ಎಐ ಚಿತ್ರ: ಕಣಕಾಲಮಠ
‘ಅದು 1974ರ ಸಮಯ. ಕುಟುಂಬದ ನಿರ್ವಹಣೆಗಾಗಿ ಕಿರಾಣಿ ಅಂಗಡಿ ತೆರೆದೆ. ಬೆಳಿಗ್ಗೆ ಏಳು ಗಂಟೆಗೆ ವ್ಯಾಪಾರ ಶುರುವಾಗುತ್ತಿತ್ತು. ಗ್ರಾಹಕರ ಸೇವೆಯಲ್ಲಿ ತೃಪ್ತಿಯಿತ್ತು. ಈಗ ಆನ್‌ಲೈನ್ ವ್ಯಾಪಾರದ ಭರಾಟೆ ಜೋರಾಗಿದೆ. ಇದರಿಂದ ಕಿರಾಣಿ ವ್ಯಾಪಾರದ ಬೇರುಗಳು ಸಡಿಲವಾಗಿವೆ. ಎರಡು ವರ್ಷದ ಹಿಂದೆ ವ್ಯಾಪಾರ ಒಮ್ಮೆಲೆ ಇಳಿಮುಖವಾಗಿದ್ದರಿಂದ ಅಂಗಡಿ ಮುಚ್ಚುವುದು ಅನಿವಾರ್ಯವಾಯಿತು. ಎಂಬಿಎ ಓದಿರುವ ಮಗನ ಉದ್ಯೋಗದ ಆಯ್ಕೆಯೇ ಬೇರೆಯಿತ್ತು. ಅವನಿಗೆ ನಾನು ಒತ್ತಾಯಿಸಲಿಲ್ಲ. ಬೇರೆಯವರಿಗೆ ಮಳಿಗೆಯನ್ನು ಬಾಡಿಗೆ ನೀಡಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದೇನೆ’.
ಐವತ್ತು ವರ್ಷ ಜೀವನಕ್ಕೆ ಊರುಗೋಲಾಗಿದ್ದ ಅಂಗಡಿಯನ್ನು ಮುಚ್ಚಿದ ಕಥೆ ಹೇಳುವಾಗ ದಾವಣಗೆರೆಯ ವಸಂತ ರಸ್ತೆಯಲ್ಲಿರುವ ಶ್ರೀಸಿದ್ಧಿವಿನಾಯಕ ಪ್ರಾವಿಷನ್ ಸ್ಟೋರ್ ಮಾಲೀಕ ವಿಜಯ್ ಎನ್. ಭಟ್ ಅವರ, ಗಂಟಲ ಸೆರೆ ಉಬ್ಬು ಬಂದಿತ್ತು.
ಮೂರು ತಲೆಮಾರುಗಳಿಂದ ದಿನಸಿ ವ್ಯಾಪಾರ ಮಾಡುತ್ತಿದ್ದ ಬಾಗಲಕೋಟೆಯ ರಾಚಪ್ಪರ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಸದ್ಯ ಅಂಗಡಿ ಮುಚ್ಚಿರುವ ಅವರು, ಬೇರೆಯವರ ಜಮೀನನ್ನು ಗುತ್ತಿಗೆ ಪಡೆದು ಕೃಷಿ ಮಾಡುತ್ತಿದ್ದಾರೆ. ಬಿಡುವಿದ್ದಾಗ ಕೂಲಿ ಕೆಲಸಕ್ಕೂ ತೆರಳುತ್ತಾರೆ.
ಕಲಬುರಗಿಯ ಕಿರಾಣಿ ಬಜಾರ್‌ನ ಅಂಗಡಿಗಳಲ್ಲಿ ಕಿರಾಣಿ ಖರೀದಿ ಮಾಡುತ್ತಿರುವ ಗ್ರಾಹಕರು ವಿವಿಧ ಚಿತ್ರ.ಪ್ರಜಾವಾಣಿ
‘ನನ್ನ ತಾತ, ಅಪ್ಪ, ನಾನು ಹಾಗೂ ನನ್ನಿಬ್ಬರು ತಮ್ಮಂದಿರು ಕಿರಾಣಿ ವ್ಯಾಪಾರವನ್ನೇ ನಂಬಿಕೊಂಡಿದ್ದೆವು. ಆನ್‌ಲೈನ್ ವ್ಯಾಪಾರ ಜೋರಾಗಿರುವುದರಿಂದ ಅಂಗಡಿಗೆ ಬರುವವರು ಕಡಿಮೆಯಾದರು. ಮಾರಾಟಕ್ಕೆ ತಂದ ಉತ್ಪನ್ನಗಳು ಖರೀದಿಸುವವರು ಇಲ್ಲದೆ ಹಾಳಾದವು. ಅಂಗಡಿಯ ಬಾಡಿಗೆ ಕಟ್ಟುವಷ್ಟೂ ಲಾಭ ಬರಲಿಲ್ಲ. ಸಾಕಷ್ಟು ನಷ್ಟ ಅನುಭವಿಸಿ, ಸಾಲದ ಸುಳಿಗೆ ಸಿಲುಕಿ, ಅಂಗಡಿ ಮುಚ್ಚಬೇಕಾಯಿತುʼ ಎಂದು ಹೇಳುವಾಗ ಅವರ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿತ್ತು.
ತಲೆಮಾರುಗಳಿಂದಲೂ ಕಿರಾಣಿ ಅಂಗಡಿಗಳು ಭಾರತೀಯ ಸಮಾಜದ ಅವಿಭಾಜ್ಯ ಅಂಗವಾಗಿವೆ. ಇವುಗಳಿಗೆ ಎರಡು ಶತಮಾನಕ್ಕೂ ಹೆಚ್ಚಿನ ಇತಿಹಾಸವಿದೆ. ದಶಕದ ಹಿಂದೆ ದೇಶದ ಚಿಲ್ಲರೆ ಮಾರುಕಟ್ಟೆಯಲ್ಲಿ ಈ ಅಂಗಡಿಗಳ ಪಾಲು ಶೇ 80ರಷ್ಟಿತ್ತು. ಇ-ಕಾಮರ್ಸ್ ಮತ್ತು ಕ್ವಿಕ್ ಕಾಮರ್ಸ್ ಕಂಪನಿಗಳ ಕಾರ್ಯಾಚರಣೆ ಹೆಚ್ಚಿರುವುದರಿಂದ ಇವುಗಳ ಪಾಲು ಅರ್ಧದಷ್ಟು ಕುಸಿದಿದೆ.
