಿರ ಕೆ.ಜಿ. ಹಾಗೂ ಜುಲೈನಲ್ಲಿ 3,680 ಕೆ.ಜಿ ಪ್ಲಾಸ್ಟಿಕ್‌ ಜಪ್ತಿ ಮಾಡಲಾಗಿದೆ.

ADVERTISEMENT

ಅಧಿಕಾರಿಗಳು ದಾಳಿ ನಡೆಸುತ್ತಾ ಹೋದಂತೆ ಮತ್ತೊಂದು ಕಡೆ ಪ್ಲಾಸ್ಟಿಕ್ ವಸ್ತಗಳ ಬಳಕೆ, ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಈ ಹಿಂದೆ ರಾಜಾರೋಷವಾಗಿ ಮಾರಾಟ ನಡೆಯುತ್ತಿದ್ದರೆ, ಪಾಲಿಕೆಯು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳತೊಡಗಿದ ಬಳಿಕ ಕದ್ದುಮುಚ್ಚಿ ನಡೆಯುತ್ತಿದೆ. ಫಾಸ್ಟ್‌ ಫುಡ್‌ ಮತ್ತು ರಸ್ತೆಬದಿ ವ್ಯಾಪಾರಿಗಳು ಆಹಾರವನ್ನು ಪ್ಲಾಸ್ಟಿಕ್‌ ಚೀಲಗಳಲ್ಲಿ ಕಟ್ಟಿಕೊಡುವರು. ಅಂತಹ ವ್ಯಾಪಾರಿಗಳನ್ನು ಗುರುತಿಸಿ ದಂಡ ವಿಧಿಸುತ್ತಿದ್ದೇವೆ ಎನ್ನುತ್ತಾರೆ ಪಾಲಿಕೆ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜು.

ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ತಯಾರಿಸುವ ಯಾವುದೇ ಕಾರ್ಖಾನೆ ಮೈಸೂರಿನಲ್ಲಿ ಇಲ್ಲ. ನಗರಕ್ಕೆ ಮುಖ್ಯವಾಗಿ ಪ್ಲಾಸ್ಟಿಕ್‌ ವಸ್ತುಗಳು ಬೆಂಗಳೂರಿನಿಂದ ಪೂರೈಕೆಯಾಗುತ್ತಿವೆ. ಪ್ಲಾಸ್ಟಿಕ್‌ ವಸ್ತುಗಳನ್ನು ಹೇರಿಕೊಂಡ ಲಾರಿಗಳು ಸುಲಭವಾಗಿ ನಗರ ಪ್ರವೇಶಿಸುತ್ತವೆ. ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಾದ ತಪಾಸಣೆ ನಡೆಸಿದರೆ ಇದನ್ನು ತಡೆಗಟ್ಟಬಹುದು.

ಇವನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.