ADVERTISEMENT

ಒಳನೋಟ | ‘ಶುದ್ಧ ನೀರು: ಮರೀಚಿಕೆ’

ಪರ್ಯಾಯ ತಂತ್ರಜ್ಞಾನ ಅಳವಡಿಕೆಗೆ ಅಡೆತಡೆ l ಅಕ್ರಮಗಳಿಂದ ಮುಚ್ಚುತ್ತಿರುವ ಘಟಕ

ಎಸ್.ರವಿಪ್ರಕಾಶ್
Published 21 ನವೆಂಬರ್ 2020, 21:02 IST
Last Updated 21 ನವೆಂಬರ್ 2020, 21:02 IST
ನೀರು ಶುದ್ದೀಕರಣ - ಪ್ರಾತಿನಿಧಿಕ ಚಿತ್ರ
ನೀರು ಶುದ್ದೀಕರಣ - ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಚಂದ್ರ ಮತ್ತು ಮಂಗಳ ಗ್ರಹಗಳಲ್ಲಿ ನೀರಿನ ಪತ್ತೆಗಾಗಿ ತಂತ್ರಜ್ಞಾನವನ್ನು ರೂಪಿಸುವ ಬುದ್ಧಿಮತ್ತೆ ನಮ್ಮಲ್ಲಿದೆ. ಜಗತ್ತಿನ ಹತ್ತು ಹಲವು ಕ್ಷೇತ್ರಗಳ ಅತ್ಯಂತ ಕ್ಲಿಷ್ಟ ಸಮಸ್ಯೆಗಳ ಪರಿಹಾರಕ್ಕಾಗಿ ಕೆಲಸ ಮಾಡುತ್ತಿರುವ ಜಾಗತಿಕ ಮಟ್ಟದ ‘ಭಾರತೀಯ ವಿಜ್ಞಾನ ಸಂಸ್ಥೆ’ಯೂ (ಐಐಎಸ್‌ಸಿ) ನಮ್ಮ ರಾಜಧಾನಿಯಲ್ಲೇ ಇದೆ. ಆದರೆ, ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಅತ್ಯಾಧುನಿಕ ತಂತ್ರಜ್ಞಾನವೊಂದನ್ನು ಅಳವಡಿಸಿಕೊಳ್ಳಲಾಗದ ದಯನೀಯ ಸ್ಥಿತಿ, ತಂತ್ರಜ್ಞಾನದಲ್ಲಿ ಮುಂದಿರುವ ಕರ್ನಾಟಕದ್ದಾಗಿದೆ.

ಇದಕ್ಕೆ ವಿಜ್ಞಾನಿಗಳು ಕಾರಣರೇ ಅಥವಾ ನಮ್ಮನ್ನು ಆಳುವ ರಾಜಕಾರಣಿಗಳು, ಅಧಿಕಾರಿಗಳು ಕಾರಣರೇ? ವಿಜ್ಞಾನಿಗಳ ಮೇಲೆ ಆರೋಪ ಹೊರಿಸಲು ಸಾಧ್ಯವಿಲ್ಲ. ಏಕೆಂದರೆ, ಭಾರತೀಯ ವಿಜ್ಞಾನ ಸಂಸ್ಥೆ, ದೇಶದ ವಿವಿಧ ಐಐಟಿಗಳು ಮತ್ತು ಐಸೆರ್‌ಗಳಲ್ಲಿರುವ ವಿಜ್ಞಾನಿಗಳು ನೀರನ್ನು ಶುದ್ಧೀಕರಿಸುವುದಕ್ಕೆ ಸಂಬಂಧಿಸಿದಂತೆ ಹಲವು ಸರಳ ಮತ್ತು ಕಡಿಮೆ ವೆಚ್ಚದ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಆದರೆ, ಅಧಿಕಾರಿಗಳು ಆ ತಂತ್ರಜ್ಞಾನಗಳತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ.