ಕಲಬುರಗಿಯ ಕಿರಾಣಿ ಬಜಾರ್‌ನ ಅಂಗಡಿಗಳಲ್ಲಿ ಕಿರಾಣಿ ಖರೀದಿ ಮಾಡುತ್ತಿರುವ ಗ್ರಾಹಕರ ಚಿತ್ರ.
ಜನರಿಗೆ ಈಗ ನೆರೆಯ ಅಂಗಡಿಗೆ ಹೋಗಿ ದಿನಬಳಕೆಯ ವಸ್ತುಗಳನ್ನು ಖರೀದಿಸಲು ಪುರುಸೊತ್ತಿಲ್ಲ. ಕುಳಿತಲ್ಲಿಗೆ ಎಲ್ಲವೂ ತ್ವರಿತವಾಗಿ ಬೇಕೆಂಬ ಹಂಬಲ. ಹಾಗಾಗಿ, ಕ್ವಿಕ್ ಕಾಮರ್ಸ್‌ನ ಮೊರೆ ಹೋಗಿದ್ದಾರೆ.
ಬೆಳಿಗ್ಗೆ ವಾಯುವಿಹಾರಕ್ಕೆ ಹೋದವರು ಹಾಲಿನ ಪ್ಯಾಕೆಟ್, ದಿನಪತ್ರಿಕೆ ಖರೀದಿಸಿದ ಬಳಿಕ ದಿನಸಿ ಅಂಗಡಿಗೆ ಹೋಗುತ್ತಿದ್ದರು. ಅಂಗಡಿ ಮಾಲೀಕರೊಂದಿಗೆ ಕುಶಲೋಪರಿ ನಡೆಸಿ ದಿನಸಿ ಖರೀದಿಸಿ ಮನೆಯತ್ತ ಹೆಜ್ಜೆ ಹಾಕುತ್ತಿದ್ದರು. ಗ್ರಾಹಕ ಮತ್ತು ವ್ಯಾಪಾರಿ ನಡುವೆ ಬಾಂಧವ್ಯ ಬೆಸೆದುಕೊಂಡಿತ್ತು. ಕ್ವಿಕ್ ಕಾಮರ್ಸ್‌ನಿಂದ ಅದು ಕಣ್ಮರೆಯಾಗಿದೆ.
ಜಾಗತಿಕ ಮಟ್ಟದಲ್ಲಿ ಮೊದಲ ಬಾರಿಗೆ ಕೆಲವೇ ನಿಮಿಷಗಳಲ್ಲಿ ಜನರ ಮನೆ ಬಾಗಿಲಿಗೆ ದಿನಸಿ ತಲುಪಿಸುವ ಸೇವೆ ಆರಂಭಿಸಿದ್ದು, ಟರ್ಕಿ ದೇಶದ ‘ಗೆಟಿರ್’ ಎಂಬ ಕಂಪನಿ. 2013ರಲ್ಲಿ ಬ್ಲಿಂಕಿಟ್ ಕಂಪನಿಯು ಭಾರತದ ಮಹಾನಗರಗಳಲ್ಲಿ ಇನ್‌ಸ್ಟಂಟ್ ಡೆಲಿವರಿ ಸೇವೆ ಆರಂಭಿಸಿತು. ಈಗ ಬಿಗ್‌ಬಾಸ್ಕೆಟ್ ನೌ, ಇನ್‌ಸ್ಟಾ ಮಾರ್ಟ್, ಜೆಪ್ಟೊ, ಫ್ಲಿಪ್‌ಕಾರ್ಟ್ ಮಿನಿಟ್ಸ್ 10 ನಿಮಿಷದಲ್ಲಿ ಸೇವೆ ಒದಗಿಸುತ್ತವೆ. ಅಗ್ಗದ ರಿಯಾಯಿತಿ ಸೌಲಭ್ಯ ನೀಡುವ ಮೂಲಕ ಗ್ರಾಹಕರ ನೆಲೆಯನ್ನು ವಿಸ್ತರಿಸಿಕೊಳ್ಳುತ್ತಿವೆ. ಗೃಹ ಬಳಕೆಯ ಕೆಲವು ವಸ್ತುಗಳಿಗೆ ಶೇ 20ರಿಂದ ಶೇ 30ರಷ್ಟು ರಿಯಾಯಿತಿ ನೀಡುತ್ತವೆ. ಗ್ರಾಹಕರನ್ನು ಸೆಳೆಯುವುದೇ ಇದರ ಹಿಂದಿರುವ ತಂತ್ರ. ಇದು ಸಾಂಪ್ರದಾಯಿಕ ಕಿರಾಣಿ ಅಂಗಡಿಗಳ ಕತ್ತನ್ನು ಹಿಸುಕುತ್ತಿದೆ.
ಕಲಬುರಗಿಯ ಕಿರಾಣಿ ಬಜಾರ್‌ನ ಅಂಗಡಿಗಳಲ್ಲಿ ಕಿರಾಣಿ ಖರೀದಿ ಮಾಡುತ್ತಿರುವ ಗ್ರಾಹಕರು ವಿವಿಧ ಚಿತ್ರ.ಪ್ರಜಾವಾಣಿ
ಕ್ವಿಕ್ ಕಾಮರ್ಸ್ ಕಂಪನಿಗಳು ಆರಂಭದಲ್ಲಿ ದಿನಸಿ ಸಾಮಗ್ರಿಗಳನ್ನಷ್ಟೇ ವಿತರಿಸುತ್ತಿದ್ದವು. ಈಗ ಹಾಲು, ಮೊಟ್ಟೆಯಿಂದ ಹಿಡಿದು ಐಫೋನ್‌ನಂತಹ ಐಷಾರಾಮಿ ವಸ್ತುಗಳನ್ನೂ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತವೆ. ಯುಗಾದಿ, ದೀಪಾವಳಿ ಹಬ್ಬದ ದಿನಗಳಂದು ಕಿರಾಣಿ ಅಂಗಡಿಗಳ ಮುಂದೆ ಜನರು ಸಾಲುಗಟ್ಟಿ ನಿಲ್ಲುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಈಗ ಅಂತಹ ದೃಶ್ಯಗಳನ್ನು ಕಾಣಲು ಸಾಧ್ಯವೇ ಇಲ್ಲದಂತಾಗಿದೆ. ಗ್ರಾಹಕರ ಕೊಳ್ಳುಬಾಕತನಕ್ಕೆ ತಕ್ಕಂತೆ ಹಬ್ಬದ ವೇಳೆಯೂ ಭರ್ಜರಿ ರಿಯಾಯಿತಿ ಪ್ರಕಟಿಸಿ ಗ್ರಾಹಕರನ್ನು ತಮ್ಮತ್ತ ಸೆಳೆಯುತ್ತಿವೆ.