ಪ್ರಧಾನಿ ಮೋದಿ ಅವರ ‘ಆತ್ಮನಿರ್ಭರ ಭಾರತ್’ ಕೂಗು ಅಧಿಕಾರಿಗಳು, ರಾಜಕಾರಣಿಗಳ ಕಿವಿಗೆ ಬೀಳುತ್ತಿಲ್ಲ. ಇದರ ಪರಿಣಾಮ ರಾಜ್ಯದ ಗ್ರಾಮಾಂತರ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಕನಸಾಗಿಯೇ ಉಳಿದಿದೆ. ಫ್ಲೋರೈಡ್‌, ನೈಟ್ರೇಟ್‌, ಆರ್ಸೆನಿಕ್‌ ಸೇರಿ ವಿವಿಧ ಬಗೆಯ ರಾಸಾಯನಿಕಗಳು ಮತ್ತು ಇತರ ಭಾರ ಲೋಹಗಳಿಂದ ಕೂಡಿದ ನೀರನ್ನು ಕುಡಿಯುವ ಪರಿಣಾಮ, ಜನರು ದೈಹಿಕವಾಗಿ ಮತ್ತು ಮಾನಸಿಕವಾಗಿ ವಿವಿಧ ರೀತಿಯ ಗಂಭೀರ ಸ್ವರೂಪದ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.

ADVERTISEMENT

ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಪಾರ್ಶ್ವವಾಯು!: ಕುಡಿಯಲು ಶುದ್ಧ ನೀರು ಒದಗಿಸಬೇಕೆಂಬ ಉದ್ದೇಶದಿಂದ ಆರಂಭಿಸಲಾದ ‘ಶುದ್ಧ ಕುಡಿಯುವ ನೀರಿನ ಘಟಕಗಳ ಯೋಜನೆ’ ಈಗ ಹಗರಣಗಳ ಮತ್ತು ಕಮಿಷನ್‌ ಹೊಡೆಯುವ ಯೋಜನೆಗಳಾಗಿ ಪರಿಣಮಿಸಿವೆ. ರಾಜ್ಯದ ಸಾಕಷ್ಟು ಕಡೆ ಘಟಕಗಳು ಕೆಟ್ಟು ನಿಂತಿದ್ದು, ಹನಿ ನೀರೂ ಬರುತ್ತಿಲ್ಲ ಎಂಬ ಆರೋಪ ವಿಧಾನಮಂಡಲ ಅಧಿವೇಶನದಲ್ಲೇ ಮೊಳಗಿತ್ತು.

17,154 ಶುದ್ಧೀಕರಣ ಘಟಕಗಳ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ಇಪ್ಸಾನ್‌ ರಿಸರ್ಚ್‌ ಪ್ರೈ.ಲಿ ಕಂಪನಿಯಿಂದ ಸಮೀಕ್ಷೆ ನಡೆಸಲಾಗುತ್ತಿದೆ. ವರದಿ ಬಂದ ಬಳಿಕ ವಿಧಾನಮಂಡಲದಲ್ಲಿ ಮಂಡಿಸುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದರು.

ರಾಜ್ಯದಲ್ಲಿ 18,448 ನೀರು ಶುದ್ಧೀಕರಣ ಘಟಕಗಳಿಗೆ ಅನುಮೋದನೆ ಆಗಿದೆ. ಈ ಪೈಕಿ 17,803 ಘಟಕ ಅಳವಡಿಸಲಾಗಿದೆ. 645 ಘಟಕ ಅಳವಡಿಕೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಒಟ್ಟು 17,679 ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂದು ಗ್ರಾಮೀಣಾಭಿವೃದ್ದಿ ವಾರ್ಷಿಕ ವರದಿ ಹೇಳಿದೆ. ಆದರೆ, ಸುಮಾರು 900 ಘಟಕಗಳು ಸ್ಥಗಿತಗೊಂಡಿವೆ. ಒಂದು ಸಾವಿರಕ್ಕೂ ಹೆಚ್ಚು ಘಟಕಗಳು ನಿರ್ವಹಣೆಯ ಸಮಸ್ಯೆ ಎದುರಿಸುತ್ತಿವೆ.ವಾಸ್ತವದಲ್ಲಿ 1,134ಕ್ಕೂ ಹೆಚ್ಚು ಘಟಕಗಳು ಕೆಟ್ಟು ನಿಂತಿವೆ.