‘ಕ್ವಿಕ್ ಕಾಮರ್ಸ್ ಸೇವೆಯಿಂದ ಶೇ 25ರಷ್ಟು ಗ್ರಾಹಕರ ಕೊರತೆ ಎದುರಾಗಿದೆ. ಯುವಜನರು ಅಂಗಡಿಗೆ ಬರುವುದೇ ಕಡಿಮೆಯಾಗಿದೆ’ ಎಂದು ಹೇಳುತ್ತಾರೆ ಮೈಸೂರಿನ ಸಂತೆಪೇಟೆಯ ಚಂದನ್ ಎಂಟರ್‌ಪ್ರೈಸಸ್ ಮಾಲೀಕ ಹರ್ಷ.
‘32 ವರ್ಷದಿಂದ ಅಂಗಡಿಯನ್ನು ನಡೆಸುತ್ತಿದ್ದೇನೆ. ಹಿಂದಿನವರು ತಿಂಗಳಿಗೆ ಬೇಕಾದ ಸಾಮಗ್ರಿಗಳ ಪಟ್ಟಿ ಹಿಡಿದು ಅಂಗಡಿಗಳಿಗೆ ಬರುತ್ತಿದ್ದರು. ಸಾಮಾಜಿಕವಾಗಿ ಬೆರೆಯುವುದು ಪ್ರಮುಖವಾಗಿತ್ತು. ಮದುವೆ, ಹಬ್ಬಗಳಿಗೆ ನಮ್ಮನ್ನು ಕರೆಯುವಷ್ಟು ಆತ್ಮೀಯತೆ ಬೆಳೆದಿತ್ತು. ಈ ದಿನಸಿ ಪಟ್ಟಿ ತರುವವರೇ ಕಾಣೆಯಾಗಿದ್ದಾರೆ’ ಎಂಬುದು ಅವರ ನೋವಿನ ನುಡಿ.
ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ದೊಡ್ಡ ಸಗಟುದಾರರು ನೇರವಾಗಿ ಅಥವಾ ಏಜೆಂಟರ ಮೂಲಕ ಖರೀದಿಸುತ್ತಿದ್ದರು. ಬಳಿಕ ಆ ಉತ್ಪನ್ನಗಳನ್ನು ಸಂಸ್ಕರಿಸಿ, ತೂಕಕ್ಕೆ ಅನುಗುಣವಾಗಿ ಪ್ಯಾಕಿಂಗ್ ಮಾಡಿ ನಗರ, ಪಟ್ಟಣ ಪ್ರದೇಶದಲ್ಲಿನ ಚಿಲ್ಲರೆ ದಿನಸಿ ಅಂಗಡಿಗಳಿಗೆ ತಲುಪಿಸುತ್ತಿದ್ದರು. ಚಿಲ್ಲರೆ ವ್ಯಾಪಾರಸ್ಥರಿಂದ ಹಣ ಪಡೆದ ಬಳಿಕ ಸಗಟುದಾರರು, ರೈತರಿಗೆ ಪೂರ್ಣ ಹಣ ನೀಡುತ್ತಿದ್ದ ಪದ್ಧತಿ ಇತ್ತು. ರೈತ, ಸಗಟುದಾರ ಮತ್ತು ಚಿಲ್ಲರೆ ವ್ಯಾಪಾರಿ ನಡುವೆ ಅವ್ಯಕ್ತವಾದ ಸಂಪರ್ಕ ಕೊಂಡಿ ಬೆಸೆದುಕೊಂಡಿತ್ತು. ಕ್ವಿಕ್ ಕಾಮರ್ಸ್ ಸೇವೆಯು ಇದನ್ನು ಪೂರೈಕೆ ಸರಪಳಿಯನ್ನು ತುಂಡರಿಸಿದೆ.
ಕಲಬುರಗಿಯ ಕಿರಾಣಿ ಬಜಾರ್‌ನ ಅಂಗಡಿಗಳಲ್ಲಿ ಕಿರಾಣಿ ಖರೀದಿ ಮಾಡುತ್ತಿರುವ ಗ್ರಾಹಕರು ವಿವಿಧ ಚಿತ್ರ.ಪ್ರಜಾವಾಣಿ
‘ಶಿವಮೊಗ್ಗದಲ್ಲಿ ಕ್ವಿಕ್ ಕಾಮರ್ಸ್ ಕಂಪನಿಗಳ ಪೈಪೋಟಿಯಿಂದ ಕಿರಾಣಿ ಅಂಗಡಿಗಳ ವಹಿವಾಟಿಗೆ ಶೇ 40ರಷ್ಟು ಹೊಡೆತ ಬಿದ್ದಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಕಿರಾಣಿ ವ್ಯಾಪಾರ ಮಾಡುವುದು ಕಷ್ಟವಾಗಲಿದೆ’ ಎಂದು ಹೇಳುತ್ತಾರೆ ಶಿವಮೊಗ್ಗದ ದಿನಸಿ ವರ್ತಕರ ಸಂಘದ ಅಧ್ಯಕ್ಷ ಪಿ.ಎಸ್. ಹಾಲಸ್ವಾಮಿ.
‘ಇದು ಪೈಪೋಟಿ ಯುಗ. ಡಿಜಿಟಲೀಕರಣ, ಪರವಾನಗಿ ನವೀಕರಣ, ವಿದ್ಯುತ್ ಶುಲ್ಕ, ಬಾಡಿಗೆ ಹೆಚ್ಚಳದ ಕಾರಣ ಕಿರಾಣಿ ಅಂಗಡಿಯವರಿಗೆ ಖರ್ಚು ಹೆಚ್ಚಾಗಿ ಲಾಭ ಕಡಿಮೆಯಾಗಿದೆ. ಶಿವಮೊಗ್ಗದಲ್ಲಿ ಕಿರಾಣಿ ಅಂಗಡಿಗಳು ಬಂದ್ ಆಗಿರುವುದು ಕಡಿಮೆ. ಸೀಮಿತ ಆದಾಯದಲ್ಲಿಯೇ ಬದುಕುವುದನ್ನು ಕಲಿತಿದ್ದಾರೆ. ಆದರೆ, ಕ್ವಿಕ್ ಕಾಮರ್ಸ್ ಕಂಪನಿಗಳಿಗೆ ಪೈಪೋಟಿ ನೀಡುವುದು ಸವಾಲಾಗಿದೆ’ ಎಂಬುದು ಅವರ ಅನುಭವ ಮಾತು.
ಅಖಿಲ ಭಾರತ ಗ್ರಾಹಕ ವಸ್ತುಗಳ ಪೂರೈಕೆ ಒಕ್ಕೂಟ (ಎಐಸಿಪಿಡಿಎಫ್) ದೇಶದ ಪ್ರಮುಖ ಸಗಟುದಾರರು ಮತ್ತು ಚಿಲ್ಲರೆ ವ್ಯಾಪಾರಸ್ಥರ ಪರ ಹೋರಾಡುವ ಒಕ್ಕೂಟವಾಗಿದೆ. ಇದರಡಿ 1.3 ಕೋಟಿ ಚಿಲ್ಲರೆ ವ್ಯಾಪಾರಿಗಳು ಮತ್ತು 8 ಲಕ್ಷ ವಿತರಕರಿದ್ದಾರೆ. ಒಕ್ಕೂಟದ ಮಾಹಿತಿ ಪ್ರಕಾರ, ಕ್ವಿಕ್ ಕಾಮರ್ಸ್ ಹಾವಳಿಯಿಂದ ದೇಶದಲ್ಲಿ 2 ಲಕ್ಷ ಕಿರಾಣಿ ಅಂಗಡಿಗಳು ಬಾಗಿಲು ಮುಚ್ಚಿವೆ.
ಕ್ವಿಕ್ ಕಾಮರ್ಸ್‌ನ ಈ ಕ್ಷಿಪ್ರ ಬೆಳವಣಿಗೆಯ ಹಿಂದೆ ತ್ವರಿತ ಬಿಕರಿ ಗ್ರಾಹಕ ಉತ್ಪನ್ನ ತಯಾರಿಸುವ ಕಂಪನಿಗಳ (ಎಫ್‌ಎಂಸಿಜಿ) ಪಾತ್ರವೂ ಇದೆ. ಗ್ರಾಹಕರ ಅಗತ್ಯಕ್ಕೆ ಅನುಗುಣವಾಗಿ ಉತ್ಪನ್ನಗಳನ್ನು ಪ್ಯಾಕಿಂಗ್ ಮಾಡಿ ಕ್ವಿಕ್ ಕಾಮರ್ಸ್ ಕಂಪನಿಗಳಿಗೆ ಒದಗಿಸುತ್ತವೆ.
ಕೋವಿಡ್ ಸಾಂಕ್ರಾಮಿಕದ ವೇಳೆ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಒತ್ತು ನೀಡಿದ್ದರು. ಈ ವೇಳೆ ಕಿರಾಣಿ ಅಂಗಡಿಗಳಿಗೆ ಎಡತಾಕಿದ್ದು ಕಡಿಮೆ. ಕ್ವಿಕ್ ಕಾಮರ್ಸ್ ಸೇವೆ ಅವಲಂಬಿಸಿದ್ದು ಹೆಚ್ಚು. ಆ ಸಂದರ್ಭದಲ್ಲಿ ಇವುಗಳ ತ್ವರಿತ ಸೇವೆಯು ಟೈರ್ 2 ಮತ್ತು ಟೈರ್ 3 ನಗರಗಳಿಗೂ ವಿಸ್ತರಿಸಿತು. ತ್ವರಿತವಾಗಿ ಸೇವೆ ಒದಗಿಸುವ ದಿಸೆಯಲ್ಲಿ ನಗರಗಳಲ್ಲಿ ಅಗತ್ಯವಿರುವೆಡೆ ‘ಡಾರ್ಕ್ ಸ್ಟೋರ್’ ತೆರೆಯುತ್ತಿವೆ.
ಕಲಬುರಗಿಯ ಕಿರಾಣಿ ಬಜಾರ್‌ನ ಅಂಗಡಿಗಳಲ್ಲಿ ಕಿರಾಣಿ ಖರೀದಿ ಮಾಡುತ್ತಿರುವ ಗ್ರಾಹಕರು ವಿವಿಧ ಚಿತ್ರ.ಪ್ರಜಾವಾಣಿ
ಸಣ್ಣ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಉದ್ರಿ ಹೋಗಿ ನೇರ ವ್ಯವಹಾರ ನಡೆಯುತ್ತಿದ್ದರೂ ಕಿರಾಣಿ ಅಂಗಡಿಯ ವಹಿವಾಟು ಕಡಿಮೆಯಾಗಿದೆ. ಸೂಪರ್ ಮಾರ್ಕೆಟ್‌ಗೆ ಹೋಗುವ ಗ್ರಾಹಕರಿಗೆ ಅಲ್ಲಿಯೇ ಎಲ್ಲ ಬಗೆಯ ಉತ್ಪನ್ನಗಳನ್ನು ಪರಿಶೀಲಿಸಿಕೊಳ್ಳಲು ಅವಕಾಶವಿದೆ. ಭರ್ಜರಿ ರಿಯಾಯಿತಿ ಸಿಗುವ ಕಾರಣ ಸಣ್ಣ ಅಂಗಡಿಗಳಿಗೆ ಬರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ದೂರದ ಮಾರುಕಟ್ಟೆಗೆ ಹೋಗಲಾಗದವರು ಮಾತ್ರ ಸಣ್ಣಪುಟ್ಟ ಅಂಗಡಿಗಳ ಗ್ರಾಹಕರಾಗಿ ಉಳಿದುಕೊಂಡಿದ್ದಾರೆ ಎನ್ನುತ್ತಾರೆ ಕಿರಾಣಿ ಅಂಗಡಿ ವರ್ತಕರು.
ಪ್ರಿಡೇಟರಿ ಪ್ರೈಸಿಂಗ್: ಕೆಲವು ಇ-ಕಾಮರ್ಸ್ ಕಂಪನಿಗಳು ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸ್ಥಾಪಿಸಲು ತಂತ್ರಗಾರಿಕೆ ನಡೆಸುತ್ತವೆ. ತಮ್ಮ ಉತ್ಪನ್ನಗಳನ್ನು ಅದರ ಮೂಲ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಗ್ರಾಹಕರಿಗೆ ಮಾರಾಟ ಮಾಡುವ ತಂತ್ರ ಅನುಸರಿಸುತ್ತವೆ. ಅದಕ್ಕೆ ‘ಪ್ರಿಡೇಟರಿ ಪ್ರೈಸಿಂಗ್’ ಎಂದು ಕರೆಯಲಾಗುತ್ತದೆ. ಇದು ಕಾಂಪಿಟೇಷನ್ಸ್ ಕಾಯ್ದೆ 2002ರ ಸೆಕ್ಷನ್ 4ರ ಪ್ರಕಾರ ಇದು ಕಾನೂನುಬಾಹಿರ.