ಅಂದ ಹಾಗೆ, ಸರ್ಕಾರಕ್ಕೆ ಶುದ್ಧೀಕರಣ ಘಟಕಗಳನ್ನು ಪೂರೈಸುತ್ತಿರುವುದು ಮೂರೇ ಕಂಪನಿಗಳು. ಹಲವು ವರ್ಷಗಳಿಂದಲೂ ಅತಿ ಪುರಾತನ ತಂತ್ರಜ್ಞಾನಕ್ಕೇ ಸರ್ಕಾರ ಜೋತು ಬಿದ್ದಿದೆ.

ಹೊಸ ತಂತ್ರಜ್ಞಾನಗಳತ್ತ ಏಕೆ ಕಣ್ಣು ಹಾಯಿಸುತ್ತಿಲ್ಲ? ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಆಧುನಿಕ, ಸರಳ ಮತ್ತು ಕಡಿಮೆ ವೆಚ್ಚದ ತಂತ್ರಜ್ಞಾನಗಳಿಗೆ ಮಾನ್ಯತೆ ನೀಡಲು ಮೀನ–ಮೇಷ ಎಣಿಸುತ್ತಿರುವುದೇ ಇದಕ್ಕೆ ಮುಖ್ಯಕಾರಣ.

ಪರ್ಯಾಯ ತಂತ್ರಜ್ಞಾನ ಇಲ್ಲವೇ?

ಕುಡಿಯುವ ನೀರು ಶುದ್ಧೀಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಮುಂದುವರಿದ ತಂತ್ರಜ್ಞಾನಗಳಿವೆ. ಆದರೆ, ಸರ್ಕಾರದ ಚಿಂತನೆಯಲ್ಲಿ ಬದಲಾವಣೆ ಆಗಿಲ್ಲ. ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಜನರಿಗೆ ಉತ್ತಮ ಕುಡಿಯುವ ನೀರು ಒದಗಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ. ಇದರ ಹಿಂದೆ ಮತ್ತು ಹಳೇ ತಂತ್ರಜ್ಞಾನವನ್ನು ಮುಂದುವರಿಸಿಕೊಂಡು ಹೋಗುವ ಬಗ್ಗೆ ಪ್ರಬಲ ‘ಲಾಬಿ’ಗಳು ಕೆಲಸ ಮಾಡುತ್ತಿವೆ ಎನ್ನುತ್ತವೆ ಇಲಾಖೆಯ ಮೂಲಗಳು.

ಕುಡಿಯುವ ನೀರಿನ ಶುದ್ಧೀಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ವಿಜ್ಞಾನ ಸಂಸ್ಥೆ, ದೇಶದ ವಿವಿಧ ಐಐಟಿಗಳು, ಐಸೆರ್‌ಗಳು, ಭಾಭಾ ಅಣು ಸಂಶೋಧನಾ ಕೇಂದ್ರ, ಫಿಲ್ಟರ್‌ಗೆ ಪರ್ಯಾಯ ಮತ್ತು ಕಡಿಮೆ ವೆಚ್ಚದ ತಂತ್ರಜ್ಞಾನ ಅಭಿವೃದ್ಧಿಪಡಿಸಿವೆ. ಬೆಂಗಳೂರಿನಲ್ಲೇ ಇರುವ ಭಾರತೀಯ ವಿಜ್ಞಾನ ಸಂಸ್ಥೆಯ ಜತೆಗೆ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಂಡು ವಿನೂತನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬಹುದು. ಆದರೆ, ಇದರಿಂದ ಕಮಿಷನ್‌ ಬರುವುದಿಲ್ಲ ಎಂಬ ಚಿಂತೆ ರಾಜಕಾರಣಿಗಳದ್ದು. ಹೀಗಾಗಿ ದೇಶದಲ್ಲೇ ಅಭಿವೃದ್ಧಿಯಾದ ತಂತ್ರಜ್ಞಾನಕ್ಕೆ ಬೆಲೆ ಸಿಗುತ್ತಿಲ್ಲ. ಚೀನಾದಿಂದ ಕಳಪೆ ಸಾಧನಗಳನ್ನು ಆಮದು ಮಾಡಿಕೊಳ್ಳುವ ಕಂಪನಿಗಳ ಜತೆ ಕೈ ಜೋಡಿಸಿವೆ ಎಂದು ಮೂಲಗಳು ತಿಳಿಸಿವೆ.