ದೈತ್ಯ ಕಂಪನಿಗಳ ಈ ತಂತ್ರವನ್ನು ಸಣ್ಣ ಕಂಪನಿಗಳು ಎದುರಿಸಲಾರದೆ ಮಾರುಕಟ್ಟೆಯ ಸ್ಪರ್ಧೆಯಿಂದ ಹೊರಬೀಳುತ್ತವೆ. ಆ ಮೂಲಕ ದೈತ್ಯ ಕಂಪನಿಯು ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸಾಧಿಸುತ್ತದೆ. ಆರಂಭದಲ್ಲಿ ಗ್ರಾಹಕರಿಗೆ ಭಾರಿ ರಿಯಾಯಿತಿ ನೀಡಿದ್ದರಿಂದ ಆದ ನಷ್ಟ ತುಂಬಿಕೊಳ್ಳಲು ನಂತರದ ದಿನಗಳಲ್ಲಿ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಿ ಲಾಭ ಮಾಡಿಕೊಳ್ಳುತ್ತದೆ.
ಎಫ್‌ಎಂಸಿಜಿ ಕಂಪನಿಗಳಿಂದ ಉತ್ಪನ್ನಗಳನ್ನು ಖರೀದಿಸುವ ಇ–ಕಾಮರ್ಸ್ ಮತ್ತು ಕ್ವಿಕ್ ಕಾಮರ್ಸ್ ಕಂಪನಿಗಳು ಭಾರಿ ರಿಯಾಯಿತಿ ನೀಡುತ್ತಿವೆ. ಇದಕ್ಕೆ ಅಖಿಲ ಭಾರತ ಗ್ರಾಹಕ ವಸ್ತುಗಳ ಪೂರೈಕೆ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿದೆ. ರಿಯಾಯಿತಿ ಸಮರವು ಮಾರುಕಟ್ಟೆಯಲ್ಲಿ ಅನಾರೋಗ್ಯಕರ ಪೈಪೋಟಿ ಸೃಷ್ಟಿಸಲಿದೆ. ಕಿರಾಣಿ ಅಂಗಡಿಗಳ ವ್ಯಾಪಾರಕ್ಕೆ ಪೆಟ್ಟು ಬೀಳಲಿದೆ. ಜೊತೆಗೆ, ದೇಶದ ಆರ್ಥಿಕತೆಯ ಮಂದಗತಿ ಬೆಳವಣಿಗೆಗೆ ಕಾರಣವಾಗಲಿದೆ. ‘ಪ್ರಿಡೇಟರಿ ಪ್ರೈಸಿಂಗ್’ ಹಾಗೂ ರಿಯಾಯಿತಿ ಸೌಲಭ್ಯ ನೀಡುವುದಕ್ಕೆ ಮಾನದಂಡ ರೂಪಿಸಬೇಕು ಎಂದು ಒಕ್ಕೂಟವು, ಭಾರತೀಯ ಸ್ಪರ್ಧಾತ್ಮಕ ಆಯೋಗದ (ಸಿಸಿಐ) ಕದ ತಟ್ಟಿದೆ.
‘ಮತ್ತೊಮ್ಮೆ ಬರುವುದಕ್ಕೆ ಸಮಯವಾಗದಿದ್ದರೆ ಯಾವ ದಿನಸಿ ಸಾಮಗ್ರಿಗಳು ಬೇಕೆಂದು ವಾಟ್ಸ್‌ಆ್ಯಪ್ ಮಾಡಿ ಸರ್, ಹುಡುಗನ ಹತ್ರ ಕೊಟ್ಟು ಕಳಿಸ್ತೀನಿ, ಅವನತ್ರನೇ ಕ್ಯೂಆರ್‌ಕೋಡ್ ಇರುತ್ತೆ, ಹಣವನ್ನು ಸ್ಕ್ಯಾನ್ ಮೂಲಕ ಪಾವತಿ ಮಾಡಬಹುದು’. ‘ಮೈಸೂರಿನ ಬಲ್ಲಾಳ ವೃತ್ತದ ಅಶೋಕ ಸ್ಟೋರ್ಸ್ ಮಾಲೀಕ ಕಶ್ಯಪ್ ಅವರು, ಗ್ರಾಹಕರೊಂದಿಗೆ ವ್ಯವಹರಿಸುವ ರೀತಿ ಇದು.
'ಗ್ರಾಹಕರನ್ನು ಪ್ರೀತಿಯಿಂದ ಮಾತನಾಡಿಸಬೇಕು. ಉತ್ಪನ್ನಗಳ ಗುಣಮಟ್ಟದಲ್ಲಿ ಸಮಸ್ಯೆ ಇದ್ದರೆ ಬದಲಾಯಿಸಿ ಕೊಡ್ತೀವಿ ಅನ್ನುವ ಭರವಸೆ ಮೂಡಿಸಬೇಕು. ಗ್ರಾಹಕರಿಗೂ ಮಾತುಕತೆ ಮೂಲಕ ಖರೀದಿ ಮಾಡುವುದು ಇಷ್ಟವಾಗುತ್ತದೆ. ಇಂಥ ಸಂಬಂಧಗಳು ಆನ್‌ಲೈನ್ ವ್ಯಾಪಾರದಲ್ಲಿ ಇರಲ್ಲ. ಅದುವೇ ನಮ್ಮ ಪ್ಲಸ್ ಪಾಯಿಂಟ್’ ಎನ್ನುತ್ತಾರೆ ಅವರು.
ಕಲಬುರಗಿಯ ಕಿರಾಣಿ ಬಜಾರ್‌ನ ಅಂಗಡಿಗಳಲ್ಲಿ ಕಿರಾಣಿ ಖರೀದಿ ಮಾಡುತ್ತಿರುವ ಗ್ರಾಹಕರು ವಿವಿಧ ಚಿತ್ರ.ಪ್ರಜಾವಾಣಿ
‘22 ವರ್ಷದಿಂದ ಅಂಗಡಿ ನಡೆಸುತ್ತಿದ್ದೇವೆ. ವ್ಯಾಪಾರಿಗಳು ಡಿಜಿಟಲ್ ಯುಗದಲ್ಲಿ ಬದಲಾಗಬೇಕಾದ ಅನಿವಾರ್ಯತೆ ಇದೆ. ಗ್ರಾಹಕರ ಬೇಡಿಕೆಯಂತೆ ಪಾವತಿಗೆ ಕ್ರೆಡಿಟ್ ಕಾರ್ಡ್ ಮಷಿನ್, ಯುಪಿಐ ಸ್ಕ್ಯಾನರ್ ಅಳವಡಿಸಿದ್ದೇವೆ. ಗ್ರಾಹಕರು ಕೇಳುವ ಯಾವುದೇ ವಸ್ತುಗಳನ್ನು ಇಲ್ಲ ಎನ್ನುವುದಿಲ್ಲ. ಪರಿಚಯದ ಅಂಗಡಿ, ಸಮೀಪದ ಮಾರುಕಟ್ಟೆಯಿಂದ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತರಿಸಿ ನೀಡುತ್ತೇವೆ’ ಎಂಬುದು ಅವರ ವಿವರಣೆ.
ಸಣ್ಣ ಅಂಗಡಿ ನಡೆಸುತ್ತಿದ್ದ ಮಂಗಳೂರಿನ ಕಿರಾಣಿ ಅಂಗಡಿ ಮಾಲೀಕ ಇಮ್ತಿಯಾಜ್‌ಗೂ ಪುರುಸೊತ್ತಿಲ್ಲದ ಕೆಲಸ. ಕಾಲದ ಓಟದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮುಂದುವರಿದಿರುವುದರಿಂದ ಅವರು ಈಗ ಉದ್ಯಮಿಯಾಗಿದ್ದಾರೆ. ಕಿರಾಣಿ ಅಂಗಡಿಯನ್ನು ಡಿಜಿಟಲ್ ವ್ಯವಸ್ಥೆಗೆ ಹೊಂದಿಸಿಕೊಂಡಿದ್ದೇ ಇದಕ್ಕೆ ಕಾರಣ. ಅವರ ಬಿಎಚ್‌ಬಿ ಅಂಗಡಿಯ ವಾಟ್ಸ್ಆ್ಯಪ್ ನಂಬರ್‌ಗೆ ಅಗತ್ಯ ದಿನಸಿ ಸಾಮಗ್ರಿಗಳ ಪಟ್ಟಿಯನ್ನು ಹಾಕಿದರೆ ಮನೆಗೇ ತಲುಪಿಸುತ್ತಾರೆ. ಕರೆ ಮಾಡಿ ಹೇಳಿದರೂ ಟೈಪ್ ಮಾಡಿಕೊಂಡು ಆ ವಸ್ತುಗಳನ್ನು ತಲುಪಿಸುವುದಕ್ಕೂ ಸೌಲಭ್ಯ ಮಾಡಿಕೊಂಡಿದ್ದಾರೆ.
‘ವಾಟ್ಸ್‌ಆ್ಯಪ್‌ನಲ್ಲಿ ಬರುವ ಪಟ್ಟಿಯನ್ನು ನೋಡಿಕೊಂಡು ವಸ್ತುಗಳನ್ನು ಹೊಂದಿಸಿ ತಲುಪಿಸಲು ಸಿಬ್ಬಂದಿ ಇದ್ದಾರೆ. ಕರೆ ಬಂದರೆ ಟೈಪ್ ಮಾಡಿಕೊಂಡು ವಸ್ತುಗಳನ್ನು ತಲುಪಿಸುವುದಕ್ಕೂ ವ್ಯವಸ್ಥೆ ಇದೆ. ಇದನ್ನೆಲ್ಲ ಮಾಡುವಾಗಲೂ ನನಗೆ ಸಾಂಪ್ರದಾಯಿಕ ವ್ಯಾಪಾರದ್ದೇ ನೆನಪಾಗುತ್ತದೆ. ಅನಿವಾರ್ಯವಾಗಿ ಹೊಸತನದತ್ತ ವಾಲಬೇಕಾಯಿತು. ಇಲ್ಲವಾದರೆ ಪೈಪೋಟಿ ಯುಗದಲ್ಲಿ ಮುಂದುವರಿಯುವುದು ಕಷ್ಟ’ ಎನ್ನುತ್ತಾರೆ ಅವರು.
ಬೆಂಗಳೂರಿನ ಯಶವಂತಪುರದ ಹನುಮಾನ್ ಪ್ರಾವಿಜನ್ ಸ್ಟೋರ್‌ನ ರಾಹುಲ್ ಮತ್ತು ಅವರ ಸಹೋದರದ್ದು ಇದೇ ಕಥೆ. ಗ್ರಾಹಕರು ಅವರ ಅಂಗಡಿ ತೆರಳಿ ಅಥವಾ ವಾಟ್ಸ್‌ಆ್ಯಪ್‌ನಲ್ಲಿ ಸಾಮಗ್ರಿಗಳ ಪಟ್ಟಿ ನೀಡಿದರೆ ಅವರೇ ಮನೆ ಬಾಗಿಲಿಗೆ ಸಾಮಗ್ರಿ ಪೂರೈಸುತ್ತಾರೆ. ಇದಕ್ಕಾಗಿ ಅವರು ಯಾವುದೇ ಹೆಚ್ಚುವರಿ ಹಣ ವಸೂಲಿ ಮಾಡುವುದಿಲ್ಲ.
‘ಬೆಂಗಳೂರಿನಂತಹ ಮಹಾನಗರಗಳಲ್ಲಿ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವುದು ಸುಲಭವಲ್ಲ. ಆದರೆ, ಗುಣಮಟ್ಟಕ್ಕೆ ರಾಜೀ ಮಾಡಿಕೊಳ್ಳಬಾರದು. ಇತ್ತೀಚೆಗೆ ಅಂಗಡಿಗೆ ಬರುವ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ. ಬರುವವರೊಂದಿಗೆ ನಾವು ಸೌಹಾರ್ದವಾಗಿ ವರ್ತಿಸಬೇಕು. ನಮಗೆ ರಿಯಾಯಿತಿ ನೀಡಲು ಸಾಧ್ಯವಾಗುವುದಿಲ್ಲ. ಆದರೆ, ಅವರಿಂದ ದುಪ್ಪಟ್ಟು ಹಣ ವಸೂಲಿ ಮಾಡಬಾರದು. ಹಾಗಿದ್ದಾಗ ನಮ್ಮ ಗ್ರಾಹಕರು ಕೈತಪ್ಪುವುದಿಲ್ಲ’ ಎಂದು ಹೇಳುತ್ತಾರೆ ರಾಹುಲ್.