ಪರ್ಯಾಯ ತಂತ್ರಜ್ಞಾನಗಳು ಯಾವುವು

1 ಕೆಪಾಸಿಟಿವ್‌ ಡಿಐಯಾನೈಸೇಷನ್‌ (Capacitive deionization ) ಸಿಡಿಐ ತಂತ್ರಜ್ಞಾನ:

ಈ ತಂತ್ರಜ್ಞಾನದ ಮೂಲಕ ನಿರಂತರವಾಗಿ ಕುಡಿಯುವ ನೀರನ್ನು ಶುದ್ಧೀಕರಿಸಿ ಪೂರೈಕೆ ಮಾಡಲು ಸಾಧ್ಯ. ಫಿಲ್ಟರ್‌ಗಳ ಅಗತ್ಯವಿಲ್ಲ, ಇದಕ್ಕೆ ಬೇಕಾಗುವುದು ವಿದ್ಯುತ್‌ ಮಾತ್ರ. ಇಂಗಾಲದ ಎರಡು ಎಲೆಕ್ಟ್ರೋಡ್‌ಗಳ ಮಧ್ಯೆ ನೀರನ್ನು ಕಡಿಮೆ ಒತ್ತಡದಲ್ಲಿ ಹಾಯಿಸಲಾಗುತ್ತದೆ. 1.6 ವಾಟ್‌ ವಿದ್ಯುತ್‌ ಪ್ರವಹಿಸುವಂತೆ ಮಾಡಲಾಗುತ್ತದೆ. ಇದರಿಂದ ವಿದ್ಯುತ್‌ಕಾಂತೀಯ ವಲಯ ಸೃಷ್ಟಿಯಾಗುತ್ತದೆ. ಇದು ನೀರಿನಲ್ಲಿ ಕರಗಿದ ಐಯಾನ್‌ಗಳನ್ನು ಎಲೆಕ್ಟ್ರೋಡ್‌ಗಳತ್ತ ಸೆಳೆಯುತ್ತದೆ. ಈ ಹಂತದಲ್ಲಿ ಬೇಡದ ರಾಸಾಯನಿಕ ಮತ್ತು ಭಾರ ಲೋಹಗಳನ್ನು ನಾಶ ಪಡಿಸುತ್ತದೆ. ಈ ತಂತ್ರಜ್ಞಾನವನ್ನು ಮಂಗಳೂರಿನ ಉಳ್ಳಾಲದಲ್ಲಿ ಅಳವಡಿಸಲಾಗಿದೆ.

2 ಫ್ಲೋರೈಡ್‌ ರೆಮಿಡೇಷನ್‌ ಟೆಕ್ನಾಲಜಿ:

ಈ ತಂತ್ರಜ್ಞಾನವನ್ನು ಭಾಭಾ ಅಣು ಸಂಶೋಧನಾ ಕೇಂದ್ರ ಅಭಿವೃದ್ಧಿಪಡಿಸಿದೆ. ಇದು ಅತ್ಯಂತ ಸರಳ ಮತ್ತು ಕಡಿಮೆ ವೆಚ್ಚದ ತಂತ್ರಜ್ಞಾನ. ಫ್ಲೋರೈಡ್‌ ಅಂಶವನ್ನು ಹೀರಿ ಶುದ್ಧ ನೀರು ಪೂರೈಸುತ್ತದೆ. ಇಲ್ಲಿ ನೀರು ವ್ಯರ್ಥವಾಗುವುದಿಲ್ಲ.

3 ಐಐಎಸ್‌ಸಿ ತಂತ್ರಜ್ಞಾನಗಳು:

ಭಾರತೀಯ ವಿಜ್ಞಾನ ಸಂಸ್ಥೆಯು, ಶುದ್ಧ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದ ಹಲವು ಬಗೆಯ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದೆ. ದಿನಕ್ಕೆ ಸಾವಿರಾರು ಲೀಟರ್‌ಗಳಷ್ಟು ಕುಡಿಯುವ ನೀರು ಪೂರೈಸುವ ತಂತ್ರಜ್ಞಾನದಿಂದ ಹಿಡಿದು ಹಲವು ಬಗೆಯ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗಿದೆ.

************

ಕಲಬುರ್ಗಿ ಜಿಲ್ಲೆಯ ಕಿರದಳ್ಳಿ ತಾಂಡಾದಲ್ಲಿ ಅರ್ಸೆನಿಕ್‌ಯುಕ್ತ ನೀರು ಕುಡಿದಿದ್ದರಿಂದ ಕೈಗಳ ಪರಿಸ್ಥಿತಿ

ಕಾಯಿಲೆಗೆ ಕಾರಣವಾಗುವ ಕಲುಷಿತ ನೀರು

ಶುದ್ಧ ಕುಡಿಯುವ ನೀರು ಪೂರೈಕೆ ಮಾಡದಿದ್ದರೆ, ಜನರು ಅನೇಕ ರೀತಿಯ ಅನಾರೋಗ್ಯಗಳಿಗೆ ತುತ್ತಾಗುತ್ತಾರೆ.

ಫ್ಲೋರೈಡ್‌ನಿಂದ ಮೂಳೆ ಸಮಸ್ಯೆ ಮತ್ತು ಹಲ್ಲುಗಳಲ್ಲಿ ಪಾಚಿ ಕಟ್ಟಿಕೊಳ್ಳುವ ಸಮಸ್ಯೆ ಉಂಟಾಗುತ್ತದೆ. ಕೃಷಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಮತ್ತು ಪ್ರಾಣಿಜನ್ಯ ಗೊಬ್ಬರ ಬಳಸುವುದರಿಂದ ಅಂತರ್ಜಲದಲ್ಲಿ ನೈಟ್ರೇಟ್‌ ಮಟ್ಟವೂ ಹೆಚ್ಚಾಗಿದೆ. ಈ ಅಂಶವು ಕುಡಿಯುವ ನೀರಿನಲ್ಲಿ ಸೇರುವುದರಿಂದ ಕ್ಯಾನ್ಸರ್‌, ಮಕ್ಕಳಲ್ಲಿ ಜನ್ಮಜಾತ ದೋಷಗಳು, ವಿಶೇಷವಾಗಿ ಉಸಿರಾಟದ ಸಮಸ್ಯೆ, ಮೂಳೆಗಳ ಸಮನ್ವಯತೆಯಲ್ಲಿ ಕೊರತೆ, ಚರ್ಮ ನೀಲಿಗಟ್ಟುವುದು... ಹೀಗೆ ಹಲವು ಸಮಸ್ಯೆಗಳಿಗೆ ಮಕ್ಕಳು ತುತ್ತಾಗುತ್ತವೆ. ಸಂತಾನೋತ್ಪತ್ತಿ ಸಮಸ್ಯೆಗಳಿಗೂ ಜನರು ತುತ್ತಾಗುತ್ತಾರೆ.

ನಗರ ಪ್ರದೇಶಗಳಲ್ಲಿ ಕೈಗಾರಿಕಾ ತ್ಯಾಜ್ಯ ಮತ್ತು ಕೊಳಚೆ ನೀರು ಅಂತರ್ಜಲ ಸೇರಿ ನೀರನ್ನು ವಿಷಮಯವಾಗಿಸುತ್ತದೆ. ಸರ್ಕಾರದ ಅಧಿಕಾರಿಗಳು ಮತ್ತು ರಾಜಕಾರಣಿಗಳು ಈ ಬಗ್ಗೆ ಗಮನ ಹರಿಸದೇ ಇದ್ದರೆ, ಹಲವು ಪೀಳಿಗೆಗಳನ್ನು ರೋಗದ ಕೂಪಕ್ಕೆ ತಳ್ಳುವ ಅಪರಾಧದ ಕೆಲಸ ಮಾಡಿದಂತಾಗುತ್ತದೆ ಎನ್ನುತ್ತಾರೆ ತಜ್ಞರು.

*****
ಗ್ರಾಮೀಣ ಪ್ರದೇಶಗಳಲ್ಲಿ 17,154 ನೀರು ಶುದ್ಧೀಕರಣ ಘಟಕಗಳ ನಿರ್ಮಾಣದಲ್ಲಿ ಭಾರಿ ಅಕ್ರಮ ನಡೆದಿದೆ. ಈ ಅಕ್ರಮಗಳ ಬಗ್ಗೆ ಸದನ ಸಮಿತಿಯಿಂದ ತನಿಖೆ ನಡೆಸಲು ಸಿದ್ಧ

-ಕೆ.ಎಸ್‌.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.