‘ಡಿಜಿಟಲ್ ಸೌಲಭ್ಯದ ಬಳಿಕ ಕಿರಾಣಿ ವ್ಯಾಪಾರ ಈ ಮೊದಲಿಗಿಂತ ವೃದ್ಧಿಸಿದೆ. ಗ್ರಾಹಕರು ಫೋನ್ ಮಾಡಿ ತಮಗೆ ಬೇಕಾದ ಉತ್ಪನ್ನಗಳನ್ನು ಹೇಳುತ್ತಾರೆ. ಅಂಗಡಿಯಲ್ಲಿ ಮೂವರು ಕೆಲಸಗಾರರಿದ್ದು, ಅದರಲ್ಲಿ ಇಬ್ಬರು ಗ್ರಾಹಕರ ಮನೆಗೆ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಿ ರಸೀದಿ ತೋರಿಸಿ ಹಣ ಪಡೆದು ಬರುತ್ತಾರೆ. ಕೆಲ ಗ್ರಾಹಕರು ಆನ್‌ಲೈನ್ ಮೂಲಕ ಮೊದಲೇ ಹಣ ಪಾವತಿಸುತ್ತಾರೆ. ಅವರು ಹೇಳಿದಂತೆ ಗುಣಮಟ್ಟದ ಸಾಮಗ್ರಿ ನೀಡುವ ಮೂಲಕ ವಿಶ್ವಾಸ ಉಳಿಸಿಕೊಂಡಿದ್ದೇವೆ’ ಎಂಬುದು ಬೆಳಗಾವಿಯ ನವೀನ ಕತ್ತಿ ಅವರ ವಿವರಣೆ.
ನಗರದಲ್ಲಿರುವ ಸಣ್ಣ ಸುಪರ್ ಮಾರ್ಕೆಟ್ ಅಂಗಡಿ
ಗ್ರಾಮೀಣ ಗ್ರಾಹಕರೇ ಆಸ್ತಿ: ಕೊಪ್ಪಳ ಜಿಲ್ಲೆಯಲ್ಲಿ ಕ್ವಿಕ್ ಕಾಮರ್ಸ್ ಸೇವೆ ಇದ್ದರೂ ಕಿರಾಣಿ ಅಂಗಡಿ ವ್ಯಾಪಾರಿಗಳಿಗೆ ದೊಡ್ಡಮಟ್ಟದಲ್ಲಿ ಧಕ್ಕೆಯಾಗಿಲ್ಲ. ಆನ್‌ಲೈನ್ ವ್ಯಾಪಾರಕ್ಕೆ ಸಣ್ಣ ಜಿಲ್ಲೆಗಳ ಜನರ ಮನಸ್ಥಿತಿ ಇನ್ನೂ ಒಗ್ಗಿಕೊಂಡಿಲ್ಲ ಎಂಬುದು ಕಿರಾಣಿ ಅಂಗಡಿ ಮಾಲೀಕರ ಹೇಳಿಕೆ.
‘ಯಾವುದೇ ಸೇವೆಯು ಎಷ್ಟೇ ಆಧುನೀಕರಣಗೊಂಡರೂ ಗ್ರಾಮೀಣರಿಗೆ ಕಿರಾಣಿ ಅಂಗಡಿಗಳೇ ಬೇಕು. ಜಿಲ್ಲೆಯ ಬಹಳಷ್ಟು ಜನ ವಾರಾಂತ್ಯದಲ್ಲಿ ಸಿಗುವ ಕೂಲಿ ಹಣದಿಂದ ದಿನಸಿ ಸಾಮಗ್ರಿಗಳನ್ನು ತಂದು ಬದುಕು ಸಾಗಿಸುತ್ತಾರೆ. ಅವರಿಗೆ ಕ್ವಿಕ್ ಕಾಮರ್ಸ್‌ನವರು ಉದ್ರಿ ಕೊಡುವುದಿಲ್ಲ. ಕಿರಾಣಿ ಅಂಗಡಿಗಳಲ್ಲಿ ನಿತ್ಯ ಬಳಕೆಗೆ ಅಗತ್ಯ ಸಾಮಗ್ರಿ ಖರೀದಿಸಿ ಪುಸ್ತಕದಲ್ಲಿ ಲೆಕ್ಕ ಬರೆಯಿಸಿ ಹೋಗುತ್ತಾರೆ. ವಾರಾಂತ್ಯದಲ್ಲಿ ಕೂಲಿ ಹಣ ಪಾವತಿಯಾದ ಬಳಿಕ ನಮಗೆ ಹಣ ನೀಡುತ್ತಾರೆ. ಇದರಿಂದ ನಮ್ಮ ವ್ಯಾಪಾರದಲ್ಲಿ ಏನೂ ತೊಂದರೆಯಾಗಿಲ್ಲʼ ಎಂದು ಕೊಪ್ಪಳದ ಕಿರಾಣಿ ಅಂಗಡಿಯ ವ್ಯಾಪಾರಿ ಬಸವರಾಜ ಅವರು ಹೇಳುತ್ತಾರೆ.
ಬದಲಾಗುತ್ತಿರುವ ಸಮಾಜದಲ್ಲಿ ಇ ಕಾಮರ್ಸ್, ಕ್ವಿಕ್ ಕಾಮರ್ಸ್, ಆನ್‌ಲೈನ್ ಶಾಪಿಂಗ್‌ನಿಂದ ಸಾಂಪ್ರದಾಯಿಕ ಕಿರಾಣಿ ಅಂಗಡಿಗಳು ಎದಿಸಿರು ಬಿಡುತ್ತಿವೆ. ವಹಿವಾಟಿನಲ್ಲಿ ಬದಲಾವಣೆ ಮಾಡಿಕೊಂಡಿರುವ ಕಿರಾಣಿ ಅಂಗಡಿಗಳು ಇನ್ನೂ ಉಸಿರಾಡುತ್ತಿವೆ.
ಮಾಲ್ ಸಂಸ್ಕೃತಿ ಬಂದ ಬಳಿಕ ಕಿರಾಣಿ ವ್ಯಾಪಾರ ಕುಸಿದಿದೆ. ಅಂಗಡಿ ಬಾಡಿಗೆ ಸಿಬ್ಬಂದಿಯ ತಿಂಗಳ ವೇತನದಷ್ಟೂ ವ್ಯಾಪಾರ ಆಗುತ್ತಿಲ್ಲ. ಸ್ಪರ್ಧೆ ಎದುರಿಸಿ ಟ್ರೆಂಡ್‌ಗೆ ತಕ್ಕಂತೆ ವ್ಯಾಪಾರ ಮಾಡುವುದು ನಮಗೂ ಅನಿವಾರ್ಯವಾಗಿದೆ.– ರವೀಂದ್ರ ಮಾದಮಶೆಟ್ಟಿ, ಅಧ್ಯಕ್ಷ, ಕಿರಾಣಾ ಬಜಾರ್ ವ್ಯಾಪಾರಿಗಳ ಸಂಘ ಕಲಬುರಗಿ
ಆನ್‌ಲೈನ್ ವ್ಯಾಪಾರದಿಂದ ವ್ಯವಹಾರಕ್ಕೆ ಪೆಟ್ಟು ಬಿದ್ದಿರುವುದು ದಿಟ. ಸಾಂಪ್ರದಾಯಿಕ ಗ್ರಾಹಕರನ್ನು ಉಳಿಸಿಕೊಳ್ಳಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.– ರಾಜೇಶ್ ಪಂಚಮಿ, ಅಂಗಡಿ ಮಂಗಳೂರು
ನನ್ನ ಬಳಿ ವಿದ್ಯಾರ್ಥಿಗಳು ಕೆಲಸಗಾರರು ಸಾಮಗ್ರಿ ಖರೀದಿಸಲು ಬರುತ್ತಿದ್ದರು. ಈಗ ಎಲ್ಲರ ಕೈಯಲ್ಲೂ ಮೊಬೈಲ್ ಫೋನ್ ಇದೆ. ಮನೆಯಲ್ಲಿಯೇ ಕುಳಿತು ಆರ್ಡರ್ ಮಾಡುತ್ತಾರೆ. 10ರಿಂದ 15 ನಿಮಿಷದಲ್ಲಿ ಅವರ ಕೈಗೆ ಸಾಮಗ್ರಿಗಳು ಕೈಸೇರುತ್ತವೆ. ಹಾಗಾಗಿ ಅಂಗಡಿಗೆ ಬರುವವರ ಸಂಖ್ಯೆ ಕ್ಷೀಣಿಸಿದೆ.– ರಮೇಶ್, ಎಸ್‌ಕೆ ಸ್ಟೋರ್ ಮತ್ತಿಕೆರೆ ಬೆಂಗಳೂರು
ಕ್ವಿಕ್ ಕಾಮರ್ಸ್ ಕಂಪನಿಗಳು ಪೇಸ್ಟ್ ಶಾಂಪೂ ಮೊದಲಾದ ಲೇಬಲ್ಡ್ ಉತ್ಪನ್ನಗಳ ದೊಡ್ಡ ಪ್ಯಾಕೆಟ್‌ಗಳಿಗೆ ಭಾರಿ ರಿಯಾಯಿತಿ ನೀಡುತ್ತವೆ. ಗ್ರಾಹಕರು ಹಣ ಉಳಿಸುವ ಆಸೆಯಿಂದ ಇದಕ್ಕೆ ಮನಸೋಲುತ್ತಿದ್ದಾರೆ.– ಚಂದನ್, ರಾಮ್ ಆ್ಯಂಡ್ ಕೋ ಕಿರಾಣಿ ಅಂಗಡಿ ದಾವಣಗೆರೆ
ಅಂಗಡಿಗೆ ಬರುವ ಜನರು ಆನ್‌ಲೈನ್‌ನಲ್ಲಿ ಹಾಗೂ ಸಗಟು ದರದಲ್ಲಿಯೇ ಸಾಮಗ್ರಿ ನೀಡುವಂತೆ ಚೌಕಾಸಿಗೆ ಇಳಿಯುತ್ತಾರೆ. ದುಬಾರಿ ಬಾಡಿಗೆ ನೀಡಿ ದೂರದ ಊರುಗಳಿಂದ ಗುಣಮಟ್ಟದ ಸಾಮಗ್ರಿ ತಂದು ಕಡಿಮೆ ಹಣಕ್ಕೆ ನೀಡಿದರೆ ನಷ್ಟವಾಗಲಿದೆ.– ಜೈನುದ್ದೀನ್ ಅನ್ಸಾರಿ, ಜೆ.ಕೆ. ಕಿರಾಣಿ ಸ್ಟೋರ್ಸ್ ಹುಬ್ಬಳ್ಳಿ
ಕಿರಾಣಿ ಅಂಗಡಿಗೆ ಮಾಸಿಕ ₹20 ಸಾವಿರ ಬಾಡಿಗೆ ಪಾವತಿಸುತ್ತಿದ್ದೆ. ಇಬ್ಬರು ಕೆಲಸಗಾರರ ಸಂಬಳ ಅಂಗಡಿ ನಿರ್ವಹಣೆಗಾಗಿ ತಿಂಗಳಿಗೆ ₹50 ಸಾವಿರ ಖರ್ಚು ಆಗುತ್ತಿತ್ತು. ಜನರು ಆನ್‌ಲೈನ್ ಮೂಲಕವೇ ತಮಗೆ ಬೇಕಾದ ಉತ್ಪನ್ನ ಖರೀದಿಸುವ ಕಾರಣ ಅಂಗಡಿಗೆ ಬರುವವರ ಸಂಖ್ಯೆ ಕಡಿಮೆಯಾಯಿತು. ಇದರಿಂದ ಅಂಗಡಿ ಮುಚ್ಚಿದ್ದೇನೆ.ವೀರಭದ್ರಪ್ಪ ಶೆಟ್ಟಿ, ಧಾರವಾಡ
ಪರಿಕಲ್ಪನೆ: ಯತೀಶ್‌ಕುಮಾರ್ ಜಿ.ಡಿ.
ಪೂರಕ ಮಾಹಿತಿ: ವಿಕ್ರಂ ಕಾಂತಿಕೆರೆ, ವೆಂಕಟೇಶ್ ಜಿ.ಎಚ್., ಎಂ.ಎನ್. ಯೋಗೇಶ್, ಅಮೃತ್ ಕಿರಣ್ ಬಿ.ಎಂ., ಶಿವರಾಯ ಪೂಜಾರಿ, ಮಲ್ಲಿಕಾರ್ಜುನ ನಾಲವಾರ, ಸುಧೀರ್ ಕುಮಾರ್ ಎಚ್.ಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.